ಪೆದ್ದಚೆರುವಿನ ರಾಕ್ಷಸ (ಕಾಡಿನ ಕಥೆಗಳು ಭಾಗ - 2)

ಪೆದ್ದಚೆರುವಿನ ರಾಕ್ಷಸ (ಕಾಡಿನ ಕಥೆಗಳು ಭಾಗ - 2)

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು
ಪುಸ್ತಕ ಪ್ರಕಾಶನ, ಸರಸ್ವತಿ ಪುರಂ, ಮೈಸೂರು
ಪುಸ್ತಕದ ಬೆಲೆ
ರೂ. 84/-

ನರಭಕ್ಷಕ ಹುಲಿಗಳ ಬೇಟೆಯ ಮೈನವಿರೇಳಿಸುವ ಇನ್ನೊಂದು ಕಥನ ಇದು. ಇಂಗ್ಲಿಷಿನಲ್ಲಿ ಕೆನೆತ್ ಆಂಡರ್ಸನ್ ಬರೆದಿರುವ ಈ ಅನುಭವಗಳನ್ನು ಅನುವಾದಿಸಿ, ಸಂಗ್ರಹ ರೂಪಾಂತರವಾಗಿ ನೀಡಿದ್ದಾರೆ ಪೂರ್ಣಚಂದ್ರ ತೇಜಸ್ವಿ.

ಲೇಖಕರ ಮಾತಿನಲ್ಲಿ ತೇಜಸ್ವಿಯವರು ಬರೆದಿರುವ ಈ ಮಾತುಗಳು ಗಮನಾರ್ಹ: "ಇಬ್ಬರು ಕಿರಿಯ ಮಿತ್ರರು “ಕಾಡಿನ ಕಥೆಗಳು” ಪುಸ್ತಕದ ಬಗ್ಗೆ ಪ್ರಸ್ತಾಪಿಸಿ, ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ಭಾರತದ ಕಾಡುಗಳ ಬಗ್ಗೆ ಹೇಳಿರುವುದೆಲ್ಲ ಸುಳ್ಳೆಂದೂ, ಅವು ಕೇವಲ ಪಾಶ್ಚಿಮಾತ್ಯ ಓದುಗರ ಮನರಂಜಿಸಲು ಬರೆದ ಕಟ್ಟುಕಥೆಗಳೆಂದೂ ಹೇಳಿದರು. … ಕೇವಲ ಐವತ್ತು ವರ್ಷಗಳಲ್ಲಿ ಕಾಡುಗಳೂ, ಕಾಡು ಪ್ರಾಣಿಗಳ ಪರಿಸ್ಥಿತಿಯೂ ಎಷ್ಟೊಂದು ಬದಲಾಗಿದೆಯೆಂದರೆ ಈ ಯುವಮಿತ್ರರಿಗೆ ಈ ಇಬ್ಬರು ಮಹಾನ್ ಬೇಟೆಗಾರರ ಅನುಭವಗಳು ಸತ್ಯಸ್ಯ ಸತ್ಯ ಎಂದು ನನಗೆ ಸ್ಪಷ್ಟವಾಗಿ ಗೊತ್ತಿದ್ದರೂ, ಅದನ್ನು ಮನದಟ್ಟು ಮಾಡಿಸಲು ಕಷ್ತವಾಯ್ತು. ಕೊನೆಗೆ ಆಂಡರ್ಸನ್ ಮತ್ತು ಕಾರ್ಬೆಟ್ ಅನುಭವಗಳಿರಲಿ, ನಾನೇ ಸಾಕ್ಷಾತ್ತಾಗಿ ನನ್ನ ಚಿಕ್ಕಂದಿನಲ್ಲಿ ಕಂಡದ್ದನ್ನು ಸಹ ಅವರಿಗೆ ತಿಳಿಸಲು ಅಸಾಧ್ಯವೆಂದು ಕಂಡುಕೊಂಡೆ. ಏಕೆಂದರೆ ಉದಾಹರಣೆಗೆ ಈ ಪುಸ್ತಕದಲ್ಲಿ ಹೇಳಿರುವ ಲಕ್ಕವಳ್ಳಿಯ ಹೆಬ್ಬುಲಿಯ ಕಥೆ ನಮ್ಮೂರಿಗೆ ತೀರಾ ಹತ್ತಿರದ್ದು. ನಾನು ಚಿಕ್ಕಂದಿನಲ್ಲಿ ಪ್ರಪುಲ್ಲ, ಪುರುಷೋತ್ತಮ ಮುಂತಾದವರ ಜೊತೆ ಶಿಕಾರಿ ತಿರುಗುತ್ತಿದ್ದಾಗ ಈ ದಾರಿಯಲ್ಲಿ ಶಿವಮೊಗ್ಗಾದಿಂದ ಲಕ್ಕವಳ್ಳಿಯ ವರೆಗೂ ಭೀಕರವಾದ ಕಾಡು ಇತ್ತು. ಆ ಕಾಡಿನಲ್ಲಿ ಅನೇಕ ಸಾರಿ ಹುಲಿಗಳನ್ನು ನಾವು ನೋಡಿದ್ದೆವು. ಆ ಹೆಬ್ಬುಲಿಗಳ ಮೇಲೆ ಕೋವಿಯೆತ್ತಲು ಧೈರ್ಯ ಸಾಲದೆ ಅದು ಸಾಗಿ ಹೋಗುವ ವರೆಗೂ ಅವಿತು ಕುಳಿತು ಪರಾರಿಯಾಗಿದ್ದಕ್ಕೆ ಲೆಕ್ಕವಿಲ್ಲ. ….. ಇದನ್ನಾದರೂ ತೋರಿಸಿ ಸಾಬೀತು ಮಾಡೋಣೆಂದು ನಮ್ಮ ಮಿತ್ರರನ್ನು ಕರೆದೊಯ್ದರೆ ಕಾಡು ಎಲ್ಲಿದೆ ಅಲ್ಲಿ? …. ಕಾಡಿನ, ಶಿಕಾರಿಯ, ಸಾಹಸಗಳ ಒಂದು ರೋಮಾಂಚಕ ಯುಗ ಎಂದೊ ಮುಗಿದು ಹೋಗಿದ್ದು ನನಗೆ ಸ್ಪಷ್ಟವಾಗಿ ಅರಿವಿಗೆ ಬಂತು. ನನ್ನ ಸ್ವಂತ ಅನುಭವಗಳನ್ನೇ ನಿಜವೆಂದು ಸಾಬೀತು ಮಾಡಲಾರದ ನಿಸ್ಸಹಾಯಕ ಪರಿಸ್ಥಿತಿಯಲ್ಲಿ ನಾನಿರುವಾಗ ಕಾರ್ಬೆಟ್ ಮತ್ತು ಆಂಡರ್ಸನ್ ಅನುಭವಗಳಿಗೆ ಸಾಕ್ಷಾಧಾರಗಳನ್ನು ಒದಗಿಸುವುದೆಂತು? …"

ಈ ಪುಸ್ತಕದಲ್ಲಿವೆ ಮೂರು ಹೆಬ್ಬುಲಿಗಳ ಶಿಕಾರಿಯ ರೋಚಕ ಅನುಭವಗಳು:
(೧)ಪೆದ್ದಚೆರುವಿನ ರಾಕ್ಷಸ (೨)ತಾಳವಾಡಿಯ ಮೂಕ ರಾಕ್ಷಸ (೩) ಲಕ್ಕವಳ್ಳಿಯ ಹೆಬ್ಬುಲಿ

ಪೆದ್ದಚೆರು ವಿಜಯವಾಡ ಪ್ರದೇಶದ ಒಂದು ಹಳ್ಳಿ. ಗುಂತಕಲ್ಲಿನಿಂದ ವಿಜಯವಾಡಕ್ಕೆ ರೈಲಿನಲ್ಲಿ ಸಾಗುವಾಗ ದೋರ್ನಚೆಲ್ಲಂ ಜಂಕ್ಷನ್ ದಾಟಿದ ನಂತರ ಆ ಕಾಲದಲ್ಲಿ ಅಂಧ್ರಪ್ರದೇಶದ ಅತ್ಯಂತ ದಟ್ಟ ಕಾಡು. ಆಗ ಅದು ನೀಲಗಾಯ್ ಅಥವಾ ಕಾಡುಕೋಣಗಳ ತವರು ಮನೆ ಎಂದು ಪ್ರಸಿದ್ಧ. ಅದಲ್ಲದೆ ಅಲ್ಲಿ ಹಿಂಡುಹಿಂಡು ಜಿಂಕೆಗಳ ವಾಸ. ಅಲ್ಲಿಗೆ ಶ್ರೀಶೈಲ ಮೂಲಕವೂ ಹೋಗಬಹುದು. ಆಗಂತೂ ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಗಳೇ ಅಲ್ಲಿರಲಿಲ್ಲ. ಶ್ರೀಶೈಲ ಮತ್ತು ಮರಕಪುರದ ರಸ್ತೆಯಲ್ಲಿ ಬಲಕ್ಕೆ ಸಿಗುವ ಎತ್ತಿನ ಗಾಡಿ ರಸ್ತೆಯಲ್ಲಿ ಇಪ್ಪತ್ತು ಮೈಲು ಸಾಗಿದರೆ ಸಿಗುತ್ತದೆ ಪೆದ್ದಚೆರು.

ಅಲ್ಲಿ ಎರಡು ಹುಲಿಗಳ ನಡುವೆ ಭೀಕರ ಹೋರಾಟವಾದಾಗ ಒಂದು ಹುಲಿಯ ಬಲ ಮುಂಗಾಲಿಗೆ ಭಾರೀ ಗಾಯವಾಯಿತು. ಅನಂತರ ಆ ಕಾಲನ್ನು ಸರಿಯಾಗಿ ಊರಲಾಗದ ಆ ದೈತ್ಯ ಹುಲಿ ಕ್ರಮೇಣ ನರಭಕ್ಷಕನಾಯಿತು. ಯಾಕೆಂದರೆ ಅದಕ್ಕೆ ಕಾಡುಪ್ರಾಣಿಗಳನ್ನು ಬೇಟೆಯಾಡಲು ಸಾಧ್ಯವಿರಲಿಲ್ಲ. ಮನುಷ್ಯ ಮಾತ್ರ ಆ ಹುಲಿಗೆ ಸುಲಭ ಬಲಿಯಾಗುತ್ತಾ ಅಲ್ಲಿ ನರಬಲಿಯ ಸರಮಾಲೆ ಶುರು. ಆ ಸಮಯದಲ್ಲಿ, ಮರಕಪುರ ರೈಲ್ವೇ ಸ್ಟೇಷನಿನ ಬಳಿ ವಾಸಿಸುತ್ತಿದ್ದ ಬಾಯಣ್ಣ ಎಂಬಾತ ತನ್ನ ಮಿತ್ರ ಕೆನೆತ್ ಆಂಡರ್ಸನ್‌ಗೆ ಪತ್ರ ಬರೆದು, ಕೂಡಲೇ ಬಂದು, ನರಭಕ್ಷಕ ಹುಲಿಯನ್ನು ಕೊಲ್ಲಬೇಕೆಂದು ವಿನಂತಿಸುತ್ತಾನೆ.

ಮರುದಿನವೇ ರೈಲಿನಲ್ಲಿ ಆಂಡರ್ಸಮ್ ಅಲ್ಲಿಗೆ ತಲಪುತ್ತಾರೆ. ಅನಂತರ ಬಾಯಣ್ಣನ ಲ್ಯಾಂಡ್ ರೋವರಿನಲ್ಲಿ ಒಂದು ವಾರಾಕ್ಕೆ ಸಾಕಾಗುವಷ್ಟು ಆಹಾರ ಇತ್ಯಾದಿ ತುಂಬಿಕೊಂಡು ಅವತ್ತು ಸಂಜೆಯೇ, ಇತ್ತೀಚೆಗೆ ಆ ಹುಲಿಗೆ ಮನುಷ್ಯ ಬಲಿಯಾದ ಹಳ್ಳಿ ತಲಪುತ್ತಾರೆ. ಅವತ್ತೇ ರಾತ್ರಿ ಆಂಡರ್ಸನ್‌ಗೆ ಆ ಹುಲಿಯೊಂದಿಗೆ ಮುಖಾಮುಖಿ. ಇವರತ್ತ  ಅದು ಜಿಗಿಯುತ್ತಾ ಬಂದಾಗ. ಇವರು ಹುಲಿಯಂತೆ ಗರ್ಜಿಸಿದರು. ಅದ್ಯಾಕೋ ಹೆದರಿಕೊಂಡು ಬಾಲ ಮುದುರಿ ಓಡಿಹೋಯಿತು!

ಮಾರನೆಯ ದಿನ ನಾಲ್ಕು ಸ್ಥಳಗಳಲ್ಲಿ (ಬಲಿ)ಕೋಣಗಳನ್ನು ಕಟ್ಟಿದರು. ಹತ್ತಿರದಲ್ಲೆ ಮರಗಳ ಮೇಲೆ ಮಚಾನುಗಳನ್ನೂ ಕಟ್ಟಿದರು. ಆ ರಾತ್ರಿ ಹುಲಿ ಯಾವುದೇ ಕೋಣನ ಮೇಲೆ ದಾಳಿ ಮಾಡಲಿಲ್ಲ. ಮರುದಿನ ರಾತ್ರಿ ಒಂದು ಕೋಣವನ್ನು ಕೊಂದು ಅರ್ಧ ತಿಂದು ಹೋಗಿತ್ತು. ಕೋಣನ ಉಳಿದರ್ಧ ತಿನ್ನಲು ಆ ರಾತ್ರಿ ಹುಲಿ ಬಂದೇ ಬರಲಿತ್ತು. ಅದು ಆಂಡರ್ಸನ್ ಮೊದಲ ಬಾರಿ ಹುಲಿ ಸಂಧಿಸಿದ ಜಾಗದಿಂದ ಅರ್ಧ ಮೈಲು ದೂರದ ಜಾಗ. ಆ ರಾತ್ರಿ ಅವರು ಮಚಾನಿನಲ್ಲಿ ಕೂತು, ಕಾಯುತ್ತಿದ್ದಾಗ ಹುಲಿ ಬಂದೇ ಬಂತು. ಈ ಸಲ ಚಿರತೆಯಂತೆ ಸದ್ದು ಮಾಡಿದರು. ಹುಲಿ ಇವರು ಕುಳಿತಿದ್ದ ಮರ ಏರತೊಡಗಿತು. ಆಗ ಮನುಷ್ಯನಂತೆ ಸದ್ದು ಮಾಡಿದರು. ಆ ಹುಲಿಗೆ ಆಘಾತ. ಅದು ಮರದಿಂದ ಕೆಳಕ್ಕೆ ಜಿಗಿದು ಪರಾರಿ.

ಅದಾದ ಮರುದಿನ ಇನ್ನೊಂದು ಕಡೆ ಕಟ್ಟಿದ ಕೋಣವನ್ನು ಹುಲಿ ಕೊಂದು ತಿಂದಿತ್ತು. ಅವತ್ತು ರಾತ್ರಿ ಅಲ್ಲಿನ ಮಚಾನಿನಲ್ಲಿ ಕುಳಿತಿದ್ದ ಆಂಡರ್ಸನ್‌ಗೆ ಹುಲಿ ಬರುವುದು ಕಾಣಿಸಿತು. ಅದರ ಪಕ್ಕದಲ್ಲೇ ಕೋವಿಯಿಂದ ಗುಂಡು ಹೊಡೆದು ಅದನ್ನು ಹೆದರಿಸಿ ಓಡಿಸಿದರು. ಈ 3 ಸಂದರ್ಭಗಳಲ್ಲಿ ಅವರು ಹುಲಿಯನ್ನು ಕೊಲ್ಲಲಿಲ್ಲ. ಯಾಕೆಂದರೆ ಅದು ಬೇರೊಂದು ಹುಲಿಯಾಗಿತ್ತು!

ಅಷ್ಟರಲ್ಲಿ ಸುದ್ದಿ ಬಂತು. ಅಲ್ಲಿನ ಚಂಚೂ ಬುಡಕಟ್ಟಿನ ಕಲ್ಲ ಎಂಬಾತನನ್ನು ನರಭಕ್ಷಕ ಹುಲಿ ಬಲಿ ತೆಗೆದುಕೊಂಡಿತ್ತು - ಅವನು ಒಂದು ಮರದ ಪೊಟರೆಯಿಂದ ಜೇನು ತೆಗೆಯುತ್ತಿದ್ದಾಗ. ಕಲ್ಲನ ಕೈಕಾಲುಗಳು ಮಾತ್ರ ಒಂದು ಮರದ ಬುಡದಲ್ಲಿ ಬಿದ್ದಿದ್ದವು. ಅವನ್ನು ತಿನ್ನಲು ಬರಲಿದ್ದ ಆ ಹುಲಿಗಾಗಿ ಕಾಯಲು ಆಂಡರ್ಸನ್ ನಿರ್ಧಾರ. ಅಲ್ಲೇ ಒಂದು ಮರದ ಮೇಲೆ ಮಚಾನು ಕಟ್ಟಿಸಿ, ಆ ರಾತ್ರಿ ಅದರಲ್ಲಿ ಕುಳಿತು ಕಾದರು. ಕಾಡಿನ ಗಾಢ ಮೌನವನ್ನು ಕದಡಿತ್ತು ಸಾವಿರಾರು ಜೀರುಂಡೆಗಳ ಸದ್ದು. ಆ ಸದ್ದು ಅಚಾನಕ್ ನಿಂತಿತು - ಹುಲಿ ಭಯಂಕರವಾಗಿ ಗರ್ಜಿಸಿದಾಗ. ಅನಂತರ ಸುಮಾರು ಒಂದು ಗಂಟೆ ಆ ಹುಲಿ ಗರ್ಜಿಸುತ್ತಾ, ಆಂಡರ್ಸನ್ ಕುಳಿತಿದ್ದ ಮರಕ್ಕೆ ದೂರದಿಂದ ಸುತ್ತು ಹಾಕಿತು. ಆಂಡರ್ಸನ್ ಆ ಮರದಿಂದ ಇಳಿದೇ ಬಿಟ್ಟರು. ಹುಲಿ ಇವರತ್ತ ಧಾವಿಸಿ ಬಂತು. ಆಗ ಎರಡು ಬಾರಿ ಕೋವಿಯಿಂದ ಗುಂಡು ಹಾರಿಸಿದರು. ಎರಡು ಬಾರಿಯೂ ಗುರಿ ತಪ್ಪಿತು. ಹುಲಿ ಪರಾರಿ.

ಮರುದಿನ ಹಗಲಿನಲ್ಲೇ ಆಂಡರ್ಸನ್, ಚಂಚೂ ಬುಡಕಟ್ಟಿನ ಅಪ್ಪೂ ಮತ್ತು ಅವನ ನಾಯಿ ಅಡಿಯಪ್ಪನ ಜೊತೆಗೆ ಹುಲಿಯ ಬೇಟೆಗೆ ಹೊರಟರು. ಬಿಸಿಲಿನಲ್ಲಿ ನಡೆಯುತ್ತಾ ಪೆದ್ದಚೆರುವಿನಿಂದ ಹತ್ತು ಮೈಲು ದೂರ ಸಾಗಿ, ನಂತರ ತಿರುಗಿ ಪಶ್ಚಿಮ ದಿಕ್ಕಿನಲ್ಲಿ ಮುಂದುವರಿದರು. ರಣ ಬಿಸಿಲಿನಲ್ಲಿ ನಡೆದು ವಿಪರೀತ ಬಾಯಾರಿಕೆಯಾಗಿತ್ತು. ಅಲ್ಲಿನ ಗುಡ್ಡದ ತಳದಲ್ಲಿ ಬಂಡೆಗಳೆಡೆಯ ಜಲದ ಚಿಲುಮೆಯಿಂದ ನೀರು ಹನಿಹನಿಯಾಗಿ ಬಂದು ಚಿಕ್ಕ ಕೊಳ. ಅಲ್ಲೇ ನರಭಕ್ಷಕ ಹುಲಿಯ ಹೆಜ್ಜೆ ಗುರುತುಗಳು! (ಬಲ ಮುಂಗಾಲು ಊನವಾದ ಹುಲಿ) ಆಂಡರ್ಸನ್ ಜಾಗೃತರಾದರು. ರೈಫಲ್ ಕೆಳಗಿಟ್ಟು ಬೋರಲಾಗಿ ಮಲಗಿ ಆ ಗುಂಡಿಯ ನೀರು ಹೀರ ತೊಡಗಿದರು. ಆ ಕ್ಷಣದಲ್ಲಿ ಎರಡು ಭೀಕರ ಗರ್ಜನೆ ಹಾಕಿದ ಹುಲಿ ನೆಗೆನೆಗೆಯುತ್ತಾ ಬಂತು. ಆಂಡರ್ಸನ ಕುಳಿತಲ್ಲೇ ಗುರಿ ಹಿಡಿದು ಒಂದು ಗುಂಡು ಹಾರಿಸಿದರು; ಹುಲಿ ಬಿದ್ದಾಗ ಇನ್ನೆರಡು ಗುಂಡು ಹೊಡೆದರು. ಅಂತೂ ನರಭಕ್ಷಕ ಹುಲಿ ಸತ್ತು ಬಿತ್ತು.  

ತಾಳವಾಡಿಯ ಮೂಕ ನರಭಕ್ಷಕ ಹುಲಿಯ ಬೇಟೆ ಭಾರೀ ಸವಾಲಾಗಿತ್ತು. ಯಾಕೆಂದರೆ, ಅದು ಬಲಿಪ್ರಾಣಿಯ ಮೇಲೆ ದಾಳಿ ಮಾಡುವಾಗ ಇತರ ಹುಲಿಗಳಂತೆ ಗರ್ಜಿಸುತ್ತಿರಲಿಲ್ಲ. ಅದಕ್ಕೆ ಕಾರಣ: ನೀಲಗಿರಿ ಹತ್ತಿರದ ತಾಳವಂಡಿ ಎಂಬ ಹಳ್ಳಿಯ ಬಳಿಯ ಮುದ್ಯಾನೂರಿನ ಮೊಯರ್ ವ್ಯಾಲಿ ರಾಂಚ್ ಎಂಬ ಹೆಸರಿನ ವಿಸ್ತಾರವಾದ ಎಸ್ಟೇಟಿನ ಮಾಲೀಕ ಹುಗ್ಸ್ ಹೇಲ್‌ಸ್ಟೋನ್ ಎಂಬಾತ ಆ ಹುಲಿಯ ಮುಖಕ್ಕೆ ಗುಂಡು ಹೊಡೆದು ಘಾಸಿ ಮಾಡಿದ್ದ.

ಅಲ್ಲಿಗೆ ಕಾರಿನಲ್ಲಿ ತಲಪಿದ ಆಂಡರ್ಸನ್ ಮೂಕ ಹುಲಿಯ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಿದರು. ಅನಂತರ ದಿಂಬಂ ತಲಪುತ್ತಾರೆ. ಕೆಲವು ಗುಡಿಸಲು ಮತ್ತು ಟೀ ಶಾಪ್ ಇದ್ದ ಹಳ್ಳಿ. ಆ ಟೀ ಶಾಪ್‌ಗೆ ನೀರು ತರುವ ಹೆಂಗಸನ್ನು ಅಲ್ಲೇ ಹಿಂಬದಿಯಲ್ಲಿ ಹಿಡಿದು, ಹುಲಿ ಕೊಂದು ತಿಂದಿತ್ತು. ಅವತ್ತೇ ರಾತ್ರಿ ಟಾರ್ಚ್ ಲೈಟಿನ ಬೆಳಕಿನಲ್ಲಿ ಹುಲಿ ಹುಡುಕುತ್ತಾ ಕಾಡಿನೊಳಗೆ ಹೊರಟರು ಆಂಡರ್ಸನ್. ಅವರೊಂದು ನೀರಿನ ಹೊಂಡ ತಲಪಿದರು. ಹುಲಿ ಅಲ್ಲೇ ಗುರುಗುಟ್ಟಿತು. ಅದರಿಂದ ರಕ್ಷಿಸಿಕೊಳ್ಳಲು ಇದ್ದದ್ದು ಒಂದೇ ದಾರಿ: ನೀರಿನ ಹೊಂಡದ ಮಧ್ಯೆ ಕಾದು ನಿಲ್ಲುವುದು. ಕತ್ತಲಿನಲ್ಲಿ ಮಧ್ಯ ರಾತ್ರಿ ತನಕ ಕಾದು ನಿಂತರು. ಆಗ ಆನೆಯೊಂದರ ಉಪಟಳ! ಅನಂತರ ಪ್ರವಾಸಿ ಬಂಗಲೆಗೆ ಬಂದು ಮಲಗಿದರು.

ಮರುದಿನ, ಒಂಭತ್ತೂವರೆ ಗಂಟೆಗೆ ಅವರನ್ನು ಎಬ್ಬಿಸಿದ್ದು ಟೀ ಶಾಪ್‌ನ ಮಾಲೀಕ ಮತ್ತು ಜೊತೆಯವರು. ಅವರು ಹೆದರಿ ಕಂಗಾಲಾಗಿದ್ದರು. ಯಾಕೆಂದರೆ ಇನ್ನೊಬ್ಬಳು ನೀರು ತರುವ ಹೆಂಗಸನ್ನು ಆಗ ತಾನೇ ಆ ಹುಲಿ ಹೊತ್ತೊಯ್ದಿತ್ತು! ದುರ್ಘಟನೆಯ ಜಾಗಕ್ಕೆ ಹೋದರು ಆಂಡರ್ಸನ್. ಹುಲಿ ತನ್ನ ಬಲಿ ಹೊತ್ತೊಯ್ದ ಜಾಡಿನಲ್ಲಿ ಜಾಗರೂಕತೆಯಿಂದ ಮುಂದುವರಿದರು. ಆ ಹೆಂಗಸಿನ ಮೂಳೆಗಳನ್ನು ಹುಲಿ ಜಗಿದು ತಿನ್ನುವ ಸದ್ದು ಕೇಳಿಸಿದಲ್ಲಿ ನಿಂತರು. ನಂತರ ಅಲ್ಲೇ ಕಾದು ಕೂತರು. ಹುಲಿಗೆ ತನ್ನ ಸುಳಿವು ಸಿಕ್ಕಿದೆ ಎಂದು ಅವರಿಗೆ ಅನಿಸಿತು. ಆದರೆ ಎದುರು ಅಥವಾ ಅಕ್ಕಪಕ್ಕದಲ್ಲಿ ಅದರ ಸದ್ದಿಲ್ಲ. ಆಂಡರ್ಸನ್ ನಾಲ್ಕು ಹೆಜ್ಜೆ ಮಾತ್ರ ಓಡಿದಂತೆ ನಟನೆ ಮಾಡಿ, ಗಕ್ಕನೆ ನಿಂತರು. ಅವರ ಉಪಾಯ ಫಲಿಸಿತು. ಅವರ ಹಿಂದಿನ ಪೊದೆಯಿಂದ ಚಿಮ್ಮಿದ ಹುಲಿ ಇವರತ್ತ ನುಗ್ಗಿತು! ಆಗ ಢಂಢಂ ಎಂದು ಆಂಡರ್ಸನ್ ಗುಂಡು ಹೊಡೆದಾಗ ಹುಲಿ ನೆಗೆದು ಬಿದ್ದು ಸತ್ತಿತು.

"ಲಕ್ಕವಳ್ಳಿಯ ಹೆಬ್ಬುಲಿ” ಚಿಕ್ಕಮಗಳೂರಿನ ದಟ್ಟ ಕಾಡಿನಲ್ಲಿ, ಬೆಟ್ಟಗಳಲ್ಲಿ ಮೇಯಿಸಲು ಒಯ್ಯುತ್ತಿದ್ದ ದನಗಳನ್ನು ಹಿಡಿದು, ದೂರಕ್ಕೆ ಒಯ್ದು, ಕೊಂದು ತಿನ್ನುತ್ತಿದ್ದ ಹುಲಿಯ ಕಥನ. ಅದು ಕ್ರಮೇಣ ನರಭಕ್ಷಕನಾಗಿ ಸುತ್ತಮುತ್ತಲಿನ ಜನರಲ್ಲಿ ಭೀತಿ ಹುಟ್ಟಿಸಿತ್ತು. ಆಂಡರ್ಸನ್ ಬೆಂಗಳೂರಿನ ಜಿಲ್ಲಾ ನ್ಯಾಯಾಲಯಕ್ಕೆ ಹೋಗಿದ್ದಾಗ ಲಕ್ಕವಳ್ಳಿ ಅಣೆಕಟ್ಟು ಪ್ರಾಜೆಕ್ಟಿನ ಅಧಿಕಾರಿ ವೆಂಕಟಸುಬ್ಬರಾವ್‌ಗೆ ಅಚಾನಕ್ ಇವರ ಗುರುತಾಯಿತು. "ಈಗಲೇ ಬನ್ನಿ” ಎಂದು ಪರಿಪರಿಯಾಗಿ ವಿನಂತಿಸಿ ಇವರನ್ನು ಅವತ್ತೇ ಕಾರಿನಲ್ಲಿ ಅಲ್ಲಿಗೆ ಕರೆದೊಯ್ದರು. ಅಲ್ಲಿನ ಶಾಂತವೇರಿಯ ಪೋಸ್ಟ್ ಮಾಸ್ಟರ್ ಡಿಕ್ ಎಂಬಾತ ಆಂಡರ್ಸನ್ನರ ಗೆಳೆಯ. ಆತನಿಂದಲೂ ಕೂಡಲೇ ಹುಲಿ ಕೊಲ್ಲಲು ಬಾ ಎಂಬ ಪತ್ರ ಬಂದಿತ್ತು.

ಅಷ್ಟರಲ್ಲಿ ಆ ನರಭಕ್ಷಕ ಹುಲಿ ಪೋಸ್ಟ್ ಮ್ಯಾನನ್ನು ಮತ್ತು ಅದೇ ದಿನ ಲಕ್ಕವಳ್ಳಿ ಪ್ರಾಜೆಕ್ಟಿನ ಮಗದೊಬ್ಬ ಕೆಲಸಗಾರನನ್ನು ಬಲಿ ತೆಗೆದುಕೊಂಡಿತ್ತು. ಮರುದಿನ ಮುಂಜಾನೆಯೇ ಹುಲಿಬೇಟೆಗೆ ಹೊರಟರು ಆಂಡರ್ಸನ್. ಮುನ್ನಾದಿನ ಬಲಿಯಾದ ಕೆಲಸಗಾರನನ್ನು ಹುಲಿ ಹೊತ್ತೊಯ್ದ ರಕ್ತದ ಕಲೆಗಳ ಜಾಡು ಹಿಡಿದು ಹೋದರೂ ಹುಲಿಯ ಸುಳಿವಿಲ್ಲ. ಫಾರೆಸ್ಟ್ ಇಲಾಖೆಯ ಸಿಬ್ಬಂದಿಯನ್ನು ಭೇಟಿಯಾದಾಗ ಹುಲಿ ಪಾಳುಬಿದ್ದ ಮುನೇಶ್ವರನ ದೇವಾಲಯದಲ್ಲಿ ಇರಬಹುದೆಂಬ ಸುಳಿವು. ಅಲ್ಲಿಗೆ ಹೋದದ್ದು ವ್ಯರ್ಥವಾಯಿತು. ಅವತ್ತು ಅಪರಾಹ್ನ ದನ ಮೇಯಿಸುವ ಒಬ್ಬನಿಂದ ಆ ದೇವಾಲಯದ ಹಿಂದಿನ ಬೆಟ್ಟದ ಗವಿಯಲ್ಲಿ ಹುಲಿ ಇದೆಯೆಂಬ ಸುಳಿವು. ತಕ್ಷಣವೇ ಅಲ್ಲಿಗೆ ಹೊರಟರು ಆಂಡರ್ಸನ್. ಅಂತೂ ಅಲ್ಲಿಗೆ ಬೆಕ್ಕಿನ ಹೆಜ್ಜೆಯಿಟ್ಟು ತಲಪಿದರು. ಆ ಬಂಡೆಯ ಸನಿಹ ಇವರು ಹೋದಾಗ ಅಲ್ಲಿದ್ದ ಹುಲಿಗೆ ಇವರ ಸುಳಿವು! ಅದು ತಕ್ಷಣವೇ ಇವರೆಡೆಗೆ ನುಗ್ಗಿ ಬಂತು. ಇವರ ಮೇಲೆ ಎರಗಲು ಸಿದ್ಧವಾದಾಗ, ಹುಲಿಯ ತಲೆಗೆ ಗುರಿಯಿಟ್ಟು ಎರಡು ಗುಂಡು ಹೊಡೆದು ಅದನ್ನು ಕೊಂದರು. ಸತ್ತ ಹುಲಿಯನ್ನು ಪರೀಕ್ಷಿಸಿದಾಗ, ಅದೊಂದು ಮುದಿ ಹುಲಿ. ಕಾಡುಪ್ರಾಣಿಗಳನ್ನು ಬೇಟೆಯಾಡುವ ಕಸುವಿಲ್ಲದೆ, ದನಗಳನ್ನು ಕೊಂದು ತಿನ್ನುತ್ತಿತ್ತು. ಅನಂತರ, ಮನುಷ್ಯರನ್ನು ಕೊಲ್ಲುವುದು ಅದಕ್ಕಿಂತ ಸುಲಭವೆಂದು ನರಭಕ್ಷಕನಾಯಿತು!