ಪೆದ್ದರನು ವರಿಸುವಳೇ ಸರಸತಿಯು?
ಪೆದ್ದರನು ವರಿಸುವಳೇ ಸರಸತಿಯು?
ಡಾಕ್ಟರ್ ಕೆ. ಆರ್. ಎಸ್. ಮೂರ್ತಿ
ವರುಷಕೊಮ್ಮೆಯೋ,
ತಿಂಗಳಿಗೊಮ್ಮೆಯೋ,
ಬಸಿರಾಗುವ ಕವಿವರರ ಕೇಳಿದ್ದೆ.
ಅವರು ಒದರುವದ ಕೆಲವು ಓದಿದ್ದೆ.
ಹುಟ್ಟು ಕವಿಗಳು ಕೋಟಿಯಲಿ ಕೆಲವೇ
ವ್ಯಾಸರನೂ, ಅವರ ಕುಮಾರನನೂ
ಬಹಳ ಮೆಚ್ಚಿದ್ದೆ; ಹೊಟ್ಟೆ ಕಿಚ್ಚೂ ಪಟ್ಟಿದ್ದೆ
ಇದು ಅತಿ ಮೆಚ್ಚಿಗೆಯ ಹೊಟ್ಟೆಕಿಚ್ಚು
ನನ್ನದು ಅತಿ ಪ್ರೀತಿಯ ಕಿಚ್ಚು
ಕಾಲು ಹಿಡಿದು ಎರಗುವಂತಹ ಬಿಚ್ಚು ಮನಸಿನ ಕೆಚ್ಚು
ವರ ಕವಿಗಳ ವರ ಭಾರತಿ ದೇವಿಯದು
ಸಾವಿರ ಸಾವಿರ ವರ ಕೊಟ್ಟವಳು ತಾಯಿ
ಆಶು ಕವಿಯು ನಾನು;
ಅತಿಯಾಷೆಯ ಆಶು ಕವಿ;
ಪ್ರತಿ ದಿನವೂ ಅತಿಯಾಷೆಯಲಿ
ಕಾತುರದಿ ಕಾಯ್ವನಷ್ಟೇ ಕಾವ್ಯ ಮನೋಹರಿಗೆ
ಪ್ರೀತಿ ತೋರುವಳು ಕಾವ್ಯ ಸುಂದರಿ
ಪ್ರತಿ ಸಾರಿಯ ಕೇಳಿಯಲೂ ಹೇಳುವಳು
ಸತಿ, ಬೊಮ್ಮನ ರಂಜಿಸುವ ಮಹಾ ಸತಿ
ಆತುರದಿ ಬರೆಸುವಳು, ಹರಸುವಳು
ಶತ ಮೂಢ, ಹುಟ್ಟು ಪೆದ್ದ, ಬರೆಯುವುದು
ಅತಿಶಯೋಕ್ತಿಯೇನಲ್ಲ; ಸತ್ಯಕೆ ಹೊರತಲ್ಲ.
ಕಾಳಿದಾಸನ ಕಥೆಯ ನಂಬುವರು ನೀವಲ್ಲವೇ?
ಕೇಳಿದಾಗಲೆಲ್ಲಾ ಬರುವಳು ನಾಚಿಕೆಯೇ ಇಲ್ಲದೆ
ಪೇಳುವೆನು ನಂಬಿ ಈಗಲೇ ನನ್ನ ಕಾವ್ಯ ರಂಭೆಯ
ಕೇಳಿ ಎಂದರೆ ಓಗೊಟ್ಟು ಕೇಳಿ ಓಡಿ ಬರುವಳು
ಪೇಳಿ ನೀವೆಯೇ ಪೆದ್ದರನು ಆರಿಸಿ ವರಿಸುವಳೇ
ಗೇಲಿ ಮಾಡದೆಯೇ ನಿಜವೇನು ಹೇಳಿ