ಪೆನ್ನು ಹಿಡಿಯುವ ಕೈಯಲ್ಲಿ ಕಂಪ್ಯೂಟರ್ ಮೌಸ್ ಬಳಸುವ ಚಿತ್ರ ಕಲಾವಿದ
ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲ. ಎಲ್ಲರಲ್ಲಿಯೂ ಎಲ್ಲಾ ರೀತಿಯ ಪ್ರತಿಭೆ ಇರುತ್ತದೆ. ಅದನ್ನು ಬೆಳೆಸುವ ರೀತಿ ಮಾತ್ರ ಬೇರೆ ಬೇರೆಯಾಗಿರುತ್ತ. ನೀರೆರೆಯುತ್ತಾ ಹೋದಂತೆ ಒಂದು ಸುಂದರವಾದ ಗಿಡವನ್ನು ಮರವಾದಂತೆ, ಪ್ರತಿಭೆ ಕೂಡ ಹೆಮ್ಮರವಾಗಿ ಬೆಳೆಯುತ್ತದೆ. ಕೈಯಲ್ಲಿ ಬ್ರಷ್ ಅಥವಾ ಲೇಖನಿ ಹಿಡಿದು ಮಸಿಯ ಡಬ್ಬದಲ್ಲಿ ಅದ್ದಿಕೊಂಡು ಕ್ಯಾನ್ವಾಸ್ ಮೇಲೆ ಚಿತ್ರ ಬಿಡಿಸುವ ಕಾಲ ಈಗಿಲ್ಲ. ಭಾವಚಿತ್ರ, ನಿಸರ್ಗ ಚಿತ್ರ, ಕಾರ್ಟೂನ್ ಅಥವಾ ಯಾವುದೋ ಪುಸ್ತಕ, ಪತ್ರಿಕೆಯ ಮುಖಪುಟ ರಚಿಸುವುದಾಗಿದ್ದರೂ ಚಿತ್ರಕಲಾವಿದರ ಸಹಾಯ ಪಡೆಯಬೇಕಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ಗಳು ಬಂದ ಮೇಲೆ ಎಲ್ಲವೂ ಕಂಪ್ಯೂಟರೀಕರಣ ಯುಗವಾಗಿ ಮಾಪ೯ಟ್ಟಿದೆ.
ಎಲ್ಲದಕ್ಕೂ ತಾಂತ್ರಿಕತೆಯನ್ನೇ ಅವಲಂಬಿಸಿರುವ ಇಂದಿನ ದಿನಮಾನಗಳಲ್ಲಿ ಅಂಗಡಿ, ಕಾರ್ಖಾನೆಗಳ ನಾಮಫಲಕ ಮತ್ತು ಕಾರ್ಯಕ್ರಮಗಳ ಬ್ಯಾನರ್ಗಳನ್ನು ಕೈಯಿಂದ ಬರೆಯುವುದು ತಪ್ಪಿದೆ. ಕಂಪ್ಯೂಟರ್ನಲ್ಲಿಯ ಕೋರಲ್ಡ್ರಾ, ಫೋಟೊಶಾಪ್, ಪೇಜ್ ಮೇಕರ್ ಪ್ರೋಗ್ರಾಂನ ಸಹಾಯದಿಂದ ಎಲ್ಲವನ್ನೂ ಅಂದ, ಚೆಂದವಾಗಿ ಮಾಡಲಾಗುತ್ತಿದೆ.
ಹೀಗೆ ಕಂಪ್ಯೂಟರ್ ಬಳಸಿ ಪುಸ್ತಕಗಳ ಮುಖಪುಟಗಳ ರಚನಕಾರರಾಗಿ. ಪತ್ರಕತ೯ರಾಗಿ, ಲೇಖಕರಾಗಿ ಬಹುಮುಖ ಪ್ರತಿಭೆ ಹೆದಂದಿರುವ ಮಾಣಿಕ ಆರ್.ಭುರೆ ವಿಶೇಷವಾಗಿ ಗಮನ ಸೆಳೆಯುತ್ತಾರೆ. ಇವರು ಕೈಯಲ್ಲಿ ಬ್ರಷ್ ಹಿಡಿದು ಬರೆಯುವ ಕಲಾವಿದರಲ್ಲ. ಕಂಪ್ಯೂಟರ್ನ ಸಹಾಯದಿಂದ ಮೌಸ್ ಕೈಯಲ್ಲಿ ಹಿಡಿದು ಉತ್ತಮ ಮುಖಪುಟ ರಚಿಸುತ್ತಾರೆ. ವಿವಿಧ ವಸ್ತು, ಚಿತ್ರಗಳನ್ನು ಜೋಡಿಸಿ ಒಂದು ಆಕೃತಿ ತಯಾರಿಸುವ ಇಂದಿನ ಆಧುನಿಕ ಕಲೆಯೊಂದು ಇವರಲ್ಲಿ ಅರಳಿ ನಿಂತಿದೆ. ಇವರು ವಿವಿಧ ಚಿತ್ರಗಳನ್ನು ಜೋಡಿಸಿ ಅದಕ್ಕೆ ಅರ್ಥಪೂಣ೯ವಾದ ಗೆರೆ, ಬಣ್ಣದಿಂದ ತಮಗೆ ಅನಿಸಿದಂತೆ ಆಕಾರ, ವಿನ್ಯಾಸ ಕೊಡಬಲ್ಲರಾಗಿದ್ದಾರೆ.
ಭುರೆ ಅವರಲ್ಲಿರುವ ಕಲಾಗುಣದ ಬಗ್ಗೆ ತಿಳಿಯಬೇಕಾದರೆ ಅವರದೇ ಆದ`ಭೂಮಂಡಲ' ಎಂಬ ಬ್ಲಾಗ್ ನೋಡಬೇಕು. ಅಲ್ಲಿ ಬೀದರ ಜಿಲ್ಲೆಯ ಬಸವಕಲ್ಯಾಣದಂತಹ ಗ್ರಾಮೀಣ ಪ್ರದೇಶದಲ್ಲಿ ಇ- ಮೇಲ್ ಬಗ್ಗೆಯೂ ಗೊತ್ತಿರದಿದ್ದ ಸಂದರ್ಭದಲ್ಲಿ ಅವರು ಬ್ಲಾಗ್ನ್ನು ಮಾಡಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಹೊಸದೇನಾದರೂ ಇದ್ದರೆ ಅದನ್ನು ಯಾವಾಗ ಕಲಿತು ಬಿಡಲಿ ಎಂಬ ಮನೋಭಾವ ಹೊಂದಿದ್ದಾರೆ.
ಕಳೆದ 20 ವರ್ಷಗಳ ಹಿಂದೆ ವಿದ್ಯಾರ್ಥಿದೆಸೆಯಿಂದಲೇ ಪತ್ರಕರ್ತನಾಗಿ ಸೇವೆಗಿಳಿದ ಇವರು ಉತ್ತರ ಕರ್ನಾಟಕ, ಜನಬೆಂಬಲ, ಬಿಸಿಲ ಬದುಕು ಪತ್ರಿಕೆಗಳ ವರದಿಗಾರರಾಗಿ ನಂತರ 16 ವರ್ಷಗಳಿಂದ ರಾಜ್ಯದ ಪ್ರಮುಖ ಪತ್ರಿಕೆ ಪ್ರಜಾವಾಣಿಯಲ್ಲಿ ಬಸವಕಲ್ಯಾಣ ತಾಲೂಕಾ ವರದಿಗಾರರಾಗಿ ಕಾರ್ಯ ನಿವ೯ಹಿಸುತಿದ್ದಾರೆ. ಮಾಣಿಕ ಆರ್. ಭುರೆಯವರು ಪತ್ರಿಕೆ, ಸ್ಮರಣ ಸಂಚಿಕೆ, ವಿಶೇಷ ಸಂಚಿಕೆಗಳಲ್ಲಿ ವಿವಿಧ ವಿಷಯಗಳ ಅನೇಕ ಲೇಖನಗಳನ್ನು ಬರೆದಿದ್ದಾರೆ. ಜನರನ್ನು ಚಿಂತನೆಗೆ ಹಚ್ಚುವ, ಆಸಕ್ತಿಕರವಾದ, ಮಹತ್ವದ ವಿಷಯಗಳ ಬಗ್ಗೆ ಲೇಖನಗಳು ಬರೆಯುತ್ತಾರೆ.
`ಅನುಭವ ಮಂಟಪ ಪ್ರಶಸ್ತಿ ಪುರಸ್ಕೖತರು' ಮತ್ತು `ದಲಿತ ಪೀಠಾಧಿಪತಿ' ಬೇಲೂರಿನ ಶರಣ ಉರಿಲಿಂಗ ಪೆದ್ದಿ ಮಠದಿಂದ ಪ್ರಕಟವಾಗಿದ್ದು, ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. `ದಲಿತ ಪೀಠಾಧಿಪತಿ' ಕೃತಿಗೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ 2010 ನೇ ಸಾಲಿನ ಜಿ.ಆರ್.ರೇವಯ್ಯ ದತ್ತಿ ಪ್ರಶಸ್ತಿ ದೊರೆತಿದೆ. `ಅನುಭವ ಮಂಟಪ ಪ್ರಶಸ್ತಿ ಪುರಸ್ಕೖತರು' ಕೃತಿ ಶರಣ ಸಾಹಿಗಳಾದ ಗಂಗಾವತಿಯ ಸಿ.ಎಚ್.ನಾರಿನಾಳ ಸಂಪಾದಕತ್ವದ ಸುದ್ದಿ ಚಿಂತನ ಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಗಿದೆ.
ಭುರೆ ಅವರನ್ನು ಬೀದರ ಜಿಲ್ಲಾ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (2003) ಸನ್ಮಾನಿಸಿದ್ದಲ್ಲದೇ, ಬೀದರ ಜಿಲ್ಲಾ ಮರಾಠಾ ಸಮಾಜ ಸೇವಾ ಸಮಿತಿಯ ಪತ್ರಿಕಾ ಕ್ಷೇತ್ರದ ಪ್ರಶಸ್ತಿ (2002), ತಾಲ್ಲೂಕು ಆಡಳಿತದಿಂದ ರಾಜ್ಯೋತ್ಸವ ಸನ್ಮಾನ (2003), ಬಸವಕಲ್ಯಾಣ ಹಿತರಕ್ಷಣಾ ಸಮಿತಿಯ ಉತ್ತಮ ಪತ್ರಕರ್ತ ಪ್ರಶಸ್ತಿ (2004), ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಮಟ್ಟದ ಉತ್ತಮ ಪತ್ರಕರ್ತ ಪ್ರಶಸ್ತಿ (2010), ಸಾಕ್ಷಿ ಪ್ರತಿಷ್ಠಾನದ ಹೈದ್ರಾಬಾದ ಕರ್ನಾಟಕ ಮಟ್ಟದ ಧರಿನಾಡು ಸಿರಿ ಪ್ರಶಸ್ತಿ (2010) ಕೊಟ್ಟು ಸನ್ಮಾನಿಸಲಾಗಿದೆ.
ಇವರು ವೀರಣ್ಣ ಮಂಠಾಳಕರ್ ಅವರ `ಬದುಕಿನ ಬೆನ್ನೇರಿ' ಮಲ್ಲೇಶ್ವರಿ ಉದಯಗಿರಿ ಅವರ `ಭಾವಂಕರ್ಷ' `ದಲಿತ ಪೀಠಾಧಿಪತಿ' `ನಡೆದು ತೋರಿದ ದಾರಿ' `ಅನುಭವ ಮಂಟಪ ಪ್ರಶಸ್ತಿ ಪುರಸ್ಕೖತರು' ಮಚೇಂದ್ರ ಅಣಕಲ್ ಅವರ `ಮೊದಲ ಗಿರಾಕಿ' ಹಾಗೂ ಇತರರ ಅಪ್ರಕಟಿತವಾದ `ಉರಿಲಿಂಗ ಪೆದ್ದಿ ವಚನಗಳ ಅಂತರಂಗ' `ಉರಿಲಿಂಗ ಪೆದ್ದಿ ಸಮಗ್ರ ವಚನಗಳು' ಸೇರಿದಂತೆ ಮುಂತಾದ ಪುಸ್ತಕಗಳಿಗೆ ಹಾಗೂ ಮಾಸ ಪತ್ರಿಕೆಗಳಿಗೆ ಮುಖಪುಟ ರಚಿಸಿದವರಾಗಿದ್ದಾರೆ. ಅವರಲ್ಲಿನ ವಿಶಿಷ್ಟ ಕಲಾ ಪ್ರತಿಭೆ ಆಸಕ್ತರು ಸದುಪಯೋಗ ಪಡೆದುಕೊಂಡಲ್ಲಿ ಅವರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗುವಂತಾಗುತ್ತದೆ.
Comments
ಒಳ್ಳೆಯ ಪರಿಚಯ ಲೇಖನ.