ಪೆನ್ಸಿಲ್ ಬಗ್ಗೆ ನಿಮಗೆಷ್ಟು ಗೊತ್ತು?

ಪೆನ್ಸಿಲ್ ಬಗ್ಗೆ ನಿಮಗೆಷ್ಟು ಗೊತ್ತು?

‘ಪೆನ್-ಪೆನ್ಸಿಲ್’ ನಾವು ಶಾಲೆಯಲ್ಲಿ ಕಲಿಯುವಾಗ ಅವಳಿ ಜವಳಿ ಪದಗಳಂತೆಯೇ ಬಳಕೆಯಾಗುತ್ತಿದ್ದುವು. ಪರೀಕ್ಷೆಗೆ ಹೊರಡುವಾಗ ಮನೆಯಲ್ಲಿ ‘ಪೆನ್-ಪೆನ್ಸಿಲ್' ತಕೊಂಡಿದ್ದೀಯಾ? ‘ ಎಂದು ಕೇಳುವುದು ಒಂದು ಸಹಜ ಮಾತಾಗಿತ್ತು. ನಾವು ಬರೆಯಲು ಅಧಿಕವಾಗಿ ಬಳಸುವ ವಸ್ತುಗಳೆಂದರೆ ಪೆನ್ ಮತ್ತು ಪೆನ್ಸಿಲ್. ಪೆನ್ ಮೂಲಕ ಬರೆಯುವುದು ಸುಲಭ. ಶಾಯಿ ಹಾಕಿ ಅಥವಾ ಶಾಯಿ ತುಂಬಿದ ರಿಫಿಲ್ ಹಾಕಿ ಎಷ್ಟು ಸಮಯವಾದರೂ ಬರೆಯಬಹುದು. ಆದರೆ ಪೆನ್ಸಿಲ್ ಮೂಲಕ ಬರೆಯಲು ಅದರ ಮೇಲಿರುವ ಮರದ ಕವಚವನ್ನು ಕಟ್ಟರ್ ಅಥವಾ ಶಾರ್ಪ್ ನರ್ ಎಂಬ ಯಂತ್ರ (?!)ದ ಮೂಲಕ ಕತ್ತರಿಸಿ ತೆಗೆದು ಮೊನಚುಗೊಳಿಸಿ ಒಳಗಿನ ಕಪ್ಪಗಿನ ಮೊನೆ ಹೊರಗೆ ಕಾಣುವಂತೆ ಮಾಡಬೇಕು. ಆದರೆ ಇಂದಿನ ಆಧುನಿಕ ಯುಗದಲ್ಲಿ ಆ ಕೆಲಸವೂ ಕಮ್ಮಿ ಆಗಿದೆ. ಏಕೆ ಗೊತ್ತಾ? ಪೆನ್ ಪೆನ್ಸಿಲ್ ಗಳು ಬಂದಿವೆ. ಅಂದರೆ ಪೆನ್ ಆಕಾರದಲ್ಲಿರುವ ಪೆನ್ಸಿಲ್ ಗಳು. ಅದನ್ನು ಮೊನಚುಗೊಳಿಸಬೇಕಾಗಿಲ್ಲ, ಮರದ ಹೊದಿಕೆಯನ್ನು ಕತ್ತರಿಸಬೇಕಾಗಿಲ್ಲ. ಮೊನೆಯು ತುಂಡಾದರೆ ಮತ್ತೆ ಹರಿತಗೊಳಿಸಬೇಕಾಗಿಲ್ಲ. ಉದ್ದನೆಯ ತೆಳ್ಳಗಿನ ಗ್ರಾಫೈಟ್ ಮೊನೆ (ಲೆಡ್) ಯನ್ನು ಪೆನ್ ಒಳಗೆ ರೀಫಿಲ್ ನಂತೆ ಹಾಕಿದರೆ ಆಯಿತು. ಆದರೆ ಅಂದು ನಾವು ಶಾಲೆಗೆ ಹೋಗುವಾಗ ಪೆನ್ಸಿಲ್ ಮೊನಚುಗೊಳಿಸುವಾಗಿನ ಮಜಾ ಮಾತ್ರ ಈಗ ಸಿಗುತ್ತಿಲ್ಲ. 

‘ಪೆನ್ಸಿಲ್' ಎಂಬ ಪದವು ಲ್ಯಾಟಿನ್ ಭಾಷೆಯ ‘ಪೆನಿಸಿಲಸ್' ಎಂಬ ಶಬ್ದದಿಂದ ಬಂದಿದೆ. ಅದರ ಅರ್ಥ ‘ಚೂಪಾದ ಬ್ರಷ್’ ಎಂದು. ಆ ಸಮಯದಲ್ಲಿ ಅದನ್ನು ಹಾಗೆಯೇ ಕರೆಯುತ್ತಿದ್ದರು. ನಂತರದ ದಿನಗಳಲ್ಲಿ ಪೆನ್ಸಿಲ್ ಬದಲಾವಣೆಯನ್ನು ಕಂಡಿತು. ಇದು ಸುಮಾರು ೨೫೦-೩೦೦ ವರ್ಷಗಳ ಹಿಂದಿನ ಕತೆ. ೫೦೦ ವರ್ಷಗಳ ಹಿಂದೆ ಇಂಗ್ಲೆಂಡ್ ನಲ್ಲಿ ಗಣಿಗಾರಿಕೆ ಮಾಡುವ ಸಂದರ್ಭದಲ್ಲಿ ಕಂಬರಲ್ಯಾಂಡ್ ಗಣಿಗಳಲ್ಲಿ ಜನರು ಗ್ರಾಫೈಟ್ ಎಂಬ ಲೋಹವನ್ನು ಕಂಡುಹಿಡಿದರು. ಅದನ್ನು ಗೋಡೆಗಳಲ್ಲಿ, ಮರಗಳಿಗೆ ಗುರುತು ಮಾಡಲು, ಬರೆಯಲು ಒರಟು ಕಲ್ಲಿನಂತೆ ಬಳಸಲಾಗುತ್ತಿತ್ತು ಎಂದು ಸಂಶೋಧಕರ ಅಭಿಮತ. ಆದರೆ ಗ್ರಾಫೈಟ್ ಲೋಹವನ್ನು ಪೆನ್ಸಿಲ್ ಅಂತೆ ಬಳಸಲು ಶುರು ಮಾಡಿದ್ದು ೧೭೬೦ರಲ್ಲಿ. ಈ ರೀತಿಯ ಪೆನ್ಸಿಲ್ ಗಳನ್ನು ಮೊದಲು ತಯಾರಿಸಿದವರೆಂದರೆ ಜರ್ಮನಿಯ ನ್ಯೂರೆಂಬರ್ಗ್ ನ ಫೇಬರ್ ಕುಟುಂಬದವರು. ಇವರ ಪ್ರಯತ್ನ ಹೆಚ್ಚು ಫಲ ಕೊಡಲಿಲ್ಲ. ಆದರೆ ಫೇಬರ್ ಕಂಪೆನಿಯ ಪೆನ್ಸಿಲ್ ಗಳು ಈಗಲೂ ಮಾರುಕಟ್ಟೆಯಲ್ಲಿ ದೊರೆಯುತ್ತವೆ. 

೧೭೯೫ರಲ್ಲಿ ಎನ್. ಜೆ. ಕಾಂಡ್ ಎಂಬಾತ ಗ್ರಾಫೈಟ್ ಜೊತೆ ಜೇಡಿ ಮಣ್ಣನ್ನು ಬೆರೆಸಿ, ಆ ಮಿಶ್ರಣವನ್ನು ಸಪೂರವಾದ ಕಡ್ಡಿಗಳಂತೆ ಮಾಡಿ ಬೆಂಕಿಯಲ್ಲಿ ಸುಟ್ಟು ಗಟ್ಟಿಯಾಗಿ ಮಾಡಿದ. ಇಂತಹ ಕಡ್ಡಿಗಳಿಂದ ಬರೆಯಲು ಸಾಧ್ಯವಾಗುತ್ತಿತ್ತು. ಆ ಸಮಯ ಇದೊಂದು ಜನಪ್ರಿಯ ಆವಿಷ್ಕಾರವಾಗಿತ್ತು. ಆದರೆ ಈ ಕಡ್ಡಿಗಳು ಮುರಿದುಹೋಗುವ ಸಾಧ್ಯತೆ ಅಧಿಕವಾಗಿತ್ತು. ಅದಕ್ಕಾಗಿ ಮುಂದಿನ ದಿನಗಳಲ್ಲಿ ಪೈನ್ ಎಂಬ ಜಾತಿಯ ಮರದಿಂದ ತಯಾರಿಸಿದ ಹೊರ ಕವಚವನ್ನು ಈ ಪೆನ್ಸಿಲ್ ಕಡ್ಡಿಗಳಿಗೆ ಹೊದಿಸಲಾಯಿತು. ಪೈನ್ ಮರವನ್ನು ಸುಲಭವಾಗಿ ಶಾರ್ಪ್ ಮಾಡಲು ಬರುತ್ತಿತ್ತು. ಅವುಗಳು ಮೃದುವಾಗಿದ್ದವುಗಳಾದುದರಿಂದ ಅದನ್ನು ಮೊನಚುಗೊಳಿಸುವುದು ಸುಲಭವಾಗಿತ್ತು. ಪೆನ್ಸಿಲ್ ತಯಾರಿಕೆಗೆ ಒಣ ಗ್ರಾಫೈಟ್ ಹುಡಿ, ಜೇಡಿ ಮಣ್ಣು ಹಾಗೂ ನೀರನ್ನು ಸೇರಿಸಿ ಪೇಸ್ಟ್ ನಂತೆ ಮಿಶ್ರಣ ತಯಾರು ಮಾಡಿ, ಯಂತ್ರದ ಸಹಾಯದಿಂದ ಸಣ್ಣ ಸಣ್ಣ ತೆಳುವಾದ ಕಡ್ಡಿಗಳನ್ನು ತಯಾರಿಸುತ್ತಾರೆ. ಅದನ್ನು ಒಲೆಯಲ್ಲಿ ಬೇಯಿಸಿದಾಗ ಅವುಗಳು ಗಡಸುತನ ಪಡೆದು ಗಟ್ಟಿಯಾದ ಕಡ್ಡಿ ಸಿಗುತ್ತದೆ. ಇದಕ್ಕೆ ಹೊರ ಕವಚ ಹೊದಿಸಿದರೆ ನಮ್ಮ ಇಂದಿನ ಆಧುನಿಕ ಪೆನ್ಸಿಲ್ ತಯಾರು.

ಪೈನ್ ಮರದಿಂದ ತಯಾರಿಸಲಾಗುವ ಹೊರ ಹೊದಿಕೆಯನ್ನು ಎರಡು ಭಾಗಗಳಾಗಿ ವಿಂಗಡಿಸಿ ಅದರ ನಡುವೆ ಪೆನ್ಸಿಲ್ ಕಡ್ಡಿಯು ಅಳವಡಿಸುವಂತೆ ನಿರ್ಮಿಸುತ್ತಾರೆ. ನಂತರ ಕಡ್ಡಿಯನ್ನು ಒಳಗಡೆ ಕೂರಿಸಿ ಅಂಟಿಸಿಬಿಡುತ್ತಾರೆ. ಬೇಕಾದ ಅಳತೆಗೆ ಕತ್ತರಿಸಿ, ಪಾಲಿಶ್ ಮಾಡಿ ವಿವಿಧ ಸುಂದರ ಬಣ್ಣಗಳನ್ನು ಬಳಿಯುತ್ತಾರೆ. ಈಗ ಸುಮಾರು ೫೦೦ಕ್ಕೂ ಅಧಿಕ ಪೆನ್ಸಿಲ್ ವಿಧಗಳಿವೆ. ಮಾಮೂಲಿ ಪೆನ್ಸಿಲ್ ಜೊತೆ ಬಣ್ಣದ ಕಡ್ಡಿಯ ಪೆನ್ಸಿಲ್ ಗಳೂ ಮಾರುಕಟ್ಟೆಯಲ್ಲಿವೆ. ಗ್ರಾಫೈಟ್ ಪೆನ್ಸಿಲ್ ನ ಒಂದು ದೊಡ್ದ ಗುಣವೆಂದರೆ ಪೆನ್ಸಿಲ್ ಬರಹವನ್ನು ರಬ್ಬರ್ ನಂಥಹ ವಸ್ತುವಿನ ಸಹಾಯದಿಂದ ಅಳಿಸಬಹುದು. ಆದುದರಿಂದ ಪೆನ್ಸಿಲ್ ಕರಡು ಪ್ರತಿ ತಯಾರಿಕೆಗೆ, ಗಾಜಿನ, ಮರದ ಮೇಲೆ ಗುರುತು ಮಾಡಲು ಬಳಸುತ್ತಾರೆ. ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಈ ಪೆನ್ಸಿಲ್ ಉಪಯುಕ್ತ.

ಪೆನ್ಸಿಲ್ ಗೆ 'ಸೀಸದ ಕಡ್ಡಿ' ಎಂಬ ಹೆಸರೂ ಇದೆ. ಆಂಗ್ಲ ಭಾಷೆಯಲ್ಲಿ ‘ಲೆಡ್ ಪೆನ್ಸಿಲ್' ಎನ್ನುತ್ತಾರೆ. ಆದರೆ ಸೀಸವನ್ನು ಪೆನ್ಸಿಲ್ ಗಳಲ್ಲಿ ಬಳಸಲಾಗುವುದಿಲ್ಲ. ಅಂದು ಪೆನ್ಸಿಲ್ ಜೊತೆಗೆ ಶಾರ್ಪ್ ನರ್, ರಬ್ಬರ್ (eraser) ಎಂಬ ಸ್ನೇಹಿತರು ಸದಾ ಜೊತೆಯಾಗಿರುತ್ತಿದ್ದರು. ಆದರೆ ಈಗ ಪೆನ್ ಪೆನ್ಸಿಲ್ ಗಳು ಬಂದಿರುವುದರಿಂದ ಶಾರ್ಪ್ ಮಾಡಲು ಉಪಕರಣಗಳ ಅಗತ್ಯವಿಲ್ಲ. ಆದರೂ ಅಂದು ಸಣ್ಣವರಿರುವಾಗ ಪೆನ್ಸಿಲ್ ಮೊನಚು ಮಾಡುವುದೆಂದು ಶಾರ್ಪ್ ನರ್ ಬಳಸಿ ಬಳಸಿ ಉದ್ದದ ಪೆನ್ಸಿಲ್ ಸಣ್ಣ ಸಣ್ಣದಾಗಿ ಮಾಡುತ್ತಿದ್ದ ಸೊಬಗು ಮರೆಯಲುಂಟೇ. ಮೊನಚು ಮಾಡಿದಾಗ ಸಿಗುವ ಮರದ ಸಿಪ್ಪೆಯು ಮೂಡಿಸುತ್ತಿದ್ದ ವಿವಿಧ ಆಕಾರಗಳು ಇನ್ನೂ ಮನದಾಳದಲ್ಲಿ ಹಸಿರಾಗಿಯೇ ಇವೆ.       

ಚಿತ್ರ ಕೃಪೆ: ಅಂತರ್ಜಾಲ ತಾಣ