ಪೆರ್ಡೂರು ಕುಂಬಾರರ ಗುಡಿ ಕೈಗಾರಿಕೆ ಸಂಘದ ಪರಿಸರಸ್ನೇಹಿ ಯೋಜನೆ
ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕಿನ ನಿಷೇಧದಿಂದಾಗಿ, ಕುಂಬಾರಿಕೆಗೆ ದೊಡ್ಡ ಅವಕಾಶವೊಂದು ಒದಗಿ ಬಂದಿದೆ. ಆ ಪ್ಲಾಸ್ಟಿಕಿನಿಂದ ತಯಾರಿಸುವ ನಿತ್ಯ ಬಳಕೆಯ ವಸ್ತುಗಳನ್ನು ಮಣ್ಣಿನಿಂದ ತಯಾರಿಸಿದರೆ, ಪರಿಸರಸ್ನೇಹಿಯಾದ ಈ ವಸ್ತುಗಳಿಗೆ ಬೇಡಿಕೆ ಇದ್ದೇ ಇರುತ್ತದೆ.
ಈ ಅವಕಾಶ ಬಳಸಿಕೊಳ್ಳಲು ಮುಂದಾಗಿದೆ ಉಡುಪಿ ಹತ್ತಿರದ ಪೆರ್ಡೂರಿನ ಕುಂಬಾರರ ಗುಡಿ ಕೈಗಾರಿಕೆ ಸಂಘ. ಪ್ಲಾಸ್ಟಿಕ್ ಕಪ್ಗಳಿಗೆ ಬದಲಿಯಾಗಿ ಮಣ್ಣಿನ ಕಪ್ ತಯಾರಿಸುವುದು ಈ ಸಂಘದ ಸದ್ಯದ ಯೋಜನೆ. ಆದರೆ, ಪ್ಲಾಸ್ಟಿಕ್ ಅಥವಾ ಪೇಪರ್ ಕಪ್ನ ಬೆಲೆಯಲ್ಲಿ ಮಣ್ಣಿನ ಕಪ್ ತಯಾರಿಸುವುದು ಸವಾಲಿನ ಕೆಲಸ.
ಪೆರ್ಡೂರು ಸಂಘದ ನಿಯೋಗ, ಉತ್ತರ ಭಾರತದಲ್ಲಿ ಮಣ್ಣಿನ ಕಪ್ಗಳಿಗೆ ಬೇಡಿಕೆಯಿರುವ ಕೆಲವು ರಾಜ್ಯಗಳಿಗೆ ಭೇಟಿ ನೀಡಿದೆ. ಅಲ್ಲಿನಂತೆ ಕರ್ನಾಟಕದಲ್ಲಿಯೂ ಮಣ್ಣಿನ ಕಪ್ಗಳಿಗೆ ಬೇಡಿಕೆ ಕುದುರಿಸುವ ಬಗ್ಗೆ ಅಧ್ಯಯನ ನಡೆಸುತ್ತಿದೆ. ಸಂಘವು ಉತ್ಪಾದನಾ ವೆಚ್ಚ ತಗ್ಗಿಸಲಿಕ್ಕಾಗಿ ಯಂತ್ರೋಪಕರಣ ಅಳವಡಿಸುವ ಉದ್ದೇಶ ಹೊಂದಿದೆ.
೧೯೫೮ರಲ್ಲಿ ಸ್ಥಾಪನೆಯಾದ ಈ ಸಂಘವು ಕುಂಬಾರರು ತಯಾರಿಸಿದ ಮಡಿಕೆ, ನೀರಿನ ಹೂಜಿ, ಹಂಡೆ, ಬಾಣಲೆ, ಒಲೆ, ಹಣತೆ ಇತ್ಯಾದಿ ಮೂವತ್ತು ವಿವಿಧ ಮಣ್ಣಿನ ವಸ್ತುಗಳನ್ನು ಈಗಾಗಲೇ ಮಾರಾಟ ಮಾಡುತ್ತಿದೆ.
ಟೀ ಕುಡಿಯುವ ಗ್ರಾಹಕರಿಗೆ ಕೊಲ್ಕತಾದ ಟೀ ಷಾಪ್ಗಳು ಪ್ಲಾಸ್ಟಿಕ್, ಪೇಪರ್ ಹಾಗೂ ಮಣ್ಣಿನ ಕಪ್ಗಳ ಆಯ್ಕೆ ಒದಗಿಸುತ್ತವೆ. ಈ ಟೀ ಷಾಪ್ಗಳಿಗೆ ಮಣ್ಣಿನ ಟೀ ಕಪ್ ತಲಾ ೬೦ ಪೈಸೆಗೆ ಲಭ್ಯ. ಆದರೆ ಪ್ಲಾಸ್ಟಿಕ್ ಕಪ್ ತಲಾ ೪೦ ಪೈಸೆಗೆ ಮತ್ತು ಪೇಪರ್ ಕಪ್ ತಲಾ ೫೦ ಪೈಸೆಗೆ ಲಭ್ಯ. ಮಣ್ಣಿನ ಕಪ್ನಲ್ಲೇ ಟೀ ಕುಡಿಯುವ ಗ್ರಾಹಕರು ಆ ಟೀಗೆ ಮೂರು ಅಥವಾ ನಾಲ್ಕು ರೂಪಾಯಿ ಹೆಚ್ಚುವರಿ ಪಾವತಿಸ ಬೇಕಾಗುತ್ತದೆ. ಅವರು ಅದನ್ನು ಪಾವತಿಸುತ್ತಿರುವ ಕಾರಣದಿಂದಾಗಿ ಕೊಲ್ಕತಾದಲ್ಲಿ ಇಂದಿಗೂ ಮಣ್ಣೀನ ಕಪ್ಗಳಲ್ಲಿ ಟೀ ಸವಿಯಲು ಲಭ್ಯ. (ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ “ಸಂಪದ"ದಲ್ಲಿ ೨೭ ಡಿಸೆಂಬರ್ ೨೦೧೯ರಂದು ಪ್ರಕಟವಾದ “ಪರಿಸರಸ್ನೇಹಿ ಮಣ್ಣಿನ ಟೀ ಕಪ್ ಕಥನ” ಲೇಖನವನ್ನು ಓದಬಹುದು.)
ಇತರ ನಗರವಾಸಿಗಳೂ ಪರಿಸರರಕ್ಷಣೆಗಾಗಿ ಮಣ್ಣಿನ ಕಪ್ಗಳಲ್ಲಿ ಪಾನೀಯ ಸೇವಿಸುವ ಪರಿಪಾಠ ಆರಂಭಿಸಬಹುದು, ಅಲ್ಲವೇ?