ಪೇಟೆಂಟ್ ಸಂಖ್ಯೆ : ೧೩೯, ೧೨೧- ಮೇ ೨೦ ರ ೧೮೭೩ ರಂದು
ಪೇಟೆಂಟ್ ಸಂಖ್ಯೆ : ೧೩೯, ೧೨೧- ಮೇ ೨೦ ರ ೧೮೭೩ ರಂದು !
ಇದೇನಿರಬಹುದು ? ವಿಶ್ವದ ಅತ್ಯಂತ ಹಳೆಯ ಡೆನಿಮ್ ಕಂಪೆನಿ,"ಲೆವಿ ಸ್ಟ್ರಾಸ್" ತನ್ನ ಬ್ರಾಂಡನ್ನು ನೊಂದಾಯಿಸಿದ ಸಂಖ್ಯೆ ಮತ್ತು ಶುಭದಿನ !
'ಕಾರ್ಪಸ' ಎನ್ನುವುದು ಹತ್ತಿಗೆ ಒಂದು ಪರ್ಯಾಯವಾದ ಹೆಸರು. ಇದು ವಾಸ್ತವವಾಗಿ ಸಂಸ್ಕೃತ ಶಬ್ದ. ನಾವು ಕರೆಯುವ ಅರಳೆ/ಹತ್ತಿಗೆ, ಸುಮಾರು ೩೫ ಹೆಸರುಗಳಿವೆ. ಕಾಟನ್ ಎಂದು ಬಳಸುವ ಪದ ಇಂಗ್ಲೀಷ್ ಅಲ್ಲ. ಅರಬ್ಬೀ ವ್ಯಾಪಾರಗಾರರು ಹತ್ತಿಯನ್ನು ಯೂರೋಪಿನಲ್ಲಿ ಮಾರುವಾಗ ಅವರ ಬಾಷೆಯಲ್ಲಿ 'ಕೌಟೊನ್' ಎನ್ನುತ್ತಿದ್ದರು. ಅದನ್ನು ಇಂಗ್ಲೀಷ್ ಜನ ಹೇಳುವ ರೀತಿ ಹೀಗೆ.
ನಮ್ಮದೇಶದಲ್ಲೇ, ತಮಿಳರು ಪರಿತಿ, ತೆಲುಗರು ಪತ್ತಿ, ಬೆಂಗಾಲಿಗಳು ತುಲ, ಗುಜರಾತಿಗಳು ರೂ, ಹಿಂದಿ ಭಾಷಿಗಳು ರೂಯಿ, ಮರಾಠಿಗರು ಕಾಪೂಸ್, ಸ್ಪ್ಯಾನಿಷ್ ಜನ ಆಲ್ಗೋಡಿನ್, ಫ್ರೆಂಚ್ ಲೆ ಕಾಟೊನ್ ಇತ್ಯಾದಿ ಕರೆಯುತ್ತಾರೆ.
ಯೂರೋಪಿಯನ್ ಮಾನೋಪಲಿಯಾಗಿರುವ ಬಹುರಾಷ್ಟ್ರೀಯ ಉಡುಪಿನ ಕಂಪೆನಿಗಳು 'ಕರ್ಪಾಸ' ಎಂದು 'ಟ್ರೇಡ್ ನೇಮ್,' ಇಟ್ಟಿರಲಿಕ್ಕೂ ಸಾಕು. ಹತ್ತಿ ಏನಿದ್ದರೂ ಭಾರತ ಅಮೆರಿಕ, ಚೈನ ರಶ್ಯ, ಆಸ್ಟ್ರೇಲಿಯ ದಂತಹ ದೇಶಗಳ ಬೆಳೆ. ಸ್ಪೈನ್ ನಿಂದ ಉತ್ತರಕ್ಕೆ ಹತ್ತಿ ಬೆಳೆಯುವುದು ಕಷ್ಟ. Green house ನಲ್ಲಿ ಬೆಳೆಸ ಬಹುದು. ಆದರೆ ಅದರ ಇತಿ ಮಿತಿ ಇದೆಯಲ್ಲ !
ಕಿಂಕಾಪು : ಎನ್ನುವುದು ವರ್ಣರಂಜಿತ ಹತ್ತಿ ಅಥವಾ ರೇಷ್ಮೆ ಬಟ್ಟೆಗಳ/ಉಡುಪಿನ ಹೆಸರು. ಭರತನಾಟ್ಯದಂತಹ ನೃತ್ಯಪ್ರಾಕಾರದಲ್ಲಿ ಬೆಲೆಬಾಳುವ ಕಿಂಕಾಪಿನ ಉಡುಪು ನೃತ್ಯಕ್ಕೆ ಶೋಭೆ ನೀಡುತ್ತದೆ. ಅದಕ್ಕೆ ಬಂಗಾರದ ಬಣ್ಣದ ಲೇಸನ್ನು ಹಚ್ಚಿರುತ್ತಾರೆ. ಸಾಮಾನ್ಯವಾಗಿ ನಾವು ನಮ್ಮ ಊರಿನ ಹಳ್ಳಿ ನಾಟಕಗಳಲ್ಲಿ ಪಾತ್ರಧಾರಿಗಳು ಕಿಂಕಾಪಿನ ವಸ್ತ್ರ ಉಟ್ಟುಬರುತ್ತಿದ್ದದ್ದನ್ನು ನೋಡಿದ್ದೆವು. ಅವು ಹತ್ತಿ ಅಥವಾ ರೇಷ್ಮೆಯದಾಗಿರಲೂ ಸಾಕು.
ಕಲಾಪತ್ತು : ಎನ್ನುವುದು ಅಂಧ್ರ ಪ್ರದೇಶದ ಮೀನು ಹಿಡಿಯುವ ಹಳ್ಳಿಯ ತಾಣ. 'ಕಲ' ಎನ್ನುವುದು ಒಂದು ಜಾತಿಯ ಮೀನು. ಕಲಾಪತ್ತಿನ ಸೀರೆಯನ್ನು ಉಟ್ಟು ಬಂದಿದ್ದರು ಅನ್ನೋದನ್ನ ಕೇಳಿದ್ದೇನೆ. ಅದರ ವಿಶೇಷತೆಗಳಬಗ್ಗೆ ಸರಿಯಾಗಿ ತಿಳಿದಿಲ್ಲ.
ಡೆನಿಮ್ : ಎನ್ನುವುದು ಒಂದು ಫ್ಯಾಷನ್ ಉಡುಗೆ ತೊಡುಗೆ. ಇದನ್ನು ನಿಜವಾಗಿಯೂ ಅತಿ ಭಾರಿ ದಪ್ಪ ಹತ್ತಿ ಬಟ್ಟೆಯಿಂದ ತಯಾರು ಮಾಡಲಾಗುತ್ತದೆ. ಇದು ಇರಬೇಕಾದ ತೂಕ ೧೫ ಔನ್ಸ್ ವರೆಗೆ, ಮತ್ತು ಇದು ಗಂಡಸರ ಉಡುಪಾಗಿ ಮೊದಲು ಸ್ವೀಕರಿಸಲಾಗಿತ್ತು.
ಡೆನಿಮ್ ಎನ್ನುವ ದಪ್ಪ ಹತ್ತಿ ಬಟ್ಟೆ ಮಾಡಿದವರು ಫ್ರಾನ್ಸಿಸಿಗಳು. ಆದರೆ ಅದರ ಬಳಕೆಯನ್ನು ಮಾಡಿ ಅದನ್ನು ವಿಶ್ವಕ್ಕೆ ಫ್ಯಾಷನ್ ಉಡುಪಾಗಿ ಪರಿಚಯಿಸಿದವರು ಅಮೆರಿಕನ್ನರು !
'ಲೆವಿ ಸ್ಟ್ರಾಸ್' ಎನ್ನುವವನು ಒಬ್ಬ ಜರ್ಮನ್ ವ್ಯಾಪಾರಗಾರ. ಅವನು ಅಮೆರಿಕದಲ್ಲಿ ವಲಸಿಗನಾಗಿ ಬಂದವನು, ೧೮೫೩ ರಲ್ಲಿ ನ್ಯೂಯಾರ್ಕ್ ನಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ಪ್ರಯಾಣಬೆಳೆಸಿದ. ಅಲ್ಲಿ ಒಂದು ವಿಶಾಲ ಸ್ಟೋರ್ ತೆಗೆದ.ಅವನಿಗೆ ಹತ್ತಿರದ ಲಟ್ವೇನಿಯನ್ ದೇಶದ ಗೆಳೆಯಜ್ಯಾಕೊಬ್ ಡೇವಿಸ್ ರೆನೋ, ನಿವೇಡ ಪ್ರದೇಶದಲ್ಲಿ ದರ್ಜಿಯಾಗಿ ಜೀವನ ಮಾಡುತ್ತಿದ್ದ. ಆತ ತನ್ನ ಸ್ನೇಹಿತನ ಶಾಪಿನಿಂದ ಯಾವಾಗಲೂ ಡೆನಿಮ್ ಬಟ್ಟೆ ಮತ್ತು ಅದರ ಜೊತೆಗೆ ಬೋಲ್ಟ್ಸ್ ಗಳನ್ನು ಖರೀದಿಸುತ್ತಿದ್ದ. ಅವನ ಗಿರಾಕಿಗಳಿಗೆಲ್ಲಾ ತಮ್ಮ ಪ್ಯಾಂಟಿನ ಜೇಬುಗಳ ಹತ್ತಿರ ದಾರ ಸವೆದು ಅಲ್ಲಿ ಹರಿಯುತ್ತಿತ್ತು. ಅವರು ಅದರ ಬಗ್ಗೆ ಬಂದು ದೂರು ಹೇಳುತ್ತಿದ್ದರು. ಅಥವಾ ಬಣ್ಣ ಕಡಿಮೆಯಾಗುತ್ತಿತ್ತು. ಇದನ್ನು ಗಮನಿಸಿ ಅಂತಹ ಸ್ಥಳದಲ್ಲಿ ಮೆಟಲ್ (ತಾಮ್ರದ) ರಿವೆಟ್ಗಳನ್ನು ಜೋಡಿಸಿದರೆ ಹರಿಯುವುದು ಕಡಿಮೆಯಾದಂತೆ ಕಂಡುಬಂತು.
ಇದನ್ನೇ ಬಂಡವಾಳವಾಗಿರಿಸಿಕೊಂಡು ತನ್ನ ದರ್ಜಿಯ ಅಂಗಡಿಯ ವ್ಯಾಪಾರಕ್ಕೆ ಒಂದು ಹೊಸತನವನ್ನು ಕೊಟ್ಟು ಹೆಸರಾದನು. ಮೊದಲು ಅದಕ್ಕೆ ಪೇಟೆಂಟ್ ಮಡಿಸಲು ಅವನ ಬಳಿ ೬೮ ಡಾಲರ್ ರೊಕ್ಕ ಇರಲಿಲ್ಲ. ಪಾಪ. ಅದಕ್ಕಾಗಿ ತನ್ನ ಸ್ನೇಹಿತ ಸ್ಟ್ರಾಸ್ ನ ಸಹಾಯಬೇಡಿ ಇಬ್ಬರು ಸೇರಿ ತಮ್ಮ ವ್ಯಾಪಾರವನ್ನು ಅಭಿವೃದ್ಧಿಪಡಿಸಿದರು. ಆ ಪೇಟೆಂಟ್ ಸಂಖ್ಯೆ ಇಂದಿಗೂ ಹೆಸರುವಾಸಿಯಾಗಿದೆ : ೧೩೯, ೧೨೧ ಮೇ ೨೦, ೧೮೭೩- "ಪ್ಯಾಂಟಿನ ಜೇಬುಗಳ ಹರಿಯುವಿಕೆಯನ್ನು ತಡೆಯಲು ಮಾಡಿದ ವಿಶೇಷ ಸೌಲಭ್ಯ" ಎಂಬ ಹೆಸರಿನಲ್ಲಿ ದಾಖಲಾಗಿದೆ. ಇವರ ಪೇಟೆಂಟ್ ೧೯೦೮ ರವರೆಗೆ ಜಾರಿಯಲ್ಲಿತ್ತು. ( ಸುಮಾರು ೩೫ ವರ್ಷಗಳವರೆಗೆ ಯಾರೂ ಇದನ್ನು ಅನುಕರಿಸುವಂತಿರಲಿಲ್ಲ.)
ಮೊದಲು ಈ ಗಟ್ಟಿ ಬಟ್ಟೆಯ ಟ್ರೌಸರ್ ಧರಿಸುತ್ತಿದ್ದವರು, ಅಮೆರಿಕಾದ ಕೋಲ್ ಗಣಿಗಳಲ್ಲಿ ಕೆಲಸಮಾಡುತ್ತಿದ್ದ ಕಾರ್ಮಿಕರು. ಆದರೆ ೧೯೪೦ ರಲ್ಲಿ ತಯಾರುಮಾಡಿದ ವೆಸ್ಟೆರ್ನ್ ಚಲನ ಚಿತ್ರಗಳಲ್ಲಿ ಇದನ್ನು ಧರಿಸಿದ ಹಾಲಿವುಡ್ ಚಿತ್ರ ನಟರು ಇದನ್ನು ಪ್ರಸಿದ್ಧಿ ಪಡಿಸಿದರು. ಎರಡನೆಯ ಮಹಾವಿಶ್ವ ಯುದ್ಧದಲ್ಲಿ ಅಮೆರಿಕನ್ ಯೋಧರು ಈ ಉಡುಪನ್ನು ಯೂರೋಪಿಗೆ ಕೊಂಡೊಯ್ದು ಮಾರಿ ಬಹಳ ಹಣಗಳಿಸಿದರು. ಅವರು ಹಡಗಿನಿಂದ ಇಳಿಯುವುದನ್ನೇ ಕಾದಿದ್ದು ಲೈನಿನಲ್ಲಿ ನಿಂತು ಡೆನಿಮ್ ಬಟ್ಟೆಗಳನ್ನು ಜನ ಖರೀದಿಸುತ್ತಿದ್ದರು. ಮುಂದೆ ಅದೊಂದು ಪ್ಯಾಷನ್ ಉಡುಪಾಗಿ ವಿಶ್ವದಾದ್ಯಂತ, ಇಂದಿಗೂ ಮೆರೆಯುತ್ತಿದೆ.
ಡೆನಿಮ್ ಬಟ್ಟೆ- ಜೀನ್ ಅದರಿಂದ ತಯರಾದ ಪ್ಯಾಂಟ್/ ಟ್ರೌಸರ್. ಫ್ರೆಂಚ್ ಜನ ಹೆಸರಿಟ್ಟಿದ್ದು- ಸರ್ಜ್ ಡಿ ನೈಮ್ಸ್' ಫ್ರಾನ್ಸ್ ನ ನೈಮ್ಸ್ ಎಂಬ ಊರಿನಲ್ಲಿ ಮಾಡಿದ ಸರ್ಜ್ ವಸ್ತ್ರ.( ಸರ್ಜ್ ಇಂಗ್ಲೀಷ್ ಬಟ್ಟೆಯ ಪ್ರಾಕಾರ ) ಇನ್ನೊಂದು ವಿವರ ಹೀಗಿದೆ. ಇಟಲಿಯ ಜಿನೋವ ಬಳಿ ಹತ್ತಿ, ಉಣ್ಣೆ, ಮತು ಲಿನನ್ ನಾರಿನ ವಸ್ತ್ರಗಳಿಂದ ತಯಾರಿಸಲ್ಪಟ್ಟ ಉಡುಪಿಗೆ ಜೀನ್ ಎನ್ನುತ್ತಾರೆ. (ಜೀನ್ ಬಹುವಚನ ) ಇಂಗ್ಲೆಂಡಿನ ಜನಕ್ಕೆ ಇದರ ಚಪಲ ಎಷ್ಟಿತ್ತೆಂದರೆ ವಿಲಿಯಮ್ ಶೇಕ್ಸ್ ಪಿಯರ್, ಮತ್ತು ಐಸಾಕ್ ನ್ಯೂಟನ್ ನಂತಹ ದಿಗ್ಗಜರೂ ಇದಕ್ಕೆ ಹೊರತಾಗಿರಲಿಲ್ಲ. ಈ ಮಹಾಶಯರ ಭಾವ ಚಿತ್ರಗಳಿಂದ (ತೈಲ ಚಿತ್ರಗಳಿಂದ) ನಮಗೆ ಅವರ ಉಡುಪಿನ ಖಯಾಲಿ ತಿಳಿಯುವುದಿಲ್ಲವಲ್ಲ !