*ಪೇಢದ ಸಂತಸ* ( ಭಾಮಿನಿ ಷಟ್ಪದಿಯಲ್ಲಿ)

*ಪೇಢದ ಸಂತಸ* ( ಭಾಮಿನಿ ಷಟ್ಪದಿಯಲ್ಲಿ)

ಕವನ

ಬೋರೆಹಣ್ಣನು ಬುಟ್ಟಿಯಲ್ಲಿಯೆ

ಮಾರಲೊಬ್ಬಳು ತಂದು ಬಿಟ್ಟಳು

ಸಾರಿ ಹೇಳುತ ಪೇಟೆಯಲ್ಲಿಯೆ ತಾನು ಜೋರಿನಲಿ||

ಮೀರಿ ಬಂದಿತು ಜನರಗುಂಪದು

ತೋರಿ ನಗುವನು ಬಂದು ಹತ್ತಿರ

ನೇರ ನುಡಿಯಲಿ ಸೇರು ಲೆಕ್ಕವನಳೆದು ಕೊಡುಯೆಂದು||

 

ಬಾಯಿಯೊಳಗಡೆ ನೀರು ತರಿಸಲು

ತಾಯಿಬೋರೆಯ ಹಣ್ಣು ನೋಡಿರಿ

ಸೋಯದಲ್ಲಿಯೆ ಕೊಡುವೆನೆನುತಲಿ ಗಡಬಡವಮಾಡಿ||

ಬೀಯಕಾಗಿಯೆ ತಂದಹಣವ

ನ್ನೀಯ ಮನುಜರು ತಿಂದು ತೇಗಲು

ಕಾಯಿಯನ್ನಲಿ ಕೇಜಿಗಟ್ಟಲೆ ಕೊಂಡು ಹೋದರಲಿ||

 

ಹುಳುಕು ಪಳುಕದು ಕೊಂಚವಿಲ್ಲದೆ

ತಳುಕು ತೋರದೆ ನೋಡಿಯೆಂದಳು

ಬಳಿಗೆ ಬರುತಲಿ ಬುಟ್ಟಿ ಖಾಲಿಯ ಮಾಡಿಬಿಟ್ಟರಲಿ||

ನೆಳಲಿನಲ್ಲಿಯೆ ಮಾರಿಹೊರಟಳು

ಮಳಲ ಶಿವನನು ನೆನೆದು ಮನದಲಿ

ಬೆಳೆವ ಸುತನಿಗೆ ಪೇಢ ಚಕ್ಕುಲಿ ಗಂಟನೋಯ್ದಿಹಳು||

 

ಪೇಢ ಗಂಟನು ನೋಡಿಚಣದ

ಲ್ಲೋಡಿ ಬಂದನು ಮುದ್ದು ಸುತನಲಿ

ಕಾಡಿ ಬೇಡಲು ಪೇಟೆಯಿಂದಲೆ ತಂದು ಬಿಟ್ಟಿಹೆನು||

ನೋಡಿ ಮರುಕವ ಪಟ್ಟಬಿಟ್ಟನು

ಬೇಡವೆಂದರು ಬಾಯಲಿಟ್ಟನು

ಬಾಡಿಹೋಗಿಹ ಮೊಗದ ಮೇಲಲಿ ಹರುಷ ತಂದಿಹನು||

 

-*ಶಂಕರಾನಂದ ಹೆಬ್ಬಾಳ* 

 

ಚಿತ್ರ್