ಪೇರಳೆ ಗಿಡದ ಎಲೆಗಳನ್ನು ಸೇವಿಸುವುದರಿಂದ ಪ್ರಯೋಜನಗಳು

ಪೇರಳೆ ಗಿಡದ ಎಲೆಗಳನ್ನು ಸೇವಿಸುವುದರಿಂದ ಪ್ರಯೋಜನಗಳು

ಪೇರಳೆ ಅಥವಾ ಸೀಬೆ ಹಣ್ಣು ಯಾರಿಗೆ ತಾನೇ ಗೊತ್ತಿಲ್ಲ. ಸೇಬಿನ ಹಣ್ಣಿನಲ್ಲಿರುವಷ್ಟೇ ಪೋಷಕಾಂಶಗಳು ಸೀಬೆ ಹಣ್ಣಿನಲ್ಲಿವೆ ಎನ್ನುವುದು ಆಹಾರ ತಜ್ಞರ ಅಭಿಮತ. ಬಡವರ ಹಣ್ಣು ಎಂದೂ ಪೇರಳೆ ಹಣ್ಣನ್ನು ಕರೆಯುತ್ತಾರೆ. ಹಿಂದೆಲ್ಲಾ ಪ್ರತೀ ಮನೆಗಳಲ್ಲಿ ಪೇರಳೆಯ ಮರ ಇರುತ್ತಿತ್ತು. ಪುಟ್ಟ ಪುಟ್ಟ ಪೇರಳೆ ಹಣ್ಣು, ಕೆಲವು ಒಳಗಡೆ ಕೆಂಪು ಬಣ್ಣ, ತಿನ್ನಲು ಬಹಳ ರುಚಿಕರವಾಗಿರುತ್ತಿತ್ತು. ಈಗ ದೊಡ್ಡ ಗಾತ್ರದ ‘ಜಂಬೋ’ ಪೇರಳೆ ಹಣ್ಣುಗಳು ಮಾರುಕಟ್ಟೆಗೆ ಬಂದು ನಮ್ಮ ಸಾಂಪ್ರದಾಯಿಕ ಮನೆ ಶೈಲಿಯ ಹಣ್ಣುಗಳು ನಾಪತ್ತೆಯಾಗಿವೆ. ಈಗಿನ ಪೇರಳೆ ಹಣ್ಣು ನೋಡಲು ಆಕರ್ಷಕವಾಗಿ ಕಂಡರೂ ನಾಟಿ ಪೇರಳೆಯಷ್ಟು ರುಚಿಕರವಲ್ಲ. 

ನಮ್ಮ ಪೂರ್ವಿಕರು ಪೇರಳೆ ಹಣ್ಣಿನ ಗಿಡದ ಚಿಗುರು ಅಥವಾ ಎಲೆಯಿಂದ ತಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಹಲ್ಲಿನ ಜೊತೆಗೆ ಒಸಡಿನ ಆರೋಗ್ಯಕ್ಕೂ ಪೇರಳೆ ಎಲೆ ರಾಮಬಾಣವಾಗಿತ್ತು. ಆದರೆ ಈಗ ನಾವು ವಿಧವಿಧದ ರಾಸಾಯನಿಕ ಮಿಶ್ರಿತ ಪೇಸ್ಟ್ ಬಳಸಿ, ಅದನ್ನು ಬ್ರಷ್ ಮೂಲಕ ಹಲ್ಲುಗಳಿಗೆ ಉಜ್ಜಿ ಹಲ್ಲಿನ ಎನಾಮಲ್ ಹಾಳು ಮಾಡುತ್ತಿದ್ದೇವೆ. ನಿಮಗೆ ನೆನಪಿರಲಿ, ಎನಾಮಲ್ ಎನ್ನುವುದು ಅತ್ಯಂತ ಗಟ್ಟಿಯಾದ ವಸ್ತು. ನಾವು ಪ್ರತೀ ದಿನ ಹಲ್ಲನ್ನು ಉಜ್ಜಿದರೂ ಅದು ಕರಗಿ ಹೋಗುವುದಿಲ್ಲ. ಆದರೆ ನಾವು ಬಳಸುವುವ ಪೇಸ್ಟ್ ನಲ್ಲಿರುವ ರಾಸಾಯನಿಕಗಳು ಹಲ್ಲಿನ ಎನಾಮಲ್ ನ್ನು ಹಾಳು ಮಾಡಿಬಿಡುತ್ತಿದೆ.

ಅನದಿಕಾಲದಿಂದ ಪೇರಳೆ ಎಲೆಗಳನ್ನು ಔಷಧೀಯ ವಸ್ತುವಾಗಿ ಬಳಕೆ ಮಾಡಲಾಗುತ್ತಿದೆ. ಬಹುತೇಕವಾಗಿ ಬಾಯಿಯೊಳಗಿನ ಸ್ವಚ್ಛತೆಗೆ. ಪೇರಳೆ ಮರದ ಎಲೆಗಳು ನಮ್ಮ ದೇಶದಲ್ಲಿರುವ ಕೆಟ್ಟ ಕೊಬ್ಬಿನಂಶ (ಕೊಲೆಸ್ಟ್ರಾಲ್) ಗಳನ್ನು ಕಡಿಮೆ ಮಾಡಿ ದೇಹದ ತೂಕದ ನಿಯಂತ್ರಕ್ಕೆ ಸಹಾಯ ಮಾಡುತ್ತದೆ. ವಾರಕ್ಕೆ ಮೂರು ಬಾರಿಯಾದರೂ ಪೇರಳೆ ಮರದ ಎಲೆಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಜಗಿದು ತಿನ್ನುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ನಿಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳಿವೆ.

ಪೇರಳೆ ಗಿಡದ ಎಲೆಗಳ ಸೇವನೆಯು ನಿಮ್ಮ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಅಜೀರ್ಣದ ಸಮಸ್ಯೆಯನ್ನು ನಿವಾರಿಸುತ್ತದೆ. ಪೇರಳೆ ಎಲೆಗಳು ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಹಾನಿಕಾರಕ ಸೂಕ್ಷ್ಮಾಣುಗಳನ್ನು ನಿಯಂತ್ರಿಸುವುದರಿಂದ ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುತ್ತದೆ. ಪೇರಳೆ ಎಲೆಯಿಂದ ಚಹಾ ಮಾಡಿ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ವಾಯುಬಾಧೆಯು ನಿವಾರಣೆಯಾಗುತ್ತದೆ. ಆಯುರ್ವೇದದ ಪ್ರಕಾರ ಪೇರಳೆ ಮರದ ಎಲೆಯು ನಮ್ಮ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಿ ಸಕ್ಕರೆ ಕಾಯಿಲೆಯನ್ನು ನಿರ್ವಹಣೆ ಮಾಡುತ್ತದೆ. 

ಪೇರಳೆಯ ಎಲೆಯ ಸೇವನೆಯು ಅತಿಯಾದ ಹಸಿವನ್ನು ನಿಯಂತ್ರಿಸುತ್ತದೆ. ಇದರಿಂದ ಆಗಾಗ ಹಸಿವಾಗುವುದು ತಪ್ಪುತ್ತದೆ. ಇದರಿಂದ ಅತಿಸೇವನೆಯಿಂದ ಬರುವ ಬೊಜ್ಜು, ಕೊಬ್ಬು ಮೊದಲಾದ ಸಮಸ್ಯೆಗಳು ಬರುವುದಿಲ್ಲ. ಪೇರಳೆ ಮರದ ಎಲೆತ ಚಹಾ ಫಿಟ್ನೆಸ್ ಸಮಸ್ಯೆಯನ್ನು ಸರಿಪಡಿಸುತ್ತದೆ. ಪೇರಳೆ ಗಿಡದ ಎಲೆಗಳ ಸೇವನೆಯು ನೈಸರ್ಗಿಕವಾಗಿ ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಇದರಿಂದ ನಮ್ಮ ಲಿವರ್ ನ ಆರೋಗ್ಯ ಹೆಚ್ಚಾಗುತ್ತದೆ. 

ಪೇರಳೆಯ ಎಲೆಯ ಸೇವನೆಯಿಂದ ದೇಹಕ್ಕೆ ವಿಟಮಿನ್ ಸಿ ಧಾರಾಳವಾಗಿ ದೊರೆಯುತ್ತದೆ. ಹೀಗಾಗಿ ಪೇರಳೆ ಎಲೆ  ನೈಸರ್ಗಿಕವಾಗಿ ರೋಗ ನಿವಾರಣೆ, ಹಲ್ಲು ನೋವು, ಅಲರ್ಜಿ, ಗಾಯಗಳ ವಾಸಿ, ಗಂಟಲು ನೋವು, ದೃಷ್ಟಿ ದೋಷ ಮುಂತಾದುವುಗಳ ನಿವಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪೇರಳೆ ಎಲೆಯ ಬಹುಮುಖ್ಯ ಕಾರ್ಯವೆಂದರೆ ಅದು ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ. ಪೇರಳೆಯ ಎಲೆಯ ಜೊತೆಗೆ ಪೇರಳೆ ಹಣ್ಣು ಸಹಾ ಪೋಷಕಾಂಶಗಳ ಆಗರ. ವಿದೇಶೀ ಹಣ್ಣುಗಳನ್ನು ದುಬಾರಿ ದರ ತೆತ್ತು ಸೇವಿಸುವ ಬದಲು ನಮ್ಮದೇ ಹಿತ್ತಲಿನಲ್ಲಿ ಬೆಳೆದಿರುವ ಪೇರಳೆ ಹಣ್ಣು ತಿನ್ನುವುದು ಆರೋಗ್ಯದ ದೃಷ್ಟಿಯಿಂದಲೂ ಬಹಳ ಉಪಯುಕ್ತ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ