ಪೊಲದ್ಯೆ

ಪೊಲದ್ಯೆ

ಪುಸ್ತಕದ ಲೇಖಕ/ಕವಿಯ ಹೆಸರು
ಸುಂದರ ಬಾರಡ್ಕ
ಪ್ರಕಾಶಕರು
ಅಂಬೇಡ್ಕರ್ ವಿಚಾರ ವೇದಿಕೆ, ಬದಿಯಡ್ಕ, ಕಾಸರಗೋಡು
ಪುಸ್ತಕದ ಬೆಲೆ
ರೂ.70.00 ಮುದ್ರಣ: 2016

*ಸುಂದರ ಬಾರಡ್ಕರ "ಪೊಲದ್ಯೆ": ತುಳುವರ ಜನಪದೀಯ ಚಿಕಿತ್ಸಾ ಕ್ರಮಗಳ ಉನ್ನತ ಅಧ್ಯಯನಕ್ಕೆ ಅಡಿಗಲ್ಲು*

"ಪೊಲದ್ಯೆ", ಸುಂದರ ಬಾರಡ್ಕ ಅವರ ಮೂರನೇ ಪ್ರಕಟಿತ ಸಂಕಲನ. ತುಳು ಜನಪದ ಚಿಕಿತ್ಸೆ, ಆಚರಣೆ ಮತ್ತು ನಂಬಿಕೆಗಳ ಕುರಿತಾದ ಈ ಕೃತಿಯನ್ನು 2016ರಲ್ಲಿ ಬದಿಯಡ್ಕದ ಅಂಬೇಡ್ಕರ್ ವಿಚಾರ ವೇದಿಕೆ (ರಿ) ಪ್ರಕಾಶಿಸಿದೆ. 51 + 9 ಪುಟಗಳ ಕೃತಿಯ ಬೆಲೆ 70.00 ರೂಪಾಯಿ. ನಯನರಾಜ್ ಎನ್. ಬಿ. ಇವರ ಕಲಾತ್ಮಕ ಮುಖಪುಟವಿರುವ ಸಂಕಲನಕ್ಕೆ ಸಾಹಿತಿ ಆತ್ರಾಡಿ ಅಮೃತಾ ಶೆಟ್ಟಿಯವರ ಮುನ್ನುಡಿ ಮತ್ತು ಉಪನ್ಯಾಸಕರೂ, ಸಾಹಿತಿಯೂ ಆಗಿರುವ ಬಾಲಕೃಷ್ಣ ಬೇರಿಕೆ ಇವರ ಬೆನ್ನುಡಿ ಇದೆ.

 "ಪೊಲದ್ಯೆ" ಎಂದರೆ ತುಳುನಾಡಿನಲ್ಲಿ ಬಾಣಂತಿಯರಿಗೆ ಮಾಡುವ ಜನಪದೀಯ ಔಷದೋಪಚಾರ. "ಒಂದು ಜೀವವನ್ನು ಹಡೆದು ಹುದುಗಿಕೊಂಡ ಚೈತನ್ಯವನ್ನು ಪುನರ್ಜೀವಿಸುವ ಮೂಲಕ ಹೆಣ್ಣಿಗೆ ಜೀವ ತುಂಬುವ ಔಷಧ" ಎಂದು ಹೇಳುವ ಕಾರಣಕ್ಕಾಗಿ ಜನಪದೀಯ ಔಷಧ, ಆಚರಣೆ ಮತ್ತು ನಂಬಿಕೆಗಳ ಕುರಿತಾದ ಈ ಕೃತಿಗೆ "ಪೊಲದ್ಯೆ" ಎಂದೇ ಹೆಸರು ಇರಿಸಿರುವುದಾಗಿ ಜನಪದ ಅಧ್ಯಯನಕಾರರಾದ ಸುಂದರ ಬಾರಡ್ಕರು ಕೃತಿಯ ಆರಂಭದ ತಮ್ಮ ಮಾತುಗಳಲ್ಲಿ ಹೇಳಿಕೊಂಡಿದ್ದಾರೆ. 

ಪೊಲದ್ಯೆ ಅಪರೂಪದ, ಆಕರ್ಷಕ, ಕುತೂಹಲದಾಯಕವಾದ ಶೀರ್ಷಿಕೆ. ಹೌದು, ಈ ಇಡೀ ಕೃತಿಯೇ ಕುತೂಹಲದಾಯಕವಾಗಿರುವಂತದ್ದು, ಆಸಕ್ತಿ ಮೂಡಿಸುವಂತದ್ದೂ ಆಗಿದೆ. ಆಧುನಿಕತೆಯ ಭರಾಟೆಯಲ್ಲಿ ಇಂದು ಜನ ಸಮುದಾಯ, ತುಳವರು ಸಹ ಮರೆತಿರುವ, ಮರೆಯುತ್ತಿರುವ ಹಲವಾರು ಉಪಯುಕ್ತ ಜನಪದೀಯ ಔಷದೋಪಚಾರಗಳ ಬಗ್ಗೆ ಈ ಅತ್ಯಮೂಲ್ಯ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.

ನಿರಂತರ ಜ್ವರಕ್ಕೆ "ಪೊಯ್ಯೆ ದೆಪ್ಪುನೆ", ವಿಪರೀತ ಆಸೆಗೆ " ಆಸೆ ದೆಪ್ಪುನೆ", ದೃಷ್ಟಿ ತೆಗೆಯುವುದು, ಭಯ ಹೋಗಲಾಡಿಸುವ "ಪೋಡಿಗೆ ದೆಪ್ಪುನೆ", " ಕಣ್ಣ ಸೂ ದೆಪ್ಪುನೆ", ಹಸುಗಳ ಗಂಟಲು ಬಾವು ರೋಗ ಶಮನಕ್ಕೆ, "ತಪ್ಪು ಪಾಡುನೆ", ವಾತಕ್ಕೆ " ಒಡಿ", ಅಜೀರ್ಣಕ್ಕೆ "ಕಟ್ರೆ ಪೊಳಿಪ್ಪುನೆ", ಹಸುಗಳಿಗಾಗುವ ಸೋಂಕುವಿಗೆ, ತರಕಾರಿ ಬಳ್ಳಿಗೆ ಬಯಕೆ ಕಟ್ಟುವುದು, ಫಲ ಬಿಡದ ಮರಗಳಿಗೆ, ಮಕ್ಕಳು ಹಾಸಿಗೆಯಲ್ಲಿ ಉಚ್ಚೆ ಹೊಯ್ಯುವುದು, ಬೇಲಿ ಹಾರುವ ಹಸುಗಳಿಗೆ, ಕೋಳಿ ಮರಿ ಆಘಾತಗೊಂಡರೆ, ಉಲ್ಕೆ ಬಿದ್ದಾಗ, ಹೇಂಟೆ ಕೂಗಿದಾಗ, ನಾಯಿಗೆ ಕಜ್ಜಿಯಾದರೆ, ಸಿಡುಬು ಖಾಯಿಲೆಗೆ " ಮಾರಿ ಬಳಸುನೆ", ಬಿಕ್ಕಳಿಕೆ, ಸಿಡಿಲಿಗೆ, ಹೆರಿಗೆ ಮನೆಯಲ್ಲಿ, ಬಾಣಂತಿಯರಿಗೆ "ಮರ್ದ್ ಮುಂಚಿ", ಮಕ್ಕಳ ಹಲ್ಲು ಉದುರಿದಾಗ, ತುರಿಕೆಯ ಅಲರ್ಜಿಗೆ, ವಿಪರೀತ ಹೊಟ್ಟೆನೋವಿಗೆ " ಕಂಡೆ ಪತ್ತುನೆ", ಮುಟ್ಟು ಮುಂದೂಡಲು, ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸಲು ಸುಟ್ಟಿಡುವುದು, ಮೂರ್ಛೆ ರೋಗಕ್ಕೆ, ಅಸ್ತಮಾ/ಉಬ್ಬಸಕ್ಕೆ ಈಡು ಕಟ್ಟುವುದು, ಮೂಲವ್ಯಾಧಿಗೆ "ಪೆರ್ಮಣಂಗ್", ಕಿರಣಿ (ಕ್ರಾಣಿ), ಮಕ್ಕಳ ಕೆಮ್ಮಿಗೆ,  ಊಟದ ಸಮಯದಲ್ಲಿ ಬರುವ ಸೀನು, ಕೋಳಿಗೆ ಕೇರೆ ಬಡಿದಾಗ, ತಲೆ ಕಜ್ಜಿಗೆ, ಮಕ್ಕಳ ಅಸೌಖ್ಯಕ್ಕೆ " ಕನ್ಯಾವು", ಮಕ್ಕಳ ಕಜ್ಜಿ, ಮಲ ವಿಸರ್ಜನೆಯಲ್ಲಿ ವ್ಯತ್ಯಯ, ಹೊಟ್ಟೆ ಹುಳ, ಕಾಗೆಗಳ ಕಾಟಕ್ಕೆ, ಕಾಲು ಮರಗಟ್ಟಿದರೆ, ದನದ ನಂಜು ಉದುರದಿದ್ದರೆ, ಜನನಾಂಗದ ಸಮಸ್ಯೆಗೆ, ಕಣ್ಣಿನ ಕುರು, ಹೆಂಗಸರಿಗೆ ದೃಷ್ಟಿಯಾದರೆ, ಮೊಲೆ ಹಾಲು ಕಡಿಮೆಯಾಗಲು, ನಿದ್ದೆಯಲ್ಲಿ ಬೆಚ್ಚಿ ಬೀಳುವುದಕ್ಕೆ, ಹುಚ್ಚು ನಾಯಿ ಕಚ್ಚಿದರೆ, ಮಕ್ಕಳ ಹಟಕ್ಕೆ, ಹೊಸ  ಚಪ್ಪಲಿ ಚುಚ್ಚುತ್ತಿದ್ದರೆ, ನಾಯಿ ಕೆಮ್ಮು, ಉಗುರು ಕೊಳೆತ, ಎದೆನೋವು, ಉಗುರುಸುತ್ತು, ಹೊಟ್ಟೆನೋವಿಗೆ "ಮಣ್ಣ ಕುರುಡಿ", " ಮಂಜಗ್ ಪಾರಾವುನೆ", ಗಂಟಲು ನೋವು, ತಲೆ ಸಿಡಿತ ಹೀಗೆ ಹತ್ತು ಹಲವು ವಿಧದ ಖಾಯಿಲೆ, ಸಮಸ್ಯೆಗಳಿಗೆ ಜನಪದೀಯ ಔಷಧಗಳ ವಿವರಗಳನ್ನು ಕೃತಿಯಲ್ಲಿ ಸುಂದರ ಬಾರಡ್ಕರು ಸಂಗ್ರಹಿಸಿ ಕೊಟ್ಟಿದ್ದಾರೆ. ಬಾರಡ್ಕರ ಈ ಕೆಲಸ ನಿಜಕ್ಕೂ ಸಾಧನೆಯೇ ಸರಿ.

ಸುಂದರ ಬಾರಡ್ಕರು ಇಲ್ಲಿ ಮಂಡಿಸಿದ ಕೆಲವು ಔಷದೋಪಚಾರಗಳಿಗೆ ಆಧಾರಗಳನ್ನೂ ನೀಡಿದ್ದಾರೆ. ಖಾಯಿಲೆಗಳು, ಇವುಗಳಿಗೆ ತುಳುವರು ಹಿಂದೆ ಮಾಡುತ್ತಿದ್ದ ಜನಪದೀಯ ಔಷಧಗಳು, ಮಾಡುವ ವಿಧಾನ ಎಲ್ಲವೂ ಇಲ್ಲಿದೆ. ಇಲ್ಲಿ ದಾಖಲಿಸಲಾದ ಹಲವು ಜನಪದೀಯ ಚಿಕಿತ್ಸೆಗಳು ಪರಿಣಾಮಕಾರಿಯೂ ಆಗಿರುವುದು ಈಗಾಗಲೇ ಹಲವರಿಗೆ ಅನುಭವವೇದ್ಯವಾಗಿದೆ. ಕೆಲವು ನಂಬಿಕೆಗಳು ಮೂಢನಂಬಿಕೆಗಳಾದರೂ, ಚಿಕಿತ್ಸೆಗಳನ್ನು ಸುಳ್ಳು ಎಂದು ಅಲ್ಲಗೆಳೆಯಲು ಸಾಧ್ಯವಿಲ್ಲ. ಕೆಲವು ನಂಬಿಕೆಗಳು ಮೂಢನಂಬಿಕೆಗಳು ಎಂಬ ಕಾರಣಕ್ಕೆ ಮಾನಸಿಕ ಮತ್ತು ದೈಹಿಕ ಖಾಯಿಲೆ ಮತ್ತು ಸಮಸ್ಯೆಗಳನ್ನಾಗಲೀ , ಇಂಥ ದೈಹಿಕ ಮತ್ತು ಮಾನಸಿಕ ಖಾಯಿಲೆಗಳಿಗೆ ನೀಡಲಾಗುವ ಜನಪದೀಯ ಚಿಕಿತ್ಸೆಗಳನ್ನು ನಿರ್ಲಕ್ಷಿಸಲು, ಕಡೆಗಣಿಸಲು, ಸಾರಾಸಗಟು ತಿರಸ್ಕರಿಸುವುದು ಮತ್ತು ನಗಣ್ಯವೆಂದು ನೋಡುವುದು ಸಮರ್ಥನೀಯವಲ್ಲ. ಕಾರಣ, ಅದೆಷ್ಟೋ ಕಾಲದಿಂದ ತುಳು ನಾಡಿನ ಜನರ ಅನೇಕ ಮಾನಸಿಕ ಮತ್ತು ದೈಹಿಕ ತೊಂದರೆಗಳು ಇದೇ ಜನಪದೀಯ ಚಿಕಿತ್ಸೆಗಳಿಂದ ಪರಿಹಾರವಾರವಾದುದಕ್ಕೆ  ಉದಾಹರಣೆಗಳು ಅದೆಷ್ಟೋ.

ಕೆಲವು ಖಾಯಿಲೆಗಳನ್ನು ಮತ್ತು ಚಿಕಿತ್ಸಾ ಕ್ರಮಗಳನ್ನು ಮೂಢನಂಬಿಕೆಯನ್ನು ಪಕ್ಕಕ್ಕಿಟ್ಟು ನೋಡುವ ಅಗತ್ಯವಿದೆ ಮತ್ತು ಕೆಲವೊಂದು ಮಾನಸಿಕ ಮತ್ತು ದೈಹಿಕ ಖಾಯಿಲೆಗಳಿಗೆ ಪರಿಣಾಮಕಾರಿಯೇ ಆಗಿರುವ ತುಳು ಜನಪದೀಯ ಚಿಕಿತ್ಸೆಗಳನ್ನು ಗಂಭೀರವಾಗಿಯೇ ಪರಿಗಣಿಸುವುದರಿಂದ ಯಾವುದೇ ತೊಂದರೆ ಇಲ್ಲ. ಈ ನಿಟ್ಟಿನಲ್ಲಿ ಇನ್ನಷ್ಟೂ ಅಧ್ಯಯನ ಮತ್ತು ಸಂಶೋಧನೆ ನಡೆಸುವ ಅಗತ್ಯವೂ ಇದೆ.

ಕೃತಿಯ ಪ್ರವೇಶಿಕೆಯಲ್ಲಿ ಲೇಖಕರಾದ ಸುಂದರ ಬಾರಡ್ಕ ಅವರು ಒಂದು ಮಾತನ್ನು ಸ್ಪಷ್ಟಪಡಿಸಿದ್ದಾರೆ. "ಇಂತಹ ನಂಬಿಕೆ, ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗಬೇಕೆನ್ನುವುದು ನನ್ನ ಆಶಯವಲ್ಲ. ನಂಬಿಕೆ, ವಿಶ್ವಾಸಗಳ ದಾಖಲೀಕರಣವೇ ಇದರ ಪ್ರಮುಖ ಉದ್ಧೇಶ". ಹೌದು , ಸುಂದರ ಬಾರಡ್ಕರು ಈ ನಿಟ್ಟಿನಲ್ಲಿ ಇನ್ನಷ್ಟು ಶ್ರಮವಹಿಸಿ ತುಳುದೇಶದ ಜನಪದೀಯ ಚಿಕಿತ್ಸಾ ಕ್ರಮಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನಾ ಕಾರ್ಯ ನಡೆಸಿ ದಾಖಲೀಕರಣ ಮಾಡುವುದನ್ನು ಮುಂದುವರಿಸಿದರೆ ತುಳುನಾಡಿನ ಆಚರಣೆ, ತುಳು ಜನರ ಜ್ಞಾನಸಾಗರದ ಅಗಾಧತೆಯನ್ನು ಅರಿಯುವಲ್ಲಿ ಮಹತ್ತರ ಕೊಡುಗೆಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ನಿಟ್ಟಿನಲ್ಲಿ ಉನ್ನತ ಮಟ್ಟದ ಅಧ್ಯಯನ ಕೈಗೊಳ್ಳುವ ಅಗತ್ಯವಿದ್ದು, ಈ ಕಾರ್ಯಕ್ಕೆ ಬಾರಡ್ಕರ ಪೊಲದ್ಯೆ ಒಂದು ಗಟ್ಟಿಯಾದ ಅಡಿಗಲ್ಲು ಆಗಿದೆ.

- *ಶ್ರೀರಾಮ ದಿವಾಣ*