ಪೊಲೀಸರ ಬಲಿಗೆ ಸಿಕ್ಕಿರುವ ಕುರಿ!

ಪೊಲೀಸರ ಬಲಿಗೆ ಸಿಕ್ಕಿರುವ ಕುರಿ!

ಬದುಕಿನಲ್ಲಿ ಎಂತೆಂಥಾ ವ್ಯಕ್ತಿಗಳು ಸಿಗುತ್ತಾರೆ !
 
ಹಿಂದೊಮ್ಮೆ ಹೆಗ್ಗೋಡಿಗೆ ಹೋಗಿದ್ದಾಗ ತಾನು ಮಾಜೀಕಳ್ಳನೆಂದು ಹೆಮ್ಮೆಯಿಂದ ಹೇಳಿಕೊಂಡವನೊಬ್ಬ ಎದುರಾದ. ಇವತ್ತು ಹಾಲೀಕಳ್ಳನೇ ಎದುರು ಸಿಕ್ಕಿಬಿಟ್ಟ! ನಮ್ಮ ವ್ಯಂಗ್ಯಚಿತ್ತಕಾರರು ಬಿಡಿಸುವ ಹಾಗೆ ಕಣ್ಣುಪಟ್ಟಿ , ದಪ್ಪಮೀಸೆ , ಅಜಾನು ವ್ಯಕ್ತಿತ್ವ , ಕೈಗೆ ಬೆಲ್ಟು..... ಏನೊಂದೂ ಇರಲಿಲ್ಲ ಅವನಿಗೆ. ಗುಂಡಿ ಹರಿದ ಅಂಗಿ , ಮಾಸಲು ಪಂಚೆ , ಸೌತೆಕಾಯಿಯಂಥ ಮುಖದಲ್ಲಿ ಇಲಿ ಎರೆದಂಥ ಗಡ್ಡ , ಪೋಲೀಸರ ಹೊಡೆತ ತಿಂದು ತಿಂದೂ ನಿತ್ರಾಣ ಗೊಂಡ ದೇಹ. ಆದರೂ ಸೋಲರಿಯದ ಪ್ರಾಣ . ಮಾತು ಚಟಪಟ , ಕೆಲಸ ಪಟಪಟ.
 
ಅವನ ಪರಿಚಯವಾದುದು ವಿಚಿತ್ರ ಸಂಧರ್ಭವೊಂದರಲ್ಲಿ . ನಾವು ಗೆಳೆಯರು ಬೆಳ್ತಂಗಡಿಯಲ್ಲೊಮ್ಮೆ ಬೀಗ ಒಡೆಯುವ ಮಾತಾಡುತ್ತಿದ್ದೆವು. ಪುಸುಪುಸು ಬೀಡಿ ಸೇದುತ್ತ ಮಾತು ಕೇಳುತ್ತ ನಿಂತಿದ್ದವನೊಬ್ಬ 'ನಾನಾದರೆ ಎಂಟು ಲಿವರ್ ವರೆಗಿನ ಬೀಗಗಳನ್ನು ಸುಲಭವಾಗಿ ಒಡೆಯಬಲ್ಲೆ ' ಎಂದ. ‘ ಈ ಕಲೆಯನ್ನು ಹೇಗೆ ಕಲಿತೆ ' ಎಂದರೆ ಆ ನರಪೇತಲ ತನ್ನ ಶೌರ್ಯಗಳ ಸರಮಾಲೆ ಬಿಚ್ಚುತ್ತಾ ಹೋದ !
 
 
“ಕಳ್ಳತನ ನನಗೆ ಗೊತ್ತೇ ಇರಲಿಲ್ಲ. ಲಾರಿ ಚಾಲಕನಾಗಿದ್ದು ಪ್ರಾಮಾಣಿಕವಾಗಿ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ಒಮ್ಮೆ ಹಾಸನ – ಮಂಗಳೂರು ರಸ್ತೆಯಲ್ಲಿ ಅರಣ್ಯ ಇಲಾಖೆಯವರು ಲಾರಿಯನ್ನು ತಡೆದರು. ತಪಾಸಣೆ ಮಾಡಿದಾಗ ಗಂಧ ಸಿಕ್ಕಿಬಿತ್ತು. ಯಾರು , ಯಾಕೆ ಗಂಧ ತುಂಬಿದ್ದರೋ ನನಗೆ ಗೊತ್ತಿಲ್ಲ. ಅಂತೂ ನಾನು ಸಿಕ್ಕಿಬಿದ್ದೆ ! ಆರು ವರ್ಷ ಕಾರಾಗೃಹ ಶಿಕ್ಷೆಯಾಯ್ತು. ನಾನು ಮಾಡದ ತಪ್ಪಿಗಾಗಿ ಜೈಲು ಸೇರಿದ್ದೆ. ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಕಳೆದ ಆ ದಿನಗಳು ಕರಾಳ . ಹೇಗೋ ಸಹಿಸಿಕೊಂಡೆ . ನನ್ನ ಒಳ್ಳೆಯ ನಡತೆಗಾಗಿ ಮೂರೂವರೆ ವರ್ಷಕ್ಕೇ ಸರ್ಕಾರ ಜೈಲಿಂದ ಬಿಡುಗಡೆ ಮಾಡಿತು. ನನಗೆ ಖುಷಿಯೋ ಖುಷಿ .
 
“ ಒಮ್ಮೆ ಜೈಲಿಗೆ ಹೋಗಿ ಬಂದವರಿಗೆ ಕದಿಯೋದು ಇನ್ನೂ ಸುಲಭವಾಗುತ್ತೆ ! ಈಗ ನಾನು ಹಠದಲ್ಲಿ ಕುದಿಯುತ್ತಿದ್ದೆ. ಆದರೆ ಬಡವರನ್ನು ಮುಟ್ಟುತ್ತಿರಲಿಲ್ಲ. ಶ್ರೀಮಂತರನ್ನು ಬಿಡುತ್ತಿರಲಿಲ್ಲ. ಎಲ್ಲಿಯೂ ಸಿಕ್ಕಿಬೀಳದ್ದರಿಂದ ಆರಾಮ ಜೀವನ ಸಾಗಿತ್ತು. ಹೆಂಡತಿ - ಮಕ್ಕಳೊಡನೆ ಸುಖವಾಗಿದ್ದೆ. ಹೀಗೊಂದು ದಿನ ಅಂಗಡಿಗೆ ಹೋಗಿದ್ದ ನಾದಿನಿಯನ್ನು ಪೋಲಿ ಹುಡುಗನೊಬ್ಬ ಎದೆ ಚಿವುಟಿ ಕೀಟಲೆಮಾಡಿದ್ದ. ಆಕೆ ಅಳುತ್ತಾ ಬಂದಾಗ ಸಿಟ್ಟು ಎಲ್ಲಿತ್ತೋ , ಮನೆಯಲ್ಲಿ ಮಚ್ಚಿತ್ತು ! ಹಿಡಿದವನೇ ದಡಬಡ ಅಂಗಡಿಗೆ ನಡೆದು , ಅವನ ಕೈಯನ್ನು ಕಚಕ್ಕನೆ ಕಡಿದೆ. ಹಾಗೂ ಯಾರಿಗೂ ಸಿಗದಂತೆ ಮುಂಬೈ ದಾರಿ ಹಿಡಿದೆ !”
 
ಎಷ್ಟೋ ವರ್ಷಗಳ ಬಳಿಕ ಗೇರುಕಟ್ಟೆಯ ರಾಮಣ್ಣ ಶೆಟ್ಟಿ ಮತ್ತೊಮ್ಮೆ ಪ್ರತ್ಯಕ್ಷವಾಗಿದ್ದು ಧರ್ಮಸ್ಥಳದಲ್ಲಿ - ಅದೂ ಪೊಲೀಸರ ಅತಿಥಿಯಾಗಿ! ಆ ಕಥೆಯನ್ನು ಅವರ ಮಾತುಗಳಲ್ಲಿ ಕೇಳಿ :
 
“ಮುಂಬೈನಿಂದ ಬಂದದ್ದು ಧರ್ಮಸ್ಥಳಕ್ಕೆ . ಅಲ್ಲಿ ಒಂದು ವರ್ಷ ಬಾಹುಬಲಿ ಗುಡ್ಡದ ಮೇಲೆ ಸಾಧುವಿನ ವೇಷ ಧರಿಸಿ ಕುಳಿತಿರುತ್ತಿದ್ದೆ. ಬೆಳಗಾದರೆ ಕಾವಿಧರಿಸಿ , ವಿಭೂತಿ ಬಳಿದುಕೊಂಡು , ಜಡೆಬಿಟ್ಟುಕೊಂಡು ರುದ್ರಾಕ್ಷಿಮಣಿ ಜಾರಿಸುತ್ತಾ ಕುಳಿತರೆ - ಜನ ಬಹಳ ಭಕ್ತಿ ತೋರಿಸುತ್ತಿದ್ದರು . ಆಗಾಗ "ಶಂಭೋ ಮಹಾದೇವ " ಎಂದು ಒದರಿ ಬಿಟ್ಟರೆ ಸಾಕು , ದಿನಾ ನೂರು ರೂಪಾಯಿಯವರೆಗೂ ಸಂಗ್ರಹವಾಗುತ್ತಿತ್ತು . ಸಂಜೆಯಾದರೆ ವೇಷ ಕಳಚಿ ಗಡಂಗಿಗೆ (ಸರಾಯಿ ಅಂಗಡಿ) ಓಡುತ್ತಿದ್ದೆ. ನನ್ನ ಜೀವನದ ಸುಖದ ಕಾಲ ಅದಾಗಿತ್ತು.
 
ಸಾಧು ವೇಷ ಧರಿಸಿ ಜನರಿಗೆ ಮೋಸಮಾಡುತ್ತಿದ್ದ ಆಪಾದನೆಯ ಮೇಲೆ ಪೊಲೀಸರು ರಾಮಣ್ಣ ಶೆಟ್ಟಿಯನ್ನು ಹಿಡಿದಾಗಿನಿಂದ ಪೊಲೀಸರಿಗೂ , ಅವನಿಗೂ ಒಳ್ಳೇ ನಂಟು. ಹಿಡಿಯುತ್ತಾರೆ , ಬಿಡುತ್ತಾರೆ ! ಬೆಳ್ತಂಗಡಿಯಲ್ಲಿ ಸಣ್ಣ – ಪುಟ್ಟ ಕಳ್ಳತನಗಳು ಎಲ್ಲೇ ನಡೆಯಲಿ , ರಾಮಣ್ಣ ಶೆಟ್ಟಿಗೆ ಬಂತು ಗ್ರಹಚಾರ ! ಪೊಲಿಸರಿಗೆ ಕಳ್ಳತನವೊಂದು ಕಿರಿಕಿರಿ . ಎಲ್ಲಾ ಕಡೆ ಛೀಮಾರಿ. ಬದಲಾಗಿ ಕಳ್ಳನನ್ನು ಹಿಡಿದಿದ್ದಾಗಿ ಹೇಳಿಕೊಂಡರೆ ಎಲ್ಲರಿಂದ ಶಹಭಾಸುಗಿರಿ. ಇದಕ್ಕೆ ಪೊಲೀಸರಿಗೆ 'ಬಲಿ'ಗೆ ಸಿಕ್ಕಿರುವ ಕುರಿ - ರಾಮಣ್ಣ ಶೆಟ್ಟಿ !
 
ಎಷ್ಟೋ ಸಾರಿ ಬೇರೆಯವರು ನನ್ನನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಲುತ್ತಾರೆ. ಒಮ್ಮೆ ಆಗಷ್ಟೇ ಜೈಲಿನಿಂದ ಬಿಡುಗಡೆಯಾಗಿತ್ತು. ಪೊಲೀಸನೊಬ್ಬ ಬಂದು ತೇಗದ ಮರ ಕಡಿಯಲು ಬರುವಂತೆ ಒತ್ತಾಯಿಸಿದ. ನಾನು ಹೋಗಲಿಲ್ಲ. ಮರುದಿನ ನನ್ನ ಮೇಲೆ ಗಂಧ ಕದ್ದ ಕೇಸುಹಾಕಿ ಒಳಗೆ ಕೂರಿಸಲಾಯಿತು.
 
“ನಾನು ಒಮ್ಮೆ ಮಾತ್ರ ಶಾಲೆಯೊಂದರಲ್ಲಿ ಕದ್ದಿದ್ದು ನಿಜ. . ಆದರೆ ಈಗ ಶಾಲೆಗಳಲ್ಲಿ ಎಲ್ಲೇ ಕಳುವಾಗಲೀ ಕೇಸು ನನ್ನ ಮೇಲೆ! ಒಮ್ಮೆಯಂತೂ ಒಂದು ತಿಂಗಳು ಜೈಲಿನಲ್ಲಿಟ್ಟು ನ್ಯಾಯಾಲಯಕ್ಕೆ ಹಾಜರುಪಡಿಸದೇ ಸತಾಯಿಸಿದರು. ಬೆಳಕೇ ಕಾಣದ ಚರ್ಮ ಬಿಳಿ ಬಿಳಿಯಾದಾಗ 'ಹಿಂದಿನ ರಾತ್ರಿ ಶಾಲೆಯಲ್ಲಿ ಕಳ್ಳತನ ಮಾಡುತ್ತಿದ್ದಾಗ ಹಿಡಿದೆವು" ಎಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು ! ನ್ಯಾಯಾಧೀಶರು ಬೈದು ಬಿಟ್ಟುಬಿಟ್ಟರು .
 
“ ಇವೆಲ್ಲ ಜೀವನದಲ್ಲಿ ಮಾಮೂಲಿಯಾಗಿದೆ. ಎಷ್ಟೋ ಸಾರಿ ಪೊಲೀಸರು ಬರುವುದನ್ನೇ ಕಾಯುತ್ತೇನೆ . ಬೇಜಾರಾದರೆ ಹೋಗಿ ಸ್ಟೇಷನ್ನಿನ ಮೂಲೆಯಲ್ಲಿ ಮಲಗಿಕೊಳ್ಳುತ್ತೇನೆ. ಪ್ರತಿಸಾರಿ ಪೊಲೀಸರು ಒಳತಳ್ಳಿದಾಗಲೂ ನ್ಯಾಯಾಲಯದಲ್ಲಿ ನಾನೇ ವಾದಮಾಡುತ್ತೇನೆ ಹಾಗೂ ಗೆಲ್ಲುತ್ತೇನೆ.
 
“ಜಗತ್ತಿನಲ್ಲಿ ಎಲ್ಲರೂ ಕಳ್ಳರೇ , ಆದರೆ ನಾನು ಮಾತ್ರ ಸಾಚಾ . ಯಾಕೆಂದರೆ ಕಳ್ಳತನ ಮಾಡದಿದ್ದರೂ ಪೊಲೀಸರಿಗಾಗಿ ಒಪ್ಪಿಕೊಳ್ಳುತ್ತೇನೆ...” ಎಂದಾತ ದಡಬಡ ನಡೆದು ಬಿಟ್ಟಿದ್ದು ಗೊತ್ತೇ ಆಗಲಿಲ್ಲ !
 
(ಲೇಖನ ಬರೆದ ವರ್ಷ 1993)
 
(ಚಿತ್ರಕೃಪೆ ಗೂಗಲ್)