ಪೊಲೀಸ್ ಇಲಾಖೆಗೆ ಎಚ್ಚರ -ಏನಿದರ ಸಂದೇಶ?

ಪೊಲೀಸ್ ಇಲಾಖೆಗೆ ಎಚ್ಚರ -ಏನಿದರ ಸಂದೇಶ?

ಪೊಲೀಸ್ ಅಥವಾ ಆರಕ್ಷಕ ಕೆಲಸವೆನ್ನುವುದು ಸಮಾಜದಲ್ಲಿ ಅತ್ಯಂತ ಜವಾಬ್ದಾರಿಯುತ ಸೇವೆ. ಯಾವುದೇ ನಾಡಿನಲ್ಲಿ ಶಾಂತಿ, ಸಾಮರಸ್ಯ, ಕಾನೂನು ಸುವ್ಯವಸ್ಥೆ ಅವಲಂಬಿತವಾಗುವುದು ಪೊಲೀಸ್ ಇಲಾಖೆಯ ದಕ್ಷತೆ ಆಧಾರದ ಮೇಲೆಯೇ. ಈ ಕಾರಣದಿಂದ, ಹೊಸ ಸರಕಾರಗಳು ಅಧಿಕಾರ ಚಲಾಯಿಸುವ ಆರಂಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆಯುವುದು ವಾಡಿಕೆಯಾಗಿ ನಡೆದು ಬಂದಿದೆ. ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಹಲವು ಖಡಕ್ ಸಂದೇಶಗಳನ್ನೂ ರವಾನಿಸಿರುವ ಹಿಂದೆ ಸಾಕಷ್ಟು ಸೂಕ್ಷ್ಮ ವಿಚಾರಗಳೂ ಅಡಗಿವೆ.

ಪೊಲೀಸ್ ವ್ಯವಸ್ಥೆ ಸದಾ ಕಾಲ ಗೆದ್ದೆತ್ತಿನ ಬಾಲ ಹಿಡಿದೇ ಸೇವೆ ಸಲ್ಲಿಸಬೇಕಾದ ಅನಿವಾರ್ಯತೆಗೂ ಗುರಿಯಾಗುತ್ತದೆ. ಸರಕಾರದ ಮಾತನ್ನು ಚಾಚೂತಪ್ಪದೇ ಪಾಲಿಸಬೇಕಾದ ಒತ್ತಡ ಆ ಇಲಾಖೆ ಮೇಲಿರುತ್ತದೆ. ಡಿಸಿಎಂ ಡಿ ಕೆ ಶಿವಕುಮಾರ್ ಅವರು “ನೀವು ಬದಲಾಗಿ, ಇಲ್ಲದಿದ್ದರೆ ನಿಮ್ಮನ್ನೇ ಬದಲಾಯಿಸಬೇಕಾಗುತ್ತದೆ.” ಎಂದು ಮುನ್ನೆಚ್ಚರಿಕೆ ಮುಟ್ಟಿಸಿರುವುದು, ಭವಿಷ್ಯದಲ್ಲಿ ಇಲಾಖೆಯೊಳಗಿನ ಹಲವು ಬದಲಾವಣೆಗಳಿಗೆ ಕಾರಣವಾದರೂ ಅಚ್ಚರಿಯಿಲ್ಲ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಪೊಲೀಸರ ಕೆಲವು ವರ್ತನೆಗಳನ್ನು ಗಮನಿಸಿ, ಇಲಾಖೆಯನ್ನು ಕೇಸರೀಕರಣಗೊಳಿಸಿರುವ ಆರೋಪವನ್ನೂ ಉಪಮುಖ್ಯಮಂತ್ರಿಗಳು ಮಾಡಿದ್ದಾರೆ. ಯಾವುದೇ ಒಂದು ಧರ್ಮದ ಪರವಾಗಿ ನಿಂತು, ಮತ್ತೊಂದು ಧರ್ಮವನ್ನು ಗುರಿ ಮಾಡುವ ಅಸಮತೋಲನದ ನಡವಳಿಕೆ ಪೊಲೀಸರಿಂದ ಎಂದಿಗೂ ವ್ಯಕ್ತವಾಗಬಾರದು ನಿಜ. ಆದರೆ, ಉತ್ಸಾಹ ಹಾಗೂ ಆವೇಶಭರಿತ ಸೂಚನೆಗಳು ಮುಂಬರುವ ದಿನಗಳಲ್ಲಿ ಆರಕ್ಷಕ ಇಲಾಖೆಯನ್ನು ಕಾಂಗ್ರೆಸ್ಸೀಕರಣ ಮಾಡಬಾರದೆನ್ನುವ ಎಚ್ಚರವೂ ಸರಕಾರಕ್ಕಿರಲಿ.

ಇದೇ ವೇಳೆ ನೈತಿಕ ಪೊಲೀಸ್ ಗಿರಿ, ಪ್ರಚೋದನಾಕಾರಿ ಹೇಳಿಕೆಗಳ ವಿರುದ್ಧ ಕ್ರಮ, ವಿಶೇಷವಾಗಿ ದ್ವೇಷಪೂರಿತ ಪೋಸ್ಟ್ ಗಳ ವಿರುದ್ಧ ಕಠಿಣ ಕ್ರಮಗಳೂ ಸಭೆಯಲ್ಲಿ ಪ್ರಧಾನವಾಗಿ ಗಟ್ಟಿಧ್ವನಿ ಹೊಮ್ಮಿಸಿದ್ದವು. ಸಾಮಾಜಿಕ ಜಾಲತಾಣಗಳ ಬೇರುಗಳು ಆಳವಾಗಿ ಬೇರೂರಿರುವ ಈ ಸಂದರ್ಭದಲ್ಲಿ ಇದು ನಿಜಕ್ಕೂ ಗಂಭೀರ ವಿಚಾರ. ಸಾಮರಸ್ಯ ಕದಡುವ, ಸುಳ್ಳುಸುದ್ದಿ ರವಾನಿಸಿ ಸಮಾಜದ ದಿಕ್ಕು ಬದಲಿಸಲೆತ್ನಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುವುದು ಯಾವುದೇ ಸರಕಾರಕ್ಕೂ ಆತಂಕಕಾರಿ ಸಂಗತಿಯೇ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಪೋಸ್ಟ್ ಗಳ ಮೂಲಕ ಕೇವಲ ಕಾಂಗ್ರೆಸ್ ಮುಖಂಡರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಅಭಿಪ್ರಾಯಕ್ಕೆ ಬರುವುದು ಅಷ್ಟೊಂದು ಸಮಂಜಸವೂ ಅಲ್ಲ, ಪ್ರಧಾನಿ ವಿರುದ್ಧವೂ ಅಗೌರವವಾಗಿ ಮಾತನಾಡುವ, ಅಪಮಾನಿಸುವ ಮನಸ್ಸುಗಳೂ ಜಾಲತಾಣಗಳಲ್ಲಿ ಸಿಗುತ್ತವೆ. ಕೆಲವು ಟ್ರೋಲ್ ಗಳು ಸ್ವತಃ ನಾಯಕರಿಗೆ ನೋಡಲಾಗದಷ್ಟು ಮುಜುಗರವನ್ನೂ ಹುಟ್ಟಿಸುತ್ತವೆ. ಇಂಥ ಟೀಕಾ ಮನಸ್ಸುಗಳ ನಿಯಂತ್ರಣ ಸರಕಾರಕ್ಕೆ ಸವಾಲಷ್ಟೇ ಅಲ್ಲ, ಭವಿಷ್ಯದ ಸಮಾಜಕ್ಕೆ ಬಹುದೊಡ್ಡ ಮಾರಕ ಕೂಡ. ಇವರಿಗೆ ಮೂಗುದಾರ ಹಾಕುವ ನೆಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಆರೋಪವನ್ನೂ ಮೈಮೇಲೆಳೆದುಕೊಳ್ಳದೆ, ನೂತನ ಸರಕಾರ ವಿವೇಕದಿಂದ ಹೆಜ್ಜೆ ಇಡಲಿ. 

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೪-೦೫-೨೦೨೩  

ಚಿತ್ರ ಕೃಪೆ: ಅಂತರ್ಜಾಲ ತಾಣ