ಪೊಳ್ಳು ಭರವಸೆಗಳ ಆಮಿಷ - ಕೂಡುರಸ್ತೆಯಲ್ಲಿ ಸಾಲಗಾರ !

ಪೊಳ್ಳು ಭರವಸೆಗಳ ಆಮಿಷ - ಕೂಡುರಸ್ತೆಯಲ್ಲಿ ಸಾಲಗಾರ !

ಕೃಷಿ ಎಂಬ ಪುರಾತನ ಕಸುಬು ನಿರಂತರ ಶ್ರಮವನ್ನು ಅಪೇಕ್ಷಿಸುವ ವೃತ್ತಿಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಕೈಗಾರಿಕೆಗೆ, ಸೇವಾ ಕ್ಷೇತ್ರಕ್ಕೆ ಅಥವಾ ವಾಣಿಜ್ಯ-ವ್ಯವಹಾರಕ್ಕೆ ಹೋಲಿಸಲಾಗದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಕೃಷಿಯಲ್ಲಿ ಕೂಡ ಸುಗಮತೆ ಕಾಣಬೇಕಾದರೆ ನಿರಂತರವಾಗಿ ಬದಲಾವಣೆಗಳನ್ನು, ತಾಂತ್ರಿಕತೆಯನ್ನು, ಆಧುನಿಕತೆಯನ್ನು ಅಳವಡಿಸುವ ಅವಶ್ಯಕತೆ ಇದ್ದೇ ಇರುತ್ತೆ. ಈ ಅಳವಡಿಕೆಗೆ ಹಣಕಾಸಿನ ಅವಶ್ಯಕತೆ ಅನಿವಾರ‍್ಯ. ಕೃಷಿಯಲ್ಲಿನ ಹಲವು ಕಾಯಕಗಳಿಗೆ ಸ್ವಂತ ಬಂಡವಾಳ ಸಾಲದೇ ಹೋಗಬಹುದಾದ ಕಾರಣಕ್ಕೆ ಎರವಲು ಪದ್ದತಿ ಜಾರಿಯಲ್ಲಿದ್ದು ಕೆಲವು ದಶಕಗಳಿಂದ ’ಸಾಲ’ ಎಂಬ ಕಿವಿಗಳಿಗೆ ಇಂಪು ನೀಡದ, ಅನಿವರ‍್ಯವಾದ ’ಪದ’ ಕೇಳಿ ಬರುತ್ತಿದೆ. “ಆಳಾಗಿ ದುಡಿ, ಅರಸನಾಗಿ ಬಾಳು” ಎಂಬ ಹಿರಿಯರ ನಾಣ್ಣುಡಿ ಪ್ರಸ್ತುತ ಸಂದರ್ಭದಲ್ಲಿ ವಿಮರ್ಶೆಗೆ ಒಳಪಡಿಸಬೇಕಿದೆ! ಇದೇ ಆಧುನಿಕತೆಯ ಪ್ರಭಾವ!

ನಮ್ಮ ಬಹುತೇಕ ಪೂರ್ವಜರು ಮೂಲವಾಗಿ ಕೃಷಿಯಲ್ಲಿ ’ಆದಾಯಕ್ಕಿತ ಆನಂದ’ಕ್ಕೆ ಮಹತ್ವ ಎಂಬ ವಿವೇಚನೆಯಿಂದ ತೊಡಗಿಸಿಕೊಂಡಿದ್ದರಾದರೂ ಇಂದಿನ ಯುವ ಪೀಳಿಗೆ ಈ ತತ್ವ ಒಪ್ಪುವವರಲ್ಲ, ಒಪ್ಪಲು ಸಾಧ್ಯವೂ ಇಲ್ಲ. ಕಾರಣ ಕೃಷಿಯೂ ಒಂದು ವ್ಯವಹಾರವಾಗಿದೆ. ಉತ್ಪಾದಕತೆಗೆ, ಸ್ಥಿರ ಲಾಭಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲೇಬೇಕಿದೆ. ಈ ಬದಲಾವಣೆ,ಆಲೋಚನೆ ಖಂಡಿತ ಸ್ವಾಗತರ್ಹವೇ. ಇಂದು ತಂತ್ರಜ್ಞಾನದ ಬದಲಾವಣೆಗಳಿಂದ, ಕೃಷಿಯಲ್ಲಿ ಕೂಡ ಕೆಲವು ದೇಶೀಯ ಪದ್ದತಿಗಳು ಮಾಯವಾಗಿ ಆಧುನಿಕತೆಯತ್ತ ಮುಖ ಮಾಡುವುದು ಸ್ವಾಭಾವಿಕವೇ. ಈ ಅನಿವಾರ್ಯತೆಯನ್ನು ಅರಿತ ಹಣಕಾಸು ಸಂಸ್ಥೆಗಳು ರೈತಾಪಿ ವರ್ಗದ ಅಮಾಯಕತೆಯನ್ನು, ಅಸಹಾಯಕತೆಯನ್ನು ಸಮಯೋಚಿತವಾಗಿ ಬಳಸುವಲ್ಲಿ (ಶೋಷಣೆಯೆಂದು ಹೇಳಲಾಗದಿದ್ದರೂ) ಯಶಸ್ವಿಯಾಗಿದ್ದು ಸಾಲ ಸೌಲಭ್ಯದ ವಿವಿಧ ಯೋಜನೆಗಳ ಬಗ್ಗೆ ಆಮಿಷಗಳ, ಅತ್ಯಂತ ಆಕರ್ಷಕ ರೂಪದಲ್ಲಿ ಸವಲತ್ತುಗಳನ್ನು ನೀಡುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿಯಲ್ಲ. ’ಬಡ್ದಿಗಾಗಿ  ಸಾಲ’ ನೀಡುವುದು ಸಂಸ್ಥೆಗಳಿಗೆ ಕೇವಲ ವ್ಯವಹಾರ ಮಾತ್ರ. ಒಕ್ಕಲುತನಕ್ಕೆ ಸಲ್ಲಿಸುವ ಸೇವೆ ಅಲ್ಲ! 

ಪಡೆದ ಸಾಲವನ್ನು ನಿಗದಿತ ಉದ್ದೇಶಕ್ಕೆ ಮೀಸಲಿಟ್ಟು ಕಟ್ಟುನಿಟ್ಟಾಗಿ ಬಳಸಿದರೆ ಹೆಚ್ಚಿನ ಸಮಸ್ಯೆಗಳ ಉಲ್ಬಣಕ್ಕೆ ನಾಂದಿಯಾಗುತ್ತಿರಲಿಲ್ಲವೆಂಬುದು ಸಹಜವಾದ ಚಿಂತನೆ. ಆದರೆ, ರೈತಾಪಿ ಮಂದಿಯ ಬೇಕು-ಬೇಡಗಳು, ಅಸೆ-ಆಕಾಂಕ್ಷೆಗಳನ್ನು, ಕೌಟುಂಬಿಕ ಖರ್ಚು - ವೆಚ್ಚಗಳಿಗೆ ಹಣದ ಅವಶ್ಯಕತೆ ಪೂರೈಸಲು ಸಾಧ್ಯವಾಗುವುದು ವೃತ್ತಿಯಲ್ಲಿ ಅಪಾರ ಲಾಭ ಗಳಿಸಿದಾಗ ಇಲ್ಲವೆ ಪಡೆದ ಸಾಲದ ಹಣದಲ್ಲಿನ ಕೊಂಚ ಮಟ್ಟಿಗಿನ ವಿಪಥನದಿಂದ ಮಾತ್ರ. ಆದರೆ, ಬರುಬರುತ್ತ ಸಾಲದ ಸದ್ಬಳಕೆಯಲ್ಲಿ ಸಾಕಷ್ಟು ಏರು-ಪೇರುಗಳಾಗತೊಡಗಿರುವ ಬಗ್ಗೆ ಆಲೋಚಿಸದೇ ಇರುವುದು ಸಮಸ್ಯೆಗೆ ಗಂಭೀರ ಕಾರಣವಾಗಿದೆ. ಸಾಲ ನೀಡುವ ಹಣಕಾಸು ಸಂಸ್ಥೆಗಳೂ ಸಹ ಒಮ್ಮೆ ಸಾಲ ನೀಡಿದರೆ ಮತ್ತೆ ಸಾಲಗಾರನನ್ನು ಭೇಟಿಯಾಗುವುದು ಮರುಪಾವತಿಯ ದಿನಾಂಕ ಹತ್ತಿರ ಬಂದಾಗಲೇ ಅಥವಾ ಸಾಲದ ಕಂತು ಮರುಪಾವತಿಯಾಗದೇ ಹೋದ ಸಮಯದಲ್ಲಿ! ಪಡೆದ ಸಾಲದ ಮೊತ್ತವನ್ನು ಸಂಬಂಧರಹಿತ ಕಾರಣಗಳಿಗೆ ಬಳಕೆ ಮಾಡಿದ ಪರಿಣಾಮ, ನಿಗದಿತ ಲಾಭದಾಯಕತ್ವ ಇರದ ಕೃಷಿಯಲ್ಲಿ, ಬಹುಬೇಗನೆ ಮುಗ್ಗಟ್ಟು ಎದುರಿಸುವುದು ಅತೀ ಸುಲಭ. ಇನ್ನು ಖಾಸಗಿ ವಲಯದಿಂದ ಪಡೆದ ಸಾಲ (ಮೀಟರ್ ಸಾಲ) ಶೂಲಕ್ಕಿಂತಲೂ ಮೊನಚಾಗಿರುವ ಬಗ್ಗೆ ಹೆಚ್ಚಿನ ವಿಶ್ಲೇಷಣೆ ಅಗತ್ಯವಿಲ್ಲ. 

ಮಿಕ್ಕೆಲ್ಲ ಕಸುಬುಗಳಲ್ಲಿ, ಕೈಗಾರಿಕೆ, ಸೇವಾ ವಲಯ, ವಾಣಿಜ್ಯ-ವ್ಯವಹಾರ, ಆಮದು-ರಪ್ಥು ಇತ್ಯಾದಿಗಳಲ್ಲಿ... ಪದಾರ್ಥದ ’ಉತ್ಪತ್ತಿ’ಗೂ ಮುಂಚಿತವಾಗಿ ’ಉತ್ಪನ್ನ’ದ ಬೆಲೆ ನಿಗದಿಯಾಗಿರುತ್ತೆ. ಉತ್ಪಾದನಾ (ಮಾರಾಟ) ವೆಚ್ಚಕ್ಕೆ ಈ ನಿಗದಿಯಾದ ಬೆಲೆಯೇ ನೆಲೆಗಟ್ಟಾಗಿರುತ್ತೆ; ಆದರೆ, ಕೃಷಿಯಲ್ಲಿ ಮಾತ್ರ ರೈತ ತಾನು ಶ್ರಮಿಸಿ ಉತ್ಪಾದಿಸಿದ ಬೆಳೆಗೆ ಬೆಲೆ ನಿಗದಿಯಾಗುವುದು ಮೂರನೆಯವರಿಂದ... ಬೆಳೆಗಾರನಿಗೆ ತನ್ನದೇ ಪದಾರ್ಥದ ಬೆಲೆ ನಿಗದಿಯಲ್ಲಿ ಕೊಂಚವೂ ಹಿಡಿತವಿರದು. ಇವೆಲ್ಲ ವಿಲಕ್ಷಣ ಸನ್ನಿವೇಶಗಳ ನಡುವೆ ಪಡೆದ ಸಾಲಕ್ಕೆ ವಿಧಿಸುವ ಬಡ್ಡಿಯಲ್ಲಿ, ಮರುಪಾವತಿಯಲ್ಲಿನ ಸಮಯಕ್ಕೆ ಕಟ್ಟುಪಾಡುಗಳು ಮಾತ್ರ ಕಾನೂನುಬದ್ಧವಾಗಿರುವುದು ಗಮನಾರ್ಹ, ಒಂದು ರೀತಿಯಲ್ಲಿ ವಿಚಿತ್ರವೆಂದೇ ಹೇಳಬಹುದು.

ಒಂದು ವೇಳೆ, ಕೃಷಿಕ ತನ್ನ ಪೂರ್ವನಿಯೋಜಿತ ಕೃಷಿ ಚಟುವಟಿಕೆಗೆ ಪಡೆದ ಸಾಲವನ್ನೇನಾದರೂ ಅನ್ಯ, ಕೃಷಿಯೇತರ ಕಾರಣಕ್ಕೆ ಬಳಸಿದ್ದೇ ಆದರೆ ಅದರ ಅಡ್ದ ಪರಿಣಾಮ ಮಾತ್ರ ಘೋರವಾಗಿರುವುದರಲ್ಲಿ ಸಂದೇಹವೇ ಇರದು. ಇಂತಹ ಸಂದರ್ಭಕ್ಕೆ ಪೂರಕವೆನ್ನುವಂತೆ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರದಿಂದ ಮತಗಳಿಗೆ ಪ್ರತಿಫಲವಾಗಿ ಸಾಲ ಮನ್ನಾ ಎಂಬ ಆಮಿಷವನ್ನು ಒಡ್ಡುವುದರಿಂದ ಗ್ರಾಮೀಣ ರೈತರು ಪಡೆದ ಸಾಲದ ಹೊರೆಯನ್ನು ಹಾಗು ಮರುಪಾವತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆಗಳು ಕಡಿಮೆಯಾಗುತ್ತಿವೆ ಇತ್ತೀಚಿನ ದಿನಗಳಲ್ಲಿ ಆಡಳಿತದಲ್ಲಿರುವ ಹಾಗು ವಿರೋಧ ಪಕ್ಷದ ರಾಜಕೀಯ ಪಕ್ಷಗಳಿಗೆ ಚುನಾವಣಾ ಪ್ರಣಾಳಿಕೆಯಲ್ಲಿ ಕೆಂಪು ಅಕ್ಷರಗಳಲ್ಲಿ ಕಾಣುವಂತೆ ಮುದ್ರಿಸುವ ಮೂಲ ಸವಲತ್ತು, ಭರವಸೆ ಗ್ರಾಮೀಣ ಅಭಿವೃದ್ಧಿಗಿಂತ, ಸವಲತ್ತುಗಳಿಗಿಂತ ’ಸಾಲ ಮನ್ನಾ’ ಇಲ್ಲವೆ ಕನಿಷ್ಟ ಪಕ್ಷ ’ಬಡ್ಡಿ ಮನ್ನಾ’. ಒಂದಲ್ಲ ಒಂದು ದಿನ ಆಡಳಿತದ ಚುಕ್ಕಾಣಿ ಹಿಡಿಯಲಿರುವ, ರಾಜ್ಯಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಜವಾಬ್ದಾರಿ ಹೊಂದಿರುವ ರಾಜಕೀಯ ಪಕ್ಷಗಳೇ ಈ ರೀತಿಯಲ್ಲಿ ಗ್ರಾಮೀಣ ಭಾಗದವರನ್ನು ದಾರಿ ತಪ್ಪಿಸುವಲ್ಲಿ ನಿರತರಾದರೆ ಅಶಿಕ್ಷಿತರಾದ “ಮಣ್ಣಿನ ಮಕ್ಕಳು”“ದಾರಿ ತಪ್ಪಿದ ಮಕ್ಕಳಾ”ಗುವುದರಲ್ಲಿ ತಪ್ಪೇನಿದೆ? ಪಡೆದ ಸಾಲವನ್ನು ಮರುಪಾವತಿಸುವ ಜವಾಬ್ದಾರಿ ನಿಗದಿಪಡಿಸದ ಮೇಲೆ, ಈ ನಿಟ್ಟಿನಲ್ಲಿ ಸೂಕ್ತ ಮರ‍್ಗರ‍್ಶನ ನೀಡದ ಮೇಲೆ, ಸಾಲದ ಹಣವನ್ನು ಕೃಷಿಯೇತರ ಕಾರಣಕ್ಕೆ ಬಳಸಿದರೆ ತಪ್ಪೇನಿದೆ? ಈ ರೀತಿಯ ಮನೋಭಾವನೆಯನ್ನು, ಆಮಿಷಗಳ ಹಿನ್ನೆಲೆಯಲ್ಲಿ, ರೂಢಿಸಿಕೊಂಡ ಸಾಲಗಾರ ಖಾಸಗಿ ವಲಯದಿಂದ, ಬಡ್ಡಿಯ ದರವನ್ನು ಲೆಕ್ಕಿಸದೇ, ಪಡೆದ ಸಾಲಕ್ಕೆ ಬಡ್ಡಿಯನ್ನೂ ಸಹ ತೀರಿಸಲಾಗದ ಹಂತ ತಲುಪಿದಾಗ, ಒತ್ತಡಗಳು ಹೆಚ್ಚಾಗುವುದು ಅನಿವಾರ್ಯ. ಆಗ ಸ್ವಾಭಿಮಾನಿ ಅಮಾಯಕ ರೈತಾಪಿ ಮಂದಿಗೆ ಉಳಿಯುವುದೊಂದೆ ನತದೃಷ್ಟದ ನಿರ್ಧಾರ “ಆತ್ಮಹತ್ಯೆ”

ಪ್ರಸ್ತುತ ಪರಿಸ್ಥಿತಿಯಲ್ಲಿ, ರಾಜಕೀಯ ಪಕ್ಷಗಳು (ಯೋಜನೆಗಳನ್ನು, ಕಾನೂನನ್ನು ರೂಪಿಸುವವರು) ಶ್ರಮವಹಿಸಿ ದುಡಿಯುವ ಕೃಷಿಕರಿಗೆ ಇಲ್ಲ-ಸಲ್ಲದ, ಈಡೇರಿಸಲು ಸಾಧ್ಯವಾಗದ ಭರವಸೆಗಳನ್ನು ನೀಡಿ ಅಡ್ಡ ದಾರಿಹಿಡಿಯುವುದನ್ನು ತಪ್ಪಿಸಿ, ಬದಲಿಗೆ ವೈಜ್ಞಾನಿಕವಾದ, ಹವಾಮಾನಕ್ಕೆ ಅನುಗುಣವಾದ, ಮಾರಾಟಕ್ಕೆ ಯೋಗ್ಯವಾದ ಬೆಳೆ ಆಯ್ಕೆಯ ಬಗ್ಗೆ ಮಾಹಿತಿ ನೀಡಿದರೆ, ಬೆಳೆದ ಫಸಲಿಗೆ ಪ್ರಾಯೋಗಿಕವಾಗಿ ಕನಿಷ್ಟ ಬೆಂಬಲ ಬೆಲೆ ಮುಂಗಡವಾಗಿ ಘೋಷಣೆ ಮಾಡಿದರೆ, ನೀಡಿದ ಸಾಲದ ಸದ್ಬಳಕೆಯ ಬಗ್ಗೆ ಹಣಕಾಸು ಸಂಸ್ಥೆಗಳು ತಿಳುವಳಿಕೆ ನೀಡುವಲ್ಲಿ ಜಾಗರೂಕರಾದರೆ, ಬೆಳೆಗೆ, ಹಿಡುವಳಿಗೆ ತಕ್ಕನಾದ ಪ್ರಮಾಣದಲ್ಲಿ ಧೃಡೀಕರಿಸಿದ, ಪ್ರಮಾಣೀಕರಿಸಿದ ಕೃಷಿ ಪರಿಕರಗಳನ್ನು ಕಾಲೋಚಿತವಾಗಿ ವಿತರಿಸಿದರೆ, ನುರಿತ, ಅನುಭವೀ ತಜ್ಞರು, ತಮ್ಮ ಕಚೇರಿಯಿ೦ದ ಹೊರನಡೆದು, ಕೃಷಿಕರ ಜಮೀನಿಗೆ ಖುದ್ದಾಗಿ ಭೆಟಿ ನೀಡಿ ಸೂಕ್ತ ಭೌಗೋಳಿಕ ಆಧಾರದ ಅನ್ವಯ ತಾಂತ್ರಿಕ ಮಾರ್ಗದರ್ಶನ ನೀಡಿದರೆ, ಫಸಲು ಕೈಗೆ ಬಂದ ಕೂಡಲೇ, ವಿಳಂಬ ಮಾಡದೇ, ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ ಶಾಶ್ವತ ಖರೀದಿ ಕೇಂದ್ರಗಳ ಮುಖೇನ ನೇರವಾಗಿ ರೈತಾಪಿ ಮಂದಿಯಿಂದ ಫಸಲನ್ನು ಖರೀದಿಸಿ ಸಾಲ ಪಡೆದ ಹಣಕಾಸು ಸಂಸ್ಥೆಯ ಮುಖಾಂತರವೇ ಸಂಪೂರ್ಣ ಹಣ ಸಂದಾಯ ಮಾಡಿದರೆ (ನೀಡಿದ ಸಾಲದ ಚುಕ್ತಾ ಮಾಡಿ) ಯಾವೊಬ್ಬ ರೈತನೂ ಸಾಲ ಮನ್ನಾ ಇಲ್ಲವೆ ಬಡ್ದಿ ಮನ್ನಾ ಕೇಳಿ ರಾಜಕೀಯ ಪಕ್ಷಗಳ ಬಳಿ ಇಲ್ಲವೆ ಯಾರ್ಯಾರ ಬಳಿ ಭಿಕ್ಷೆ ಬೇಡುವ,  ಕೈ ಒಡ್ಡುವಲ್ಲಿ ಮನಸ್ಸು ಖಂಡಿತ ಮಾಡುವುದಿಲ್ಲ. ಕಾರಣ ರೈತನಿಗಿರುವ ಸ್ವಾಭಿಮಾನ. ರೈತ ತೀರಿಸಬೇಕಿರುವುದು ಭೂಮಿ ತಾಯಿಯ ಋಣವೊಂದೇ...ಹೊರತು ರಾಜಕೀಯ ಮುಖಂಡರ, ರಾಜಕೀಯ ಪಕ್ಷಗಳ ಹುಸಿ ಭರವಸೆಗಳ ಋಣವನ್ನಲ್ಲ!

-ರಾಜೀವ್. ಎನ್. ಮಾಗಲ್, ಸಕಲೇಶಪುರ

ಚಿತ್ರ ಕೃಪೆ: ಇಂಟರ್ನೆಟ್ ತಾಣ