ಪೋಲಿಯೋ ಪೀಡಿತ ದಂಪತಿಯ ಮಾದರಿ ಕೃಷಿ
ಎರಡೂ ಕೈಕಾಲು ಸರಿ ಇದ್ದವರೇ ಕೃಷಿ ಮಾಡಲು ಹಿಂದೇಟು ಹಾಕುವ ಕಾಲವಿದು. ಹಾಗಿರುವಾಗ ಪೋಲಿಯೋ ಪೀಡಿತ ಪತಿ-ಪತ್ನಿ ಶಿವಾಜಿ ಸೂರ್ಯವಂಶಿ ಮತ್ತು ಗೀತಾಂಜಲಿ ಇತರರಿಗೆ ಮಾದರಿಯಾಗುವಂತೆ ಕೃಷಿ ಮಾಡಿತ್ತಿರೋದು ಸಾಧನೆಯೇ ಸೈ.
“ನನ್ನ ಕೈಗಳೇ ನನ್ನ ಕಾಲುಗಳ ಹಾಗೆ ಆಗಿವೆ” ಎನ್ನುತ್ತಾರೆ ೩೬ ವರುಷದ ಶಿವಾಜಿ ಸೂರ್ಯವಂಶಿ. ಅವರ ಪತ್ನಿ ಗೀತಾಂಜಲಿ “ಬೇಸಾಯ ಮಾಡೋದಕ್ಕೆ ನಮಗೆ ಯಾರ ಸಹಾಯವೂ ಬೇಡ” ಎಂದು ದನಿಗೂಡಿಸುತ್ತಾರೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಹಟ್-ಕನಾನ್-ಗ್ಲೆ ತಾಲೂಕಿನ ಅಂಬಾಪ್ ಹಳ್ಳಿಯವರಿಗೆ ಈ ದಂಪತಿಗಳದ್ದು ಸ್ಫೂರ್ತಿದಾಯಕ ಸಾಧನೆ. ಆದರೆ ತಮ್ಮ ಹೊಲದತ್ತ ನಡೆಯುವಾಗೆಲ್ಲ ದಂಪತಿಗೆ ನೆನಪಾಗುವುದು ಹಳ್ಳಿಗರ ಲೇವಡಿ ಮತ್ತು ಅದರಿಂದಾಗಿ ಶಿಕ್ಷಣ ಪಡೆಯುವ ತಮ್ಮ ಕನಸು ಮಣ್ಣುಗೂಡಿದ ಸಂಗತಿ.
ಶಿವಾಜಿ ಮತ್ತು ಗೀತಾಂಜಲಿ ಬಾಲ್ಯದಲ್ಲಿಯೇ ಪೋಲಿಯೋ ಪೀಡೆಗೊಳಗಾದವರು. ಅವರ ವಿಕಲಾಂಗತೆಯನ್ನು ಹಳ್ಳಿಯವರು ಗೇಲಿ ಮಾಡಿದ್ದೇ ಮಾಡಿದ್ದು. “ನನ್ನ ಕ್ಲಾಸಿನಲ್ಲಿ ಇದ್ದವರೆಲ್ಲ ನನ್ನನ್ನು ಪಾಂಗ್ಲಾ (ಹೆಳವ) ಅಂತಲೇ ಕರೀತಾ ಇದ್ದರು. ಕೊನೆಗೆ ನಾನು ಶಾಲೆ ಬಿಡುವ ನಿರ್ಧಾರ ಮಾಡಿದೆ” ಎನ್ನುತ್ತಾರೆ ಶಿವಾಜಿ. ಗೀತಾಂಜಲಿಗೂ ಅದೇ ಅನುಭವ; ಏಳನೆಯ ಕ್ಲಾಸಿನ ವರೆಗೆ ಆ ಅವಮಾನವನ್ನೆಲ್ಲ ಸಹಿಸಿಕೊಂಡ ಆಕೆಯೂ ಅನಂತರ ಶಾಲೆ ಬಿಡಲು ನಿರ್ಧರಿಸಿದಳು.
ಕೃಷಿ ಮಾಡಿ ಸಾಮಾಜಿಕ ಅವಮಾನ ಎದುರಿಸಿದ ದಂಪತಿ: ಎರಡು ದಶಕಗಳ ನಂತರ, ಈ ದಂಪತಿ ಸಾಮಾಜಿಕ ಅವಮಾನವನ್ನು ಎದುರಿಸಲು ತಯಾರಾದರು – ಕೃಷಿಯನ್ನು ಕೈಗೆತ್ತಿಕೊಳ್ಳುವ ಮೂಲಕ. “ನನಗೆ ಬೇಸಾಯ ಮಾಡೋದೆಂದರೆ ಬಹಳ ಖುಷಿ. ಆದರೆ ಪೋಲಿಯೋದಿಂದಾಗಿ ನನ್ನ ತಂದೆ ನನ್ನನ್ನು ಹೊಲಕ್ಕೆ ಇಳಿಯಲು ಬಿಡುತ್ತಿರಲಿಲ್ಲ. ನಾನು ಶಾಲೆಗೆ ಹೋಗಿ ಕಲಿಯಬೇಕೆಂಬುದು ಅವರ ಇಚ್ಛೆಯಾಗಿತ್ತು” ಎಂದು ನೆನಪು ಮಾಡಿಕೊಳ್ಳುತ್ತಾರೆ ಶಿವಾಜಿ. ತನ್ನ ತಂದೆ ಬಲಾಸೋ ಕೃಷಿಕೆಲಸಗಳನ್ನು ಮಾಡೋದನ್ನು ಪ್ರತಿದಿನವೂ ಆಸಕ್ತಿಯಿಂದ ನೋಡುತ್ತಿದ್ದರು ಶಿವಾಜಿ.
ತಂದೆ ಬಲಾಸೋ ಹೃದಯಸ್ತಂಭನದಿಂದಾಗಿ ತೀರಿಕೊಂಡಾಗ, ಬೇಸಾಯದ ಜವಾಬ್ದಾರಿ ಶಿವಾಜಿಯ ಹೆಗಲೇರಿತು. ಪತಿಪತ್ನಿಯರು ತಮ್ಮ ಕುಟುಂಬದ ಬೇಸಾಯ ಮುಂದುವರಿಸಿದರು. “ಆದರೆ ಮೊದಲ ವರುಷವೇ ೧೦೦ ಟನ್ನಿನಷ್ಟು ಕಬ್ಬು ಹಾಳಾಗಿ ಭಾರಿ ನಷ್ಟವಾಯಿತು” ಎಂದು ತಿಳಿಸುತ್ತಾರೆ ಶಿವಾಜಿ.
ಈ ತಪ್ಪಿನಿಂದ ಶಿವಾಜಿ ಮತ್ತು ಗೀತಾಂಜಲಿ ಬಹಳಷ್ಟು ಪಾಠ ಕಲಿತರು. ಮುಂದಿನ ವರುಷ ಬರಗಾಲ. ಕಬ್ಬಿನ ಬೆಳೆ ಉಳಿಸಿಕೊಳ್ಳುವುದು ಹೇಗೆಂದು ಅವರು ಬಹಳ ಯೋಚಿಸಿದರು. ಕೊನೆಗೆ, ಹೊಲದಲ್ಲಿ ಪರ್ಯಾಯ ಸಾಲುಗಳಿಗೆ ಮಾತ್ರ ನೀರು ಹಾಯಿಸಿದರು. ಇದರಿಂದಾಗಿ ನೀರಿನಲ್ಲಿ ಶೇಕಡಾ ೫೦ ಉಳಿತಾಯ ಮತ್ತು ಕಬ್ಬಿನ ಬೆಳೆಯ ರಕ್ಷಣೆ. ಈ ಆವಿಷ್ಕಾರದಿಂದಾಗಿ ಅವರ ಹೊಲದ ಇಳುವರಿ ಕಡಿಮೆಯಾಗಲಿಲ್ಲ. ಕಬ್ಬಿನ ಬೆಳವಣಿಗೆ ಕಡಿಮೆಯಾದೀತು ಎಂಬ ಭಯದಿಂದ ರೈತರು ಈ ವಿಧಾನ ಅನುಸರಿಸಲು ಹೆದರುತ್ತಾರೆ ಎಂಬುದು ಶಿವಾಜಿ ಅವರ ಅಭಿಪ್ರಾಯ. ಕಳೆದ ಎರಡು ದಶಕಗಳಿಂದ ಈ ವಿಧಾನ ಅನುಸರಿಸುತ್ತಿರುವ ಶಿವಾಜಿ ಕಡು ಬರಗಾಲದಲ್ಲಿಯೂ ಸಾಧಾರಣ ಪರಿಮಾಣದ ಕಬ್ಬಿನ ಇಳುವರಿ ಪಡೆದಿದ್ದಾರೆ.
ಕಬ್ಬಿನ ಉತ್ತಮ ಇಳುವರಿ ಪಡೆಯಬೇಕಾದರೆ, ಹೊಲದಲ್ಲಿ ಬೆಳೆಯುವ ಕಳೆಗಳನ್ನು ಎರಡು ಸಲ ತೆಗೆಯುವುದೂ ಅಗತ್ಯ ಎನ್ನುತ್ತಾರೆ ಶಿವಾಜಿ. ಕೆಲಸಗಾರರಿಗೆ ಮಜೂರಿ ಕೊಟ್ಟು ಪೂರೈಸುವುದಿಲ್ಲ ಎಂಬ ಕಾರಣದಿಂದ ಇತರ ರೈತರು ಹೀಗೆ ಮಾಡೋದಿಲ್ಲ ಎಂದು ತಿಳಿಸುತ್ತಾರೆ. “ನಾವೇ ಸ್ವತಃ ಕೆಲಸ ಮಾಡಿದರೆ ಮಾತ್ರ ಎರಡು ಸಲ ಕಳೆ ತೆಗೆಯಲು ಸಾಧ್ಯ” ಎಂಬುದವರ ಕಿವಿಮಾತು.
ಶಿವಾಜಿ ಯಾವುದೇ ಕೋಲು ಆಧರಿಸಿ ನಡೆಯೋದಿಲ್ಲ, ಬದಲಾಗಿ ತನ್ನ ಕೈಗಳನ್ನು ನೆಲಕ್ಕೆ ಊರಿ ದೇಹ ಮೇಲೆತ್ತಿ ನಡೆಯುತ್ತಾರೆ. ಹದಿನಾರನೇ ವಯಸ್ಸಿನಲ್ಲಿ ಇಲೆಕ್ಟ್ರಿಕ್ ಮೋಟರ್ ವೈಂಡಿಂಗ್ ವರ್ಕ್-ಷಾಪಿನಲ್ಲಿ ಮೆಕ್ಯಾನಿಕ್ ಆಗಿ ಸೇರಿಕೊಂಡರು. ಆ ಸ್ಥಿತಿಯಲ್ಲಿಯೂ ಅವರು ದುಡಿಯೋದನ್ನು ಕಂಡ ನಂತರ ಹಳ್ಳಿಗರು ಅವರನ್ನು ಗೇಲಿ ಮಾಡುವುದು ಕಡಿಮೆಯಾಗಿತ್ತು. ಗೀತಾಂಜಲಿ ತನಗಾಗುವ ಅವಮಾನವನ್ನು ಎದುರಿಸಿದ್ದು ಇನ್ನೊಂದು ರೀತಿಯಲ್ಲಿ: ಹಳ್ಳಿಗರ ಲೇವಡಿಯ ಮಾತುಗಳನ್ನು ಆಕೆ ನಿರ್ಲಕ್ಷಿಸ ತೊಡಗಿದರು. ಈಗಲೂ ಹಳ್ಳಿಯವರು ಆಕೆಗೆ ಆಗಾಗ ಕೇಳುವ ಪ್ರಶ್ನೆ, “ನೀನ್ಯಾಕೆ ದುಡಿತೀಯಾ?” ಇಂತಹ ಪ್ರಶ್ನೆಗಳಿಂದ ಕಿರಿಕಿರಿಯಾದರೂ ಆಕೆ ಪ್ರತಿಕ್ರಿಯಿಸುವುದಿಲ್ಲ.
ಶಿವಾಜಿ ಮತ್ತು ಅವರ ೬೫ ವಯಸ್ಸಿನ ತಾಯಿ ಸಕುಭಾಯಿ ಕೆಲಸ ಮಾಡೋದನ್ನು ನೋಡುತ್ತಾ ಗೀತಾಂಜಲಿ ಕೃಷಿಕೆಲಸಗಳನ್ನು ಕಲಿತರು. ಸತಿಪತಿ ಇಬ್ಬರೂ ಬೆಳಗ್ಗೆ ಏಳು ಗಂಟೆಗೆ ಮನೆಯಿಂದ ಹೊಲಕ್ಕೆ ಹೊರಟರೆ, ಮತ್ತೆ ಮನೆಗೆ ಹಿಂತಿರುಗುವುದು ಕತ್ತಲಾಗುವ ಸಮಯದಲ್ಲಿ. “ಹೊಲದಲ್ಲಿ ನಾವು ಮಾಡಲಿಕ್ಕಾಗದ ಕೆಲಸ ಯಾವುದೂ ಇಲ್ಲ” ಎನ್ನುತ್ತಾರೆ ಈ ದಂಪತಿ ಆತ್ಮಾಭಿಮಾನದಿಂದ. ಎಂಟು ವರುಷಗಳ ಮುಂಚೆ ವಾಹನ ಚಲಾಯಿಸಲು ಕಲಿತ ಶಿವಾಜಿ ಈಗ ಸಂಚಾರಕ್ಕೆ ಅದನ್ನೇ ಬಳಸುತ್ತಾರೆ.
ಇತರರಿಗೂ ಸ್ಫೂರ್ತಿ ಈ ದಂಪತಿ: ಸಂಜಯಗಾಂಧಿ ನಿರಾಧಾರ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ಶಿವಾಜಿ ಮತ್ತು ಗೀತಾಂಜಲಿ ಇಬ್ಬರಿಗೂ ವಿಕಲಾಂಗರ ಮಾಸಾಸನ ಸಿಗುತ್ತಿತ್ತು. ಆದರೆ, ಅದಕ್ಕೆ ಅರ್ಜಿ ಹಾಕುವುದು ಬೇಡವೆಂದು ಇಬ್ಬರೂ ನಿರ್ಧರಿಸಿದರು. “ನಾನು ಬದುಕಲಿಕ್ಕೆ ಬೇಕಾದಷ್ಟು ಹಣ ನಾನೇ ಗಳಿಸಲು ಸಾಧ್ಯವಿರುವಾಗ, ಸರಕಾರದಿಂದ ಯಾಕೆ ಹಣ ತಗೋ ಬೇಕು? ಯಾರಿಗೆ ಸರಕಾರದ ಹಣದ ಅಗತ್ಯ ಇದೆಯೋ ಅವರು ತೆಗೆದುಕೊಳ್ಳಲಿ” ಎನ್ನುತ್ತಾರೆ ಶಿವಾಜಿ.
“ನಮ್ಮ ತಾಕತ್ತಿನ ಬಲದಿಂದ ನಾವು ಬದುಕಬೇಕು ವಿನಃ ಯಾರೂ ನಮ್ಮನ್ನು ಉದ್ಧಾರ ಮಾಡಲು ಸಾಧ್ಯವಿಲ್ಲ” ಎಂಬುದು ಅವರ ನಂಬಿಕೆ. ವಿಕಲಾಂಗ ವ್ಯಕ್ತಿ ಕೃಷಿ ಮಾಡೋದನ್ನು ಶಿವಾಜಿ ನೋಡಿಲ್ಲ. ಆದರೆ, ಒಮ್ಮೆ ವಿಕಲಾಂಗರ ಸಮಾವೇಶಕ್ಕೆ ಹೋಗಿ ಬಂದ ನಂತರ ಅವರ ಮನೋಧರ್ಮವೇ ಬದಲಾಯಿತು. “ಅಲ್ಲಿದ್ದ ಕೆಲವರು ನನಗಿಂತಲೂ ಹೆಚ್ಚು ವಿಕಲಾಂಗರು.ಆವರನ್ನು ನೋಡಿದಾಗ ನಾನೆಷ್ಟು ಅದೃಷ್ಟವಂತ ಎನಿಸಿತು” ಎನ್ನುತ್ತಾ ಮುಗುಳ್ನಗುತ್ತಾರೆ ಶಿವಾಜಿ.
ವಾರದಲ್ಲಿ ಎರಡು ದಿನ ಶಿವಾಜಿ ತನ್ನ ಕಬ್ಬಿನ ಹೊಲಕ್ಕೆ ನೀರು ಹಾಯಿಸಲು ಶುರು ಮಾಡುವುದು ರಾತ್ರಿ ೧೧ ಗಂಟೆಗೆ; ಮರುದಿನ ಮುಂಜಾವದ ವರೆಗೂ ಅದೇ ಕೆಲಸ. ಯಾಕೆಂದರೆ, ಹಗಲು ವಿದ್ಯುತ್ ಇರೋದಿಲ್ಲ ಮತ್ತು ಅಲ್ಲಿನ ಸಮುದಾಯ ಬಾವಿಯಿಂದ ಹೊಲಗಳಿಗೆ ನೀರು ಹಾಯಿಸುವ ಸರದಿಯನ್ನು ಇಡೀ ತಿಂಗಳಿಗೆ ರೈತರು ನಿರ್ಧರಿಸುತ್ತಾರೆ. “ಈ ಕೆಲಸಕ್ಕೆ ೫೦೦ ರೂಪಾಯಿ ಮಜೂರಿ ಕೊಟ್ಟರೂ ಯಾರೂ ಬರೋದಿಲ್ಲ. ಯಾಕೆಂದರೆ ಅದು ಅಪಾಯದ ಕೆಲಸ” ಎನ್ನುತ್ತಾರೆ ಶಿವಾಜಿ. ಯಾವ ಅಪಾಯ? ಹಾವುಗಳ ಕಡಿತದ ಅಪಾಯ. ಈ ಅಪಾಯ ಎದುರಿಸಲು ಅವರ ಉಪಾಯ: ಎಲ್.ಈ.ಡಿ. ಟಾರ್ಚ್ ಬೆಳಕಿನಲ್ಲಿ ರಾತ್ರಿ ಕಬ್ಬಿನ ಹೊಲಕ್ಕೆ ನೀರು ಹಾಯಿಸುವುದು.
ಶಿವಾಜಿ ಸೂರ್ಯವಂಶಿ – ಗೀತಾಂಜಲಿ ಅವರದು ಐದೆಕ್ರೆ ಹೊಲ. ಅವರು ಬೆಳೆಸುವುದು ಕಬ್ಬು, ಸೋಯಾಬೀನ್ ಮತ್ತು ನೆಲಗಡಲೆ. ತಮ್ಮ ಹೊಲದ ಕೆಲಸವನ್ನೆಲ್ಲ ಅವರಿಬ್ಬರು ತಾವೇ ಮಾಡುತ್ತಾರೆ ವಿನಃ ಯಾರೇ ಕೆಲಸಗಾರನಿಂದ ಮಾಡಿಸೋದಿಲ್ಲ. “ನಮ್ಮ ಹೊಲದ ಕೆಲಸಕ್ಕೆ ಕೆಲಸಗಾರರು ಯಾಕೆ? ಅವರು ಹೊಲದ ಕೆಲಸ ಮಾಡಿದರೆ, ಮತ್ತೆ ನಾವೇನು ಕೆಲಸ ಮಾಡುವುದು?” ಎಂಬುದು ಶಿವಾಜಿ ಅವರ ಪ್ರಶ್ನೆ.