"ಪೋಸ್ಟ್ ಬ್ಯಾಂಕ್" - ಅಂಚೆ ಇಲಾಖೆಯ ಹೊಸ ಹೆಜ್ಜೆ

"ಪೋಸ್ಟ್ ಬ್ಯಾಂಕ್" - ಅಂಚೆ ಇಲಾಖೆಯ ಹೊಸ ಹೆಜ್ಜೆ

ಜುಲಾಯಿ ೧, ೨೦೧೩ರಂದು ಭಾರತದ ರಿಸರ್ವ್ ಬ್ಯಾಂಕ್ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಭಾರತದಲ್ಲಿ ಹೊಸ ಬ್ಯಾಂಕ್ ಆರಂಭಿಸಲು ಅರ್ಜಿ ಸಲ್ಲಿಸಿದ ೨೬ ಅರ್ಜಿದಾರರ ಹೆಸರು ಬಹಿರಂಗ. ಇದು ರಿಸರ್ವ್ ಬ್ಯಾಂಕಿನ ಅಪರೂಪದ ನಡೆ.

ಆ ಪಟ್ಟಿಯಲ್ಲೊಂದು ಅಚ್ಚರಿ: ಅರ್ಜಿದಾರರ ಪಟ್ಟಿಯಲ್ಲಿದ್ದ ಅಂಚೆ ಇಲಾಖೆಯ ಹೆಸರು. ಅದೀಗ, ಪೋಸ್ಟ್ ಬ್ಯಾಂಕ್ ಆಫ್ ಇಂಡಿಯಾ ಆರಂಭಿಸಲು ಅರ್ಜಿ ಸಲ್ಲಿಸಿದೆ.

ಅಂಚೆ ಇಲಾಖೆಯ ದೀರ್ಘ ಪಯಣದಲ್ಲಿ ಇದು ಸರಿಯಾದ ಮುಂದಿನ ಹೆಜ್ಜೆ. ಯಾಕೆಂದರೆ, ದೇಶದ ಉದ್ದಗಲದಲ್ಲಿ ಹರಡಿರುವ ಅಂಚೆಕಚೇರಿಗಳ ಜಾಲವನ್ನು ಯಾವ ಬ್ಯಾಂಕೂ ಸರಿಗಟ್ಟಲಾಗದು. ದೇಶದ ಅತಿ ದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ರಾಂಚುಗಳ ಸಂಖ್ಯೆ ಸುಮಾರು ೧೪,೦೦೦. ಅಂಚೆಕಚೇರಿಗಳ ಸಂಖ್ಯೆ ಇದಕ್ಕಿಂತ ೧೧ ಪಟ್ಟು ಜಾಸ್ತಿ (ಮಾರ್ಚ್ ೨೦೧೩ರಲ್ಲಿ ೧.೫೪ ಲಕ್ಷ). ಇದು ಜಗತ್ತಿನ ಅತ್ಯಂತ ದೊಡ್ಡ ಅಂಚೆ ಜಾಲ. ಇದರಲ್ಲೊಂದು ವಿಶೇಷ: ೯೦% ಅಂಚೆಕಚೇರಿಗಳು ಇರುವುದು ಗ್ರಾಮಗಳಲ್ಲಿ.

ಹೊಸ ಬ್ಯಾಂಕುಗಳಿಗೆ ಲೈಸನ್ಸ್ ನೀಡಿಕೆಯು, "ಆರ್ಥಿಕ ಸೇರ್ಪಡೆಗಾಗಿ ಅರ್ಜಿದಾರ ಯೋಜನೆ"ಯನ್ನು ಅವಲಂಬಿಸಿದೆ ಎಂದು ರಿಸರ್ವ್ ಬ್ಯಾಂಕ್ ಈಗಾಗಲೇ ಘೋಷಿಸಿದೆ. (ಅಂದರೆ ಈ ವರೆಗೆ ಬ್ಯಾಂಕಿಂಗ್ ಸೇವೆ ಪಡೆಯದಿರುವ ಜನಸಾಮಾನ್ಯರಿಗೆ ಹಾಗೂ ಬಡವರಿಗೆ ಬ್ಯಾಂಕಿಂಗ್ ಸೇವೆ ಒದಗಣೆಯ ಯೋಜನೆ). ಇದರ ಅನುಸಾರ, ಅಂಚೆ ಇಲಾಖೆಗೆ ಹೊಸ ಬ್ಯಾಂಕಿನ ಸ್ಥಾಪನೆಗೆ ಪರವಾನಗಿ ಸುಲಭಸಾಧ್ಯ ಅನಿಸುತ್ತದೆ. ಯಾಕೆಂದರೆ, ಕೋಟಿಗಟ್ಟಲೆ ಗ್ರಾಮೀಣ ಬಡಜನರಿಗೆ ಬ್ಯಾಂಕಿಂಗ್ ಸೇವೆ ನೀಡಲಿಕ್ಕಾಗಿ, ಉಳಿದೆಲ್ಲ ಅರ್ಜಿದಾರರಿಗಿಂತ ಹೆಚ್ಚಿನ ಸಾಮರ್ಥ್ಯ ಇರುವುದು ಅಂಚೆ ಇಲಾಖೆಗೆ.

ಆದರೆ, ನೆಟ್‍ವರ್ಕಿನ ವ್ಯಾಪ್ತಿಯೊಂದನ್ನೇ ಪರಿಗಣಿಸಿ ರಿಸರ್ವ್ ಬ್ಯಾಂಕ್ ಪರವಾನಗಿ ಕೊಡುತ್ತದೆ ಎನ್ನುವಂತಿಲ್ಲ. ಯಾಕೆಂದರೆ, ಆರ್ಥಿಕ ಪರಿಸ್ಥಿತಿ ಗಮನಿಸಿದರೆ, ಅಂಚೆ ಇಲಾಖೆಗೆ ಹಿನ್ನಡೆ ಆಗಲಿದೆ. ೨೦೧೧ - ೧೨ ಆರ್ಥಿಕ ವರುಷದಲ್ಲಿ ಅಂಚೆ ಇಲಾಖೆಯ ನಷ್ಟ ರೂಪಾಯಿ ೫,೮೦೬ ಕೋಟಿ ಮತ್ತು ೨೦೧೦ - ೧೧ರ ನಷ್ಟ ರೂಪಾಯಿ ೬,೩೪೫ ಕೋಟಿ. ಅಂಚೆ ಇಲಾಖೆಯ ಆದಾಯಕ್ಕಿಂತ ವೆಚ್ಚ ಜಾಸ್ತಿಯಾಗಿದ್ದು, ಪ್ರತಿ ವರುಷವೂ ಕೇಂದ್ರ ಸರಕಾರವೇ ಈ ನಷ್ಟವನ್ನು ಭರ್ತಿ ಮಾಡುತ್ತಿದೆ. ಬ್ಯಾಂಕ್ ಆರಂಭಿಸಿದರೆ, ಮುಂದೆ ಈ ನಷ್ಟವನ್ನು ತುಂಬಿ ಕೊಡುವವರು ಯಾರು?

ಅಂಚೆ ಇಲಾಖೆಯ ಬಹುಪಾಲು ಸೇವೆಗಳ ಬೆಲೆಯನ್ನು ಅದರ ವೆಚ್ಚಕ್ಕಿಂತಲೂ ಕಡಿಮೆಯಾಗಿ ನಿಗದಿ ಪಡಿಸಲಾಗಿದೆ. ಇನ್‍ಲ್ಯಾಂಡ್ ಪತ್ರ, ಪೋಸ್ಟ್ ಕಾರ್ಡ್ ಇವನ್ನು ಅಂಚೆ ಇಲಾಖೆ ನಷ್ಟದಲ್ಲಿಯೇ ಗ್ರಾಹಕರಿಗೆ ಒದಗಿಸುತ್ತಿದೆ. ಪೋಸ್ಟ್ ಬ್ಯಾಂಕ್ ಆರಂಭಿಸಿದ ಬಳಿಕವೂ ಇದು ಹೀಗೆಯೇ ಮುಂದುವರಿಯಲು ಸಾಧ್ಯವೇ?

ಅದೇನಿದ್ದರೂ ಬ್ಯಾಂಕಿಂಗ್ ಸೇವೆಗಳ ಪೂರೈಕೆ ಅಂಚೆ ಇಲಾಖೆಗೆ ಹೊಸತಲ್ಲ. ಹಲವು ದಶಕಗಳಿಂದ ಅಂಚೆ ಉಳಿತಾಯ ಖಾತೆ, ಅಂಚೆ ಆರ್‍ಡಿ ಖಾತೆ, ಮನಿ ಆರ್ಡರ್ - ಇಂತಹ ಬ್ಯಾಂಕಿಂಗ್ ಸೇವೆಗಳನ್ನು ಅಂಚೆ ಇಲಾಖೆ ಒದಗಿಸುತ್ತಿದೆ. ಇವನ್ನು ಎಲ್ಲ ಅಂಚೆಕಚೇರಿಗಳೂ (೧೭೬ ಅಂಚೆಕಚೇರಿಗಳ ಹೊರತಾಗಿ) ೨೦೧೧ರಲ್ಲಿ ಒದಗಿಸಿವೆ. ಈ ಪರಿಣತಿಯನ್ನು ಬಳಸಿಕೊಂಡು, ಇತರ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಅಂಚೆ ಇಲಾಖೆಗೆ ಸಾಧ್ಯ.

ಅದಲ್ಲದೆ, ಅಂಚೆಕಚೇರಿ ಜನಸಾಮಾನ್ಯರ ವಿಶ್ವಾಸ ಗಳಿಸಿದೆ. ಸಣ್ಣ ಉಳಿತಾಯದಲ್ಲಿ ಅಂಚೆಕಚೇರಿಯದು ದೊಡ್ಡ ಹೆಸರು. ಉಳಿತಾಯಖಾತೆ ಹಾಗೂ ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟುಗಳಂತಹ ಉಳಿತಾಯ ಸ್ಕೀಂಗಳಲ್ಲಿ ಅಂಚೆ ಇಲಾಖೆಯು ೨೦೧೧ರಲ್ಲಿ ಸಂಗ್ರಹಿಸಿದ ಹಣ ರೂಪಾಯಿ ೬.೨ ಲಕ್ಷ ಕೋಟಿ. ಇವುಗಳ ಜನಪ್ರಿಯತೆ ವರುಷದಿಂದ ವರುಷಕ್ಕೆ ಹೆಚ್ಚುತ್ತಿದೆ.

ಆದರೆ, ಇಲ್ಲಿಯ ತನಕ ಜನರ ಉಳಿತಾಯ ಸಂಗ್ರಹಿಸಿ, ಅದನ್ನು ಕೇಂದ್ರ ಸರಕಾರದ ಆರ್ಥಿಕ ಮಂತ್ರಾಲಯಕ್ಕೆ ಒದಗಿಸುವುದಷ್ಟೇ ಅಂಚೆ ಇಲಾಖೆಯ ಕೆಲಸವಾಗಿತ್ತು. ಬ್ಯಾಂಕ್ ಆರಂಭಿಸಿದ ಬಳಿಕ, ಈ ಹಣವನ್ನು ಸಾಲವಾಗಿ ನೀಡಿ ಲಾಭ ಗಳಿಸಲು ಅಂಚೆ ಇಲಾಖೆ ತಯಾರಾಗ ಬೇಕಾಗುತ್ತದೆ. ಅದಕ್ಕಾಗಿ, ಅಂಚೆ ಇಲಾಖೆಯ ೪.೭೫ ಲಕ್ಷ ಸಿಬ್ಬಂದಿಯಲ್ಲಿ ಹಲವರಿಗೆ ತರಬೇತಿ ನೀಡುವುದು ಅಗತ್ಯ. ಜೊತೆಗೆ, ಸಾಲನೀಡಿಕೆ ಹಾಗೂ ವಸೂಲಾತಿಯಲ್ಲಿ ಪರಿಣತಿ ಇರುವ ಸಾವಿರಾರು ಸಿಬ್ಬಂದಿಯನ್ನು ನೇಮಿಸಿಕೊಳ್ಳ ಬೇಕಾಗುತ್ತದೆ.

ಅಂಚೆ ಇಲಾಖೆ ತನ್ನದೇ ಬ್ಯಾಂಕ್ ಸ್ಥಾಪಿಸುವ ಮುನ್ನ ತುರ್ತಾಗಿ ಅಳವಡಿಸಿಕೊಳ್ಳ ಬೇಕಾಗಿರೋದು - ನೂತನ ತಂತ್ರಜ್ನಾನವನ್ನು. ಈಗಾಗಲೇ ಸಿಬಿಎಸ್ (ಕೋರ್ ಬ್ಯಾಂಕಿಂಗ್ ಸೊಲೂಷನ್ಸ್) ತಂತ್ರಜ್ನಾನ ಅಳವಡಿಸಿಕೊಂಡಿರುವ ಇತರ ಬ್ಯಾಂಕುಗಳ ಸೇವಾದಕ್ಷತೆಯನ್ನು ಸರಿಗಟ್ಟಬೇಕಾದರೆ ಇದು ಅಗತ್ಯ. ಆದರೆ ೨೦೧೧ರಲ್ಲಿ ಕಂಪ್ಯೂಟರೀಕರಣ ಆಗಿರುವ ಅಂಚೆಕಚೇರಿಗಳ ಸಂಖ್ಯೆ ಕೇವಲ ೨೪,೧೦೦. ಹಾಗಾಗಿ, ಅಂಚೆ ಇಲಾಖೆ ಎದುರಿಸುತ್ತಿರುವ ದೊಡ್ಡ ಸವಾಲು: ಎಲ್ಲ ಅಂಚೆಕಚೇರಿಗಳಲ್ಲಿ ಬೇಗನೇ ಕಂಪ್ಯೂಟರ್ ವ್ಯವಸ್ಥೆ ಅಳವಡಿಸುವುದು.

ದಕ್ಷಿಣ ಆಫ್ರಿಕಾ ಮತ್ತು ಜಪಾನ್ ದೇಶಗಳ ಪೋಸ್ಟ್ ಬ್ಯಾಂಕ್ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಭಾರತದ ಅಂಚೆ ಇಲಾಖೆ ಇತ್ತೀಚೆಗೆ, ೧೫ ಜುಲಾಯಿ ೨೦೧೩ರಂದು, ಟೆಲಿಗ್ರಾಂ ಸೇವೆಯನ್ನು ಕೊನೆಗೊಳಿಸಿದೆ. ಹಾಗಿರುವಾಗ, ಹೊಸ ಸೇವೆಯೊಂದನ್ನು ಆರಂಭಿಸಲು ಅದಕ್ಕೆ ಸಾಧ್ಯವೇ? ಖಂಡಿತ ಸಾಧ್ಯ.

ಯಾಕೆಂದರೆ, ಅಂಚೆ ಇಲಾಖೆ ಬೆಲೆಕಟ್ಟಲಾಗದ ಮೂರು "ಸೊತ್ತು"ಗಳನ್ನು ಹೊಂದಿದೆ: ಜಗತ್ತಿನ ಅತ್ಯಂತ ದೊಡ್ಡ ಅಂಚೆಕಚೇರಿಗಳ ಜಾಲ, ಸುಮಾರು ೪.೭೫ ಅನುಭವಿ ಸಿಬ್ಬಂದಿ ಮತ್ತು ಜನಸಾಮಾನ್ಯರ ವಿಶ್ವಾಸ. ಇವುಗಳ ಬಲದಿಂದ, ದೇಶದ ಹಳ್ಳಿಹಳ್ಳಿಗೆ ಅಂಚೆಸೇವೆ ಒದಗಿಸಿದಂತೆ, ಬ್ಯಾಂಕ್ ಸೇವೆಯನ್ನೂ ಒದಗಿಸಲು ಅಂಚೆ ಇಲಾಖೆಯ ಪೋಸ್ಟ್ ಬ್ಯಾಂಕ್‍ಗೆ ಸಾಧ್ಯ.

Comments

Submitted by nageshamysore Thu, 08/08/2013 - 17:11

ಸಮಯೋಚಿತ ಲೇಖನ. ಸಿಂಗಪುರದಲ್ಲೂ 'ಪೋಸ್ಟ್ ಆಫೀಸ್ ಸೇವಿಂಗ್ಸ್ ಬ್ಯಾಂಕೆ (ಪಿಓಎಸ್ಬಿ)' ಗ್ರಾಹಕರ ಅಚ್ಚುಮೆಚ್ಚು. ಅವರ ಘೋಷಿತ ವಾಕ್ಯ ಸಹ 'ನೈಬರ್ಸ್ ಫಸ್ಟ್ , ಬ್ಯಾಂಕರ್ಸ್ ನೆಕ್ಸ್ಟ್'. ಆದರೆ ಅವರ ಸೇವಾಸೌಕರ್ಯ ಯಾವ ಆಧುನಿಕ ಬ್ಯಾಂಕಿಗೂ ಕಮ್ಮಿಯಿಲ್ಲ. ಬಹುಶಃ ನಮ್ಮಲ್ಲಿ ಅದೊಂದು ದೊಡ್ಡ ಪಂಥವಾಗಲಿದೆ. ಕಂಪ್ಯುಟರೀಕರಿಸಿದ ದೇಶವ್ಯಾಪ್ತಿ ಜಾಲವನ್ನು ನಮ್ಮ ಪೋಸ್ಟ್ ಆಫೀಸುಗಳು ಅಷ್ಟು ಸುಲಭದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವೆ ಎಂಬುದನ್ನು ಕಾದು ನೋಡಬೇಕು. ನಾನೊಮ್ಮೆ, ಪಿಪಿಎಫ್ ಅಕೌಂಟನ್ನು ಕಟ್ಟಲು ಬೇರೆ ಬ್ರಾಂಚಿನಲ್ಲಿ ಸಾಧ್ಯತೆಯಿದೆಯೆ ಎಂದು ವಿಚಾರಿಸಿದಾಗ - ಅಕೌಂಟ್ ಟ್ರಾನ್ಸ್ ಫರ್ ಆಗದೆ ಸಾಧ್ಯವಿಲ್ಲವೆಂಬ ಉತ್ತರ ಬಂತು! ಒಂದು ರೀತಿ ಈಗಿನ ರಾಷ್ಟ್ರ ವ್ಯಾಪೀ ಜಾಲ ಮತ್ತು ಉದ್ಯೋಗಿಗಳು ಅದರ ಶಕ್ತಿ ಆಗಿರುವ ಹೊತ್ತಿನಲ್ಲೆ, ಅದನ್ನು 'ಕದಲಿಸದೆ' ಹೊಸ ಜಾಗತಿಕ ಪೋಟಿಗೆ ತಯಾರು ಮಾಡಬೇಕಾದ ಕಾರಣ - ದೌರ್ಬಲ್ಯವೂ ಆಗಿಬಿಡಬಹುದು. ತೀರಾ ಹೊಸದಾಗಿ ಅಂಗ ಸಂಸ್ಥೆಯನ್ನು ಕಟ್ಟುವುದಾದರೆ ಈ ಸಮಸ್ಯೆ ಪರಿಹಾರ ಸುಲಭ - ಆದರೆ ಅದು ಮೂಲ ಉದ್ದೇಶಕ್ಕೆ ಧಕ್ಕೆಯನ್ನು ತರುವ ಕಾರಣ , ಈ ಕುರಿತು ಚಿಂತನೆ ನಡೆಸಿ ಯೋಜನೆ ರೂಪಿಸಬೇಕಿದೆ.