ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ...
ಹುಣ್ಣಿಮೆಯ ಆಸುಪಾಸಿನ ದಿನಗಳಲಿ, ವಾಕ್ ಮಾಡಿಕೊಂಡೆ ಮನೆಗೆ ನಡೆದಿದ್ದ ಸಂಜೆಯಲ್ಲಿ, ಆಗಲೆ ದುಂಡಗೆ ಪ್ರಸ್ಥಾನಗೊಂಡಿದ್ದ ಚಂದ್ರಣ್ಣ ಕಣ್ಣಿಗೆ ಬೀಳುವ ಸಾಮಾನ್ಯ ದೃಶ್ಯ; ಎಷ್ಟೆಲ್ಲಾ ಕವಿ ಪುಂಗವರು, ಪ್ರಣಯಿಗಳುಗಳಿಂದೆಲ್ಲಾ ಏನೆಲ್ಲಾ ಸುಳ್ಳು ಸುಳ್ಳೆ ಹೊಗಳಿಸಿಕೊಳ್ಳೊ ಭಾಗ್ಯ ಇವನಿಗೆ ಅನಿಸಿತು. ಅವನ ಮೈನ ಹಳ್ಳ ಕೊಳ್ಳದಿಂದ ಹಿಡಿದು, ಬೆಳಕನ್ನು ಸೂರ್ಯನಿಂದ ಸಾಲಾವಾಗಿ ಪಡೆದರೂ ಮೆರೆಯುವ ಪುಣ್ಯಾತ್ಮ ಇವ. ಅವನನ್ನು ಹೊಗಳುವ ಭಾವದ ಬದಲು ತುಸು ಛೇಡಿಕೆಯಲಿ ಕಾಲೆಳೆಯಲು ಹಾಗೆ ಗೀಚಿದ ಸಾಲುಗಳಿವು. ಹುಣ್ಣಿಮೆ ಬೆಳಕಿನಡಿ ಓದುತ್ತಾ 'ಎಂಜಾಯ್' ಮಾಡಿ :-)
ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ...
________________________
ರವಿಯಣ್ಣನಾ ಬಿಳಿ ಬೆಳಕಿನ ಎರವಲು
ಎರಚಾಡಿಸಿ ಮೈಗೆ ಹಚ್ಚಿದ ಉರುವಲು
ಫಳಫಳ ಹೊಳೆಯುವೆ ಹುಣ್ಣಿಮೆಗೊಮ್ಮೆ
ಚಂದ್ರಣ್ಣ ನೀನು ಬರಿ ಸೂರ್ಯನ ಕೆಮ್ಮೆ ||
ನಿನ್ನ ಬೆಳಕೆಲ್ಲಾ ನಕಲಿ ಬರಿ ಕಪಟ ತಕಲಿ
ಕಣೆ ಕಟ್ಟಿದ ಸುತ್ತೆಲ್ಲಾ ದಿನಕರ ದಯದಲ್ಲಿ
ಉಗಿದೊ ಮುಕ್ಕಳಿಸಿದ್ದೊ ಕೆಂಬೂತ ಹೊದ್ದು
ನವಿಲಂತೆ ಕುಣಿಯೊ ನಿನ್ನ ಬಿನ್ನಾಣ ಬುದ್ಧು ||
ಪ್ರೇಮ ವ್ಯಾಪಾರ ಪ್ರಣಯಕ್ಕೆ ಪ್ರತಿದಿನ ಬರ
ಕತ್ತಲ ಭೇಟಿಗು ಖಾರ ತಿಂಗಳ ತಡುಕುವರ
ತಿಂಗಳಿಗೆ ಹುಣ್ಣಿಮೆ, ದಿನಾ ತಂಗಳ-ವಾರಾನ್ನ
ಕೊಂಡಾಡುವರು ಸುಳ್ಳೆ, ನೀನಲ್ಲ ಬಿಡು ಸೋಮ ||
ದುಂಡಾಗಿಹ ಸುತ್ತು, ಬಿಳಿ ಪೌಡರು ಮೆತ್ತಿಟ್ಟು
ಚಂದಿರ ವದನಾ ಅಂತೆಲ್ಲಾ ನಿನಗೆ ಹೆಸರಿಟ್ಟು
ಮುಳ್ಳು ಮೊಡವೆ ಮುಖಕದೆಷ್ಟೊ ಅಲಂಕಾರ
ದೂರದಾಬೆಟ್ಟ, ನುಣ್ಣಗಿದ್ದರೂ ಏಮಾರುವವರ ||
ದೃಷ್ಟಿ ಬೊಟ್ಟೆನಬೇಡ, ಕಪ್ಪು ಚುಕ್ಕೆಯ ಬೊಕ್ಕೆ
ಹಳ್ಳ ಕೊಳ್ಳ ಕಣಿವೆ ಗುಂಡಿಗೆ ಒಳ ಮೈ ಸುಕ್ಕೆ
ಹತ್ತಿರದಿಂದ ನಿನ್ನ ಮುದ್ದಿಸುವವರಾರೂ ಕಾಣೆ
ನಿನ ಪುಣ್ಯ ಬದುಕಿದೆ ಕೈಸಿಗದ ದೂರದ ಹೆಣ್ಣೆ ||
ಕಾಲಿಟ್ಟವರಿಬ್ಬರು ಜಂಬದೇ ಕುಣಿದಾಡಿದರು
ಕಲ್ಲು ಮಣ್ಣು ಎತ್ತಿ ತಂದು ದರ್ಶಕದಲ್ಹಿಡಿದರು
ಸುಂದರೀ ವಸುಂಧರೆ ನೀಲಿ ಗೃಹಿಣಿ ಎಂದರು
ಚಂದದ ಚೆಂದಿರನೆಂದು ಎಲ್ಲಿ ಬಾಯಿ ಬಿಟ್ಟರು? ||
ಹೊಗಳಲೆಬೇಕೆ ಕೊರಮ, ನಿನಗೊಂದೇ ಪರಮ
ಇಳೆಯಾರನೆ ಒಂದಂಶ ಗುರುತ್ವಾಕರ್ಷಣೆ ಸಮ
ಸ್ಥೂಲಕಾಯ, ಮಹಾಕಾಯ, ಅತಿಕಾಯರೆಲ್ಲಾ
ಬೊಜ್ಜಿನಜ್ಜರಲ್ಲವೆಂದು ಅಲ್ಲಿ ಖುಷಿ ಪಡಬಹುದಲ್ಲ! ||
- ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Comments
ಉ: ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ...
"ಚಂದವಿಲ್ಲದ ಚಂದಪ್ಪ"ನ ಬಗೆಗಿನ ನಿಮ್ಮ ಚಂದದ ಕಾವ್ಯ. ಚೆನ್ನಾಗಿದೆ ನಾಗೇಶರೆ.
In reply to ಉ: ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ... by makara
ಉ: ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ...
ಚಂದ್ರನ ಕಾಲು ಎಳೆದುದ್ದೇನೊ ಚೆನ್ನಾಗಿದೆ!
ಆದರೆ ನಾವೆಲ್ಲರು ಒಮ್ಮೊಮ್ಮೆ ಚಂದ್ರರೆ ಏನೊ ಅನ್ನಿಸುತ್ತೆ !
In reply to ಉ: ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ... by partha1059
ಉ: ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ...
ಪಾರ್ಥಾ ಸಾರ್, ನಿಮ್ಮ ಮಾತು ನಿಜ. ಬಾಹ್ಯದಲ್ಲೊ, ಆಂತರ್ಯದಲ್ಲೊ - ನಾವೆಲ್ಲ ಒಂದಲ್ಲ ಒಂದು ರೀತಿಯ ಚಂದ್ರರೆ. ನಾವು ಇನ್ನೊಬ್ಬರಿಗೆ ಯಾವಾಗಲೂ ತೋರಿಸಿಕೊಳ್ಳಲು ಯತ್ನಿಸುವುದು 'ಹುಣ್ಣಿಮೆ ಚಂದ್ರನ' ಭಾಗ; ಮುಚ್ಚಿಡಲೆತ್ನಿಸುವುದು ನೈಜ್ಯ ಚಂದಿರ ರೂಪವನ್ನ.
ಬಹುಶಃ ಅದಕ್ಕೆ ಇರಬೇಕು , ಆಗ್ಗಾಗೆ ನಮಗೆ 'ಅರ್ಧ ಚಂದ್ರ' ಪ್ರಯೋಗದ ಅನುಭವವೂ ಆಗುವುದು :-)
ಆದರೂ ಸೂರ್ಯನ 'ಕೆಂಡಾಮಂಡಲ'ಕ್ಕಿಂತ ಚಂದ್ರನ 'ತಂಬೆಲರೆ' ವಾಸಿ ಬಿಡಿ !
In reply to ಉ: ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ... by makara
ಉ: ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ...
ಶ್ರೀಧರರೆ ನೋಡಿ, ಈಗ ತಾನೆ (ಲಲಿತಾನಾಮಾವಳಿ ಲೇಖನದಲ್ಲಿ) ಓದಲು ಬಾಕಿ ಉಳಿದಿವೆಯೆಂದಿರಿ. ಆಗಲೆ ಒಂದು ಓದಿ ಮುಗಿಸಿಯೆಬಿಟ್ಟಿರಿ..ಧನ್ಯವಾದಗಳು :-)
ಉ: ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ...
"ಕವಿಗಳು" ಪೌರ್ಣಿಮೆಯ ಚಂದ್ರನನ್ನು ದೂರುತ್ತಾರೆಂದರೆ, ದಸರಾ ರಜೆಗೆ ತೌರಿಗೆ ಹೋದ ಹೆಂಡತಿ ಇನ್ನೂ ಬಂದಿಲ್ಲ ಎಂದರ್ಥ :)
-ಸ್ಥೂಲಕಾಯ, ಮಹಾಕಾಯ, ಅತಿಕಾಯರೆಲ್ಲಾ
ಬೊಜ್ಜಿನಜ್ಜರಲ್ಲವೆಂದು ಅಲ್ಲಿ ಖುಷಿ ಪಡಬಹುದಲ್ಲ! ||
-ನನ್ನನ್ನು ಚಂದ್ರಲೋಕಕ್ಕೆ ಕಳುಹಿಸುವ ಅಂದಾಜೋ ಹೇಗೆ!?
In reply to ಉ: ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ... by ಗಣೇಶ
ಉ: ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ...
ಗಣೇಶ್ ಜಿ, ಇಲ್ಲೆಂತಹ ದಸರ ಬಿಡಿ. ಹಬ್ಬ ಹಬ್ಬಕ್ಕು ತವರು ಅಂದರೆ - ಏರಲೈನುಗಳಷ್ಟೆ ಉದ್ದಾರವಾಗೋದು :-)
ಅಂದಹಾಗೆ ಈ ಕವನದ ಕೊನೆಯ ಪಂಕ್ತಿ ಐಡಿಯಾ ಬಂದಿದ್ದೆ, ನಿಮ್ಮ 'ಜಿಮ್' ಲೇಖನದ ಸಂವಾದದಿಂದ. ಪಾಪ ಜನ ಮನೆಗೆಲಸ ಎಲ್ಲಾ ಮೆಷಿನ್ನುಗಳಿಗೆ ಮಾಡೋಕೆ ಬಿಟ್ಟು, ಜಿಮ್ಮು- ಜಾಗು - ವಾಕು ಅಂತೆಲ್ಲಾ ಒದ್ದಾಡ್ತಾರಲ್ಲ ಆಂತ.
">>>>>-ನನ್ನನ್ನು ಚಂದ್ರಲೋಕಕ್ಕೆ ಕಳುಹಿಸುವ ಅಂದಾಜೋ ಹೇಗೆ!?<<<<<< " - ಪಾಪ ಮೊದಲೆ ನೋಡಿ ನಕ್ಕಿದ ಅಂತ ಅವನಿಗೆ ಶಾಪ ಕೊಟ್ಟು ತಿಂಗಳಿಗೊಂದೆ ಸಲ ಹುಣ್ಣಿಮೆನಲ್ಲಿರೊ ಹಾಗೆ ಮಾಡಿದ್ದೀರ. ಈಗ ಅಲ್ಲೆ ನೇರ ಹೋಗಿ, ಜಿಮ್ಮಿನಲ್ಲಿ ಆದ ಹಾಗೆ ಗುರುತ್ವಾಕರ್ಷಣೆ ಬಲ ಕಮ್ಮಿ ಆಗೊ ಬದಲು ಜಾಸ್ತಿಯಾಗಿಬಿಟ್ರೆ? ಬೇಡ ಗಣೇಶ್ ಜಿ ಬೇಡ, ಯಾಕೆ ಸುಮ್ಮನೆ ರಿಸ್ಕು...(ನಿಮಗಲ್ಲ, ಪಾಪದವ ಚಂದ್ರನಿಗೆ..ಬೈಯ್ಯೊ ಕವಿಗಳ ಜತೆ, ಇವರು ಬೇರೆ ಬಂದರಲ್ಲ 'ಜಿಮ್ - ಭಂಜಕರು ಅಂತ, ಡ್ಯೂಟಿ ಬಿಟ್ಟು ತಿಂಗಳೆಲ್ಲ ಅಮಾವಾಸೆ ಮಾಡಿಬಿಟ್ರೆ ಕಷ್ಟ...)
ಉ: ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ...
ನಾಗೇಶ ಮೈಸೂರು ರವರಿಗೆ ವಂದನೆಗಳು
ಕವನ ಓದಿದೆ, ಭಿನ್ನ ಶೈಲಿಯ ವಿಭಿನ್ನ ಆಲೋಚನಾ ಸರಣಿಯನ್ನು ಹೊಂದಿರುವ ನಿಮ್ಮ ಕವನ ನಿರೂಪಣಾ ಶೈಲಿ ಹಿಡಿಸಿತು. ಚಂದ್ರ ಸೂರ್ಯನಿಂದ ಬೆಳಕು ಪಡೆದು ವಿಜ್ರಂಭಿಸುವವನಾದರೂ ತಣ್ಣನೆಯ ಚಂದಿರ ನನಗಿಷ್ಟ. ಬೆಳದಿಂಗಳು ಸೂಸುವ ಚಂದ್ರ, ವಿರಾಮದಲಿ ವಿಸ್ರಾಂತಿ ಪಡೆಯುತ್ರಿರುವ ಪ್ರಕೃತಿ ಆಗ ಸೃಷ್ಟಿಯಾಗುವ ಶಾಂತ ಮತ್ತು ತಣ್ಣನೆಯ ವಾತಾವರಣ ನನಗಿಷ್ಟ, ಆ ವಾತಾವರಣ ನನ್ನನ್ನು ಭಾವ ಸಮಾಧಿಗೆ ಒಯ್ಯುತ್ತದೆ, ಚಂದ್ರನ ಬಗೆಗಿನ ವೈಜ್ಞಾನಿಕ ಆವಿಷ್ಕಾರಗಳೇನೆ ಇರಲಿ, ಕವಿಗಳ ಭಾವ ಲೋಕದಲಿ ಮೂಡಿ ಬರುವ ಚಂದಿರ ನಮ್ಮನ್ನು ಅವ್ಯಕ್ತ ಲೋಕಕ್ಕೆ ಒಯ್ಯುವುದು ಸುಳ್ಲಲ್ಲ, ಕವನ ಚೆನ್ನಾಗಿದೆ ಧನ್ಯವಾದಗಳು.
In reply to ಉ: ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ... by H A Patil
ಉ: ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ...
ಪಾಟೀಲರೆ, ವೈಜ್ಞಾನಿಕ ಶೋಧನೆ ನೈಜ್ಯತೆಗಳೇನೆ ಇರಲಿ ಕಲ್ಪನಾ ರಾಜ್ಯಕ್ಕೆ ತಂಬೆಲರಿನ ಸುಧಾಕರ, ಸ್ಪೂರ್ತಿಯ ಚಿಲುಮೆಯ, ನಿರಂತರ ಬತ್ತದ ಒರತೆಯಾಗಿರುವುದು ಸತ್ಯ. ಸ್ವಂತ ಬೆಳಕಿಲ್ಲದ್ದರಿಂದಲೆ ತಂಪು ಬೆಳದಿಂಗಳು ಸಾಧ್ಯವಾಗಿರುವುದು. ಹೀಗಾಗಿ ಅವನು ಕವಿ ಲೋಕದ ಸ್ಪೂರ್ತಿಯ ವಕ್ತಾರನಾಗಿ ಮಾತ್ರವಲ್ಲದೆ ತಿಂಗಳ ಬೆಳಕಿನ ಆರಾಧಕರೆಲ್ಲರಿಗು ಪ್ರಿಯವಾಗಿಯೆ ಉಳಿಯುವ - ಹಿಂದೆ, ಇಂದು ಮತ್ತು ಮುಂದೆ ಸಹ.
ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು