ಪ್ಯಾರಾಚ್ಯೂಟ್ ಸಂಶೋಧನೆಯ ಸುತ್ತ...
ಒಮ್ಮೆ ನೀವು ಮನಸ್ಸಿನಲ್ಲಿಯೇ ಕಲ್ಪಿಸಿಕೊಳ್ಳಿ. ನೀವು ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವಿರಿ. ಆದರೆ ದುರಾದೃಷ್ಟವಷಾತ್ ನಿಮ್ಮ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದು, ವಿಮಾನದಲ್ಲಿ ಬೆಂಕಿ ಹತ್ತಿಕೊಳ್ಳುತ್ತದೆ. ನೀವು ವಿಮಾನದಿಂದ ಹೊರ ಜಿಗಿಯಲೇ ಬೇಕಾದ ಪರಿಸ್ಥಿತಿ ಉದ್ಭವವಾಗುತ್ತದೆ. ಆಗ ನಿಮ್ಮ ಸಹಾಯಕ್ಕೆ ಬರುವ ಜೀವರಕ್ಷಕ ವಸ್ತುವೇ ‘ಪ್ಯಾರಾಚ್ಯೂಟ್'. ನೀವು ವಿಮಾನಕ್ಕೆ ಹತ್ತಿದ ತಕ್ಷಣವೇ ನಿಮಗೆ ಪ್ಯಾರಾಚ್ಯೂಟ್ ಬಳಕೆಯ ಬಗ್ಗೆ ಕಿರು ಮಾಹಿತಿ ನೀಡುತ್ತಾರೆ. ಈ ಕೊಡೆಯಂತಹ (ಕೆಲವು ಆಯತಾಕಾರದಲ್ಲೂ ಇರುತ್ತವೆ) ಆಕಾರದ ವಸ್ತುವಿನ ಸಹಾಯದಿಂದ ನೀವು ವಿಮಾನದಿಂದ ಕೆಳಗೆ ಹಾರಿದಾಗ ಅದು ಹೂವಿನ ತರಹ ಬಿಡಿಸಿಕೊಂಡು (ಚಿತ್ರವನ್ನು ಗಮನಿಸಿ) ಗಾಳಿಯನ್ನು ಬಳಸಿಕೊಂಡು ನಿಧಾನವಾಗಿ ಭೂಮಿಯತ್ತ ಅಥವಾ ಕಡಲಿನತ್ತ ಇಳಿಯತೊಡಗುತ್ತದೆ. ಇದರಿಂದಾಗಿ ನೀವು ಕೆಳಕ್ಕೆ ಬಿದ್ದಾಗಲೂ ದೊಡ್ಡ ಏಟು ಆಗುವುದಿಲ್ಲ. ಜೀವ ಉಳಿಯುವ ಸಾಧ್ಯತೆ ಅಧಿಕವಾಗಿರುತ್ತದೆ. ಇದರ ಯೋಚನೆ ಹಾಗೂ ಸಂಶೋಧನೆಗಳ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳುವ.
ಪ್ಯಾರಾಚ್ಯೂಟ್ ಅಥವಾ ಪ್ಯಾರಾಶೂಟ್ ಎಂದರೆ ಫ್ರೆಂಚ್ ಭಾಷೆಯಲ್ಲಿ ಕೆಳಗೆ ಬೀಳುವುದನ್ನು ತಡೆಯುವುದು ಎಂದರ್ಥ. ಇದು ಬಿಡಿಸಿಕೊಂಡಾಗ ಬಹಳ ದೊಡ್ಡದಾಗಿರುತ್ತದೆ. ಏಕೆಂದರೆ ಗಾಳಿಯನ್ನು ತಡೆದು ನೀವು ಬೀಳುವ ವೇಗವನ್ನು ಕಮ್ಮಿ ಮಾಡಲು ಇದು ಅನುಕೂಲವಾಗಿರುತ್ತದೆ. ಇದರ ರಚನೆಯ ಹಿಂದೆ ಇರುವ ತತ್ವ ಸರಳ. ಆದರೆ ತಯಾರಿಕೆಯಲ್ಲಿ ಬಳಕೆಯಾಗುವ ಬಿಡಿಭಾಗಗಳು ಅಧಿಕ. ಖ್ಯಾತ ವಿಜ್ಞಾನಿ ಐಸಾಕ್ ನ್ಯೂಟನ್ ಮೇಲೆ ಸೇಬು ಬಿದ್ದಾಗ ಗುರುತ್ವಾಕರ್ಷಣೆಯ ತತ್ವದ ಅರಿವು ಅವನಿಗಾಯಿತು. ಭೂಮಿಯ ಈ ಗುಣದಿಂದಾಗಿ ಯಾವ ವಸ್ತುವಾದರೂ ಮೇಲಿನಿಂದ ಕೆಳಕ್ಕೆ ಬಿದ್ದೇ ಬೀಳುತ್ತದೆ. ಆದರೆ ಕೆಳಗೆ ಬೀಳುತ್ತಿರುವ ವಸ್ತು ತಟ್ಟೆಯಂತೆ ಅಥವಾ ಕೊಡೆಯಂತೆ ಅಗಲವಾಗಿದ್ದರೆ ಅದು ನೇರವಾಗಿ, ವೇಗವಾಗಿ ಅಪ್ಪಳಿಸುವುದಿಲ್ಲ. ನಿಧಾನವಾಗಿ ಕೆಳಗೆ ಇಳಿಯುತ್ತದೆ. ಕಾರಣ ಇಷ್ಟೇ. ವಸ್ತು ಕೆಳಗಿಳಿಯುವಾಗ ಗಾಳಿ ಅದನ್ನು ಮೇಲಕ್ಕೆ ತಳ್ಳಲು ಪ್ರಯತ್ನಿಸುತ್ತದೆ. ವಸ್ತು ಅಗಲವಾಗಿದ್ದರೆ ಅದನ್ನು ಮೇಲಕ್ಕೆ ತಳ್ಳುವ ಗಾಳಿಯ ಪ್ರಮಾಣವೂ ಜಾಸ್ತಿ. ಈ ರೀತಿಯ ಗಾಳಿಯ ಮೇಲ್ಮುಖ ಒತ್ತಡ ಮತ್ತು ಭೂಮಿಯ ಗುರುತ್ವಾಕರ್ಷಣೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡುತ್ತಿರುತ್ತದೆ. ಗುರುತ್ವಾಕರ್ಷಣ ಶಕ್ತಿ ಜಾಸ್ತಿ ಇರುವುದರಿಂದ ವಸ್ತುಗಳು ನಿಧಾನವಾಗಿ ಕೆಳಗೆ ಇಳಿಯುತ್ತವೆ. ಇದೇ ತತ್ವದ ಮೂಲಕ ಕಾರ್ಯಾಚರಣೆ ಮಾಡುತ್ತದೆ ಪ್ಯಾರಾಚ್ಯೂಟ್.
ಸುಮಾರು ಆರುನೂರಾ ಐವತ್ತು ವರ್ಷಗಳ ಹಿಂದೆ ಈ ಪ್ಯಾರಾಚ್ಯೂಟ್ ಅನ್ನು ಹೋಲುವ ಒಂದು ಸಾಧನವನ್ನು ೧೩೦೬ರಲ್ಲಿ ಚೀನಾ ದೇಶದ ಜನಗಳು ಕ್ರೀಡೆ ಮತ್ತು ಮನರಂಜನೆಗಾಗಿ ಉಪಯೋಗಿಸುತ್ತಿದ್ದರು. ಈ ಸಾಧನದ ಬೇರೆ ಉಪಯೋಗಗಳು ಅವರಿಗೆ ಗೊತ್ತಿರಲಿಲ್ಲ. ಏಕೆಂದರೆ ಆ ಸಮಯ ವಿಮಾನಯಾನದ ಕಲ್ಪನೆಯೂ ಇರಲಿಲ್ಲ. ಆದರೆ ಖ್ಯಾತ ಕಲಾವಿದ ಲಿಯೋನಾರ್ಡೋ ಡಾವಿಂಚಿಯು ಈ ರೀತಿಯ ಸಾಧನವೊಂದರ ಚಿತ್ರವನ್ನು ತನ್ನ ಮನದಲ್ಲಿ ಕಲ್ಪಿಸಿಕೊಂಡಿದ್ದ. ೧೫೧೪ರಲ್ಲಿ ಅದರ ಚಿತ್ರವನ್ನೂ ಬಿಡಿಸಿದ್ದ. ಆದರೆ ಅದನ್ನು ತಯಾರಿಸುವ ಬಗ್ಗೆ ಆತ ಯೋಚನೆ ಮಾಡಲಿಲ್ಲ. ಆದರೆ ಸುಮಾರು ೨೫೦ ವರ್ಷಗಳ ನಂತರ ಫ್ರಾನ್ಸ್ ನಲ್ಲಿ ಡಾವಿಂಚಿಯ ಚಿತ್ರದ ಬಗ್ಗೆ ಆಸಕ್ತಿ ವಹಿಸಿ ಮಾಂಟ್ ಗಾಲ್ಫಿಯರ್ (೧೭೭೭) ಮತ್ತು ಬ್ಲಂಕಾರ್ಡ್ (೧೭೮೫) ಎಂಬವರು ಹಲವಾರು ಪ್ರಯೋಗಗಳನ್ನು ಮಾಡಿದರು. ಈ ಪ್ರಯೋಗಕ್ಕಾಗಿ ಅವರು ಮಾನವನ ಬದಲು ಪ್ರಾಣಿಗಳನ್ನು ಬಳಕೆ ಮಾಡಿದರು. ಇವರು ಪ್ಯಾರಾಚ್ಯೂಟ್ ಜಿಗಿತದ ಪ್ರಯೋಗಕ್ಕೆ ಬಳಸಿಕೊಂಡದ್ದು ಕುರಿ ಮತ್ತು ನಾಯಿಗಳನ್ನು. ಇವರಿಬ್ಬರಿಗಿಂತಲೂ ಒಂದು ಹೆಜ್ಜೆ ಮುಂದಿದ್ದ ಗಾರ್ನೆರಿನ್ ಎಂಬಾತ. ಇವನು ೧೭೯೭ ರಿಂದ ೧೮೦೪ರವರೆಗೆ ಬೇರೆ ಬೇರೆ ದೇಶಗಳಲ್ಲಿ ಪ್ಯಾರಾಚ್ಯೂಟ್ ಜಿಗಿತದ ಮೇಲೆ ಪ್ರಯೋಗಗಳನ್ನು ನಡೆಸಿದ. ಸ್ವತಃ ತಾನೆ ಪ್ಯಾರಾಚ್ಯೂಟ್ ಕಟ್ಟಿಕೊಂಡು ಹಾರುವ ಮೂಲಕ ಹಲವಾರು ಪ್ರದರ್ಶನಗಳನ್ನು ನೀಡಿದ.
ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಬಿಸಿಗಾಳಿಯಿಂದ ಹಾರುವ ಬಲೂನ್ ಹೆಚ್ಚೆಚ್ಚು ಜನಪ್ರಿಯವಾಗತೊಡಗಿತು. ಮನುಷ್ಯ ಹಕ್ಕಿಯಂತೆ ಆಕಾಶದಲ್ಲಿ ತೇಲಾಡುವ ಕಾಲವಾಗಿತ್ತು ಅದು. ೧೮೦೮ರಲ್ಲಿ ಒಂದು ದಿನ ಪೋಲೆಂಡಿನ ಜೋರ್ಡಾಕಿ ಕುಪಾರೆಂಟೋ ಎಂಬಾತ ಈ ಬಿಸಿಗಾಳಿ ಬಲೂನ್ (Hot Air Balloon) ನಲ್ಲಿ ಪ್ರಯಾಣ ಮಾಡುತ್ತಿದ್ದ. ಅವನನ್ನು ಹೊತ್ತ ಬಲೂನ್ ಗೆ ಅನಿರೀಕ್ಷಿತವಾಗಿ ಬೆಂಕಿ ಹತ್ತಿಕೊಂಡಿತು. ತಕ್ಷಣ ಕುಪಾರೆಂಟೋ ಕೊಡೆಯಾಕಾರದ ಬಿಳಿಯ ಬಟ್ಟೆಯನ್ನು ಹಿಡಿದುಕೊಂಡು ಬಲೂನ್ ನಿಂದ ಹೊರಜಿಗಿದ. ಕುಪಾರೆಂಟೋ ವೇಗವಾಗಿ ಭೂಮಿಗೆ ಬೀಳುವ ಬದಲು ನಿಧಾನವಾಗಿ ಬಟ್ಟೆಯ ಸಹಾಯದಿಂದ ಕೆಳಗಿಳಿದ. ಅವನು ಹಿಡಿದುಕೊಂಡಿದ್ದ ಬಟ್ಟೆ ಅವನ ಜೀವವನ್ನು ರಕ್ಷಿಸಿತು. ಈ ವಿಷಯ ತಿಳಿದ ಜನರು ಪ್ಯಾರಾಚ್ಯೂಟ್ ಬಳಕೆ ಹಾಗೂ ತಯಾರಿಕೆಯ ಬಗ್ಗೆ ಅಧಿಕ ಅಸಕ್ತಿಯನ್ನು ತೋರಿಸತೊಡಗಿದರು. ಆ ದಿನ ಕುಪಾರೆಂಟೋ ಉಪಯೋಗಿಸಿದ ಬಟ್ಟೆ ಸುಮಾರು ಇಪ್ಪತ್ಮೂರು ಅಡಿ ಅಗಲ ಇತ್ತು.
ಆದರೆ ಇದೇ ರೀತಿಯ ಪರಿಸ್ಥಿತಿ ೧೮೩೭ರಲ್ಲಿ ಕಾಕಿಂಗ್ ಎಂಬಾತ ಬಲೂನ್ ನಲ್ಲಿ ಪ್ರಯಾಣ ಮಾಡುವಾಗ ಎದುರಾಯಿತು. ಅವನೂ ಪ್ಯಾರಾಚ್ಯೂಟ್ ಉಪಯೋಗಿಸಿ ಕೆಳಕ್ಕೆ ಹಾರಿದ. ಆದರೆ ಅದು ಅವನ ಜೀವವನ್ನು ಕಾಪಾಡಲಿಲ್ಲ. ಏಕೆ? ಅವನ ಪ್ಯಾರಾಚ್ಯೂಟ್ ನಲ್ಲಿ ಯಾವ ದೋಷ ಇತ್ತು, ಬನ್ನಿ ನೋಡುವ.
ಆ ಸಮಯ ಗಾರ್ನೆರಿನ್ ತಯಾರಿಸಿದ ಪ್ಯಾರಾಚ್ಯೂಟ್ ಬಳಕೆಯಲ್ಲಿತ್ತು. ಅವನ ಪ್ಯಾರಾಚ್ಯೂಟ್ ಕೆಳಗಿಳಿಯುವ ಸಂದರ್ಭದಲ್ಲಿ ಬಹಳವಾಗಿ ಗಾಳಿಯಲ್ಲಿ ಅತ್ತಿಂದಿತ್ತ ತೂಗಾಡುತ್ತಿತ್ತು. ಈ ತೂಗಾಡುವಿಕೆಯನ್ನು ಕಡಿಮೆ ಮಾಡಲು ಕಾಕಿಂಗ್ ಅವನು ತಯಾರಿಸಿದ ಪ್ಯಾರಾಚ್ಯೂಟ್ ನಲ್ಲಿ ಸ್ವಲ್ಪ ಬದಲಾವಣೆ ಮಾಡಿದ. ಆಕಾರವನ್ನು ಬದಲಾಯಿಸಿದ. ಇದರಿಂದ ಅದರ ಆಕಾರ ತಲೆಕೆಳಗಾದ ಕೊಡೆಯ ರೀತಿ ಆಗಿತ್ತು. ಇದರಿಂದ ಗಾಳಿಯನ್ನು ಹಿಡಿದಿಡುವ ಪ್ರಮಾಣ ಕಮ್ಮಿಯಾಗಿತ್ತು. ಆ ಕಾರಣದಿಂದ ಕಾಕಿಂಗ್ ವೇಗವಾಗಿ ಭೂಮಿಗೆ ಅಪ್ಪಳಿಸಿದ ಮತ್ತು ಜೀವ ತೆತ್ತ. ಈ ಅನುಭವದಿಂದ ಪ್ಯಾರಾಚ್ಯೂಟ್ ತಯಾರಿಸುವವರು ಒಂದು ಅಮೂಲ್ಯವಾದ ಪಾಠವನ್ನು ಕಲಿತರು.
ನಂತರದ ದಿನಗಳಲ್ಲಿ ಅಂದರೆ ಇಪ್ಪತ್ತರ ಶತಮಾನದ ಆರಂಭದಲ್ಲಿ ಪ್ಯಾರಚ್ಯೂಟ್ ಬಳಕೆಯು ಬಹುತೇಕ ವಿಮಾನಯಾನದ ಸಂದರ್ಭದಲ್ಲಿ ಅಥವಾ ಯುದ್ಧ ವಿಮಾನಗಳ ಸೇವೆಯಲ್ಲಿ ಬಳಕೆಯಾಗತೊಡಗಿತು. ಮೊದಲನೆಯ ಮಹಾಯುದ್ಧದ ಸಂದರ್ಭದಲ್ಲಿ ಯುದ್ಧ ವಿಮಾನವನ್ನು ಹೊಡೆದುರುಳಿಸಿದಾಗ ಪೈಲೆಟ್ ಪ್ಯಾರಾಚ್ಯೂಟ್ ಸಹಾಯದಿಂದ ಕೆಳಗಿಳಿಯುತ್ತಿದ್ದ. ಆದರೆ ಕೆಲವೊಂದು ತಪ್ಪು ವಿನ್ಯಾಸಗಳಿಂದಾಗಿ ಅದು ಕೆಳಗಿಳಿಯುವ ಸಂದರ್ಭದಲ್ಲಿ ಬಿಡಿಸಿಕೊಳ್ಳುತ್ತಲೇ ಇರಲಿಲ್ಲ, ಈ ಕಾರಣದಿಂದ ನೆಲಕ್ಕಪ್ಪಳಿಸಿ ಹಲವಾರು ಮಂದಿ ಜೀವ ತೆತ್ತರು. ಜರ್ಮನಿ, ರಷ್ಯಾ, ಅಮೇರಿಕಾ, ಗ್ರೇಟ್ ಬ್ರಿಟನ್ ಮೊದಲಾದ ಪ್ರಮುಖ ದೇಶಗಳು ಪ್ಯಾರಾಚ್ಯೂಟ್ ಗಳ ತಯಾರಿಕೆ ಮತ್ತು ಹೊಸ ವಿನ್ಯಾಸಗಳಿಗಾಗಿ ಅಪಾರ ಹಣವನ್ನು ಖರ್ಚು ಮಾಡಿದವು.
ಆ ಸಮಯದಲ್ಲಿ ಪ್ಯಾರಾಚ್ಯೂಟ್ ಬಳಕೆಯ ಬಗ್ಗೆ ವಿಮಾನದ ಪೈಲೆಟ್ ಗಳಲ್ಲಿ ಒಮ್ಮತವಿರಲಿಲ್ಲ. ನಂಬಿಕೆಗೆ ಅರ್ಹವಲ್ಲದ ಪ್ಯಾರಾಚ್ಯೂಟ್ ಬಳಸಿ ಕೆಳಕ್ಕೆ ಬಿದ್ದು ಸಾಯುವುದಕ್ಕಿಂತಲೂ ಅವರು ವಿಮಾನದಲ್ಲೇ ಸಾಯುವುದು ಒಳಿತು ಎಂದು ತೀರ್ಮಾನ ಮಾಡಿದ್ದರು. ನಂತರದ ದಿನಗಳಲ್ಲೂ ಹಲವಾರು ವಿನ್ಯಾಸಗಳು ಬಂದವು. ಅವುಗಳಲ್ಲೂ ಹಗ್ಗಗಳು ಒಂದಕ್ಕೊಂಡು ಸಿಕ್ಕಿಕೊಳ್ಳುವ ದೋಷಗಳು ಕಂಡುಬಂದವು. ಇವುಗಳು ಆಕಾರದಲ್ಲಿ ವಿಪರೀತ ದೊಡ್ಡದಾಗಿದ್ದವು. ಇದನ್ನು ಮಡಚಿಟ್ಟುಕೊಳ್ಳುವುದೇ ದೊಡ್ಡ ಸಮಸ್ಯೆಯಾಗತೊಡಗಿತು.
ಅಮೇರಿಕಾದ ಹಾಫ್ ಮನ್ ಮತ್ತು ಅವನ ತಂಡದವರು ಯಾವಾಗ ಬೇಕೋ ಆಗ ಬಿಚ್ಚುವ ಒಂದು ಪ್ಯಾರಾಚ್ಯೂಟ್ ಅನ್ನು ಅಭಿವೃದ್ಧಿ ಪಡಿಸಿದರು. ಇದನ್ನು ೧೯೧೯ರಲ್ಲಿ ಇರ್ವಿನ್ ಹಾಗೂ ೧೯೨೨ರಲ್ಲಿ ಹ್ಯಾರಿಸ್ ಎಂಬವರು ಯುದ್ಧ ವಿಮಾನದಿಂದ ಹೊರಗೆ ಹಾರಿ ಸುರಕ್ಷಿತವಾಗಿ ನೆಲ ಮುಟ್ಟಿದರು. ಇದರಿಂದಾಗಿ ಉಳಿದ ಪೈಲೆಟ್ ಗಳಿಗೆ ಈ ಪ್ಯಾರಚ್ಯೂಟ್ ಮಹತ್ವ ಅರಿವಾಯಿತು ಮತ್ತು ಬಳಸಲು ಧೈರ್ಯವೂ ಬಂತು. ೧೯೨೦ರಲ್ಲಿ ಅಮೇರಿಕಾದ ಜನರಲ್ ವಿಲಿಯಂ ಮಿಶೆಲ್ ಪ್ಯಾರಾಚ್ಯೂಟ್ ಗೆ ಉಜ್ವಲ ಭವಿಷ್ಯವಿದೆ ಎಂದು ನುಡಿದ್ದರು. ಇದು ಮುಂದಿನ ದಿನಗಳಲ್ಲಿ ನಿಜವಾಯಿತು.
ಭಾರತದಲ್ಲಿ ೧೯೪೧ರಲ್ಲಿ ಪ್ಯಾರಾಚ್ಯೂಟ್ ಪಡೆ ಪ್ರಾರಂಭವಾಯಿತು. ೧೯೪೪ರಲ್ಲಿ ಜಪಾನೀಯರು ಇಂಫಾಲ್ ಮೇಲೆ ದಾಳಿ ಮಾಡಿದಾಗ, ಗೋವಾ ವಿಮೋಚನಾ ಸಮರದಲ್ಲಿ ಹಾಗೂ ೧೯೭೧ರ ಬಾಂಗ್ಲಾದೇಶದ ಯುದ್ಧದಲ್ಲಿ ಈ ಪ್ಯಾರಾಚ್ಯೂಟ್ ಪಡೆಯ ಪಾತ್ರ ಮಹತ್ತರವಾಗಿತ್ತು.
ಈಗಂತೂ ಪ್ಯಾರಾಚ್ಯೂಟ್ ಇಲ್ಲದ ವಿಮಾನ ಅಥವಾ ಯುದ್ಧ ವಿಮಾನ, ಹೆಲಿಕಾಪ್ಟರ್ ಗಳನ್ನು ಕಲ್ಪಿಸಲು ಸಾಧ್ಯವಿಲ್ಲ. ಹಲವಾರು ಮಂದಿಯ ಪರಿಶ್ರಮ ಹಾಗೂ ಬಲಿದಾನದಿಂದ ಈಗ ನಾವು ಅತ್ಯಂತ ಉನ್ನತ ಮಟ್ಟದ ಪ್ಯಾರಾಚ್ಯೂಟ್ ಬಳಸುತ್ತಿದ್ದೇವೆ. ಸರಿಯಾದ ಗಾತ್ರ ಮತ್ತು ಕಡಿಮೆ ತೂಕದ ಪ್ಯಾರಾಚ್ಯೂಟ್ ಗಳು ಬಳಕೆಗೆ ಬಂದಿವೆ. ಪ್ಯಾರಾಚ್ಯೂಟ್ ವಿನ್ಯಾಸ ಹಾಗೂ ಅದು ಬಿಡಿಸಿಕೊಳ್ಳುವ ವಿಧಾನಗಳ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಿರುವೆ.
(ಆಧಾರ)
ಚಿತ್ರ ೧. ಪ್ಯಾರಾಚ್ಯೂಟ್ ಹಾಗೂ ಚಿತ್ರ ೨. ಬಿಸಿ ಗಾಳಿಯ ಬಲೂನು (ಹಾಟ್ ಏರ್ ಬಲೂನ್)
ಚಿತ್ರ ಕೃಪೆ: ಅಂತರ್ಜಾಲ ತಾಣ