ಪ್ಯಾರಾನಾರ್ಮಲ್

ಪ್ಯಾರಾನಾರ್ಮಲ್

ಪುಸ್ತಕದ ಲೇಖಕ/ಕವಿಯ ಹೆಸರು
ಗುರುರಾಜ ಕೋಡ್ಕಣಿ, ಯಲ್ಲಾಪುರ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೧೭೫.೦೦, ಮುದ್ರಣ : ೨೦೨೫

ಕಥೆಗಾರ ಗುರುರಾಜ ಕೋಡ್ಕಣಿ ಬರೆದ ‘ಪ್ಯಾರಾನಾರ್ಮಲ್’ ಎನ್ನುವ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ತುಂಬ ಹಿಂದಿನಿಂದಲೂ ಅತಿಮಾನುಷತೆಯ ಬಗ್ಗೆ ಕತೆಗಳು ಇದ್ದವಾದರೂ ಆಗ ಸರಿಯಾದ ಸಾಕ್ಷಿಗಳಿಲ್ಲದೇ ಅವೆಲ್ಲವೂ ಕೇವಲ ಕತೆಗಳಾಗಿ ಉಳಿದು ಹೋಗಿದ್ದವು. ಆದರೆ ಈಗ ಹಾಗಲ್ಲ, ಪ್ಯಾರಾನಾರ್ಮಲ್ ಕ್ಷೇತ್ರವೆನ್ನುವುದು ಸಾಕಷ್ಟು ಬೆಳವಣಿಗೆ ಕಂಡಿದೆ. ತಾರ್ಕಿಕ ವಿಶ್ಲೇಷಣೆ, ಸಂಶೋಧನಾ ಸಾಮರ್ಥ್ಯ ಮತ್ತು ಅಧ್ಯಯನಗಳಿಂದಾಗಿ ಒಂದು ಕಾಲಕ್ಕೆ ಕೇವಲ ಭ್ರಮೆಯಷ್ಟೇ ಎನ್ನಿಸುವಂತಿದ್ದ ಕೆಲವು ವಿಷಯಗಳು ಈಗ, ಕೇವಲ ಭ್ರಮೆಯಲ್ಲ, ಭ್ರಮೆಯನ್ನು ಮೀರಿದ್ದು ಇನ್ನೇನೋ ಇದೆ ಎನ್ನುವ ಭಾವನೆಯನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿವೆ. ಸರಿಯಾಗಿ ಗಮನಿಸಿದರೆ ಪ್ಯಾರಾನಾರ್ಮಲ್ ಕ್ಷೇತ್ರ ಕೂಡ, ಸೈಕಾಲಜಿ, ಭೌತಶಾಸ್ತ್ರ ಪರಿಸರ ವಿಜ್ಞಾನ ಮತ್ತು ಮನುಷ್ಯ ಗ್ರಹಿಕೆಯ ಭಾಗವೇ ಎನ್ನುವುದು ಅರ್ಥವಾಗುವುದು ಕಷ್ಟವೇನಲ್ಲ, ಎಲ್ಲಕ್ಕಿಂತ ಹೆಚ್ಚಾಗಿ ಈ ಬಗೆಯ ಓದು, ಓದುಗನ ಕಲ್ಪನಾ ಶಕ್ತಿಯನ್ನು ಒರೆಗೆ ಹಚ್ಚುತ್ತದೆ. ಓದುಗನ ಆಲೋಚನಾ ಶಕ್ತಿಯನ್ನು ವೃದ್ಧಿಸುತ್ತಲೇ ಈ ರೀತಿಯ ವಸ್ತುಗಳೆಡೆಗಿನ ಸಿನಿಕತನವನ್ನೂ ಸಹ ಕಡಿಮೆ ಮಾಡುತ್ತವೆ. ಹಾಗೆ ಮಾಡುವುದರ ಮೂಲಕ ಮುಕ್ತ ಮನಸ್ಸಿನಿಂದ ಈ ಕ್ಷೇತ್ರದ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಅನಾವಶ್ಯಕವಾಗಿ ಭಯ ಹುಟ್ಟಿಸುವ ವಿಷಯಗಳು ಅರಿವಿಗೆ ಸಿಕ್ಕುತ್ತವೆ. ಇಲ್ಲಿ ನಮ್ಮನ್ನೂ ಮೀರಿದ್ದು ಇನ್ನೇನೋ ಇದೆ ಎನ್ನುವುದು ಆರಿವಾಗಿ ಭಯ ಕಡಿಮೆಯಾಗಿ ಆತ್ಮ ವಿಶ್ವಾಸ ಹೆಚ್ಚುತ್ತದೆ ಎಂದರೂ ಅತಿಶಯೋಕ್ತಿಯಲ್ಲ.

ಈ ಕಥಾ ಸಂಕಲನ ಬಗ್ಗೆ ಕಥೆಗಾರ ಗುರುರಾಜ ಕೋಡ್ಕಣಿ ಹೇಳುವುದು ಹೀಗೆ… “ಅತ್ಯಂತ ಕಡಿಮೆ ಶಬ್ದಗಳನ್ನು ಬಳಸಿ ಬರೆಯುವ ಕಥಾಪ್ರಕಾರಕ್ಕೆ ಇಂಗ್ಲೀಷಿನಲ್ಲಿ ’ಫ್ಲಾಶ್ ಫಿಕ್ಷನ್’ ಎಂದು ಹೆಸರು. ಬರೆದ ನಾಲ್ಕೇ ನಾಲ್ಕು ಸಾಲುಗಳಲ್ಲಿ ಪರಿಣಾಮಕಾರಿಯಾದ ಕತೆಯನ್ನು ಹೇಳಿ ಓದುಗನಲ್ಲೊಂದು ಚಂದದ ಭಾವವನ್ನು ಮೀಟಿ, ನೆನಪಿನಲ್ಲುಳಿದುಹೋಗುವ ಈ ಕಥಾ ಪ್ರಕಾರ ಸಾಹಿತ್ಯದ ನನ್ನಿಷ್ಟದ ಪ್ರಕಾರಗಳಲ್ಲೊಂದು. ಕನ್ನಡದಲ್ಲಿ ಈ ಬಗೆಯ ಕತೆಗಳ ರಚನೆ ಆರಂಭವಾದ ಕಾಲಮಾನದ ಮಾಹಿತಿಯಿಲ್ಲವಾದರೂ ‘ನ್ಯಾನೋ ಕತೆಗಳು’ ಎನ್ನುವ ಹೆಸರಿನಿಂದ ಅವು ನಮಗೆ ಹೆಚ್ಚು ಚಿರಪರಿಚಿತ. ನಮ್ಮಲ್ಲಿ ಅನೇಕ ಬರಹಗಾರರು ನ್ಯಾನೋ ಕತೆಗಳನ್ನು ರಚಿಸುವಲ್ಲಿ ಸಿದ್ಧಹಸ್ತರು. ವಾತ್ಸಲ್ಯ, ಪ್ರೀತಿ, ಕರುಣೆ ವ್ಯಂಗ್ಯ, ನಿರಾಸೆಯಂತಹ ಭಾವಗಳನ್ನು ವಸ್ತುವಾಗಿ ಬಳಸಿಕೊಂಡು ನ್ಯಾನೋ ಕತೆಗಳನ್ನು ರಚಿಸಿದವರೇ ಹೆಚ್ಚು. ಆದರೆ ವೈಯಕ್ತಿಕವಾಗಿ ನನಗೆ ಸುಲಭಕ್ಕೆ ಈ ಶಾಂತಭಾವಗಳು ಒಗ್ಗದ್ದರಿಂದ ಮತ್ತು ಹಾರರ್ ನನ್ನಿಷ್ಟದ ವಿಷಯವಾಗಿರುವುದರಿಂದ ನಾನು ಭಯವನ್ನೇ ನನ್ನ ಕತೆಗಳಿಗೆ ಮೂಲವಸ್ತುವನ್ನಾಗಿ ಬಳಸಿಕೊಂಡೆ. ಅದೊಮ್ಮೆ ಸುಮ್ಮನೇ ತಮಾಷೆಗೆಂದು ಸಾಮಾಜಿಕ ಜಾಲತಾಣದಲ್ಲಿ ಸಣ್ಣದ್ದೊಂದು ಮೂರು ಸಾಲಿನ ಹಾರರ್ ಕತೆಯೊಂದನ್ನು ಬರೆದಾಗ ಸ್ನೇಹಿತರು ಚೆನ್ನಾಗಿದೆಯೆಂದು ಹೊಗಳಿ ಬೆನ್ನುತಟ್ಟಿದ್ದೇ ನನಗೆ ಸಾಕಾಗಿತ್ತು. ಒಂದರ ನಂತರ ಇನ್ನೊಂದು, ಇನ್ನೊಂದರ ನಂತರ ಮತ್ತೊಂದು ಎನ್ನುತ್ತ ಸಾಲು ಸಾಲಾಗಿ ಕತೆಗಳನ್ನು ಬರೆಯುತ್ತ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದರೆ, ಅದಕ್ಕೊಂದು ಓದುವ ವರ್ಗವೇ ಸೃಷ್ಟಿಯಾಗಿಹೋಗಿದೆಯೆನ್ನುವುದು ನನಗೆ ತೀರ ಇತ್ತೀಚಿನವರೆಗೂ ಅರಿವಾಗಿರಲಿಲ್ಲ. ದಿನಕ್ಕೊಂದು ಕತೆಯೆನ್ನುವಂತೆ ಬರೆದು ನನ್ನ ಫೇಸ್‍ಬುಕ್ಕಿನ ಗೋಡೆಯ ಮೇಲೆ ಹಾಕುತ್ತಿದ್ದ ನಾನು ಅಪರೂಪಕ್ಕೊಮ್ಮೆ ಬರೆಯದೇ ಹೋದಾಗ ಎಷ್ಟೋ ಸ್ನೇಹಿತರು ’ಇವತ್ತು ಕತೆ ಇಲ್ಲವಾ’ಎಂದು ಮೊಬೈಲಿಗೆ, ಇನ್‍ಬಾಕ್ಸಿಗೆ ಸಂದೇಶ ಕಳುಹಿಸುತ್ತಿದ್ದರು. ಕೆಲವು ಗೆಳೆಯರಂತೂ,’ ಇತ್ತೀಚೆಗೆ ನೀನು ಕತೆ ಬರೆಯುವುದನ್ನು ನಿಲ್ಲಿಸಿಯೇ ಬಿಟ್ಟಿದ್ದೀಯಾ, ಸಕತ್ ಸೋಮಾರಿಯಾಗಿದ್ದಿಯಾ’ ಎಂದು ಹಿತವಾಗಿ ಗದರಿ ಪುನ: ಬರೆಯುವಂತೆ ಒತ್ತಾಯಿಸಿದ್ದೂ ಉಂಟು. ಆಗೆಲ್ಲ ಮೈ ಕೊಡವಿ ತಲೆಗೊಂದಷ್ಟು, ಲ್ಯಾಪ್‍ಟಾಪಿನ ಕೀಬೋರ್ಡಿಗೊಂದಷ್ಟು ಕೆಲಸ ಕೊಟ್ಟು ಹೊಸಹೊಸ ಕತೆಗಳನ್ನು ರಚಿಸಿದ್ದಿದೆ. ಹಾಗೆ ರಚಿಸುತ್ತ ರಚಿಸುತ್ತ ಅದ್ಯಾವಾಗ ಕತೆಗಳು ನೂರರ ಹೊಸ್ತಿಲಿಗೆ ಬಂದು ನಿಂತವೋ ನನಗೆ ತಿಳಿಯದು. ನನಗರಿವಾಗುವ ಸಮಯಕ್ಕೆ ಕತೆಗಳು ಪುಸ್ತಕ ರೂಪದಲ್ಲಿ ಹೊರಬರಲು ತಯಾರಾಗಿ ನಿಂತಿವೆ.

ಪುಸ್ತಕ ಹೊರತರುವ ಕಲ್ಪನೆಯೂ ಇರದಿದ್ದ ನನಗೆ ಪುಸ್ತಕದ ಪ್ರಕಟಣೆಯೆಂದಾಗ ಪುಸ್ತಕದ ಬಗ್ಗೆ ಅನುಭವಿ ಬರಹಗಾರರೊಬ್ಬರಿಂದ ನಾಲ್ಕು ಸಾಲುಗಳನ್ನು ಬರೆಯಿಸಬೇಕೆನ್ನಿಸಿತ್ತು. ಹಾಗೊಂದು ಯೋಚನೆ ಬರುತ್ತಿದ್ದಂತೆ ಮೊದಲು ನೆನಪಾದ ಹೆಸರೇ ಗುರುಸಮಾನರಾದ ಎಸ್.ಎನ್ ಸೇತುರಾಮ್‍ರದ್ದು. ಅವರು ಅನುಭವಿಯೂ ಹೌದು, ಅನುಭಾವಿಯೂ ಹೌದು. ಮನುಷ್ಯನ ಸೂಕ್ಷ್ಮ ಸಂವೇದನೆಗಳನ್ನು ವಿವರಿಸುವ, ಓದುಗನನ್ನು ಗಾಢವಾಗಿ ಆವರಿಸಿಕೊಳ್ಳುವ ಇವರ ’ನಾವಲ್ಲ’ಕಥಾ ಸಂಕಲನವನ್ನೋದಿದ ಮೇಲೆ ನನ್ನ ಪುಸ್ತಕಕ್ಕೆ ಮುನ್ನುಡಿಯನ್ನು ಬರೆಯಲು ಇವರು ಒಪ್ಪಿಯಾರೇ ಎನ್ನುವ ಅನುಮಾನ ನನ್ನನ್ನು ಕಾಡಿದಂತೂ ಹೌದು.ಹಿಂಜರಿಯುತ್ತಲೇ ’ಸರ್ ಹೀಗೊಂದು ಮುನ್ನುಡಿ ಆಗಬಹುದೇ ತಮ್ಮಿಂದ..’? ಎಂದಾಕ್ಷಣವೇ,’ ಯಾಕಾಗಬಾರದು..’? ನನಗೂ ಇದೊಂದು ಹೊಸ ಪ್ರಯತ್ನ ಬರೀತಿನಿ’ಎಂದು ಒಪ್ಪಿಕೊಂಡರು ಗುರುಗಳು. ಇವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎನ್ನುವುದಕ್ಕಿಂತ ಗುರುಗಳಾದ ಎಸ್.ಎನ್ ಸೇತುರಾಮ್‍ರವರ ಆಶೀರ್ವಾದ ಈ ಶಿಷ್ಯನ ಮೇಲಿರಲಿ ಎಂದು ಕೇಳಿಕೊಳ್ಳುವುದು ಹೆಚ್ಚು ಸೂಕ್ತವಾದೀತು. ಉಳಿದಂತೆ ಕೇಳಿದ ತಕ್ಷಣವೇ ಬೆನ್ನುಡಿ ಬರೆದುಕೊಟ್ಟ ’ಕರ್ನಾಟಕದ ರೀಡಿಂಗ್ ಮೆಷಿನ್’ಎಂದೇ ಪ್ರಸಿದ್ಧರಾಗಿರುವ ಸ್ನೇಹಿತ ಪ್ರಶಾಂತ್ ಭಟ್ ಗೂ ನಾನು ಚಿರಋಣಿ.

ಇಲ್ಲಿ ನೂರಕ್ಕೂ ಮಿಕ್ಕಿ ಕತೆಗಳಿವೆ. ಎಲ್ಲವೂ ಕಲ್ಪನೆಗಳು. ಇಲ್ಲಿನ ಕತೆಗಳಲ್ಲಿ ನಾನು ಬದುಕಿನ ಯಾವುದೋ ಫಿಲಾಸಫಿಯನ್ನು ವಿವರಿಸುವ ಪ್ರಯತ್ನ ಮಾಡಿಲ್ಲ. ನಮ್ಮನ್ನು ಕಾಡುವ ದೈನಂದಿನ ಹಲವು ಜಂಜಡಗಳನ್ನು ತಾತ್ಕಾಲಿಕವಾಗಿ ಮರೆಸುವಂತೆ ಮಾಡುವ ಸಣ್ಣದ್ದೊಂದು ಮನೋರಂಜನೆಯನ್ನು ಬರಹ ರೂಪದಲ್ಲಿ ನೀಡುವ ಪ್ರಯತ್ನವೇ ಈ ಪುಸ್ತಕ. ರಾತ್ರಿಯ ಊಟ ಮುಗಿಸಿ, ಬೆಡ್‍ರೂಮಿನ ದೀಪದಡಿ ಕುಳಿತು ಪುಸ್ತಕದ ಬಾಗಿಲು ತೆರೆದರೆ ಭರಪೂರ ಮನೋರಂಜನೆಯಂತೂ ಗ್ಯಾರಂಟಿ. ಸುಮ್ಮನೇ ಓದಿಕೊಳ್ಳಿ. ಸಣ್ಣಗೆ ಚುರುಕು ಮುಟ್ಟಿಸುವ ಭಯದೊಂದಿಗೆ, ಥ್ರಿಲ್ ಪಡೆದುಕೊಳ್ಳುವ ಸಂತಸ ನಿಮ್ಮದಾಗಲಿ.” ಎಂದಿದ್ದಾರೆ.