ಪ್ಯಾರಾ ಒಲಂಪಿಕ್ಸ್ ಹುಟ್ಟಲು ಕಾರಣವೇನು?
ಈಗ ತಾನೇ ಪ್ಯಾರಿಸ್ ಒಲಂಪಿಕ್ಸ್ ಕ್ರೀಡಾ ಕೂಟ ಮುಕ್ತಾಯ ಕಂಡಿದೆ. ಭಾರತಕ್ಕೆ ಸಮಾಧಾನಕರವಾದ ಫಲ ದೊರೆತಿದೆ. ಕೂದಲೆಳೆಯ ಅಂತರದಲ್ಲಿ ಮೂರು-ನಾಲ್ಕು ಪದಕಗಳು ತಪ್ಪಿಹೋಗಿವೆ. ಈ ವರ್ಷ ಬಂಗಾರ ಸಿಗಲಿಲ್ಲ ಎನ್ನುವ ಬೇಸರವೊಂದು ಇದ್ದೇ ಇದೆ. ವಿಶೇಷ ಚೇತನ ವ್ಯಕ್ತಿಗಳಿಗಾಗಿ ಪ್ಯಾರಿಸ್ ನಲ್ಲೇ ಪ್ಯಾರಾ ಒಲಂಪಿಕ್ಸ್ ಕಳೆದ ಬುಧವಾರ (ಆಗಸ್ಟ್ ೨೮) ದಂದು ಪ್ರಾರಂಭವಾಗಿದೆ. ಭಾರತದ ಹಲವಾರು ಮಂದಿ ಕ್ರೀಡಾಳುಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಕಳೆದ ೨೦೨೦ರಲ್ಲಿ ನಮ್ಮ ದೇಶಕ್ಕೆ ೫ ಚಿನ್ನವೂ ಸಹಿತ ೧೯ ಪದಕಗಳು ದೊರೆತಿವೆ. ಈ ವರ್ಷವೂ ಇನ್ನಷ್ಟು ಪದಕಗಳು ನಮ್ಮ ಕ್ರೀಡಾಳುಗಳ ಕೊರಳನ್ನು ಅಲಂಕರಿಸಲಿ ಎಂದು ಹಾರೈಸುತ್ತಾ ಪ್ಯಾರಾ ಒಲಂಪಿಕ್ಸ್ ಹುಟ್ಟು, ಸಾಗಿ ಬಂದ ಹಾದಿ, ಇಲ್ಲಿ ಆಡಲಾಗುವ ಆಟಗಳ ಬಗ್ಗೆ ತಿಳಿದುಕೊಳ್ಳುವ…
ಪ್ಯಾರಾ ಒಲಂಪಿಕ್ಸ್ ಹುಟ್ಟು: ಪ್ಯಾರಾ ಒಲಂಪಿಕ್ಸ್ ಹುಟ್ಟಿಕೊಂಡದ್ದು ವಿಶ್ವ ಯುದ್ಧದ ಗಾಯಾಳುಗಳಿಗಾಗಿ. ಯುದ್ಧದಲ್ಲಿ ಹಲವಾರು ಯೋಧರು ತಮ್ಮ ಅಂಗಾಂಗಗಳನ್ನು ಕಳೆದುಕೊಳ್ಳುತ್ತಾರೆ. ಅವರಿಗೆ ಯಾವುದೇ ಕ್ರೀಡೆಗಳಲ್ಲಿ ಆಡುವುದು ಅಸಾಧ್ಯ. ಈ ಕೊರಗು ಅವರಲ್ಲಿ ಸದಾ ಇರುತ್ತದೆ ಎಂಬುದನ್ನು ಗಮನಿಸಿದ ಜರ್ಮನಿಯ ನರರೋಗ ತಜ್ಞ ಸರ್ ಲಡ್ಡಿಂಗ್ ಗಟ್ ಮನ್ ಈ ಗಾಯಗೊಂಡ ವ್ಯಕ್ತಿಗಳಿಗಾಗಿ ಒಲಂಪಿಕ್ಸ್ ಮಾದರಿಯಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿದರು. ಇದು ನಡೆದದ್ದು ಎರಡನೇ ವಿಶ್ವ ಯುದ್ಧದ ಬಳಿಕ. ಆ ಸಮಯ ಬ್ರಿಟನ್ ನ ಬಹುತೇಕ ಸೈನಿಕರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಬ್ರಿಟನ್ ನ ಮಿತ್ರದೇಶಗಳ ಗಾಯಗೊಂಡ ಸೈನಿಕರೂ ಲಂಡನ್ ನಿಂದ ೬೦ ಕಿ ಮೀ ದೂರವಿರುವ ಸ್ಟೋಕ್ ಮ್ಯಾಂಡವಿಲ್ಲೆ ಎಂಬ ಪ್ರದೇಶದಲ್ಲಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಅವರಲ್ಲಿ ಅನೇಕರು ತಮ್ಮ ಬೆನ್ನು ಮೂಳೆಯನ್ನು ಕಳೆದುಕೊಂಡಿದ್ದರು. ಅವರನ್ನೆಲ್ಲಾ ಶ್ರೀಘ್ರ ಗುಣಮುಖರನ್ನಾಗಿಸುವ ಅಗತ್ಯವಿತ್ತು. ಆದರೆ ಅವರ ಮಾನಸಿಕ ಸ್ಥಿತಿ ತುಂಬಾ ಕುಗ್ಗಿ ಹೋಗಿತ್ತು. ಅವರಲ್ಲಿ ಲವಲವಿಕೆಯನ್ನು ತುಂಬಲು ಗಟ್ ಮನ್ ಸ್ಪರ್ಧೆಗಳನ್ನು ಏರ್ಪಡಿಸಿದರು. ಇದರಿಂದ ಪ್ರೇರಣೆಗೊಂಡ ಇತರೆ ದೇಶಗಳೂ ಅಂಗವಿಕಲರಿಗಾಗಿ ಸ್ಪರ್ಧೆಗಳನ್ನು ಏರ್ಪಡಿಸಿದವು. ೧೮೬೦ರಲ್ಲೇ ದೃಷ್ಟಿ ಹೀನರಿಗಾಗಿ ಸ್ಪರ್ಧೆಗಳು ನಡೆದಿದ್ದರೂ ಗಟ್ ಮನ್ ಏರ್ಪಡಿಸಿದ ಸ್ಪರ್ಧೆಗಳ ಬಹು ವಿಭಾಗಗಳು ಬಹುಬೇಗನೇ ಜನಪ್ರಿಯವಾದವು. ಈ ಕ್ರೀಡಾಕೂಟವು ‘ಸ್ಟೋಕ್ ಮ್ಯಾಂಡೆವಿಲ್ಲೆ ಗೇಮ್ಸ್' ಎಂದೇ ಖ್ಯಾತಿಯನ್ನು ಪಡೆದುಕೊಂಡಿತು. ಇದು ಅಧಿಕೃತ ಪ್ಯಾರಾ ಒಲಂಪಿಕ್ಸ್ ಕೂಟಕ್ಕೆ ಸ್ಪೂರ್ತಿಯಾಯಿತು.
ಮೊದಲ ಅಧಿಕೃತ ಪ್ಯಾರಾ ಒಲಂಪಿಕ್ಸ್: ೧೯೪೮ರಲ್ಲಿ ಪ್ರಾರಂಭವಾದ ಸ್ಟೋಕ್ ಮ್ಯಾಂಡೆವಿಲ್ಲೆ ಗೇಮ್ಸ್ ಕ್ರಮೇಣ ಜಾಗತಿಕ ಕ್ರೀಡಾಳುಗಳ ಕೂಡುವಿಕೆಯಿಂದ ನಿರಂತರ ೮ ಆವೃತ್ತಿಗಳನ್ನು ಕಂಡಿತು. ೧೯೬೦ರಲ್ಲಿ ನಡೆದ ೯ ನೇ ಆವೃತ್ತಿಗೆ ಅಧಿಕೃತವಾಗಿ ಪ್ಯಾರಾ ಒಲಂಪಿಕ್ಸ್ ಕ್ರೀಡಾ ಕೂಟ ಎಂದು ನಾಮಕರಣ ಮಾಡಲಾಯಿತು. ೧೯೬೦ರಲ್ಲಿ ಬೇಸಿಗೆಯ ಒಲಂಪಿಕ್ಸ್ ಕ್ರೀಡಾ ಕೂಟ ಜರುಗಿದ ೬ ದಿನಗಳ ಬಳಿಕ ಪ್ಯಾರಾ ಒಲಂಪಿಕ್ಸ್ ಕೂಟಕ್ಕೆ ಚಾಲನೆ ನೀಡಲಾಯಿತು. ಆ ಬಳಿಕ ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಬೇಸಿಗೆಯ ಒಲಂಪಿಕ್ಸ್ ಆಟಗಳ ಬಳಿಕ ಪ್ಯಾರಾ ಒಲಂಪಿಕ್ಸ್ ಆಟಗಳನ್ನು ನಡೆಸಲಾಗುತ್ತದೆ. ೧೯೭೬ರಿಂದ ಚಳಿಗಾಲದ ಒಲಂಪಿಕ್ಸ್ ಬಳಿಕ ಚಳಿಗಾಲದ ಪ್ಯಾರಾ ಒಲಂಪಿಕ್ಸ್ ಕ್ರೀಡಾ ಕೂಟವನ್ನೂ ಪ್ರಾರಂಭಿಸಲಾಗಿದ್ದು, ಈಗಾಗಲೇ ೧೩ ಆವೃತ್ತಿಗಳನ್ನು ಕಂಡಿದೆ.
ಒಲಂಪಿಕ್ಸ್ ನ ಅಧಿಕೃತ ಲೋಗೋದಲ್ಲಿ ಐದು ವೃತ್ತಗಳಿವೆಯಾದರೆ, ಪ್ಯಾರಾ ಒಲಂಪಿಕ್ಸ್ ನಲ್ಲಿ ಮೂರು ಅರ್ಧ ಚಂದ್ರಾಕೃತಿಯ ಲೋಗೋವನ್ನು ಬಳಕೆ ಮಾಡಲಾಗುತ್ತದೆ. ಒಲಂಪಿಕ್ಸ್ ವೃತ್ತಗಳಲ್ಲಿ ಐದು ಬಣ್ಣಗಳಿದ್ದರೆ, ಪ್ಯಾರಾ ಒಲಂಪಿಕ್ಸ್ ನ ಅರ್ಧ ಚಂದ್ರಾಕೃತಿಯಲ್ಲಿ ಕೆಂಪು, ನೀಲಿ ಮತ್ತು ಹಸುರು ಬಣ್ಣಗಳಿರುತ್ತವೆ. ಜಗತ್ತಿನ ಬಹುತೇಕ ರಾಷ್ಟ್ರಗಳ ಧ್ವಜದ ಬಣ್ಣವನ್ನು ಇದು ಪ್ರತಿಪಾದಿಸುತ್ತದೆ. ಈ ಲೋಗೋ ಚಲನೆಯ ಸಂಕೇತವಾಗಿದ್ದು, ಪ್ಯಾರಾ ಒಲಂಪಿಕ್ಸ್ ನ ಆಟಗಾರರ ಸ್ಪೂರ್ತಿಗಾಗಿ ಇದನ್ನು ಬಳಸಿಕೊಳ್ಳಲಾಗಿದೆ..
ಸಾಮಾನ್ಯ ಒಲಂಪಿಕ್ಸ್ ಮತ್ತು ಪ್ಯಾರಾ ಒಲಂಪಿಕ್ಸ್ ನಡುವಿನ ವ್ಯತ್ಯಾಸ: ಈ ಎರಡು ಕ್ರೀಡಾ ಕೂಟಗಳಲ್ಲಿ ಬಹಳ ವ್ಯತ್ಯಾಸಗಳಿರುತ್ತವೆ. ಹಾಗೆಯೇ ಬೇರೆಯೇ ರೀತಿಯಾದ ನಿಯಮಗಳೂ ಇರುತ್ತವೆ. ಒಲಂಪಿಕ್ಸ್ ನಲ್ಲಿ ಸಾಮಾನ್ಯ ಕ್ರೀಡಾಳುಗಳು ಸ್ಪರ್ಧಿಸಿದರೆ, ಪ್ಯಾರಾ ಒಲಂಪಿಕ್ಸ್ ನಲ್ಲಿ ದೈಹಿಕ ನ್ಯೂನತೆಯನ್ನು ಹೊಂದಿದ ಕ್ರೀಡಾಪಟುಗಳು ಮಾತ್ರ ಭಾಗವಹಿಸಬಹುದು. ಪ್ಯಾರಾ ಒಲಂಪಿಕ್ಸ್ ನಲ್ಲಿ ಹತ್ತು ವಿಭಾಗಗಳಲ್ಲಿ ಅವರವರ ನ್ಯೂನತೆಗೆ ಅನುಸಾರವಾಗಿ ಸ್ಪರ್ಧೆ ಮಾಡಬಹುದು. ದುರ್ಬಲ ಸ್ನಾಯು ಶಕ್ತಿ, ನಿಷ್ಕ್ರಿಯ ಅಂಗಗಳ ಚಲನೆ, ಅಂಗಗಳ ಕೊರತೆ, ಕಾಲಿನ ಉದ್ದದಲ್ಲಿನ ವ್ಯತ್ಯಾಸ, ಕುಳ್ಳಗಿನ ದೇಹ, ಹೈಪರ್ಟೋನಿಯಾ ಅಂದರೆ ಸ್ನಾಯುಗಳಲ್ಲಿನ ವ್ಯತ್ಯಾಸ, ಅಟಾಕ್ಸಿಯಾ ಅಂದರೆ ಸ್ನಾಯುಗಳ ನಿಯಂತ್ರಣದಲ್ಲಿನ ಕೊರತೆ, ಅಥೆಟೋಸಿಸ್ ಅಂದರೆ ನಿಧಾನಗತಿಯ ಸ್ನಾಯುಗಳ ಚಲನೆ, ದೃಷ್ಟಿ ದೌರ್ಬಲ್ಯತೆ, ಬೌದ್ಧಿಕ ದೌರ್ಬಲ್ಯತೆ ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಪ್ಯಾರಾ ಒಲಂಪಿಕ್ಸ್ ನ ಕ್ರೀಡಾಳುಗಳು ಸ್ಪರ್ಧಿಸಬಹುದು.
ಪ್ಯಾರಾ ಒಲಂಪಿಕ್ಸ್ ಆಟಗಳು: ಸಾಮಾನ್ಯ ಒಲಂಪಿಕ್ಸ್ ನಲ್ಲಿರುವ ಬಹುತೇಕ ಆಟಗಳು ಪ್ಯಾರಾ ಒಲಂಪಿಕ್ಸ್ ನಲ್ಲಿರುತ್ತವೆ. ಆದರೆ ಅವರವರ ನ್ಯೂನತೆಗಳಿಗೆ ಅನುಸಾರವಾಗಿ ವಿಂಗಡನೆ ಮಾಡಿರುತ್ತಾರೆ. ಪ್ಯಾರಾ ಆರ್ಚರಿ, ಪ್ಯಾರಾ ಬ್ಯಾಡ್ಮಿಂಟನ್, ಪ್ಯಾರಾ ಅತ್ಲೆಟಿಕ್ಸ್, ದೃಷ್ಟಿಹೀನರಿಗಾಗಿ ಬ್ಲೈಂಡ್ ಫುಟ್ ಬಾಲ್, ಪ್ಯಾರಾ ದೋಣಿ, ಪ್ಯಾರಾ ಸೈಕ್ಲಿಂಗ್, ಗೋಲ್ ಬಾಲ್, ಪ್ಯಾರಾ ಜೂಡೋ, ಪ್ಯಾರಾ ರೋವಿಂಗ್, ಪ್ಯಾರಾ ಸ್ವಿಮ್ಮಿಂಗ್, ಪ್ಯಾರಾ ಪವರ್ ಲಿಫ್ಟಿಂಗ್, ಪ್ಯಾರಾ ಶೂಟಿಂಗ್, ವೀಲ್ ಚೇರ್ ಬಾಸ್ಕೆಟ್ ಬಾಲ್, ವೀಲ್ ಚೇರ್ ರಗ್ಬಿ, ವೀಲ್ ಚೇರ್ ಟೆನಿಸ್, ಪ್ಯಾರಾ ಟೇಬಲ್ ಟೆನಿಸ್, ಸಿಟ್ಟಿಂಗ್ ವಾಲಿಬಾಲ್ ಮುಂತಾದ ಅನೇಕ ಕ್ರೀಡೆಗಳಿವೆ.
ಚಿನ್ನ ಗೆದ್ದ ಭಾರತೀಯರು: ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಕ್ರೀಡಾಪಟು ಮುರಳಿಕಾಂತ್ ಪೇಟ್ಕರ್. ಇವರು ೫೦ ಮೀ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಮೊದಲಿಗರಾಗಿದ್ದರು. ಇವರು ಚಿನ್ನ ಗೆದ್ದದ್ದು ೧೯೭೨ರ ಹೈಡೆಲ್ಬರ್ಗ್ ಪ್ಯಾರಾ ಒಲಂಪಿಕ್ಸ್ ಕ್ರೀಡಾ ಕೂಟದಲ್ಲಿ. ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರಿಗೆ ಯುದ್ಧವೊಂದರಲ್ಲಿ ಗಾಯವಾಗಿ ತಮ್ಮ ಸೊಂಟದ ಕೆಳಗಿನ ಚಲನೆಯನ್ನು ಕಳೆದುಕೊಳ್ಳುತ್ತಾರೆ. ಈ ಅಪಘಾತ ನಡೆಯುವುದಕ್ಕೆ ಮೊದಲು ಅವರು ಓರ್ವ ಬಾಕ್ಸರ್ ಆಗಿದ್ದರು. ತಮ್ಮ ಅಂಗವೈಕಲ್ಯವನ್ನು ಮೆಟ್ಟಿ ನಿಂತ ಇವರು ಈಜು ಪಟುವಾಗಿ ರೂಪುಗೊಂಡದ್ದು ಒಂದು ಅಚ್ಚರಿಯೇ ಸರಿ. ಇವರ ಜೀವನ ಕಥಾನಕ ಸಿನೆಮಾ ಆಗಿದೆ. ‘ಚಂದು ಚಾಂಪಿಯನ್' ಎನ್ನುವ ಹಿಂದಿ ಚಲನ ಚಿತ್ರವನ್ನು ವೀಕ್ಷಿಸಿದರೆ ನಿಮಗೆ ಮುರಳೀಕಾಂತ್ ಪೇಟ್ಕರ್ ಅವರ ಹೋರಾಟದ ಜೀವನಗಾಥೆಯ ಪರಿಚಯವಾಗುತ್ತದೆ.
ನಂತರ ೨೦೦೪ ಮತ್ತು ೨೦೧೬ರಲ್ಲಿ ದೇವೇಂದ್ರ ಜಝಾರಿಯಾ ಪುರುಷರ ಜಾವಲಿನ್ ಥ್ರೋದಲ್ಲಿ ಚಿನ್ನ, ೨೦೧೬ರಲ್ಲಿ ಮರಿಯಪ್ಪನ್ ತಂಗವೇಲು, ಪುರುಷರ ಹೈಜಂಪ್ ನಲ್ಲಿ ಚಿನ್ನ, ೨೦೨೦ರಲ್ಲಿ ಅವನಿ ಲೇಖರ ಮಹಿಳೆಯರ ೧೦ ಮೀ ಏರ್ ರೈಫಲ್ ವಿಭಾಗದಕ್ಕಿ ಚಿನ್ನ, ೨೦೨೦ರಲ್ಲಿ ಸುಮಿತ್ ಅಂತಿಲ್ ಪುರುಷರ ಜಾವಲಿನ್ ಥ್ರೋ ನಲ್ಲಿ ಚಿನ್ನ, ೨೦೨೦ರಲ್ಲಿ ಮನೀಶ್ ನರ್ವಾಲ್ ಮಿಶ್ರ ೫೦ ಮೀ ಪಿಸ್ತೂಲ್ ಶೂಟಿಂಗ್ ನಲ್ಲಿ ಚಿನ್ನ, ೨೦೨೦ರಲಿ ಪ್ರಮೋದ್ ಭಗತ್ ಬ್ಯಾಂಡ್ಮಿಂಟನ್ ಪುರುಷರ ಸಿಂಗಲ್ಸ್ ನಲ್ಲಿ ಚಿನ್ನ ಹಾಗೂ ೨೦೨೦ರಲ್ಲಿ ಕೃಷ್ಣ ನಾಗಲ್ ಅವರು ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಇಲ್ಲಿಯವರೆಗೆ ಭಾರತ ೮ ಮಂದಿ ಚಿನ್ನವನ್ನು ಕೊರಳಿಗೆ ಏರಿಸುವಲ್ಲಿ ಸಫಲರಾಗಿದ್ದಾರೆ.
೨೦೨೪ರ ಪ್ಯಾರಿಸ್ ಪ್ಯಾರಾ ಒಲಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾರತದ ಕ್ರೀಡಾಳುಗಳು ಪದಕಗಳನ್ನು ಗೆಲ್ಲಲಿ ಎನ್ನುವುದೇ ಶುಭ ಹಾರೈಕೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ