ಪ್ರಕೃತಿಯ ವರದಾನವಾದ ಅಂಜೂರ ಬೆಳೆ



ಅಂಜೂರ ಇತ್ತಿಚಿನ ದಿನಗಳಲ್ಲಿ ಕರ್ನಾಟಕದ ಒಣ ಪ್ರದೇಶಗಳಲ್ಲಿ ಬಹಳ ಜನಪ್ರಿಯತೆ ಪಡೆಯುತ್ತಿರುವ ಹಣ್ಣು. ಈ ಹಣ್ಣಿನಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದು, ಮಹತ್ವದ ಹಣ್ಣುಗಳಲ್ಲೊಂದಾಗಿದ್ದು, ಕಡಿಮೆ ಆಮ್ಲತೆ ಇದೆ. ತಾಜಾ ಹಣ್ಣುಗಳು ಸುಣ್ಣ, ಕಬ್ಬಿಣ, ಎ ಮತ್ತು ಸಿ ಜೀವಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ. ಚಿತ್ರದುರ್ಗ, ರಾಯಚೂರು, ಕೊಪ್ಪಳ, ಗುಲ್ಬರ್ಗ ಮತ್ತು ಬಳ್ಳಾರಿ ಪ್ರದೇಶಗಳು ಈ ಬೆಳೆಗೆ ಅತೀ ಸೂಕ್ತ. ಹೆಚ್ಚು ಮಳೆ ಬೀಳುವ ಮತ್ತು ಮೋಡದಿಂದ ಕೂಡಿದ ವಾತಾವರಣ ಯೋಗ್ಯವಲ್ಲ. ಈ ಹಣ್ಣಿನ ಮರದ ಬೆಳವಣಿಗೆಯೂ ಅರಳಿ ಮರದ ಜಾತಿಗೆ ಸೇರಿದ ಮರಗಳ ಮೇಲೆ ಅವಲಂಬಿತವಾಗಿದೆ, ಏಕೆಂದರೆ ಇದರ ಹೂವುಗಳು ಹೆಣ್ಣಾಗಿದ್ದು ಸ್ವಕೀಯ ಪರಾಗಸ್ಪರ್ಶವನ್ನು ಹೊಂದಿದ್ದು ಅವುಗಳಿಗೆ ಪರಕೀಯ ಪರಾಗಸ್ಪರ್ಶದ ಅವಶ್ಯಕತೆ ಇಲ್ಲ.
ಇದು ಮೂಲತಃ ಪಶ್ಚಿಮ ಮತ್ತು ಮಧ್ಯ ಏಷ್ಯಾದಾಗಿದೆ. ಇದನ್ನು ತಾಜಾ ಮತ್ತು ಒಣಗಿದ ರೂಪದಲ್ಲಿ ಬಳಸುತ್ತಾರೆ. ಒಣಗಿದ ಹಣ್ಣು ತಾಜಾ ಹಣ್ಣಿಗಿಂತ ಹೆಚ್ಚು ಆರೋಗ್ಯದಾಯಕ. ೧೦೦ ಗ್ರಾಂ ತಾಜಾ ಒಣ ಹಣ್ಣುಗಳಲ್ಲಿ ೭೪ ಕಿಲೋ ಕ್ಯಾಲೋರಿ, ೦.೭ ಪ್ರೋಟಿನ್ ೦.೩ ಗ್ರಾಂ ಕೊಬ್ಬು ೩ ಗ್ರಾಂ ನಾರಿನಾಂಶವನ್ನು ಹೊಂದಿದೆ. ೧೦೦ ಗ್ರಾಂ ಒಣ ಹಣ್ಣುಗಳಲ್ಲಿ ೨೪೯ ಕಿಲೋ ಕ್ಯಾಲೋರಿ, ೩.೩ ಪ್ರೋಟಿನ್, ೦.೯ ಗ್ರಾಂ ಕೊಬ್ಬು ೯.೮ ಗ್ರಾಂ ನಾರಿನಾಂಶವನ್ನು ಹೊಂದಿದೆ.
ಮಣ್ಣು: ಅಂಜೂರವನ್ನು ವಿಧದ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದಾದರೂ, ಕ್ಷಾರವಲ್ಲದ ಆಳವಾದ ಗೋಡು ಮಣ್ಣು ಅತೀ ಸೂಕ್ತ. ಮಧ್ಯಮ ಕಪ್ಪು ಮಣ್ಣು ಉತ್ತಮ, ನೀರು ಬಸಿದು ಹೋಗುವಂತಿದ್ದರೆ ಒಳ್ಳೆಯದು. ಈ ಬೆಳೆ ಬರ ಸ್ಥಿತಿ ಮತ್ತು ಭೂಮಿಯಲ್ಲಿನ ಕ್ಲೋರೈಡ್ ಮತ್ತು ಸಲ್ಫೇಟ್ ಉಪ್ಪಿನಾಂಶವನ್ನು ಸಹಿಸಿಕೊಂಡು ಬೆಳೆಯಬಲ್ಲದು.
ಹವಾಗುಣ ಮತ್ತು ನಾಟಿ ಕಾಲ: ಸಾಧಾರಣ ಉಷ್ಣತೆ ಮತ್ತು ಕಡಿಮೆ ಆರ್ದ್ರತೆಯುಳ್ಳ ಹವಾಗುಣಗಳಿಗೆ ಹೊಂದಿಕೊಳ್ಳಬಲ್ಲದು. ತಂಪಾದ ರಾತ್ರಿಗಳು ಹಣ್ಣಿನಲ್ಲಿ ಸಿಹಿಯನ್ನು ಹೆಚ್ಚಿಸುತ್ತವೆ. ಹೆಚ್ಚು ಮಳೆ ಮತ್ತು ಆರ್ದ್ರತೆಯಿಂದಾಗಿ ತುಕ್ಕು ರೋಗ ಹರಡುತ್ತದೆ. ಹಣ್ಣು ಪಕ್ವವಾಗುವಾಗ ಒಣ ಹವೆ ಅವಶ್ಯಕ. ಜೂನ್ - ಜುಲೈ ತಿಂಗಳುಗಳು ನಾಟಿಗೆ ಅತೀ ಸೂಕ್ತ ಕಾಲ.
ತಳಿಗಳು
೧. ಪೂನಾ : ಈ ತಳಿಯ ಹಣ್ಣುಗಳು ಗಂಟೆಯಾಕಾರದಲ್ಲಿದ್ದು ಮಧ್ಯಮ ಗಾತ್ರ ಹೊಂದಿರುತ್ತವೆ. ತಿಳಿ ಕಂದು ಬಣ್ಣದ ಹೊರಮೈ ಮತ್ತು ಗುಲಾಬಿ ವರ್ಣದ ತಿರುಳನ್ನು ಪಡೆದಿವೆ. ಹಣ್ಣಿನ ತೊಟ್ಟು ಉದ್ದವಾಗಿದ್ದು ಅಧಿಕ ಇಳುವರಿ ಕೊಡುತ್ತದೆ. (ಚಿತ್ರ ೩)
೨. ಬಳ್ಳಾರಿ : ಇದು ಉಷ್ಣ ಪ್ರದೇಶಕ್ಕ್ಕೆ ಸೂಕ್ತವಾದ ತಳಿ.(ಚಿತ್ರ ೨)
೩. ಗಂಜಾಮ : ಇದು ಉಷ್ಣ ಪ್ರದೇಶಕ್ಕೆ ಸೂಕ್ತ ಹಾಗೂ ಹೆಚ್ಚಿನ ಇಳುವರಿ ಕೊಡುತ್ತದೆ. (ಚಿತ್ರ ೧)
೪. ಡಿಯನಾ : ಬೇಗ ಇಳುವರಿ ನೀಡುವ, ಪಾರ್ಥೆನೋಕಾರ್ಪಿಕ್ ಗುಣ ಹೊಂದಿದ ತಳಿಯಾಗಿದ್ದು, ದೊಡ್ಡಗಾತ್ರದ (೭೦ಗ್ರಾಂ), ಬಂಗಾರ ಹಳದಿ ವರ್ಣದ ಹಣ್ಣುಗಳನ್ನು ನೀಡುತ್ತದೆ. ಹಣ್ಣುಗಳನ್ನು ಒಣಗಿಸಿದ ಮೇಲೂ ಹಳದಿ ವರ್ಣವು ಉಳಿಯುತ್ತದೆ. ಎರಡೊವರೆ ವರ್ಷದ ಗಿಡವು ಸುಮಾರು ೪ ಕಿ. ಗ್ರಾಂ ಹಣ್ಣಿನ ಇಳುವರಿ ನೀಡುತ್ತದೆ.
ಬೇಸಾಯ ಕ್ರಮಗಳು
ಸಸ್ಯಾಭಿವೃದ್ಧಿ ಮತ್ತು ನಾಟಿ ಮಾಡುವುದು: ಅಂಜೂರವನ್ನು ಅರೆಬಲಿತ ಕಾಂಡದ ತುಂಡು ಮತ್ತು ಗೂಟಿ ವಿಧಾನದಿಂದ ಸಸ್ಯಾಭಿವೃದ್ಧಿ ಮಾಡುತ್ತಾರೆ. ಕಾಂಡದ ತುಂಡುಗಳಿಂದ ಸಸ್ಯಾಭಿವೃದ್ಧಿ ಮಾಡುವಾಗ ಅವುಗಳನ್ನು ೧೦೦ ಐ.ಬಿ.ಎ ದ್ರಾವಣದಲ್ಲಿ ಒಂದು ನಿಮಿಷ ಅದ್ದಬೇಕು. ನಂತರ ಈ ತುಂಡುಗಳನ್ನು ೧/೩ ಭಾಗ ಹಸಿ ಮರಳನ್ನು ತುಂಬಿದ ೪೫ x ೧೫ ಸೆಂ.ಮೀ. ಅಳತೆಯ ಪಾಲಿಥೀನ್ ಚೀಲಗಳಲ್ಲಿ (೨೫೦ ಗೇಜ್ ದಪ್ಪ) ೨೦ ತುಂಡುಗಳಂತೆ, ಶಿಫಾರಸ್ಸು ಮಾಡಿದ ಅಂತರದಲ್ಲಿ ೬೦ x ೬೦ x ೬೦ ಸೆಂ. ಮೀ. ಗಾತ್ರದ ಗುಣಿಗಳನ್ನು ತೆಗೆದು ಅವುಗಳಲ್ಲಿ ಮಣ್ಣು ಮತ್ತು ಗೊಬ್ಬರಗಳ ಮಿಶ್ರಣವನ್ನು ತುಂಬಿ ನಾಟಿ ಕೈಗೊಳ್ಳಬೇಕು.
ಅಂಜೂರ ಗಿಡಗಳಿಗೆ ಉತ್ತಮ ಆಕಾರ ಮತ್ತು ರಚನೆ ಕೊಡುವುದು ಅವಶ್ಯ. ಪ್ರತಿ ಗಿಡಕ್ಕೆ ೩-೪ ಮುಖ್ಯ ರೆಂಬೆಗಳಿರುವಂತೆ ನೋಡಿಕೊಳ್ಳಬೇಕು. ಗಿಡಗಳನ್ನು ೯೦-೧೨೦ ಸೆಂ.ಮೀ. ಎತ್ತರಕ್ಕಿರುವಂತೆ ಆಕಾರ ಕೊಟ್ಟು ೬-೮ ಉತ್ತಮ ಕವಲುಗಳು ಚೆನ್ನಾಗಿ ಪಸರಿಸುವಂತೆ ನೋಡಿಕೊಳ್ಳಬೇಕು. ಅಂಜೂರ ಗಿಡಗಳ ಗೆಲ್ಲುಗಳನ್ನು ವರ್ಷಕ್ಕೊಮ್ಮೆ ಸಣ್ಣ ಮಾಡುವುದರಿಂದ ಬೆಳೆವಣಿಗೆ ಅಭಿವೃದ್ಧಿಗೊಂಡು ಇಳುವರಿ ಹೆಚ್ಚುತ್ತದೆ. ಸುಪ್ತಾವಸ್ಥೆಯಲ್ಲಿರುವ ಗೆಣ್ಣುಗಳ ಹತ್ತಿರ ಚಾಕುವಿನಿಂದ 'ಗಿ' ಆಕಾರದಲ್ಲಿ ಸೀಳು ಹಾಕಿದರೆ ಉಪಕವಲುಗಳ ಸಂಖ್ಯೆ ಹೆಚ್ಚುತ್ತದೆ. ಅಂಜೂರಕ್ಕೆ ಬರ ನಿರೋಧಕ ಶಕ್ತಿ ಇದ್ದರೂ ಕೂಡಾ ಒಣ ಹವೆಯಲ್ಲಿ ರಕ್ಷಣಾತ್ಮಕ ನೀರಾವರಿ ಬೇಕು.
ಕೊಯ್ಲು ಮತ್ತು ಇಳುವರಿ : ಅಂಜೂರವು ವರ್ಷದಲ್ಲಿ ಎರಡು ಬಾರಿ ಹಣ್ಣು ಕೊಡುತ್ತದೆ. (ಏಪ್ರಿಲ್-ಮೇ ಮತ್ತು ಜುಲೈ-ಸೆಪ್ಟಂಬರ್) ಪ್ರತಿ ಗಿಡ ೧೦೦-೧೫೦ ಹಣ್ಣುಗಳನ್ನು ಕೊಡುತ್ತದೆ (೫-೭.೫ ಟನ್ ಪ್ರತಿ ಹೆಕ್ಟೇರಿಗೆ). ಅಂಜೂರ ಹಣ್ಣುಗಳನ್ನು ಒಣಗಿಸುವ ಮೊದಲು ಶೇ.೨ ರ ಪೊಟ್ಯಾಷಿಯಂ ಮೆಟಾಬೈಸಲ್ಫೇಟ್ ದ್ರಾವಣದಲ್ಲಿ ೨೦ ನಿಮಿಷ ಕಾಲ ಅದ್ದಿ ತೆಗೆಯುವುದರಿಂದ ಆಕರ್ಷಕ ಬಣ್ಣದ ಅಂಜೂರವನ್ನು ಪಡೆಯಬಹುದು.
ಆರೋಗ್ಯದಾಯಕ ಲಾಭಗಳು:
* ಅಂಜುರ ಹಣ್ಣಿನಲ್ಲಿ ಪೊಟ್ಯಾಷಿಯಂ ಸಾಕಷ್ಡು ಪ್ರಮಾಣದಲ್ಲಿದ್ದು, ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ನಮ್ಮ ದಿನ ನಿತ್ಯದ ಆಹಾರದ ಪ್ರಮಾಣದಲ್ಲಿನ ಪೊಟ್ಯಾಷಿಯಂ ಕೊರತೆಯನ್ನು ನೀಗಿಸುತ್ತದೆ.
* ಕ್ಯಾಲ್ಸಿಯಂ ಜಾಸ್ತಿ ಪ್ರಮಾಣದಲಿದ್ದು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುವುದಲ್ಲದೆ, ಮೂಳೆಗಳ ಸವೆಯುವುಕೆಯನ್ನು ತಡೆಗಟ್ಟುತ್ತದೆ.
* ಇದರಲ್ಲಿನ ನಾರಿನಾಂಶವು ಜೀರ್ಣಶಕ್ತಿಯನ್ನು ವೃದ್ಧಿಸುವುದರ ಜೊತೆಗೆ ಮಲಬಧ್ಧತೆಯನ್ನು ನಿವಾರಿಸುತ್ತದೆ.
* ಹಣ್ಣುಗಳು ಮಾತ್ರವಲ್ಲದೆ ಇದರ ಎಲೆಗಳು ಕೂಡ ಉಪಯುಕ್ತವಾಗಿದ್ದು, ಇತರ ಬೇರೆ ಒಣ ಹಣ್ಣುಗಳಿಗೆ ಹೋಲಿಸಿದರೆ ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿದ್ದು ಸ್ತನ ಮತ್ತು ಕರಳು ಕ್ಯಾನ್ಸರನ್ನು ನಿವಾರಿಸುತ್ತದೆ.
* ೨-೩ ಹಣ್ಣುಗಳನ್ನು ಹಾಲಿನಲ್ಲಿ ನೆನೆಸಿ ತಿನ್ನುವುದರಿಂದ ಕಾಮೋತ್ತೇಜಕವಾಗುತ್ತದೆ. ಇದು ಬೊಜ್ಜುತನವನ್ನು ಕಡಿಮೆ ಮಾಡುತ್ತದೆ.
*ವಯೋವೃದ್ಧರಲ್ಲಿ ದೃಷ್ಟಿದೋಷವನ್ನು ಸುಧಾರಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಾಹಿತಿ: ವಿರುಪಾಕ್ಷಿ ಹಿರೇಮಠ ಮತ್ತು ನಾಗವೇಣಿ, ಹೆಚ್.ಸಿ. ಪ್ರಾದೇಶಿಕ ಸಂಶೋಧನಾ ಕೇಂದ್ರ, ಮೂಡಿಗೆರೆ
ಚಿತ್ರ ಕೃಪೆ: ಅಂತರ್ಜಾಲ ತಾಣ