ಪ್ರಕೃತಿಯ ವಿಶ್ವರೂಪ ದರ್ಶನ
ಕವನ
ಎಲ್ಲೆಲ್ಲೂ ಹಸಿರು , ಹಸಿರು ಚಪ್ಪರ
ಸುತ್ತಲೂ ಪ್ರಕೃತಿಯ ನಾದ ಓಂಕಾರ
ನನಗಿಂದಾಯಿತು ಬನದ ಉಪದೇಶ ಸಾರ
ಮನಕ್ಕಾಯಿತು ನಿಸರ್ಗದ ಸಾಕ್ಷಾತ್ಕಾರ
ಮೌನದಲಿ ಮನ ಮಿಡಿಯಿತು
ಹೃದಯ ಹಾಡಿತು ತೇಲಿತು
ಜೀವ ಓಲಾಡಿ ತೂಗಾಡಿ ನಾಟ್ಯವಾಡಿತು
ಅನಂತ ಶಾಂತಿಯ ತನ್ಮಯತೆಯಲಿ
ಸುಪ್ತ ಭಾವುಕತೆಯ ಅಲೆ ಅಲೆಯಲಿ
ಬನದೇವಿಯ ಚಿರ ರಸಿಕತೆಯಲಿ
ಕಣ್ಗಳಿಗಿಂದು ಚೆಲುವು-ಒಲವು ನರ್ತನ
ಬಾಳಿಗಿಂದು ತಂಬೆಲರ ಸಪ್ತ-ಸ್ವರ ಗಾನ ಪಾನ
ಬೆಂದ ಜೀವಕೆ ಸಂತೃಪ್ತ ತಾಣ
ಕವಿಗಿಂದು ವನರಾಣಿಯ ರಸ ಭೋಜನ
ತನು-ಮನಕೆ ಮಿಂಚಿನ ರೋಮಾಂಚನ
ಅಮೃತ ಸೇಂಚನ
ಸೊಬಗ ಸಿರಿಯ ಗಂಧ ಲೇಪನ
ಆತ್ಮಕ್ಕಿಂದು ಪ್ರಕೃತಿಯ ವಿಶ್ವರೂಪ ದರ್ಶನ.
ಶ್ರೀ ನಾಗರಾಜ್