ಪ್ರಕೃತಿ ಚಿಕಿತ್ಸೆಯ ಉಪಯುಕ್ತತೆ

ಪ್ರಕೃತಿ ಚಿಕಿತ್ಸೆಯ ಉಪಯುಕ್ತತೆ

ನವೆಂಬರ್ ೧೮ ಪ್ರಕೃತಿ ಚಿಕಿತ್ಸಾ ದಿನ. ನಮ್ಮ ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ವಸ್ತುಗಳು ಈ ಪ್ರಕೃತಿಯಲ್ಲಿ ಹೇರಳವಾಗಿದೆ. ಆದರೂ ನಾವು ನಮ್ಮ ಸುತ್ತ ಮುತ್ತಲಿರುವ ಗಿಡಮೂಲಿಕೆ, ಹಣ್ಣು ಹಂಪಲು, ತರಕಾರಿಗಳನ್ನು ಉಪಯೋಗಿಸುವುದನ್ನು ಬಿಟ್ಟು ಬೇರೆ ಬೇರೆ ಪದ್ಧತಿಗಳತ್ತ ಮುಖ ಮಾಡುತ್ತೇವೆ. ನಮ್ಮ ಅಡುಗೆ ಮನೆಯೇ ಒಂದು ಉತ್ತಮ ವೈದ್ಯ ಪಾಕ ಶಾಲೆ. ನಮ್ಮ ಹೊಟ್ಟೆಯನ್ನು ಸರಿಯಾಗಿಟ್ಟರೆ ನಮಗೆ ಬರುವ ಶೇ ೯೦ರಷ್ಟು ರೋಗಗಳನ್ನು ತಡೆಗಟ್ಟಬಹುದು.

ಹಿರಿಯ ಪ್ರಕೃತಿ ಚಿಕಿತ್ಸಾ ವೈದ್ಯರಾದ ಡಾ.ವೈ. ರುದ್ರಪ್ಪನವರ ಪ್ರಕಾರ “ನಮ್ಮ ಶರೀರ ಪಂಚಭೂತಗಳಿಂದ ಕೂಡಿದೆ. ಅದಕ್ಕೆ ತೊಂದರೆಯಾದರೆ, ಏನಾದರೂ ವ್ಯತ್ಯಾಸಗಳಾದರೆ ರೋಗ ಬರುತ್ತದೆ. ಅದಕ್ಕೆ ಪಂಚಭೂತಗಳಿಂದಲೇ ಚಿಕಿತ್ಸೆ ನೀಡಬೇಕು. ಆಗ ರೋಗಗಳನ್ನು ಬೇರು ಮಟ್ಟದಿಂದ ಕಿತ್ತುಹಾಕಲು ಸಾಧ್ಯವಾಗುತ್ತದೆ. ಇಂತಹ ಪಂಚಭೂತಗಳ ಚಿಕಿತ್ಸೆಯೇ ಪ್ರಕೃತಿ ಚಿಕಿತ್ಸೆಯೇ ಪ್ರಕೃತಿ ಚಿಕಿತ್ಸೆ. ಯಾವುದೇ ರೋಗಕ್ಕೆ ಪ್ರಥ್ವಿ (ಮಣ್ಣು), ಜಲ (ನೀರು), ತೇಜ (ಸೂರ್ಯ), ವಾಯು (ಗಾಳಿ) ಮತ್ತು ಆಕಾಶ (ಗಗನ) ಚಿಕಿತ್ಸೆಯನ್ನು ಪ್ರಕೃತಿ ಚಿಕಿತ್ಸೆಯಲ್ಲಿ ನೀಡಲಾಗುತ್ತದೆ. ಭಾರತ ಈ ವಿಧಾನದ ಕೇಂದ್ರಬಿಂದುವಾಗುತ್ತಿದೆ.” ಎನ್ನುತ್ತಾರೆ.

ಭಾರತದಲ್ಲಿ ಅನಾದಿಕಾಲದಿಂದಲೂ ಋಷಿ ಮುನಿಗಳು ಈ ರೀತಿಯಾದ ಚಿಕಿತ್ಸಾ ಕ್ರಮಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ನಮ್ಮ ದೇಹದಲ್ಲಿರುವ ಕಶ್ಮಲಗಳನ್ನು ಹೊರ ಹಾಕುವ ನಾಲ್ಕು ಮಾರ್ಗಗಳಿವೆ. ಕರುಳು, ಕಫ, ಬೆವರು ಹಾಗೂ ಮೂತ್ರ. ಈ ನಾಲ್ಕು ದಾರಿಗಳಿಂದ ನಮ್ಮ ದೇಹದ ಒಳಗಿನ ಕಶ್ಮಲಗಳು ಸರಿಯಾದ ಕ್ರಮದಲ್ಲಿ ಹಾಗೂ ಪ್ರಮಾಣದಲ್ಲಿ ಹೊರಗೆ ಹೋಗುತ್ತಿದ್ದಲ್ಲಿ ನಮ್ಮಲ್ಲಿರುವ ಯಾವುದೇ ರೋಗವನ್ನು ಬೇರು ಸಹಿತ ಕಿತ್ತುಹಾಕಬಹುದು. ಇದಕ್ಕೆ ಪ್ರಕೃತಿ ಚಿಕಿತ್ಸೆಯೇ ರಾಮಬಾಣ.

ನಾವು ಯಾವೆಲ್ಲಾ ಕ್ರಮಗಳಿಂದ ಉಪಶಮನವನ್ನು ಪಡೆಯಬಹುದು ನೋಡೋಣ. ಹಿಂದಿನ ಕಾಲದಲ್ಲಿ ತಿಂಗಳಿಗೆ ಒಂದು ದಿನ ಅಥವಾ ಹದಿನೈದು ದಿನಕ್ಕೊಮ್ಮೆ ಉಪವಾಸ ಮಾಡುತ್ತಿದ್ದರು. ಈಗಲೂ ಏಕಾದಶಿಯಂದು ಹಲವಾರು ಮಂದಿ ಉಪವಾಸ ಮಾಡುತ್ತಾರೆ. ರೋಗಗಳು ಬಂದಾಗ ಒಂದು ದಿನದ ಉಪವಾಸ ಅತ್ಯಂತ ಫಲಕಾರಿ. ಈ ಉಪವಾಸದ ಮೂಲಕ ನಾವು ಶರೀರ ಶುದ್ಧಿ ಹಾಗೂ ಮಾನಸಿಕ ಶುದ್ಧಿಯನ್ನು ಮಾಡಿಕೊಳ್ಳಬಹುದು. ಉಪವಾಸ ಮಾಡುವ ದಿನ ಯಥೇಚ್ಚವಾಗಿ ನೀರು, ಎಳನೀರು ಮತ್ತು ಹಣ್ಣಿನ ರಸವನ್ನು ಸೇವಿಸಬಹುದು. ಇದರಿಂದ ನಮ್ಮಲ್ಲಿರುವ ಶೇ ಐವತ್ತರಷ್ಟು ರೋಗಗಳು ನಿವಾರಣೆಯಾಗುತ್ತವೆ. ರೋಗಗಳು ಬಂದರೆ ನಾವು ಭಯಪಡದೇ ಸುಲಭವಾಗಿ ಪ್ರಕೃತಿಯಲ್ಲಿ ಲಭ್ಯವಿರುವ ವಸ್ತುಗಳಿಂದ ಹಾಗೂ ಆಹಾರ ಕ್ರಮಗಳಿಂದ ನಿವಾರಣೆ ಮಾಡಿಕೊಳ್ಳುವುದು ಸಾಧ್ಯ.

ಪ್ರತೀ ದಿನ ಈ ಪಂಚ ಕಾರ್ಯವನ್ನು ಮಾಡುತ್ತಾ ಬಂದರೆ ರೋಗ ಮಂಗಮಾಯವಾಗುತ್ತದೆ. ೧. ದಿನಕ್ಕೆ ಎರಡು ಹೊತ್ತು ಊಟ ೨. ದಿನಕ್ಕೆ ಕನಿಷ್ಟ ೩-೪ ಲೀಟರ್ ಬಿಸಿ/ಬಿಸಿಯಾಗಿ ಆರಿದ ನೀರು ಕುಡಿಯುವುದು. ಒಂದು ತಾಸಿನ ಸುಲಭ ಸಾಧ್ಯ ಯೋಗ ೪. ವಾರಕ್ಕೆ ಒಮ್ಮೆ ಉಪವಾಸ ಮತ್ತು ೫. ದಿನಕ್ಕೆ ಎರಡು ಬಾರಿ ಏಕಾಗ್ರತೆಯಿಂದ ಪ್ರಾರ್ಥನೆ ಮಾಡುವುದು. ಹೈದರಾಬಾದ್ ನ ಡಾ.ಬಿ.ವೆಂಕಟರಾವ್ ಅವರು ಹೇಳುವಂತೆ ಆಹಾರವೇ ನಮ್ಮ ಔಷಧವಾಗಬೇಕು. ಆಗ ಮಾತ್ರ ನಾವು ರೋಗ ಬಾರದಂತೆ ಜೀವನ ಸಾಗಿಸಬಹುದಾಗಿದೆ. ಬಾಳಿನಲ್ಲಿ ತಾಳ್ಮೆ ಮತ್ತು ಸರಿಯಾದ ಜೀವನ ಕ್ರಮದಿಂದ ನಾವು ರೋಗ ರಹಿತ ಬದುಕು ಸಾಗಿಸಬಹುದಾಗಿದೆ.

ಪ್ರಕೃತಿ ಚಿಕಿತ್ಸಾ ದಿನದ ಆಚರಣೆ ಹೇಗೆ ಪ್ರಾರಂಭವಾಯಿತೆಂದರೆ, ಮಹಾತ್ಮ ಗಾಂಧೀಜಿಯವರು ನವೆಂಬರ್ ೧೮, ೧೯೪೨ರಂದು ಪುಣೆಯಲ್ಲಿ ನೇಚರ್ ಕ್ಯೂರ್ ಫೌಂಡೇಶನ್ ಅನ್ನು ಸ್ಥಾಪನೆ ಮಾಡಿದರು. ಅವರು ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದರೂ ಈ ಕೇಂದ್ರದಲ್ಲಿ ಮಾತ್ರ ಅವರ ಸಹಿ ಇದೆ. ಆ ಕಾರಣದಿಂದ ಈ ದಿನವನ್ನು ಪ್ರಕೃತಿ ಚಿಕಿತ್ಸಾ ದಿನ ಎಂದು ಕರೆಯಲಾಗುತ್ತದೆ. ಗಾಂಧೀಜಿಯವರ ಜೀವನ ಕ್ರಮವು ಪ್ರಕೃತಿ ಚಿಕಿತ್ಸಾ ಕ್ರಮಕ್ಕೆ ಹೇಳಿ ಮಾಡಿಸಿದಂತಿತ್ತು. ಈ ಕುರಿತಾಗಿ ಅವರು ನೇಚರ್ ಕ್ಯೂರ್, ಕೀ ಟು ಹೆಲ್ತ್, ರಾಮನಾಮ ಮತ್ತು ಡಯಟ್ ಆಂಡ್ ಡಯಟ್ ರೀಫಾರ್ಮ್ ಎಂಬ ನಾಲ್ಕು ಪುಸ್ತಕಗಳನ್ನು ಬರೆದಿದ್ದಾರೆ. ಗಾಂಧೀಜಿಯವರು ಸ್ಥಾಪಿಸಿದ ಪುಣೆಯ ಪ್ರಕೃತಿ ಚಿಕಿತ್ಸಾ ಕೇಂದ್ರ ಈಗ ಬಹಳ ದೊಡ್ಡದಾಗಿ ವಿಸ್ತರಣೆಯಾಗಿದೆ. ಈ ರೀತಿಯ ಚಿಕಿತ್ಸಾ ಕೇಂದ್ರಗಳನ್ನು ಸರಕಾರಗಳು ಪ್ರತೀ ತಾಲೂಕಿನಲ್ಲಿ ಸ್ಥಾಪನೆ ಮಾಡಿದಲ್ಲಿ ಜನರ ಬಹುತೇಕ ಆರೋಗ್ಯ ಸಮಸ್ಯೆಗಳು ಮಾಯವಾಗುವುದರಲ್ಲಿ ಸಂದೇಹವಿಲ್ಲ.

ಚಿತ್ರ ಕೃಪೆ: ಅಂತರ್ಜಾಲ ತಾಣ