ಪ್ರಕೃತಿ ದೇವರು

ಪ್ರಕೃತಿ ದೇವರು

ಕವನ

ಈ ಸುಂದರ ಪ್ರಕೃತಿಯನು ನಿರ್ಮಿಸಿದವನಾರೇ

ಜೀವ ನಿರ್ಜೀವದ ಬಲೆಯನು ಹೆಣೆದವನಾರೇ

 

ಬೀಜ ಮೊಳೆಕೆಯೊಡೆದು ಸಸಿ ಮಾಡಿದವನಾರೇ

ಮುಳ್ಳಿನ ಗಿಡದಲಿ ಚೆಲುವ ಹೂವ ಇಟ್ಟವನಾರೇ

ಹಾರು ಹಕ್ಕಿಯ ರೆಕ್ಕೆಗಳ ಕಟ್ಟಿದ ವಿನ್ಯಾಸಕನಾರೇ

ಮೀನಿಗೆ ನೀರಲಿ ಈಜು ಎಂದು ಹೇಳಿದವನಾರೇ

 

ಹಣ್ಣಿನಲಿ ಸಿಹಿರಸವ ತುಂಬಿದ ಬಾಣಸಿಗನಾರೇ

ಹುಣಸೆಯಲಿ ಹುಳಿಯ ತುಂಬಿದ ರಸಿಕನಾರೇ

ಹಾವಿನ ಹೆಡೆಯಲಿ ವಿಷವಿಟ್ಟ ಆ ಚತುರನಾರೇ

ಜಗ ಜೀವಿಗಳ ಸೃಷ್ಟಿಸಿದ ಮಹಾನುಭಾವನಾರೇ

 

ನಾನು ನಾನೆಂದು ಬೀಗುತಿಹ ಈ ಮನುಜನಾರೇ

ಈ ಮಾನವ ಸೃಷ್ಟಿಯ ಒಂದು ಕಣ ಮಾತ್ರದವನೇ

ಇದಕೊಂದು ಕಾಣದ ಶಕ್ತಿಯದು ಇರಲೇ ಬೇಕಲ್ಲ

ಅದಕೇ ಈ ಪ್ರಕೃತಿಯನೆ ದೇವರೆನ್ನುವೆವು ನಾವೆಲ್ಲ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್