ಪ್ರಕೃತಿ

ಪ್ರಕೃತಿ

ಪುಸ್ತಕದ ಲೇಖಕ/ಕವಿಯ ಹೆಸರು
ಹಾ ಮ ಸತೀಶ
ಪ್ರಕಾಶಕರು
ಕಥಾಬಿಂದು ಪ್ರಕಾಶನ, ಕುಂಜತ್ ಬೈಲ್, ಮಂಗಳೂರು
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ: ೨೦೨೪

“ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಪ್ರವೃತ್ತಿಯಲ್ಲಿ ಕವಿ, ಸಾಹಿತಿ, ನಾಟಕಕಾರ, ಹಾಡುಗಾರ ಶ್ರೀ ಹಾ ಮ ಸತೀಶರ ಗಝಲ್ ಸಂಕಲನ ‘ಪ್ರಕೃತಿ' ಪ್ರೀತಿ ಬದುಕು ಸಂಕಲನಕ್ಕೆ ನನ್ನ ಅನುಭವದ ಒಂದೆರಡು ಸಾಲುಗಳನ್ನು ಬರೆಯಲು ಸಂತಸಪಡುತ್ತೇನೆ. ನಾನು ಕಂಡ ಹಾಗೆ ಸತೀಶರು ಸಾಹಿತ್ಯ ಪ್ರಪಂಚದ ದೈತ್ಯ ಪ್ರತಿಭೆ, ಎಲೆಯ ಮರೆಯ ಕಾಯಿ ಎನ್ನಬಹುದು. ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವ ಮಾತಿನಂತೆ ಸಾಹಿತ್ಯದಲ್ಲಿ ಕೈಯಾಡಿಸದ ಕ್ಷೇತ್ರವಿಲ್ಲ. ಯಾವುದೇ ಕನ್ನಡ ಪಂಡಿತರಿಗೆ ಕಡಿಮೆಯಿಲ್ಲದ ಸಾಹಿತ್ಯ ಜ್ಞಾನ ಹೊಂದಿದ ಅಜ್ಞಾತ ಕವಿ. ‘ಕೇಳಿ ಪಡೆಯುವ ಮನೋಭಾವ ಒಲ್ಲದ ಹೃದಯ' ಮಾತು ನೇರ ಇರಬಹುದು. ಇರತಕ್ಕದ್ದು ಸಹ. ಅಗತ್ಯವಿರುವಲ್ಲಿ ನ್ಯಾಯವಿರುವಲ್ಲಿ ಬಾಗುವೆ ಎನ್ನುವ ಕವಿ.

‘ಗಝಲ್' ಒಂದು ವಾಸ್ತವ ಜೀವನದ ಸೃಷ್ಟಿ ಮತ್ತು ದೃಷ್ಟಿ. ಬರಹಗಾರನ ಅದ್ಭುತ ಕೈಚಳಕ, ಭಾವನೆಗಳ ಶರಧಿ, ಅನುಭವಗಳ ಬುತ್ತಿ ಸಮ್ಮಿಳಿತವಾದ ನೇರ, ದಿಟ್ಟ, ಶೃಂಗಾರ, ರಸಿಕತೆ, ನೋವು -ನಲಿವು, ಜೀವನ ಎಲ್ಲವನ್ನೂ ಪಾಕ ಮಾಡಿದ ಅನೇಕ ಗಝಲ್ ಗಳನ್ನು ಸತೀಶರ ಬರವಣಿಗೆ ಬಿಂಬಿಸುತ್ತಿವೆ.” ಎಂದು ಬೆನ್ನುಡಿಯ ಮೂಲಕ ತಮ್ಮ ಖಾಸ ತಮ್ಮನಿಗೆ ಶುಭ ಕೋರಿದ್ದಾರೆ ನಿವೃತ್ತ ಮುಖ್ಯ ಶಿಕ್ಷಕಿ, ಸಾಹಿತಿ ಶ್ರೀಮತಿ ರತ್ನಾ ಕೆ ಭಟ್ ಇವರು.

ಆಕರ್ಷಕ ಮುಖಪುಟ ಹೊಂದಿರುವ ‘ಪ್ರಕೃತಿ ಪ್ರೀತಿ ಬದುಕು' ಎನ್ನುವ ಗಝಲ್ ಸಂಕಲನದಲ್ಲಿ ೫೦ ಸುಂದರ ಗಝಲ್ ಗಳಿವೆ. ಈ ಕೃತಿಗೆ ಪ್ರಸಿದ್ಧ ಗಝಲ್ ಕವಿ ಡಾ. ಸುರೇಶ ನೆಗಳಗುಳಿ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ಗಝಲ್ ಬಗ್ಗೆ, ಅವುಗಳ ರಚನೆ ಬಗ್ಗೆ, ಅವುಗಳ ನಿಯಮಾವಳಿಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದ್ದಾರೆ. ಗಝಲ್ ಗಳ ಪ್ರಕಾರಗಳ ಕುರಿತು ಬರೆಯುತ್ತಾ ಅವುಗಳನ್ನು ಉದಾಹರಣೆಯ ಸಹಿತ ವಿವರಿಸಿದ್ದಾರೆ. ಗಝಲ್ ಸಂಕಲನಕ್ಕೆ ಇದಕ್ಕಿಂತ ಅರ್ಥಪೂರ್ಣವಾದ ಮುನ್ನುಡಿ ದೊರೆಯಲಿಕ್ಕಿಲ್ಲ. ಅಷ್ಟೊಂದು ಮಾಹಿತಿ ಪೂರ್ಣವಾಗಿದೆ. ಗಝಲ್ ಕೃತಿಕಾರರಾದ ಹಾ ಮ ಸತೀಶ್ ತಮ್ಮ ಮನದ ಮಾತಿನಲ್ಲಿ ತಮ್ಮ ಈ ಹಾದಿಯಲ್ಲಿ ಸಹಕಾರ ನೀಡಿದ ಸರ್ವರನ್ನೂ ಕೃತಜ್ಞತಾ ಪೂರ್ವಕವಾಗಿ ಸ್ಮರಿಸಿಕೊಂಡಿದ್ದಾರೆ. ಈ ಕೃತಿಯಲ್ಲಿರುವ ಒಂದು ಗಝಲ್ ಹೀಗಿದೆ...

ಹರಿಯಲಿಲ್ಲ ಬದುಕು ಹೀಗೆಯೆ ಯಾವತ್ತೂ ಗೆಳತಿ

ಹೊಳೆಯಲಿಲ್ಲ ಬದುಕು ಹೀಗೆಯೆ ಯಾವತ್ತೂ ಗೆಳತಿ

 

ನಡೆಯಲಿಲ್ಲ ಬದುಕು ಹೀಗೆಯೆ ಯಾವತ್ತೂ ಗೆಳತಿ

ತಿಳಿಯಲಿಲ್ಲ ಬದುಕು ಹೀಗೆಯೆ ಯಾವತ್ತೂ ಗೆಳತಿ

 

ಅರಿಯಲಿಲ್ಲ ಬದುಕು ಹೀಗೆಯೆ ಯಾವತ್ತೂ ಗೆಳತಿ

ಮರೆಯಲಿಲ್ಲ ಬದುಕು ಹೀಗೆಯೆ ಯಾವತ್ತೂ ಗೆಳತಿ

 

ಜರೆಯಲಿಲ್ಲ ಬದುಕು ಹೀಗೆಯೆ ಯಾವತ್ತೂ ಗೆಳತಿ

ನಟಿಸಲಿಲ್ಲ ಬದುಕು ಹೀಗೆಯೆ ಯಾವತ್ತೂ ಗೆಳತಿ

 

ಸವಿಯಲಿಲ್ಲ ಬದುಕು ಹೀಗೆಯೆ ಯಾವತ್ತೂ ಗೆಳತಿ

ಮರೆಯಲಿಲ್ಲ ಬದುಕು ಹೀಗೆಯೆ ಯಾವತ್ತೂ ಗೆಳತಿ

ಮೇಲಿನ ಗಝಲ್ ಓದುವಾಗ ಎಷ್ಟೊಂದು ಸರಳ ಎಂದು ಅನಿಸಿದರೂ ರಚಿಸುವಾಗ ಅದರ ಕಷ್ಟ ರಚನೆಕಾರನಿಗೇ ಗೊತ್ತು. ಇಂತಹ ಹಲವಾರು ಗಝಲ್ ಗಳು ಈ ಕೃತಿಯಲ್ಲಿವೆ. ಸುಮಾರು ೪೦ ಪುಟಗಳ ಈ ಪುಟ್ಟ ಪುಸ್ತಕವನ್ನು ಕಥಾ ಬಿಂದು ಪ್ರಕಾಶನದವರು ಪ್ರಕಟಿಸಿದ್ದಾರೆ.

ಕಳೆದ ಹಲವು ದಶಕಗಳಿಂದ ಕವನ, ಮುಕ್ತಕ, ಹನಿಗವನ, ಗಝಲ್ ಮೊದಲಾದ ಎಲ್ಲಾ ಪ್ರಕಾರಗಳಲ್ಲಿ ಕೈಯಾಡಿಸಿ ಅದರಲ್ಲಿ ಯಶಸ್ಸು ಕಂಡ ಸಾಹಿತಿ ಎಂದರೆ ಹಾ ಮ ಸತೀಶ ಅವರು. ಈಗಾಗಲೇ ಇವರ ಒಂಬತ್ತು ಕೃತಿಗಳು ಲೋಕಾರ್ಪಣೆಗೊಂಡಿವೆ. ಹಲವಾರು ಸಂಘ ಸಂಸ್ಥೆಗಳು ಇವರನ್ನು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಪಾಣೆಮಂಗಳೂರು ಹೋಬಳಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಹೆಗ್ಗಳಿಗೆಯೂ ಇವರದ್ದು. ಬಂಟ್ವಾಳದಲ್ಲಿ ಪ್ರಥಮವಾಗಿ ಚುಟುಕು ಸಾಹಿತ್ಯ ಪರಿಷತ್ತು ಹುಟ್ಟು ಹಾಕಿದ ಕೀರ್ತಿಯೂ ಇವರಿಗೆ ಸಲ್ಲಬೇಕು. ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದರೂ ಸರಳ, ಸಹೃದಯದ ವ್ಯಕ್ತಿಯಾದ ಹಾ ಮ ಸತೀಶರ ಲೇಖನಿಯಿಂದ ಇನ್ನಷ್ಟು ಸಾಹಿತ್ಯ ಕೃಷಿ ನಡೆಯಲೆಂದು ಹಾರೈಕೆ ಸರ್ವ ಸಾಹಿತ್ಯ ಪ್ರಿಯರದ್ದು.