ಪ್ರಕ್ಷುಬ್ಧ, ಫ್ಯಾಂಟಸ್ಮಗೋರಿಕ್ ರಾತ್ರಿಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೬
ಪ್ರಕ್ಷುಬ್ಧ, ಫ್ಯಾಂಟಸ್ಮಗೋರಿಕ್ ರಾತ್ರಿಃ
ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೬
(೧೦೭)
ಹುಡುಗರ ಹಾಸ್ಟೆಲ್ಲಿನ ಕೋಣೆಗಳ ನಡುವೆ, ಸ್ವಲ್ಪ ಮರೆಯಲ್ಲಿ ಇದ್ದ ಹಾಳುಬಾವಿಯನ್ನು ಎಷ್ಟೋ ಹುಡುಗರು ಅಲ್ಲಿದ್ದಷ್ಟೂ ದಿನ ನೋಡಿಯೇ ಇರುವುದಿಲ್ಲ. ವೀಕ್ಷಿಸಲು ನಿರಾಕರಿಸುವ ಮನಸ್ಸಿನ ತಾಣವನ್ನೇ ಪಾಳುಜಾಗವೆನ್ನುವುದು. ಅದರ ಮೇಲೆ ಬೆನ್ನು ನೆಟ್ಟಗಿರಿಸಿಕೊಂಡು ಕುಳಿತಿದ್ದ ಪ್ರಕ್ಷುಬ್ ದಾ. ಹತ್ತುನಿಮಿಷ ಕಾಲ ಏನು ಮಾತನಾಡುವುದೆಂದು ತಿಳಿಯದೆ ಆತನನ್ನೇ ದಿಟ್ಟಿಸುತ್ತ ಕುಳಿತಿದ್ದೆ. ಒಮ್ಮೆಲೆ ಏನೋ ಹೊಳೆದಂತಾಯ್ತು. ೧೯೯೨ರಲ್ಲಿ ಪ್ರಕ್ಷು ಹೇಗಿದ್ದನೋ ಈಗಲೂ ಹಾಗೆಯೇ ಇದ್ದ! ’ಬ್ಯೂಟಿಫುಲ್ ಮೈಂಡ್’ ಸಿನೆಮದಲ್ಲಿ ಗಣಿತಜ್ಞನನ್ನು ಕಾಡುವ, ಅಸ್ಥಿತ್ವದಲ್ಲಿಲ್ಲದ ವ್ಯಕ್ತಿಗಳಿಗೆ ವಯಸ್ಸಾಗುವುದೇ ಇಲ್ಲವಲ್ಲ ಹಾಗೆಯೇ ಈತ ಎನ್ನಿಸಿಬಿಟ್ಟಿತು.
"ಪ್ರಕ್ಷು. ನಿನಗೆ ವಯಸ್ಸಾಗುವುದೇ ಇಲ್ಲವೆ?"
"ಬ್ಯೂಟಿಫುಲ್ ಮೈಂಡ್ ನೆನೆಸಿಕೊಂಡೆಯಲ್ಲವೆ. ನನಗೆ ವಯಸ್ಸಾಗದಂತೆ ನಿನಗೆ ಕಾಣಲು ಕಾರಣ ರಾತ್ರಿಯ ಈ ಕೃತಕ ಬೆಳಕು. ಎಂದಾದರೂ ಈ ವಿಷಯ ಯೋಚಿಸಿ ನೋಡಿರುವೆಯ--ಬೆಳಿಗ್ಗೆಯಿಂದ ಸಂಜೆಯವರೆಗೂ ಬೆಳಕು ವ್ಯತ್ಯಾಸವಾಗುತ್ತಿರುತ್ತದೆ. ರಾತ್ರಿಯಿಂದ ಬೆಳಿಗ್ಗೆವರೆಗೂ ಯಾವ ಜಾವ, ಅಥವ, ಸಮಯ ಎಷ್ಟೆಂದು ಹೇಳಲಾಗುವುದಿಲ್ಲ, ಆಕಾಶದಲ್ಲಿ ನಕ್ಷತ್ರಗಳನ್ನು ನೋಡಿ ಜಾವ-ಎಣಿಸುವ ಕಲೆ ಗೊತ್ತಿಲ್ಲದಿದ್ದಲ್ಲಿ. ಅಲ್ಲವೆ? ಅಂದರೆ ರಾತ್ರಿಬೆಳಗಾಗುವ ವ್ಯತ್ಯಾಸವನ್ನು ಮನುಷ್ಯರು ಬೆಳಕಿನ ಮಾಯೆಯಿಂದ ಅಳೆಯುವ ಬದಲಿಗೆ ಕಾಲನ ಆಧಾರದ ಮೇಲೆ ಅಳೆಯುತ್ತಾರೆ. ಆದಿಯಿಂದಲೂ ಮನುಷ್ಯನ ಯೋಚನೆ ಹಾದಿ ತಪ್ಪಿದ್ದು ಇಂತಹ ಎಡವಟ್ಟುಗಳಿಂದಲೇ ಅಲ್ಲವೆ."
ಅಷ್ಟರಲ್ಲಿ ಬಿಸಿಯ ಧಗೆ ತಡೆಯಲಾರದೆ ಕಲಾಭವನದ ನಾಲ್ಕಾರು ಹುಡುಗರು ಬಕೆಟ್ಟುಗಳಲ್ಲಿ ನೀರು ಹಿಡಿದುಕೊಂಡು ಹೊರಗೋಡಿ ಬಂದರು. ಒಬ್ಬರ ಮೇಲೆ ಒಬ್ಬರು ಚೆಲ್ಲಾಡಿದರು. ಖುಷಿಯಾಗುವ ಬದಲಿಗೆ ನೀರು ಬೀಳಿಸಿಕೊಂಡವರು ಚೀರಾಡತೊಡಗಿದರು.
"ಪಾಪಿಗಳು, ನೀರು ಬಿಸಿ ಮಾಡಿ ಒಬ್ಬರ ಮೇಲೊಬ್ಬರು ಈ ಬಿಸಿಯಲ್ಲಿ ಎರಚಾಡುತ್ತಿದ್ದಾರೆ," ಎಂದು ನಕ್ಕ ಪ್ರಕ್ಷು. ಆತ ಮಾತನಾಡಿದ್ದನ್ನು ಕೇಳಿಸಿಕೊಂಡವರಂತೆ ಅವರೆಲ್ಲ ನಾನು, ಪ್ರಕ್ಷು ಕುಳಿತಿದ್ದ ಕಡೆ ನೋಡಿದರು. ಇದ್ದಕ್ಕಿದ್ದಂತೆ ಸುಮ್ಮನಾಗಿಬಿಟ್ಟರು. "ಯಾರದು" ಎಂದ ಅವರಲ್ಲೊಬ್ಬ.
"ನಾನು ಅನಿಲ್ ದಾ. ಮತ್ತು ಪ್ರಕ್ಷು" ಎಂದೆ.
ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಒಬ್ಬ ನಮ್ಮೆಡೆ ಬರತೊಡಗಿದ. ಉಳಿದವರು ಆತನನ್ನು ತಡೆಯುವ ಪ್ರಯತ್ನ ಮಾಡಿದರು. "ನೋಡಿಯೇ ಬಿಡುತ್ತೇನೆ, ಇಂದು," ಎಂದೇನೋ ಗೊಣಗುತ್ತ ನನ್ನ ಬಳಿ ಬಂದ.
"ಅನಿಲ್ ದಾ, ಇಷ್ಟೊತ್ತಿನಲ್ಲಿ ಏನು ಮಾಡುತ್ತಿದ್ದೀರ?" ಎಂದ.
"ನಾನು ಪ್ರಕ್ಷು ಮಾತನಾಡುತ್ತಿದ್ದೇವೆ. ಅಷ್ಟೇ" ಎಂದೆ.
"ಎಲ್ಲಿ ಪ್ರಕ್ಷುಬ್ ದಾ?" ಎಂದ. ಪಕ್ಕದಲ್ಲಿ ತಿರುಗಿ ನೋಡಿದರೆ ಪ್ರಕ್ಷು ಇಲ್ಲ. ಅಷ್ಟು ದೂರದಲ್ಲಿ, ಮರದ ಮರೆಯಲ್ಲಿ ಮೊತ್ರವಿಸರ್ಜನೆ ಮಾಡುವಂತೆ ಆತ ನಿಂತಿದ್ದ. "ಅಲ್ಲಿ ನೋಡು" ಎಂದೆ. ಆ ಹುಡುಗ ಅತ್ತಲೇ ಹೋದ. ಸ್ವಲ್ಪ ಸಮಯದ ನಂತರ ಯಾರೋ ದಢಾರನೆ ಬಿದ್ದ ಸದ್ದು. ಮಿಕ್ಕುಳಿದವರೆಲ್ಲ ಆ ಕಡೆ ಓಡಿದರು. ನಾನು ಗಾಭರಿಯಾಗಿ ನಿಂತೆ.
(೧೦೮)
ಮಲಗಿದಂತೆ ಬಿದ್ದಿದ್ದ ಆ ಹುಡುಗನನ್ನು ಎಲ್ಲರೂ ಎತ್ತಿಕೊಂಡು ತಂದು ಹಾಸ್ಟೆಲ್ಲಿನ ರೂಮೊಂದರಲ್ಲಿ ಮಲಗಿಸಿದೆವು. ಆತ ಪೂರ್ತಿ ಪ್ರಜ್ಞೆ ಕಳೆದುಕೊಂಡಿರಲಿಲ್ಲ. ಎಚ್ಚರಗೊಂಡ. ಬೆಂಗಾಲಿ ಹೊರತುಪಡಿಸಿ ಆತನಿಗೆ ಬೇರೆ ಯಾವ ಭಾಷೆಯೊ ಸರಿಯಾಗಿ ಬರುತ್ತಿರಲಿಲ್ಲ. "ಕೀಯೋಲೋ? (ಏನಾಯಿತು)" ಎಂದು ಕೇಳಿದೆ. ಅದೇನೇನೋ ಬಡಬಡಿಸಿದ. "ಪ್ರಕ್ಷು..." ಎಂಬ ಪದ ಮಾತ್ರ ತಿಳಿಯುತ್ತಿತ್ತು. "ಪ್ರಕ್ಷುವಿಗೇನಾಯಿತು?" "ಏನಿಲ್ಲ. ಪ್ರಕ್ಷು...." ಎಂದಷ್ಟೇ ಹೇಳುತ್ತ ಎದ್ದು ಕುಳಿತ. ಆತ ಎಡವಿಬಿದ್ದು ಕಾಲಿನಲ್ಲಿ ತರಚಿದ ಗಾಯವಾಗಿತ್ತು. ಯಾರೋ ಡೆಟಾಲ್ ನೀಡಿದರು. ಹತ್ತು ನಿಮಿಷದಲ್ಲಿ ಎಲ್ಲರೂ ಆತನನ್ನು ಮರೆತವರಂತೆ, ಬಿಸಿನೀರಿನ ಆಟ ಶುರುವಿಟ್ಟುಕೊಂಡರು.
ನಾನು ಇಡೀ ರಾತ್ರಿಯ ಘಟನಾವಳಿಗಳ ಅಸಂಬದ್ಧ ಸಂಬಂಧಗಳನ್ನು ಪುನರಾವಲೋಕನ ಮಾಡಿಕೊಳ್ಳತೊಡಗಿದೆ. ಅದಾಗಲೇ ಬೆಳಗಿನ ಜಾವ ಮೊರೂಕಾಲು ಗಂಟೆಯಾಗಿತ್ತುಃ
(ಆ) ರಾತ್ರಿ ತಡವಾಗಿ ಪ್ರಕ್ಷು ಸಿಕ್ಕಿದ್ದ ಕಲಾಭವನದ ಕ್ಯಾಂಟೀನಿನ ಸಮೀಪ. ಕ್ಯಾಂಟೀನ್ ಹುಡುಗರು ನಿದ್ರಿಸಲೂ ತಡಬಡಾಯಿಸಿದ್ದರು.
(ಆ) ನಂತರ ಬ್ಲಾಕ್ ಹೌಸಿನೊಳಗಿನ ರಾಮ್ಕಿಂಕರ್ ರೋಧಿಸುವ ದೃಶ್ಯದ ಸರ್ರಿಯಲ್ ಘಟನೆಯ ವಾಹಕನಾದ ಪ್ರಕ್ಷುಬ್ದ ಮತ್ತು ಗಾಭರಿಗೊಂಡ ಆ ಕೋಣೆಯ ವಿದ್ಯಾರ್ಥಿ.
(ಇ) ಆ ನಂತರ ಹಾಳುಬಾವಿಯ ಬಳಿಯ ಪ್ರಕ್ಷುವಿನ ಇರುವಿಕೆಯಿಂದಲೇ ಅಕ್ಷರಶಃ ಎಡವಿಬಿದ್ದ ಮತ್ತೊಬ್ಬ ವಿದ್ಯಾರ್ಥಿ.
ಈ ಮೊರು ಗಂಟೆಕಾಲದ, ಮೊರು ಘಟನೆಗಳ ನಡುವಿನ ಸಂಬಂಧ, ಮತ್ತು ತಂತು ಏನಿರಬಹುದೆಂದು ಮೆಲುಕುಹಾಕುತ್ತ, ಕ್ಯಾಂಪಸ್ಸಿನ ಆವರಣದಲ್ಲಿ ವಿಕ್ಷಿಪ್ತವಾಗಿ ಕಾಣಿತ್ತಿದ್ದ ಶಿಲ್ಪ, ಭಿತ್ತಿಚಿತ್ರಗಳನ್ನೆಲ್ಲ ನೋಡುತ್ತ, ಹಾಡುತ್ತಿದ್ದ ವಾಚ್ಮನ್ನ ಹಾಡು, ಇವೆಲ್ಲವನ್ನೂ ಬಾಯಾರಿದವ ನೀರು ಕುಡಿವ ಶೈಲಿಯಲ್ಲಿ ಮಾನಸಿಕವಾಗಿ ಹೀರತೊಡಗಿದೆ. ಅಲೆಗ್ಸಾಂಡರ್ ದೊರೆಯ ಸೈನಿಕರು ಬಾಯಾರಿದ್ದ ರೀತಿಗೆ, ಎದಿರು ಕಂಡ ನದಿಗೆ ಬಿದ್ದು ನೀರು ಕುಡಿದ ರಭಸಕ್ಕೆ ಹೃದಯ ಹಿಡಿದು, ನೂರಾರು ಜನ ಆನ್-ದ-ಸ್ಪಾಟ್ ಘೊಟಕ್ ಅಂದದ್ದನ್ನು ನೆನೆಸಿಕೊಂಡೆ.
(೧೦೯)
ಮೊರ್ಚೆ ಬಿದ್ದು, ಎದ್ದ ಹುಡುಗನ ಸುತ್ತಲಿದ್ದ ಹುಡುಗರ ಗಲಾಟೆ ದಾಟಿ ಆಚೆ ನೋಡಿದೆ. ಪ್ರಕ್ಷು ನನ್ನನ್ನು ಸಂಜ್ಞೆ ಮಾಡಿ ಕರೆಯುತ್ತಿದ್ದ. ಇದಕ್ಕಿಂತಲೂ ಸರ್ರಿಯಲ್ ಆದ ರಾತ್ರಿ ಸಾಧ್ಯವಿಲ್ಲ ಎಂದುಕೊಂಡು ಹೊರಬಂದೆ.
"ಹೇಳು ಪ್ರಕ್ಷು. ಈ ರಾತ್ರಿ ನಡೆಯುತ್ತಿರುವುದಕ್ಕೆಲ್ಲ ಏನಾದರೂ ಕಾರ್ಯ-ಕಾರಣ ಸಂಬಂಧವೆಂಬುದಿದೆಯೆ?" ಎಂದು ಕೇಳಿದೆ, ಯಾವುದೇ ನೇರ ಉತ್ತರದ ಸಾಧ್ಯತೆ ಇಲ್ಲವೆನ್ನಿಸಿದರೂ ಸಹ.
"ಅನಿಲ್, ನಿನ್ನನ್ನು ಬಾಧಿಸುವ ಅತ್ಯಂತ ತೀವ್ರವಾದ ಪ್ರಶ್ನೆ ಏನು?" ಎಂದ ಪ್ರಕ್ಷು.
"ಏನಿಲ್ಲ" ಎಂದು ಸುಳ್ಳುಹೇಳಿದೆ, ಆತನನ್ನು ಅಟಕಾಯಿಸಲೆಂದು.
"ಆಲ್ಲಿ ನೋಡು. ರಾಮ್ಕಿಂಕರರ ’ಸಂತಾಲಿ ಸಂಸಾರ’ ಶಿಲ್ಪದ ಸುತ್ತಲೇ ಹಗಲೂ ಇರುಳೂ ದುಡಿವ ಸಂತಾಲಿಗಳಾಗಲಿ, ಎಲ್ಲಿಂದಲೋ ಮತ್ತೆಲ್ಲಿಗೋ ಹೋಗುವ ಸಂತಾಲಿ ಜನರಾಗಲಿ, ಈ ಶಿಲ್ಪವನ್ನು ಕಂಡು ಏನು ಭಾವಿಸಬಹುದು? ಕುದುರೆ ಮಾಂಸ ಮಾರುವ ಮಾಂಸದಂಗಡಿಯ ಮುಂದೆ ಹಾದು ಹೋಗುವಾಗ ಜೀವಂತ ಕುದುರೆಗೆ ಏನನ್ನಿಸಬಹುದು, ಹೇಳು?" ಎಂದು ಕೇಳಿದ.
ನಾನು ಸುಮ್ಮನಿದ್ದೆ. "ಲಿಯೊನಾರ್ಡೊ ಡಾ ವಿಂಚಿ, ಕೆ.ವೆಂಕಟಪ್ಪ ಮುಂತಾದ ಕಲಾವಿದರು ತಮ್ಮ ತಮ್ಮ ಕೊನೆಯ ದಿನಗಳಲ್ಲಿ ಕಲಾಸೃಷ್ಟಿಯನ್ನು ನಿಲ್ಲಿಸಿಬಿಟ್ಟಿದ್ದು ಏಕೆ ಹೇಳು?" ಎಂದ.
"ಪ್ರಾಯಶಃ ಬದುಕಿನ ’ಪ್ರಕ್ಷುಬ್ಧ’ತೆಯ ಬಗ್ಗೆ ತುಡಿತ ಹೆಚ್ಚಾಗಿ, ಅದಕ್ಕೆ ಉತ್ತರ ರೂಪಿಯಾಗಿ ಕಲೆಯು ಅಷ್ಟು ಸಮಂಜಸವಾದ ಮಾಧ್ಯಮ ಎನ್ನಿಸದೇ ಹೋಗಿರಬಹುದು, ಅವರುಗಳಿಗೆ" ಎಂದೆ.
"ಪಾಯಿಂಟ್ ಟು ಬಿ ನೋಟೆಡ್. ಆದರೆ ಎಷ್ಟೇ ಚೆನ್ನಾಗಿರುವ ಸಿನೆಮ ಆದರೂ ಅದನ್ನು ಒಂದೈದಾರು ಬಾರಿ ನೋಡಿದ ಮೇಲೆ ಬೇಸರ ಬಂದುಬಿಡುತ್ತದೆ ಜನಸಾಮಾನ್ಯರಿಗೆ. ಅದೇ ಸಿನೆಮ ಹಾಡುಗಳನ್ನು ವರ್ಷಗಟ್ಟಲೆ, ದಶಕಗಟ್ಟಲೆ ಮತ್ತೆ ಮತ್ತೆ ಕೇಳಬೇಕೆನ್ನಿಸುವುದು ಏಕೆ? ಯೋಚಿಸಿ ನೋಡು. ದೃಶ್ಯಕ್ಕಿಂತಲೂ ಶ್ರವ್ಯ ಹೆಚ್ಚು ಕುತೂಹಲಕಾರಿ ಎಂಬ ಕಾರಣಕ್ಕೇನಲ್ಲ. ಅದೇ ರೀತಿ ಕಲಾವಿದರು ಸತ್ತಾಗ, ಅವರ ಕೃತಿಗಳು ಶತಮಾನಗಳ ಕಾಲ ಬದುಕಿದ್ದಾಗಲೂ, ಮ್ಯೋಸಿಯಂಗಳಲ್ಲಿ, ಗ್ಯಾಲರಿಗಳಲ್ಲಿ ಜನ ಅದನ್ನು ನೋಡಲಿಕ್ಕೆ ಪ್ರವಾಸ ಹೋಗುವುದು ಏಕೆ? ನಿಜ ಹೇಳು. ನೀನು ಇಲ್ಲಿ ಪರೀಕ್ಷಕನಾಗಿ ಬಂದಿರುವುದು ಒಂದು ನೆಪವಷ್ಟೇ ಅಲ್ಲವೆ? ಮತ್ತೇನನ್ನೋ ಹುಡುಕಿ ಬಂದಿದ್ದೀಯ ಅಲ್ಲವೆ?" ಎಂದೇನೇನೋ ಬಡಬಡಾಯಿಸತೊಡಗಿದ.
"ಸರಿ. ನನ್ನ ಪ್ರಶ್ನೆಗಳನ್ನು ನಿನಗೆ ಹೇಳುವ ಅವಶ್ಯಕತೆಯೊ ಇಲ್ಲ. ನೀನು ಏಕಸಂಧಿಗ್ರಾಹಿ ಮತ್ತು ಸರ್ವಗ್ರಾಹಕ. ಅಂದರೆ ’ಸರ್ವರ್’ ಮತ್ತು ಗ್ರಾಹಕ. ನೀನೇ ಗ್ರಹಿಸುತ್ತೀಯ, ಪ್ರಶ್ನಿಸುತ್ತೀಯ ಮತ್ತು ಅದಕ್ಕೆ ಉತ್ತರವನ್ನೂ ಸರ್ವ್ ಮಾಡುತ್ತೀಯ. ನನಗೇ ಅರ್ಥವಾಗದ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಪರಿಹಾರ ತಿಳಿಸು ಗುರುವೆ" ಎಂದು ಅರ್ಧ ಲೇವಡಿ ಮಾಡಿದೆ.
(೧೧೦)
"ನಿನಗೇ ಅರ್ಥವಾಗದ ಸಮಸ್ಯೆ, ಪ್ರಶ್ನೆಗಳಿಗೆ ಉತ್ತರ ಆಕಾಶದಲ್ಲಿದೆ. ಕಲಾಕೃತಿಗಳನ್ನು ವಿನಾಕಾರನ ನಾಶ ಮಾಡಿದರೆ, ಅದು ಸೇಡು ತೀರಿಸಿಕೊಳ್ಳುತ್ತದೆ. ಕೃತಿ ರಚನೆಗೊಂಡಾಗ, ಕಲಾವಿದ ಮತ್ತು ಆತನ ಸುತ್ತಮುತ್ತಲಿನವರ ನಡುವೆ ನಡೆದಿರಬಹುದಾದ ಎಲ್ಲ ಆಗುಹೋಗುಗಳೂ ಕೃತಿಯೊಳಗೆ ದಾಖಲುಗೊಂಡಿರುತ್ತವೆ. ಅದನ್ನೇ ವಾಲ್ಟರ್ ಬೆಂಜಮಿನ್ ’ಆರ’ ಅಥವ ಪ್ರಭೆ ಎನ್ನುವುದು. ಅಸ್ಟ್ರಾನಮಿ ಅಥವ ವ್ಯೋಮವಿಜ್ಞಾನದ ಬಗ್ಗೆ ನಿನ್ನ ಅತ್ಯಂತ ಫ್ಯಾಂಟಸಿ ಏನು ಹೇಳು ಗೆಳೆಯ" ಎಂದು ಕಾಲು ಎಳೆಯತೊಡಗಿದ.
"ಓಕೆ ಪ್ರಕ್ಷುಬ್ಧ. ನಿನ್ನ ಕುತೂಹಲ ನನಗೆ ಅರ್ಥವಾಗುತ್ತದೆ. ನೀನೊಬ್ಬನೇ ಇನ್ನೊಬ್ಬರ ಮನಸ್ಸನ್ನು ಓದುವ ಭೂಪನಲ್ಲ. ಅಸ್ಟ್ರಾನಮಿ ಬಗ್ಗೆ ನಿನಗಿರುವ ಆಸಕ್ತಿ ಕಲಾಭವನಕ್ಕೇ ಜಗತ್ಪ್ರಸಿದ್ದ. ಹೇಳು ಜನಮೇಜಯ, ನಿನ್ನಯ ಅಭಿಪ್ರಾಯಃ ಆಕಾಶಕ್ಕೂ ಬದುಕಿನ ಅರ್ಥ-ವ್ಯಾಖ್ಯೆ-ನಿಗೂಢಗಳಿಗೂ ಸಂಬಂಧವೇನು?"ಎಂದು ಆತನನ್ನು ಪೀಡಿಸತೊಡಗಿದೆ.
ಪ್ರಕ್ಷುವಿನ ಮುಖದಲ್ಲಿ ಮಂದಹಾಸ ಮಿನುಗಿತು, ಗ್ರೀಕರ ಅಪೋಲೋ ಶಿಲ್ಪಗಳ ಮತ್ತು ಭಾರತದ ಬುದ್ಧನ ಮುಖದ ಮೇಲಿನ ಮಂದಹಾಸದಂತೆ. ಆತ ಮಾತನಾಡಲು ಶುರು ಹಚ್ಚಿದಃ
"ನಾವು ಅಣುವಿನ ಬಗೆಗೆ ತೋರಿಸುವ ಜಿಜ್ಞಾಸೆಯನ್ನು ಕಂಡು ವಿಶ್ವವು ಅಣುವಿನ ಸಮನಾದ ನಮ್ಮನ್ನು ಕಂಡು ನಗುತ್ತದೆ," ಎಂದು ಮುಂದಿನ ಸುದೀರ್ಘ ವಿವರಣೆಗೆ ಮುನ್ನುಡಿ ಹಾಕಿದ. ಅಬ್ಬ, ಆತ ಮೊದಲೆಲ್ಲ ಬಡಬಡಿಸುತ್ತಿದ್ದ ಮೋಕ್ಷದ ವಿವರಗಳ ಸತ್ಯಾಸತ್ಯತೆ ಅಥವ ಅದರ ಅಥೆಂಟಿಸಿಟಿಯ ಬಗ್ಗೆ ಈಗಲಾದರೂ ಕಿಂಚಿತ್ತು ಬೆಳಕು ಬಿದ್ದೀತು ಎಂದು ’ಮೈಯಲ್ಲ ಕಣ್ಣಾಗುವ’ ಕ್ಲೀಷಾತ್ಮಕ ಏಕಾಗ್ರತೆಯಿಂದ ಸ್ವಲ್ಪ ನೆಟ್ಟಗೆ ಕುಳಿತೆ.
ಆಗ ಸಮಯ ಬೆಳಿಗ್ಗೆ ನಾಲ್ಕು ಗಂಟೆ!//
Comments
ಉ: ಪ್ರಕ್ಷುಬ್ಧ, ಫ್ಯಾಂಟಸ್ಮಗೋರಿಕ್ ರಾತ್ರಿಃ ಶಾಂತಿನಿಕೇತನವೆಂಬ ...