ಪ್ರಚಂಡ ಚೋರ

ಪ್ರಚಂಡ ಚೋರ

ಪುಸ್ತಕದ ಲೇಖಕ/ಕವಿಯ ಹೆಸರು
ಎನ್ ನರಸಿಂಹಯ್ಯ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ. ೬೫.೦೦, ಮುದ್ರಣ: ೨೦೧೧

ಪ್ರಚಂಡ ಚೋರ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ ಬಾಳಿದವರು. 

೬೦-೭೦ರ ದಶಕದಲ್ಲಿ ತಿಂಗಳಿಗೊಂದರಂತೆ ಕಾದಂಬರಿಯನ್ನು ಅದೂ ಪತ್ತೇದಾರಿ ಸಾಹಿತ್ಯವನ್ನು ಬರೆದು ಜನರಿಗೆ ಓದುವುದರ ಚಟವನ್ನು ಹಿಡಿಸಿದವರು ನರಸಿಂಹಯ್ಯನವರು. ಇವರು ಹಲವಾರು ಕಾಲ್ಪನಿಕ ಪತ್ತೇದಾರರಿಗೆ ಜನ್ಮದಾತರು. ಮಧುಸೂದನ, ಅರಿಂಜಯ, ಗಾಳೀರಾಯ, ಪುರುಷೋತ್ತಮ ಎಂಬೆಲ್ಲಾ ಹೆಸರಿನ ಪತ್ತೇದಾರರ ನೂರಕ್ಕೂ ಮಿಗಿಲಾದ ಸಾಹಸ ಕಥೆಗಳನ್ನು ಓದುಗರಿಗೆ ಉಣಬಡಿಸಿದ ಖ್ಯಾತಿ ಇವರದ್ದು. 

ಪ್ರಚಂಡ ಚೋರ ಕಾದಂಬರಿಯು ಕಳ್ಳನೊಬ್ಬನ ತಂತ್ರ ಮತ್ತು ಸಾಮರ್ಥ್ಯದ ವಿಷಯವಾಗಿ ಬರೆಯಲಾಗಿದೆ. ನರಸಿಂಹಯ್ಯನವರು ಈ ರೀತಿಯ ಚಿತ್ರ-ವಿಚಿತ್ರ ಕಳ್ಳಕಾಕರ ಬಗ್ಗೆ ಕಾದಂಬರಿಯನ್ನು ಬರೆಯುವುದರಲ್ಲಿ ಸಿದ್ಧ ಹಸ್ತರು. ಇವರು ಬರೆಯುತ್ತಿದ್ದ ಸಮಯದಲ್ಲಿ ಜನರಲ್ಲಿ ಕಳ್ಳತನ, ಮಾಟ ಮಂತ್ರ ತಂತ್ರಗಳ ಬಗ್ಗೆ ಬಹಳಷ್ಟು ಕುತೂಹಲವೂ, ಮೂಢನಂಬಿಕೆಯೂ ಬಲವಾಗಿತ್ತು. ಈ ನಂಬಿಕೆಯಿಂದಲೇ ನರಸಿಂಹಯ್ಯನವರು ಬಹಳಷ್ಟು ಕಾದಂಬರಿಗಳಲ್ಲಿ ಭೂತ-ಪ್ರೇತ, ಮಾಟ-ಮಂತ್ರದ ಬಗ್ಗೆ ರೋಚಕವಾಗಿ ಬರೆದಿದ್ದಾರೆ. 

ನರಸಿಂಹಯ್ಯನವರ ಬರಹ ಬಹಳ ಸರಳ. ಆಗಿನ ಕಾಲದ ಓದುಗರಿಗೆ ಇದು ಬಹಳವಾಗಿ ರುಚಿಸಿದರೂ ಈಗಿನ ಜನಾಂಗಕ್ಕೆ ಇದು ಇಷ್ಟವಾಗುವುದು ಕಷ್ಟ. ಈಗಿನವರು ದೆವ್ವ-ಭೂತಗಳನ್ನು ನಂಬುವುದೂ ಕಷ್ಟ. ಆದರೂ ಹಿಂದಿನ ಓದಿನ ನೆನಪುಗಳನ್ನು ತಾಜಾ ಮಾಡಲು ಅಂದಿನ ಓದುಗರಿಗೆ ಇದೊಂದು ಸುವರ್ಣಾವಕಾಶ. ೨೦೧೦ರ-೨೦೧೧ಲ್ಲಿ ಸಪ್ನ ಬುಕ್ ಹೌಸ್ ಅವರು ಎನ್.ನರಸಿಂಹಯ್ಯನವರ ಬಹಳಷ್ಟು ಕಾದಂಬರಿಗಳನ್ನು ಮರುಮುದ್ರಣ ಮಾಡಿರುವರು. ಸಾಹಿತಿ ಕುಂ.ವೀರಭದ್ರಪ್ಪನವರು ಈ ಪತ್ತೇದಾರಿ ಕಾದಂಬರಿಗಳ ಸರಣಿಗೆ ಬೆನ್ನುಡಿ ಬರೆದಿದ್ದಾರೆ. ಪತ್ತೇದಾರ ಮಧುಸೂದನನ ಹನ್ನೊಂದನೆಯ ಪರಿಶೋಧನಾ ಚತುರತೆಯ ೧೫೪ ಪುಟಗಳ ಈ ಕಾದಂಬರಿಯನ್ನು ಸರಾಗವಾಗಿ ಒಂದೇ ಗುಟುಕಿನಲ್ಲಿ ಓದಿ ಮುಗಿಸಬಹುದು.