ಪ್ರಚಂಡ ಪತ್ತೇದಾರ

ಪ್ರಚಂಡ ಪತ್ತೇದಾರ

ಪುಸ್ತಕದ ಲೇಖಕ/ಕವಿಯ ಹೆಸರು
ಬಿ.ಎಲ್.ಕೃಷ್ಣಮೂರ್ತಿ
ಪ್ರಕಾಶಕರು
ಬಿ.ಎಲ್.ಕೃಷ್ಣಮೂರ್ತಿ, ಮಹಾಲಕ್ಷ್ಮೀಪುರಂ, ಬೆಂಗಳೂರು
ಪುಸ್ತಕದ ಬೆಲೆ
೯೦.೦೦, ಮುದ್ರಣ : ೨೦೦೨

ಪ್ರಚಂಡ ಪತ್ತೇದಾರ ಪುಸ್ತಕದ ಲೇಖಕರಾದ ಬಿ.ಎಲ್.ಕೃಷ್ಣಮೂರ್ತಿಯವರು ಬೆಂಗಳೂರಿನ ಸಹಾಯಕ ಪೋಲೀಸ್ ಕಮೀಷನರ್ ಆಗಿ ನಿವೃತ್ತ ಹೊಂದಿದವರು. ಸ್ವಾತಂತ್ರ್ಯ ಪೂರ್ವ ದಿನಗಳಲ್ಲಿ ಆಂಗ್ಲರ ಆಡಳಿತದಲ್ಲಿದ್ದ ಬೆಂಗಳೂರು ದಂಡು ಪ್ರದೇಶದ ಬೆಂಗಳೂರು ಪೋಲೀಸ್ ಫೋರ್ಸ್ (BPF) ನಲ್ಲಿ ೧೯೪೨ರಲ್ಲಿ ಕಾನ್ ಸ್ಟೇಬಲ್ ದರ್ಜೆಯಲ್ಲಿ ನೌಕರಿಗೆ ಸೇರಿದ ಇವರು, ತರಭೇತಿ ಸಮಯದಲ್ಲಿ ತೋರಿದ ತಮ್ಮ ಅಸಾಧಾರಣ ಪ್ರತಿಭೆಯ ಕಾರಣದಿಂದ ಕೇವಲ ೧೬ ತಿಂಗಳಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಭಡ್ತಿ ಪಡೆದರು. ಭಾರತದಲ್ಲಿ ಇದೊಂದು ಅಪರೂಪದ ಪ್ರಕರಣ. ೧೯೫೭ರಲ್ಲಿ ಇನ್ಸ್ ಪೆಕ್ಟರ್ ಆಗಿ ಭಡ್ತಿ ಪಡೆದ ಇವರು ೧೯೬೯ರಲ್ಲಿ ಸಹಾಯಕ ಕಮೀಷನರ್ ಹುದ್ದೆಗೆ ಭಡ್ತಿ ಪಡೆದರು. ಪೋಲೀಸ್ ಇಲಾಖೆಯ ಎಲ್ಲಾ ಕ್ಷೇತ್ರಗಳಲ್ಲೂ ಪರಿಣತಿಯನ್ನು ಪಡೆದ ಇವರಿಗೆ ಇಲಾಲ್ಹೆಯಿಂದ ಸಿಗಬಹುದಾದ ಬಹುತೇಕ ಎಲ್ಲಾ ಪದಕಗಳು, ಪುರಸ್ಕಾರಗಳು ದೊರೆತಿವೆ. ೧೯೬೦ರಲ್ಲಿ ರಾಷ್ಟ್ರಪತಿಯವರ ಪೋಲೀಸ್ ಪದಕವೂ ದೊರೆತಿದೆ.

ಪತ್ತೇದಾರಿ ಸಾಹಿತ್ಯ ಲೋಕದಲ್ಲಿ ಮೊದಲ ಬಾರಿಗೆ ತಾವೇ ತನಿಖೆ ಮಾಡಿದ ನೈಜ ಘಟನೆಗಳ ರೋಮಾಂಚಕಾರಿ- ಕುತೂಹಲ ಭರಿತ ಲೇಖನಗಳ ಸರಣಿಯನ್ನು ೧೯೮೧-೮೪ರ ಅವಧಿಯಲ್ಲಿ ತುಷಾರ-ತರಂಗ ಪತ್ರಿಕೆಗಳಲ್ಲಿ ‘ಅಪರಾಧ - ಪತ್ತೆ- ಶಿಕ್ಷೆ' ಶೀರ್ಷಿಕೆಯಲ್ಲಿ ಪ್ರಕಟಗೊಂಡು ಲಕ್ಷಾಂತರ ಕನ್ನಡಾಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿ ಓದಿಸಿಕೊಂಡ ಕೀರ್ತಿ ಇವರ ಸಾಹಿತ್ಯದ ಮಟ್ಟಕ್ಕೆ ಅಳತೆಗೋಲು. ತುಷಾರ-ತರಂಗಗಳ ಸಂಪಾದಕರು ಲೇಖಕರಾದ ಬಿ.ಎಲ್.ಕೃಷ್ಣಮೂರ್ತಿಯವರ ಲೇಖನಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿ ಪತ್ರಗಳನ್ನು ಬರೆದು, ತಾವೇ ಇವರ ಲೇಖನಗಳನ್ನು ಆಹ್ವಾನಿಸುತ್ತಿದ್ದರು ಎಂದರೆ ಓರ್ವ ಸಾಹಿತಿಯಾಗಲೀ, ಲೇಖಕನಾಗಲೀ ಇದಕ್ಕಿಂತ ಹೆಚ್ಚಿನ ಗರಿಮೆಯನ್ನು ನಿರೀಕ್ಷಿಸಲು ಅಸಾಧ್ಯ.

ಪುಸ್ತಕದಲ್ಲಿ ನೈಜ ಘಟನೆಗಳನ್ನು ಆಧರಿಸಿದ ೨೭ ಪ್ರಕರಣಗಳು ಇವೆ. ಇವುಗಳು ಯಾವುದೇ ಪತ್ತೇದಾರಿ ಕಥೆಗಳಿಗಿಂತ ಕಮ್ಮಿ ಇಲ್ಲ. ಬಿರಿಯಾನಿ ರಾಜ, ಭೀಕರ ಕೊಲೆ, ಗಡ್ಡದ ಫಕೀರ, ಅಮಲಿನಲ್ಲಿ ಅಪಘಾತ, ಮಾಜಿ ನ್ಯಾಯಾಧೀಶರಿಗೆ ಜಾಮೀನು ರಹಿತ ವಾರೆಂಟ್, ಅತ್ಯಾಚಾರ, ದರೋಡೆ, ಭಾನಾಮತಿ, ಅಪರಾಧಿ ಸ್ಥಾನದಲ್ಲಿ, ಪರಿಹಾರ ಮುಂತಾದ ಕೆಲವು ಪ್ರಕರಣಗಳು ಬಹಳ ಸುಂದರವಾಗಿ, ರೋಚಕವಾಗಿ ಚಿತ್ರಿತವಾಗಿದೆ. ೨೪೦ ಪುಟಗಳ ಈ ಪುಸ್ತಕವನ್ನೊಮ್ಮೆ ನೀವು ಪತ್ತೇದಾರಿ ಸಾಹಿತ್ಯದಲ್ಲಿ ಆಸಕ್ತರಾಗಿದ್ದಲ್ಲಿ ಓದಿ ನೋಡಬಹುದು.