ಪ್ರಜಾಪ್ರಭುತ್ವಕ್ಕೆ ಮಾರಕವಿದು

ಇದು ಹೇಯ ಮತ್ತು ಅನಾಗರಿಕ ! ಚುನಾವಣಾ ಪ್ರಚಾರ ಎಂದರೆ ಬರೀ ಬೈಗುಳವೇ? ಪ್ರಪಂಚದ ಅತಿದೊಡ್ಡ ಪ್ರಜಾತಂತ್ರವಿಂದು ಎತ್ತ ಸಾಗಿದೆ? ಶಾಸನ ಸಭೆಗಳಲ್ಲಿ ದೇಶಕ್ಕೆ ಹಿತಕಾರಿಯಾದ ಶಾಸನಗಳನ್ನು ರಚಿಸಬೇಕಾದವರ ಬಾಯಿಂದ ಇಂದು ಸಾರ್ವಜನಿಕವಾಗಿ ಉದುರುತ್ತಿರುವ ಮಾತುಗಳು ಪ್ರಜಾತಂತ್ರದ ಪರಿಧಿ ಮೀರುತ್ತಿದೆ.
ರಾಜ್ಯ ವಿಧಾನಸಭೆ ಚುನಾವಣೆಯ ಪ್ರಚಾರದ ಭರಾಟೆ ಇಂದು ಮುಗಿಲು ಮುಟ್ಟಿದೆ. ಯಾವ ರಾಜಕೀಯ ಪಕ್ಷದ ನಾಯಕ ಜನತೆಯ ಮುಂದೆ ತಾನೇನು ಮಾತನಾಡುತ್ತಿದ್ದೇನೆಂಬ ಪರಿವೆಯೇ ಇಲ್ಲದಿರುವುದು ದುರ್ದೈವ. ಚುನಾವಣೆ ಎಂಬ ಉನ್ಮಾದದಲ್ಲಿ ತೇಲಾಡುತ್ತಿರುವ ನಾಯಕರು ತಮ್ಮ ಭಾಷಣಗಳಲ್ಲಿ ಅನಗತ್ಯವಾಗಿ ಎದುರಾಳಿಗಳನ್ನು ತೇಜೋವಧೆ ಮಾಡುವ ಹೀನಾಯ ಮಟ್ಟಕ್ಕೆ ಕೆಟ್ಟ ಭಾಷೆ ಮತ್ತು ಪದಗಳನ್ನು ಬಳಸುತ್ತಿರುವುದು ಶುದ್ಧ ನಾಚಿಕೆಗೇಡು.
ಚುನಾವಣೆ ಆಯೋಗವಾದರೂ ಇದಕ್ಕೆ ಲಗಾಮು ಹಾಕಬೇಕು. ಪ್ರಚೋದನಕಾರಿ ಮತ್ತು ಧರ್ಮ ಮತ್ತು ಜಾತಿಗಳ ಮೇಲೆ ಗಂಭೀರ ಪರಿಣಾಮ ಬೀರುವಂತಹ ಭಾಷಣಗಳನ್ನು ಮುಖ್ಯವಾಗಿ ತಡೆಯಬೇಕಾದ ಹೊಣೆಗಾರಿಕೆ ಇರುವುದೇ ಚುನಾವಣೆ ಆಯೋಗದ ಮೇಲೆ. ಯಾರೇ ಆಗಲಿ, ಯಾವುದೇ ಪಕ್ಷದ ನಾಯಕನೇ ಆಗಿರಲಿ, ಮುಲಾಜಿಲ್ಲದೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗಿರುವುದು ಚುನಾವಣೆ ಆಯೋಗ. ಆದರೆ ರಾಜ್ಯದ ವಿವಿಧ ಕಡೆ ಇಂದು ಪ್ರಚೋದನಾತ್ಮಕ ಮತ್ತು ನಿಂದನಾತ್ಮಕ ಭಾಷಣಗಳ ಸರಣಿ ಮಾಲೆ ವಿಪರೀತವಾಗಿದ್ದು ಇದಕ್ಕೆ ಕಡಿವಾಣ ಹಾಕುವುದು ಅನಿವಾರ್ಯ. ಇಲ್ಲವಾದಲ್ಲಿ ಈ ಚುನಾವಣೆಗಳು ಮುಗಿಯುವ ವೇಳೆಗೆ ರಾಜಕೀಯ ಜಿದ್ದು ಮತ್ತು ದ್ವೇಷ ಹಿಂಸಾತ್ಮಕ ರೂಪ ಪಡೆದುಕೊಳ್ಳುವುದರಲ್ಲಿ ಸಂದೇಹವಿಲ್ಲ. ಆಡಳಿತ ಪಕ್ಷವಿರಲಿ, ವಿರೋಧ ಪಕ್ಷಗಳ ನಾಯಕರೇ ಆಗಿರಲಿ ಅಥವಾ ಪಕ್ಷೇತರ ಅಭ್ಯರ್ಥಿಗಳೇ ಇರಲಿ. ಪ್ರಚಾರದ ವೇಳೆ ತಮ್ಮ ರಾಜಕೀಯ ಸಿದ್ಧಾಂತಗಳ ನೆಲೆಗಟ್ಟಿನ ಮೇಲೆ ಜನತೆಯ ಮತ ಕೇಳುವುದು ಪ್ರಜಾತಂತ್ರದ ಮೂಲ ಧರ್ಮ. ಆದರೆ ಪ್ರಜಾತಂತ್ರದ ಆರೋಗ್ಯಕರ ಬೇರುಗಳನ್ನೇ ರೋಗಗ್ರಸ್ಥವಾಗಿಸುವ ಅತಿ ದುಷ್ಟ ಸಂಪ್ರದಾಯವೀಗ ರಾಕ್ಷಸರೂಪ ಪಡೆಯುತ್ತಿರುವುದು ಅಪಾಯಕಾರಿ. ಜನತೆಯನ್ನು ತಪ್ಪು ದಾರಿಗೆಳೆದು ತಮಗಿಷ್ಟ ಬಂದಂತೆ ಸಾರ್ವಜನಿಕ ಸಭೆಗಳಲ್ಲಿ ನಿಂದನಾತ್ಮಕವಾಗಿ ಮಾತನಾಡುವುದೆಂದರೆ ಜನತೆ ಕೂಡಾ ಇಂತಹ ನಾಯಕರು ಶಾಸನ ಸಭೆಗಳ ಮೆಟ್ಟಲೇರದಂತೆ ಪಾಠವನ್ನು ಕಲಿಸುವ ಕಾಲ ಸನ್ನಿಹಿತವಾಗಿದೆ. ದೇಶದ ಸಂವಿಧಾನದಲ್ಲಿ ಅಡಕವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಆದಾಗ ಭಾರತೀಯ ದಂಡ ಸಂಹಿತೆ ಕೂಡಾ ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ. ಚುನಾವಣೆಗಳು ಪ್ರತಿ ಐದು ವರ್ಷಕ್ಕೊಮ್ಮೆ ಬರುತ್ತೆ. ದುರಂತ ಎಂದರೆ ಜನತೆಯ ಎದುರು ಹೇಗೆ ಮಾತನಾಡಬೇಕೆಂಬ ಸಾಮಾನ್ಯ ತಿಳುವಳಿಕೆ ಇಲ್ಲದವರೂ ಇಂದು ನಮ್ಮ ಪ್ರಜಾಪ್ರತಿನಿಧಿಗಳಾಗಿ ಆರಿಸಿ ಬರುತ್ತಿರುವುದು ! ಇವರೆಲ್ಲರಿಗೂ ಚುನಾವಣೆಗಳ ಸಮಯದಲ್ಲಿ ವೇದಿಕೆಗಳ ಮೇಲೆ ಯಾವ ರೀತಿ ಮಾತನಾಡಬೇಕೆಂಬ ಪೂರ್ವ ತಯಾರಿ ಬಗ್ಗೆ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ಅಗ್ರ ನೇತಾರರು ಗಂಭೀರವಾಗಿ ಆಲೋಚಿಸಬೇಕಾಗಿದೆ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೩-೦೫-೨೦೨೩
ಚಿತ್ರ ಕೃಪೆ: ಇಂಟರ್ನೆಟ್ ತಾಣ