ಪ್ರಜಾಪ್ರಭುತ್ವ ಮೌಲ್ಯದ ಅಧಃಪತನ
ಪ್ರಜಾಪ್ರಭುತ್ವ ವ್ಯವಸ್ಥೆ ಎಂದರೆ ಪ್ರಜೆಗಳಿಗೆ ಪರಮಾಧಿಕಾರ. ಇಲ್ಲಿ ರಚನೆಯಾಗುವುದು ಜನರದ್ದೇ ಸರಕಾರ. ಜನರು ಆರಿಸಿಕೊಳ್ಳುವ ಪ್ರತಿನಿಧಿಗಳು ಜನರ ಪರವಾಗಿ ಕಾನೂನುಗಳನ್ನು ರಚಿಸುತ್ತಾರೆ. ಶಿಸ್ತುಪಾಲನೆ ಪ್ರಜಾಪ್ರಭುತ್ವದ ಜೀವಾಳ. ನೈತಿಕ ಹಕ್ಕಿನ ತಳಹದಿ, ಸಾಮಾಜಿಕ ಬದ್ಧತೆ, ಸಮಾನತೆ ಇಲ್ಲದೆ ಜಗತ್ತಿನ ಯಾವುದೇ ದೇಶದ ಪ್ರಜಾಪ್ರಭುತ್ವವೂ ಬದುಕಿರಲಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಗದಿತ ಕಾಲಕ್ಕೆ ನಿಷ್ಪಕ್ಷಪಾತ, ಮುಕ್ತ ಚುನಾವಣೆಗಳು ನಡೆಯಬೇಕು. ಹೀಗೆ ನಡೆಯುವ ಚುನಾವಣೆಗಳಲ್ಲಿ ಬಹುಮತ ಪಡೆದ ಪಕ್ಷಗಳು ಸಹಜವಾಗಿ ಅಧಿಕಾರ ಹಿಡಿಯುತ್ತವೆ.
ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾತ್ರವಲ್ಲದೆ ಆಡಳಿತವನ್ನು ಸುಗಮಗೊಳಿಸಲು ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಲ್ಲಿದೆ. ಗ್ರಾಮ, ತಾಲೂಕು ಮತ್ತು ಜಿಲ್ಲ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರ ಸಭೆ, ಮಹಾನಗರ ಪಾಲಿಕೆಗಳ ಮುಖಾಂತರ ಅಧಿಕಾರ ವಿಕೇಂದ್ರಿಕರಣ ಮಾಡಲಾಗಿದೆ. ಈ ವಿಕೇಂದ್ರೀಕರಣ ವ್ಯವಸ್ಥೆಯಲ್ಲೂ ಅಧಿಕಾರ ಬರೀ ಉಳ್ಳವರ ಪಾಲಾಗದೆ ಎಲ್ಲ ಜಾತಿಗಳಿಗೂ ಅವಕಾಶ ಸಿಗಬೇಕು ಎಂಬ ಕಾರಣಕ್ಕೆ ಮೀಸಲಾತಿ ವ್ಯವಸ್ಥೆಯೂ ಇದೆ. ಆದರೆ, ಎಲ್ಲ ಪಕ್ಷಗಳಲ್ಲೂ ಆವರಿಸಿಕೊಂಡಿರುವ ಅಧಿಕಾರದ ಹಪಹಪಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಅಣಕಿಸುವಂತಿದೆ.
ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷ ಬಹುಮತ ಗಳಿಸಿ ಅಧಿಕಾರ ಹಿಡಿಯುವ ದಿನಗಳು ದೂರವಾದಾಗ ಸಮ್ಮಿಶ್ರ ಸರಕಾರದ ಪರಿಕಲ್ಪನೆ ಹಲವು ಅಪಸವ್ಯಗಳಿಗೆ ಕಾರಣವಾಗಿದೆ. ಅಧಿಕಾರ ಹಿಡಿಯುವ ಏಕೈಕ ಕಾರಣಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಆಮಿಷಗಳನ್ನು ಒಡ್ಡಿ ಸಂಸದರು, ಶಾಸಕರ ಖರೀದಿ, ಕುದುರೆ ವ್ಯಾಪಾರ, ರೆಸಾರ್ಟ್ ರಾಜಕೀಯ, ಸಣ್ಣಪುಟ್ಟ ಪಕ್ಷಗಳಿಗೆ ಬೆದರಿಕೆ, ತನಿಖಾ ಸಂಸ್ಥೆಗಳ ದುರುಪಯೋಗ... ಹೀಗೆ ನಾನಾ ತಂತ್ರಗಳನ್ನು ಅನುಸರಿಸಲಾಗುತ್ತಿದೆ. ಇಂಥ ಪ್ರಯತ್ನಗಳು ಪದೇಪದೆ ಪ್ರಜಾಪ್ರಭುತ್ವದ ಆಶಯಗಳನ್ನು ನಾಶ ಮಾಡುತ್ತಲೇ ಇವೆ.
ಕೆಲವು ರಾಜ್ಯಗಳಲ್ಲಿ ಸರಕಾರ ರಚಿಸುವಾಗ ಕಂಡು ಬರುತ್ತಿದ್ದ ಪಕ್ಷಾಂತರ, ವಿಪ್ ಉಲ್ಲಂಘನೆ, ರೆಸಾರ್ಟ್ ವಾಸ್ತವ್ಯ, ಅಪಹರಣ, ಹಣದ ಆಮಿಷ ಈಗ ಕರ್ನಾಟಕದ ಹಲವು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆಗೂ ತಗುಲಿದೆ. ಅಧಿಕಾರ ನಡೆಸಲು ಜನರು ಬಹುಮತ ನೀಡಿದ್ದು ಒಂದು ಪಕ್ಷಕ್ಕಾದರೆ, ಈಗ ಕೆಲವು ಕಡೆ ಅಧಿಕಾರ ಹಿಡಿದಿರುವುದು ಬಹುಮತವೇ ಇಲ್ಲದ ಪಕ್ಷಗಳು ! ಒಂದು ಪಕ್ಷದಿಂದ ಗೆದ್ದಿದ್ದ ಒಬ್ಬನೇ ಸದಸ್ಯ ಕೂಡ ಬಹುಮತ ಇಲ್ಲದಿದ್ದರೂ ಅಧ್ಯಕ್ಷ ಗದ್ದುಗೆ ಏರಿದ್ದಾನೆ. ಇದು ಮತ ನೀಡಿ ಯಾವ ಪಕ್ಷ ಅಧಿಕಾರ ಹಿಡಿಯಬೇಕು ಎಂದು ತೀರ್ಪು ಬರೆದ ಮತದಾರರಿಗೆ ಮಾಡಿದ ಅವಮಾನವೇ ಸರಿ.
ಹೀಗೆ ವಾಮಮಾರ್ಗದಲ್ಲೇ ಅಧಿಕಾರ ಹಿಡಿಯುವ ಚಾಳಿ ಮುಂದುವರೆದರೆ ಪ್ರಜಾಪ್ರಭುತ್ವದ ಮೌಲ್ಯ ಉಳಿಯಲು ಸಾಧ್ಯವೇ ಇಲ್ಲ. ವೇದಿಕೆಗಳಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಆದರ್ಶದ ಭಾಷಣ ಬಿಗಿದು ಅಧಿಕಾರ ಹಿಡಿಯಲು ವಾಮ ಮಾರ್ಗ ಹಿಡಿಯುವವರು ತಮ್ಮ ನೈತಿಕತೆ ಬಗ್ಗೆ ಯೋಚಿಸಬೇಕು. ಕೇವಲ ಒಂದೇ ಒಂದು ಮತದಿಂದ ತಮ್ಮ ಸರಕಾರ ಬಿದ್ದು ಹೋದಾಗಲೂ ಸ್ಥಿತಪ್ರಜ್ಞರಾಗಿದ್ದ, ವಾಮಮಾರ್ಗ ಅನುಸರಿಸದೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಗೌರವ ನೀಡುವ ಜತೆಗೆ ತಮ್ಮ ನೈತಿಕತೆ ಕಾಪಾಡಿಕೊಂಡ ಅಟಲ್ ಬಿಹಾರಿ ವಾಜಪೇಯಿ ಎಲ್ಲ ರಾಜಕೀಯ ಪಕ್ಷಗಳಿಗೂ ಮಾದರಿಯಾಗಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವ ಉಳಿವಿಗೆ ಎಷ್ಟೇ ಉದ್ದದ ಮಾನವ ಸರಪಳಿ ನಿರ್ಮಿಸಿದರೂ ಮೌಲ್ಯಗಳು ಕುಸಿದು ಬೀಳುವುದರಲ್ಲಿ ಅನುಮಾನವೇ ಇಲ್ಲ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೬-೦೯-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ