ಪ್ರಜಾಪ್ರಭುತ್ವ - ಸ್ವಾತಂತ್ರ್ಯ - ಸ್ವೇಚ್ಛೆ - ಗುಲಾಮಿತನ

ಪ್ರಜಾಪ್ರಭುತ್ವ - ಸ್ವಾತಂತ್ರ್ಯ - ಸ್ವೇಚ್ಛೆ - ಗುಲಾಮಿತನ

ಈ ಪದಗಳ ನಿಜವಾದ ಅರ್ಥವನ್ನು, ಆಶಯವನ್ನು ಗ್ರಹಿಸಲು ಓದು, ಅಧ್ಯಯನ, ಚಿಂತನೆ, ಅನುಭವ, ಅನುಭಾವ, ಸಂವೇದನಾಶೀಲತೆ, ಕ್ರಿಯಾಶೀಲತೆ, ವಿಶಾಲತೆ, ಒಳ್ಳೆಯತನ, ಭೌಗೋಳಿಕ, ಕಾನೂನಾತ್ಮಕ ಮತ್ತು ಪ್ರಾಕೃತಿಕ ಮೌಲ್ಯಗಳ ಜ್ಞಾನ ಇರಬೇಕಾಗುತ್ತದೆ. ಇಲ್ಲದಿದ್ದರೆ ಎಲ್ಲವೂ ಒಂದು ಹುಚ್ಚರ ಸಂತೆಯಂತೆ ಭಾಸವಾಗುತ್ತದೆ. ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಕ್ರಾಂತಿಯಿಂದ ಇವುಗಳ ನಡುವಿನ ವ್ಯತ್ಯಾಸವನ್ನು ಗ್ರಹಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ ಎನಿಸುತ್ತದೆ.

ಈ ವಿಫಲತೆಯನ್ನು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಕಾರ್ಪೊರೇಟ್ ಕುಳಗಳು ಬಹಳ ಯಶಸ್ವಿಯಾಗಿ ಉಪಯೋಗಿಸಿಕೊಂಡು ಜನರನ್ನು ನೇರ ನಿಯಂತ್ರಣಕ್ಕೆ ಒಳಪಡಿಸಿಕೊಂಡಿದೆ. ಒಂದು ರೀತಿ ಶ್ವಾನಗಳಿಗೆ ಬಿಸ್ಕೆಟ್ ಹಾಕುವಂತೆ ಜನರ ಮನೋಭಾವವನ್ನೇ ದಿವಾಳಿತನದತ್ತ ದೂಡಿ ಜೀತದಾಳುಗಳಂತೆ ಉಪಯೋಗಿಸಿಕೊಳ್ಳುತ್ತಿದೆ. ತಿನ್ನುವುದಕ್ಕಾಗಿ ಬದುಕಬೇಕೋ, ಬದುಕುವುದಕ್ಕಾಗಿ ತಿನ್ನಬೇಕೋ ಎಂಬ ಗೊಂದಲ ಸೃಷ್ಟಿ ಮಾಡಿದೆ. ಆದರೆ ತಿನ್ನುವುದಕ್ಕೂ, ಬದುಕುವುದಕ್ಕೂ ಜೀವನ ಪರ್ಯಂತ ದುಡಿಯಲೇ ಬೇಕಾದ ಅನಿವಾರ್ಯತೆಯಂತು ಸೃಷ್ಟಿಯಾಗಿದೆ. ಬಹುತೇಕ ಮದ್ಯಮ ಮತ್ತು ಕೆಳ ಮದ್ಯಮ ಜನರ ಬದುಕು ಬೀಳುತ್ತಿರುವ ಗೋಡೆಯನ್ನು ಹಿಡಿದು ನಿಲ್ಲಿಸುವುದರಲ್ಲಿಯೇ ತಮ್ಮ ಇಡೀ ಜೀವನ ಕಳೆಯುತ್ತಿದೆ. ಇನ್ನು ಹೊಸ ಗೋಡೆಯನ್ನು ಕಟ್ಟುವುದು ಹೇಗೆ ಮತ್ತು ಯಾವಾಗ?

ಇದನ್ನು ಮರೆಮಾಚಿ ಜನರು ತಮ್ಮ ಬಗ್ಗೆ ಯೋಚಿಸಲು ಸಾಧ್ಯವಾಗದಂತೆ ದೊಡ್ಡ ದೊಡ್ಡ ರಸ್ತೆಗಳನ್ನು ನಿರ್ಮಿಸುತ್ತಾ, ಮೆಟ್ರೋಗಳನ್ನು ಸ್ಥಾಪಿಸುತ್ತಾ, ಆಧುನಿಕ ಮೊಬೈಲ್ ಗಳನ್ನು ಸೃಷ್ಟಿಸುತ್ತಾ, ಮಾಲ್ ಸಂಸ್ಕೃತಿಯನ್ನು ಹರಡುತ್ತಾ, ಮನರಂಜನಾ ಉದ್ಯಮವನ್ನು ಬೆಳೆಸುತ್ತಾ, ಜಾತಿ, ಧರ್ಮಗಳ ಅಫೀಮುಗಳನ್ನು ತಿನ್ನಿಸುತ್ತಾ, ಹಣವನ್ನೇ ಮುಖ್ಯವಾಗಿ ಕೇಂದ್ರೀಕರಿಸುತ್ತಾ ಗುಲಾಮರೇ ವಾಸಿಸುವ ದ್ವೀಪವನ್ನು ಸೃಷ್ಟಿಸಿ ಹುಚ್ಚರ ಸಂತೆಯನ್ನೇ ನಿರ್ಮಾಣ ಮಾಡಲಾಗಿದೆ. ಈ ಹುಚ್ಚರ ಸಂತೆಯಲ್ಲಿ ಉಂಡವನೇ ಜಾಣ ಎಂಬಂತೆ ವಿಚಿತ್ರವಾದ ವಿನಾಶಕಾರಕ ಸಂತತಿಗಳೇ ಸಮಾಜದ ಎಲ್ಲ ಕ್ಷೇತ್ರಗಳ ಮುಖ್ಯವಾಹಿನಿಯಲ್ಲಿ ಪ್ರಾಮುಖ್ಯತೆ ಪಡೆಯುತ್ತಿದ್ದಾರೆ. 

ಜನರಿಗೂ ತಮ್ಮ ಸ್ವಂತ ಬದುಕಿನ ಮೂಲ ಆಶಯವನ್ನೇ ಮರೆತು ಹೋಗುವಂತೆ ಮಾಡಲಾಗಿದೆ. ನಮ್ಮ ಮನಸ್ಸಿನಲ್ಲಿ ಪ್ರತಿನಿತ್ಯ ನಾವು ಕೊಡಬೇಕಾಗಿದ್ದ ವಿಷಯಕ್ಕೆ ಪ್ರಾಮುಖ್ಯತೆ ಕೊಡದೆ ಅದರ ವಿರುದ್ಧ ದಿಕ್ಕಿನಲ್ಲಿ ಯಾವ ವಿಷಯವನ್ನು ನಾವು ಹೆಚ್ಚು ಯೋಚಿಸಬಾರದೋ ಅಂತಹ ವಿಷಯವೇ ನಮ್ಮ ಮನಸ್ಸಿನಲ್ಲಿ ತುಂಬುವಂತೆ ಮಾಡಲಾಗಿದೆ. ಸುಖ, ಸಂತೋಷ, ನೆಮ್ಮದಿ, ಮೋಕ್ಷ ಮನಸ್ಥಿತಿ ಯಾವುದೂ ಅವರಿಗೆ ನೆನಪೇ ಆಗುತ್ತಿಲ್ಲ. 

ಸ್ವಾತಂತ್ರ್ಯದ ಸಂವೇದನೆಗೆ ಕಾರ್ಪೊರೇಟ್ ಸಂಸ್ಕೃತಿಯ ಮುಸುಕು. ಭಾರತ ಸ್ವಾತಂತ್ರ್ಯೋತ್ಸವದ 78 ನೇ ಸಂಭ್ರಮವನ್ನು ಆಚರಿಸುತ್ತಿದೆ‌. ಈ ಸಂದರ್ಭದಲ್ಲಿ 1947 ಆಗಸ್ಟ್ 15 ರಂದು ದೊರೆತ ಸ್ವಾತಂತ್ರ್ಯ ವಾಸ್ತವದಲ್ಲಿ ಯಶಸ್ವಿಯಾಗಿ ಅಭಿವೃದ್ಧಿಯೆಡೆಗೆ  ಮುನ್ನಡೆಯುತ್ತಿದೆಯೇ ಅಥವಾ ಅದು ಬೇರೆ ರೂಪದಲ್ಲಿ ನಮ್ಮ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿದೆಯೇ ಎಂದು ಯೋಚಿಸಿದಾಗ.....

ವಿಶ್ವದ ಇಂದಿನ ಜಾಗತಿಕ ಪರಿಸ್ಥಿತಿಯನ್ನು ಅವಲೋಕಿಸಿದಾಗ ಭಾರತ ಈಗಲೂ ಅಭಿವೃದ್ಧಿ ಹೊಂದುತ್ತಿರುವ ದೇಶ. ಭಾರತದ ಆರ್ಥಿಕತೆ ವಿಶ್ವದ ನಾಲ್ಕನೇ ಬೃಹತ್ ಗಾತ್ರ ಹೊಂದಿದೆ ಎಂದು ಅಂಕಿ ಸಂಖ್ಯೆಗಳ ಆಧಾರದ ಮೇಲೆ ಹೇಳಬಹುದೇ ಹೊರತು ಭಾರತ ಅಷ್ಟೊಂದು ಶ್ರೀಮಂತ ದೇಶವಲ್ಲ. ಸಾಮಾಜಿಕವಾಗಿ ಅತ್ಯಂತ ಶಾಂತಿ, ಸೌಹಾರ್ದತೆಯಿಂದ ನೆಲೆಸಿದೆಯೇ ಎಂದರೆ ಅದು ಸಹ ತೃಪ್ತಿದಾಯಕವಾಗಿಲ್ಲ, ಹಸಿವಿನ ಹೋರಾಟದಲ್ಲಿ , ನೆಮ್ಮದಿಯ ಗುಣಮಟ್ಟದಲ್ಲಿ ಕೆಳಗಿನ ಸ್ಥಾನದಲ್ಲಿದೆ. ಜನಸಂಖ್ಯೆಯಲ್ಲಿ ಮೊದಲನೇ ಸ್ಥಾನದಲ್ಲಿದ್ದರೂ, ಕ್ರೀಡಾ ಕ್ಷೇತ್ರದಲ್ಲಿ 15/20 ನೇ ಸ್ಥಾನದಲ್ಲಿದೆ. ವಿಜ್ಞಾನ - ತಂತ್ರಜ್ಞಾನದ ವಿಷಯದಲ್ಲಿ ಬೇರೆ ಬೇರೆ ಹಂತದಲ್ಲಿ ಒಂದಷ್ಟು ಪ್ರಗತಿಯಾಗಿದೆ. ಒಟ್ಟಾರೆಯಾಗಿ ಗಮನಿಸಿದಾಗ ಭಾರತ ಬಾಹ್ಯ ದೃಷ್ಟಿಕೋನದಿಂದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವುದು ನಿಜ. ಆಧುನಿಕ ಕಾಲದಲ್ಲಿ ಕೇವಲ ಭಾರತ ಮಾತ್ರವಲ್ಲ ವಿಶ್ವದ ಅನೇಕ ದೇಶಗಳು ಇದೇ ಹಾದಿಯಲ್ಲಿವೆ. ಕೆಲವೇ ಕೆಲವು ದೇಶಗಳು ಮಾತ್ರ ಹಿಂಸೆಯಿಂದ ನರಳುತ್ತಾ ವಿನಾಶದ ಅಂಚಿನತ್ತ ಸಾಗುತ್ತಿವೆ. 

ಆದರೆ ಭಾರತವನ್ನು ಪ್ರಾಕೃತಿಕ ಸಂಪನ್ಮೂಲಗಳು, ಸಾಂಸ್ಕೃತಿಕ ವೈವಿಧ್ಯತೆ, ಮಾನವೀಯ ಮೌಲ್ಯಗಳ ದೃಷ್ಟಿಯಲ್ಲಿ ತುಲನೆ ಮಾಡಿ ನೋಡಿದಾಗ ಭಾರತದ ಅಭಿವೃದ್ಧಿ ಹಿಮ್ಮುಖವಾಗಿರುವುದನ್ನು ಗಮನಿಸಬಹುದು. ಸಾಮಾಜಿಕ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಸಮಾಧಾನಕರವಾಗಿಲ್ಲ. ಖಾಸಗೀಕರಣವೆಂಬ ಕಾರ್ಪೊರೇಟ್ ಸಂಸ್ಕೃತಿ ನಮ್ಮೆಲ್ಲಾ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುತ್ತಿದೆ. ಆರ್ಥಿಕ ಅಭಿವೃದ್ಧಿ ಕೇಂದ್ರಿತ ವ್ಯವಸ್ಥೆ ನಿರ್ಮಾಣವಾಗಿ ಗ್ರಾಹಕ ಸಂಸ್ಕೃತಿ ತಲೆ ಎತ್ತಿ ನಿಂತಿದೆ. ಆ ಗ್ರಾಹಕ ಸಂಸ್ಕೃತಿ ಗುಲಾಮಿ ಸಂಸ್ಕೃತಿಗೆ ನಮ್ಮನ್ನು ದೂಡುತ್ತಿದೆ. ಸೀಡ್ಲೆಸ್ ಯುವ ಜನಾಂಗ ಸೃಷ್ಟಿಯಾಗುತ್ತಿದೆ. ಕೊಳ್ಳುಬಾಕ ಸಂಸ್ಕೃತಿ ಸಾಕಷ್ಟು ಜನರನ್ನು ಪರೋಕ್ಷವಾಗಿ ಜೀತದಾಳುಗಳಂತೆ ಮಾಡಿದೆ. 

ಸಮಾಜದಲ್ಲಿ ಸಾಮಾಜಿಕ ವ್ಯವಸ್ಥೆಯ ಅಂತರ ತುಂಬಾ ದೊಡ್ಡದಾಗುತ್ತಿದೆ. ಶ್ರೀಮಂತರು ಮತ್ತು ಬಡವರ ನಡುವೆ ದೊಡ್ಡ ಕಂದರವೇ ನಿರ್ಮಾಣವಾಗಿದೆ. ಹಾಗೆಯೇ ಜಾತಿ ಧರ್ಮಗಳ ನಡುವೆ ಅಂತರ್ಯದಲ್ಲಿ ಜ್ವಾಲಾಮುಖಿ ಹರಿಯವಂತೆ ಅಗ್ನಿ ಪರ್ವತವೇ ಅಡಗಿ ಕುಳಿತಿದೆ. ಅಭಿವೃದ್ಧಿಯ ಅನರ್ಥವನ್ನು ಪರಿಸರ ನಾಶದಿಂದ ಆಗುತ್ತಿರುವ ದುಷ್ಪರಿಣಾಮಗಳಿಂದಲೇ ಊಹಿಸಬಹುದಾಗಿದೆ. ಎಲ್ಲೆಲ್ಲೂ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿವೆ. ಹಾಗೆಯೇ ಮನುಷ್ಯನ ದೈಹಿಕ ಮತ್ತು ಮಾನಸಿಕ ಪರಿಸ್ಥಿತಿ ಹದಗೆಡುತ್ತಿದೆ. ಆರೋಗ್ಯ ಎಂಬುದು ಒಂದು ಸಂಪತ್ತು ಎಂದು ಬುದ್ಧ ಹೇಳಿದ ಮಾತುಗಳು ಎಲ್ಲರ ಮನದಲ್ಲಿ ಮತ್ತೆ ಮತ್ತೆ ಮೂಡುತ್ತಿದೆ. ಆಯಸ್ಸಿನ ಸರಾಸರಿ ಹೆಚ್ಚಾಗುತ್ತಿದ್ದರು ಗುಣಮಟ್ಟ ಮಾತ್ರ ಕುಸಿಯುತ್ತಿದೆ. 

ಶಿಕ್ಷಣ ಮತ್ತು ಆರೋಗ್ಯವೆಂಬ ಅಗತ್ಯಗಳು ಖಾಸಗೀಕರಣದ ಹೊಡೆತಕ್ಕೆ ಸಿಲುಕಿ ವಿಷ ಉಗುಳುತ್ತಾ ಜನರನ್ನು ಶೋಷಿಸುತ್ತಿವೆ. ನಮ್ಮೆಲ್ಲರ ಸಂಪಾದನೆಯ ಅತಿ ಹೆಚ್ಚು ವೆಚ್ಚವನ್ನು ಈ ಎರಡು ಕ್ಷೇತ್ರಗಳು ನುಂಗಿ ಹಾಕುತ್ತಿವೆ. ಸರ್ಕಾರಿ ವ್ಯವಸ್ಥೆ ಇಡೀ ದೇಶದಲ್ಲಿ ಭ್ರಷ್ಟಗೊಂಡಿದೆ. ಲಂಚವಿಲ್ಲದೆ ಯಾವುದೇ ಕೆಲಸವಾಗುವುದಿಲ್ಲ ಎಂಬ ಪರಿಸ್ಥಿತಿ ಪ್ರತಿ ಸರ್ಕಾರಿ ಕೆಲಸ ಕಚೇರಿಯಲ್ಲೂ ಸೃಷ್ಟಿಯಾಗಿದೆ. ಚುನಾವಣಾ ಅಕ್ರಮಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಜನಪ್ರತಿನಿಧಿಗಳ ಆಯ್ಕೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ನ್ಯಾಯಾಲಯಗಳು, ಮಾಧ್ಯಮಗಳು, ಧಾರ್ಮಿಕ ಸಂಸ್ಥೆಗಳು ಮೌಲ್ಯಗಳನ್ನು ಕಳೆದುಕೊಂಡು ಸವಕಲು ನಾಣ್ಯಗಳಾಗಿ ಸಾರ್ವಜನಿಕರ ನಂಬಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಈ ದೇಶದ ಬಹುಸಂಖ್ಯಾತ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರಿಗೆ ಈಗಲೂ ನಿಜವಾದ ಸ್ವಾತಂತ್ರ್ಯ ಸಿಕ್ಕೇ ಇಲ್ಲ. ಎಲ್ಲಾ ಕಾನೂನುಗಳು, ದೌರ್ಜನ್ಯಗಳು, ತೆರಿಗೆಗಳು, ಬೆಲೆ ಏರಿಕೆಗಳು, ಬಂದ್ ಲಾಕ್ ಡೌನ್ ಗಳು ಎಲ್ಲವೂ ಇವರ ಮೇಲೆಯೇ ಪ್ರಯೋಗ ಮಾಡಲಾಗುತ್ತದೆ. ಭ್ರಷ್ಟಾಚಾರದ ನಿಜವಾದ ದುಷ್ಪರಿಣಾಮ ಬೀರುತ್ತಿರುವುದೇ ಇವರ ಮೇಲೆ. ರಾಜಕೀಯ, ಆರ್ಥಿಕ ಪರಿಣಾಮಗಳು - ಸಾಮಾಜಿಕ ಅಸಮಾನತೆ - ಖಾಸಗೀಕರಣ - ರೋಗಗಳು ಎಲ್ಲದರಲ್ಲೂ ಇವರೇ ಮೊದಲ ಬಲಿಪಶುಗಳ. ಅತೀವೃಷ್ಟಿ, ಅನಾವೃಷ್ಟಿಗಳು ಇವರ ಮೇಲೆಯೇ ಪರಿಣಾಮ ಬೀರುತ್ತದೆ. ಶಿಕ್ಷಣ, ಉದ್ಯೋಗ, ಮನರಂಜನೆ ಎಲ್ಲದರಲ್ಲೂ ಇವರೇ ಟಾರ್ಗೆಟ್. 

ಆದರೆ ಮನೆ ಮನೆಗಳಲ್ಲಿ ಬಾವುಟ ಹಾರಿಸುವವರೂ ಇವರೇ. ರಾಷ್ಟ್ರಗೀತೆ ಹಾಡುವವರು ಇವರೇ. ಭೋಲೋ ಭಾರತ್ ಮಾತಾಕೀ ಜೈ ಎನ್ನುವವರು ಇವರೇ. ಇವರುಗಳಿಗೆ ತುಂಬಾ ಅನ್ಯಾಯವಾಗುತ್ತಿದೆ. ಎಷ್ಟೋ ಜನರು ಲಂಚಕ್ಕಾಗಿ ನಮ್ಮದೇ ಜನರನ್ನು ಪೀಡಿಸುವುದನ್ನು ಕಂಡು ಈ ವ್ಯವಸ್ಥೆಯ ಬಗ್ಗೆ ತುಂಬಾ ನೋವು, ಅಸಹನೆ ವ್ಯಕ್ತಪಡಿಸಿ ಬ್ರಿಟಿಷರೇ ಉತ್ತಮವೇನೋ ಎಂದು ಹತಾಶೆಯಿಂದ ಮಾತನಾಡುತ್ತಾರೆ.

ಜಾತಿ ವ್ಯವಸ್ಥೆಯಿಂದ ಮಡುಗಟ್ಟಿದ ಆಕ್ರೋಶ - ಚುನಾವಣಾ ವ್ಯವಸ್ಥೆಯಿಂದ ಅತ್ಯಂತ ಕೆಳಮಟ್ಟದ ವ್ಯಕ್ತಿಗಳು ಆಯ್ಕೆಯಾಗುವ ಮೂಲಕ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆ ಅಧೋಗತಿಗೆ ಇಳಿದಿರುವ ಬಗ್ಗೆ ಅನೇಕರಿಗೆ ಅಸಮಾಧಾನವಿದೆ. " ನೊಂದವರ ನೋವ ನೋಯದವರೆತ್ತ ಬಲ್ಲರೋ " ಎಂಬ ಶರಣರ ಮಾತುಗಳು ಈ ಸಂದರ್ಭದಲ್ಲಿ ನೆನಪಾಗುತ್ತದೆ. ಹೊಟ್ಟೆ ತುಂಬಿದವರು ದೇಶ ಬಹುದೊಡ್ಡ ಪ್ರಗತಿಯತ್ತ ಸಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅವರ ಅಭಿಪ್ರಾಯ ಮತ್ತು ಸ್ವಾತಂತ್ರ್ಯವನ್ನು ಗೌರವಿಸೋಣ. ಹಾಗೆಯೇ ಹಸಿದ ಹೊಟ್ಟೆಯವರು ಈ ದೇಶದ ದುಸ್ಥಿತಿಯನ್ನು ಸಾಕ್ಷಿ ಸಮೇತ ತೋರಿಸುತ್ತಾರೆ. ಅದನ್ನು ಸಹ ಒಪ್ಪಿಕೊಳ್ಳಬೇಕು ಮತ್ತು ಅದಕ್ಕೆ ಪರಿಹಾರವನ್ನು ಸೂಚಿಸಬೇಕು.

ಅಭಿವೃದ್ಧಿ ಮತ್ತು ಬಡತನದ ನಡುವೆ ಸಮನ್ವಯ ಸಾಧಿಸದಿದ್ದರೆ, ಬಡವರ ಆತ್ಮಗಳು ಸದಾ ನೋಯುತ್ತಲೇ ಇರುತ್ತವೆ. ಇದು‌ ಕೇವಲ ಆರ್ಥಿಕ ಅಸಮಾನತೆಗೆ ಮಾತ್ರ ಸಂಬಂಧಿಸಿಲ್ಲ. ಸಾಮಾಜಿಕ ಅಸಮಾನತೆಯೂ ಸಹ ಸಾಕಷ್ಟು ಸಮಸ್ಯೆ ಉಂಟುಮಾಡುತ್ತಿದೆ. ಜಾತಿ ಎಂಬ ವ್ಯವಸ್ಥೆ ಈಗಲೂ ಭಾರತೀಯ ಸಮಾಜಕ್ಕೆ ಒಂದು ಶಾಪ ಎಂದೇ ಪರಿಗಣಿಸಲಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಗಂಭೀರ ಬದಲಾವಣೆಗಳು 78 ವರ್ಷಗಳ ನಂತರವೂ ಸಾಧ್ಯವಾಗಿಲ್ಲ.

ಅಭಿವೃದ್ಧಿಗೆ ಖಾಸಗಿಕರಣವೇ ಮದ್ದು ಎಂಬುದಾಗಿ ಸರ್ಕಾರಗಳು ಭಾವಿಸುತ್ತವೆ  ಆದರೆ ಆ  ಖಾಸಗಿ ಕಂಪನಿಗಳೇ ಜನರ ಬದುಕನ್ನು ನರಕ ಸದೃಶ ಮಾಡುತ್ತಿವೆ. ಜನರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿವೆ. ಜನರಲ್ಲಿ ಅಸಮಾನತೆ, ಅಸಹಿಷ್ಣುತೆಯನ್ನು ಹೆಚ್ಚು ಮಾಡುತ್ತಿದೆ. ಆದ್ದರಿಂದ ಸ್ವಾತಂತ್ರ್ಯದ ನಿಜವಾದ ಅರ್ಥ ಖಂಡಿತವಾಗಲೂ ವಾಸ್ತವ ಸಮಾಜದಲ್ಲಿ ಆಚರಣೆಯಲ್ಲಿ ಇಲ್ಲ. ಈ ನಿಟ್ಟಿನಲ್ಲಿ ಕಾರ್ಪೊರೇಟ್ ಸಂಸ್ಕೃತಿಯ ಮೇಲೆ ನಿಯಂತ್ರಣ ಹೇರದಿದ್ದರೆ ಭಾರತದ ವೈವಿಧ್ಯತೆ, ಭಾರತದ ನಿಜವಾದ ಆತ್ಮ ವಿನಾಶದತ್ತ ಚಲಿಸುವುದು ಖಂಡಿತ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ