ಪ್ರಣಯ ಯಾತ್ರೆ ! - ಶ್ರೀ. ಶತಾಯುಶಿ, ದಿವಂಗತ, ಎ. ಎನ್. ಮೂರ್ತಿರಾಯರು.

ಪ್ರಣಯ ಯಾತ್ರೆ ! - ಶ್ರೀ. ಶತಾಯುಶಿ, ದಿವಂಗತ, ಎ. ಎನ್. ಮೂರ್ತಿರಾಯರು.

ಬರಹ

ಪ್ರಣಯ ಯಾತ್ರೆ ! - ಶ್ರೀ. ಶತಾಯುಶಿ, ದಿವಂಗತ, ಎ.ಎನ್.ಮೂರ್ತಿರಾಯರು.

('ಸಮಗ್ರ ಲಲಿತ ಪ್ರಬಂಧಗಳು' ಪುಸ್ತಕದಿಂದ ಆಯ್ದ ಭಾಗಗಳು) ಕನ್ನಡ ಸಂಘ, ಕ್ರೈಸ್ಟ್ ಕಾಲೇಜ್, ಬೆಂಗಳೂರಿನ ಪ್ರಕಟಣೆ- ೫೦ ನೆಯ ಪುಸ್ತಕ.

ಮದುವೆಯಾದ ಹೊಸತರಲ್ಲಿನ 'ಪ್ರಣಯ' ನಮ್ಮೆಲ್ಲರ ಅನುಭವದ ಸಂಗತಿ. ಇದು ಇಂದು, ನಾಳೆಯ ಎಲ್ಲೆಗಳನ್ನೂ ಮೀರಿದಂತಹದು. ನಿನ್ನೆಗಳೂ ಅದಕ್ಕೆ ಹೊರತಲ್ಲ ! ಸುಮಾರು ೮ ದಶಕಗಳ ಹಿಂದಿನ ಭಾವ ತುಡಿತಗಳನ್ನು ಗಮನಿಸಿದರೆ, ಅವು ಇಂದಿನಶ್ಟೇ ವಸ್ತುನಿಷ್ಟವಾಗಿರುವುದು ನಮ್ಮ ಗಮನಕ್ಕೆ ಬರುವ ಸಂಗತಿ ! ಮದುವೆಯನಂತರ ಆಗುವ ದಿಢೀರ್ ಪರಿವರ್ತನೆಯೇ ಕಲ್ಪನೆಗೆ ಸಿಲುಕದ ವಿಷಯ. ಅನುಭವಿಸಬೇಕು ಅಶ್ಟೆ ! ಮಗನನ್ನು ಹೆತ್ತು ಹೊತ್ತು, ಇಲ್ಲಿಯವರೆಗೆ ಪ್ರೀತಿಯ ಅಮೃತದ ಸುಧೆಯಲ್ಲಿ ಕಸ್ಟನಿಶ್ಟುರಗಳ ಮಧ್ಯೆ ಪಾಲಿಸಿದ ಶಿಶುವನ್ನು (ತಾಯಿಗೆ ಅವನು ಎಂದೂ ಶಿಶುವೆ!). ಬೇರೆ, 'ಹೊರಗಿನಿಂದ ಬಂದ ಹುಡುಗಿ ತನ್ನ ಬುಟ್ಟಿಯಲ್ಲಿ ಹಾಕಿಕೊಂಡಳು' ಎನ್ನುವ ಮಾತನ್ನು ಯಾವತಾಯಿ ತಾನೆ ಸಹಿಸಿಯಾಳು ? ಮಗನಿಗಾದರೊ ಅವನ ಪ್ರೇಯಸಿಯನ್ನು ನೋಡುವ ಅವಳಬಳಿ ಮಾತಾಡುವ ಯಾವ ಸಂಧರ್ಭವನ್ನೂ ಹಾಗೆ ಬಿಡುವಮನಸ್ಸಿಲ್ಲ ! ತಾಯಿಯ ಪ್ರೀತಿ ಅಡಚಣೆಯಾಗುವುದು ! ಇದನ್ನು ತಿಳಿದರೂ ತಾಯಿಗೆ ತನ್ನ ಪ್ರಾಮುಖ್ಯತೆ ಬಿಟ್ಟುಕೊಡಲು ಮನಸ್ಸಿಲ್ಲ. ಬಹುಶಃ ಇದು ಇಂದಿಗೂ ಸತ್ಯವೆ ? ಈ ತುಮುಲಗಳ ಒಂದು ಚುಟುಕನ್ನು ನಾವೆಲ್ಲಾ ಸವಿಯೋಣ ! ಡಾ.ಎ.ಎನ್.ಮೂರ್ತಿರಾಯರ ಲಲಿತಪ್ರಭಂದದಲ್ಲಿಂದ ಉದ್ಧರಿಸಿದ 'ಪ್ರಣಯ ಯಾತ್ರೆ'ಯ ಹಲವು ತುಣುಕುಗಳನ್ನು ಮೆಲುಕು ಹಾಕೋಣ !

ಇಲ್ಲಿ ಮೂರ್ತಿರಾಯರು ವಿವಿರಿಸಿರುವ ಅವರ ಮೆಚ್ಚಿನ 'ಲಲಿತೆ, ಕಾಲ್ಪನಿಕ. ಅವರ ಹೆಂಡತಿಯ ಹೆಸರು ಜಯಲಕ್ಷ್ಮಿ. ಮನೆಯಲ್ಲಿ ಅವರನ್ನು ಎಲ್ಲರು ಜಯಮ್ಮ, ಎನ್ನುವರು. ಅವರ ಒಲವಿನ ಮಡದಿ ಜುಲೈ ೨೬, ೧೯೬೪ ರಲ್ಲಿ ಸ್ವರ್ಗಸ್ಥರಾಗುತ್ತಾರೆ. ಜಯಮ್ಮನವರ ಮರಣವನ್ನು ಅವರ 'ಸಂಜೆಗಣ್ಣಿನ ಹಿನ್ನೋಟದಲ್ಲಿ 'ಮನೆಯದೇವರು ನಮ್ಮನ್ನು ಬಿಟ್ಟುಹೋದದ್ದು' ಎಂಬ ಶೀರ್ಷಿಕೆಯಲ್ಲಿ ದಾಖಲಿಸಿದ್ದಾರೆ. ನಂತರದ ಕಥನದಲ್ಲಿ ಇದನ್ನು ಹೆಚ್ಚಾಗಿ ಪ್ರಸ್ತಾಪಿಸದಿದ್ದರೂ ಜಯಮ್ಮ ಅವರ ಹೃದಯದಾಳದಲ್ಲಿ ಅವರ ೧೦೩ ವರ್ಷಗಳ ಸಾರ್ಥಕಬಾಳಿನ ಉಸುರಾಗಿದ್ದರು ಎನ್ನುವುದು ಇಲ್ಲಿ ಗಮನಿಸಬೇಕಾದ ವಿಷಯ ! ಮುಂದೆ ಓದಿ.

'ಪ್ರಣಯ ಯಾತ್ರೆ' :

'ನನಗೆ ಮದುವೆಯಾಗಿ ಎಂಟು ವರ್ಷವಾಯಿತು. ನನ್ನ ಲಲಿತೆ ಬಲು ಒಳ್ಳೆಯ ಹುಡುಗಿ. ಅವಳ ನಗು ಮುಖದ ಕಾಂತಿಯಿಂದ ನನ್ನ ಮನೆ ಯಾವಾಗಲೂ ಬೆಳಕಾಗಿಯೇ ಇರುತ್ತಿತ್ತು. ಮನೆಯಲ್ಲಿ ಐಶ್ವರ್ಯ ವಿಲ್ಲದಿದ್ದರೂ ಬಡತನವಿರಲಿಲ್ಲ. ಆದರೂ ನನಗೆ ಸ್ವಲ್ಪ ಅತೃಪ್ತಿ. ಸಾಧಾರಣವಾಗಿ ಪ್ರತಿಯೊಬ್ಬ ಯುವಕನೂ ಅಪೇಕ್ಷಿಸುವ ಸ್ವಾತಂತ್ರ್ಯ ನನ್ನಜೀವನದಲ್ಲಿ ಸಾಕಾದಶ್ಟಿರಲಿಲ್ಲ. ನಾನು ಗೃಹಸ್ಥನಾಗಿ ಸಂಬಳ ತರುವ ಹಾಗಾದಮೇಲೂ ಅವರು ನನ್ನನ್ನು ಆಕ್ಷೇಪಿಸದೆ ಬಿಡುತ್ತಿರಲಿಲ್ಲ. ನಮ್ಮ ತಾಯಿ ತನ್ನ ಸೌಖ್ಯವೇ ತಮ್ಮ ಸೌಖ್ಯ ವೆಂದು ತಿಳಿದಿದ್ದರೂ ತಮಗೆ ಸುಖವಾದದ್ದೆಲ್ಲಾ ನನಗೂ ಸುಖವಾಗಿರಬೇಕೆಂದು ನಂಬಿದ್ದರು. ಅವರ ಭಾಗಕ್ಕೆ ನಾನು ಇನ್ನೂ ತಿಳುವಳಿಕೆ ಇಲ್ಲದ ಹುಡುಗ. ಸರಿಯಾಗಿ ಅಹ್ನಿಕ ಮಾಡುವುದಿಲ್ಲವೆಂದು ನಾನು ಗೃಹಸ್ಥನಾಗಿ ಸಂಬಳ ತರುವ ಹಾಗಾದಮೇಲೂ ಅವರು ನನ್ನನ್ನು ಆಕ್ಷೇಪಿಸದೆ ಬಿಡಲಿಲ್ಲ. ಹೊರಗಿನವರು ಯಾರಾದರು ಆಕ್ಷೇಪಿಸಿದರೆ, ಕಚೇರಿಯ ಕೆಲಸದಲ್ಲಿ ಅದಕ್ಕೆಲ್ಲಾ ಗೊತ್ತಿಲ್ಲವೆಂದೋ ಅದೆಲ್ಲಾ ಬರಿಯ ಆಡಂಬರವೆಂದೊ ನಿಶ್ಚಲವಾದ ದೈವಭಕ್ತಿಯೊಂದಿದಾರೆ ಸಾಕೆಂದೊ ಉಪನ್ಯಾಸ ಮಾಡಿ ಅವರ ಬಾಯಿ ಮುಚ್ಚಿಸಿ ನನ್ನ ಮನಸಾಕ್ಷಿಯನ್ನು ಸಮಾಧಾನ ಪಡಿಸುತ್ತಿದ್ದೆ. ಆದರೆ ನಮ್ಮ ತಾಯಿಯವರ ಎದುರಿಗೆ ಹೀಗೆಲ್ಲಾ ಮಾತಾಡಿದರೆ ಅವರು ನಕ್ಕು " ನಿನ್ನ ಎಡವಟ್ಟು ಮಾತು ಗೊತ್ತೇ ಇದೆ, ನಡಿಯೊ ಆಚೆಗೆ" ಎಂದು ಓಡಿಸಿ ಬಿಡುವರು. ಮನೆಯಿಂದ ಹೊರಗೆ ನನ್ನ ಮಾತಿಗೆ ಮನ್ನಣೆಯುಂಟು. ಆದರೆ ಮನೆಯವರಿಗೆ ನನ್ನ ಅಭಿಪ್ರಾಯಗಳು ವಿಚಿತ್ರವಾಗಿ ಕಾಣುತ್ತಿದ್ದವು. ನಾನು ಹುಚ್ಚನೋ ಅಥವಾ ಬೆಪ್ಪನೋ ಎಂಬ ಸಂಶಯ ನಮ್ಮ ತಾಯಿಗೆ ಇನ್ನೂ ಬಗೆಹರಿದಿಲ್ಲವೆಂದೇ ತೋರುತ್ತದೆ. ಸಾಲದ್ದಕ್ಕೆ ಆ ದುರಳೆ ಲಲಿತೆ ಬಾಗಿಲಿನ ಹಿಂದೆ ನಿಂತು ಅತ್ತೆಯ ಮಾತನ್ನು ಕೇಳುತ್ತಾ ಹುಸಿ ನಗೆ ನಗುತ್ತಿರುತ್ತಾಳೆ ; ಒಂದೊಂದು ಸಲ ' ಹಾಗಾಗಬೇಕು ನಿಮಗೆ ' ಎನ್ನುವಂತೆ ನನ್ನ ಕಡೆಗೆ ಕಣ್ಣು ಹಾರಿಸುವುದೂ ಉಂಟು.

ಲಲಿತೆ, ಎನೂ ಅರಿಯದ ಹುಡುಗಿ. ಅವಳು ಅತ್ತೆ ಹೇಳಿದ ಕೆಲಸವನ್ನು ಮುಗಿಸಿಕೊಂಡು ನನ್ನ ಕೊಟಡಿಗೆ ಬರಬೇಕಾದರೆ, ಹೊಸಲಿನಿಂದ ಚಿಮ್ಮಿ ಬರುವಳು ; ನಿರಿ ನೆಲವನ್ನು ಸ್ವಲ್ಪ ಗುಡಿಸುತ್ತಲೇ ಇರುವುದು;ಹರಟೆಮಲ್ಲಿಎಂದರೆ ಅಷ್ಟಿಶ್ಟಲ್ಲ. ಈಗಿನ ಸಣ್ಣ ಕಥೆಗಳನ್ನೋದಿದ್ದರಿಂದಲೋ ಎನೋ, ಹಿಂದಿನಿಂದ ಬೆಕ್ಕಿನಹಾಗೆ ಬಂದು ಕಣ್ಣು ಮುಚ್ಚುವುದನ್ನು ಬೇರೆ ಕಲಿತಿದ್ದಾಳೆ ; ಅಳ್ಳಕವಾಗಿ ಜೆಡೆ ಹೆಣೆದು ಒಂದೆರಡು ಸಂಪಗೆ ಅಥವಾ ಗುಲಾಬಿ ಹೂವನ್ನು ಮುಡಿದರೆ ಅವಳು ಬಹಳ ಸುಂದರವಾಗಿ ಕಾಣುತ್ತಳೆ. ಆದರೆ ನಮ್ಮ ತಾಯಿ ಅವಳಿಗೆ ಬಿಗಿಯಾಗಿ ಜೆಡೆ ಹೆಣೆದು, ಅವಳು ತುಂಬ ಹೂವು ಮುಡಿದರೆ ಚೆನ್ನಾಗಿರುತ್ತದೆಂದು ಪ್ರೀತಿಯಿಂದ ನಾಲ್ಕು ಕುಚ್ಚು ಹೂವು ಮುಡಿಸಿಬಿಡುತ್ತಿದ್ದರು. ನಾನು ನಿತ್ಯವೂ ರಾತ್ರಿ ಕ್ಲಬ್ಬಿನಿಂದ ಮನೆಗೆ ಬರುವ ಹೊತ್ತಿಗೆ ನಮ್ಮ ತಾಯಿ ಬಿಸಿಬಿಸಿಯಾಗಿ ಅಡಿಗೆ ಮಾಡಿಟ್ಟಿರುತ್ತಾರೆ. 'ಟೆನ್ನಿಸ್ ಆಡಿ ಹಸಿದು ಬಂದಿದ್ದಾನೆ, ಬಿಸಿಬಿಸಿಯಾಗಿ ಊಟಮಾಡಲಿ' ಎಂದು ಅವರ ಯೋಚನೆ. ಆದರೆ ನನಗೆ ಆಗಲೆ ಊಟ ಬೇಕಿಲ್ಲ. ಮನೆಗೆ ಬಂದೊಡನೆ ಲಲಿತೆಯನ್ನು ಮುತ್ತಿಡಬೇಕು ಅವಳೊಡನೆ ಸ್ವಲ್ಪ ಹರಟೆ ಬಡಿದು ಹುಚ್ಚು ಹುಚ್ಚಾಗಿ ನಗಬೇಕು, ಇಲ್ಲವೇ ಅವಳ ಕೆನ್ನೆಗೆ ಕೆನ್ನೆಯನ್ನಿಟ್ಟುಕೊಂಡು ಮೌನವಾಗಿ ಕುಳಿತು ಶಾಂತಿಯನ್ನು ಅನುಭವಿಸಬೇಕು. ಅದರೆ ಲಲಿತೆ, ನನ್ನ ಕೊಟಡಿಗೆ ಬಂದು ನಿಲ್ಲುವುದರೊಳಗೆ ನಮ್ಮ ತಾಯಿ' ಲಲಿತ , ನಿನ್ನ ಗಂಡನಿಗೆ ಕಾಲಿಗೆ ನೀರು ಕೊಟ್ಟು ಎಲೆ ಹಾಕಮ್ಮ' ಎಂದು ಕೂಗುವರು. ಸ್ವಲ್ಪ ಅಸಮಧಾನ, ಸ್ವಲ್ಪ ಕುಚೇಶ್ಟೆ, ಸ್ವಲ್ಪ ಭರವಸೆ ಎಲ್ಲವೂ ಸವಿಯಾಗಿ ಬೆರೆತ ನಗೆಯನ್ನು ನಕ್ಕು ಲಲಿತೆ ಓಡಿ ಹೊಗುವಳು... ಇಂತಹ ಸಣ್ಣ ಪುಟ್ಟ ಕುಂದು ಕೊರತೆಗಳು ಒಂದು ನೂರು ಇದ್ದವು. ಮದುವೆಯಾದ ಹೊಸತರಲಿ ನವ ಪ್ರಣಯದ ಭರದಲ್ಲಿ ಈ ಕೊರತೆಗಳು ಅಶ್ಟು ದೊದ್ದದಾಗಿ ಕಾಣಲಿಲ್ಲ. ಆದರೆ ಸ್ವಲ್ಪ ದಿನ ಕಳೆದ ಮೇಲೆ ಜೀವನದಲ್ಲಿ ಕೊಂಚ ಬೇಸರ ಹುಟ್ಟಿತು. ಪಶ್ಚಿಮ ದೇಶದವರು 'ಹನಿಮೂನ್' ಹೋಗುವಂತೆ ನಾನೂ, 'ಪ್ರಣಯಯಾತ್ರೆ' ಹೋಗಬೇಕೆನ್ನಿಸಿತು.

'ರಂಗನ ಬೆಟ್ಟಕ್ಕೆ ಹೋಗೋಣ ಅಂತ ಇದ್ದೆವು. ಈಗ ಅಲ್ಲಿ ಹೊಸದಾಗಿ ಬಂಗಲೆ ಕಟ್ಟಿದ್ದಾರೆ, ಎರಡು ದಿನ ಇದ್ದು ಬರುವುದಕ್ಕೆ ಬಹಳ ಚೆನ್ನಾಗಿದೆ. ಹೋಗೋಣ ಅಂದರೆ ಇವಳಿಗೆ ಈಗಲೆ ನೆಗಡಿ, ಕೆಮ್ಮು ಬಂದುಬಿಟ್ಟಿದೆ ! ರಂಗನ ಬೆಟ್ಟವೂ ಬೇಡ, ಸಿಂಗನ ಬೆಟ್ಟವೂ ಬೇಡ. ಅಲ್ಲೆಲ್ಲಾ ಅಲೆದು ಲಲಿತೆಯ ಖಾಯಿಲೆ 'ನ್ಯುಮೋನಿಯ'ಕ್ಕೆ ತಿರುಗಲಿ ! ಬೆಟ್ಟ ಎಲ್ಲಿಗೂ ಒಡಿ ಹೋಗುವುದಿಲ್ಲ, ಇನ್ನೂ ಯಾವಾಗಲಾದರೂ ಹೋದರಾಯಿತು' ನಮ್ಮ ತಾಯಿ ತೀರ್ಪುಕೊಟ್ಟುಬಿಟ್ಟರು.

ಈಗ ಹುಸಿನಗೆ ನಗುವುದಕ್ಕೆ ನನ್ನ ಸರದಿ. ಉಸಿರು ಹಿಡಿಯಲಾರದೆ ಬಹಳ ಕಷ್ಟದಿಂದ ಮತಾಡುವವಳಂತೆ ನಟಿಸುತ್ತಿದ್ದ ಲಲಿತೆಯ ಕೆಮ್ಮು ಇದ್ದಕ್ಕಿದ್ದಂತೆ ಹಾಗೆಯೇ ಇಳಿದುಹೋಯಿತು.' ಕೆಮ್ಮು ಈಗ ಅಷ್ಟೇನೂ ಇಲ್ಲ್ ; ಎಲ್ಲೋ ಒಂದೊಂದು ಸಲ ಬರುತ್ತದೆ ಎಂದಳು'. ಇಲ್ಲ ಕಣಮ್ಮ, ಅವಳಿಗೆ ನಿನ್ನೆಯೆಲ್ಲಾ ಒಂದಗುಳು ಅನ್ನ ಸೇರಲಿಲ್ಲ, ರಾತ್ರಿ ನೂರೆರಡು ದಿಗ್ರಿ ಜ್ವರ ಬಂದಿತ್ತು. ಇಷ್ಟಾದರೂ ಬೆಟ್ಟಕ್ಕೆ ಹೋಗುವುದು ಬೇಡ ಎಂದರೆ ಕೇಳುವುದಿಲ್ಲ. ಹೀಗೆ ಅವಳು ಖಾಯಿಲೆ ತಂದುಕೊಳ್ಳುವುದು. ಎಂದು ನಾನೇ ಮತ್ತೆ ಹೇಳಿದೆ. ಲಲಿತ ತುಟಿಯನ್ನು ಬಿರುಕಿಸಿಕೊಂಡು ಕೆಂಡವನ್ನು ಉಗುಳುವಂತೆ ನನ್ನ ಕಡೆ ನೋಡಿದಳು. ಆ ಬಗೆಯ ಕೋಪದಲ್ಲಿದ್ದಾಗ ಅವಳು ಬಹು ಸುಂದರವಾಗಿ ಕಾಣುತ್ತಾಳೆ. ನನಗೆ ಇವಳು ಇನ್ನೂ ಸ್ವಲ್ಪ ಹೊತ್ತು ಕೋಪಗೊಂಡರೆ ಒಳ್ಳೆಯದೆಂಬು ಅನ್ನಿಸುತ್ತಿತ್ತು.

'ಜ್ವರ ಇನ್ನು ಹೆಚ್ಚಾಗಿರಲಿಲ್ಲ, ಸ್ವಲ್ಪ ಮೈ ಬಿಸಿಯಾಗಿತ್ತೊ ಇಲ್ಲವೊ. ಬೆಟ್ಟಕ್ಕೆ ಹೋಗಿ ದೇವರೆ ದರ್ಶನ ಮಾಡಿಕೊಂಡು ಬಂದುಬಿಡೋಣ . ಮತ್ತೆ ಇಲ್ಲಿಗೆ ಬರೋದು ಯಾವಾಗಲೋ. ಎಂದು ಲಲಿತೆ ನಮ್ಮ ತಾಯಿಯ ದೈವಭಕ್ತಿಯ ಮೂಲಕ ತನ್ನ ಸಂಕಲ್ಪ ವನ್ನು ನೆರೆವೇರಿಕೊಳ್ಳಲು ಪ್ರಯತ್ನ ಮಾಡಿದಳು. ನಮ್ಮ ತಾಯಿ ಅವಳ ಬೂಟಾಟಿಕೆಗೆ ಸಿಕ್ಕಲಿಲ್ಲ. 'ನಿನ್ನೆ ನೂರೆರಡು ಡಿಗ್ರಿ ಜ್ವರ ಇತ್ತು ಅಂತಿಯೆ. ಈ ಕೊಂಪೆಯಲ್ಲಿ ಒಂದು ಔಷಧಿ ನೀರು ಸಹ ಸಿಕ್ಕುವುದಿಲ್ಲ. ಖಾಯಿಲೆ ಹೆಚ್ಚಾದರೆ ಏನು ಗತಿ. ಮೈಸೂರಿಗೆ ಹೊರಟು ಹೋಗೋಣ ನಡಿ' ಎಂದುಬಿಟ್ಟರು. ನಮ್ಮಿಬ್ಬರ ಪ್ರಣಯ ಕಲಹ ಹೀಗೆ ಪರಿಣಮಿಸುವುದೆಂದು ನಾವು ತಿಳಿದಿರಲಿಲ್ಲ. ನಾನು ಲಲಿತೆಯು ಈಗ ಒಂದಾದೆವು. 'ನಿನ್ನೆ ಒಂದು ದಿನದ ಜ್ವರ ಬಂದರೆ ಊರು ಬಿಟ್ಟು ಹೋಗಬೇಕೆ ? ರಂಗನ ಬೆಟ್ಟಕ್ಕೆ ಹೋಗದಿದ್ದರೆ ಬೇಡ, ಮನೆಯಲ್ಲೆ ಇದ್ದು ಸುಧಾರಿಸಿಕೊಂಡರೆ ಸರಿಹೋಗುತ್ತೆ.' ಎಂದು ನಾನು ಹೇಳುತ್ತಿದ್ದೆ. -ಆದರೆ ಆ ಸಮಯಕ್ಕೆ ಸರಿಯಾಗಿ ಲಲಿತೆಗೆ ಕೆಮ್ಮು ಬಂತು-ಈಸಲ ಔತಣ ವಿಲ್ಲದೆಯೆ ಬಂದ ನಿಜವಾದ ಕೆಮ್ಮು. ಅದನ್ನು ನೋಡಿ ಮೈಸೂರಿಗೆ ಹೊರಟೇ ತಿರಬೇಕೆಂದು ನಮ್ಮ ತಾಯಿ ಹಟಹಿಡಿದರು. ಅವರ ಮನಸ್ಸನ್ನು ತಿರುಗಿಸಲು ನಾವು ಮಾದಿದ ಪ್ರಯತ್ನವೊಂದು ಸಾಗಲಿಲ್ಲ. ನಾನು ಲಲಿತೆಯು ಒಬ್ಬರ ಮುಖವನ್ನೊಬ್ಬರು ದೃಶ್ಟಿಯಲ್ಲಿ ಎಶ್ಟುಮಟ್ಟಿಗೆ ದೂರಬಹುದೋ ಅಶ್ಟು ದೂರಿದೆವು. ಮೈಸೂರಿಗೆ ಹೋಗುವುದು ನಿಶ್ಚಯವಾಗಿ ಹೋಯಿತು. ನಾವು ಬಹಳ ದಿನದಿಂದ ಆಸೆಪಟ್ಟು ಪಡೆದಿದ್ದ ಪ್ರಣಯ ಮಾಸವು ಇಪ್ಪತ್ತು ದಿನಗಳಲ್ಲಿಯೇ ಮುಕ್ತಾಯವಾಯಿತು.'

ಮುಂದೆ ಹಲವಾರು ವರ್ಷಗಳ ನಂತರ, ದಂಪತಿಗಳಿಬ್ಬರೂ ರಾಮಾಯಣದ ಅಧ್ಯಯನದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುತ್ತಾರೆ. ರಾಯರು ವಾಲ್ಮಿಕಿ ರಾಮಾಯಣವನ್ನು ಓದಿದರೆ, ಜೈಯಮ್ಮನವರು ದೇವಶಿಖಾಮಣಿ ಅಳಶಿಂಗಾಚಾರ್ಯರ ಕನ್ನಡ ಅನುವಾದವನ್ನು ಒದುತ್ತಿದ್ದರು. ಸಂಜೆ ಅಭಿಪ್ರಾಯಗಳ ವಿನಿಮಯ. ಉತ್ತರ ರಾಮಚರಿತೆಯ ಮೊದಲನೆಯ ಅಂಕವನ್ನು ಜಯಲಕ್ಷ್ಮಿಗೆ ಓದಿ ಅರ್ಥ ಹೇಳಿದದ್ದನ್ನು ಜ್ಞಾಪಿಸಿಕೊಳ್ಳುತ್ತಾರೆ.

ಅದ್ವೈತಂ ಸುಖದುಃಖಯೋರನಂಗತಂ ಸರ್ವಾಸ್ವವಸ್ಥಾಸು ಯತ್ವಿಶ್ರಾಮೋ ಹೃದಯಸ್ಯ ಯತ್ರ ಜರಸಾ ಯಸ್ಮಿನ್ನಹಾರ್ಯೋ ರಸಃಕಾಲೇನಾವರಣಾತ್ಯಯಾತ್ಪರಿಣತೇ ಯತ್ ಸ್ನೇಹಸಾರೇ ಸ್ಥಿತಂಭದ್ರಂ ತಸ್ಯ ಸುಮಾನುಷಸ್ಯ ಕಥಮಷ್ಯೇಕಂ ಹಿ ತತ್ಪ್ರಾಪ್ಯತೇ
[ಸುಖದುಃಖಗಳಲ್ಲಿ ಅದ್ವೈತ; ಬದುಕಿನ ಎಲ್ಲಾ ಪರಿಸ್ಥಿತಿಗಳಲ್ಲೂ ಅನುಕೂಲವಾಗಿ ಅನುಸರಿಸತಕ್ಕದ್ದು; ಹೃದಯಕ್ಕೆ ನೆಮ್ಮದಿ ಕೊಡತಕ್ಕಂಥದ್ದು; ಮುಪ್ಪಿನಲ್ಲೂ ಸವಿ ಇಳಿಯದಂಥಾದ್ದು; ಕಾಲ ಹರಿದಂತೆಲ್ಲ ಇಬ್ಬರ ನಡುವೆ ಇದ್ದ ತಡೆಗಳು ನಾಶವಾಗಿ, ಮಾಗಿ, ಪ್ರೇಮಸಾರವಾಗಿ ಪರಿಣಮಿಸುವುದು-ಇಂಥ ಅಪೂರ್ವ ದಾಂಪತ್ಯ ಯಾರಿಗೆ ಲಭಿಸುತ್ತದೆಯೋ! ಹೇಗೆ ಲಭಿಸುತ್ತದೆಯೋ ಅದನ್ನು ಪಡೆದವನು ಧನ್ಯ!]

"ಈ ನಾಟಕದ ಮೊದಲ ಅಂಕದಲ್ಲಿ ಇಂಥ ಹೃದಯಸ್ಪರ್ಶಿಯಾದ ನಾಲ್ಕಾರು ಶ್ಲೋಕಗಳು ಬರುತ್ತವೆ; ಓದಿದಾಗ ನಾವಿಬ್ಬರೂ ಭಾವ ಪರವಶರಾದೆವು. ಜಯಲಕ್ಷ್ಮಿ 'ಇಂಥಾದದ್ದನ್ನೆಲ್ಲಾ ಓದಿ ಹೇಳುವುದಕ್ಕೆ ೪೦ ವರ್ಷ ಕಾಯಾಬೇಕಾಗಿತ್ತೆ!' ಎಂದಳು. ಆ ಸೌಖ್ಯವನ್ನು ಕಳೆದುಕೊಂಡದ್ದಕ್ಕೆ ನಾನೇ ಕಾರಣ. ಆದರೆ ಅದು ಸೌಖ್ಯ ಎಂದು ತಿಳಿಯುವುದಕ್ಕೆ ೪೦ ವರ್ಷ ಬೇಕಲ್ಲ !"

೧೯೦೦ (೧೬-೦೬-೧೯೦೦) ರಲ್ಲಿ ಜನಿಸಿ ಶತಮಾನದದುದ್ದಕ್ಕೂ ಏಲ್ಲ ಚಲನವಲನಗಳನ್ನೂ ಸೂಕ್ಷ್ಮವಾಗಿ ಕಂಡು ಸ್ಪಂದಿಸಿ, ಯಾವ ಪೂರ್ವಾಗ್ರಹಕ್ಕೂ ಮಣಿಯದೆ ಮಾನವೀಯ ಮೌಲ್ಯಗಳನ್ನು ನಾಡಿಗೆ ನೀಡಿದ ಚೇತನಕ್ಕೆ ನಮನಗಳು !

-ಕ್ರೈಸ್ಟ್ ಕಾಲೇಜ್ ಕನ್ನಡ ಸಂಘಕ್ಕೆ ಕೃತಜ್ಞತೆಗಳು.