ಪ್ರತಾಪ್ ಆಚಾರ್ಯ ಕೈಯಲ್ಲಿ ಎಲೆಯೂ ಕಲೆಯಾಗಿ ಅರಳುವುದು
ಸಾಧಾರಣ ಹಲಸಿನ ಎಲೆಯು ಇವರ ಕೈಯಲ್ಲಿ ಸಿಕ್ಕಿದರೆ ಅದರಲ್ಲಿ ಗಣಪತಿ, ಶಿವ, ಸ್ವಾಮಿ ಕೊರಗಜ್ಜ, ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್ ಅಷ್ಟೇ ಯಾಕೆ? ನಮ್ಮ ಹೆಮ್ಮೆಯ ಅಬ್ದುಲ್ ಕಲಾಂ, ಕ್ರಿಕೆಟಿಗ ಧೋನಿ, ಸಂಗೀತ ಸಾಮ್ರಾಟ್ ಎಸ್. ಪಿ. ಬಾಲಸುಬ್ರಮಣ್ಯಂ ಎಲ್ಲರೂ ಅರಳುತ್ತಾರೆ. ನಮ್ಮ ದೇಶದ ಬೆನ್ನೆಲುಬು ಎಂದು ಕರೆಸಿಕೊಳ್ಳುವ ರೈತನ ಬದುಕೂ ಈ ಒಂದು ಎಲೆಯಲ್ಲಿ ಚಿತ್ರವಾಗಿ ಪರಿವರ್ತನೆಯಾಗುತ್ತದೆ. ಯಾರು ಈ ಪ್ರತಿಭಾವಂತ ಕಲಾವಿದ ಎನ್ನುವ ಕುತೂಹಲ ನಿಮಗಿದೆಯೇ?
ಪ್ರತಾಪ್ ಆಚಾರ್ಯ ಎಂಬ ಹದಿಹರೆಯದ ಹುಡುಗನೇ ಈ ಎಲ್ಲಾ ಎಲೆ ಚಿತ್ರ (ಲೀಫ್ ಆರ್ಟ್)ಗಳ ರುವಾರಿ ಎಂದರೆ ನಿಮಗೆ ಅಚ್ಚರಿಯಾದೀತು. ನಾವೆಲ್ಲಾ ಹಲಸಿನ ಎಲೆಯನ್ನು ಹೆಣೆದು ಕೊಟ್ಟಿಗೆ (ಕಡುಬು) ಮಾಡಿ ಅದನ್ನು ತಿನ್ನುವ ಬಗ್ಗೆ ಯೋಚಿಸಿದರೆ, ಈ ಹುಡುಗ ಆ ಎಲೆಯಲ್ಲಿ ನಾನಾ ರೀತಿಯ ಕಲೆಯನ್ನು ಚಿತ್ರಿಸುತ್ತಾನೆ. ಇವನ ಕೈಯಲ್ಲಿ ಎಲೆಗಳು ನಾನಾ ರೂಪ ತಾಳುತ್ತವೆ. ದೇವರಿಂದ ಹಿಡಿದು, ಚಲನ ಚಿತ್ರ ನಟರು, ಕ್ರಿಕೆಟ್ ಆಟಗಾರರು, ಮಹಾನ್ ವ್ಯಕ್ತಿಗಳು ಹಾಗೂ ದೇಶದ ಹೆಮ್ಮೆಯ ಸೈನಿಕರೂ ಈ ಎಲೆಯಲ್ಲಿ ಕಾಣ ಸಿಗುತ್ತಾರೆ.
ದಕ್ಷಿಣ ಕನ್ನಡದ ಮಂಗಳೂರು ಬಳಿಯ ಪಕ್ಷಿಕೆರೆ ಎಂಬ ಊರಿನಲ್ಲಿ ಡಿಸೆಂಬರ್ ೧೯, ೨೦೦೨ರಲ್ಲಿ ಸದಾಶಿವ ಆಚಾರ್ಯ ಹಾಗೂ ವೇದಾವತಿ ಆಚಾರ್ಯ ದಂಪತಿಯವರ ಸುಪುತ್ರರಾಗಿ ಹುಟ್ಟಿದ ಇವರು ಹುಟ್ಟಿನಿಂದಲೇ ಪ್ರತಿಭಾಶಾಲಿ. ಇವರಿಗೆ ಪೂಜಾಶ್ರೀ ಎಂಬ ಅಕ್ಕ ಇದ್ದಾರೆ. ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಪ್ರತಾಪ್ ಕ್ರೀಡೆಯಲ್ಲೂ ಪ್ರತಿಭಾಶಾಲಿ. ಕಬಡ್ಡಿ, ವಾಲಿಬಾಲ್, ಕ್ರಿಕೆಟ್ ಗಳನ್ನು ತುಂಬಾನೇ ಸೊಗಸಾಗಿ ಆಡುತ್ತಾರೆ. ತಮ್ಮ ಬಾಲ್ಯದ ಚಿತ್ರಕಲೆಯನ್ನು ಸಂಗ್ರಹಿಸಿ ಇಡಲು ಆಗಲಿಲ್ಲ ಎಂಬ ನೋವು ಅವರಿಗಿದೆ.
ಕಟೀಲು ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿರುವ ಪ್ರತಾಪ್ ಕೊರೋನಾ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಕುಳಿತು ಏನು ಮಾಡುವುದು? ಸಮಯವನ್ನು ಹೇಗೆ ಸದುಪಯೋಗ ಮಾಡುವುದು ಎಂದು ಯೋಚಿಸುತ್ತಿರುವಾಗ ಪ್ರತಾಪ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಎಲೆಯನ್ನು ಕತ್ತರಿಸಿ ಚಿತ್ರವನ್ನು ಮೂಡಿಸುವ ಲೀಫ್ ಆರ್ಟ್ ವಿದ್ಯೆಯನ್ನು ಕಂಡು ಆಶ್ಚರ್ಯಚಕಿತರಾಗುತ್ತಾರೆ. ಮೊದಲೇ ಚಿತ್ರ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಇವರಿಗೆ ಇದರಲ್ಲಿ ಕುತೂಹಲ ಮೂಡುತ್ತದೆ. ತಾನೂ ಏಕೆ ಎಲೆಯಲ್ಲಿ ಚಿತ್ರ ಬಿಡಿಸಬಾರದು ಎಂದು ಯೋಚಿಸಿದ ಪ್ರತಾಪ್ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಾರೆ. ಒಂದು ಬ್ಲೇಡ್ ತೆಗೆದುಕೊಂಡು ಹಲಸಿನ ಎಲೆಯನ್ನು ಚಿತ್ರ ಬಿಡಿಸುವ ರೀತಿಯಲ್ಲಿ ಕತ್ತರಿಸುತ್ತಾ ಹೋಗುತ್ತಾರೆ. ಮೊದಮೊದಲಿಗೆ ಸ್ವಲ್ಪ ಕಷ್ಟವಾದರೂ ನಂತರ ಅವರಿಗೆ ಈ ಕಲೆ ಸಿದ್ಧಿಸುತ್ತದೆ. ಈ ಎಲೆಯಲ್ಲಿ ಚಿತ್ರ ಬಿಡಿಸುವವರು ಅಧಿಕಾಂಶ ಅರಳಿಮರದ ಎಲೆಯನ್ನು ಬಳಸುತ್ತಾರೆ. ಆದರೆ ಪ್ರತಾಪ್ ಹಲಸಿನ ಮರದ ಎಲೆಯನ್ನು ಉಪಯೋಗಿಸುತ್ತಾರೆ. ಈ ಎಲೆ ಸ್ವಲ್ಪ ಸಮಯ ಬಾಳಿಕೆ ಬರುತ್ತದೆ. ಎಲೆಯನ್ನು ಫ್ರೇಮ್ (ಚೌಕಟ್ಟು) ಹಾಕಿಸಿ ಇಟ್ಟರೆ ಹಲವಾರು ವರ್ಷಗಳ ಕಾಲ ಹಾಳಾಗದೇ ಉಳಿಯುತ್ತದೆ. ಪುಸ್ತಕದ ಹಾಳೆಗಳ ನಡುವೆಯೂ ಎಲೆಗಳನ್ನು ಇರಿಸಬಹುದು.
ಹೀಗೆ ಪ್ರಾರಂಭವಾದ ಪ್ರತಾಪ್ ಅವರ ಎಲೆಯಲ್ಲಿ ಚಿತ್ರಿಸುವ ಕಲೆಯು ಹಲವಾರು ಚಿತ್ರಗಳನ್ನು ಎಲೆಯಲ್ಲಿ ಮೂಡಿಸಿದೆ. ಪ್ರತಾಪ್ ಇಲ್ಲಿಯವರೆಗೆ ಗಣಪತಿ, ಸ್ವಾಮಿ ಕೊರಗಜ್ಜ, ಚಾರ್ಲಿ ಚಾಪ್ಲಿನ್, ಸುಭಾಷ್ ಚಂದ್ರ ಬೋಸ್, ಸ್ವಾಮಿ ವಿವೇಕಾನಂದ, ಎಪಿಜೆ ಅಬ್ದುಲ್ ಕಲಾಂ, ಎಂ ಎಸ್ ಧೋನಿ, ಎಸ್ ಪಿ ಬಾಲಸುಬ್ರಮಣ್ಯಂ, ರೈತನ ಬದುಕು, ಶಿವ, ಭಾರತೀಯ ಸೈನ್ಯಕ್ಕೆ ಗೌರವ, ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಮುಂತಾದ ಚಿತ್ರಗಳನ್ನು ಅತ್ಯಂತ ಮನಮೋಹಕವಾಗಿ ಎಲೆಯಲ್ಲಿ ರಚಿಸಿದ್ದಾರೆ. ಪ್ರತಿಯೊಂದು ಚಿತ್ರವನ್ನು ಬಿಡಿಸಲು ಪ್ರತಾಪ್ ಅವರಿಗೆ ೩-೪ ಗಂಟೆಗಳ ಸಮಯಾವಕಾಶ ಬೇಕಾಗುತ್ತದೆ. ಇದು ಬಹಳ ನಾಜೂಕಾದ ಕಲೆ. ಎಲ್ಲಾದರೂ ಎಲೆಯನ್ನು ಚಿತ್ರಕ್ಕೆ ಕತ್ತರಿಸುವಾಗ ತಪ್ಪಾಗಿ ತುಂಡಾದರೆ ಜೋಡಿಸಲು ಸಾಧ್ಯವಿಲ್ಲ. ಬೇರೆಯೇ ಚಿತ್ರವನ್ನು ಮತ್ತೆ ಮಾಡಬೇಕು. ಹಾಗಾಗಿ ಇದಕ್ಕೆ ಸಮಯವೂ ಬೇಕು. ತಾಳ್ಮೆಯೂ ಬೇಕು. ಪ್ರಸ್ತುತ ಪ್ರತಾಪ್ ಎಲೆಯಲ್ಲಿ ಛತ್ರಪತಿ ಶಿವಾಜಿ ಹಾಗೂ ಶಂಕರ್ ನಾಗ್ ಚಿತ್ರ ತಯಾರಿಕೆಯಲ್ಲಿ ವ್ಯಸ್ತರಾಗಿದ್ದಾರೆ.
ಇವಿಷ್ಟೇ ಅಲ್ಲ ಪ್ರತಾಪ್ ಅವರಿಗೆ ಜೇಡಿ ಮಣ್ಣಿನಲ್ಲಿ ಮೂರ್ತಿ ಮಾಡುವುದು, ಚಿತ್ರಕಲೆ, ಗಿಡ ಬೆಳೆಸುವುದು, ಪೆನ್ಸಿಲ್ ಚಿತ್ರ ಬಿಡಿಸುವುದು, ತ್ಯಾಜ್ಯ ವಸ್ತುಗಳಿಂದ ಕಲಾಕೃತಿ ತಯಾರಿಸುವ ಹವ್ಯಾಸವೂ ಇದೆ. ತಮ್ಮ ಕಲೆಗಳ ಬಗ್ಗೆ ಸಣ್ಣ ಸಣ್ಣ ವಿಡಿಯೋಗಳನ್ನೂ ಅವರು ಮಾಡಿದ್ದಾರೆ. ಎಲೆಯ ಚಿತ್ರಗಳು ಭಾರೀ ಸೊಗಸಾಗಿ ಅದರಲ್ಲಿ ಪ್ರಸ್ತುತ ಪಡಿಸಿದ್ದಾರೆ.
ತಮ್ಮ ಈ ಎಲೆಯಲ್ಲಿ ಚಿತ್ರ ರಚನೆಯ ಕಲೆಯನ್ನುಭವಿಷ್ಯದಲ್ಲಿ ಮುಂದುವರೆಸಿಕೊಂಡು ವೃತ್ತಿಯಾಗಿ ತೆಗೆದುಕೊಳ್ಳಬೇಕೆಂಬ ಹಂಬಲ ಪ್ರತಾಪ್ ಅವರಿಗೆ ಇದೆ. ಆನಿಮೇಷನ್ ಕ್ಷೇತ್ರದಲ್ಲೂ ಏನಾದರೂ ಸಾಧನೆ ಮಾಡಬೇಕೆಂಬ ಹೆಬ್ಬಯಕೆ ಇವರಿಗೆ ಇದೆ. ಅದಕ್ಕಾಗಿ ಯಾವುದಾದರೂ ತರಭೇತಿ ಶಿಕ್ಷಣವನ್ನು ಪಡೆದುಕೊಳ್ಳುವ ಹಂಬಲದಲ್ಲಿದ್ದಾರೆ. ಆರ್ಥಿಕವಾಗಿ ಅಷ್ಟೇನೂ ಸಬಲರಲ್ಲದ ಇವರ ಹೆತ್ತವರಿಗೆ ಅಧಿಕ ಶುಲ್ಕವನ್ನು ನೀಡಿ ಕಲಿಸುವುದು ಕಷ್ಟ ಸಾಧ್ಯ. ಪ್ರತಿಭೆಯಿದ್ದರೂ ಆರ್ಥಿಕ ಸಮಸ್ಯೆಯಿಂದ ಈ ಹುಡುಗನ ಕನಸು ಕಮರದಿರಲಿ. ಸಹೃದಯ ವ್ಯಕ್ತಿಗಳು ಪ್ರತಾಪ್ ಆಚಾರ್ಯರ ಸಾಧನೆಯೆಂಬ ಗಿಡವನ್ನು ಮರವನ್ನಾಗಿಸಲು ನೀರು ಎರೆದು ಪೋಷಿಸಬಹುದು.
ಪ್ರತಾಪ್ ಆಚಾರ್ಯರಿಗೆ ತಮ್ಮ ಕಲಾ ಸಾಧನೆಯನ್ನು ಯಾರೂ ಗುರುತಿಸಿಲ್ಲ ಎಂಬ ಕೊರಗು ಇದೆ. ತಡವಾಗಿಯಾದರೂ ಪ್ರತಿಭೆಗೆ ಸೂಕ್ತ ಮನ್ನಣೆ ದೊರೆತೇ ದೊರೆಯುತ್ತದೆ. ಖಂಡಿತವಾಗಿಯೂ ಪ್ರತಾಪ್ ಆಚಾರ್ಯ ಅವರಿಗೆ ಸರಿಯಾದ ಕಲಾ ಶಿಕ್ಷಣ ಹಾಗೂ ಪ್ರೋತ್ಸಾಹ ದೊರೆತರೆ ಈ ಎಲೆಯಲ್ಲಿ ಚಿತ್ರ ಅರಳಿಸುವ ಕಲೆಯಲ್ಲಿ ತುಂಬಾನೇ ಸಾಧನೆ ಮಾಡುವ ಸಾಧ್ಯತೆ ಇದೆ. ಅವರಲ್ಲಿ ಇನ್ನೂ ಅನೇಕ ಪ್ರತಿಭಾಶಾಲಿ ಗುಣಗಳು ಇವೆ. ಅವೆಲ್ಲವೂ ಬೆಳಕಿಗೆ ಬರಲಿ. ಅವರ ಭವಿಷ್ಯ ಉಜ್ವಲವಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ.
ಪ್ರತಾಪ್ ಆಚಾರ್ಯ ಅವರ ಸಂಪರ್ಕ : ೭೪೮೩೨ ೩೯೬೭೫