ಪ್ರತಿಸ್ಪರ್ಧಿ

ಪ್ರತಿಸ್ಪರ್ಧಿ

ಪ್ರತಿಸ್ಪರ್ಧಿ
 
ಶ್ವೇತ ವಸ್ತ್ರದಲ್ಲಿ ಮಾಂಸದ ಮುದ್ದೆಯಾಗಿ ಬಂದಿದ್ದ ನನ್ನ ಅಣ್ಣ ಇಂದು . ಅದನ್ನು ಕಂಡು ನನ್ನ ಎದೆ ಒಡೆದದ್ದು ನೂರಕ್ಕೆ ನೂರರಷ್ಟು ಸತ್ಯ. ಇಂದು ನನ್ನಲ್ಲಿ ಪ್ರಕ್ಷುಬ್ಧ ಸಾಗರದಂತೆ ಮೂಡುತ್ತಿರುವ ಭಾವನೆಗಳೇ ಅರ್ಥವಾಗುತ್ತಿಲ್ಲ. ಏನೇ ಆದರೂ ಅವನು ನನ್ನ ರಕ್ತ ಹಂಚಿಕೊಂಡವನಲ್ಲವೇ. ನಾವಿಬ್ಬರೂ ಒಂದೇ ತಾಯಿಯ ಒಡಲು, ಮಡಿಲು, ಪ್ರೀತಿ, ಪ್ರೇಮ ಹಂಚಿ ಕೊಂಡವರಲ್ಲವೇ. ಇಂದು ನನ್ನ ಹೆಣ್ಣು ಮನಸ್ಸು ಚಂಚಲವಾಗಿದೆಯಲ್ಲಾ? ಯಾಕೆ ಹೀಗೆ ಅರ್ಥವೇ ಆಗುತ್ತಿಲ್ಲ.
ನಾವು  ದಾಯಾದಿಗಳಲ್ಲವೇ? ನಾನು ಹುಟ್ಟಿದಾಗಿಂದ ಪ್ರತಿಯೊಂದಕ್ಕೂ ಹೋರಾಡ ಬೇಕಾಯ್ತು ಅವನೊಂದಿಗೆ. ಹೆತ್ತವರ ಪ್ರೀತಿ, ಬಟ್ಟೆ, ವಿದ್ಯಾಭ್ಯಾಸ ಹೀಗೆ ಪಟ್ಟಿ ಮಾಡಿದರೆ ನಮ್ಮ ಒಳಗೆ ನಡೆದ ಸಾವಿರರು ವಿವಾದಗಳು ಸಾಲು ಸಾಲಾಗಿ ಅನಾವರಣ ಗೊಳ್ಳುತ್ತಾ ಸಾಗುತ್ತವೆ . ಅವನು ನನಗಿಂತ ಹೆಚ್ಚಿನ ತಿಳುವಳಿಕೆ ಉಳ್ಳವನು- ಅವನು ಮಾಡಿದೆಲ್ಲ ಸರಿ ಎಂದು ಎಲ್ಲರೂ ತೆಗಳಿದವರೇ, ಈ ಹುಡುಗರಿಗೆ ಯಾವುದೇ ತರನಾದ ನಿಬಂಧನಗಳಿಲ್ಲ, ನಾನು ಹೆಣ್ಣು ಮಗಳು, ಎಲ್ಲದಕ್ಕೂ ಹಿರಿಯರ ಮಾತು ಕೇಳಿಯೇ ಮುಂದಡಿ ಇಡಬೇಕು. ಬಟ್ಟೆ ಬರೆಯಿಂದದ ಹಿಡಿದು, ಸೈಕಲ್ಲು ಕಾರು ಕಲಿಯುವವರೆಗೆ, ಎಲ್ಲವೂ ಹಿರಿಯರ ಅನುಮತಿ ಕೇಳಿಯೇ ಮುಂದಡಿ ಇಡಬೇಕು. ಜೋರಾಗಿ ನಗಲು ಕೂಡ ಆ ಮುಂಡೆ- ಅಜ್ಜಿಗೆ ಹೆದರಿಕೊಂಡೇ ಬದುಕ ಬೇಕು. ಆದರೆ ನಾನು ಅಧುನಿಕ ಹೆಣ್ಣಲ್ಲವೇ? ನಾವು ಯಾರ ಆಧಿನವೂ ಅಲ್ಲ. ಬಂಡಾಯವೊಂದೇ ನನಗೆ ಕಂಡ ದಾರಿ.” Charity begins at home.’’ ಎಂಬ ನಾಣ್ನುಡಿಯನ್ನು ಯಾರೂ ಕೇಳಿಲ್ಲವೇ. ಸಮಾನತೆಗೆ ಹೆಣ್ಣು ಮಗಳ ಹೋರಾಟ ಪುರುಷಪ್ರಧಾನ ಸಮಾಜದ ಮೂಲ ಜಡವಾದ ಮನೆಯಿಂದಲೇ ಪ್ರಾರಂಭವಾಗ ಬೇಕು. ಅದಕ್ಕೆ ಅಣ್ಣ ಎಂಬ ನಾನು ಬಯಸದೇ ಬಂದು ವಕ್ಕರಿಸಿದ ಇವನನ್ನು ಜೀವನದ ಪ್ರತಿ ಕ್ಷಣವೂ ಸೋಲಿಸಬೇಕು ಎಂದು ಹಠ ಹಿಡಿದವಳು ನಾನಲ್ಲವೇ?
 ಆದರೆ ಇಂದು ಸೋತು ಹೆಣವಾದ ಅವನನ್ನು ಕಂಡು ನಾನೇಕೆ ನಿತ್ರಾಣಳಾಗಿದ್ದೇನೆ? ನನ್ನ ಇಡೀ ದೇಹ ಕಂಪಿಸುತ್ತಿದೆ. ನಾಲಿಗೆ ಒಣಗುತ್ತಿದೆ. ಬಾಯಿಂದ ಮಾತೇ ಹೊರಡುತ್ತಿಲ್ಲ. ಅವನ ಸೋಲಷ್ಟೇ, ಸಾವು ನನ್ನ ಉದ್ದೇಶವಾಗಿರಲಿಲ್ಲ. ನನ್ನ ರೋಮ ರೋಮಗಳೇಕೆ ಅಣ್ಣ ಎಂದು ಅಳುತ್ತಿವೆ. ಆಂತರ್ಯದಲ್ಲಿ ನಾನೇ ಸತ್ತು ಹೋದಂತೆ ಇಂದೇಕೆ ಅನಿಸುತ್ತಿದೆ? ಯಾರಾದರೂ ಹೇಳಬಲ್ಲಿರ? ಇಲ್ಲ ಯಾರು ನನ್ನೆಡೆ ಕಣ್ಣೆತ್ತಿ ನೋಡುತ್ತಿಲ್ಲ. ನನ್ನ ಪತಿ ಕೂಡ ನನ್ನನ್ನು ಸಂತೈಸಲಿಲ್ಲ. ನಾನು ಒಂಟಿ ಆಗಿ ಬಿಟ್ಟೆ ಇಂದು. ನಾನು ಗೆದ್ದು ಸೋತಿದ್ದೆ . ಹೆಣವಾದದ್ದು ಅವನಲ್ಲ ನನ್ನ ಅಹಂಕಾರ ಎಂಬ ಅನುಭೂತಿ ಇಂದೇಕೆ ಆಗುತ್ತಿದೆ? ಛೆ! ಯಾರಲ್ಲಿ ನಾನು ನನ್ನ ಪ್ರಶ್ನೆಗಳಿಗೆ ಉತ್ತರ ಕೇಳಲಿ?ಅರಿಯಲಾರೆನು.
“ ಅವನು ಏನು ಮಾಡಿದರು ಯಾರು ಕೇಳಲ್ಲ. ಅವನು ಗಂಡು ಮುಂಡೇದು ಕಣೆ! ಅವನು ಇವತ್ತಲ್ಲ ನಾಳೆ ಸರಿ ಹೋಗ್ತಾನೆ. ಅವನು ಕಳೆದು ಕೊಳ್ಳೋದು ಏನು ಇಲ್ಲ. ನೀನು ನಿನ್ನ ಶೀಲ ಈ ಗಂಡು ಜಾತಿಯಿಂದ ಕಾಪಾಡಿ ಕೊಳ್ಳಬೇಕು. ನಾಳೆ ಮದುವೆ ಆಗಿ ಸಂಸಾರ ಮಾಡಬೇಕು. ನೀನು ನಮಗೆ ದೊಡ್ಡ ಜವಾಬ್ದಾರಿ ಕಣೆ. ಹಾರುಗಾಲಿ, ಹೀಗೇ ಓಡಾಡಿದರೆ ನಾಳೆ ಗಂಡು ಸಿಗದೇ ಮನೇಲಿ ಕುಳಿತು ನಮ್ ಪ್ರಾಣ ಹಿಂಡುತಿಯಾ.” ಎಂದು ಆ ಅಜ್ಜಿ ಒದರುತ್ತಿದದ್ದು ನಿತ್ಯವು ನನ್ನ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿತ್ತು. ನನಗೆ ಬೇಕಾದದ್ದು ಮಾಡಲು ಎಲ್ಲಿ ನೋಡಿದರೂ ಕಟ್ಟು ಪಾಡುಗಳು. ಹೆಣ್ಣು ಜಾತಿಗೆ ಅವಮಾನ ಆ ನನ್ನ ಅಜ್ಜಿ. ಭೂತದಂತೆ ನನ್ನನ್ನು ಚಿಕ್ಕವಳಿರುವಾಗ ಹಿಂಬಾಲಿಸುತ್ತಾ ನನ್ನ ತಪ್ಪು ಕಂಡು ಹಿಡಿಯುವುದೊಂದೇ ಅವಳ ಕಾಯಕ. ಮೊಮ್ಮಗ ಏನೂ ಮಾಡಿದರೂ ಅವಳಿಗೆ ಕಾಣಿಸುತ್ತಿರಲಿಲ್ಲ. ಅವಳು ಸತ್ತಾಗ ನನ್ನ ಕಣ್ಣಲ್ಲಿ ಒಂದು ಹನಿ ನೀರು ಕೂಡ ಬರಲಿಲ್ಲ.  ನಾನು ಹೆಣ್ಣು ಎಂಬ ಒಂದೇ ಕಾರಣಕ್ಕೆ ಈ ಸಮಾಜ ಕ್ಷಣ ಕ್ಷಣಕ್ಕೂ ನನ್ನನ್ನು ತುಚ್ಛ ವಾಗಿ ನಡೆಸಿಕೊಂಡಿತ್ತು.
ನನಗೆ ಪ್ರಥಮ ಬಾರಿಗೆ ಮುಟ್ಟು ಅದಾಗ ಅಂತೂ ನನ್ನ ಪರಿಸ್ಥಿತಿ ಶೋಚನೀಯವಾಗಿತ್ತು. ಶಾಲೆಯಲ್ಲೇ ಆಗಿ ಬಿಟ್ಟಿತ್ತು. ಎಲ್ಲರೂ ನನ್ನನ್ನು ಕಂಡು ತಮಾಷೆ ಮಾಡಿದವರೇ. ಹೇಗೋ ಸಾವರಿಸಿಕೊಂಡು ಓಡುತ್ತಾ ಅಮ್ಮನ ಮಡಿಲಲ್ಲಿ ಮುಖವನ್ನು ಹುದುಗಿಸಿ ಅತ್ತು ಬಿಟ್ಟಿದ್ದೆ. ಅಂತೆಯೇ ನನ್ನ ಎದೆಯಲ್ಲಿ ಕುಚಗಳು ಮೂಡಿ ಬಂದಾಗ, ಎಲ್ಲರ ಕಣ್ಣು ಅದರ ಮೇಲೆಯೇ . ನಾಚಿ ನೀರಾಗಿ, ಈ ಜೀವನವೇ ಬೇಡವೆಂದೆ ಅಮ್ಮನಲ್ಲಿ ಗೋಳು ತೋಡಿಕೊಂಡಿದ್ದೆ. ಅಮ್ಮ ಅಪ್ಪ ಇಬ್ಬರು ನನಗೆ ಸಾಂತ್ವನ ಹೇಳಿದ್ದರು. ಇವನು ಒಂದಕ್ಷರ ಕೂಡ ಉಲಿಯಲಿಲ್ಲ.
 
ಬೆಳಿಗ್ಗೆ ಎದ್ದು ಹಲ್ಲುಜ್ಜಿ, ಹೊಟ್ಟೆ ತುಂಬಿಸಿ ನಡೆದನೆಂದರೆ ಮತ್ತೆ ರಾತ್ರಿ ಮಾರಾಯ  ಊಟದ ಹೊತ್ತಿಗೇ ಹಾಜರ್. ಅಮ್ಮ ತುಟಿ ಪಿಟಿಕೆನ್ನದೆ ಅವನಿಗೆ ಇಷ್ಟವಾದ ಗೊಜ್ಜು, ಮೀನು, ತಿಂಡಿ ತಿನಿಸುಗಳನ್ನು ಮಾಡಿ ಕೊಟ್ಟು ಮುದ್ದು ಮಾಡಿ ಕಳುಹಿಸುತ್ತಿದಳು. ಕಲಿಯುವದರಲ್ಲಿ ಮಾತ್ರ ಬಡ್ಡಿ ಮಗ ಬುದ್ಧಿವಂತನಾಗಿದ್ದ. ನಾನು ಇಡೀ ದಿನ ಉರು ಹೊಡೆದರೂ ಅವನಿಗಿಂತ ಜಾಸ್ತಿ ಅಂಕಗಳನ್ನು ಗಳಿಸಲು ಆಗಲಿಲ್ಲ, ಆದರೂ ನಾನು ನನ್ನ ಛಲವನ್ನು ಬಿಡದೆ ಅವನಿಗೆ ಸರಿ ಸಮನಾಗಿ ಪೈಪೋಟಿಯನ್ನು ನೀಡುತ್ತಿದ್ದೆ. ಅವನ ಗಂಡಸು ಎಂಬ  ಅಹಮನ್ನ ನಾನು ಸಶಕ್ತ ಹೆಣ್ಣು ಮಗಳೆಂಬ ಅಸ್ತ್ರದಿಂದ ತುಳಿಯ ಬೇಕೆಂದು ಅವಕಾಶಕ್ಕಾಗಿ ಹದ್ದಿನಂತೆ ಕಾಯುತ್ತಿದ್ದೆ. ಅವನು ಕದ್ದು ಮುಚ್ಚಿ ಅಪ್ಪನ ಶೇವಿಂಗ್ ಕ್ರೀಂ ಮುಖಕ್ಕೆ ಬಳಿದದ್ದು, ಪಕ್ಕದ ಮನೆ ಕಮಲಳ ಜೊತೆ ಗುಟ್ಟಾಗಿ ಫೋನಿನಲ್ಲಿ ಮಾತಾಡಿದ್ದು, ಶಾಲೆಯಲ್ಲಿ ಸುಮನಿಗೆ ಪ್ರೇಮ ಪತ್ರ ಹಂಚಿದ್ದು, ಹೀಗೆ ಅವನ ಎಲ್ಲ ಕಳ್ಳ ಆಟವನ್ನು ಅಪ್ಪ ಅಮ್ಮನಿಗೆ ವರದಿ ಮಾಡುತಿದ್ದೆ.
ಒಂದು ದಿನ ಅವನು ನಮ್ಮ ಊರಿನ ಕೆರೆಯ ಬಳಿ ಒಬ್ಬ ಗೆಳೆಯನೊಡನೆ ಬೀಡಿ ಹಚ್ಚಲು ಪ್ರಯತ್ನಿಸಿದ್ದು ಫೋನಿನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಹೋಗಿ ಕೆರೆಗೆ ಬಿದ್ದು ಬಿಟ್ಟಿದ್ದೆ. ಅವನು ನಾನು ಬಿದ್ದ ಶಬ್ದವನ್ನು ಕೇಳಿ ತನ್ನ ಜೀವದ ಹಂಗು ತೊರೆದು ನನ್ನನ್ನ ಕಾಪಾಡಿದ್ದ. ನನ್ನನ್ನು ಆಮೇಲೆ ಹಿಡಿದುಕೊಂಡು, ನಿನಗೆ ಏನಾದ್ರು ಆಗಿದ್ದರೆ ಏನು ಮಾಡ್ಲಿ ಅಂತ ಅತ್ತು ಬಿಟ್ಟಿದ್ದ. ಆಗ ಆ ಚಳಿಯಲ್ಲೂ ನನ್ನ ಕಣ್ಣಿನಲ್ಲಿ ಹನಿಯೊಂದು ಜಿನುಗಿದ್ದು ನಿಜ. ಆದ್ರೆ ಅದೊಂದು ಕಪಟ ನಾಟಕ ಅಂದು ಕೊಂಡಿದ್ದೆ. ಅಮ್ಮನ ಹತ್ತಿರ ಹೇಳೋಲ್ಲ ಬಿಡೋ ಅಂತ ಮುಖದ ಮೇಲೆ ಹೊಡೆದ ಹಾಗೆ ಹೇಳಿ ಬಿಟ್ಟಿದ್ದೆ. ಆಗ ಅವನು ಸಿಟ್ಟಿನಿಂದ ಕಪಾಳಮೋಕ್ಷ ಮಾಡಿಬಿಟ್ಟ. ನನಗೆ ಅವನು ಯಾಕೆ ಹೊಡೆದ ಅಂತ ಅರ್ಥಾನೇ ಆಗ್ಲಿಲ್ಲ. ಅಪ್ಪನಲ್ಲಿ ಚಾಡಿ ಒಪ್ಪಿಸಿದಾಗ ಚೆನ್ನಾಗಿ ತದುಕಿದ್ದರು. ಆಗ ನಾನು ಅಪರಿಮಿತ ಆನಂದ ಅನುಭವಿಸಿದ್ದೆ.
 
ಅಮ್ಮನಲ್ಲಿ ಯಾವಾಗಲೂ, ಎಲ್ಲ ವಿಷಯದಲ್ಲೂ ಅವನೊಂದಿಗೆ ಹೋಲಿಕೆ ಮಾಡಿ ಜಗಳ, ರಾದ್ದಾಂತ ಮಾಡ್ತಾ ಇದ್ದೆ. ಆಗ ಅಮ್ಮ ಬೇಸರಗೊಂಡು – ‘”ಅವನು ನನ್ನ ಚಟ್ಟಕ್ಕೆ ಕೊಳ್ಳಿ ಇಡುವವನು, ನನಗೆ ಮೋಕ್ಷ ನೀಡುವವನು ಕಣೆ “ಎಂದು ಕಥೆ ಕಟ್ಟಿದಳು. “ನಾನು ಇಲ್ವಾ ಬಿಡು. ಗಂಡು ಹುಡುಗರೇನು ಸ್ವರ್ಗದಲ್ಲಿ ಒಪ್ಪಂದ ಮಾಡಿಕೊಂಡಿದ್ದಾರ?” ಅಂತ ಖಾರವಾಗಿ ಹೇಳಿದಕ್ಕೆ ಬಡಿಗೆಯಿಂದ ಸೇವೆ ಮಾಡಿದ್ದಳು. ಇದು ನನ್ನನ್ನು ಇನ್ನೂ ರೊಚ್ಚಿಗೆಬ್ಬಿಸ್ಸಿತ್ತು. ನಾನು ಅವನಿಗಿಂತ ಯಾವುದರಲ್ಲಿ ಕಮ್ಮಿ? ನನಗೇಕೆ ಆ ಅರ್ಹತೆ ಇಲ್ಲ ಅಂತ ಪ್ರಶ್ನೆ ಒಡ್ಡಿದ್ದೆ. ಅದಕ್ಕೆ ಅಮ್ಮ ನನ್ನನ್ನು ಬಿಗಿದು ಅಪ್ಪಿ ಕಣ್ಣೀರ ಕೋಡಿ ಹರಿಯ ಬಿಡುತ್ತ, “ ನೋಡೇ ಮಗು, ನನಗೆ ನೀವಿಬ್ಬರು ಎರಡು ಕಣ್ಣಿದ್ದ ಹಾಗೆ. ಅವನೇ ಯಾಕೆ ನನ್ನ ಮರಣಾನಂತರ ಕಾರ್ಯಗಳನ್ನು ಮಾಡಬೇಕೆಂದು ಗೊತ್ತಿಲ್ಲ. ನಮ್ಮಮ್ಮ ನನಗೆ ಹಾಗೆ ಹೇಳಿ ಕೊಟ್ಟಿದ್ದಳು. ಸಮಾಜ ಕೂಡ ಅದನ್ನೇ ಹೇಳಿದ್ದು.” ಅಂತ ಸಮಜಾಯಿಷಿ ನೀಡಿದ್ದಳು. ಇದು  ಅವನೆಡೆ ತಿರಸ್ಕಾರದ ಭಾವನೆಗಳ ಸಾಗರವನ್ನೇ ಸೃಷ್ಟಿ ಮಾಡಿತ್ತು. ಆದ್ರೆ ಇಂದು ಅವನು ಅಮ್ಮ ಜೀವಂತ ಇರುವಾಗಲೇ ನಮ್ಮನ್ನೆಲ್ಲ ಬಿಟ್ಟು ಹೋಗಿ ಬಿಟ್ಟಿದ್ದ. ವಿಧಿ ನನಗೆ ಸಮಾಜದ ನೀತಿ ಅನ್ನು ಮುರಿಯುವ ಉತ್ತಮ ಅವಕಾಶ ನೀಡಿತ್ತು. ನನಗೆ ನನ್ನ ಪ್ರತಿಸ್ಪರ್ಧಿಯ ವಿರುದ್ದ ಜಯಿಸುವ ಅವಕಾಶ ನೀಡಿತ್ತು. ಆದರೆ ನನಗೆ ಆ ಕೆಲಸ ಸಾಧ್ಯವೇ ಇಲ್ಲ. ನಾನು ತಂದೆ ತಾಯಿಗೆ ಕೊಳ್ಳಿ ಇಡಲಾರೆ ಎಂದು ಇಂದು ಅನಿಸುತ್ತಿದೆ.
 
ಎಲ್ಲರ ದ್ವಂದ್ವ ನೀತಿಗಳು ನನ್ನಲ್ಲಿ ಅಸಮಾಧಾನದ ಗೋಪುರವನ್ನೇ ಕಟ್ಟಿತ್ತು . ಎಲ್ಲದರಲ್ಲೂ ಅವನು ಜಯ ಕಂಡಂತೆ ಭಾಸವಾಗುತಿತ್ತು. ಅವನು ನನ್ನ ಪ್ರತಿಸ್ಪರ್ಧಿ ಮಾತ್ರ, ಬೇರೆ ಯಾವುದೇ ಸಂಬಂಧಗಳು ನಮ್ಮಲ್ಲಿಲ್ಲ ಎಂದು ಧೈರ್ಯದಿಂದ ಪರಿಸ್ಥಿತಿಗಳನ್ನು ಇವತ್ತಿನ ತನಕ ನಿಭಾಯಿಸುತ್ತಾ ಬಂದಿದ್ದೆನು. ಒಂದು ರೀತಿ ನೋಡಿದರೆ ನನ್ನ ಬದುಕಿಗೆ ನನಗರಿಯದೆ ಅವನೇ ಸ್ಫೂರ್ತಿಯಾಗಿದ್ದನು.
 ನಾನು ನನ್ನ ಡಿಗ್ರಿ ಮುಗಿದ ಮೇಲೆ ಮನೆಯಲ್ಲಿ ಬಂಡಾಯ ಸಾರಿದ್ದೆ. ಕೆಲಸಕ್ಕೆ ದೂರದ ಬೆಂಗಳೂರಿಗೆ ಬಂದು ಸ್ವಾತಂತ್ರ್ಯ ಘೋಷಣೆ ಮಾಡಿ ಬಿಟ್ಟಿದ್ದೆ. ಕೈ ತುಂಬಾ ಸಂಬಳ ಬರುತಿತ್ತು, ಯಾರಿಗೂ ಬಗ್ಗದೆ ಹೊಸ ಜೀವನ ಆರಂಭಿಸಿದೆ. ಅದರೂ ಅವನು ಊರು ಬಿಟ್ಟು ಬೆಂಗಳೂರಿಗೆ ನನ್ನನ್ನು ಹಿಂಬಾಲಿಸಿ ಕೆಲಸ ಹುಡುಕುವ ನೆಪ ಹಿಡಿದು ಬಂದಿದ್ದ. ನಾನು ಅವನಿಗೆ ಕವಡೆ ಕಾಸಿನ ಕಿಮ್ಮತನ್ನು ನೀಡದೆ ಐಶರಾಮಿ ಬದುಕನ್ನು ಬದುಕುತಿದ್ದೆ. ನನಗೆ ನಗರದ ಜೀವನ ಶೈಲಿ ತುಂಬಾನೇ ಇಷ್ಟವಾಗಿತ್ತು.
ಅವನು ನನಗಿಂತ ಹೆಚ್ಚೇ ಕಲಿತಿದ್ದ . ಆದರೆ ಅವನಿಗೆ ಸಿಕ್ಕ ಕೆಲಸಕ್ಕೆ ಅವನ ಸಂಬಳ ತುಂಬಾನೇ ಕಡಿಮೆ ಇತ್ತು. ಅವನು ನನಗಿಂತ ಕಮ್ಮಿ ಸಂಬಳದಲ್ಲಿ ಬದುಕುತ್ತಾ ಜೀವನ ಸಾಗಿಸುತ್ತಿದ್ದ ಎಂಬ ವಿಷಯವೇ ನನಗೆ ನಿಶೆಯೆರಿಸುತಿತ್ತು. ಅವನು ನನ್ನ ಮೇಲೆ ಕಣ್ಣಿಡಲಿಕ್ಕೆ ಹಳ್ಳಿ ಬಿಟ್ಟು ಬಂದಿದ್ದು ಎಂದು ಅರಿವಿತ್ತು. ಕೇಳಿದರೆ ನಿನ್ನನ್ನು ಅಗಲಿ ಇರಲಾರೆ. ನಿನ್ನ ಚೆನ್ನಾಗಿ ನೋಡಿಕೊಳ್ಳಬೇಕೆಂದು ಅಮ್ಮ ಹೇಳಿ ಕಳುಹಿಸಿದ್ದಾರೆ ಎಂದು ಬುರುಡೆ ಬಿಟ್ಟಿದ್ದ.
ನನಗೆ ಈ ನಗರಿಯು ಸ್ವಾತಂತ್ರ್ಯವನ್ನು ನೀಡಿತ್ತು. ನನ್ನ ಆತ್ಮ ಸಮ್ಮಾನ ಮರಳಿ ದೊರಕಿತ್ತು. ರಜೆಯಲ್ಲಿ ಮನೆಗೆ ಹೋದಾಗ , ಮದುವೆವೆ ವಿಚಾರ ಬಂದಾಗ,  ನಾನು ಸಾಂಪ್ರದಾಯಿಕ ಮದುವೆಗೇ ಒಲ್ಲೆ ಎಂದು ಪ್ರತಿಜ್ಞೆ ಮಾಡಿ ಮರಳಿ ಬಂದಿದ್ದೆ . ಸ್ವಲ್ಪ ದಿನದಲ್ಲಿ ನಮ್ಮವರ ಭೇಟಿ ಆಯಿತು. ಅವರು ಅಧುನಿಕ ದೃಷ್ಟಿಕೋನ ಹೊಂದಿದವರು. ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ತುಂಬಾನೇ ಒಲವು ಹೊಂದಿದವರು. ಉತ್ತಮ ಗೆಳಯರಾಗಿದ್ದ ನಾವು ಪ್ರೇಮಿಗಳಾದದ್ದೇ ತಿಳಿಯಲಿಲ್ಲ. ನನ್ನ ಒಳಗೆ ತುಂಬಿದ ನೋವನ್ನು ಕೇಳುವ ಒಂದು ಜೀವ ಬೇಕಿತ್ತು. ಅವರು ಕಿವಿ ಮಾತ್ರವಲ್ಲದೆ ನನ್ನ ಜೀವಾಳವಾದರು. ಇಬ್ಬರಿಗೂ ಮದುವೆ ಎಂಬ ಕಟ್ಟಳೆಯಲ್ಲಿ ಬಂಧಿಯಾಗುವ ಗಡಿಬಿಡಿ ಇರಲಿಲ್ಲ. ನಾವಿಬ್ಬರೂ ನಮ್ಮ ಪ್ರೀತಿಯನ್ನು ಮದುವೆ ಎಂಬ ಕಟ್ಟಳೆಯಲ್ಲಿ ಬಂಧಿಸದೆ ಒಂದೇ ಫ್ಲಾಟ್ನಲ್ಲಿ ಲಿವ್ ಇನ್ ರಿಲೇಶನ್ಶಿಪ್ನಲ್ಲಿ  ಬದಕುತಿದ್ದೆವು. ಅವರಲ್ಲಿ ನನ್ನ ಪ್ರತಿಸ್ಪರ್ಧಿಯ ವಿರುದ್ಧ ವಿಷವನ್ನು ತುಂಬಲು ಸಶಕ್ತಳಾದೆ.
 
ಅವನು ಹೆತ್ತೆವರೊಡಗೂಡಿ ನನ್ನ ಪ್ರೀತಿಯ ಕತ್ತು ಹಿಸುಕುವ ಪ್ರಯತ್ನ ಮಾಡಿದ್ದ. ನಾನು ನನ್ನ ಭಾವೀ ಗಂಡನನ್ನು ಪ್ರೀತಿಸುತಿದ್ದೇನೆಂದು ಅರಿತ ಕೂಡಲೇ, ಮನೆಯಲ್ಲಿ ರಂಪವನ್ನೆಬಿಸಿದ್ದ . ನನ್ನ ಗಂಡನ ಬಗ್ಗೆ ಇಲ್ಲ ಸಲ್ಲದ ದೂರನ್ನು ನೀಡಿ ಮನೆಯನ್ನು ರಣರಂಗವನ್ನಾಗಿಸಿದ್ದ . ಅವರಲ್ಲಿ ನನ್ನ ಜೀವನ ಶೈಲಿಯ ಬಗ್ಗೆ ಎಲ್ಲವನ್ನು ಸಾರಿ, ನಾನು ಅಪರಾಧ ಮಾಡಿದ್ದೇನೆಂದು, ನನ್ನನ್ನು ಅಪರಾಧಿ ಸ್ಥಾನಕ್ಕೇರಿಸಿದ್ದ . ನನ್ನ ಕಣ್ಣೀರು ಅವನ ಎಲ್ಲ ಪ್ರಯತ್ನಕ್ಕೂ ಮಣ್ಣೆರಚಿತ್ತು. ಹೆತ್ತವರು ನನ್ನ ಕಣ್ಣೀರ ಕಂಡು ಮಮ್ಮಲ ಮರುಗಿ ಬಿಗಿದಪ್ಪಿ ಸಮಾಧಾನ ಪಡಿಸಿದ್ದರು. ಈಗ ನಾನೇ ಅವರಿಗೆ ಬದುಕಲು ಹೆಚ್ಚಿನ ಹಣವನ್ನು ನೀಡುತ್ತಿದ್ದೆ. ಅದು ಒಂದು ಕಾರಣವೇನೋ? ಅಂತು ಇಂತೂ ನಾನೇ ಗೆದಿದ್ದೆ, ಆದ್ರೆ ಅಪ್ಪ ಸೋತುಬಿಟ್ಟರು. ನನ್ನ ಚಿಂತೆ ಅನಾರೋಗ್ಯದೆಡೆಗೆ ಅವರನ್ನು ತಳ್ಳಿ ಬಿಟ್ಟಿತು.
 ಅವನು ಸಮಯ ಸಾಧಿಸಿ ಅಪ್ಪನ ಗದ್ದುಗೆ ಏರಲು ಭರ್ಜರಿ ತಯಾರಿ ನಡೆಸಿದ್ದ. ಅದಕ್ಕಾಗಿ ನನ್ನಮದುವೆ  ಮಾಡಲು ಮುಂದಾದ. ನಾನು ಪ್ರತಿತಂತ್ರ ಹೆಣೆದೆ.  ಅತ್ತು ಗೊಗೆರೆದು ಅಪ್ಪನ ಮನಸನ್ನು ಗೆದ್ದೆ. ಅಪ್ಪ ಕೆಲಸದಿಂದ ನಿವೃತ್ತಿ ತೆಗೊಂಡು ಬಿಟ್ಟರು. ಅಪ್ಪನಿಗೆ ನಿವೃತ್ತಿಯಾದಾಗ ಬಂದ ಹಣದ ಅರ್ಧದಷ್ಟು ಭಾಗವನ್ನು ಜಾಣತನದಿಂದ ಚಿನ್ನವನ್ನಾಗಿ ಪರಿವರ್ತಿಸಿ ಬಿಟ್ಟೆ. ಅಮ್ಮನಿಗೂ ವಿಷಯ ಗೊತ್ತಾಗಲಿಲ್ಲ . ಇದರ ಸುಳಿವು ಕೂಡ ಅವನಿಗೆ ತಲುಪಲಿಲ್ಲ. ಅರಿತ ಕೂಡಲೇ ಪೇಚಾಡತೊಡಗಿದ, ಅಪ್ಪನ ಮೇಲೆ ರೇಗಾಡಿದ. ಅವನ ಪೇಚಾಟ ನನಗೆ ವಿಕೃತ ಆನಂದವನ್ನು ನೀಡಿತ್ತು . ನನ್ನವರು ಗಟ್ಟಿಯಾಗಿ ನನ್ನ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ್ದರು.ಸ್ವಲ್ಪ ದಿನದ ನಂತರ ತಣ್ಣಗಾಗಿದ್ದ.
 
            ಅವನು ನಮ್ಮಿಬ್ಬರ ಮಾಡುವೆ ಮಾಡಿಸಲು ಮುಂದಾಗಿ ಹೊಸ ವರಸೆಯನ್ನು ಆರಂಭಿಸಿದ. ನಮಗೆ ಮದುವೆ ಬೇಡವಾಗಿತ್ತು. ಆದರೆ ಅವನು ಒತ್ತಾಯ ಮಾಡುತ್ತಿದ್ದರಿಂದ,  ನಾನು ಮದುವೆ ಆಗಲು ನನ್ನ ಪ್ರಿಯಕರನೊಂದಿಗೆ ಸಮಾಲೋಚಿಸಿ ಅಸಾಧ್ಯವಾದ ಅನೇಕ ಷರತ್ತುಗಳನ್ನು ವಿಧಿಸಿದೆ. ನನಗೆ ಇಂಥಹುದೇ ಮದುವೆ ಹಾಲ್ ಬೇಕು, ಇಷ್ಟು ಚಿನ್ನ ಬೇಕು, ಇಷ್ಟು ಸಾವಿರ ಜನರಿಗೆ ಕರೆಯಬೇಕು, ನನ್ನವರಿಗೊಂದು ಕಾರು ಕೊಡಿಸಬೇಕು ಎಂದು ಅಪ್ಪನಲ್ಲಿ ವಾದ ಮಂಡಿಸಿದೆ. ಅದು ಅಪ್ಪನಿಂದ ಮಾತ್ರ ಸಾಧ್ಯವಾಗುವ ಕೆಲಸ. ಇನ್ನು ಅವನಿಗೆ ಅಪ್ಪನ ಸ್ಥಾನಕ್ಕೇರಲು ಅಸಾಧ್ಯವೆಂದು ಭಾವಿಸಿ ಗೆಲುವಿನ ನಗೆ ಬೀರಿದ್ದೆ.
 
ಆದ್ರೆ ನನ್ನ ಜೀವನದ ಮೌಲ್ಯಗಳ ಮೇಲೆ ನನಗೆ ಪ್ರಥಮ ಬಾರಿಗೆ ಸಂಶಯ ಮೂಡಿಸಿದ್ದು ಅವನ ಮುಂದಿನ ನಡೆ. ಯಾವುದೇ ಮುಂದಾಲೋಚನೆ ಇಲ್ಲದೆ ಬ್ಯಾಂಕ್ನಿಂದ ಲಕ್ಷ ಗಟ್ಟಲೆ ಸಾಲ ತೆಗೆದ. ನಾನು ಇದರಲ್ಲಿ ಏನೋ ಷಡ್ಯಂತ್ರ ಇರಬೇಕೆಂದು, ನನ್ನ ಬೇಕುಗಳ ಪಟ್ಟಿಯನ್ನು ಇನ್ನೂ ಹೆಚ್ಚಿಸಿ ಅಪ್ಪನೆದುರು ಊದಿದೆ. ಆದ್ರೆ ಅವನು ಅಪ್ಪ ಕೇಳಿದ ಯಾವ ವಿಷಯಕ್ಕೂ ಇಲ್ಲ ಎನ್ನಲಿಲ್ಲ. ಇದು ಉಳಿದಿರುವ ಅಪ್ಪನ ಅಸ್ಥಿ ಹೊಡೆಯಲು ಸಂಚಿರಬೇಕೆಂದು ನನ್ನವರು ಅಭಿಪ್ರಾಯ ಪಟ್ಟರು. ಒಂದು ಕ್ಷಣ ಹೌದು ಎನಿಸಿತ್ತು. ನನಗೆ ನನ್ನ ಮದುವೆ ಅದ್ದೂರಿಯಾಗಿ ನಡೆದರೆ ಸಾಕೆಂದಿತ್ತು. ಆಮೇಲೆ ನೋಡಿಕೊಂಡರಾಯಿತು ಎಂದು ಭಾವಿಸಿದೆ, ಅವನ ಮೂರ್ಖತನಕ್ಕೆ ಒಳಗೊಳಗೇ ನಕ್ಕಿದಂತೂ ನಿಜ. ಅವನು  ಸಾಲದ ಸಾಗರದಲ್ಲಿ ಮುಳುಗತಿದ್ದಾನೆ. ಅವನ್ನನ್ನು  ಮೇಲೇಳು ಬಿಡಬಾರದು ಎಂದು ನಾವು ನಮ್ಮ ಮುಂದಿನ ನಡೆಯನ್ನು ಆಲೋಚಿಸಿದೆವು. ನನ್ನವರು ಸ್ವಲ್ಪ ದಿನದಲ್ಲೇ ಅಪ್ಪನ ಮನಗೆದ್ದು ಬಿಟ್ಟರು. ಅಪ್ಪನಿಗೆ ಅಳಿಯನೆಂದರೆದರೆ ಪಂಚ ಪ್ರಾಣ, ಅವರ ವಾಕ್ಯಗಳೇ ವೇದವಾಕ್ಯವಾಗಿ ಹೋಯಿತು. ನಿಧಾನವಾಗಿ ಅಪ್ಪನಿಗೆ ಮಗನ ಮೇಲೆ ಅಸಮಧಾನ ಮೂಡಿಸುವಲ್ಲಿ ಯಶಸ್ವಿ ಆದೆವು.
ನೊಂದ ಅವನು ಎಲ್ಲರಿಂದ ದೂರವಾಗಿ ತೆರೆ ಮರೆಗೆ ಸರಿಯಲು ಆರಂಭಿಸಿದ್ದ. ನಾನು ಇದನ್ನು ನೋಡಿ ಗೆಲುವಿನ ವ್ಯಂಗ್ಯ ಮಿಶ್ರಿತ ನಗು ಬೀರಿದ್ದೆ. ಆದ್ರೆ ಅವನೊಂದು ಅರ್ಥಗರ್ಭಿತ ಬೀರಿದ ನಗು ಬೀರಿದ್ದ . ಅದ್ರಲ್ಲಿ ವಿಷಾದವೇನೋ ಇತ್ತು, ಆದ್ರೆ ಧ್ವೇಷ ಇರಲಿಲ್ಲ. ಅವನ ನಡುವಳಿಕೆ ಒಂದು ಒಗಟಾಗಿ ಬಿಟ್ಟಿತ್ತು. ಅಳಿಯ ಹೊಸ ಉದ್ಯೋಗ ಪ್ರಾರಂಭಿಸ ಬೇಕೆಂದು, ಅದಕ್ಕಾಗಿ ಬ್ಯಾಂಕಿನಿಂದ ಸಾಲ ಪಡೆಯಬೇಕೆಂದು; ನಾಳೆ ಮಗಳು ಬಿಟ್ಟರೆ ಬೇರೆ ಯಾರು ನಿನ್ನನ್ನು ನೋಡಿಕೊಳ್ಳಲಾರರು ಎಂದು ಅಪ್ಪನಿಗೆ ಮನವರಿಕೆ ಮಾಡಿ, ಅಪ್ಪನ ಕಾಲಾನಂತರ ನಮಗೆ ಎಲ್ಲ ಆಸ್ತಿ ಬರಬೇಕೆಂದು ಅಪ್ಪನಲ್ಲಿ ಬೇಡಿಕೆ ಸಲ್ಲಿಸಿದೆವು. ಅಪ್ಪನಲ್ಲಿ ಅವನರಿಯದಂತೆ ವಿಲ್ ಬರೆಸಿದ್ದೂ ಆಯಿತು. ಅವನಿಗೆ ನಮ್ಮ ನಡೆಗಳ ಬಗ್ಗೆ ಪರೋಕ್ಷವಾಗಿ ಅರಿವಿದ್ದರೂ, ವಿಚಲಿತನಾಗದೆ ತನ್ನ ಕೆಲಸದಲ್ಲಿ ಮಗ್ನನಾಗಿ ಬಿಟ್ಟಿದ್ದ. ಅವನು ಹೆಚ್ಚಿನ ಸಮಯವನ್ನು  ದೇವರ ಭಜನೆಯಲ್ಲಿ ಕಾಲಕಳೆಯತೊಡಗಿದ. ಪುರಂದರ ದಾಸರ ಗೀತೆಗಳೆಂದರೆ ಅವನಿಗೆ ಪಂಚಪ್ರಾಣವಾಗಿತ್ತು. ಅವನೆಲ್ಲಿ ಜೀವನದಲ್ಲಿ ವ್ಯರಾಗ್ಯ ಮೂಡಿ ಭೈರಾಗಿ ಅಗುವನೋ ಎಂದು ಅಮ್ಮ ನೊಂದುಕೊಂಡರು. ಇವನು  ಭೈರಾಗಿಯಾದರೆ ಸಾಲವನ್ನು ತುಂಬಿಸುವವರು ಯಾರು? ಎಂಬ ಸಣ್ಣ ಆತಂಕ ಅಪ್ಪನಲ್ಲಿ ಮೂಡಿತು. ಸೋತವರು ದೇವರನ್ನು ಅಶ್ರಯಿಸತೋಡಗುತ್ತಾರೆಂದು ಅಂದುಕೊಂಡು ನಮ್ಮನ್ನೇ ನಾವು ಸಂತೈಸಿ ಕೊಂಡೆವು.  
ಅದೇ ಸಮಯಕ್ಕೆ ನಾನು ಗರ್ಭಿಣಿ ಆಗಿಬಿಟ್ಟೆ. ನನ್ನೊಳಗೆ ಬದಲಾವಣೆಗಳು ಪ್ರಾರಂಭವಾದವು. ಮಾತೃತ್ವ ನನ್ನನ್ನು ಆವರಿಸಿ ಬಿಟ್ಟಿತು. ಅದು ಒಂದು ಹೊಸ ದಿವ್ಯ ಅನುಭೂತಿ. ನನ್ನ ಸಂಸಾರ ಪೂರ್ಣತೆಯೆಡೆಗೆ ಸಾಗುತಿತ್ತು. ಹೆತ್ತವರು ಅವನಿಗೆ ಮದುವೆ ಮಾಡಲು ಸಿದ್ಧತೆ ಮಾಡ ತೊಡಗಿದರು..
 
ಆದರೆ ಈಗ ನನ್ನೊಳಗೆ ನನ್ನ ಬಗ್ಗೆಯೇ ಒಂದು ಸಂಶಯದ ಎಳೆ ಮನದ ಒಳಗೆ ಕೊರೆಯಲಾರಂಭಿಸಿತು. ಇವನು ಮಾಡುತ್ತಿರುವುದರ ಬಗ್ಗೆ ಇವನಿಗೆ ಅರಿವಿರುವಿದೆಯೇ ಎಂದು? ಅಣ್ಣ ಎಂಬ ಹಣೆಪಟ್ಟಿ ಹೊತ್ತರೆ ಸಾಲದು, ವಿವೇಕವಿರಬೇಕು. ನನ್ನ ಮಾತೃತ್ವ ನನ್ನಲ್ಲಿ ಪ್ರತಿಸ್ಪರ್ಧೆಯ ಭಾವನೆ ಕಡಿಮೆ ಮಾಡಿ ತಾಯಿಯ ಅಂತಃಕರಣವನ್ನು ಮೂಡಿಸಿತ್ತು. ಕುತೂಹಲ ಹಾಗು ನೋವನ್ನು ತಡೆಯಲಾರದೆ ಕೇಳಿಯೇ ಬಿಟ್ಟೆ.  ಅದಕ್ಕೆ ಅವನು ಕೊಟ್ಟ ಉತ್ತರ ನನ್ನನ್ನು ದಂಗು ಬಡಿಸಿತ್ತು. “ ನೀನು ನನ್ನ ತಂಗಿ ಕಣೆ, ನನ್ನ ಒಡ ಹುಟ್ಟಿದವಳು. ನೀನಗೊಸ್ಕರ ನನ್ನ ಪ್ರಾಣವನ್ನೇ ಅರ್ಪಿಸುತ್ತೇನೆ.” “ನಾನೇನು ಮುರ್ಖಳೆ? ನಿಜವಾದ ಕಾರಣವನ್ನು ಬೊಗಳು.” ಎಂದು ಖಡಕ್ಕಾಗಿ ಕೇಳಿದೆನು.
“ನಾನು ಕರ್ಮ ಯೋಗಿ, ಕರ್ಮ ಮಾಡುವುದಷ್ಟೇ ನನಗೆ ಗೊತ್ತು. ಫಲದಮೇಲೆ ನನಗೆ ಅಧಿಕಾರವಿಲ್ಲ .” ಎಂದು ಉತ್ತರ ನೀಡಿದನು. ನನಗೆ ನಗು ತಡೆಯಲಾಗಲಿಲ್ಲ, “ ನೀನಾವ ಕಲಿಯುಗದ ಕರ್ಣ?” ಎಂದು ಬಿದ್ದು ಬಿದ್ದು ನಗತೊಡಗಿದೆನು. ನನ್ನ ಪ್ರತಿಸ್ಪರ್ದಿ ಇಷ್ಟೊಂದು ವಿವೇಕಶೂನ್ಯನೆಂಬ ಅರಿವು ಪ್ರಥಮ ಭಾರಿಗೆ ಆಯಿತು. ನಾಳೆ ಹೆಂಡತಿ ಮಕ್ಕಳಿಗೆ ಏನು ಉತ್ತರ ಕೊಡುತ್ತೀಯ ಎಂದು ಕೇಳಿದರೆ - ಆ ದೈವೇಚ್ಛೆ ಎಂದು ಹೊರಟು ಹೋದನು. ನನಗೇಕೋ ನಿಂತಲ್ಲೇ ಶಿಲೆಯಾದಂತೆ ಭಾಸವಾಯಿತು. ಒಂದೇ ಒಡಲನ್ನು ಹಂಚಿಕೊಂಡು ಹುಟ್ಟಿದರೂ ನಮ್ಮ ನಡವಳಿಕೆಯಲ್ಲಿ   ಬದುಕಿನ ಅಚಾರ ವಿಚಾರದಲ್ಲಿ ಎಷ್ಟು ದೊಡ್ಡ ಕಂದಕವಿದೆ ಎಂದು ನನಗಾಗ ಅರಿವಾಗಿ, ನನ್ನ  ಮೈಯೆಲ್ಲಾ ಬೆವೆತು ಚಂಡಿಯಾಗಿ ಹೋದೆನು. ಇವನ ತಲೆಯಲ್ಲಿ ನಾನು ಸ್ವಲ್ಪವಾದರೂ ಲೋಕ ಜ್ಞಾನವನ್ನು ತುಂಬ ಬೇಕಾಗಿತ್ತು, ಶತ ಮೂರ್ಖ ಎಂದು ಕೈ ಕೈ ಹಿಸುಕಿ ಕೊಂಡೆನು. ಒಳಗಿಂದ ಎಲ್ಲವನ್ನು ಕೇಳಿಸಿಕೊಂಡು ಮುಸು ಮುಸು ಎಂದು ಅಮ್ಮನ ಅಳುವಿನ ಧ್ವನಿ ನನ್ನೊಳಗೆ ಪ್ರತಿಧ್ವನಿಸ ತೊಡಗಿತು.
ನನ್ನ ಹೆರಿಗೆ ಆಯಿತು . ನನ್ನ ಮುದ್ದು ಮಗಳು, ನನ್ನ ಜೀವಾಳ, ಜನಿಸಿದಳು. ನನ್ನ ಶ್ರೀಮಂತ ಹಾಗೂ ಹೆರಿಗೆಯ ಖರ್ಚು ನೀವೇ ನೋಡಿಕೊಳ್ಳಬೇಕೆಂದು ನನ್ನವರು ಖಾಡಾಖಂಡಿತವಾಗಿ ಅಪ್ಪನಲ್ಲಿ ಷರತ್ತು ವಿಧಿಸಿದರು. ತಂದೆಯವರ ಸೂಚನೆಗೆ ಅವನು ಗೋಣು ಆಡಿಸಿ ಮತ್ತೆ ಸಾಲ ಮಾಡಿ ಎಲ್ಲವನ್ನು ಸುಸೂತ್ರವಾಗಿ ಮುಗಿಸಿದನು. ಇವನಿಗೆ ನಾನು ಪ್ರತಿಸ್ಪರ್ಧಿಯೇ? ಇವನಿಗೆ ಸ್ಪರ್ಧೆಯ ಯೋಗ್ಯತೆ ಇದೆಯೇ? ಛೆ! ಎಂದು ನನ್ನ ಆಲೋಚನಾ ವಿಧಾನದ ಮೇಲೆ ನನಗೆ ಹೇಸಿಗೆ ಮೂಡ ತೊಡಗಿತು.
 
ಅವನು ಸಾಲದ ಭಾರದಿಂದ ಕುಗ್ಗಲು ಪ್ರಾರಂಭಿಸಿದ. ಮದುವೆಗೆ ಸುತರಾಂ ಒಪ್ಪುತ್ತಿರಲಿಲ್ಲ. ಹರಸಾಹಸ ಪಟ್ಟು ಹೇಗೋ ಒಪ್ಪಿಸಿ ಅವನಿಗೆ ಮದುವೆ ಮಾಡಿಸಿದೆವು. ಆದರೆ ಅವನು ಮದುವೆ ಆಗುವಾಗ ಯಾವುದೇ ಷರತ್ತುಗಳನ್ನು ಒಡ್ಡಲಿಲ್ಲ. ಸಾಲದಿಂದ ಭಾದಿತನಾದರೂ ವರದಕ್ಷಿಣೆ ಬೇಡಿಕೆ ಇಡದೆ ಸರಳವಾಗಿ ಮದುವೆ ಅದನು. ಸಾಲ ತೀರಿಸಲಾದರೂ ಸ್ವಲ್ಪ ಹಣದ ಬೇಡಿಕೆ ಇಡು ಎಂದು ಎಷ್ಟೇ ವಿನಂತಿ ಮಾಡಿದರೂ ಅವನು ಸುತರಾಂ ಒಪ್ಪಲಿಲ್ಲ. ನನಗೆ ಬೇರೆ ದಾರಿ ತೋಚದೆ ಸುಮ್ಮನಾಗಿ ಬಿಟ್ಟೆ. ಆದರೆ ಬಂದವಳು ಸುಮ್ಮನಿರುತ್ತಾಳೆಯೇ? ಅವನ ಹೆಂಡತಿ ಕೆಲವೇ ದಿನಗಳಲ್ಲಿ ಸತ್ಯವನ್ನು ಅರಿತು, ಬೇರೆ ಮನೆ ಮಾಡುವಂತೆ ಹಠ ಹಿಡಿದಳು. ಇವನು ಅಪ್ಪ ಅಮ್ಮನ್ನನ್ನು ಬಿಟ್ಟು ಹೋಗಲು ಒಪ್ಪಲಿಲ್ಲ. ಅವನ ಗೃಹಸ್ಥ ಜೀವನವು ರಣರಂಗವಾಯಿತು. ನಮ್ಮವರು  ಅವನು ಮನೆಯಲ್ಲಿದ್ದರೆ ಅಪಾಯವೆಂದು  ಭಾವಿಸಿ, ಮನೆಯಲ್ಲಿ ಮಾತು ಕಥೆ ಆರಂಭಿಸಿ, ಅಪ್ಪ ಅಮ್ಮನನ್ನು ಒಪ್ಪಿಸಿ, ಅವನು ಬೇರೆ ಹೋಗಲು ಒಮ್ಮತ ಮೂಡಿಸಿದರು.
ಸಾಲದ ಭಾದೆ ತಡೆಯಲಾರದೆ  ಕೆಲವೇ ತಿಂಗಳಲ್ಲಿ ಅವನು ಸಂಸಾರ ಸಮೇತ ಬೇರೆ ಊರಿಗೆ ಗುಳೆ ಹೋದನು. ಅಪ್ಪ ಅಮ್ಮ ಊರಿನಲ್ಲೇ ಉಳಿದರು. ಅವನಿಗೆ ಒಂದು ಗಂಡು ಮಗು ಆಯಿತಂತೆ. ಅವನ ಕ್ಷೇಮ ಸಮಾಚಾರ ಕೇವಲ ಅಮ್ಮನಿಗೆ ಮಾತ್ರ ತಿಳಿದಿತ್ತು. ಅವನ ಹೆಂಡತಿಗೂ ನಮಗೂ ಅಷ್ಟಕ್ಕೆಷ್ಟೇ . ಅವಳಿಗೆ ನಮ್ಮ ಮೇಲಿನ ಕೋಪ ಸಹಜವೇ ಆಗಿತ್ತು. ಅವಳ ಗಂಡನ ಮೂರ್ಖತನದ ನಿರ್ಧಾರಕ್ಕೆ ಅವಳ ಸಂಸಾರ ಬೆಲೆ ತೆರ ಬೇಕಾಗಿ ಬಂತು. ಯಾವುದೇ ಹೆಣ್ಣುಮಗಳು ಇಂಥ ಮೂರ್ಖತನದ ನಿರ್ಧಾರಗಳನ್ನು ಸಹಿಸಲು ಸಾಧ್ಯವಿರಲಿಲ್ಲ. ನಾನು ನನ್ನ ಸಂಸಾರಕ್ಕೆ ಏನು ಬೇಕಿತ್ತೋ ಅದನ್ನೇ ಮಾಡಿದೆ. ಇವನು ಆದರ್ಶಗಳ ಮೊರೆ ಹೋಗಿ ನನ್ನೊಂದಿಗಿನ ಸ್ಪರ್ಧೆಯಲ್ಲಿ ಸೋತು ಸುಣ್ಣವಾಗಿದ್ದ. ಅವನ ಸಾಲಕ್ಕೆ ಅವನೇ ಹೊಣೆಗಾರನಾಗಿದ್ದ. ಅವನು ಈ ಸಾಲದ ಸುಳಿಯಲ್ಲಿ ಸಿಲುಕದಿರಲು ಎಲ್ಲಾ ಅವಕಾಶ ಇತ್ತು. ಆದರೆ ಅವನು ಹಾಗೆ ಮಾಡಲಿಲ್ಲ.
 
 ಅವನ ಮಗುವನ್ನು ಒಮ್ಮೆ ನೋಡ ಬೇಕೆಂಬ ಬಯಕೆ ನಮ್ಮೆಲ್ಲರಲ್ಲಿ ಇತ್ತು. ಆದರೆ ಅವನ ಹೆಂಡತಿಯನ್ನು ಎದಿರಿಸುವ ಧೈರ್ಯ ಯಾರಿಗೂ ಇರಲಿಲ್ಲ. ಹಾಗಾಗಿ ನಾವು ಯಾರು ಸಂಪರ್ಕಿಸಲು ಪ್ರಯತ್ನಿಸಲಿಲ್ಲ. ನಾನು, ನನ್ನ ಮಗುವಿನ ಪ್ರಪಂಚದಲ್ಲಿ ಮುಳುಗಿ ಹೋದೆ. ಯಾವುದರ ಪರಿವೆಯೂ ನನಗಿರಲಿಲ್ಲ. ಹೇಗೂ ನನ್ನ ಮಗುವಿಗೆ ಚಿರಾಸ್ಥಿ ಸಿದ್ಧ ಮಾಡಿದ್ದೆ. ನಾನು ನನ್ನ ಕರ್ತವ್ಯವನ್ನು ಜಾಣತನದಿಂದ ಪೂರೈಸಿದ್ದೆ. ಆದರೆ ನಿಜವಾಗಿಯೂ ನಾನು ಕರ್ತವ್ಯಕ್ಕೆ ಭಾಧ್ಯಳಾಗಿದ್ದೇನೇಯೇ? ಎಂಬ ಸವಾಲು ಮಾತ್ರ  ನನ್ನ ಅಂತರಾತ್ಮವನ್ನು ಚುಚ್ಚುತಿತ್ತು. ನಾನು ಸರಿಯಾದ ದಾರಿಯಲ್ಲಿ ಸಾಗುತಿರುವೆನೆಂದು ಆತ್ಮ ವಿಶ್ವಾಸ ಇದ್ದರೂ ಮನದ ಮೂಲೆಯಲ್ಲಿ ಎಲ್ಲೊ ನನ್ನ ಬಗ್ಗೆಯೇ ನನಗೆ ಬೇಸರ ಮೂಡುತ್ತಿತ್ತು. ಅವನೆದುರು, ಅವನ ನಿಷ್ಕಲ್ಮಶ ಮನಸ್ಸಿನೆದುರು, ತ್ಯಾಗದೆದುರು ನಾನು ಕುಬ್ಜಳಾದಂತೆ ಭಾಸವಾಗುತ್ತಿತ್ತು. ನಾನು ಅವನು ಸಾಗಿ ಹೋದ ಹಾದಿಯಲ್ಲಿ ಈಗ ಸ್ವತಃ ತಾಯಿ ಆದ ಮೇಲೆ  ಅಂಬೆಗಾಲಿಕ್ಕುತ್ತಿರುವೆನೇ? ಎಂದು ಕಿರು ಸಂಶಯ ಮೂಡಿದ್ದು ಸುಳ್ಳಲ್ಲ. ಆದರೆ ಸೋಲು ನನಗೆ ವರ್ಜ್ಯ.
 
ಒಂದು ದಿನ ಅಪ್ಪ ಫೋನ್ ಮಾಡಿ, ಬೇಗ ಬಾ. ನಿನ್ನ ಅಣ್ಣ ವಿದೇಶಕ್ಕೆ ಹೊರಟಿದ್ದಾನಂತೆ ಎಂದು ಹೇಳಿದಾಗ ಉಂಟಾದ ಇರಿಸು ಮುರಿಸು ಸ್ವಲ್ಪವೇನಲ್ಲ. ನನಗೊಬ್ಬಳಿಗೆ ಮಾತ್ರ  ಆ ಯಾತನೆ ಗೊತ್ತು. ನನ್ನವರು ಕೂಡ ಕಸಿವಿಸಿಗೊಂಡಿದ್ದರು. ಓಡಿ ಅಪ್ಪನ ಮನೆಗೆ ಸೇರಿದಾಗಲೇ ವಿಷಯ ಗೊತ್ತಾದದ್ದು. ಸೊಸೆ ಒಂದು ದಿನ ಕೂಡ ಅತ್ತೆ ಮನೆಯಲ್ಲಿ ಇರದಿದ್ದರೂ, ಇವನು ಮಾತ್ರ ಆಗಾಗ ಬಂದು ಯೋಗ ಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದನೆಂದು ತಿಳಿಯಿತು. ತಂದೆ ತಾಯಿಗೆ ನಿಯಮಿತವಾಗಿ ಹಣ ಕಳುಹಿಸುತಿದ್ದನೆಂದು ಅರಿವಾಯ್ತು. ನಾನು ನನ್ನ ಪ್ರಪಂಚದಲ್ಲಿ ಮುಳುಗಿ ನನ್ನ ತಂದೆ ತಾಯಿಯರ ಬಗ್ಗೆ ಮರೆತೇ ಹೋಗಿದ್ದೆ. ಆದರೆ ಅವನು ಎಲ್ಲವನ್ನೂ ಅರೆತರೂ ಕೂಡ ಅಪ್ಪ ಅಮ್ಮನ ಕೈ ಬಿಡಲಿಲ್ಲ.
 ನಮ್ಮ ಸಮಬಂಧ ಹಳಸಿದ್ದರೂ, ನಾವು ಹೋದಾಗ ನಮ್ಮನ್ನು ಅವಮಾನಿಸದೆ ಹೊರಗೆ ಹೊರಟು ಹೋದ. “ನನಗೆ ಸಾಲ ಹೆಚ್ಚಾಗಿದೆ, ವಿದೇಶಿ ಕಂಪನಿ ಒಂದರಲ್ಲಿ ನೌಕರಿ ಸಿಕ್ಕಿದೆ. ಹೊರಡುತ್ತಿದ್ದೇನೆ” ಎಂದು ಅಪ್ಪ ಅಮ್ಮನಿಗೆ ನಮಸ್ಕರಿಸಿ, ನನ್ನ ಮಗಳ ಕೈಯಲ್ಲಿ ಒಂದು ಮುದ್ದು ಗೊಂಬೆ ಇಟ್ಟು, ಪ್ರೀತಿಯಿಂದ ತಲೆ ನೇವರಿಸಿ, ಅವಳ ಕೆನ್ನೆಗೆ ಸಿಹಿ ಮುತ್ತಿಟ್ಟು ಹೊರಟು ಹೋದ, ಒಂಟಿಯಾಗಿ. ಅವನ ಹಿಂದೆ ನಮ್ಮ ಸುಖ ಶಾಂತಿಯೂ ಹೊರಟು ಹೋಯಿತು. ನನ್ನ ಮಗಳ ಮೇಲೆ ತೋರಿಸಿದ ಪ್ರೀತಿಯ ಕಾಲುವಾಸಿಯಾದರೂ ನನ್ನ ಮೇಲೆ ತೋರಿಸಿದ್ದರೆರೆ ಇಂದಿಗೆ ನಮ್ಮ ಸಂಭಂದದ ಮುಖವೇ ಬೇರೆ ಇರುತ್ತಿತ್ತು ಎಂದು ನನಗಾಗ ಅನಿಸಿತು. ಅವನ ಪ್ರೀತಿ ಇಂದು ಬೇಕೆನಿಸ ತೊಡಗಿತ್ತು.
 
            ಅವನ ಹೆಜ್ಜೆಯೊಂದಿಗೆ ಅಪ್ಪ-ಅಮ್ಮನ ಸೊಂಟವು ಕುಸಿದಂತೆ ಭಾಸವಾದದ್ದು ಸುಳ್ಳಲ್ಲ. ದಿನ ಸಾಗಿದಂತೆ ಮಗನ ನೆನಪಲ್ಲಿ ಅಪ್ಪ ಹಾಸಿಗೆ ಹಿಡಿದು ಬಿಟ್ಟರು. ನಾನು ಹೀಗಾಗಬಹುದೆಂದು ಕನಸು ಮನಸ್ಸಿನಲ್ಲಿ ಕೂಡ ಅಂದು ಕೊಂಡಿರಲಿಲ್ಲ. ಅಸಹಾಯಕತೆ ನನ್ನನ್ನ ಕಿತ್ತು ತಿನ್ನ ತೊಡಗಿತು. ಇದಕೆಲ್ಲ ಕಾರಣ ನಾನು ಎಂಬ ಅಪರಾಧಿ ಪ್ರಜ್ಞೆ ಒಂದೆಡೆಯಾದರೆ; ಅಯ್ಯೋ! ಇನ್ನು ಅವನ ಏಳಿಗೆಯನ್ನು ನೋಡಬೇಕಲ್ಲ? ಅವನು ಪ್ರತಿಸ್ಪರ್ಧೆಯಲ್ಲಿ ಮುಂದೆ ಸಾಗಿದನಲ್ಲ  ಎಂಬ ಯೋಚನೆ ಇನ್ನೊಂದೆಡೆ ಕಸಿವಿಸಿಗೊಳಿಸಿತ್ತು. ಅವನೊಂದಿಗೆ ಪೈಪೋಟಿಗೆ  ಬಿದ್ದು “ನಾನು ವಿದೇಶಕ್ಕೆ ಹೊರಡುವೆನೆಂದು” ನನ್ನವರು ಇರುವ ಉದ್ಯಮದ ಕಡೆಗೆ ಗಮನ ಬಿಟ್ಟು ವಿದೇಶಕ್ಕೆ ಹೊರಡುವ ಕಡೆಗೆ ಗಮನ ಹರಿಸತೊಡಗಿದರು. ಪರಿಣಾಮವಾಗಿ ನಷ್ಟ ಅನುಭವಿಸ ತೊಡಗಿದರು. ಜವಾಬ್ದಾರಿ ನನ್ನ ಮೇಲೆ ಬಿದ್ದು, ಇಂದು ಅನಿವಾರ್ಯವಾಗಿ ನಾನು ಅಪ್ಪನ ಸ್ಥಾನದಲ್ಲಿ ನಿಂತು ದುಡಿಯ ಬೇಕಾಗಿ ಬಂತು. ಆಗಲೇ ಅರಿವಾಗತೊಡಗಿದ್ದು ಅದರ ಜವಾಬ್ದಾರಿ ಎಷ್ಟು ಅಂತ, ಅವನು ನನ್ನಿಂದಾಗಿ ಅನುಭವಿಸಿರ ಬಹುದಾದ ನೋವು ಎಂತಹುದು ಎಂದು.
ನಾವು ಎಲ್ಲವನ್ನು ಕಳೆದು ಕೊಳ್ಳಲು ಆರಂಭಿಸಿದೆವು. ನಾನು  ಸ್ಥಿರಾಸ್ತಿ ಎಂದು ಅಂದು ಕೊಂಡಿದ್ದು ನನ್ನ ಕಣ್ಣು ಮುಂದೆಯೇ ಕರಗಿ ಹೋಯಿತು. ಅನಿವಾರ್ಯವಾಗಿ ಅಪ್ಪನ ಮನೆಯಲ್ಲಿ ಸಂಸಾರ ಸಮೇತ ಬೀಡು ಬಿಡ ಬೇಕಾಗಿ ಬಂತು. ಅವನು ನಿಜವಾಗಿಯೂ ಪ್ರತಿಸ್ಪರ್ಧೆಯಲ್ಲಿ ಮುಂದೆ ಸಾಗಿದ್ದ. ಅಚ್ಚು ಕಟ್ಟಾಗಿ ಅವನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ. ಅವನು ಅಪ್ಪ ಅಮ್ಮನ ಜೀವನ ನಿರ್ವಹಣೆಗೆಂದು ಕಳುಹಿಸಿದ ಹಣದಲ್ಲೇ ನಾವೆಲ್ಲ  ಬದುಕು ನಿರ್ವಹಿಸಬೇಕಾಗಿ ಬಂದದ್ದು ವಿಪರ್ಯಾಸವೇ ಸರಿ.
 
ಅವನ ಮರಣದ ವಿಚಾರ ಬರಸಿಡಿಲಿನಂತೆ ಬಂತು. ಅವನ ಹೆಣ ವಿದೇಶದಿಂದ ಬರಲು ತಿಂಗಳುಗಟ್ಟಲೆ ಹಿಡಿಯಿತು. ಕಾದು ಕಾದು ಎಲ್ಲರ ಕಣ್ಣಾಲಿಗಳು ಬತ್ತಿ ಹೋದವು. ಹಾಗೇ ಹಣವು ನೀರಿನಂತೆ ಖರ್ಚಾಗಿ ಹೋಯಿತು. ಅವನ ಹೆಂಡತಿ, ಮಗು ಅವನ ಹೆಣ ಬಾರದೆ ಬರಲೋಪಲ್ಲಿಲ್ಲ. ಅವನು ಬಲಿಯಾದ ಸುದ್ದಿ ಕೇಳಿದಾಗಿನಿಂದ ಅಮ್ಮನಿಗೆ ಮೈ ಮೇಲೆ ಪರಿವೇ ಇರಲಿಲ್ಲ. ಅಪ್ಪನ ಕಂಗಳಲ್ಲಿ ಕಣ್ಣೀರು  ಜಲಪಾತದಂತೆ ಉಕ್ಕುತಿತ್ತು . ನನಗೆ ಹೆತ್ತವರ ಗೋಳನ್ನು ಕಂಡು ಕರುಳು ಕಿತ್ತು ಬರುತ್ತಿತ್ತು. ಆ ಒಂದು ಕರಾಳವಾದ ದಿನ ಅವನ ಹೆಣವು ಒಂದು ಬಿಳಿ ಗೋಣಿಯ ತರಹದ ಬಟ್ಟೆಯಲ್ಲಿ ಕಗತ್ತಲಿನಲ್ಲಿ  ಬಂದಿಳಿಯಿತು. ಅದನ್ನು ನೋಡಿದಾಗಲೇ ಅವನ ಸಾವಿನ ಭೀಕರತೆಯ ಅರಿವಾಗಿದ್ದು. 
ಅರಿಯದ ದೇಶದಲ್ಲಿ ತಿಳಿಯದ ವಾಹನದ ಅಡಿಗೆ ಬಿದ್ದು ಅವನು ಛಿದ್ರ ಛಿದ್ರವಾಗಿಬಿಟ್ಟಿದ್ದನು. ಅವನ ರುಂಡವು ದೇಹದಿಂದ ಬೇರ್ಪಟ್ಟು ಗುರುತಿಸಲಾಗದಷ್ಟು  ಛಿದ್ರವಾಗಿ  ಮಾಂಸದ ಮುದ್ದೆಯಾಗಿತ್ತು. ಅಯ್ಯೋ ದೇವರೇ! ಇದೆಂಥಾ ದುರ್ಭಾಗ್ಯ? ನನ್ನ ಅಣ್ಣ ಇಂಥ ಸಾವಿಗೆ ಅರ್ಹನಲ್ಲ ಎಂದು ಮನಸು ಚೀರುತ್ತಾ ನನ್ನನ್ನು ಹಿಂಡಿ ಹಿಪ್ಪೆ ಮಾಡಿತ್ತು;. ಅವನ ಮುಖ ಕೂಡ ನೋಡುವ ಭಾಗ್ಯ ನಮಗ್ಯಾರಿಗೂ ಸಿಗಲಿಲ್ಲವಲ್ಲಾ? ಇದಕ್ಕೆಲ್ಲ ಕಾರಣ ನಾನೇ? ಎಂದು ಮನಸ್ಸಿಗೆ ಆಘಾತವಾಯಿತು.
ಎಲ್ಲೆಡೆ ಆಕ್ರಂದನ ಮುಗಿಲುಮುಟ್ಟಿತ್ತು. ಆದ್ರೆ ನನ್ನ ಕಣ್ಣಲ್ಲಿ ಒಂದು ಬಿಂದು ನೀರು ಹರಿಯದೆ ಶಿಲಾಬಾಲಿಕೆಯಂತೆ ನಿಂತು ಬಿಟ್ಟೆ. ಅವನ ಹೆಂಡತಿಯ ರೋದನ ನೋಡಲಾಗಲಿಲ್ಲ.ಮಗು ಎಲ್ಲೂ ಕಾಣಿಸಲಿಲ್ಲ. ಅವಳಿಗೆ ಒಂದೆರಡು ಸಾಂತ್ವನದ ಮಾತು ಆಡಲು ನನ್ನಲ್ಲಿ ಶಕ್ತಿ, ಧೈರ್ಯ ಎರಡೂ ಇರಲಿಲ್ಲ. ಆದರೆ ಇಂದು ಅವನು ನನ್ನಿಂದ ಬಹು ದೂರ ಹೊರಟು ಹೋಗಿಬಿಟ್ಟಿದ್ದನು.
”           “ಅಣ್ಣ ಬೇಡ ಕಣೋ, ಈ ನಿನ್ನ ತಂಗಿಯನ್ನು ತೊರೆದು ಹೋಗ ಬೇಡ ಕಣೋ. ನಿನಗೆ ಎಲ್ಲ ಹಕ್ಕುಗಳನ್ನು ಕೊಟ್ಟು ಬಿಡುವೆನೋ, ಒಮ್ಮೆ ನೀನು ನನ್ನನ್ನು ಬಾಯಿ ತುಂಬಾ ‘ತಂಗಿ’ ಅಂತ ಕೂಗೋ. ಒಂದೇ ಸಲ ಬಾರೋ,” ಎಂದು ಹೃದಯ ನೋವಿನಲ್ಲಿ ಚೀರಾಡಿತು.. ನನಗೆ ಜೀವನದಲ್ಲಿ ಸೋಲಿನ ಪರಿಚಯವೇ ಇರಲಿಲ್ಲ.  ಅವನ ಸಾವು ನನ್ನ ಸೋಲಿಗೆ ಮುನ್ನುಡಿ ಬರೆದಿತ್ತು. ನಿಂತ ನೆಲವೇ ಕುಸಿದಂತೆ ಭಾಸವಾಯಿತು. ಅವನ ಪ್ರೀತಿಗೆ ಸೋತು ಸುಣ್ಣವಾಗಿ ಹೋಗಿದ್ದೆ. ನನ್ನ ಸ್ಪರ್ಧೆಯಲ್ಲಿ ಒಬ್ಬಂಟಿಯಾಗಿಬಿಟ್ಟೆ.
ಅಲ್ಲಿ ರುಂಡ ವಿಲ್ಲದ ಹೆಣವನ್ನಿರಿಸಿದ್ದರು. ಆದ್ರೆ ಅದು ನನ್ನ ಅಣ್ಣನದಲ್ಲ. ಅದು ನನ್ನ ಪ್ರತಿಸ್ಪರ್ಧಿ ಎಂಬ ಭಾವದ ಹೆಣ,ನನ್ನ ವಿಚಾರಹೀನ ಬದುಕಿನ ಹೆಣ, ನನ್ನ ರಾಗ, ದ್ವೇಷ, ಮಾತ್ಸರ್ಯ, ಅಹಂಕಾರದ ಹೆಣ . ಅವನೇನೋ ಪ್ರತಿಸ್ಪರ್ಧೆಯಿಂದ ಬಹುದೂರ  ಸಾಗಿಬಿಟ್ಟಿದ್ದ. ಆದರೆ ನಾನು ಇನ್ನೂ ಎಷ್ಟು ಚಿಕ್ಕವಳೆಂಬ  ಅರಿವು ಸಾವಿನಲ್ಲೂ ಮೂಡಿಸಿಬಿಟ್ಟಿದ್ದ.
“ ಅಣ್ಣ! ನಾನು ನಿನ್ನ ತಂಗಿ. ನಿನ್ನನ್ನು ಅಣ್ಣನೆಂಬ ಪರಿಶುದ್ದ ಭಾವನೆಯಿಂದ ಪ್ರೀತಿಸಬೇಕು. ಮಗದೊಮ್ಮೆ ಈ ಬಾಳು ಬಾಳಬೇಕು. ನಾನು ನಿನ್ನ ಪ್ರೀತಿ ವಂಚಿತಳು, ಬಾಳಿನ ಅರ್ಥವನ್ನು ಅರ್ಥೈಸದೆ, ಸಂಬಂಧಗಳ ಮಾರಣ ಹೋಮ ಮಾಡಿದ ಪಾಪಿ ನಾನು. ನನಗೆ ಇನ್ನು ಬದುಕುವ ಹಕ್ಕಿಲ್ಲ. ನನನ್ನು ನಿನ್ನೆಡೆಗೆ ಕರೆದುಕೊಂಡು ಹೋಗು” ಎಂದು ಹೆಣಕ್ಕೆ ಕೈ ಮುಗಿದು, ಭಾರವಾದ ಹೆಜ್ಜೆಯನ್ನು ನಮ್ಮ ಹಿತ್ತಿಲಿನ ಬಾವಿಯೆಡೆಗೆ ಹಾಕಿದೆ. ಯಾರೂ ನನ್ನನ್ನು ಗಮನಿಸಲಿಲ್ಲ. ಅವರಿಗೂ ನನ್ನ ಮೇಲೆ ಅಸಹ್ಯ ಮೂಡಿತ್ತೋ ಏನೋ .
ಒಮ್ಮೆ ಬಗ್ಗಿ ನೋಡಿದೆ. ಹುಣ್ಣಿಮೆಯ ಬಟ್ಟಲಿನ ಮೊಗದಂಥ ಚಂದ್ರನ ಪ್ರತಿಬಿಂಬ ಶುಭ್ರ ಬಾವಿ ನೀರಿನಲ್ಲಿ ತೋರುತಿತ್ತು. ಎಲ್ಲವೂ ನಿಶಬ್ಧವಾಗಿತ್ತು. ಇಂದು ಇಡೀ ಪ್ರಕೃತಿಯೇ ರೋಧಿಸುವಂತೆ ಭಾಸವಾಗುತಿತ್ತು. ನಾನು ಭಾವಿಯ ಕಟ್ಟೆಯ ಮೇಲೆ ಒಂದು ಕಾಲನ್ನು ಇಟ್ಟು, ನನ್ನ ದುಗುಡ ತುಂಬಿದ ಬದುಕಿಗೆ ಅಂತ್ಯ ಹಾಡಲು ಸಜ್ಜಾಗಿ ನಿಂತ್ತಿದ್ದೆ. ನನಗೆ ಆ ಚಂದ್ರನ ಪ್ರತಿಬಿಂಬದಲ್ಲಿ ಅಣ್ಣನ ಮುಖ ಮಾತ್ರ ಕಾಣಿಸುತ್ತಿತ್ತು. ಬೇರೆ ಎಲ್ಲವೂ ಗೌಣವಾಗಿತ್ತು. ಮುಗುಳ್ನಗುವೊಂದು ತುಟಿಗಳಲ್ಲಿ ಮೂಡಿತು, ಅವನೊಂದಿಗೆ ಲೀನವಾಗಿ ಹೋಗಲು ಸರಿಯಾದ ಸಮಯವೆಂದು ಧುಮುಕಲು ಅಣಿಯಾದೆ.
 
ಆದರೆ ಆ ಕ್ಷಣದಲ್ಲಿ ಯಾರೋ ನನ್ನ ಸೆರಗನ್ನು ಮೆಲ್ಲನೆ ಜಗ್ಗಿದಂತಾಯಿತು. ತಿರುಗಿ ನೋಡಿ ಗರ ಬಡಿದವಳಂತೆ ನಿಂತು ಬಿಟ್ಟೆ. ಅದೇ ಎಳೆಯ ಮೊಗ, ಅದೇ ನಗು, ಅದೇ ಕಣ್ಣು; ಅದೇ ಹಾವಭಾವ. ಹೌದು! ಅವನೇ ನನ್ನ ಮುಂದಿದ್ದಾನೆ...ಸುಮಾರು ವಯಸ್ಸು ನಾಲ್ಕೈದು ಇರಬಹುದು, ಬಾಲ್ಯ ಮತ್ತೆ ಮರುಳಿತ್ತು. ಯಾವುದು ನಿಜ ಯಾವುದು ಸುಳ್ಳು ಎಂಬ ಅರಿವೇ ಆಗಲಿಲ್ಲ. ಬಾವಿ ನೀರಿನಲ್ಲಿ ಅವನ ಮೊಗ, ಭಾವಿಯ ಹೊರಗೆ ಅವನ ಬಾಲ್ಯದ ಮೊಗ. ತಿರುಗಿ ಅವನನ್ನು ಬಿಗಿದಪ್ಪಿದೆನು. “ಕೊನೆಗೂ ನನ್ನ ಪ್ರಾರ್ಥನೆ ಕೇಳಿತೆ ನಿನಗೆ? ನನಗೆ ಗೊತ್ತಿತ್ತು ಅಣ್ಣ! ನೀನು ನನ್ನನ್ನು ಬಿಟ್ಟು ಹೋಗಲ್ಲ ಅಂತ.” ಎಂದವಳೇ ಭಾವುಕಳಾಗಿ ಅವನ ಮೇಲೆ ಮುತ್ತಿನ ಮಳೆಗೆರದೆ.ಅವನು ಮರು ಮಾತನಾಡದೇ ನನ್ನ  ಕೈ ಹಿಡಿದು ಕೊಂಡು ಓಡತೊಡಗಿದನು, ಗಿಡ ಮರಗಳ  ಸಂಧಿಯಲ್ಲಿ, ಸ್ವಪ್ನ ಲೋಕದಲ್ಲಿ ತೇಲುತ್ತಿರುವಂತೆ ಭಾಸವಾಗಿ  “ಅಣ್ಣ” ಎಂದು ಕೂಗುತ್ತ ನಾನು  ಹಿಂಬಾಲಿಸಿದೆ.
ಸ್ವಲ್ಪ ದೂರ ಹೋದ ಮೇಲೆ ನಿಂತು ನನ್ನನ್ನ ದಿಟ್ಟಿಸಿ “’ ನಾನು ನಿನ್ನ ಅಣ್ಣ ಅಲ್ಲ.”ಎಂದು ಮುದ್ದು ಧ್ವನಿಯಲ್ಲಿ ಹೇಳಿದಾಗ ನನಗರಿವಿಲ್ಲದೆ ದುಃಖದ ಕಟ್ಟೆ ಒಡೆದು ಅವನನ್ನು ತಬ್ಬಿಗೊಂಡು ನಿಷ್ಕಲ್ಮಷವಾಗಿ ಹೃದಯದ ಅಂತರಾಳದಿಂದ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದೆನು. ಇಂದು ಕಣ್ಣೀರು ನನ್ನ ಆತ್ಮವನ್ನು ಗಂಗಾಜಲದಂತೆ ತೊಳೆದು ಬಿಟ್ಟಿತು. “ ಇಲ್ಲ ಕಂದ ನೀನೆ ನನ್ನ ಅಣ್ಣ ಕಣೋ. ಅವನಿಲ್ಲದಿದ್ದರೂ, ನಿನ್ನನ್ನು ನನಗಾಗಿ ಬಿಟ್ಟು ಹೋಗಿದ್ದಾನೆ. ಬದುಕಲು ಕಲಿಯಲು ಬಿಟ್ಟು ಹೋಗಿದ್ದಾನೆ ಕಂದ.” ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದೆ. ಹಿನ್ನಲೆಯಲ್ಲಿ ಎಲ್ಲೊ ಪುರಂದರ ದಾಸರ ಗೀತೆಯೊಂದು ತೇಲಿ ಬರುತ್ತಿತ್ತು  “ ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ...”
 
image source: https://pixabay.com/en/photos/competition/?layout=flex