ಪ್ರತೀ ತಿಂಗಳು ಏಕೆ ಗ್ರಹಣಗಳಾಗುವುದಿಲ್ಲ?

ಪ್ರತೀ ತಿಂಗಳು ಏಕೆ ಗ್ರಹಣಗಳಾಗುವುದಿಲ್ಲ?

ಈ ಪ್ರಶ್ನೆ ಸಾಮಾನ್ಯವಾಗಿ ಎಲ್ಲರ ತಲೆಯಲ್ಲೂ ಕೊರೆಯುತ್ತಿರಬಹುದು. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಮತ್ತು ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣವಾಗುತ್ತದೆ ಎಂಬ ಸತ್ಯ ನಮಗೆ ಗೊತ್ತೇ ಇದೆ. ಆದರೆ ಇದು ಪ್ರತೀ ತಿಂಗಳಲ್ಲಿ ಏಕೆ ನಡೆಯುವುದಿಲ್ಲ? ಇದು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಪ್ರಶ್ನೆ. 

ಚಂದ್ರನು ಭೂಮಿಯನ್ನು ಸುತ್ತುವ ಉಪಗ್ರಹ. ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ವಿವಿಧ ಆಯಾಮಗಳಿಂದ ಹುಣ್ಣಿಮೆ-ಅಮವಾಸ್ಯೆಗಳು ನಡೆಯುತ್ತವೆ. ಅಮವಾಸ್ಯೆ ಎಂದರೆ ಭೂಮಿ ಮತ್ತು ಸೂರ್ಯರ ನಡುವೆ ಇರುವ ಘಳಿಗೆ.(ಚಿತ್ರ ೧ನ್ನು ಗಮನಿಸಿ) ಹಾಗಾದರೆ ಪ್ರತೀ ಅಮವಾಸ್ಯೆಯಲ್ಲೂ ನೆರಳು ಬೀಳಬೇಕಲ್ಲವೇ? ಹಾಗೆಯೇ ಹುಣ್ಣಿಮೆ ಎಂದರೆ ಸೂರ್ಯ-ಚಂದ್ರರ ನಡುವೆ ಭೂಮಿ ಹಾದುಹೋಗುವುದು. ಹಾಗಾದರೆ ಪ್ರತೀ ತಿಂಗಳು ಭೂಮಿಯ ನೆರಳು ಚಂದ್ರನ ಮೇಲೆ ಏಕೆ ಬೀಳುವುದಿಲ್ಲ?

ಈ ವಿಚಾರವನ್ನು ಅರ್ಥ ಮಾಡಿಕೊಳ್ಳಲು ಮೂರು ಆಯಾಮಗಳ ಕಲ್ಪನೆ ಅವಶ್ಯಕ. ಅಂದರೆ, ಅವು ಗೋಳಗಳು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಜೊತೆಗೆ ಅವುಗಳ ಕಕ್ಷೆಗಳ ಕಲ್ಪನೆಯನ್ನೂ ಮಾಡಿಕೊಳ್ಳಬೇಕು. ಆಕಾಶದಲ್ಲಿ ಸೂರ್ಯನ ಕಕ್ಷೆಯೇ ಬೇರೆ, ಚಂದ್ರನ ಕಕ್ಷೆಯೇ ಬೇರೆ. ಹಾಗಾಗಿ ಅಮವಾಸ್ಯೆಯಲ್ಲಿ ಚಂದ್ರ ಸೂರ್ಯನ ಕೆಳಗೋ (ದಕ್ಷಿಣಕ್ಕೋ) ಅಥವಾ ಮೇಲಕ್ಕೋ (ಉತ್ತರಕ್ಕೋ) ಇರುತ್ತದೆ. ಈ ಕೋನ ಬಹಳ ಕಡಿಮೆ. ೪-೫ ಡಿಗ್ರಿ ಮಾತ್ರ ಅಂದರೆ ನೆರಳು ಬೀಳುವುದಿಲ್ಲ. ಚಿತ್ರ ೨ರಲ್ಲಿ ಇರುವಂತೆ ಇದನ್ನು ವಿವರಿಸುವ ಪ್ರಯತ್ನ ಮಾಡಿದ್ದೇ ಆದರೆ ಭೂಮಿ-ಸೂರ್ಯರ ತಲವನ್ನು ಕ್ರಾಂತಿವೃತ್ತದ ಸಮತಲ ಎಂದು ಕರೆಯೋಣ. ಚಂದ್ರಕಕ್ಷೆಯ ಸಮತಲ ಇದಕ್ಕೆ ೫ ಡಿಗ್ರಿಗಳಷ್ಟು ಓರೆಯಾಗಿದೆ.  

ಈಗ ನಿಮ್ಮ ಕಲ್ಪನೆಯನ್ನು ವಿಸ್ತರಿಸಿ. ಚಂದ್ರನ ಮೇಲೆ ನೀವಿದ್ದೀರಿ ಎಂದು ಭಾವಿಸಿ. ಭೂಮಿಯ ಮೇಲಿರುವ ನಿಮ್ಮವರಿಗೆ ಅಂದು ಹುಣ್ಣಿಮೆ. ನೀವು ಭೂಮಿಯ ನೆರಳಿನಲ್ಲಿಲ್ಲ. ಆಗ ನಿಮಗೆ ದೂರದ ಸೂರ್ಯ, ಮುನ್ನೆಲೆಯಲ್ಲಿ ಭೂಮಿ ಎರಡೂ ಕಾಣುವವು. ನೀವು ನೆರಳಿನಲ್ಲಿರಬೇಕಾದ ಹುಣ್ಣಿಮೆ ಆದರೆ ಸೂರ್ಯ ಭೂಮಿಯ ಹಿಂದೆ ಅಡಗಿಕೊಂಡಿರುವುದು. ಭೂಮಿಯ ಸುತ್ತ ನೀಲಿ ಬಣ್ಣದ ಪ್ರಭಾವಳಿ ಕಾಣುವುದು. ಈ ದೃಶ್ಯವನ್ನು ಅಪೋಲೋ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ ಗಗನಯಾತ್ರಿಗಳು ಕಂಡಿದ್ದರು. ಈಗ ಗೊತ್ತಾಯಿತೇ ಪ್ರತೀ ತಿಂಗಳು ಏಕೆ ಗ್ರಹಣವಾಗುವುದಿಲ್ಲ ಎಂದು. 

ಮಾಹಿತಿ ಮತ್ತು ಚಿತ್ರ : ‘ಸೂತ್ರ' ಪತ್ರಿಕೆ