ಪ್ರತ್ಯಕ್ಷನಾದ ಪ್ರಕ್ಷುಬ್ದತೆ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೩
ಪ್ರತ್ಯಕ್ಷನಾದ ಪ್ರಕ್ಷುಬ್ದತೆ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೩
(೧೦೨)
ಈ ವರ್ಷ (೨೦೧೦ರ ಏಪ್ರಿಲ್) ಸ್ನಾತಕೋತ್ತರ ವಿದ್ಯಾರ್ಥಿಗಳ ಅಂತಿಮ ಕಲಾಕೃತಿಗಳ ಮೌಲ್ಯಮಾಪನಕ್ಕಾಗಿ ನಾನು ಶಾಂತಿನಿಕೇತನಕ್ಕೆ ಹೋದಾಗ ಹುಡುಕಾಡಿದ್ದು ಪ್ರಕ್ಷುಬ್ದನಿಗಾಗಿ. ಅಥವ ’ಪ್ರಕ್ಷುಬ್ ದಾ’ನಿಗಾಗಿ. ಆತನನ್ನು ಕೊನೆಯ ಸಲ ನೋಡಿದ್ದು ಹದಿನೆಂಟು ವರ್ಷಗಳ ಹಿಂದೆ, ಅಥವ ಎರಡು ದಶಕಗಳಷ್ಟು ದೂರದಲ್ಲಿ ಅಥವ ಕಳೆದ ಶತಮಾನದಲ್ಲಿ--೧೯೯೨ರಲ್ಲಿ. ನಡುವೆ ನಾನು ಮಾರ್ಕ್ಸ್-ವಾದಿಯಲ್ಲದಿದ್ದರೂ, ಬೆಂಗಳೂರಿನ ಬಿ.ಐ.ಟಿಯ ವಾಸ್ತುಕಲಾ ವಿಭಾಗದಲ್ಲಿ ಪಾಠ ಹೇಳುವಾಗ, ಸಂಬಳಕ್ಕಾಗಿಯಾದರೂ ನನ್ನ ಸ್ನಾತಕೋತ್ತರ ವ್ಯಾಸಂಗದ ಕುರುಹಾಗಿ ಮಾರ್ಕ್ಸ್ ಕಾರ್ಡ್ ಅನಿವಾರ್ಯವಾಗಿತ್ತು. ಅದನ್ನು ಕಳಿಸುವಂತೆ ಟ್ರಂಕಾಲ್ ಎಂಬ ಫೋನಿನ ಮೊಲಕ, ಪತ್ರಗಳ ಮುಖೇನ, ಶಾಂತಿನಿಕೇತನಕ್ಕೆ ಹೋಗುತ್ತಿದ್ದ ಗೆಳೆಯರೆಂಬ ’ಮಧ್ಯ’ವರ್ತಿಗಳ ಮೊಲಕ ವಿಶ್ವಭಾರತಿ ಎಂಬ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಕ್ಕೆ ವಿನಂತಿಸಿಕೊಂಡಿದ್ದೆ ಸುಮಾರು ಮೊರುವರ್ಷ ಕಾಲ, ಅಸಫಲಪೂರ್ಣವಾಗಿ. ನಾನು ತಾಳ್ಮೆ ಕಳೆದುಕೊಳ್ಳಲಿಲ್ಲ, ಏಕೆಂದರೆ ನಾನು ಅದೇ ಅಂತರಾಷ್ಟ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಯಲ್ಲವೆ! ೧೯೯೬ರ ಸುಮಾರಿಗೆ ಪಾಠ ಹೇಳುತ್ತಿದ್ದ ಕಾಲೇಜಿನಿಂದ ರಜೆ ಪಡೆದು ಪಾಠ ಕಲಿತ ಕಾಲೇಜಿಗೆ ಬೆಂಗಳೂರಿನಿಂದ ಟ್ರೈನಿನಲ್ಲಿ ಹೊರಟೇಬಿಟ್ಟೆ. ಕೇವಲ ಒಂದೂವರೆ ದಿನದಲ್ಲಿ ಪೇಪರ್ ದೋಸೆಯಂತಹ ಸ್ನಾತಕೋತ್ತರ ಪದವಿ ಪ್ರಶಸ್ತಿಪತ್ರ ಸಿಕ್ಕಿಯೇ ಬಿಟ್ಟಿತು. ರೋಮನ್ನರು ಆಗಿನ ಕಾಲದ ಒಲಂಪಿಕ್ಸ್ ಆಟದಲ್ಲಿ ಗೆಲ್ಲದೆ ಕೇವಲ ಭಾಗವಹಿಸಿದ ಆಟಗಾರರಿಗೆ ನೀಡುತ್ತಿದ್ದಂತಹ, ನಟರಾಜ ಥಿಯೇಟರಿನ ಪಕ್ಕದ ಗಲ್ಲಿಯ ಸೈನ್ಬೋರ್ಡ್ ಪೈಂಟರ್ ದಪ್ಪಕ್ಷರಗಳಲ್ಲಿ (ಇಂಗ್ಲೀಷ್-ಬೆಂಗಾಲಿ ಭಾಷೆಗಳಲ್ಲಿ) ಬರೆದ ಶೈಲಿಯಲ್ಲಿತ್ತು ಆ ಕಾಗದದ ದೋಸೆ. ಮುಂಚೆ ಅಲ್ಲಿ ಓದಿದ್ದಕ್ಕಿಂತಲೂ ಈಗ ಅಲ್ಲಿಗೆ ನೇರವಾಗಿ ಹೋಗಿದ್ದಕ್ಕೇ ದೊರೆತಂತಿತ್ತು ಮಾರ್ಕ್ಸ್-ಕಾರ್ಡ್ ಮತ್ತು ಡಿಗ್ರಿ ಪತ್ರ! ಆಗಲೂ ಸಿಕ್ಕಿರಲಿಲ್ಲ ಪ್ರಕ್ಷುಬ್ ದ.
೨೦೦೭ರ ಸುಮಾರಿಗೆ ಕಲಾವಿದ ರಾಮ್ ಕಿಂಕರ್ ಬೈಜ್ ಜನ್ಮಶತಮಾನೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಕಮ್ಮಟದಲ್ಲಿ ವಾರಕಾಲ ಭಾಗವಹಿಸಿದ್ದೆ. ಆಗಲೂ ಪ್ರಕ್ಷುಬ್ ದ ಗಾಯಬ್. ಎಲ್ಲರನ್ನೂ ವಿಚಾರಿಸಿದರೂ ದೊರೆತ ಉತ್ತರ ಅದೇಃ ಎದುರಿಗಿಲ್ಲದವರ ಬಗ್ಗೆ ದೊರೆವ ಉತ್ತರಗಳಂತೆ, "ಅಲ್ಲೆಲ್ಲೋ ಇದ್ದಾರೆ, ಅದೇನೋ ಮಾಡುತ್ತಿದ್ದಾರೆ. ಅವರಿಲ್ಲಿ ಇಲ್ವಲ್ಲ. ಇದ್ದಂಗಿಲ್ಲಪ್ಪ. ಸುದ್ದಿ ಗೊತ್ತಿಲ್ವಾ, ಅವ್ರು ಹೋಗ್ಬಿಟ್ರು ಊರು ಬಿಟ್ಟು" ಇತ್ಯಾದಿ, ಇತ್ಯಾದಿ. ವ್ಯಾಕರಣಬದ್ಧವಾಗಿದ್ದೂ, ಪದಗಳನ್ನು ವಾಕ್ಯಗಳ ಬಂಧದೊಳಗಿಂದಲೇ ಅವುಗಳು ಹೊರಡಿಸುವ ಅರ್ಥಗಳಿಂದ ಬಿಡುಗಡೆಗೊಳಿಸುವ ಮಾರ್ಗವನ್ನು ಮಾತ್ರ ಅವರ ಮಾತುಗಳು ನನಗೆ ಕಲಿಸಿಕೊಟ್ಟಿದ್ದವು!
ಈ ಸಲ ಆತನನ್ನು ಭೇಟಿ ಮಾಡುವ ಇರಾದೆ ಇರಿಸಿಕೊಂಡೇ ಹೋದೆ. ಬೆಳಿಗ್ಗೆಯಿಂದ ಸಂಜೆಯವರೆಗೂ, ಎಲ್ಲೆಲ್ಲಿಂದಲೋ ಬಂದ ಕಲಾಗುರುಗಳು, ಕಲಾವಿದರು ಒಟ್ಟಾಗಿ, ಪ್ರದರ್ಶಿಸಲಾದ ಸ್ನಾತಕೋತ್ತರ ವಿದ್ಯಾರ್ಥಿಗಳ ಕೃತಿಗಳ ಮೌಲ್ಯಾಂಕನ ಮಾಡಿ, ಅಂಕಗಳನ್ನು ನೀಡುವುದು. ಕೂಡಲೆ ವಿದ್ಯಾರ್ಥಿಗಳು ತಮ್ಮ ಕೃತಿಗಳನ್ನು ಕೆಳಗಿಳಿಸಿ, ಮುಂದಿನವರಿಗೆ ದಾರಿ ಮಾಡಿಕೊಡಬೇಕು. ಹದಿನೈದು ನಿಮಿಷದಲ್ಲಿ ಸ್ನೇಹಿತರ ಸಹಾಯದಿಂದ ಮುಂದಿನವರು ತಮ್ಮ ಕೃತಿಗಳನ್ನು ಪ್ರದರ್ಶಿಸಬೇಕು. ಅಷ್ಟರಲ್ಲಿ ಶಿಕ್ಷಕರೆಲ್ಲ ನಾಷ್ಟಾ, ಚಹಾ, ಊ, ಚಟ ಮತ್ತು ಬೆವರು ಒರೆಸಿಕೊಳ್ಳುವುದನ್ನು ಅದೇ ಪ್ರಕಾರವಾಗಲ್ಲದಿದ್ದರೂ, ಅವಸರವಸರವಾಗಿ ಮುಗಿಸಿಕೊಳ್ಳಬೇಕಿತ್ತು. ಬಿಸಿಲಬೇಗೆ ೪೪ಡಿಗ್ರಿ ಇತ್ತು. ವಿದ್ಯಾರ್ಥಿಗಳ ಕೃತಿಗಳಿಗೂ ಹೆದರದ ಹೊರರಾಜ್ಯದ ಎಷ್ಟೋ ಮಂದಿ ಶಿಕ್ಷಕರು, ಅಲ್ಲಿನ ಬಿಸಿಲಿಗೆ ಹೆದರಿಯೇ ಬಂದಿರಲಿಲ್ಲ. ಕಲಾಕೃತಿಗಳನ್ನು ಒಳಗೆ ನೋಡುವಾಗ, ನಮಗಿಂತಲೂ ಎತ್ತರವಾದ, ತನಗೆ ವಹಿಸಿದ ಕೆಲಸ ಮಾಡದಿದ್ದರೂ ಬರಿಯ ಸದ್ದು ಮಾಡುವ ಫ್ಯಾನ್ಗಳು ಅಲ್ಲಿನ ಕೆಲ ಸೋಂಬೇರಿ-ಬುದ್ದಿವಂತ ವರ್ಗದ ವಿದ್ಯಾರ್ಥಿಗಳ ’ಕೆಲಸ ಕಡಿಮೆ, ಮಾತು ಹೆಚ್ಚೆ’ಂಬ ಕ್ರಿಯೆಯ ಪ್ರತಿಬಿಂಬದಂತಿದ್ದವು.
(೧೦೩)
ಆಗಲೂ ಪ್ರಕ್ಷುಬ್ ದ ಸಿಗಲಿಲ್ಲ. ಅಲ್ಲಿನ ಹಿರಿಯ ಕಲಾಗುರುಗಳೊಬ್ಬರನ್ನು ಕೇಳಿದೆ. "ಪ್ರಕ್ಷು ಎಲ್ಲಿ?"
"ಪ್ರಕ್ಷು ಎಲ್ಲಿ ಎಂಬುದು ತಪ್ಪು ಪ್ರಶ್ನೆ. ’ಪ್ರಕ್ಷು ದೊರಕುವುದು ಯಾವಾಗ?’ ಎಂಬುದು ಸರಿಯಾದ ಪ್ರಶ್ನೆ", ಎಂದು ನಗಾಡಿದರು.
"ಅದು ಹೇಗೆ ದಾದ?"
"ಪ್ರಕ್ಷು ಒಂದು ಪರಿಕಲ್ಪನೆಯಷ್ಟೇ. ಪ್ರಕ್ಷುವಿನ ಭೌತಿಕಕಾಯ ಮುಖ್ಯವಲ್ಲವೇ ಅಲ್ಲ. ಆತ ಸಂಕೇತಿಸುವ ಮೌಲ್ಯ ಮುಖ್ಯವಷ್ಟೇ. ಅಂದ ಹಾಗೆ ಆತ ನಿನಗಿಂತಲೂ ಸೀನಿಯರ್ ಬ್ಯಾಚಿನವನಲ್ಲವೆ? ಬಿನೋದ್ ದಾರವರ (ಬಿನೋದ್ ಬಿಹಾರಿ ಮುಖರ್ಜಿ) ’ಕಟ್ಟಾಮೊಶಾಯ್’ ಮತ್ತು ಸೋಮನಾಥ್ ಹೋರರ ’ತೆಬಾಗಾ’ ಡಯರಿಗಳನ್ನು ಆಗೆಲ್ಲ ನೀವುಗಳ ಬಹಳ ರೆಫರ್ ಮಾಡುತ್ತಿದ್ದಿರಲ್ಲವೆ! ಆತನಿಂದಲೇ ಆದ ಪ್ರೇರಣೆಗಳು ಅವು. ಅಥವ ಅವುಗಳನ್ನೆಲ್ಲ ಓದಿಕೊಂಡಿದ್ದರಿಂದಲೇ ಪ್ರಕ್ಷು ನಿಮಗೆ ಪ್ರತ್ಯಕ್ಷನಾದದ್ದು," ಎಂದು ನಿಗೂಢವಾಗಿ, ರೊಮ್ಯಾಂಟಿಕ್ ಆಗಿ ಉತ್ತರಿಸಿ, ಪ್ರಶ್ನಿಸಿ ಮುಂದುವರೆಸಿದ್ದರು, "ನೀನು ಪುಣ್ಯವಂತ. ನಿನಗೂ ಪ್ರಕ್ಷು ಪರಿಚಯವೆ? ನಿಮ್ಮಗಳ ನಂತರ ಬ್ಯಾಚಿನವರಿಗೆ ಆತನ ಪರಿಚಯ ಅಷ್ಟಾಗಿ ಇಲ್ಲ ಬಿಡು", ಎಂದರು.
"ನಾವು ಓದುತ್ತಿದ್ದ ಕಾಲವೇ ಬೆಸ್ಟ್" ಅಂತ ಈಗಲೂ ಹಳೆಯ ವಿದ್ಯಾರ್ಥಿಗಳು ಬಂದು ನಮಗೆ ಹೇಳುತ್ತಾರೆ. ನಾವು ಹೌದೆನ್ನುತ್ತೇವೆ. "ಆ ಬ್ಯಾಚು ಬೆಸ್ಟಾಗಿತ್ತು" ಅಂತ ನಾವು ಮಾತನಾಡಿಕೊಳ್ಳುತ್ತೇವೆ, ಇತರರು ತಲೆಯಾಡಿಸುತ್ತಾರೆ. ಆದರೆ ನಿಜದಲ್ಲಿ ಯಾವುದೂ ನಿರ್ದಿಷ್ಟವಾದ ’ಅತ್ಯುತ್ತಮ ವರ್ಗ’ ಅನ್ನುವುದಿರುವುದಿಲ್ಲ, ಜಾತಿವರ್ಗಗಳಂತೆಯೇ. ಅವರವರಿಗೆ ಅವರವರ ವರ್ಗವೇ ಶ್ರೇಷ್ಠ. ಹಿನ್ನೆನಪು (ನಾಸ್ಟಾಲ್ಜಿಯ) ಮಾಡುವ ಮೋಡಿ ಇದು. "ಲೈಫು ಇಷ್ಟೇನೇ.." ಹಾಡಿನ ಬಗ್ಗೆ ಇರಿಸುಮುರಿಸು ಮಾಡಿಕೊಳ್ಳುವವರೆಲ್ಲ ಒಮ್ಮೆ "ಒಂದರಿಂದ ಇಪ್ಪತ್ತರವರೆಗೂ ಉಂಡಾಟಾ, ಉಂಡಾಟ ಉಂಡಾಟ" ಎಂಬ ಅಪ್ಪನವರ ಅಪ್ಪನ ಕಾಲದ ಹಾಡನ್ನು ನೆನೆಸಿಕೊಳ್ಳಬೇಕು. ಬಹುಶಃ ಆಗ ಆ ಹಾಡು ಆ ಕಾಲದ ಕೆಲವರನ್ನು ಅಷ್ಟೇ ಇರಿಟೇಟ್ ಮಾಡಿರಲಿಕ್ಕೂ ಸಾಕು. ಆದರೆ ಇಂದಿಗೆ ಆ ಹಾಡಿಗೆ ’ಆಗಿನ ಪಾಪ್-ಕ್ಲಾಸಿಕ್ಗಳಲ್ಲಿ’ ಅದರದ್ದೇ ಸ್ಥಾನ ಪಡೆದುಕೊಂಡಿಲ್ಲವೆ! ಪ್ರಕ್ಷುವಿನ ಸಹವಾಸ, ಸ್ನೇಹದಲ್ಲಿ ಮೆರೆದವರಿಗೆಲ್ಲ ಶಾಂತಿನಿಕೇತನವು ೯೦ರ ದಶಕದಲ್ಲೇ ಅತ್ಯುತ್ತಮೆ ಎನ್ನಿಸುವುದು ಇಂತಹ ಕಾರಣಗಳಿಗಾಗಿಯೇ ಇರಬೇಕು ಅಂದುಕೊಂಡು ಸುಮ್ಮನಾದೆ.
ಪ್ರಕ್ಷುಬ್ ಎಂಬ ವ್ಯಕ್ತಿಯನ್ನು ಹುಡುಕುತ್ತ, ಆತ ದೊರಕದೇ ಹೋದಾಗ ಆತನ ನೆನಕೆಯಿಂದ ಹುಟ್ಟಿಕೊಂಡ ವಿಚಾರವೇ ಆತನಿಗಿಂತಲೂ ದೊಡ್ಡದಾಗಿ ಬೆಳೆಯತೊಡಗಿತ್ತು. ನಿಜದಲ್ಲಿ ಕಳೆದುಕೊಂಡದ್ದನ್ನು ಕಲ್ಪನೆಯಲ್ಲಿ ಪುನರ್-ಸಂಪಾದಿಸಿಕೊಳ್ಳಬಹುದಲ್ಲವೆ, ಹಾಗೆ ಇದು
(೧೦೪)
ಈ ಸಲ, ಏಪ್ರಿಲ್ ೨೦೧೦ರ, ೪೪ ಡಿಗ್ರಿ ಬಿಸಿಲ ಹಬೆಯಲ್ಲಿ, ರಾತ್ರಿ ೧೧.೩೦ರ ಸುಮಾರಿಗೆ ಪೂರ್ವಪಲ್ಲಿ ಹೋಟೆಲ್ಲಿನಿಂದ ರೂಮಿನ ಕಡೆ ಹೊರಟೆ. ಅರ್ಧ ಶಾಂತಿನಿಕೇತನದ ಜನತೆ ಅರ್ಧ ನಿದ್ರೆ ತೆಗೆದು ಆಗಿಹೋದ ಸಮಯವದು. ಸರಾಸರಿ ಅಲ್ಲಿನವರು ಮಲಗುವ ಸಮಯ ರಾತ್ರಿ ೮ ಗಂಟೆ. ಬೆಂಗಳೂರಿನಂತಹ ನಗರಪ್ರದೇಶದಲ್ಲಿ ಗುಂಡು ಹಾಕುವ ಯೋಚನೆಯ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳುವ ಸಲುವಾಗಿ ನಾಲ್ಕಾರು ಚಹಾ ಕುಡಿಯುತ್ತಿರುವಂತಹ ಸಮಯವದು. ಸ್ವಂತ ಬಾಡಿಗೆ ರೂಮುಗಳಲ್ಲಿದ್ದ ಒಬ್ಬ ಕೊಲ್ಕೊತ್ತದ ಕಲಾ ಇತಿಹಾಸದ ಹುಡುಗಿ, ಒಬ್ಬ ದೆಹಲಿಯ ಚಿತ್ರಕಲಾ ವಿಭಾಗದ ಹುಡುಗಿ ಮತ್ತು ಅಲ್ಲಿನ ಸ್ಥಳೀಯನೇ ಆದ ಎಂ.ಎ ಶಿಲ್ಪಕಲೆಯ ಹುಡುಗ--ಈ ಮೋವರೊಂದಿಗೆ ಮಾತನಾಡುತ್ತ ಕಾಲಕಳೆದದ್ದೇ ಗೊತ್ತಾಗಲಿಲ್ಲ. ಇಲ್ಲದಿದ್ದಲ್ಲಿ ಈಗಲೂ ಹುಡುಗಿಯರು ರಾತ್ರಿ ಒಂಬತ್ತು ಗಂಟೆಯ ಒಳಗೆ ಗೂಡು ಸೇರಿಕೊಳ್ಳಬೇಕಾಗಿತ್ತು. ಜೊತೆಗೆ ನಾನು ರೂಮಿಗೆ ಹೋಗಿ ಮಲಗಿದಲ್ಲಿ, ಕೆಳಗಿನ ಇರುವೆ ಸಮೊಹ, ಸುತ್ತಲಿನ ಸೊಳ್ಳೆ ಸಂಸಾರ ಮತ್ತು ಬಿಸಿಲ ಹಬೆಯೊಂದಿಗೆ ಹೂಡಬೇಕಿದ್ದ ಹೋರಾಟಕ್ಕೆ ಸ್ವಲ್ಪ ಮುಂದೂಡಿದಂತೆಯೋ ಆಯಿತು. ಕಳೆದೆರೆಡು ದಿನದಿಂದಲೂ ಬೆಳಿಗ್ಗೆ ಸುಮಾರು ನಾಲ್ಕು ಗಂಟೆಗೆ ನಿದ್ರೆಗೆ ಜಾರುತ್ತಿದ್ದೆ, ನಿದ್ರೆಗಾಗಿ ಒದ್ದಾಡುತ್ತ ಮೊರ್ಚೆ ಬಂದಂತಾದಾಗ.
ಸರಿ, ಈಗ ಈ ನಡುರಾತ್ರಿಯಲ್ಲಿ ಕಲಾಭವನಕ್ಕೆ ಹೋಗುವ ಎಂದು ನಡೆದಾಡತೊಡಗಿದೆ, ಪೂರ್ವಪಲ್ಲಿಯ ಆ ಮಲ್ಟಿ-ಸ್ಟಾರ್ ಹೋಟೆಲ್ಲಿನಿಂದ. ಆಕಾಶಕ್ಕೂ ನಮಗೂ ನಡುವೆ ಸೂರಿನ ಅಡೆತಡೆಯಿಲ್ಲದ ಆ ’ಕಾಲಾರ್ ದುಖಾನ್’ ಅನ್ನು ಮಲ್ಟಿಸ್ಟಾರ್ ಎಂದು ನಮ್ಮ ವಿದ್ಯಾರ್ಥಿ ದೆಸೆಯಿಂದಲೂ ಕರೆಯುತ್ತಿದ್ದೆವು. ಜೊತೆಯಾಗಿ ಬಂದರು ಆ ಮೊವರೂ ವಿದ್ಯಾರ್ಥಿಗಳು, ಕಲಾಭವನದ ಬಳಿ ನನ್ನನ್ನು ಬಿಟ್ಟು ತಮ್ಮ ತಮ್ಮ ರೂಮುಗಳಿಗೆ, ಮನೆಗಳಿಗೆ ತೆರಳಿದರು. ರಾತ್ರಿ ಪೂರ್ತಿ ನಿಯಾನ್ ಬೆಳಕಿನ ಪ್ರಭೆ, ನಡುನಡುವೆ ಸಾಕಷ್ಟು ಸುದೀರ್ಘ ಕತ್ತಲೆ, ನೀರವ ಮೌನ. ಕ್ಯಾಂಟೀನಿನ ಬಳಿ ಬಂದೆ. ಕ್ಯಾಂಪಸ್ಸಿನ ಒಳಗೂ ಅದೇ ನಾಟಕೀಯ ನೆರಳುಬೆಳಕು. ಅಲ್ಲಲ್ಲೇ ಮೌಬೈಲನ್ನು ಜೋರಾಗಿ ಹಚ್ಚಿ, ನಿಧಾನಕ್ಕೆ ತಮ್ಮ ಸ್ಟುಡಿಯೊವನ್ನು ಮುಚ್ಚುತ್ತಿದ್ದ ಒಂದೆರೆಡು ಹುಡುಗರಿದ್ದರು. ನೆನಪಿನ ರೀಲನ್ನು ಬಿಚ್ಚುತ್ತ ಕ್ಯಾಂಟೀನಿನ ಹುಡುಗರನ್ನು ಮಾತನಾಡಿಸಿದೆ. ಬಿಸಿಲ ದಗೆಯನ್ನು ಕೊಲ್ಲಲು ಅವರಿಬ್ಬರೂ ಹೊರಗೆ ಮಲಗಲು ಅನುವಾಗುತ್ತಿದ್ದರು.
ಕುಳಿತ ಮೊರ್ನಾಲ್ಕು ನಿಮಿಷಗಳಿಗೇ ಯಾವುದೋ ನೆರಳು ಸುಳಿದಂತಾಯ್ತು. ನೆರಳಿಗಿಂತಲೂ ಮುಂಚೆ, ಒಣಎಲೆಗಳ ಮೇಲೆ ಯಾರೋ ನನ್ನೇಡೆಗೇ ಅನುಮಾನದಿಂದ ನಡೆದುಬರುತ್ತಿರುವುದು ಕೇಳಿತು. ನೋಡುತ್ತಲೆ ಇದ್ದೆ. ಆ ಆಕೃತಿಯೊ ನೋಡುತ್ತಲೇ ಹತ್ತಿರ ಬರುತ್ತ, ಮಂದಹಾಸ ಬೀರತೊಡಗಿತು. ಎದ್ದು ನಿಂತೆ. ಅನುಮಾನವೇ ಇಲ್ಲ.
"ಹಾಯ್ ಪ್ರಕ್ಷುಬ್ ದ!"
"ಹಾಯ್ ಅನಿಲ್"
"ಇದರ ಅರ್ಥವೇನೆಂದರೆ ನೀನಿನ್ನೂ ಬದುಕಿದ್ದೀಯ ಅಂತ. ಎಲ್ಲರೂ ನಿನ್ನ ಬಗ್ಗೆ ಉತ್ತರಿಸುವಾಗ ಮಾತ್ರ ವಾಕ್ಯಗಳಿಂದ ಅರ್ಥಗಳನ್ನು ಹೊರಬಸಿವ ವ್ಯಾಕರಣಾ ವೈಚಿತ್ರ್ಯದಲ್ಲಿ ಸಫಲರಾಗುತ್ತಿದ್ದರು, ಬಾಸ್" ಎಂದೆ.
"ಆದ್ರೂ, ಎಷ್ಟು ಜನರ ಮೊಲಕ ನನ್ನನ್ನು ಭೇಟಿ ಮಾಡಬೇಕೆಂದು ಸಂದೇಶ ಕಳಿಸುವುದು ಗುರುವೆ. ಕಳೆದೆರೆಡು-ಮೊರು ದಿನದಿಂದ ಇಡೀ ಕಲಾಭವನದವರೆಲ್ಲ ಸಂದೇಶವಾಹಕರಾಗಿಬಿಟ್ಟಿದ್ದಾರೆ, ನಿನ್ನ ಸಲುವಾಗಿ. ಈಗ ಹೇಳು, ನಿದ್ರೆ ಬರ್ತಿಲ್ಲವಲ್ಲ, ಮಾತನಾಡುವ" ಎಂದ.
"ಇಲ್ಲ. ಓಕೆ. ಮಾತನಾಡುವ"
"ಅಥವ ಮತ್ತೆ ಯಾವಾಗಾದರೂ ಸಿಗುವ?" ಎಂದ.
"ಬೇಡ ಬಾಸ್. ಈಗ ಸಿಕ್ಕಿರೋದು, ಸರಿಯಾಗಿ ಹದಿನೆಂಟು ವರ್ಷಗಳ ಕಾಯುವಿಕೆಯಿಂದ. ’ಮತ್ತೆ ಸಿಗುವ’ ಎಂದರೆ ನಮ್ಮಗಳ ರಿಟೈರ್ಮೆಂಟ್ ವಯಸ್ಸಿಗೇ ಅಷ್ಟೇ."
"ಹೇಳು. ನೀನೇನು ಕೇಳುತ್ತಿದ್ದೀಯ ಅಂತ ನಾನೇ ಹೇಳುತ್ತೇನೆ ಕೇಳು" ಎಂದು ಪ್ರಕ್ಷು ಮುಂದುವರೆಸಿದ.///