ಪ್ರತ್ಯಕ್ಷ ನೋಡಿದರೂ...

ಪ್ರತ್ಯಕ್ಷ ನೋಡಿದರೂ...

ಬರಹ

... ಪ್ರಮಾಣಿಸಿ ನೋಡು" - ಈ ಗಾದೆಯ ಪರಿಚಯ ನಮ್ಮೆಲ್ಲರಿಗೂ ಇದ್ದೇ ಇರತ್ತೆ. ಮಗುವನ್ನು ಹಾವಿನಿಂದ ಉಳಿಸಿದ್ದಲ್ಲದೇ ಮನೆಯೊಡತಿಯ ಅಚಾತುರ್ಯದ ಪೆಟ್ಟನ್ನೂ ತಾನೇ ತಿಂದು ಸಾಯುವ ಮುಂಗಸಿ ಕಥೆ ಶಾಲೆಯಲ್ಲಿದ್ದಾಗ ಹಲವರು ಓದಿರಬಹುದು. ಅದಿಲ್ಲದಿದ್ದರೆ "ನೋಡಿದ್ದೂ ಸುಳ್ಳಾಗಬಹುದು, ಕೇಳಿದ್ದೂ ಸುಳ್ಳಾಗಬಹುದು" ಹಾಡಂತೂ ಕೇಳಿಯೇ ಇರುತ್ತೇವೆ.

ಕೇಳಿದ್ದೇವೆ, ಸರಿ. ಆದರೆ ಇದೆಲ್ಲಾ ಯಾಕಿವತ್ತು?

ಕೆಲವು ವರ್ಷಗಳ ಹಿಂದೆ ನಡೆದ ಸಂಗತಿಯೊಂದು ನೆನಪಾಯ್ತು. ಹೀಗೇ ಯಾವುದೋ ವಿಷಯವಾಗಿ ಚರ್ಚೆ ಮಾಡುವಾಗ ಇವತ್ತು ಮತ್ತೆ ನೆನಪಾಯ್ತು. ಸುಮಾರು ಮೂರು ವರ್ಷಗಳ ಹಿಂದೆ ನಡೆದದ್ದು. ಆಗಿನ್ನೂ ಸಂಪದ ಇರಲಿಲ್ಲ. ಹೀಗೇ ಕನ್ನಡ ವಿಕೀಪೀಡಿಯದಲ್ಲಿ ನಿತ್ಯ ನಿರ್ವಹಣೆಯ ಕೆಲಸಗಳನ್ನು ಮಾಡುತ್ತ, ಬರೆಯುತ್ತ, ಲೇಖನಗಳನ್ನು ಎಡಿಟ್ ಮಾಡುತ್ತಿದ್ದೆ. ಆಗ ಅಲ್ಲಿಯ ಲೇಖನಗಳ ಎಡಿಟ್ಟು, ವಿಷಯಗಳ ಡಿಬೇಟು, ಆಗಾಗ ಅವರಿವರ ಭಿನ್ನಾಪಿಪ್ರಾಯದಿಂದ ಆಗುತ್ತಿದ್ದ ಎಡವಟ್ಟು ಇವೆಲ್ಲವೂ ಒಟ್ಟು ನನ್ನದೇ ಜವಾಬ್ದಾರಿ ಎಂಬಂತೆ ತೆಗೆದುಕೊಂಡು ನಡೆಸುತ್ತಿದ್ದೆ. ನಿತ್ಯ ಹೊಸ ಲೇಖನಗಳನ್ನು ಸೇರಿಸುವುದು, ಯಾರು ಯಾರು ಬರೆಯುತ್ತಿದ್ದಾರೆ ಎಂಬುದನ್ನೊಮ್ಮೆ ಗಮನಿಸೋದು, ಹೊಸ ಸದಸ್ಯರಿಗೆ ಸ್ವಾಗತ ಸಂದೇಶ ಹಾಕೋದು, ಹೆಚ್ಚಿನ ಜನರನ್ನು ಇದರಲ್ಲಿ ಭಾಗವಹಿಸುವಂತೆ ಮಾಡುವುದು ಹೇಗೆ ಎಂದು ಆಲೋಚಿಸುತ್ತ ಹೊಸ ಹೊಸ ಪ್ರಯೋಗಗಳನ್ನು ನಡೆಸೋದು - ಇವೆಲ್ಲವನ್ನು ನನ್ನ ನಿತ್ಯದ ಕೆಲಸ ಎಂಬಂತೆಯೇ ನಡೆಸುತ್ತಿದ್ದೆ.

ಆಗೊಮ್ಮೆ ಲೈವ್ ಜರ್ನಲ್ ಎಂಬಲ್ಲಿ (ವರ್ಡ್ ಪ್ರೆಸ್. ಕಾಮ್ ಅಥವ ಬ್ಲಾಗ್ ಸ್ಪಾಟ್ ನಂತೆ ಇದೂ ಒಂದು) ಒಬ್ಬರು ಕನ್ನಡ ವಿಕಿಪೀಡೀಯದ ಬಗ್ಗೆ ಬರೆದಿದ್ದರು. ಒಬ್ಬ ಸಾಫ್ಟ್ ವೇರ್ ಇಂಜಿನೀಯರ್ ಬರೆದ ಬ್ಲಾಗ್ ಅದು. "ಕನ್ನಡ ವಿಕಿಪೀಡಿಯದಲ್ಲಿ ಕನ್ನಡವನ್ನು ಹಾಳುಗೆಡವುತ್ತಿದ್ದಾರೆ. ಅಕ್ಷರಗಳನ್ನು ತಪ್ಪು ತಪ್ಪಾಗಿ ಬಳಸುತ್ತಿದ್ದಾರೆ. ಒತ್ತಕ್ಷರಗಳನ್ನು ಸರಿಯಾಗಿ ಬಳಸುತ್ತಿಲ್ಲ" ಎಂದೆಲ್ಲ ಬರೆದಿದ್ದರು. ನನಗೆ ಶಾಕ್ ಆಯ್ತು. ಬರೆದಿದ್ದವನ ಪರಿಚಯ ನನಗಿತ್ತು. ಇದೇನಪ್ಪ ಇದು, ಇದ್ಯಾಕೆ ಹೀಗ್ ಬರೆದಿದ್ದಾನೆ ಎಂದು ಓದಿ ನೋಡಿದರೆ ಅವನಿಗೆ ಹೀಗಾಗಿತ್ತು:
ಮಹರಾಯ ವಿಂಡೋಸ್ 2000ನಲ್ಲಿ ಕನ್ನಡ ವಿಕಿಪೀಡಿಯವನ್ನು ಓದಲು ಪ್ರಯತ್ನಿಸಿ, ಅಲ್ಲಿ ಕನ್ನಡ ಅಕ್ಷರಗಳು (ಯೂನಿಕೋಡ್) ಸರಿಯಾಗಿ ಬರದೆ ಈ ಕನ್ನಡ ವಿಕಿಪೀಡಿಯದಲ್ಲಿ ಬರೆಯುತ್ತಿರುವವರೇ ತಪ್ಪು ತಪ್ಪು ಕನ್ನಡ ಬಳಸಿ ಅದನ್ನು ಹಾಳುಗೆಡವುತ್ತಿದ್ದಾರೆ ಎಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದ!
ಕಂಪೆನಿಯೊಂದರ ರಿಸರ್ಚ್ ಟೀಮಿನಲ್ಲಿದ್ದ ಇವನಿಗೆ ಇದರ ಬಗ್ಗೆ ಹೀಗೆ ಬರೆಯುವ ಮುನ್ನ ಕಿಂಚಿತ್ತಾದರೂ ರಿಸರ್ಚ್ ಮಾಡಬೇಕೆಂಬುದು ಯಾಕೆ ಹೊಳೆಯಲಿಲ್ಲ ಎಂಬುದು ಆಗ ಉತ್ತರ ಸಿಗದ ಪ್ರಶ್ನೆಯಾಗಿತ್ತು.

ಅಮೇರಿಕದಲ್ಲಿ ಕೂತು ಇದನ್ನೋದಿದ್ದ MS ವಿದ್ಯಾರ್ಥಿಯೊಬ್ಬ ತಾನೂ ಅವಲೋಕಿಸಿ ನೋಡದೆ ತಲೆಹರಟೆ ಕಾಮೆಂಟ್ ಹೀಗೆ ಸೇರಿಸಿದ್ದ: "ಎಲ್ರೋ ವಾಟಾಳ್ ನಾಗ್ರಾಜ್ ನಂಬರ್ರು ಇಸ್ಕೊಳ್ರೋ" ಎಂದು!

ತದನಂತರ ನಡೆದದ್ದು ಇತಿಹಾಸ (ಮತ್ತೊಮ್ಮೆ ಸುದೀರ್ಘವಾಗಿ ಬರೆಯುವಷ್ಟು ಸರಕು).

ವಿಂಡೋಸ್ 2000ನಲ್ಲಿ native ಆಗಿ ಯೂನಿಕೋಡ್ ಸಪೋರ್ಟ್ ಇಲ್ಲ. ಅಂದರೆ ಸುಮ್ಮನೆ ವಿಂಡೋಸ್ 2000 ಹಾಕಿಕೊಂಡು ಅದರಲ್ಲಿ ಹೊಸ ಪೀಳಿಗೆಯ ಕನ್ನಡ ವೆಬ್ಸೈಟುಗಳನ್ನು ನೋಡ ಹೊರಟರೆ ಒತ್ತಕ್ಷರಗಳು ಬಿಡಿಬಿಡಿಯಾಗಿ, ಅಕ್ಷರಗಳೂ ಕೆಟ್ಟಕೆಟ್ಟದಾಗಿ ಬರುವುದು. ವಿಂಡೋಸ್ 2000 ಬಳಸುತ್ತಿರುವವರು ಇದನ್ನು ಸರಿಮಾಡಿಕೊಳ್ಳಲು ಅವರ ಕಂಪ್ಯೂಟರುಗಳಲ್ಲಿ ಮಾಡಬೇಕಿರುವ ಕಸರತ್ತಿನ ಬಗ್ಗೆ [:fonthelp#comment-485|ಸುಮಾರು ಚರ್ಚೆ ನಡೆದಿದೆ]. ತಮಾಷೆಯೆಂದರೆ ಓದುತ್ತಿರುವವರಿಗೆ ತೊಂದರೆ ಅವರ ಕಂಪ್ಯೂಟರಿನಲ್ಲಿ ಓಡುತ್ತಿರುವ ಆಪರೇಟಿಂಗ್ ಸಿಸ್ಟಮಿನದ್ದು, ಅಲ್ಲಿರುವ ವೆಬ್ಸೈಟಿನದ್ದಲ್ಲ ಎಂಬುದರ ಬಗ್ಗೆ ಸುಳಿವೂ ಮನದ ಕದ ತಟ್ಟುತ್ತಿರುವಂತಿಲ್ಲ!

ವಿಂಡೋಸ್ XP ಯಲ್ಲಿ ಹೇಗೆ ಯೂನಿಕೋಡ್ ಅಕ್ಷರಗಳು ಸರಿಯಾಗಿ ಕಾಣಿಸಿಕೊಳ್ಳುತ್ತವೆ ಎಂಬುದರ ಬಗ್ಗೆ ಸುಮಾರು ಚರ್ಚೆಯಾಗಿವೆ. ಆದರೆ ತುಂಗ ಫಾಂಟಿನಲ್ಲಿ ಕೆಲವು ದೋಷಗಳಿದ್ದವು (bugs ಇದ್ದವು). ಇವತ್ತಿಗೂ ಹೊಸತಾಗಿ ಹಾಕಿಕೊಂಡ Xpಲಿ 'ಮಾ' ಮತ್ತು 'ಮೂ' ಎರಡೂ ಒಂದೇ ತರಹ ಕಾಣುವುದು. ಹೊಸ ತುಂಗಾ ಫಾಂಟಿನಲ್ಲಿ ಸರಿಪಡಿಸಿದ್ದಾರೆ, ಅದನ್ನು ಡೌನ್ಲೋಡ್ ಮಾಡ್ಕೊಳ್ಳಿ ಎಂದು ನಾವುಗಳೇ ಎಷ್ಟು ಜನರಿಗೆ ಅದೆಷ್ಟು ಬಾರಿ ಹೇಳಿದ್ದೇವೆಯೋ ಗಣನೆಗೇ ಬಾರದು!
ಸರಿ, ಈ ವಿಷಯ ತಿಳಿದ ಮೇಲೆ ಎಲ್ಲರೂ ಖುಷ್. ಆದರೆ ತಿಳಿಯುವ ಮುನ್ನ ವೆಬ್ಸೈಟೇ ಸರಿಯಿಲ್ಲ ಎನ್ನುವವರೇ ಹೆಚ್ಚು. ಕೂಲಂಕುಷವಾಗಿ ಪ್ರಮಾಣಿಸಿ ನೋಡುವವರು ಕಡಿಮೆ.

ಮೊನ್ನೆ ತಾನೆ ನಾನು ನಿರ್ಮಿಸಲು ಸಹಾಯ ಮಾಡಿದ ವೆಬ್ಸೈಟೊಂದಕ್ಕೆ ಭೇಟಿ ಕೊಟ್ಟವರಿಂದ ಹೀಗೊಂದು ಇ-ಮೇಯ್ಲ್ ಬಂದಿತ್ತು:

"kannada sariyaagi ooduva haage maadalu saadhyavillave? Article chennagiddaru odalikke kashtavaagatte. ishtondu jana kannada it veerariddu kannada yaake innu ii sthitilide?"

("ಕನ್ನಡ ಸರಿಯಾಗಿ ಓದುವ ಹಾಗೆ ಮಾಡಲು ಸಾಧ್ಯವಿಲ್ಲವೆ? ಆರ್ಟಿಕಲ್ ಚೆನ್ನಾಗಿದ್ದರೂ ಓದಲಿಕ್ಕೆ ಕಷ್ಟವಾಗತ್ತೆ. ಇಷ್ಟೊಂದು ಜನ ಕನ್ನಡ ಐ ಟಿ ವೀರರಿದ್ದು ಕನ್ನಡ ಯಾಕೆ ಇನ್ನೂ ಈ ಸ್ಥಿತಿಯಲ್ಲಿದೆ?")

ಏನು ಹೇಳುತ್ತೀರಿ ಇಂಥವರಿಗೆ?

ಕನ್ನಡ ಅಕ್ಷರಗಳು ತಮ್ಮ ಕಂಪ್ಯೂಟರಿನಲ್ಲಿ ಸರಿಯಾಗಿ ಕಾಣಲಿಲ್ಲ ಎಂಬುದನ್ನು ಕನ್ನಡದ "ಈ ಸ್ಥಿತಿ" ಮಾಡಿಟ್ಟುಬಿಡುತ್ತಾರೆ. "ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡ"ಬಾರದೇಕೆ? ಇಂಥ ಅಚಾತುರ್ಯ ಏಕೆ?