ಪ್ರದೋಷ
ಖ್ಯಾತ ಪತ್ರಕರ್ತ ದಿ.ರವಿ ಬೆಳಗೆರೆ ಅವರ ಹಿಂದಿನ ಕಾದಂಬರಿಗಳಾದ ‘ಮಾಟಗಾತಿ' ಮತ್ತು ‘ಸರ್ಪ ಸಂಬಂಧ' ಇದರ ಮುಂದುವರಿದ ಭಾಗವೇ ‘ಪ್ರದೋಷ'. ಆದರೆ ದುರದೃಷ್ಟವಷಾತ್ ರವಿ ಬೆಳಗೆರೆ ಅವರ ಅಕಾಲ ನಿಧನದಿಂದಾಗಿ ಈ ಕಾದಂಬರಿಯು ಪೂರ್ಣಗೊಂಡಿಲ್ಲ. ಅಪೂರ್ಣವಾಗಿರುವ ಕಾದಂಬರಿಯನ್ನೇ ಪುಸ್ತಕ ರೂಪದಲ್ಲಿ ನೀಡಿದ್ದಾರೆ.
ರವಿ ಬೆಳಗೆರೆ ಅವರು ತಮ್ಮ ಬೆನ್ನುಡಿಯಲ್ಲಿ “ಅದು ಪ್ರದೋಷ ಕಾಲ! ಭಗವಂತ ಇದ್ದಾನಾ? ಗೊತ್ತಿಲ್ಲ. ಪ್ರೇತಾತ್ಮವಿದೆಯಾ? ತಿಳಿದಿಲ್ಲ. ಹೇಗೆ ಭಗವಂತನ ಸುತ್ತ ಗುಡಿ, ಗೋಪುರ, ಕಳಶ, ಮಂತ್ರ, ಆಚರಣೆಗಳು ಬೆಳೆದುಕೊಂಡಿವೆಯೋ ಹಾಗೆಯೇ ಇನ್ನೊಂದೆಡೆ ವಾಮವಿದ್ಯೆಯೂ ಬೆಳೆದಿದೆ. ಮಾಟ, ಕೈ ಮುಸುಗು, ಮದ್ದು, ವಶೀಕರಣ, ಶವ ಸಾಧನೆ, ಶವ ಭೋಜನ, ಶವ ಮೈಥುನ, ಕಪಾಲ ಭೋಜನ, ಸ್ಮಶಾನ ಜೀವನ -ಹೀಗೆ ನೂರೆಂಟು. ಸುಮಾರು ಇಪ್ಪತ್ತೈದು ವರ್ಷಗಳಿಂದಲೂ ಈ ಬಗ್ಗೆ ಒಂದು ಕುತೂಹಲ ಬೆಳೆಸಿಕೊಂಡು ಬಂದವನು ನಾನು. ಅದೇ ಗುಂಗಿನಲ್ಲಿ ಕೆಲವು ಕಾದಂಬರಿಗಳನ್ನು ಬರೆದೆ. ಮೊದಲನೆಯದು ‘ಮಾಟಗಾತಿ' ಎರಡನೆಯದು ‘ಸರ್ಪ ಸಂಬಂಧ'. ಈಗ ಮೂರನೆಯದು ‘ಪ್ರದೋಷ'. ಈ ಮೂರೂ ಕಾದಂಬರಿಗಳು ಒಂದಕ್ಕೊಂದು ತಳುಕು ಹಾಕಿಕೊಂಡಂತಿವೆ. ಹಾಗಾಗಿ ಇವನ್ನು ಓದುವ ರೋಮಾಂಚನ ನಿಮ್ಮದು,” ಎಂದಿದ್ದಾರೆ.
ರವಿ ಬೆಳಗೆರೆ ಅವರ ಮಾಟಗಾತಿ ಮತ್ತು ಸರ್ಪ ಸಂಬಂಧ ಕಾದಂಬರಿಗಳನ್ನು ಓದಿದವರಿಗೆ ಗೊತ್ತೇ ಇರುವ ಸಂಗತಿ ಎಂದರೆ ಈ ರೀತಿಯ ತಂತ್ರ-ಮಂತ್ರಗಳ ಸಂಗತಿಗಳನ್ನು ಚೆನ್ನಾಗಿ ಬರೆಯುತ್ತಾರೆ ಅಂತ. ಒಮ್ಮೆ ಪುಸ್ತಕ ಓದಲು ಶುರು ಮಾಡಿದ ಅಂದರೆ ಮುಗಿಯುವ ತನಕ ಕೆಳಕ್ಕಿಡಲು ಮನಸ್ಸು ಬಾರದು. ವಾಮಾಚಾರ, ಮಾಟ ಇತ್ಯಾದಿಗಳನ್ನು ಬಹಳ ಸೊಗಸಾಗಿ ವಿವರಿಸುತ್ತಾರೆ. ಈ ಪ್ರದೋಷ ಕೃತಿಯಲ್ಲೂ ಅದರದ್ದೇ ಛಾಯೆ ಇದೆ. ಕತ್ತಲು ಕವಿಯುವ ಸಮಯದಲ್ಲಿ ಅಂದರೆ ಪ್ರದೋಷ ಕಾಲದಲ್ಲಿ ಹುಟ್ಟಿದ ಮಗುವಿದೆ ‘ಪ್ರದೋಷ್' ಎಂದೇ ಹೆಸರಿಡುತ್ತಾರೆ ಆ ಮಗುವಿನ ಅಜ್ಜ. ಆ ನಂತರದ ಘಟನೆಗಳನ್ನು ಓದಿದರೇ ಚೆನ್ನ.
ಈ ಕಾದಂಬರಿಯಲ್ಲಿ ಬರುವ ಒಂದು ಭೀಕರ ವಿಚಿತ್ರ ಪಾತ್ರ ‘ಟಿಂಬಾ’. ಇದರ ವಿವರಗಳನ್ನು ಓದಿದರೇ ನಿಮ್ಮ ಮೈನಿವಿರೇಳುವುದು ಖಂಡಿತ. ರವಿ ಬೆಳಗೆರೆ ಅವರ ಕಲ್ಪನಾ ಶೈಲಿ ಅಷ್ಟೊಂದು ಅದ್ಭುತವಾಗಿದೆ. ಒಮ್ಮೆ ಅವರದ್ದೇ ಮಾತುಗಳಲ್ಲಿ ಓದಿಕೊಳ್ಳಿ ..
“ಯಾವ ಕ್ಷಣದಲ್ಲಿ ಬೇಕಾದರೂ ಹಿಗ್ಗಬಹುದಾದ ಗುಜ್ಜು ಗುಜ್ಜು ದೇಹ ಅದರದು. ಅಂತೆಯೇ, ಮನಸು ಮಾಡಿದರೆ ಅದು ತನ್ನ ದೇಹವನ್ನು ಕುಗ್ಗಿಸಿ ಒಂದು ಹೆಗ್ಗಣ ಗಾತ್ರಕ್ಕೆ ತಂದುಕೊಂಡು ಬಿಡಬಲ್ಲುದು. ಟಿಂಬಾಗೆ ಇರುವುದು ಗುಂಡು ಮುಖ. ಚಿಕ್ಕ ಕಿವಿ, ಅಂಥ ಕತ್ತಲೆಯಲ್ಲೂ ಮಿರ ಮಿರ ಹೊಳೆಯುತ್ತಿದ್ದ ಕೆಂಪು ಕಣ್ಣು, ತರಕು ತರಕಾದ ಕಪ್ಪನೆಯ ನೆತ್ತಿ, ಜೋಲು ಬಿದ್ದ ಮೊಲೆಗಳು. ಗೂಡು ಗೂಡು ಎದೆ. ಬಾಗಿದ ಬೆನ್ನು. ತಲೆ ಮತ್ತು ಎದೆಗಳ ಮಧ್ಯೆ ಹೂತು ಹೋದಂತಿದ್ದ ಕತ್ತು. ಬಾಯಿಯಿಂದ ಹಿಡಿತ ತಪ್ಪಿ ಜಾರಿದಂತಿದ್ದ ಮಂಜು ಬಿಳುಪಿನ ಕೋರೆ ಹಲ್ಲು, ಕಿಟಕಿಯ ಸರಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಮುಂದಿನ ಎರಡು ಕೈಗಳು. ಅವುಗಳ ತುದಿಯಲ್ಲಿದ್ದ ಪುಟ್ಟ ಪುಟ್ಟ ಹಸ್ತ. ಇನ್ನೆರಡು ಕಾಲುಗಳು ಕಿಟಕಿಯ ಕಟ್ಟಿಗೆಯ ಮೇಲೆ ಬೆನ್ನಿಗೆ ಆಧಾರವಾಗಿ ಮಡಚಿ ಕುಳಿತಿದ್ದವು. ಇಡೀ ದೇಹ ಕಪ್ಪಗೆ ಮಿರಿಗುಟ್ಟುತ್ತಿತ್ತು. ಅಲ್ಲಲ್ಲಿ ಅದಕ್ಕೆ ಬಿಳಿಯ ಮಚ್ಚೆಗಳಿದ್ದವು.”
ಇಂತಹ ಒಂದು ಕಲ್ಪನೆ ಮಾಡಿಕೊಳ್ಳುವುದು ಬಹಳ ಕಷ್ಟ. ಆದರೆ ರವಿ ಬೆಳಗೆರೆ ಅವರ ಬರವಣಿಗೆಯ ಶಕ್ತಿಯೇ ಅಪರೂಪದ್ದು. ಅವರ ಸಂಪಾದಕತ್ವದ ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಬರುತ್ತಿದ್ದ ‘ಪ್ರದೋಷ' ಕಾದಂಬರಿಯು ಬೆಳಗೆರೆ ಅವರ ಅಕಾಲ ನಿಧನದ ನಂತರ ನಿಂತೇ ಹೋಗಿತ್ತು. ಈ ಕೃತಿಯಲ್ಲಿ ಇರುವುದು ಅರ್ಧ ಅಪೂರ್ಣ ಕಾದಂಬರಿ ಮಾತ್ರ. ಆದರೆ ಮುಂದೊಂದು ದಿನ ಈ ಧಾರಾವಾಹಿಯನ್ನು ಪೂರ್ಣಗೊಳಿಸುವ ಇಚ್ಛೆ ಇದೆ ಎನ್ನುತ್ತಾರೆ ಅವರ ಮಗಳಾದ ಭಾವನಾ ಬೆಳಗೆರೆ. ೧೧೦ ಪುಟಗಳ ಈ ಕೃತಿಯನ್ನು ರವಿ ಬೆಳಗೆರೆ ಅವರು ಖ್ಯಾತ ಸಾಹಿತಿ ದಿ.ಸತ್ಯಕಾಮರಿಗೆ ಅರ್ಪಣೆ ಮಾಡಿದ್ದಾರೆ.