ಪ್ರಧಾನಿ ಮೊರಾರ್ಜಿ ದೇಸಾಯಿಯ ಕಿರುಕುಳಗಳು (ಓಷೋ ರಜನೀಶ್ ಅನುಭವಗಳು)

ಪ್ರಧಾನಿ ಮೊರಾರ್ಜಿ ದೇಸಾಯಿಯ ಕಿರುಕುಳಗಳು (ಓಷೋ ರಜನೀಶ್ ಅನುಭವಗಳು)



ಮೊರಾರ್ಜಿ ದೇಸಾಯಿ ಆಗಸ್ಟ್ ೧೯೭೭ ರಿಂದ ಜನವರಿ ೧೯೮೦ರ ವರೆಗೆ ದೇಶದ ಪ್ರಧಾನಿಯಾಗಿದ್ದರು. ನನ್ನ ಬಗ್ಗೆ ಅವರಿಗೆ ಅಪಾರವಾದ ಸಿಟ್ಟಿತ್ತಾದರೂ ಅದಕ್ಕೂ ಮುನ್ನ ಅವರ ಕೈಲಿ ಏನೂ ಮಾಡಲಾಗುತ್ತಿರಲಿಲ್ಲ. ಒಮ್ಮೆ ಪ್ರಧಾನಿಯಾದ ಮೇಲೆ ಒಂದೇ ಸಮನೆ ನನಗೆ ಕಿರುಕುಳ ನೀಡಲಾರಂಭಿಸಿದರು. ಮೊರಾರ್ಜಿ ದೇಸಾಯಿ ನನ್ನನ್ನು ದ್ವೇಷಿಸಲು ಇನ್ನೇನೂ ಕಾರಣವಿರಲಿಲ್ಲ. ಆತ “ನಾನು ಗಾಂಧೀ ಪರಮ ವೈರಿ ಹಾಗು ತಾನು ಗಾಂಧಿಯ ನಿಜವಾದ ಉತ್ತರಾಧಿಕಾರಿ” ಎಂಬ ಭ್ರಮೆ ಇರಿಸಿಕೊಂಡಿದ್ದರು. ಈ ತಪ್ಪು ಕಲ್ಪನೆಗಳೇ ನಮ್ಮ ವೈರಕ್ಕೆ ಕಾರಣ. ಅವರು ನನ್ನನ್ನು ದ್ವೇಷಿಸುವ ಮೂಲಕ ತಾನು ’ಮಹಾತ್ಮಾ ಮೊರಾರ್ಜಿ ದೇಸಾಯಿ’ ಎಂದು ಕರೆಸಿಕೊಳ್ಳಬಹುದು ಎಂದು ಭಾವಿಸಿದ್ದರೇನೋ! ಅಕ್ಟೋಬರ್ ೧೩ರಂದು ಗುಜರಾತ್‌ನ ’ನವಭಾರತ್ ಟೈಮ್ಸ್’ ಪತ್ರಿಕೆ “ರಜನೀಶರ ಸಂಭೋಗದಿಂದ ಸಮಾಧಿಯೆಡೆಗೆ ಪುಸ್ತಕವನ್ನು ಓದಿದೆ. ಅದರಲ್ಲೇನೂ ಇಲ್ಲ. ಶುದ್ಧ ಅಸಭ್ಯ, ಅಭಿರುಚಿಹೀನ ಪುಸ್ತಕವದು ಎಂದು ಪ್ರಧಾನಿ ಮೊರಾರ್ಜಿ ದೇಸಾಯಿ ಅಭಿಪ್ರಾಯ ಪಟ್ಟರು” ಎಂದು ಪ್ರಕಟಿಸಿತ್ತು. ಯೋಗ, ವೇದಾಂತ, ಉಪನಿಷತ್, ಸೂಫಿ, ಗೀತೆ ಹೀಗೆ ಆಧ್ಯಾತ್ಮಕ್ಕೆ ಸಂಬಂಧಿಸಿದ ನನ್ನ ಸುಮಾರು ೪೦೦ಕ್ಕೂ ಅಧಿಕ ಪುಸ್ತಕಗಳು ಪ್ರಕಟವಾಗಿರಬೇಕಾದರೆ ಇವರು ಕಾಮದ ಗ್ರಂಥವನ್ನೇ ಏಕೆ ಆರಿಸಿಕೊಂಡರೋ ಅರ್ಥವಾಗಲಿಲ್ಲ. ಬ್ರಹ್ಮಚರ್ಯದ ಹೆಸರಿನಲ್ಲಿ ತನ್ನ ಸಹಜಕಾಮವನ್ನು ನಿಗ್ರಹಿಸಿ ಮನಸ್ಸನ್ನು ವಿಕೃತಗೊಳಿಸಿಕೊಂಡಿದ್ದ ವ್ಯಕ್ತಿ ಆತ. ಆಸ್ಟ್ರೇಲಿಯನ್ ಟೀವಿ, ಬಿಬಿಸಿ ಮೊದಲಾದ ವಿದೇಶೀ ಚಾನೆಲ್‌ಗಳು ನಮ್ಮ ಆಶ್ರಮದ ಕುರಿತು ಸಾಕ್ಷ್ಯಚಿತ್ರವನ್ನು ತೆಗೆಯಲು ಬಂದಿದ್ದವು.  ಆದರೆ ಆತ ಯಾರಿಗೂ ಪ್ರವೇಶಿಸಲು ಅವಕಾಶ ನೀಡದೇ ಹಿಂದಕ್ಕೆ ಕಳುಹಿಸಿದ. ಇದನ್ನು ಪ್ರಜಾಪ್ರಭುತ್ವ ರಾಷ್ಟ್ರ ಎನ್ನಬೇಕೇ?

ಹೊರಗೆ ತಾನು ಸಮಾಜವಾದಿ ಎಂದು ಹೇಳಿಕೊಳ್ಳುತ್ತಿದ್ದರೂ ಆತ ಒಳಗೆ ಮಹಾ ಫ್ಯಾಸಿಸ್ಟ್ ಧೋರಣೆಯವನಾಗಿದ್ದ. ನನ್ನ ಹಾಗು ಮೊರಾರ್ಜಿ ದೇಸಾಯಿಯ ನಡುವೆ ವೈಮನಸ್ಯ ಉಂಟಾದ ಸಂದರ್ಭವೂ ತುಂಬ ಕುತೂಹಲಕರವಾದದ್ದು: ರಾಷ್ಟ್ರಮಟ್ಟದ ಖ್ಯಾತಿ ಹೊಂದಿದ್ದ ಆಚಾರ್ಯ ತುಳಸೀ ಒಮ್ಮೆ ಒಂದು ದೊಡ್ಡ ಸಮಾರಂಭವನ್ನು ಏರ್ಪಡಿಸಿ ೨೦ ಮಂದಿ ಗಣ್ಯರನ್ನು ವಿಶೇಷವಾಗಿ ಆಹ್ವಾನಿಸಿದ್ದರು. ಒಂದು ಲಕ್ಷ ಜನ ನೆರೆದಿದ್ದ ಸಭೆ ಅದು. ಅಂದಿನ ಹಣಕಾಸು ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಸಹ ಆಹ್ವಾನಿತರಲ್ಲಿ ಒಬ್ಬರು. ಇಪ್ಪತ್ತು ಮಂದಿಗೆ ವೇದಿಕೆಯಲ್ಲಿ ನೆಲದ ಮೇಲೆ ಕೂರುವ ವ್ಯವಸ್ಥೆ ಮಾಡಲಾಗಿತ್ತು ಮತ್ತು ಆಚಾರ್ಯ ತುಳಸಿ ಎಲ್ಲರಿಗಿಂತ ಎತ್ತರವಾದ ಪೀಠದಲ್ಲಿ ಕುಳಿತಿದ್ದರು. ಆ ಸಭೆಯಲ್ಲಿ ದೇಶದ ಜ್ವಲಂತ ಸಮಸ್ಯೆಗಳ ಕುರಿತ ಚರ್ಚೆ ನಡೆಯುತ್ತಿತ್ತು. ಉದ್ಘಾಟನಾ ಸಮಾರಂಭದ ನಂತರ ಬಂದ ಮೊರಾರ್ಜಿ ದೇಸಾಯಿ ತುಂಬ ಅಸಮಾಧಾನದಿಂದ “ನನ್ನ ಎರಡು ಪ್ರಶ್ನೆಗಳಿಗೆ ಉತ್ತರ ಸಿಗುವವರೆಗೂ ಈ ಚರ್ಚೆ ಮುಂದುವರೆಯುವಂತಿಲ್ಲ” ಎಂದು ಅಪ್ಪಣೆ ಮಾಡಿದರು. “ಮೊದಲನೆಯದು, ನಾನು ವೇದಿಕೆಯನ್ನೇರಿ ಆಚಾರ್ಯ ತುಳಸಿಯವರಿಗೆ ನಮಸ್ಕರಿಸಿದಾಗ ಅವರು ಪ್ರತಿಯಾಗಿ ಶಿಷ್ಟಾಚಾರಕ್ಕಾದರೂ ನಮಸ್ಕಾರ ಮಾಡದೆ ಕೈಯೆತ್ತಿ ಆಶೀರ್ವದಿಸುವುದೇ? ಇದು ನಿಜಕ್ಕೂ ಅವಮಾನ. ಇನ್ನು ಎರಡನೆಯದು, ಅತಿಥಿಗಳಾದ ನಮ್ಮನ್ನು ಕೆಳಗೆ ಕುಳ್ಳರಿಸಿ ಆತಿಥೇಯರಾದ ಅವರು ಮೇಲಿನ ಪೀಠದಲ್ಲಿ ಕೂರುವುದು ಸರಿಯಲ್ಲ” ಎಂದರು. ಈ ಎರಡೂ ಪ್ರಶ್ನೆಗಳಿಗೆ ಆಚಾರ್ಯ ತುಳಸಿಯಲ್ಲಿ ಸಮಾಧಾನ ಇರಲಿಲ್ಲ. ಮೊರಾರ್ಜಿ ದೇಸಾಯಿಗೆ ಬೇಸರವಾಗದ ಹಾಗೆ ಏನು ಮಾಡಬೇಕು ಎಂದು ಯೋಚಿಸುತ್ತ ತಬ್ಬಿಬ್ಬಾಗಿ ಕುಳಿತಿದ್ದರು ಆಗ ನಾನು “ಆಚಾರ್ಯರು ಅಪ್ಪಣೆಯಿತ್ತರೆ ಮೊರಾರ್ಜಿಯವರ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಮೊರಾರ್ಜಿಯವರು ಪ್ರಶ್ನೆ ಕೇಳದಿದ್ದರೂ ಉತ್ತರಿಸುವ ಧಾರ್ಷ್ಟ್ಯ ತೋರಿಸುತ್ತಿದ್ದೇನೆ ಎಂದು ಭಾವಿಸಬಾರದು” ಎಂದು ಹೇಳಿದೆ. ಮೊರಾರ್ಜಿಯವರು ನನ್ನತ್ತ ನೋಡಿ “ನನಗೆ ಉತ್ತರ ಬೇಕು, ಯಾರು ನೀಡುತ್ತಾರೆ ಎನ್ನುವುದು ನನಗೆ ಮುಖ್ಯವಲ್ಲ” ಎಂದರು. “ಮೊದಲಿಗೆ, ಇಪ್ಪತ್ತು ಜನ ಅತಿಥಿಗಳಲ್ಲಿ ಯಾರಿಗೂ ಈ ಕೂರುವ ವ್ಯವಸ್ಥೆಯಲ್ಲಿ ಸಮಸ್ಯೆ ಕಾಣಿಸದೇ ನಿಮಗೆ ಮಾತ್ರವೇ ಕಾಣಿಸುವುದೆಂದರೆ ನೀವು ತುಂಬ ದುರಭಿಮಾನಿಯೇ ಆಗಿರಬೇಕು. ಅಂಥವರಿಗೇ ಈ ತರಹದ ಸಮಸ್ಯೆಗಳು ಉಂಟಾಗುವುದು. ಯಾರು ಎಷ್ಟು ಎತ್ತರದಲ್ಲಿ ಕುಳಿತರೂ ನಮಗೇಕೆ ಬಾಧೆಯಾಗಬೇಕು? ಆಚಾರ್ಯ ತುಳಸಿಯವರು ಮೇಲಿನ ಪೀಠದಲ್ಲಲ್ಲ, ಮೇಲ್ಛಾವಣಿಗೇ ನೇತುಹಾಕಿಕೊಂಡು ಕೂರಲಿ ಬಿಡಿ, ನಿಮಗೇನು? ಮೇಲ್ಛಾವಣಿಯಲ್ಲಿ ಜೇಡರ ಬಲೆಗಳಿವೆ. ಎತ್ತರದ ಲೆಕ್ಕದಲ್ಲಿ ನೋಡುವುದಾದರೆ ಆ ಜೇಡರ ಹುಳುಗಳು ಆಚಾರ್ಯ ತುಳಸಿಯವರಿಗಿಂತ ಮಹಾನ್ ಸಂತರುಗಳಾಗಿವೆ. ಇನ್ನು ಆಚಾರ್ಯ ತುಳಸಿಯವರ ವಿಷಯಕ್ಕೆ ಬರುವುದಾದರೆ ಈ ಸಮಸ್ಯೆ ಹುಟ್ಟಿದ ಮರುಕ್ಷಣವೇ ಅವರು ಕೈಮುಗಿದು ಕೆಳಗೆ ಇಳಿದುಬಿಟ್ಟಿದ್ದರೆ ಅಲ್ಲಿಗೆ ಕಥೆ ಮುಗಿಯುತ್ತಿತ್ತು. ಇಬ್ಬರು ದುರಹಂಕಾರಿಗಳ ಸಮಸ್ಯೆಯನ್ನು ವೇದಿಕೆಯ ಮೇಲೆ ಇಡೀ ಸಮೂಹದ ಸಮಸ್ಯೆಯಂತೆ ಬಿಂಬಿಸುವುದು ಮೂರ್ಖತನ, ಇಪ್ಪತ್ತು ಜನರಲ್ಲಿ ಈ ಇಬ್ಬರನ್ನು ಪಕ್ಕಕ್ಕಿರಿಸಿ ಉಳಿದ ಹದಿನೆಂಟು ಜನ ಸೇರಿ ಸಭೆಯನ್ನು ಮುಂದುವರೆಸುವುದೇ ಸೂಕ್ತ” ಎಂದು ಹೇಳಿ ಕುಳಿತೆ. ನನ್ನಿಂದ ಇಂಥ ಉತ್ತರವನ್ನು ಮೊರಾರ್ಜಿ ನಿರೀಕ್ಷಿಸಿರಲಿಲ್ಲ. ಅಂದಿನಿಂದ ನನ್ನ ಅವರ ನಡುವೆ ವೈರತ್ವ ಹುಟ್ಟಿಕೊಂಡಿತು. ಹಾಗೆಯೇ ಆಚಾರ್ಯ ತುಳಸಿಯೂ ಅಂದಿನಿಂದ ನನ್ನನ್ನು ಶತ್ರುವಿನಂತೆ ಕಾಣಲಾರಂಭಿಸಿದರು. ಯಾರಿಗೂ ಹೆದರದೇ ಸತ್ಯ ಹೇಳುವುದನ್ನು ರೂಢಿಸಿಕೊಂಡರೆ ಸುಲಭವಾಗಿ ಶತ್ರುಗಳನ್ನು ಸಂಪಾದಿಸಿಕೊಳ್ಳಬಹುದು ಎನಿಸುತ್ತದೆ. ಈಗಲೂ ಸಹ ನನಗೇನೂ ಅವರಿಬ್ಬರ ಬಗ್ಗೆ ಖಂಡಿತ ದ್ವೇಷವಿಲ್ಲ. ಆ ಇಬ್ಬರು ರೋಗಗ್ರಸ್ಥರನ್ನು ನೋಡಿದರೆ ವ್ಯಥೆಯಾಗುತ್ತದೆ. ಅವರಿಗೆ ಸರಳವಾದ ವಿಷಯಗಳನ್ನೂ ಅರ್ಥಮಾಡಿಕೊಳ್ಳುವಷ್ಟು ತಿಳುವಳಿಕೆ ಇರಲಿಲ್ಲ.

ನೆಹರೂ ಹಾಗು ವಲ್ಲಭಭಾಯಿ ಪಟೇಲರ ನಡುವೆ ಒಂದು ನಿರಂತರವಾದ ತಿಕ್ಕಾಟವಿತ್ತು. ಒಂದು ವೇಳೆ ಮತದಾನ ನಡೆದಿದ್ದರೆ ವಲ್ಲಭಭಾಯಿ ಪಟೇಲರಿಗೇ ಸ್ಪಷ್ಟ ಬಹುಮತ ಸಿಗುತ್ತಿತ್ತು. ಆತ ಒಬ್ಬ ಹುಟ್ಟು ರಾಜಕಾರಿಣಿ. ಆದರೆ ಗಾಂಧಿ ವಲ್ಲಭಭಾಯಿಯವರನ್ನು ಸುಮ್ಮನಾಗಿಸಲು ’ಉಪಪ್ರಧಾನ ಮಂತ್ರಿ’ ಎಂಬ ಹೊಸ ಹುದ್ದೆಯನ್ನು ಸೃಷ್ಟಿಸುವ ಸಲಹೆ ನೀಡಿದರು. ಯಾವುದೇ ಸಾಂವಿಧಾನಿಕ ತಿದ್ದುಪಡಿ ಇಲ್ಲದೇ ಹೊಸ ಹುದ್ದೆಯನ್ನು ಸೃಷ್ಟಿಸಲಾಯಿತು. ನೆಹರೂ ಹಾಗು ವಲ್ಲಭಭಾಯಿ ಸತ್ತ ಮೇಲೆ ’ಉಪಪ್ರಧಾನಿ’ ಹುದ್ದೆಯೂ ಇಲ್ಲವಾಯಿತಾದರೂ ಮುಂದೆ ನೆಹರೂ ಪುತ್ರಿ ಇಂದಿರಾ ಹಾಗು ಪಟೇಲರ ರಾಜಕೀಯ ಸಂತಾನ ಮುರಾರ್ಜಿ ದೇಸಾಯಿಯವರ ಕಾಲದಲ್ಲಿ ಆ ಹುದ್ದೆಯನ್ನು ಮತ್ತೆ ಸೃಷ್ಟಿಕೊಳ್ಳಲಾಯಿತು. ಒಮ್ಮೆ ಇಂದಿರಾ ಗಾಂಧಿ ಮೊರಾರ್ಜಿಯ ರಾಜಕೀಯ ಕುತಂತ್ರಗಳನ್ನು ನನ್ನ ಬಳಿ ಹೇಳಿಕೊಳ್ಳುತ್ತಿದ್ದಾಗ “ಮೊರಾರ್ಜಿಯನ್ನು ಸಂಪುಟದಿಂದ ಹೊರಹಾಕಿದರೆ ಅವರ ಬೆಂಬಲಿಗರೆಲ್ಲ ಸುಲಭವಾಗಿ ಹತೋಟಿಗೆ ಬರುತ್ತಾರೆ” ಎಂದು ಸಲಹೆ ನೀಡಿದ್ದೆ. ಹಾಗೆ ಸೂಚಿಸಿದ ಎಂಟೇ ದಿನಗಳಲ್ಲಿ ಮೊರಾರ್ಜಿಯನ್ನು ಸಂಪುಟದಿಂದ ಕೈಬಿಡಲಾಯಿತು. ಆಗ ಮೊರಾರ್ಜಿ ದೇಸಾಯಿ ನನ್ನ ಬಳಿ ಓಡಿಬಂದರು “ಒಂದು ವಿವರಣೆಯನ್ನಾಗಲಿ, ಮುನ್ಸೂಚನೆಯನ್ನಾಗಲಿ ನೀಡದೇ ನನ್ನನ್ನು ಹೀಗೆ ಸಂಪುಟದಿಂದ ಹೊರಹಾಕಿದ್ದಾರೆ” ಎಂದು ತಮ್ಮ ಅಳಲನ್ನು ತೋಡಿಕೊಂಡದ್ದಲ್ಲದೆ ನನ್ನ ನೆರವನ್ನು ಬೇಡಿದರು. ಆಗ ನಾನು “ನನ್ನಿಂದ ಯಾವ ಪ್ರಯೋಜನವೂ ಆಗದು. ನಾನು ಮುಳುಗಿಹೋಗುತ್ತಿದ್ದೇನೆ ಎಂದು ಕೂಗಿಕೊಳ್ಳುತ್ತಿರುವವರಿಗೆ ’ಮುಳುಗುವವರು ಸದ್ದಿಲ್ಲದೇ ಮುಳುಗಬೇಕು’ ಎಂದು ಉಪದೇಶಿಸುವವನು ನಾನು” ಎಂದೆ. ಆಗ ಅವರು “ಏನು ತಮಾಷೆ ಮಾಡುತ್ತಿರುವಿರೇ?” ಎಂದು ಕೇಳಿದರು. “ರಾಜಕಾರಿಣಿಗಳೊಂದಿಗೆ ನಾನೆಂದೂ ತಮಾಷೆ ವ್ಯವಹಾರ ಇಟ್ಟುಕೊಳ್ಳುವವನಲ್ಲ” ಎಂದು ಹೇಳಿದ್ದೆ. ಮುಂದೆ ತನ್ನ ಸ್ಥಿತಿಗೆ ನನ್ನ ಸಲಹೆಯೇ ಕಾರಣ ಎಂದು ಮೊರಾರ್ಜಿ ದೇಸಾಯಿಗೆ ಆಮೇಲೆ ಇಂದಿರಾ ಗಾಂಧಿಯವರ ಆಪ್ತ ಕಾರ್ಯದರ್ಶಿಯಿಂದ ತಿಳಿಯಿತು. ಇದು ನಮ್ಮಿಬ್ಬರ ವೈರ ಇಮ್ಮಡಿಗೊಳ್ಳಲು ಕಾರಣವಾಯಿತು. ನಾನು ಗಾಂಧಿಯನ್ನು ಟೀಕಿಸುತ್ತಿದ್ದ ಸಮಯದಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಈತ ನನ್ನನ್ನು ಗುಜರಾತಿನಿಂದ ಬಹಿಷ್ಕರಿಸಿ ಆದೇಶ ಹೊರಡಿಸಿದ್ದ.

೭೦ರ ದಶಕದ ಆರಂಭದಲ್ಲಿ ನನ್ನ ಆಶ್ರಮವನ್ನು ಪೂನಾದಿಂದ ಗುಜರಾತ್‌ನ ಕಚ್‌ಗೆ ಸ್ಥಳಾಂತರಿಸಲು ನಿರ್ಧರಿಸಿದ್ದೆವು. ಆದರೆ ರಾಜಕಾರಿಣಿಗಳ ಕುತಂತ್ರದಿಂದ, ಮುಖ್ಯವಾಗಿ ಮೊರಾರ್ಜಿ ದೇಸಾಯಿಯಿಂದ, ಅದು ಸಾಧ್ಯವಾಗಲಿಲ್ಲ. ಒಂದು ದೊಡ್ಡ ದೇಶದ ಪ್ರಧಾನ ಮಂತ್ರಿಯಾದವನು ನಾನು ಮತ್ತು ನನ್ನ ಜನ ಎಲ್ಲಿ ಹೋಗುತ್ತೇವೆ, ಏನು ಮಾಡುತ್ತೇವೆ ಎಂಬ ವಿಷಯಗಳಲ್ಲೆಲ್ಲ ಹೀಗೆ ಆಸಕ್ತಿ ವಹಿಸುವುದೇ? ನಾವೇನು ಇವರೊಂದಿಗೆ ರಾಜಕೀಯ ಹಣಾಹಣಿ ಮಾಡಲು ಹೊರಟಿದ್ದೆವೇ? ನಾವು ಇವರ ಕ್ಷುಲ್ಲಕ ರಾಜಕೀಯಕ್ಕೆ ಮೂರು ಕಾಸಿನ ಬೆಲೆ ಕೊಡುತ್ತಿಲ್ಲ ಎಂಬ ಕಾರಣದಿಂದ ಇವರೆಲ್ಲ ನಮ್ಮ ಮೇಲೆ ಹಗೆ ಸಾಧಿಸುತ್ತಿದ್ದರು. ನನಗೆ ತೊಂದರೆ ನೀಡಿ ತಾವು ಗೆದ್ದೆವು ಎಂದು ಸಂಭ್ರಮಿಸುವ ಇವರಿಗೆ ತೊಂದರೆ ಕೊಟ್ಟಷ್ಟೂ ನನ್ನ ಪ್ರಭಾವ ಇನ್ನೂ ಹೆಚ್ಚು ಪಸರಿಸುತ್ತದೆ ಎಂದು ತಿಳಿಯಲಿಲ್ಲ. ಸತ್ಯವನ್ನು ತಾತ್ಕಾಲಿಕವಾಗಿ ಮುಚ್ಚಿಡಬಹುದೇ ವಿನಃ ಇಲ್ಲವಾಗಿಸಲಾಗದು. ನಾವು ಕಾನೂನುಬದ್ಧವಾಗಿ ಆಶ್ರಮವನ್ನು ಸ್ಥಾಪಿಸಿಕೊಳ್ಳಲು ಸಂವಿಧಾನದಲ್ಲಿ ಯಾವುದೇ ತೊಡಕುಗಳಿರಲಿಲ್ಲ. ಆದರೆ ಸಂವಿಧಾನವನ್ನು ರಕ್ಷಿಸುವವರು ತಾವು ಸಂವಿಧಾನಕ್ಕೆ ಅತೀತರು ಎಂದು ಭಾವಿಸುತ್ತಾರೆ. ಹಿಂದೆ ಮೊರಾರ್ಜಿ ದೇಸಾಯಿ ಡೆಪ್ಯುಟಿ ಕಲೆಕ್ಟರ್ ಆಗಿದ್ದರು. ಆಮೇಲೆ ಪ್ರಧಾನಿಯಾದರೂ ಅವರ ಡೆಪ್ಯುಟಿ ಕಲೆಕ್ಟರ್‌ನ ಬುದ್ಧಿ ಮಾತ್ರ ಹೋಗಲಿಲ್ಲ. ನನ್ನ ವಿರುದ್ಧ ಯಾವ ಕಾನೂನಿನ ಕ್ರಮವನ್ನೂ ಜರುಗಿಸಲಾಗದೆಂದು ತಿಳಿದ ಮೇಲೆ ನನಗೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲೂ ಅವರು ವಿಳಂಬ ನೀತಿಯನ್ನು ಅನುಸರಿಸಲಾರಂಭಿಸಿದರು. ಕಚ್ಛ್‌ನ ಮಹಾರಾಜರು ನನಗೆ ೪೦೦ ಎಕರೆ ಭೂಮಿಯನ್ನು ದಾನ ಮಾಡಿದರು. ಅದೊಂದು ಮರುಭೂಮಿ, ಕೃಷಿಭೂಮಿಯೇನಲ್ಲ, ಅದಕ್ಕೇ ಅದನ್ನು ಸುಲಭವಾಗಿ ನನಗೆ ಬಳುವಳಿ ನೀಡಿದರು. ಆದರೆ ಒಂದೂವರೆ ವರ್ಷಗಳು ಕಳೆದರೂ ಅದರ ಕಾಗದ ಪತ್ರಗಳು ನಮ್ಮ ಕೈಸೇರಲಿಲ್ಲ, ಅದಕ್ಕಾಗಿ ಒಂದೇಸಮನೆ ಅಲೆದಾಡಿಸಿದರು.

ಕೊನೆಗೆ ಕಛ್ಛ್‌ನಲ್ಲಿ ಆಶ್ರಮವನ್ನು ಸ್ಥಾಪಿಸುವ ಯೋಜನೆಯನ್ನೇ ಕೈಬಿಟ್ಟು ಪೂನಾಗೆ ೧೫ ಮೈಲಿ ದೂರದಲ್ಲಿದ್ದ ಸಾಸವಡಾ ಎಂಬಲ್ಲಿ ೭೫೦ ಎಕರೆ ಭೂಮಿಯನ್ನು ಖರೀದಿಸಿದೆವು. ಇಲ್ಲಿಯೂ ಸರ್ಕಾರಗಳು ವಿಳಂಬನೀತಿಯನ್ನು ಅನುಸರಿಸಿದವು. ಅದು ವಾಸಯೋಗ್ಯ ವಾತಾವರಣ ಎಂದು ಖಾತ್ರಿಯಾಗಲು ವೈದ್ಯಕೀಯ ಪ್ರಮಾಣ ಪತ್ರ ಬೇಕು, ಅಂತರ್ಜಲ ಕುಡಿಯಲು ಯೋಗ್ಯವೇ ಎಂಬ ಕುರಿತ ಪ್ರಮಾಣ ಪತ್ರ ಬೇಕು, ನಮ್ಮ ಫೈಲುಗಳಲ್ಲಿ ಅದು ಕೃಷಿ ಭೂಮಿ ಎಂದು ನಮೂದಾಗಿದೆ ಹಾಗಾಗಿ ಮಂಜೂರು ಮಾಡಲಾಗದು, ಮಂಜೂರಾತಿಗೆ ನಿಮ್ಮಿಂದ ಮನವಿ ಪತ್ರ ಬೇಕು, ಹೀಗೆ ಹೇಳುತ್ತ ಒಂದೊಂದಕ್ಕೂ ವರ್ಷಾನುಗಟ್ಟಲೆ ನಮ್ಮನ್ನು ಅಲೆದಾಡಿಸಿದರು. ಎಲ್ಲ ಅಧಿಕಾರಿಗಳಿಗೂ ವಿಳಂಬ ಧೋರಣೆಯನ್ನು ಅನುಸರಿಸಿ ಎಂದು ಮೇಲಿನಿಂದ ಸೂಚನೆ ಬಂದಿತ್ತಂತೆ. ಆದ್ದರಿಂದ ಪ್ರತಿಯೊಬ್ಬ ಅಧಿಕಾರಿಯೂ “ಇದು ನಮ್ಮಿಂದ ಮಂಜೂರಾಗದು ಮೇಲಿನ ಅಧಿಕಾರಿಗೆ ಸಂಬಂಧಿಸಿದ್ದು” ಎಂದು ಹೇಳಿ ಫೈಲನ್ನು ಮುಂದಿನ ಮೇಜುಗಳಿಗೆ ವರ್ಗಾಯಿಸುತ್ತ ಕೊನೆಗೆ ನಮ್ಮನ್ನು ಮಹಾರಾಷ್ಟ್ರದ ಕಂದಾಯ ಮಂತ್ರಿಗಳ ಮುಂದೆ ನಿಲ್ಲಿಸಿದರು. ಆ ಮಂತ್ರಿ “ನಿಮ್ಮ ಗುರು ತುಂಬ ವಿವಾದಾತ್ಮಕ ವ್ಯಕ್ತಿ, ಅಂಥವರ ವಿಷಯದಲ್ಲಿ ಕೇಂದ್ರ ಸರ್ಕಾರದೊಂದಿಗೆ ಮಾತನಾಡದೇ ನಮ್ಮ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ” ಎಂದರಂತೆ. ನೇರವಾಗಿ ಮಂಜೂರು ಮಾಡಲಾಗದು ಎಂದು ಹೇಳುವಂತಿಲ್ಲ. ಏಕೆಂದರೆ ಆಗ ನಾವು ಸುಲಭವಾಗಿ ನ್ಯಾಯಾಲಯದ ಮೊರೆ ಹೋಗಬಹುದಿತ್ತು. ಅಷ್ಟೇ ಅಲ್ಲ, ಪೂನಾದಲ್ಲಿದ್ದಷ್ಟೂ ದಿನ ನಾನು ವಾಸಿಸುತ್ತಿದ್ದ ಆಶ್ರಮದ ಕಾಗದ ಪತ್ರಗಳು, ಖಾತೆ, ಇತ್ಯಾದಿ ಯಾವ ದಾಖಲೆಗಳೂ ನಮ್ಮ ಬಳಿ ಇರಲೇ ಇಲ್ಲ. ಎಲ್ಲವೂ ಇಲಾಖೆಯ ಕಛೇರಿಗಳಲ್ಲಿ ನೆನೆಗುದಿಗೆ ಬಿದ್ದಿದ್ದವು. ನಾವು ಮುರಾರ್ಜಿ ದೇಸಾಯಿಯ ಮೇಲೆ ಯಾವ ಕೇಸನ್ನೂ ಹಾಕುವಂತಿರಲಿಲ್ಲ ಏಕೆಂದರೆ ಕಾನೂನು ಬದ್ಧವಾಗಿಯೇ ಅವರು ಕಿರುಕುಳ ಕೊಡುತ್ತಿದ್ದರು. ಜಾಣ ಫ್ಯಾಸಿಸ್ಟರಂತೆ ವರ್ತಿಸುತ್ತಿದ್ದರು. ನನಗೇನೂ ದೇಶವನ್ನು ಬಿಟ್ಟು ಹೋಗುವ ಯೋಚನೆ ಇರಲಿಲ್ಲ. ಆದರೆ ದೇಶಬಿಟ್ಟು ಹೋಗುವಂತೆ ಇವರು ಒತ್ತಡ ಹೇರಿದರು.

ಮಹಾರಾಷ್ಟ್ರ ಸರ್ಕಾರವು ಆಶ್ರಮದ ರೀತಿ ನೀತಿಗಳನ್ನು ಪರಿಶೀಲಿಸಲು ಐಎಎಸ್ ದರ್ಜೆಯ ಅಧಿಕಾರಿಯೊಬ್ಬನನ್ನು ಆಶ್ರಮಕ್ಕೆ ಕಳಿಸಿತ್ತು. ನನ್ನ ಕಾರ್ಯದರ್ಶಿಯೂ ಸನ್ಯಾಸಿನಿಯೂ ಆಗಿದ್ದ ಶೀಲಾ ಆಶ್ರಮದ ಪ್ರತಿಯೊಂದು ಮೂಲೆಗೂ ಕರೆದುಕೊಂಡು ಹೋಗಿ ಅವನಿಗೆ ಎಲ್ಲವನ್ನೂ ವಿವರಿಸುತ್ತಿದ್ದಳು. ಆತ ಒಂದು ಏಕಾಂತದ ಮೂಲೆಯಲ್ಲಿ ಯಾರೂ ಇಲ್ಲದುದನ್ನು ಕಂಡು ಶೀಲಾಳೊಂದಿಗೆ ಅಸಭ್ಯವಾಗಿ ವರ್ತಿಸಲು ಮುಂದಾದನಂತೆ. ಶೀಲಾ ಅವನೊಡನೆ ಸಹಕರಿಸದುದಕ್ಕೆ ಆಶ್ರಮದ ಬಗ್ಗೆ ತಪ್ಪು ವರದಿಗಳನ್ನು ನೀಡಿದನಲ್ಲದೆ ಸಾಸವಾಡಾದ ಭೂಮಿಯನ್ನು ಮಂಜೂರು ಮಾಡಕೂಡದೆಂದು ತನ್ನ ವರದಿಯಲ್ಲಿ ದಾಖಲಿಸಿನಂತೆ. ಮೊರಾರ್ಜಿ ದೇಸಾಯಿ ದಿನಕ್ಕೆ ಮೂರು ಸಲ ಮಹಾರಾಷ್ಟ್ರದ ಮುಖ್ಯಮಂತ್ರಿಗೆ ಫೋನ್ ಮಾಡಿ ನನ್ನ ಆಶ್ರಮದ ಬಗ್ಗೆ ವಿಚಾರಿಸುತ್ತಿದ್ದರಂತೆ. “ರಜನೀಶನ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಬೇಕು, ಅವನ ಆಶ್ರಮವನ್ನು  ಹೇಗಾದರೂ ನಾಶಪಡಿಸಬೇಕು, ಒಂದಲ್ಲ ಒಂದು ಕಾನೂನಿನ ತೊಡಕುಗಳನ್ನು ಸೃಷ್ಟಿಸುತ್ತಿರಿ” ಎಂದು ಸಲಹೆ ನೀಡುತ್ತಿದ್ದರಂತೆ. ಇದನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯೇ ಖುದ್ದಾಗಿ ನನಗೆ ಹೇಳಿದ್ದರು. ಮುಖ್ಯಮಂತ್ರಿಗೆ ನನ್ನನ್ನು ಬೇರೆಡೆ ಕಳಿಸಲು ಇಷ್ಟವಿರಲಿಲ್ಲ. ಏಕೆಂದರೆ ನನ್ನ ಆಶ್ರಮದಿಂದ ಪ್ರವಾಸೋದ್ಯಮ ಇಲಾಖೆಗೆ ಕೋಟ್ಯಂತರ ರೂಪಾಯಿಗಳ ಆದಾಯ ಬರುತ್ತಿತ್ತು. ನಮ್ಮ ಆಶ್ರಮಕ್ಕೆ ಕಂದಾಯ ನಿಯಮದ ಅಡಿಯಲ್ಲಿ ನೀಡಲಾಗಿದ್ದ ಧಾರ್ಮಿಕ ದತ್ತಿ ತೆರಿಗೆ ವಿನಾಯಿತಿ (೮೦ಜಿ) ಸೌಲಭ್ಯವನ್ನು ಒಮ್ಮೆಲೆ ಹಿಂದೆಗೆದುಕೊಂಡು ಆಶ್ರಮದಿಂದ ಸರ್ಕಾರಕ್ಕೆ ೧.೫ ಕೋಟಿ ತೆರಿಗೆ ಸಂದಾಯವಾಗಬೇಕು ಎಂದು ಮೊರಾರ್ಜಿ ಪ್ರಚಾರ ಮಾಡಲಾರಂಭಿಸಿದರು.

ಅವರ ಅವಧಿ ಮುಗಿದ ಮೇಲೆಯೂ ಅವರ ಬಾಲಬಡುಕರಂತೆ ವರ್ತಿಸುತ್ತಿದ್ದ ಕೆಲವು ರಾಜಕಾರಿಣಿಗಳ ಕಿರುಕುಳ ಮಾತ್ರ ನಿಲ್ಲಲಿಲ್ಲ. ೧೯೮೦ರ ಮೇ ೨೨ ರಂದು ನನ್ನ ಬೆಳಗಿನ ಪ್ರವಚನಕ್ಕೆ ೧೫ ನಿಮಿಷಗಳಿರುವಾಗ ಪೊಲೀಸ್ ಠಾಣೆಯಿಂದ ನಮ್ಮ ಕಛೇರಿಗೆ ಒಂದು ದೂರವಾಣಿ ಕರೆ ಬಂದಿತು “ಒಬ್ಬ ವ್ಯಕ್ತಿ ರಜನೀಶರ ಮೇಲೆ ಹಲ್ಲೆ ನಡೆಸುವನೆಂಬ ಮಾಹಿತಿ ನಮಗೆ ದೊರೆತಿದೆ. ಹಾಗಾಗಿ ಪೊಲೀಸ್ ಅಧಿಕಾರಿಗಳು ನಿಮ್ಮ ಆಶ್ರಮದ ಒಳಗೆ ಪ್ರವೇಶಿಸಲಿದ್ದಾರೆ” ಎಂದು ಪೊಲೀಸರು ತಿಳಿಸಿದರು. ಇದಕ್ಕೇನೆನ್ನುವುದು! ಒಬ್ಬ ವ್ಯಕ್ತಿ ನನ್ನ ಕೊಲೆಗೆ ಸಂಚು ನಡೆಸಲಿರುವನು ಎಂದು ತಿಳಿದ ಮೇಲೆ ಅವನನ್ನು ಬಂಧಿಸದೇ ನಮಗೆ ಮಾಹಿತಿ ತಿಳಿಸುವುದೇ? ಆ ಇಡೀ ಪ್ರಕರಣದ ಹಿಂದೆ ಒಂದು ರಾಜಕೀಯ ಕುತಂತ್ರವಿದೆ ಎಂದು ನನಗೆ ಕೂಡಲೆ ತಿಳಿದುಬಿಟ್ಟಿತು. ನನ್ನ ಉಪನ್ಯಾಸದ ಸಭಾಂಗಣವನ್ನು ೨೦ ಜನ ಪೊಲೀಸ್ ಅಧಿಕಾರಿಗಳು ಸಶಸ್ತ್ರರಾಗಿ ಸುತ್ತುವರೆದರು. ನನ್ನನ್ನು ರಕ್ಷಿಸಲಲ್ಲ, ಹಲ್ಲೆ ನಡೆಸುವವನ ಮೇಲೆ ನನ್ನ ಹತ್ತು ಸಾವಿರ ಜನ ಸನ್ಯಾಸಿಗಳು ಎರಗಿ ಇನ್ನೆಲ್ಲಿ ಕೊಂದುಬಿಡವರೋ ಎಂದು. ಪ್ರವಚನದ ಮಧ್ಯದಿಂದ ಒಬ್ಬ ವ್ಯಕ್ತಿ ಎದ್ದು ನಿಂತ “ರಜನೀಶ್ ನೀನು ಹಿಂದೂಧರ್ಮದ ವಿರುದ್ಧ ಮಾತನಾಡುವುದನ್ನು ನಾವು ಸಹಿಸಲಾರೆವು, ನೀನಿನ್ನು ಬದುಕಿರಬಾರದು” ಎಂದು ಕೂಗುತ್ತ ಹದಿನೈದು ಅಡಿಗಳ ಅಂತರದಿಂದ ನನ್ನತ್ತ ಚೂರಿಯನ್ನೆಸೆದ. ಅದೃಷ್ಟವಶಾತ್ ಆ ಚೂರಿ ನನಗಾಗಲಿ, ನನ್ನ ಸನ್ಯಾಸಿಗಳಿಗಾಗಲಿ ತಗುಲದೇ ನೆಲದ ಮೇಲೆ ಬಿದ್ದಿತು. ಪ್ರವಚನದ ನಡುವೆ ನಡೆದ ಈ ಪ್ರಸಂಗ ಧ್ವನಿಮುದ್ರಣವಾಗಿದೆ. ಆಗ ಕೂಡಲೆ ಪೊಲೀಸರು ಧಾವಿಸಿ “ಇದು ಪೊಲೀಸ್ ಕೇಸು, ಇವನನ್ನು ಕೋರ್ಟಿಗೆ ಹಾಜರು ಪಡಿಸುತ್ತೇವೆ” ಎಂದು ಹೇಳಿ ಕರೆದೊಯ್ದರು. ರಾಜಕಾರಿಣಿಗಳ ತಂತ್ರಗಳು ಎಷ್ಟೊಂದು ಪೂರ್ವಯೋಜಿತವಾಗಿರುತ್ತವೆ, ಅಮಾನವೀಯವಾಗಿರುತ್ತವೆ ಎಂದು ನನಗೆ ಅಚ್ಚರಿಯಾಯಿತು. ನಾವು ಮೊಕದ್ದಮೆ ಹೂಡಲು ಅವಕಾಶವನ್ನೇ ನೀಡಲಿಲ್ಲ. “ನೀವೇಕೆ ದೂರು ನೀಡಬೇಕು? ನಾವೇ ಸಾಕ್ಷಿಗಳಾಗಿದ್ದೆವಲ್ಲ! ನಿಮ್ಮ ಕ್ಯಾಸೆಟ್‌ನಲ್ಲಿ ಅವನ ಕೂಗಾಟ, ಚಾಕು ಬಿದ್ದ ಶಬ್ದ ಪ್ರತಿಯೊಂದೂ ದಾಖಲಾಗಿದೆಯಲ್ಲ!” ಎಂದುಬಿಟ್ಟರು. ಆದರೆ ನ್ಯಾಯಾಲಯ ಅವನನ್ನು ಬಿಡುಗಡೆ ಮಾಡಿಬಿಟ್ಟಿತು. “ಹಲ್ಲೆಗೊಳಗಾದವನೇ ದೂರು ನೀಡದಿದ್ದ ಮೇಲೆ ಇಂಥ ಘಟನೆ ನಡೆದಿದೆ ಎಂದು ಹೇಗೆ ನಂಬುವುದು?” ಎಂದಿತು. ಕೋರ್ಟ್ ಹೀಗೆ ತೀರ್ಮಾನ ನೀಡುತ್ತಿದ್ದಾಗ ಪೊಲೀಸರೂ ಸುಮ್ಮನೆ ಇದ್ದುಬಿಟ್ಟರು. ಮರುದಿನ ದೂರು ನೀಡಲು ಮುಂದಾದ ನಮ್ಮ ಸನ್ಯಾಸಿಗಳಿಗೆ ’ಈಗ ಕಾಲಾವಧಿ ಮುಗಿದಿದೆ ಇನ್ನು ದೂರನ್ನು ಸ್ವೀಕರಿಸುವಂತಿಲ್ಲ’ ಎಂದು ಹೇಳಿ ಕಳಿಸಿಬಿಟ್ಟರು. ಆ ಕೋರ್ಟಿನಲ್ಲಿ ಸುಪ್ರೀಂ ಕೋರ್ಟಿನ ಕ್ರಿಮಿನಲ್ ವಕೀಲರಾಗಿದ್ದ ರಾಮ್ ಜೇಠ್ಮಲಾನಿ ಕೂಡ ಇದ್ದರು. ಅವರು ವಾದ ಮಾಡಲು ಮುಂದಾದಾಗ “ಇದು ನಿಮ್ಮ ಮೊಕದ್ದಮೆಯಲ್ಲ, ನೀವು ವಾದಿಸುವಂತಿಲ್ಲ” ಎಂದುಬಿಟ್ಟರಂತೆ. ಆದರೆ ನನ್ನ ಅಟಾರ್ನಿ ಅಷ್ಟಕ್ಕೇ ಸುಮ್ಮನಾಗದೇ ಈ ಘಟನೆಯ ಕುರಿತು ಮುಂದಿನ ಕ್ರಮ ಜರುಗಿಸಲು ಕಮೀಷನರ ಕಛೇರಿಗೆ ಹೋಗಿದ್ದ. ಅಲ್ಲಿ ಘಟನೆ ನಡೆದ ಹಿಂದಿನ ದಿನ ಆ ಹಂತಕ ಕಮೀಷನರನ್ನು ಭೇಟಿಯಾಗಿದ್ದುದು ಅವರ ದಿನಚರಿಯಲ್ಲಿ ನಮೂದಾಗಿತ್ತು. ಅದನ್ನು ಅಚಾನಕ್ಕಾಗಿ ಕಂಡ ಅವನಿಗೆ ಗಾಬರಿಯಾಯಿತಂತೆ. ಇದರರ್ಥ ಆ ಹಲ್ಲೆಯ ಹಿಂದೆ ಕಮೀಷನರ ಕೈವಾಡವೂ ಇತ್ತು. “ಮುಂಬರುವ ತಲೆಮಾರುಗಳು ಪುಣೆ ಹಂತಕರನ್ನು ಸೃಷ್ಟಿಸುವ ನಗರ ಎಂದು ಚರಿತ್ರೆಯಲ್ಲಿ ಓದಲಿವೆ. ಅಂದು ಗಾಂಧಿಯನ್ನು ಕೊಂದ ಸಂಘಟನೆಯೇ ಇಂದು ನನ್ನನ್ನೂ ಕೊಲ್ಲಲು ಪ್ರಯತ್ನಿಸಿದೆ” ಎಂದು ಪತ್ರಿಕೆಯವರಿಗೆ ಹೇಳಿದೆ. ಆಮೇಲೆ ಆ ಹಂತಕನನ್ನು ಬಿಡುಗಡೆಗೊಳಿಸಲಾಯಿತು. ನ್ಯಾಯಾಧೀಶರು ನೀಡಿದ ತೀರ್ಮಾನದಲ್ಲಿ ಎಲ್ಲಕ್ಕಿಂತ ತಮಾಷೆಯ ವಿಷಯವೆಂದರೆ “ಆಪಾದಿತನನ್ನು ಬಂಧಿಸಿ ಎಳೆದೊಯ್ದ ಮೇಲೆ ಹಲ್ಲೆಗೊಳಗಾದ ವ್ಯಕ್ತಿ ಏನೂ ನಡೆದಿಲ್ಲ ಎಂಬಂತೆ ತನ್ನ ಪ್ರವಚನವನ್ನು ಮುಂದುವರೆಸಿದ್ದಾನೆ. ಇಂಥವನ ಕೊಲೆ ಪ್ರಯತ್ನ ನಡೆಯಿತೆಂದರೆ ಯಾರು ನಂಬುವರು?” ಎಂದು ಕೇಳಿದರಂತೆ. ಆ ನ್ಯಾಯಾಧೀಶನಿಗೆ ನನ್ನ ಸ್ವಭಾವ ತಿಳಿದಿಲ್ಲ ಎನ್ನಿಸಿತು. ಆಮೇಲೆ ಆ ನ್ಯಾಯಾಧೀಶ ಇನ್ನೊಬ್ಬರ ಮೂಲಕ ನನ್ನ ಕ್ಷಮೆ ಯಾಚಿಸಿದ “ರಾಜಕೀಯ ಹಾಗು ಧಾರ್ಮಿಕ ಒತ್ತಡ ವಿಪರೀತ ಇದ್ದುದರಿಂದ ಹಾಗೆ ತೀರ್ಮಾನ ನೀಡಬೇಕಾಯಿತು. ನನ್ನನ್ನು ದಯವಿಟ್ಟು ಕ್ಷಮಿಸಿ, ಆ ಕೊಲೆಪಾತಕಿಗೆ ರಾಜಕೀಯ ಬೆಂಬಲವಿತ್ತು, ಅವನ ವಿರುದ್ಧ ತೀರ್ಪು ನೀಡಿದ್ದರೆ ನನ್ನ ಬಡ್ತಿಯನ್ನು ಹಿಂದಕ್ಕೆ ಪಡೆದು ಚಿರಾಪುಂಜಿಗೆ ವರ್ಗಯಿಸುತ್ತಿದ್ದರು” ಎಂದು ಹೇಳಿದ. “ಕ್ಷಮೆ ಕೇಳುವ ಪ್ರಮೇಯವೇನಿಲ್ಲ, ಇದು ರಾಜಕೀಯ ಪ್ರೇರಿತ ಎಂದು ನೀವು ಹೇಳುವ ಮೊದಲೇ ನನಗೆ ಗೊತ್ತಾಯಿತು. ನಿಮ್ಮ ಬಡ್ತಿಯನ್ನು ಕಳೆದುಕೊಳ್ಳಬೇಡಿ. ನನ್ನ ಬದುಕಿನಲ್ಲಂತೂ ಇನ್ನು ಮುಂದೆ ಬಡ್ತಿ ಎಂಬ ಪದಕ್ಕೆ ಅರ್ಥವಿಲ್ಲ ಏಕೆಂದರೆ ನಾನು ಬದುಕನ್ನು ಪೂರ್ತಿಯಾಗಿ ಬದುಕಿದ್ದೇನೆ. ಇನ್ನಾವ ಅಸೆಯನ್ನೂ, ಇನ್ನಾವ ಬಯಕೆಯನ್ನು ಉಳಿಸಿಕೊಂಡಿಲ್ಲ. ಕಟ್ಟ ಕಡೆಯ ನೆಲೆಯನ್ನು ತಲುಪಿದವನಿಗೆ ಬದುಕೂ ಒಂದೇ ಸಾವೂ ಒಂದೇ” ಎಂದು ಹೇಳಿದೆ.