ಪ್ರಪಂಚದ ಶಕ್ತಿಶಾಲಿ ಪ್ರಾಣಿ ಕೋಪಾಡ್
ಕೋಪಾಡ್ ದಪ್ಪ ಕವಚವುಳ್ಳ ಜಾತಿಗೆ ಸೇರಿದ ಒಂದು ಸಣ್ಣ ಜಲಚರ. ಇದು ಸಮುದ್ರದಲ್ಲೂ ಸಿಹಿನೀರಲ್ಲೂ ವಾಸಿಸುವ ಪ್ರಾಣಿ. ಇವು ಸಮುದ್ರದಲ್ಲಿ ಅಲೆಗಳ ವಿರುದ್ಧ ಚಲಿಸಲಾರದ ಪ್ರಾಣಿಗಳು. ಇನ್ನು ಕೆಲವು ಸಮುದ್ರದ ತಳಭಾಗದಲ್ಲಿ ಜೀವಿಸುತ್ತವೆ. ಅತ್ಯಂತ ಹೆಚ್ಚು ಮಳೆ ಬೀಳುವ ಕಾಡಿನಲ್ಲಿ, ಕೊಳಚೆ ಪ್ರದೇಶಗಳಲ್ಲಿ, ಕೊಳಗಳಲ್ಲೂ ಕಂಡು ಬರುತ್ತವೆ. ಇವುಗಳ ಉದ್ದ ಕೇವಲ ಒಂದು ಮಿಲಿಮೀಟರ್ ! ಇದು ಜಗತ್ತಿನ ಅತೀ ಹೆಚ್ಚು ಪ್ರಮಾಣದಲ್ಲಿ ದೊರೆಯುವ ಬಹುಕೋಶ ಜೀವಿ. ಅಲ್ಲದೆ ವೇಗವಾಗಿ ಚಲಿಸುವ ಪ್ರಾಣಿ ಕೂಡ !
ಕೋಪಾಡ್ ನ ವಿಶೇಷತೆಗಳೇನು: ಈ ಜೀವಿಗಳ ವಿಕಾಸವೇ ಇದರ ವಿಶೇಷತೆಯನ್ನು ಹೇಳುತ್ತದೆ. ಇವು ತಮ್ಮನ್ನು ಬೇಟೆಯಾಡುವ ಪ್ರಾಣಿಯಿಂದ ತಪ್ಪಿಸಿಕೊಳ್ಳಲು ಅತ್ಯಂತ ವೇಗವಾಗಿ ಓಡುತ್ತವೆ. ಇದು ಹಾರುವ ವೇಗವನ್ನು ಕೇಳಿದರೆ ನೀವು ಖಂಡಿತ ಆಶ್ಚರ್ಯ ಪಡುತ್ತೀರಿ. ಇವು ಒಂದು ಸೆಕೆಂಡಿಗೂ ಕಡಿಮೆ ಅವಧಿಯಲ್ಲೇ ಅರ್ಧ ಮೀಟರ್ ಎತ್ತರ ಹಾರಬಲ್ಲವು. ಇದು ಎಲ್ಲ ವಿಜ್ಞಾನಿಗಳಿಗೂ ಆಶ್ಚರ್ಯಕರ ಸಂಗತಿಯಾಗಿದೆ. ಇವುಗಳ ಗಾತ್ರಕ್ಕೂ ಇವು ಹಾರುವ ವೇಗದ ತೀವ್ರತೆಗೂ ಹೋಲಿಸಿ ನೋಡಲಾಗಿದೆ. ಆಗ, ಕೋಪಾಡ್ ಬೇರೆ ಯಾವುದೇ ಶಕ್ತಿಶಾಲಿ ಪ್ರಾಣಿಗಿಂತ ಹತ್ತುಪಟ್ಟು ಹೆಚ್ಚು ಶಕ್ತಿಯುತ ಎಂದು ಕಂಡು ಬಂದಿದೆ.
ಹಾರುವ ವಿಶೇಷ ತಂತ್ರಜ್ಞಾನ: ಜಗತ್ತಿನ ಯಾವುದೇ ಜಲಚರಕ್ಕೆ ಹೋಲಿಸಿದಾಗ ಈ ಕೋಪಾಡ್ ಅವುಗಳಿಗಿಂತಲೂ ೩೦ ಪಟ್ಟು ಹೆಚ್ಚು ಶಕ್ತಿಶಾಲಿ ಎನ್ನುವುದು ಸಾಬೀತಾಗಿದೆ. ಇದು ಹೀಗೆ ಹಾರಲು ಎರಡು ರೀತಿಯ ತಂತ್ರಗಳನ್ನು ಬಳಸಿಕೊಳ್ಳುತ್ತದೆ. ಆದರೆ ಸಾಮಾನ್ಯವಾಗಿ ಮಿಕ್ಕೆಲ್ಲ ಪ್ರಾಣಿಗಳು ಮೇಲಕ್ಕೆ ಹಾರಲು ಒಂದೇ ಒಂದು ತಂತ್ರವನ್ನು ಮಾತ್ರ ಬಳಸಿಕೊಳ್ಳುತ್ತವೆ. ಉದಾಹರಣೆಗೆ ಪಕ್ಷಿಗಳು ಹಾರಲು ತಮ್ಮ ರೆಕ್ಕೆಯನ್ನೇ ಅವಲಂಬಿಸಿವೆ. ಕುದುರೆಗಳು ನೆಗೆಯಲು ತಮ್ಮ ಕಾಲುಗಳನ್ನೇ ನೆಚ್ಚಿಕೊಂಡಿವೆ.
ಈ ಕೋಪಾಡ್ ಗೆ ಕಂಪಿಸುವ ಪಾದಗಳಿದ್ದು ಇವು ಅಪಾರ ಶಕ್ತಿಯನ್ನು ಉತ್ಪಾದಿಸುತ್ತವೆ. ಇದೇ ಸಮಯದಲ್ಲಿ ಇದು ಅತ್ಯಂತ ವೇಗವಾಗಿ ಈಜುತ್ತದೆ. ಜೊತೆಗೆ ಈ ಪ್ರಾಣಿಗಳಿಗೆ ೪-೫ ಜೊತೆ ಈಜುಪಾದಗಳಿವೆ. ಇದರ ವೇಗದ ಭರಾಟೆಗೆ ಇದೇ ಕಾರಣ. ಈಜುಪಾದಗಳಿಂದಾಗಿ ಕೋಪಾಡ್, ತನ್ನನ್ನು ಬೇಟೆಯಾಡಲು ಬರುವ ಪ್ರಾಣಿಯಿಂದ ಕ್ಷಣಾರ್ಧದಲ್ಲಿ ತಪ್ಪಿಸಿಕೊಳ್ಳುತ್ತದೆ. ಈ ಪ್ರಾಣಿಗೆ ಆಯಾಸ ಎಂದರೆ ಏನೆಂದೇ ಗೊತ್ತಿಲ್ಲ.
ಕೋಪಾಡ್ ಅತ್ಯಂತ ಸೂಕ್ಷ್ಮ ಜೀವಿ. ಇವುಗಳಿಗೆ ಸೂಕ್ಷ್ಮಗ್ರಹಣ ಶಕ್ತಿಯಿದ್ದು ಅತ್ಯಂತ ವೇಗವಾಗಿ ಕಂಪಿಸುವ ಪಾದಗಳಿವೆ ಹಾಗೂ ಈಜುಪಾದಗಳಿಗೆ ಸಂದೇಶವನ್ನು ಕಳಿಸಿಬಿಡುತ್ತದೆ. ಇದು ಬೇಟೆಗಾರ ಪ್ರಾಣಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದೇ ಇದರಿಂದ. ಇದಕ್ಕೆ ಅತ್ಯಂತ ವೇಗವನ್ನು ಹೊಂದಿರುವ ನರವ್ಯೂಹವಿದೆ. ಅಲ್ಲದೆ ಇದರ ದೋಣಿಯಾಕಾರದ ದೇಹ, ನೀರನ್ನು ತಳ್ಳುವ ವಿಶೇಷ ತಂತ್ರಜ್ಞಾನ ಮತ್ತು ಅಪಾರವಾದ ಮಾಂಸಖಂಡಗಳ ಶಕ್ತಿ ಇದು ಇಷ್ಟೊಂದು ಶಕ್ತಿಯುತ ಪ್ರಾಣಿಯಾಗಲು ನೆರವಾಗಿದೆ.
ಕೋಪಾಡ್ ನ ದೇಹ ರಚನೆ: ಈ ಜಲಚರಗಳ ಉದ್ದ ಕೇವಲ ಒಂದರಿಂದ ಎರಡು ಮಿಲಿಮೀಟರ್ ಅಷ್ಟೇ ! ಇದರ ದೇಹ ಕಣ್ಣೀರಿನ ಹನಿಯ ಆಕಾರದಲ್ಲಿದ್ದು ದೇಹದ ಮುಂಭಾಗದಲ್ಲಿ ಎರಡು ದೊಡ್ದ ಆಂಟೆನಾಗಳನ್ನು (ಅಂದರೆ ಸೂಕ್ಷ್ಮಗ್ರಾಹಿ ಮೀಸೆಗಳು) ಅವು ಉದ್ದವಾಗಿರುತ್ತವೆ. ಹೊರಭಾಗದ ದೇಹದ ರಚನೆ ಹೊರಕ್ಕೆ ಉಬ್ಬಿ ಚಾಚಿಕೊಂಡಿರುತ್ತದೆ. ಇದರ ದೇಹ ಸಂಪೂರ್ಣ ಪಾರದರ್ಶಕ. ಅತ್ಯಂತ ದೊಡ್ದ ಕೋಪಾಡ್ ಎಂದರೆ, ಒಂದು ಸೆಂಟಿಮೀಟರ್ ಉದ್ದ ಇದ್ದರೆ ಹೆಚ್ಚು. ಇದಕ್ಕೆ ತಲೆಯ ಮಧ್ಯಭಾಗದಲ್ಲಿ ಒಂದೇ ಒಂದು ಸಂಯುಕ್ತ ಕಣ್ಣಿದ್ದು, ಅತ್ಯಂತ ಹೆಚ್ಚು ನೋಟದ ಸಾಮರ್ಥ್ಯವಿದೆ. ಆದರೆ ಕೆಲವು ವಿಶೇಷ ಜಾತಿಯ ಕೋಪಾಡ್ ಗಳಿಗೆ ಕಣ್ಣೇ ಕಂಡುಬರುವುದಿಲ್ಲ.
ಇನ್ನು ಕೆಲವು ಕೋಪಾಡ್ ಗಳು ಸಿಲಿಂಡರ್ ತರಹ ಇರುವ ದೇಹರಚನೆಯನ್ನು ಹೊಂದಿವೆ. ಇವು ತುಂಬಾ ಚಿಕ್ಕ ಪ್ರಾಣಿಗಳಾಗಿರುವುದರಿಂದ ಹೃದಯವಾಗಲಿ, ಪರಿಚಲನಾವ್ಯೂಹವಾಗಲಿ ಕಂಡುಬರುವುದಿಲ್ಲ. ಇವುಗಳಿಗೆ ಜಲ ಪುಪ್ಪುಸಗಳಿಲ್ಲ. ಇವು ತಮ್ಮ ದೇಹದ ಮೂಲಕ ನೀರಿನಲ್ಲಿರುವ ಆಮ್ಲಜನಕವನ್ನು ನೇರವಾಗಿ ಹೀರಿಕೊಳ್ಳುತ್ತವೆ. ಈ ಕೋಪಾಡ್ ಗಳು ಮೀನುಗಳಿಗೆ, ತಿಮಿಂಗಿಲಗಳಿಗೆ ಹಾಗೂ ಸಮುದ್ರ ಪಕ್ಷಿಗಳಿಗೆ ಅತ್ಯುತ್ತಮ ಆಹಾರ. ಸಮುದ್ರದಲ್ಲಿ ಶೇಕಡಾ ೮೦ ರಷ್ಟು ಆಹಾರ ಈ ಕೋಪಾಡ್ ಗಳಿಂದಲೇ ಪೂರೈಕೆಯಾಗುತ್ತದೆಯಂತೆ ! ಅಂದ ಹಾಗೆ, ಈ ಕೋಪಾಡ್ ಗಳಲ್ಲಿ ೧೩ ಸಾವಿರ ಪ್ರಭೇಧಗಳಿವೆ.
ಅನುಕೂಲ ಮತ್ತು ಅನನುಕೂಲಗಳು : ಕೋಪಾಡ್ ಗಳು ನಮ್ಮ ನಲ್ಲಿ ನೀರಿನಲ್ಲೂ ಕಂಡುಬರುತ್ತವೆ. ಅದರಲ್ಲೂ ನೀರನ್ನು ಶೋಧಿಸದೆ ಇರುವ ಕೇಂದ್ರಗಳಲ್ಲಿ ಈ ಜೀವಿಗಳು ಹೇರಳವಾಗಿ ಕಂಡುಬರುತ್ತವೆ. ನ್ಯೂಯಾರ್ಕ್, ಬೋಸ್ಟನ್, ಮೆಸಾಚುಸೆಟ್ಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋಗಳಂತಹ ನಗರಗಳಲ್ಲೂ ಈ ಕೋಪಾಡ್ ಗಳು ಕಂಡುಬಂದಿವೆ. ಪೆರು ಮತ್ತು ಬಾಂಗ್ಲಾದೇಶಗಳಂತಹ ಉಷ್ಣವಲಯದ ನಗರಗಳಲ್ಲಿ ಸಂಶೋಧಿಸದೇ ಇರುವ ನೀರಿನಿಂದ ಕಾಲರಾ ರೋಗ ಹರಡಿರುವುದು ಕಂಡುಬಂದಿದೆ. ಅಲ್ಲೆಲ್ಲ ಕಾಲರಾ ರೋಗಾಣುಗಳು ಈ ಕೋಪಾಡ್ ಜೀವಿಗಳ ದೇಹದ ಮೇಲ್ಮೈ ಮೇಲೆ ಅಂಟಿಕೊಂಡಿರುವುದನ್ನು ಪತ್ತೆ ಹಚ್ಚಲಾಗಿದೆ.
ಡೆಂಗ್ಯೂ ಹಾಗೂ ಮಲೇರಿಯಾ ರೋಗಗಳು ವಿಶೇಷ ರೀತಿಯ ಸೊಳ್ಳೆಗಳಿಂದ ಹರಡುತ್ತಿರುವುದು ಸರಿಯಷ್ಟೆ. ಈ ರೋಗಗಳಿಗೆ ಕೋಪಾಡ್ ಗಳು ರಾಮಬಾಣವಾಗುವ ಸಾಧ್ಯತೆಗಳು ಕಂಡುಬಂದಿವೆ. ಈ ರೋಗ ಹರಡುವ ಸೊಳ್ಳೆಗಳ ಸಣ್ಣ ಮರಿಗಳು (ಲಾರ್ವಾಗಳು) ಕೋಪಾಡ್ ಗಳಿಗೆ ಅತ್ಯುತ್ತಮ ಆಹಾರವಂತೆ. ಅಂದ ಹಾಗೆ ತುಂಬಾ ತೆಳುವಾದ ಬಟ್ಟೆಯಿಂದ ಕೋಪಾಡ್ ಗಳನ್ನು ಶೋಧಿಸಬಹುದು.
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ