ಪ್ರಪ್ರಥಮ ಸ್ವದೇಶಿ ಶಾಯಿ “ಸುಲೇಖ"

ಪ್ರಪ್ರಥಮ ಸ್ವದೇಶಿ ಶಾಯಿ “ಸುಲೇಖ"

ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯೊಂದಿಗೆ ಥಳಕು ಹಾಕಿಕೊಂಡಿದೆ “ಸುಲೇಖ” ಶಾಯಿಯ ಸುಮಾರು ಒಂದು ನೂರು ವರುಷದ ಚರಿತ್ರೆ.

1930ರ ಹೊತ್ತಿಗೆ ಸ್ವಾತಂತ್ರ್ಯ ಹೋರಾಟದ ಅಂಗವಾದ ಸ್ವದೇಶಿ ಚಳವಳ ಉತ್ತುಂಗದಲ್ಲಿತ್ತು. ಭಾರತೀಯರು ಎಲ್ಲ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುತ್ತಿದ್ದರು. ಆ ಸಂದರ್ಭದಲ್ಲಿ, ಮಹಾತ್ಮಾ ಗಾಂಧಿ ಅವರಿಗೊಂದು ಇಕ್ಕಟ್ಟು ಎದುರಾಯಿತು. ಆಗ ಯಾವುದೇ ಸ್ವದೇಶಿ ಶಾಯಿ ಉತ್ಪಾದನೆ ಆಗುತ್ತಿರಲಿಲ್ಲ. ಎಲ್ಲ ಬರವಣಿಗೆಗೂ ವಿದೇಶಿ ಶಾಯಿ ಬಳಕೆಯಾಗುತ್ತಿತ್ತು. ಅದನ್ನೇ ಬಳಸಿ, "ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ” ಎಂದು ದೇಶವಾಸಿಗಳಿಗೆ ಕರೆನೀಡುವ ಬರಹ ಬರೆಯುವುದು ವಿಪರ್ಯಾಸ ಎಂದು ಅವರಿಗನಿಸಿತು.

ಆದ್ದರಿಂದ ಸತೀಶ್ ಚಂದ್ರ ದಾಸ್‌ಗುಪ್ತ ಅವರನ್ನು ಗಾಂಧೀಜಿ ಸಂಪರ್ಕಿಸಿ, ಸ್ವದೇಶಿ ಶಾಯಿ ಉತ್ಪಾದಿಸಲು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು. ಕ್ರಾಂತಿಕಾರಿ ಸ್ವಾತ್ರಂತ್ರ್ಯ ಆಂದೋಲನದಲ್ಲಿ ಸಕ್ರಿಯರಾಗಿದ್ದ ದಾಸ್‌ಗುಪ್ತ ಅವರಿಗೆ ಬೆಂಗಾಲ್ ಕೆಮಿಕಲ್ಸ್ ಜೊತೆ ಸಂಬಂಧವಿತ್ತು. ಅವರು ಹಿಂದೊಮ್ಮೆ “ಕೃಷ್ಣ ಧಾರಾ” ಹೆಸರಿನ ಶಾಯಿ ತಯಾರಿಸಿದ್ದರು.
ಅದರ ರಚನಾತಂತ್ರವನ್ನು ಅವರು ರಾಜಶಾಹಿ ನಗರದ (ಈಗ ಬಾಂಗ್ಲಾದೇಶದಲ್ಲಿದೆ) ಈ ಇಬ್ಬರು ಸೋದರರಿಗೆ ಹಸ್ತಾಂತರಿಸಿದ್ದರು: ನಾನಿಗೋಪಾಲ್ ಮೈತ್ರ ಮತ್ತು ಶಂಕರಾಚಾರ್ಯ ಮೈತ್ರ. ಯಾವುದೇ ವಿದೇಶಿ ಶಾಯಿಗಿಂತ ಉತ್ತಮವಾದ ಸ್ವದೇಶಿ ಶಾಯಿ ಉತ್ಪಾದಿಸುವ ಕಾರ್ಖಾನೆಯೊಂದನ್ನು ಸ್ಥಾಪಿಸಬೇಕೆಂದು ಅವರಿಬ್ಬರನ್ನೂ ದಾಸ್‌ಗುಪ್ತ ಹುರಿದುಂಬಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಜೈಲು ಶಿಕ್ಷೆ ಅನುಭವಿಸಿ ಆಗಷ್ಟೇ ಬಿಡುಗಡೆಯಾಗಿದ್ದ ಇಬ್ಬರು ಸೋದರರು ಸಮ್ಮತಿಸಿದರು. ತಮ್ಮ ತಂದೆ ಅಂಬಿಕಾಚರಣ ಮೈತ್ರ ಅವರಿಂದ ಅವರ ಜೀವಮಾನದ ಉಳಿತಾಯವನ್ನೇ ಭಂಡವಾಳವಾಗಿ ಪಡೆದರು. ತಮ್ಮೂರಿನಲ್ಲಿ ಶಾಯಿ ಉತ್ಪಾದನೆ ಆರಂಭಿಸಿ, ಅದಕ್ಕೆ “ಸುಲೇಖ" ಎಂಬ ಹೆಸರಿಟ್ಟರು.

"ಸ್ವದೇಶಿ ಕೈಗಾರಿಕೆ ಭಾರತದ ಬೆನ್ನೆಲುಬು, ವಿದೇಶಿ ಕಾರ್ಖಾನೆಗಳು ಸ್ವತಂತ್ರ ಭಾರತದ ವಿರೋಧಿಗಳು” ಎಂಬ ಘೋಷವಾಕ್ಯದೊಂದಿಗೆ ಇಬ್ಬರು ಸೋದರರು ಉತ್ಪಾದಿಸಿದ “ಸುಲೇಖ” ಶಾಯಿ ಮಾರುಕಟ್ಟೆ ಪ್ರವೇಶಿಸಿತು. ಸ್ವಲ್ಪ ಸಮಯದಲ್ಲೇ ಅದು ಜನಪ್ರಿಯವಾಯಿತು. ಕಲ್ಕತ್ತಾದಲ್ಲಿಯೂ “ಸುಲೇಖ" ಶಾಯಿಗೆ ಭಾರಿ  ಬೇಡಿಕೆಯಿದೆ ಎಂದು ಸೋದರರಿಗೆ ತಿಳಿಯಿತು. ಹಾಗಾಗಿ ಅವರು ಕಲ್ಕತ್ತಾದ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಅದರ ಮಾರಾಟ ಕಚೇರಿ ಶುರು ಮಾಡಿದರು. 1938ರಲ್ಲಿ ಇಬ್ಬರು ಸೋದರರು ಬೋವ್‌ಬಜಾರಿನಲ್ಲಿ “ಸುಲೇಖ" ಶಾಯಿ ಉತ್ಪಾದನಾ ಕಾರ್ಖಾನೆಯನ್ನು ಆರಂಭಿಸಿದರು. ಕ್ರಮೇಣ ಅದನ್ನು ಕಸ್‌ಬಾ ಮತ್ತು ಜಾದವಪುರಕ್ಕೆ ಸ್ಥಳಾಂತರಿಸಲಾಯಿತು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ “ಸುಲೇಖ" ಶಾಯಿ ದೇಶದ ಉದ್ದಗಲದಲ್ಲಿ ತನ್ನ ಮಾರಾಟ ಜಾಲ ಸ್ಥಾಪಿಸಿತು. ಅನಂತರ 1946ರಲ್ಲಿ ಖಾಸಗಿ ಕಂಪೆನಿಯಾಗಿ ದಾಖಲಾದ “ಸುಲೇಖ” ಕಂಪೆನಿಯ ವಾರ್ಷಿಕ ವಹಿವಾಟು 1948ರಲ್ಲಿ ಒಂದು ಲಕ್ಷ ರೂಪಾಯಿ ದಾಟಿತು (ಆಗಿನ ಕಾಲದಲ್ಲಿ ಅದು ದೊಡ್ಡ ಮೊತ್ತ.)

ಬಂಗಾಳಿ ಭಾಷೆಯಲ್ಲಿ “ಸುಲೇಖ" ಪದದ ಅರ್ಥ ಉತ್ತಮ ಬರವಣಿಗೆ. ತಮ್ಮ ಶಾಯಿಗೆ ಈ ಹೆಸರನ್ನು ಸೂಚಿಸಿದವರು ವಿಶ್ವಮಾನ್ಯ ಕವಿ ರವೀಂದ್ರನಾಥ ಠಾಗೋರ್ ಎನ್ನುತ್ತಾರೆ ಮೈತ್ರ ಕುಟುಂಬದವರು.

1960 - 1980 ಅವಧಿಯಲ್ಲಿ ತಿಂಗಳಿಗೆ ದಶಲಕ್ಷ ಬಾಟಲಿ ಮಾರಾಟ ಮಾಡುವ ಮೂಲಕ ಅತ್ಯಧಿಕ ವಹಿವಾಟು ದಾಖಲಿಸಿತು “ಸುಲೇಖ" ಶಾಯಿ. ಗುಣಮಟ್ಟದಲ್ಲಿ ಅದು ಯಾವುದೇ ವಿದೇಶಿ ಶಾಯಿಗೆ ಸರಿಸಾಟಿಯಾಗಿತ್ತು. ಕ್ರಮೇಣ ಮಾರುಕಟ್ಟೆಯ ಸವಾಲುಗಳನ್ನು ಎದುರಿಸಲಾಗದೆ 1989ರಲ್ಲಿ “ಸುಲೇಖ" ಉತ್ಪಾದನೆ ನಿಲ್ಲಿಸಿತು.

ಆದರೆ, 2020ರಲ್ಲಿ ಇಡೀ ಜಗತ್ತು ಕೊರೋನಾ ವೈರಸಿನ ಧಾಳಿಯಿಂದ ತತ್ತರಿಸುತ್ತಿದ್ದಾಗ, ನಮ್ಮ ದೇಶ ಲಾಕ್-ಡೌನ್ ಆಗಿದ್ದಾಗ, ವಿಸ್ಮಯವೊಂದು ಘಟಿಸಿತು. “ಸುಲೇಖ" ಶಾಯಿಯ ಅಭಿಮಾನಿಗಳು “ಸುಲೇಖ ಇಂಕ್ ಲವರ್ಸ್” ಎಂಬ ಫೇಸ್-ಬುಕ್ ಪುಟವೊಂದನ್ನು ಶುರುಮಾಡಿದರು. ಸಾವಿರಾರು ಜನರು ಫೇಸ್-ಬುಕ್‌ನಲ್ಲಿ “ಸುಲೇಖ" ಶಾಯಿಯ ತಮ್ಮ ನೆನಪುಗಳನ್ನು ಹಂಚಿಕೊಂಡರು. ಗ್ರೀಸ್, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್, ಯು.ಎಸ್.ಎ., ಬಾಂಗ್ಲಾದೇಶ, ನೇಪಾಳ ಮತ್ತು ಭಾರತದ ಅಭಿಮಾನಿಗಳು “ಸುಲೇಖ” ಶಾಯಿಯನ್ನು ಹಾಡಿ ಹೊಗಳಿದರು. ಇದನ್ನೆಲ್ಲ ಗಮನಿಸಿದ “ಸುಲೇಖ" ಶಾಯಿಯ ಮಾಲೀಕರಿಗೆ ಒಂದು ಸಂಗತಿ ಸ್ಪಷ್ಟವಾಯಿತು: “ಸುಲೇಖ" ಶಾಯಿಗೆ ಈಗಲೂ ಬೇಡಿಕೆಯಿದೆ ಎಂಬುದು. ಹಾಗಾಗಿ ಅವರು ಪುನಃ “ಸುಲೇಖ" ಶಾಯಿಯ ಉತ್ಪಾದನೆ ಆರಂಭಿಸಿ, ಅಂದಿನ ಸ್ವದೇಶಿ ಆಂದೋಲನ ನೆನಪಿಸುವ ರೂಪದ ಪ್ಯಾಕೆಟಿನಲ್ಲಿ ಅದನ್ನು ಮತ್ತೆ ಮಾರುಕಟ್ಟೆಗೆ ತಂದರು.

ಇದು ದೊಡ್ಡ ಸುದ್ದಿಯಾಯಿತು. ಈಗಲೂ ಫೌಂಟೇನ್ ಪೆನ್ ಬಳಸುತ್ತಿರುವ ಸಾವಿರಾರು ಜನರಿಗಂತೂ ಖುಷಿಯೋ ಖುಷಿ.  “ಸುಲೇಖ" ಶಾಯಿ ಇದೀಗ ಅದರ ಜನಸ್ಥಳವಾದ ಬಾಂಗ್ಲಾದೇಶದಲ್ಲಿಯೂ ಲಭ್ಯ. ಅಲ್ಲಿಗೆ ಚರಿತ್ರೆ ಪುನರಾವರ್ತನೆಯಾಯಿತು, ಅಲ್ಲವೇ?

ಫೋಟೋ 1 ಮತ್ತು  2: ಸುಲೇಖ ಶಾಯಿಯ ಹೊಸ ಕನ್-ಟೈನರ್ ಮತ್ತು ಹಳೆಯ ಕನ್-ಟೈನರ್
ಫೋಟೋ 3: ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಬಸ್ಸಿನಲ್ಲಿ ಸುಲೇಖ ಶಾಯಿಯ ಜಾಹೀರಾತು
ಫೋಟೋ ಕೃಪೆ: ವೆಬ್-ಸೈಟ್ಸ್