ಪ್ರಬುದ್ಧ ಮನಸ್ಥಿತಿಯ ನೈಜ ಕಾಳಜಿ...

ಪ್ರಬುದ್ಧ ಮನಸ್ಥಿತಿಯ ನೈಜ ಕಾಳಜಿ...

ಭಾರತೀಯ ಸಮಾಜದಲ್ಲಿ ಕೆಲವು ಮೂಲಭೂತ ಪ್ರಜ್ಞೆಗಳು ಜಾಗೃತ ಮನಸ್ಥಿತಿಯವರನ್ನು ನಿಯಂತ್ರಿಸುತ್ತಿವೆ ಅಥವಾ ಪ್ರಚೋದಿಸುತ್ತಿವೆ ಅಥವಾ ಪ್ರಭಾವಿಸುತ್ತಿವೆ. ಇವುಗಳನ್ನು ಮುಖ್ಯವಾಗಿ ಹೀಗೆ ವಿಂಗಡಿಸಬಹುದು.

1) ಮನುಸ್ಮೃತಿ ಆಧಾರಿತ ವೇದ ಉಪನಿಷತ್ತುಗಳು ಮತ್ತು ಭಗವದ್ಗೀತೆಯನ್ನು ಅವಲಂಬಿಸಿದ ಸನಾತನ ಧರ್ಮ ಪ್ರಜ್ಞೆ.

2) ಗೌತಮ ಬುದ್ಧ ಮಹಾವೀರರ ಆಂತರಿಕ ಶುಧ್ಧತೆಯ ಸತ್ಯ ಮತ್ತು ಅಹಿಂಸೆಯ ಪ್ರಜ್ಞೆ.

3) ಭಕ್ತಿ ಪಂಥದ ಶಂಕರ ರಾಮಾನುಜ ಮಧ್ವಾಚಾರ್ಯರ ದ್ವೈತ - ಅದ್ವೈತ - ವಿಶಿಷ್ಟಾದ್ವೈತದ ನಂಬಿಕೆಯ ಪ್ರಜ್ಞೆ.

4) ಕನಕ - ಪುರಂದರರ - ರಾಮದಾಸ - ಕಭೀರ - ಮೀರಾಬಾಯಿ ಮುಂತಾದವರ ದಾಸ - ಭಜನಾ ಸಾಹಿತ್ಯದ ಬದುಕಿನ ಬಿಡುಗಡೆಯ ಪ್ರಜ್ಞೆ.

5) ವಚನ ಚಳವಳಿಯ ಅಲ್ಲಮ ಬಸವ ಅಕ್ಕಮಹಾದೇವಿ ಮುಂತಾದವರ ಅನುಭವ ಮಂಟಪದ ವಿಚಾರಗಳನ್ನು ಅವಲಂಬಿಸಿದ ಸಮಾನತೆಯ ಶರಣ ಪ್ರಜ್ಞೆ.

6) ಪರಮಹಂಸ -  ಅರವಿಂದೋ - ರಾಜಾರಾಂ ಮೋಹನ್ ರಾಯ್ - ದಯಾನಂದ ಸರಸ್ವತಿ ಮತ್ತು ಮುಖ್ಯವಾಗಿ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಆಧರಿಸಿದ ಆಧ್ಯಾತ್ಮಿಕ - ಸಾಂಸ್ಕೃತಿಕ ಪ್ರಜ್ಞೆ.

7) ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಸುಭಾಷ್ ಚಂದ್ರ ಭೋಸ್ ಮುಂತಾದವರ ದೇಶಾಭಿಮಾನದ ಪ್ರಜ್ಞೆ.

8) ಮಹಾತ್ಮ ಗಾಂಧಿಯವರ ನಡವಳಿಕೆಗಳನ್ನು ಅನುಸರಿಸುವ ಸತ್ಯ ಪಾರದರ್ಶಕದ ಸರಳತೆಯ ನೈತಿಕ ಪ್ರಜ್ಞೆ.

9) ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಧ್ಯಯನ ಮತ್ತು ಚಿಂತನೆಗಳಿಂದ ಒಡಮೂಡಿದ ಮಾನವತೆ ಮತ್ತು ಸಮಾನತೆಯ ವಾಸ್ತವ ಪ್ರಜ್ಞೆ 

10) ರಾಮಮನೋಹರ್ ಲೋಹಿಯಾ -. ನಾರಾಯಣ ಗುರು ಜಯಪ್ರಕಾಶ್ ನಾರಾಯಣ್  ಮುಂತಾದವರ ಸಮಾಜವಾದಿ ಪ್ರಜ್ಞೆ. 

11) ಬಡವರು ಕಾರ್ಮಿಕರು ಶೋಷಿತರ ಪರ ಸದಾ ಧ್ವನಿಯಾಗುವ ಕಮ್ಯುನಿಸಂ ತತ್ವಾಧಾರಿತ ಬಂಡಾಯದ - ಪ್ರತಿಭಟನೆಯ ಪ್ರಜ್ಞೆ.

12) ನೆಹರು - ಇಂದಿರಾ ಗಾಂಧಿ - ಶಾಸ್ತ್ರಿ - ವಿ ಪಿ ಸಿಂಗ್ - ನರಸಿಂಹರಾವ್ - ವಾಜಪೇಯಿ - ಮನಮೋಹನ್ ಸಿಂಗ್ ನರೇಂದ್ರ ಮೋದಿ ಮುಂತಾದವರ ರಾಜಕೀಯ ಪ್ರಜ್ಞೆ.

13) ದೇಶದ ಬೆನ್ನೆಲುಬು ಮತ್ತು ಅನ್ನದಾತ ಎಂದೇ ಪರಿಗಣಿಸಲಾದ ಸದಾ ಅದನ್ನೇ ಧ್ಯಾನಿಸುವ ರೈತ ಪ್ರಜ್ಞೆ.

14) ಈ ಎಲ್ಲಾ ಪ್ರಜ್ಞೆಗಳ ಅನುಯಾಯಿಗಳ ಹುಚ್ವಾಟಗಳಿಂದ ರೋಸಿ ಹೋದ ಮಾನವೀಯ ಮತ್ತು ಜೀವಪರ ಚಿಂತನೆಯ ಪ್ರಗತಿಪರರ ವಿಶಿಷ್ಟ ಪ್ರಜ್ಞೆ.

ಇದನ್ನು ಹೊರತುಪಡಿಸಿ ವೈಯಕ್ತಿಕವಾಗಿ ಇನ್ನೂ ಹಲವಾರು ಪ್ರಜ್ಞೆಗಳು ನಮ್ಮ ನಡುವೆ ಇದೆ. ನಾನು ಕೆಲವು ಮುಖ್ಯ ಮತ್ತು ಸಾಂಕೇತಿಕವಾದವುಗಳನ್ನು ಮಾತ್ರ ಉಲ್ಲೇಖಿಸಿದ್ದೇನೆ.

ಇಲ್ಲಿನ ಪ್ರಜ್ಞೆಗಳ ವಿಪರ್ಯಾಸವೆಂದರೆ ಇಡೀ ಜನಸಂಖ್ಯೆಯಲ್ಲಿ ಸುಮಾರು ಶೇಕಡ 20% ರಷ್ಟು ಜನ ಮಾತ್ರ  ಜಾಗೃತಾವಸ್ಥೆಯ ಸ್ಥಿತಿಯಲ್ಲಿ ಈ ಪ್ರಜ್ಞೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ ಮತ್ತು ಈ ಕ್ಷಣದ ಎಲ್ಲಾ ಆತಂಕ ಅಸಹಿಷ್ಣುತೆ ಗಲಾಟೆ ಚಳವಳಿ ಬದಲಾವಣೆ ಎಲ್ಲವನ್ನೂ ಇವರೇ ನಿಯಂತ್ರಿಸುತ್ತಿರುತ್ತಾರೆ. ಆದರೆ ನಿಜವಾದ ಶೇಕಡ 80% ಉಳಿದ ಜನರೇ ಕೊನೆಯ....

14) ಸಾಮಾನ್ಯ ವ್ಯಕ್ತಿತ್ಬದ ಸಹಜ ಜೀವನ ಶೈಲಿಯ ಜನಸಾಮಾನ್ಯರು. ಮೇಲಿನ ಯಾವ ಪ್ರಜ್ಞೆಯ ಬಗ್ಗೆಯೂ ಇವರು ಹೆಚ್ಚಿಗೆ ತಲೆ ಕೆಡಿಸಿಕೊಳ್ಳದೆ ಹುಟ್ಟಿನಿಂದ ಸಾವಿನವರೆಗೂ ಬದುಕನ್ನು ಎಳೆದುಕೊಂಡು ಹೋಗುವ ಜನರಿವರು. ರೈತರು, ಕಾರ್ಮಿಕರು, ಮಹಿಳೆಯರು, ವ್ಯಾಪಾರಿಗಳು, ಉದ್ಯೋಗಿಗಳು, ವಿದ್ಯಾರ್ಥಿಗಳು ಮುಂತಾದ ಎಲ್ಲಾ ಸ್ತರದ ಜನರೂ ಇಲ್ಲಿದ್ದಾರೆ. ಇವರನ್ನು ನಿಯಂತ್ರಿಸಲು ಮತ್ತು ಇವರ ವಿಶ್ವಾಸಗಳಿಸಲೇ ಬಹುತೇಕ ಎಲ್ಲಾ ಪ್ರಜ್ಞೆಗಳ ಜನ ಪ್ರಯತ್ನಿಸುತ್ತಿರುತ್ತಾರೆ. ಆದರೆ ಇಲ್ಲಿಯವರೆಗೆ ಎಲ್ಲರೂ ಹೆಚ್ಚು ಕಡಿಮೆ ಜನರ ಜೀವನಮಟ್ಟ ಸುಧಾರಿಸುವಲ್ಲಿ ವಿಫಲರಾಗಿದ್ದಾರೆ ಎಂದೇ ಹೇಳಬಹುದು.

ಆದ್ದರಿಂದ ಪ್ರಬುದ್ಧ ಮನಸ್ಥಿತಿಯ ನೈಜ ಕಾಳಜಿ ಕೆಲವರಾದರು ಈ ಶೇಕಡ 80% ಜನರ ಜೀವನಮಟ್ಟ ಸುಧಾರಿಸಲು ಅವರ ಮಾನಸಿಕ ವ್ಯಕ್ತಿತ್ವ ಮೇಲ್ದರ್ಜೆಗೆ ಏರಿಸಲು ಆ ಮುಖಾಂತರ ಅವರ ಬದುಕನ್ನು ಸಾಧ್ಯವಾದಷ್ಟು ನೆಮ್ಮದಿಯ ಕಡೆಗೆ ಒಯ್ಯಲು ಪ್ರಯತ್ನಿಸುವುದೇ ಆಗಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಎಲ್ಲರೂ ನಾವಿರುವ ಜಾಗದಿಂದಲೇ ಕಾರ್ಯ ಯೋಜನೆ ರೂಪಿಸೋಣ. ಇದೊಂದು ವಿಭಿನ್ನ - ವಿಶಿಷ್ಟ ಪ್ರಯೋಗವಾಗುತ್ತದೆ ಮತ್ತು ಕಟ್ಟಕಡೆಯ ವ್ಯಕ್ತಿಗೂ ಇದು ಸಂಪರ್ಕ ಸಾಧಿಸುತ್ತದೆ ಎಂಬ ಆಶಯದೊಂದಿಗೆ... 

  • 333 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ತುಮಕೂರು ಜಿಲ್ಲೆಯ  ಮಿಡಗೇಶಿ ಗ್ರಾಮದಿಂದ ಸುಮಾರು 37 ಕಿಲೋಮೀಟರ್ ದೂರದ ರೆಡ್ಡಿಹಳ್ಳಿ ಗ್ರಾಮ ತಲುಪಿತು. ಇಂದು 30/9/2021 ಗುರುವಾರ 334 ನೆಯ ದಿನ ನಮ್ಮ ಕಾಲ್ನಡಿಗೆ  ತುಮಕೂರು ಜಿಲ್ಲೆಯ ರೆಡ್ಡಿ ಹಳ್ಳಿ ಗ್ರಾಮದಿಂದ ಸುಮಾರು ‌20 ಕಿಲೋಮೀಟರ್ ದೂರದ ಮಧುಗಿರಿ ತಾಲ್ಲೂಕು ತಲುಪಲಿದೆ. ನಾಳೆ 1/10/2021 ಶುಕ್ರವಾರ 335 ನೆಯ ದಿನ ನಮ್ಮ ಪ್ರಯಾಣ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕಡೆಗೆ...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರದಲ್ಲಿ: ತುಮಕೂರು ಜಿಲ್ಲೆಯ ಐ.ಡಿ.ಹಳ್ಳಿ ಗ್ರಾಮದಲ್ಲಿ ಅಲ್ಲಿನ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ