ಪ್ರಮೇಯ

ಪ್ರಮೇಯ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಗಜಾನನ ಶರ್ಮ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೩೯೫.೦೦, ಮುದ್ರಣ: ಎಪ್ರಿಲ್ ೨೦೨೩

ಚೆನ್ನಭೈರಾದೇವಿ, ಪುನರ್ವಸು ಅಂತಹ ಕಾದಂಬರಿಗಳನ್ನು ರಚಿಸಿದ ಅದ್ಭುತ ಕಾದಂಬರಿಕಾರ ಡಾ ಗಜಾನನ ಶರ್ಮ ಅವರು ಮಹಾಮಾಪನದ ಅಪೂರ್ವ ಕಥನವನ್ನು ‘ಪ್ರಮೇಯ’ ಎನ್ನುವ ಕಾದಂಬರಿ ಮೂಲಕ ಹೇಳಲು ಹೊರಟಿದ್ದಾರೆ. ಗಜಾನನ ಶರ್ಮ ಅವರು ಬರೆಯುವ ಕಾದಂಬರಿಗಳು ಇತಿಹಾಸದ ಯಾವುದೋ ಒಂದು ಮೂಲೆಯಲ್ಲಿ ಅಡಗಿರುವ ಸತ್ಯ ಕಥೆಯನ್ನು ಕಾಲ್ಪನಿಕವಾಗಿ ಚಿತ್ರಿಸುತ್ತಾ ಬರುತ್ತವೆ. ಇದೇ ಅವರ ಹೆಗ್ಗಳಿಕೆ. ಈ ಕಾರಣದಿಂದ ಅವರು ಬರೆಯುವ ಕಾದಂಬರಿಗಳು ಕೇವಲ ಅಂಕಿ ಅಂಶಗಳ ಪ್ರಬಂಧವಾಗದೇ, ಸ್ವಾರಸ್ಯಕರವಾದ ಕಾದಂಬರಿಯಾಗುತ್ತದೆ. ಇದೇ ಸಾಲಿಗೆ ಸೇರುವ ಕಾದಂಬರಿ ‘ಪ್ರಮೇಯ’ ಇದು ಆಳಿದವರ ಕಥೆಯಲ್ಲ ಅಳೆದವರ ಕಥೆ…

ಮಹಾಮಾಪನದ ಅಪೂರ್ವ ಕಥನದ ಕಾದಂಬರಿಗೆ ಸೊಗಸಾದ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಲೇಖಕರಾದ ‘ಜೋಗಿ’. ಇವರು ಬರೆದ ಬೆನ್ನುಡಿಯಲ್ಲಿ

“ಭಾರತದ ಮಹಾಮಾಪನದ ಕತೆಯನ್ನು ಹೇಳುತ್ತಲೇ, ಭಾರತೀಯ ಮನಸ್ಸು, ದೈವಿಕತೆ, ಅಧ್ಯಾತ್ಮವನ್ನು ಹೇಳುವ ಕಾದಂಬರಿ ಪ್ರಮೇಯ. ಇದರ ಹರಹು ಮತ್ತು ಆಳ ನನ್ನನ್ನು ಅಚ್ಚರಿಗೊಳಿಸಿದೆ. ಇದು ಹಿಮಾಲಯವನ್ನು ಅಳೆದ ಕತೆ, ಅಳೆದವರ ಕತೆ, ಅಳೆದು ಉಳಿದವರ ಕತೆ. ವೈಜ್ಞಾನಿಕ ಜಗತ್ತು ಭಾರತದ ಮಹಾಮಾಪನವನ್ನು ಗ್ರೇಟ್ ಟ್ರಿಗ್ಲೋಮೆಟ್ರಿಕ್ ಸರ್ವೆ ಎಂದು ಕರೆಯಿತು. ಆ ಯೋಜನೆಯನ್ನು ಮುನ್ನಡೆಸಿದ ಕರ್ನಲ್ ಲ್ಯಾಂಬ್ಬನ್, ಜಾರ್ಜ್ ಎವರೆಸ್ಟ್, ಆಂದ್ರೂ ವಾ, ಥಾಮಸ್ ಜಾರ್ಜ್ ಮಾಂಟೊಮರಿ ಮತ್ತು ನೈನ್‌ಸಿಂಗರ ಕಷ್ಟಸುಖದ ಕತೆಯನ್ನು ಹೇಳುತ್ತಲೇ ಭಾರತದ ಕತೆಯನ್ನೂ ಗಜಾನನ ಶರ್ಮರು ಹೇಳುತ್ತಾರೆ.

ಇಂಥದ್ದೊಂದು ವಸ್ತುವನ್ನು ಆಧರಿಸಿದ ಮೊದಲ ಭಾರತೀಯ ಕಾದಂಬರಿ ಇದು. ಚರಿತ್ರೆ ಮತ್ತು ಕಲ್ಪನೆ ಎರಡನ್ನೂ ಹದವಾಗಿ ಬೆರೆಸುತ್ತಾ, ಚಾರಿತ್ರಿಕ ವಿವರಗಳಿಗೆ ಅಪಚಾರ ಆಗದಂತೆ, ಕಲಾನುಭವಕ್ಕೆ ಕುಂದಾಗದಂತೆ ಈ ಕತೆಯನ್ನು ಗಜಾನನ ಶರ್ಮ ಕಟ್ಟಿದ್ದಾರೆ. ಕ್ಲುಪ್ತ ವಿವರ, ಸ್ಪಷ್ಟ ಮಾಹಿತಿ, ಸಮರ್ಪಕ ಕ್ಷೇತ್ರಾಧ್ಯಯನ, ಅನುಪಮ ಶ್ರದ್ದೆ ಮತ್ತು ಸರಳ ಭಾಷೆ ಹುರಿಗಟ್ಟಿರುವ ಕಾದಂಬರಿ ಇದು. ನಮಗೆ ಗೊತ್ತಿಲ್ಲದ ಹೊರಜಗತ್ತು ಮತ್ತು ಒಳಜಗತ್ತನ್ನು ಈ ಕಾದಂಬರಿ ಅನಾವರಣ ಮಾಡುತ್ತದೆ.

ಈಗಾಗಲೇ ಪುನರ್ವಸು ಮತ್ತು ಚೆನ್ನಭೈರಾದೇವಿ ಕಾದಂಬರಿಗಳ ಮೂಲಕ ಕನ್ನಡದ ಬಹುಮುಖ್ಯ ಕಾದಂಬರಿಕಾರ ಎಂದೆನಿಸಿಕೊಂಡಿರುವ ಗಜಾನನ ಶರ್ಮರು ಈ ಕಾದಂಬರಿಯಲ್ಲಿ ಮತ್ತೊಂದು ಎತ್ತರವನ್ನು ತಲುಪಿದ್ದಾರೆ. ಈ ಕಾದಂಬರಿಯ ಓದು 'ನನ್ನನ್ನು ಜ್ಞಾನವಂತನನ್ನಾಗಿಯೂ ಹೃದಯವಂತನನ್ನಾಗಿಯೂ ಮಾಡಿದೆ. ಓದಿದ ನಿಮಗೂ ಅದೇ ಆಗಲಿದೆ.” ಎಂದು ಮೆಚ್ಚುಗೆ ಸೂಚಿಸಿದ್ದಾರೆ.

‘ಆಳಬಲ್ಲವರ, ಅಳೆಯಬಲ್ಲವರ ಮಹಾಮೋಜಣಿ’  ಎಂಬ ಮುನ್ನುಡಿ ಬರೆದಿದ್ದಾರೆ ಪತ್ರಕರ್ತ ನಾಗೇಶ್ ಹೆಗಡೆ. ಇವರ ಮುನ್ನುಡಿಯ ಆಯ್ದ ಭಾಗಗಳು…”ಮಾನವಕುಲದ ಇತಿಹಾಸವೆಂದರೆ ಅದು ಹೆಣ್ಣು, ಹೊನ್ನು ಮತ್ತು ಮಣ್ಣಿನ ಮೇಲಿನ ಆಸೆ, ಆಧಿಪತ್ಯದ್ದೇ ಕತೆ ಎನ್ನುವವರಿದ್ದಾರೆ. ಮಧ್ಯ ಆಫ್ರಿಕಾದಲ್ಲಿ ಲಕ್ಷಾಂತರ ವರ್ಷ ವಾನರರಂತೆ ಬದುಕಿದ್ದ ಮನುಷ್ಯ ಸಂಕುಲ ಮೆಲ್ಲಗೆ ನಾಲ್ಕೂ ದಿಕ್ಕಿಗೆ ವಲಸೆ ಹೊರಟು ತನ್ನ ಮಿದುಳನ್ನೂ ಅರಳಿಸಿಕೊಳ್ಳುತ್ತ ಎಲ್ಲ ಖಂಡಗಳಲ್ಲೂ ಹೆಜ್ಜೆಯೂರುತ್ತ ಇಡೀ ಭೂಮಂಡಲವನ್ನೇ ಆಕ್ರಮಿಸಲು ಈ ಮೂರು ಆಮಿಷಗಳೇ ಕಾರಣವೆಂದು ಮೇಲ್ನೋಟಕ್ಕೆ ಅನ್ನಿಸುತ್ತದೆ.

ಆದರೆ ಅದು ಮೇಲ್ನೋಟದ್ದು ಅಷ್ಟೆ. ಆಳದಲ್ಲಿ, ಇತರ ಜೀವಿಗಳಲ್ಲಿ ಕಾಣಸಿಗದ ವಿಶಿಷ್ಟ ತುಡಿತವೊಂದು ನಮ್ಮೊಳಗಿದೆ. ಅದು, ಮನುಷ್ಯರಿಗಷ್ಟೇ ಸೀಮಿತವಾದ 'ಗಡಿಯಾಚೆಗಿನ ಸೆಳೆತ'. ಆಚೆ ಏನಿದೆ ಎಂಬ ಆ ಕುತೂಹಲವೇ ಮನುಷ್ಯನನ್ನು ಸಮುದ್ರಕ್ಕಟ್ಟಿ, ಬೆಟ್ಟಕ್ಕೇರಿಸಿ, ಭೂಗರ್ಭಕ್ಕಿಳಿಸಿ, ನಕ್ಷತ್ರಲೋಕದತ್ತ ಸೆಳೆದಿದೆ. ನಮ್ಮಳವಿನ ವಿಶ್ವದಲ್ಲಿ ನಮ್ಮನ್ನೇ ಅತಿಶ್ರೇಷ್ಠ ಜೀವಿಯನ್ನಾಗಿಸಿದೆ. ಹೆಣ್ಣು, ಹೊನ್ನು, ಮಣ್ಣಿನ ಆಮಿಷಗಳನ್ನೂ ಮೀರಿ ನಿಂತವರ ಸಾಧನೆಯಿಂದಾಗಿಯೇ ಅಕ್ಷಾಂಶ ರೇಖಾಂಶಗಳ ಸಮೇತ ಭೂಮಿ ತನ್ನಿಡೀ ಸ್ವರೂಪವನ್ನು ನಮಗೆ ತೋರಿಸುತ್ತಿದೆ. ಸದಾಕಾಲ ಶೋಧವನ್ನೇ ಧೇನಿಸುವ ಅಂಥ ಅಪರೂಪದ ವ್ಯಕ್ತಿಗಳನ್ನು ದುಡಿಸಿಕೊಂಡವರ ಜಾಣೆಯೂ ಇದರಲ್ಲಿದೆ. ಈ ಗ್ರಂಥದ ಚಂದದ ಉಪ ಶಿರೋನಾಮೆಯನ್ನೇ ತುಸು ಪಲ್ಲಟಿಸಿ ಹೇಳುವುದಾದರೆ, ಆಳಬಲ್ಲವರೇ ಅಳೆಯ ಬಲ್ಲವರನ್ನು ದುಡಿಸಿಕೊಂಡಿದ್ದರಿಂದಲೇ ಈಗ ನಾವಿರುವ ಭೂಮಿ ಹೀಗಿದೆ.”

'ಆಳಿದವರ ಕತೆಯಲ್ಲ, ಅಳೆದವರ ಕತೆ’ ಎನ್ನುವ ಲೇಖಕರ ಮಾತುಗಳ ಆಯ್ದ ಭಾಗ… ಸರ್ವೆಯೊಡನೆ ಪ್ರೇಮಾಂಕುರ : 'ಪ್ರಮೇಯ' ಹತ್ತೊಂಬತ್ತನೇ ಶತಮಾನದ ಮೊದಲ ದಶಕದಿಂದ ಏಳು ದಶಕಗಳ ಕಾಲ, ಅಖಂಡ ಭಾರತದ ಉದ್ದಗಲಕ್ಕೂ ಬ್ರಿಟಿಷರು ನಡೆಸಿದ ಗ್ರೇಟ್ ಟ್ರಿಗ್ನಾಮೆಟ್ರಿಕ್ ಸರ್ವೆಯೆಂಬ (ಜಿ.ಟಿ.ಎಸ್) ಭೂವೈಜ್ಞಾನಿಕ ಸಾಹಸವನ್ನು ಆಧರಿಸಿದ ಕೃತಿ. ಬರೋಬ್ಬರಿ ಎಪ್ಪತ್ತೈದು ವರ್ಷಗಳಷ್ಟು ಸುದೀರ್ಘಕಾಲ, ಕನ್ಯಾಕುಮಾರಿಯ ತುದಿಯಿಂದ ಹಿಮಾಲಯೋತ್ತರ ಗಡಿಪ್ರದೇಶಗಳವರೆಗೆ ಸಾಗಿದ್ದ ಟ್ರಿಗ್ನಾಮೆಟ್ರಿಕ್ ಸರ್ವೆಯೆಂಬ ಮಾಪನ ಸಾಹಸ, ಆ ಕಾಲಘಟ್ಟದ ಮನುಷ್ಯ ಸಮಾಜದ ಒಂದು ಮಹಾನ್ ವೈಜ್ಞಾನಿಕ ಸಾಧನೆ. ಟ್ರಿಗ್ನಾಮೆಟ್ರಿಕ್ ಸರ್ವೆಯನ್ನು ಆಧರಿಸಿ ಕೃತಿಯೊಂದನ್ನು ರಚಿಸುವ ಆಸಕ್ತಿಯಿಂದ ಅದರ ಅಧ್ಯಯನಕ್ಕೆ ತೊಡಗಿ, ವಿಷಯದ ಒಳಗಿಳಿಯುತ್ತ ಹೋದಂತೆ, ಅದರ ಮೇಲೆ ಗಾಢಪ್ರೇಮ ಅಂಕುರಿಸಿ, ಅದು ನನ್ನನ್ನು ಅನುಗಾಲದ ಒಡನಾಡಿಯಾಗಿ ಆವರಿಸಿ ಕೊಂಡಿತು. ಕಳೆದೆರಡು ವರ್ಷ ಟ್ರಿಗ್ನಾಮೆಟ್ರಿಕ್ ಸರ್ವೆಯೆಂಬ ಸಾಹಸದಲ್ಲಿ ಸ್ವತಃ ತೊಡಗಿಕೊಂಡ ತನ್ಮಯತೆ ನನ್ನದಾಗಿತ್ತು ಮತ್ತು ಈ ಅವಧಿಯ ಉದ್ದಕ್ಕೂ ಈ ಸಾಂಗತ್ಯ ನನ್ನೊಳಗೊಂದು ಬಗೆಯ 'ಉನ್ಮಾದ'ವನ್ನು ಹುಟ್ಟುಹಾಕಿತ್ತು. ಅದಕ್ಕಾಗಿ ಕುಟುಂಬದೊಡನೆ 'ಅಧ್ಯಯನ ಪ್ರವಾಸ' ಕೈಗೊಂಡೆ. ಸರ್ವೆಯೊಂದಿಗಿನ ನಮ್ಮ ಮಧುರ ದಾಂಪತ್ಯದ ಮಧುಚಂದ್ರಕ್ಕೆ ನಾವು ಆಯ್ಕೆ ಮಾಡಿಕೊಂಡ ಮೊದಲ ತಾಣ ಕಾಶ್ಮೀರ.” 

ಈ ಪ್ರವಾಸದ ಮೂಲಕ ಬಹಳಷ್ಟು ಸಂಗತಿಗಳನ್ನು ಕಂಡುಕೊಂಡ ಗಜಾನನ ಶರ್ಮ ಅವರು ಸ್ವಾರಸ್ಯಕರವಾದ ರೀತಿಯಲ್ಲಿ ಈ ೩೪೪ ಪುಟಗಳ ಕಾದಂಬರಿಯನ್ನು ಸೃಷ್ಟಿಸಿದ್ದಾರೆ. ಭೂಮಾಪನ, ಸರ್ವೇ ಮೊದಲಾದ ವಿಭಾಗಗಳಲ್ಲಿ ಆಸಕ್ತಿ ಇಲ್ಲದ ಓದುಗರಿಗೆ ಕೆಲವೆಡೆ ಬೋರ್ ಅನಿಸಿದರೂ, ಕಥಾವಸ್ತು ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಆ ರೀತಿಯಾಗಿ ಕಾದಂಬರಿಯನ್ನು ಹೆಣೆದಿದ್ದಾರೆ ಶರ್ಮರವರು.