ಪ್ರಯಾಣಿಸುವಾಗ ವಾಂತಿ ಬರುತ್ತಿದೆಯೇ?

ಪ್ರಯಾಣಿಸುವಾಗ ವಾಂತಿ ಬರುತ್ತಿದೆಯೇ?

ಬಹಳಷ್ಟು ಮಂದಿಗೆ ಪ್ರವಾಸ ಮಾಡಬೇಕು, ಹೊಸ ಹೊಸ ಸ್ಥಳಗಳನ್ನು ನೋಡಬೇಕು, ಅಲ್ಲಿಯ ವಿಶೇಷತೆಗಳನ್ನು ಅರಿಯಬೇಕು ಎಂಬೆಲ್ಲಾ ಆಸೆ ಇರುತ್ತದೆ. ಆದರೆ ಪ್ರವಾಸ ಮಾಡಲು ಬಸ್ ಅಥವಾ ಕಾರಿನಲ್ಲಿ ಕುಳಿತ ಕೆಲವೇ ನಿಮಿಷಗಳಲ್ಲಿ ವಾಂತಿ ಬಂದು ಬಿಡುತ್ತದೆ ಅಥವಾ ಬಂದ ಅನುಭವವಾಗುತ್ತದೆ. ಇದರಿಂದಾಗಿ ಅವರ ಪ್ರವಾಸದ ಕನಸು ಕನಸಾಗಿಯೇ ಉಳಿಯುತ್ತದೆ. ಕೆಲವು ವಾಂತಿ ಬಾರದಂತೆ ಮಾತ್ರೆ ತೆಗೆದುಕೊಳ್ಳುತ್ತಾರೆ. ಆದರೆ ಅದರಿಂದ ಹೊಟ್ಟೆ ಉರಿಯುವ, ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಈ ಕಾರಣದಿಂದ ಹಲವರಿಗೆ ಪ್ರಯಾಣ ಎಂಬುದು ಪ್ರಯಾಸವೇ ಆಗಿದೆ. ರೈಲು ಪ್ರಯಾಣದಲ್ಲಿ ವಾಂತಿಯ ಅನುಭವ ಅತೀ ಕಡಿಮೆ. ಆದರೆ ರೈಲು ಸೌಲಭ್ಯವಿಲ್ಲದ ಜಾಗಕ್ಕೆ ಹೋಗಲು ಬಸ್ ಅಥವಾ ಕಾರು ಅನಿವಾರ್ಯ. 

ಬಸ್ ಪ್ರಯಾಣ ಮಾಡುವಾಗ ವಾಂತಿ ಬಂದರೆ ಕೂಡಲೇ ಬಸ್ ನಿಲ್ಲಿಸುವುದೂ ಕಷ್ಟ. ಬಸ್ ಒಳಗೆ ವಾಂತಿ ಮಾಡಿದರೆ ಅದರ ವಾಸನೆಯಿಂದ ಇತರ ಪ್ರಯಾಣಿಕರಿಗೂ ವಾಂತಿ ಬರುವ ಅನುಭವವಾಗುತ್ತದೆ. ಇದರಿಂದ ವಾಂತಿ ಮಾಡಿದವರು ಅಪಾರ ಮುಜುಗರಕ್ಕೆ ಈಡಾಗಬೇಕಾಗುತ್ತದೆ. ಈ ವಾಂತಿ ಬರಲು ಕಾರಣವೇನು ಗೊತ್ತೇ? ಚಲನೆಯಿಂದ ನಮ್ಮ ಒಳಗಿನ ಕಿವಿಯಲ್ಲಿ ಕೆಲವು ಬದಲಾವಣೆಗಳಾಗುತ್ತದೆ. ಅಂದರೆ ನಾವು ಪ್ರಯಾಣ ಮಾಡುವಾಗ ಕಣ್ಣುಗಳು ಮೆದುಳಿಗೆ ನೀಡುವ ದೃಶ್ಯ ಸಂದೇಶ ಮತ್ತು ಒಳಗಿನ ಕಿವಿ ನೀಡುವ ಸಂದೇಶಗಳ ನಡುವೆ ಹೊಂದಾಣಿಕೆಯಿಲ್ಲವಾದಲ್ಲಿ ಮೆದುಳು ಗೊಂದಲಕ್ಕೀಡಾಗುತ್ತದೆ. ಇದರಿಂದ ಪ್ರಯಾಣದ ಸಮಯದಲ್ಲಿ ಕೆಲವರಲ್ಲಿ ವಾಂತಿ ಅಥವಾ ವಾಕರಿಕೆಯ (Motion Sickness) ಅನುಭವ ನೀಡುತ್ತದೆ.

ವಾಂತಿಯನ್ನು ತಡೆಯುವ ಕೆಲವು ಸಿಂಪಲ್ ಟಿಪ್ಸ್ ಗಳು:

* ಕಾರಿನಲ್ಲಿ ಪ್ರಯಾಣ ಮಾಡುವಾಗ ನೀವು ಹೆಚ್ಚು ಅಲುಗಾಡದ ಸೀಟಿನಲ್ಲಿ ಅಂದರೆ ಹಿಂದುಗಡೆಯ ನಡುವಿನ

 ಸೀಟಿನಲ್ಲಿ ಕುಳಿತುಕೊಳ್ಳುವುದು ಉತ್ತಮ. ನೀವು ಕಾರಿನ ಚಾಲನೆ ತಿಳಿದಿದ್ದರೆ ನೀವೇ ಕಾರನ್ನು ಡ್ರೈವ್ ಮಾಡಿ. ಇದರಿಂದ ನಿಮ್ಮ ಗಮನ ವಾಹನ ಚಲಾಯಿಸುವುರಲ್ಲಿ ಮಗ್ನವಾಗಿರುವುದರಿಂದ ವಾಂತಿ ಬರುವ ಸಾಧ್ಯತೆ ಕಡಿಮೆ.

* ಪ್ರಯಾಣ ಮಾಡುವಾಗ ಲ್ಯಾಪ್ ಟಾಪ್, ಮೊಬೈಲ್, ಪುಸ್ತಕ ಇತ್ಯಾದಿಗಳನ್ನು ಬಳಸಬೇಡಿ. 

* ನೀವು ಕಾರಿನಲ್ಲಿ ಎಸಿ ಬಳಸುತ್ತಿದ್ದರೆ, ಅದನ್ನು ಬಂದ್ ಮಾಡಿ ಕಾರಿನ ಕಿಟಕಿಗಳನ್ನು ತೆರೆದು ತಾಜಾ ಗಾಳಿಯ ಅನುಭವ ಪಡೆಯಿರಿ. ಇದು ವಾಂತಿಯನ್ನು ಬಹುಮಟ್ಟಿಗೆ ನಿವಾರಿಸುತ್ತದೆ.

* ನಿಮ್ಮ ಜೊತೆಗಿರುವ ಸಹ ಪ್ರಯಾಣಿಕರ ಜೊತೆ ಮಾತನಾಡುತ್ತಾ ಅಥವಾ ಉತ್ತಮ ಹಾಡುಗಳನ್ನು ಕೇಳಿ ಆನಂದಿಸುತ್ತಾ ಪ್ರಯಾಣಿಸುವುದರಿಂದ ನಿಮ್ಮ ಗಮನ ಬೇರೆ ಕಡೆಗೆ ಹೋಗಿ ವಾಂತಿ ಬರುವ ಸಾಧ್ಯತೆ ಕಡಿಮೆ.

* ಪ್ರಯಾಣದ ಮೊದಲು ಹೆಚ್ಚು ತಿನ್ನುವುದನ್ನು ತಪ್ಪಿಸಿ, ಆದರೆ ಆಹಾರ ತಿನ್ನದೇ ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಮಾಡಬೇಡಿ. ಇದರಿಂದ ಹೊಟ್ಟೆ ತೊಳಸಿದಂತೆ ಆಗಿ ವಾಂತಿ ಬರುವ ಸಾಧ್ಯತೆ ಇದೆ. ಒಂದು ಅಥವಾ ಮುಕ್ಕಾಲು ಗಂಟೆ ಮೊದಲು ಲಘುವಾದ ಉಪಹಾರ ಮಾಡಿ ಪ್ರಯಾಣ ಹೊರಡಿ.

* ಪ್ರಯಾಣದ ಸಮಯದಲ್ಲಿ ಆದಷ್ಟು ಧೂಮಪಾನ, ಮದ್ಯಪಾನ, ಕರಿದ ಎಣ್ಣೆ ತಿಂಡಿಗಳನ್ನು ಬಳಸಬೇಡಿ.

* ಹುಣಸೆ ಹಣ್ಣಿನ ತಿಂಡಿಗಳು, ಕಿತ್ತಳೆ ಹಣ್ಣು, ಲಿಂಬೆ ಹಣ್ಣುಗಳನ್ನು ನಿಮ್ಮ ಜೊತೆ ಇರಿಸಿ. ಇದರ ಸುವಾಸನೆ ವಾಂತಿಯನ್ನು ದೂರ ಮಾಡುವುದರಲ್ಲಿ ಸಹಕಾರಿ. ತುಳಸಿ, ಲವಂಗವೂ ಜೊತೆಗಿರಲಿ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ