ಪ್ರಯೋಗಾಲಯದಲ್ಲಿ ಬೆಳೆಸಿದ ವಜ್ರಗಳು



“ನಮ್ಮ ಜೀವಮಾನದಲ್ಲಿ ವಜ್ರದ ಉಂಗುರ ಧರಿಸಲು ಸಾಧ್ಯವಿಲ್ಲ” ಎಂದು ಭಾವಿಸಿದವರಲ್ಲಿ ಹಲವರು ಈಗ ವಜ್ರದುಂಗುರ ಧರಿಸಲು ಸಾಧ್ಯವಿದೆ. ಯಾಕೆಂದರೆ, 2020ರಿಂದೀಚೆಗೆ ಭಾರತದಲ್ಲಿ ಪ್ರಯೋಗಾಲಯದಲ್ಲಿ ಬೆಳೆಸಿದ ವಜ್ರಗಳ ಪೂರೈಕೆ ಹೆಚ್ಚುತ್ತಿದೆ ಮತ್ತು ಅವುಗಳ ಬೆಲೆ ಇಳಿಯುತ್ತಿದೆ.
ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ ಇದರ ಇತ್ತೀಚೆಗಿನ ವರದಿಯ ಅನುಸಾರ ಭಾರತದಲ್ಲಿ 2023ರಲ್ಲಿ ವಜ್ರದ ಬೆಲೆ ಒಂದು ಕ್ಯಾರೆಟಿಗೆ ರೂ.60,000ದಿಂದ ರೂ. 20,000ಕ್ಕೆ ಇಳಿದಿದೆ. ಇದಕ್ಕೆ ಕಾರಣ ಭಾರತದಲ್ಲಿ ಅವುಗಳ ಅತಿ-ಉತ್ಪಾದನೆ ಮತ್ತು ವಿದೇಶಗಳಿಂದ ಅವುಗಳ ಅತಿ-ಪೂರೈಕೆ.
ಪ್ರಯೋಗಾಲಯಗಳಲ್ಲಿ ಎರಡು ವಿಧಾನಗಳಲ್ಲಿ ವಜ್ರಗಳನ್ನು ಬೆಳೆಸಲಾಗುತ್ತದೆ: (1) ರಾಸಾಯನಿಕ ಬಾಷ್ಪ ನಿಕ್ಷೇಪನ (ಕೆಮಿಕಲ್ ವೇಪರ್ ಡಿಪಾಸಿಷನ್) ವಿಧಾನ ಮತ್ತು (2) ಅತಿ-ಒತ್ತಡ ಅತಿ-ಉಷ್ಣತೆ ವಿಧಾನ.
ಭಾರತದಲ್ಲಿ ಮೊದಲನೆಯ ವಿಧಾನದ ಬಳಕೆ ಸಾಮಾನ್ಯ. ಈ ವಿಧಾನದಲ್ಲಿ ಒಂದು ಸಂಪುಟದಲ್ಲಿ ಇಂಗಾಲದ ಒಂದು ತುಂಡನ್ನಿಟ್ಟು, ಅದರ ಮೇಲೆ ಹೈಡ್ರೊಕಾರ್ಬನುಗಳ ಮಿಶ್ರಣವನ್ನು ಹಾಯಿಸಲಾಗುತ್ತದೆ. ಆ ಸಂಪುಟದಲ್ಲಿ ಅತಿ-ಒತ್ತಡ ಮತ್ತು ಅತಿ-ಉಷ್ಣತೆ ಉಂಟು ಮಾಡಿದಾಗ, ಭೂಮಿಯ ಆಳದಲ್ಲಿರುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಅಲ್ಲಿ ಇಂಗಾಲವು ವಜ್ರವಾಗಿ ಪರಿವರ್ತನೆ ಆಗುವಂತೆ, ಪ್ರಯೋಗಾಲಯದ ಸಂಪುಟದಲ್ಲಿಯೂ ಇಂಗಾಲದ ತುಂಡು ವಜ್ರವಾಗಿ ಪರಿವರ್ತನೆಯಾಗುತ್ತದೆ (ಕೆಲವೇ ವಾರಗಳಲ್ಲಿ). ಅನಂತರ ಈ ಕರಡು ವಜ್ರವನ್ನು ಕತ್ತರಿಸಿ ಪಾಲಿಷ್ ಮಾಡಲಾಗುತ್ತದೆ.
ಗಮನಿಸಿ: ಭೂಮಿಯ ಆಳದಲ್ಲಿ ರೂಪಿಸಲ್ಪಟ್ಟ ವಜ್ರ ಮತ್ತು ಪ್ರಯೋಗಾಲಯದಲ್ಲಿ ರೂಪಿಸಲ್ಪಟ್ಟ ವಜ್ರ - ಇವುಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆಭರಣಗಳ ಪರಿಣತರಿಗೂ ಇವೆರಡನ್ನು ಕೊಟ್ಟಾಗ, ಭೂಮಿಯ ಆಳದಿಂದ ತೆಗೆದ ವಜ್ರ ಯಾವುದು ಮತ್ತು ಪ್ರಯೋಗಾಲಯದಲ್ಲಿ ಬೆಳೆದದ್ದು ಯಾವುದು ಎಂದು ಗುರುತಿಸಲು ಸಾಧ್ಯವಿಲ್ಲ. ಪ್ರಯೋಗಾಲಯದಲ್ಲಿ ಬೆಳೆದ ವಜ್ರಗಳು “ಟೆಸ್ಟ್-ಟ್ಯೂಬ್ ಶಿಶುಗಳಂತೆ”; ಅವೂ ನಿಜ, ಇವೂ ನಿಜ.
ಇಸವಿ 2006ರಲ್ಲಿ ಬಿಡುಗಡೆಯಾದ “ಬ್ಲಡ್ ಡೈಮಂಡ್” ಎಂಬ ಚಲನಚಿತ್ರವು ಭೂಮಿಯ ಆಳದಿಂದ ವಜ್ರಗಳನ್ನು ತೆಗೆಯುವ ಉದ್ಯಮದ ಕ್ರೂರತೆ ಮತ್ತು ಶೋಷಣೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿತ್ತು (ಪ್ರಸಿದ್ಧ ನಟ ಲಿಯೋನಾರ್ಡೋ ಡಿ ಕಾಪ್ರಿಯೊ ಅದರಲ್ಲಿ ನಟಿಸಿದ್ದರು). ಅನಂತರ ಹಲವರಿಗೆ ಭೂಮಿಯಾಳದಿಂದ ಅಗೆದು ತೆಗೆದ ವಜ್ರಗಳು ಬೇಡವೆಂದು ಅನಿಸಿತ್ತು. ಅಂಥವರಿಗೆ ಅದರ ಬದಲಾಗಿ ಈಗ ಪ್ರಯೋಗಾಲಯದಲ್ಲಿ ಬೆಳೆಸಿದ ವಜ್ರಗಳು ಲಭ್ಯ.
ಅದೇನಿದ್ದರೂ, ಪ್ರಸಿದ್ಧ ವಜ್ರ ಮಾರಾಟ ಕಂಪೆನಿಗಳಾದ ಡಿ-ಬೀರ್ಸ್. ಆಲ್-ರೋಸಾ, ರಿಯೋ ಟಿಂಟೊ ಇತ್ಯಾದಿಗಳ ಅಬ್ಬರದ ಜಾಹೀರಾತುಗಳು ಭೂಮಿಯಾಳದಿಂದ ತೆಗೆದ ವಜ್ರಗಳ ಬಗ್ಗೆ ತಪ್ಪು ಕಲ್ಪನೆಗಳನ್ನು ಹುಟ್ಟಿಸುವಂತಿವೆ. ಉದಾಹರಣೆಗೆ: ಡಿ-ಬೀರ್ಸ್ ಕಂಪೆನಿಯ 2023ರ ಜಾಹೀರಾತಿನ ಘೋಷವಾಕ್ಯ ಹೀಗಿತ್ತು: “ಉತ್ತಮ ವಸ್ತುಗಳು ರೂಪಿತವಾಗಲು ಸಮಯ ತಗಲುತ್ತದೆ. ಅತ್ಯುತ್ತಮ ವಸ್ತುಗಳು ರೂಪಿತವಾಗಲು ಬಿಲಿಯನ್ ವರುಷಗಳು ತಗಲುತ್ತವೆ.”
ಭಾರತದಲ್ಲಿ ಪ್ರಯೋಗಾಲಯದಲ್ಲಿ ಬೆಳೆಸಿದ ವಜ್ರಗಳ ಮಾರಾಟದಲ್ಲಿ ಬಿರುಸು ಕಾಣಿಸದಿರಲು ಕೆಲವು ಕಾರಣಗಳಿವೆ. ವಜ್ರದ ಖರೀದಿ ಒಂದು ಹಣ ಹೂಡಿಕೆಯ ನಮೂನೆ ಎಂಬ ಭಾವನೆ ಭಾರತೀಯರಲ್ಲಿದೆ. ಯಾಕೆಂದರೆ ಅದಕ್ಕೆ ಅಳಿವಿಲ್ಲ ಎಂಬ ನಂಬಿಕೆ. ಹಾಗೆಯೇ ವಜ್ರದ ಆಭರಣದ (ಉಂಗುರ, ಕಿವಿಯ ಓಲೆ, ಮೂಗಿನ ನತ್ತು, ಬಳೆ, ಹಾರ ಇತ್ಯಾದಿ) ಜೊತೆಗಿನ ಭಾವನಾತ್ಮಕ ಸಂಬಂಧಗಳು: ಇದು ನನ್ನ ಗಂಡ/ ಅಮ್ಮ/ ಅಜ್ಜಿ ಕೊಟ್ಟದ್ದು ಎಂಬ ನೆನಪುಗಳು. ಹಾಗೆ ಉಡುಗೊರೆ ಕೊಡುವವರಿಗೆ ಭೂಮಿಯಾಳದಿಂದ ಅಗೆದ ವಜ್ರಗಳೇ ಅಚ್ಚುಮೆಚ್ಚು.
ಅಂತೂ ಇನ್ನು ಹತ್ತು ವರುಷಗಳಲ್ಲಿ ಭಾರತದಲ್ಲಿ ಪ್ರಯೋಗಾಲಯದಲ್ಲಿ ಬೆಳೆಸಿದ ವಜ್ರಗಳ ಆಭರಣಗಳಿಗೆ ಉತ್ತಮ ಬೇಡಿಕೆ ಬರಬಹುದೆಂದು ನಿರೀಕ್ಷಿಸಬಹುದು. ಯಾಕೆಂದರೆ, 2018-2021 ಅವಧಿಯಲ್ಲಿ ಇವುಗಳ ಮಾರಾಟದಲ್ಲಿ ದಾಖಲಾದ ಹೆಚ್ಚಳ ಶೇಕಡಾ 10.6. ಇನ್ನು ಹತ್ತು ವರುಷಗಳಲ್ಲಿ (2023 - 2033) ಈ ಬೇಡಿಕೆ ವಾರ್ಷಿಕ ಶೇಕಡಾ 15 ದರದಲ್ಲಿ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಈಗ ಪ್ರಯೋಗಾಲಯದಲ್ಲಿ ವಜ್ರಗಳನ್ನು ಬೆಳೆಸುತ್ತಿರುವ ಕೆಲವು ಕಂಪೆನಿಗಳು: ಟ್ರೂ ಡೈಮಂಡ್, ಡೈ-ಐ ಡಿಸೈನ್ಸ್. ಇನ್ನೊಂದು ಹೆಸರುವಾಸಿ ವಜ್ರದ ಬ್ರಾಂಡ್ ತಾನಿಷ್ಕ್. ಒಟ್ಟು ಮಾರಾಟವಾಗುವ ವಜ್ರಗಳಲ್ಲಿ ಶೇಕಡಾ 80-90 ಸಣ್ಣ ಗಾತ್ರದ ವಜ್ರಗಳು ಎಂಬುದು ಗಮನಾರ್ಹ.
ಭೂಮಿಯಾಳದಿಂದ ಅಗೆದು ತೆಗೆದ ವಜ್ರಗಳು ಮತ್ತು ಪ್ರಯೋಗಾಲಯಗಳಲ್ಲಿ ಬೆಳೆಸಿದ ವಜ್ರಗಳು ಏಕರೂಪದವು. ಈ ಸಂಗತಿ ಹೆಚ್ಚೆಚ್ಚು ಯುವಜನರಿಗೆ ಅರ್ಥವಾದರೆ ಪ್ರಯೋಗಾಲಯದಲ್ಲಿ ಬೆಳೆಸಿದ ವಜ್ರಗಳ ಮಾರಾಟ ಹೆಚ್ಚಲಿದೆ, ಅಲ್ಲವೇ?
ಫೋಟೋ 1: ಭೂಮಿಯಾಳದಿಂದ ತೆಗೆದು ಸಾಣೆ ಹಿಡಿದ ವಜ್ರ
ಫೋಟೋ 2 ಮತ್ತು 3: ಪ್ರಯೋಗಾಲಯದಲ್ಲಿ ಬೆಳೆಸಿದ ವಜ್ರಗಳು