ಪ್ರಳಯ ಪ್ರತಾಪ

ಪ್ರಳಯ ಪ್ರತಾಪ

‘ ಈ ವರ್ಷ ಹಾಸ್ಯೋತ್ಸವ ಇರುವುದಿಲ್ಲವೆ?’ ಎಂದೊಬ್ಬರು ಕೇಳಿದ್ದರು. ಡಿ 2012ರಂದು ಪ್ರಳಯವಾಗಿ ಇಡೀ ವಿಶ್ವವೇ ನಾಶವಾಗಿಹೋಗುವ ಹಿನ್ನಲೆಯಲ್ಲಿ ಅವರು ಆ ಪ್ರಶ್ನೆ ಹಾಕಿದ್ದರು. ‘ಯೋಚನೆ ಮಾಡಬೇಡಿ. ಡಿ 20ರಂದೇ ಹಾಸ್ಯೋತ್ಸವ ಆಚರಿಸೋಣ. ಎಲ್ಲರೂ ನಗುತಾ ನಗುತಾ ವಿದಾಯ ಹೇಳೋಣ' ಎಂದು ಅವರಿಗೆ ಸಮಾಧಾನ ಹೇಳಿದ್ದೇನೆ.
 
ಪ್ರಳಯ ಖಂಡಿತ ಎಂದು ಅನೇಕರು ನಂಬಿದ್ದಾರೆ. ಇಡೀ ಭೂಮಿಯೇ ಇಲ್ಲವಾಗುತ್ತದೆ ಎಂದು ಭವಿಷ್ಯವಾದಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ನಾವು, ನೀವು, ಅವರು, ಇವರು, ನಮ್ಮ ರಾಜಕಾರಣಿಗಳು ಸೇರಿದಂತೆ ಎಲ್ಲರೂ ನಿರ್ಗಮಿಸುತ್ತಾರೆ. ಕಲಿಯುಗದ ಅಂತ್ಯ ಡಿ 21ರಂದು ಆಗಲಿದೆ ಎನ್ನಲಾಗಿದೆ. ರಾಜಕಾರಣಿಗಳು ನಿರ್ಗಮಿಸುತ್ತಾರೆ. ಪರ್ಮನೆಂಟಾಗಿ ಎಂಬುದು ಯಥೇಚ್ಛ ಖುಷಿ ತರುವ ಮಾತಾದರೂ ಅದನ್ನು ನೋಡಲು ನಾವು, ನೀವು ಇರುವುದಿಲ್ಲ ಎಂಬುದು ಮಾತ್ರ ಅಷ್ಟೇ ದುಃಖದ ಸಂಗತಿ .
 
ಡಿ 21ರ ಪ್ರಳಯದಲ್ಲಿ ಎಲ್ಲ ಮಾನವರೂ ಇಲ್ಲಾಗುತ್ತಾರೆ ಎಂದು ಒಂದು ಕ್ಷಣ ನಂಬೋಣ. ಆಗ ನಮ್ಮ ನಿಮ್ಮ ಮಟ್ಟಿಗೆ ಮಾತ್ರ ವಿಶ್ವ ಅಂತ್ಯವಾಗಿರುತ್ತದೆ . ಪಕ್ಷಿ ಪ್ರಾಣಿಗಳು, ಗಿಡ ಮರಗಳು , ಇತರ ಜೀವ ಸಂಕುಲ ಮಾತ್ರ ಉಳಿದುಕೊಂಡಿರುತ್ತವೆ . ‘ಹೀಗೂ ಉಂಟೆ !’ ಎಂದು ಉದ್ಗಾರ ಎಳೆಯುವ ಬದಲು ಹೀಗೂ ಆಗಬಹುದು ಎಂದು ಭಾವಿಸಲು ತೊಂದರೆ ಏನಿಲ್ಲವಷ್ಟೆ ?
 
ವ್ಹಾ ! ಒಂದು ಕ್ಷಣ ಕಲ್ಪಿಸಿಕೊಳ್ಳಿ . ಇಡೀ ಜಗತ್ತಿನಲ್ಲಿ ಮನುಷ್ಯರೇ ಇಲ್ಲ. ಅಣ್ಣಾ ಹಜಾರೆಯಂತಹ ಸಾತ್ವಿಕರು , ಅಲ್ ಖೈದಾ ಅಂತಹ ಭಯೋತ್ಪಾದಕರು, ವೆಜಿಟೇರಿಯನ್ನರು, ನಾನ್ ವೆಜಿಟೇರಿಯನ್ನರು, ಸಚಿನ್, ರೂಮಿ, ಅಂತಹ ಕ್ರೀಡಾಪಟುಗಳು , ಕರೀನಾ , ಕತ್ರಿನಾ , ಎಸ್ ಆರ್ ಕೆ ಅಂತಹ ನಟರು ಯಾರೂ ಇರುವುದಿಲ್ಲ. ಯಾರಿಗಾಗಿ 24/7 ವಾರ್ತೆ ಬಿತ್ತರಿಸಬೇಕು, ಬಿತ್ತಿಸುವುದಾದರೂ ಯಾರು?
 
ಆಗ ಎಲ್ಲ ಪಕ್ಷಿಗಳು ಭೂಮ್ಯಾಕಾಶದಲ್ಲಿ ನಿರ್ಭಯವಾಗಿ ಹಾರಿಕೊಂಡಿರಬಹುದು . ಮೋಜಿಗಾಗಿ ಅದನ್ನು ಗುಂಡಿಟ್ಟು ಕೊಲ್ಲಲು , ತಮ್ಮ ಸಂತೋಷಕ್ಕಾಗಿ ಪಂಜರದಲ್ಲಿ ಬಂಧಿಸಿಡಲು ಅವಕಾಶವೇ ಇರುವುದಿಲ್ಲ. ಏಕೆಂದರೆ ಜನರೇ ಇರುವುದಿಲ್ಲವಲ್ಲ. ಜನರೇ ಇಲ್ಲದ ಮೇಲೆ ವಿಮಾನಗಳು , ವಿಜಯ್ ಮಲ್ಯ ಅವರ ವಿಮಾನಗಳಂತೆ, ಹಾರುವುದೇ ಇಲ್ಲವಾದ್ದರಿಂದ ಪಕ್ಷಿಗಳು ಇಂಜಿನ್ ಒಳಗೆ ನುಸುಳುವ ಸಾಧ್ಯತೆಯೇ ಇರುವುದಿಲ್ಲವಲ್ಲ. ಕುರಿ ಕೋಳಿಗಳ ಕತ್ತನ್ನು ಕಚಕ್ ಎಂದು ಕತ್ತರಿಸಲು ಜನರಿರುವುದಿಲ್ಲವಲ್ಲ. ಆನೆಯಾದರೆ ಭಾರವಾದ ವಸ್ತುಗಳನ್ನು ಎಳೆಯಲು ದುಡಿಮೆಗೆ ಹಚ್ಚುವ ಮಂದಿ ಇರರು. ಸರ್ಕಸ್ ನಲ್ಲಿ ಚಾಟಿಯಲ್ಲಿ ಹೊಡೆಸಿಕೊಂಡು ಜನರ ಮುಂದೆ ಪ್ರದರ್ಶನ ನೀಡಬೇಕಾಗಿ ಬರದು. ಮರವಾಗಿದ್ದರೆ ಕೊಡಲಿ ಏಟು ತಪ್ಪಿಸಿಕೊಳ್ಳಬಹುದು. ಎಲ್ಲ ಹೂಗಳು ವನಸುಮದಂತೆ ಮೌನದಿಂದ ಅರಳಬಹುದು. ನದಿಯಾದರೆ ಬಲೆಗೆ ಬೀಳುವ ಭಯವಿಲ್ಲದೆ ನೀರಿನಲ್ಲಿ ಈಜಿಕೊಂಡಿರಬಹುದು. ರೇಷ್ಮೆ ಹುಳುವಾದರೆ ಕುದಿಯುವ ನೀರಿನಲ್ಲಿ ಚಿತ್ರಹಿಂಸೆಗೊಳಗಾಗಿ ಯಾವುದೋ ಮಹಿಳೆಯ ದೇಹವನ್ನು ಅಲಂಕರಿಸುವ ಸಿಲ್ಕ್ ಸೀರೆಯಾಗಿ ಡಿಸ್ಕೌಂಟ್ ರೇಟಿನಲ್ಲಿ ಬಿಕರಿಯಾಗುವ ಮಾಲಾಗುವುದನ್ನು ತಪ್ಪಿಸಬಹುದು.
 
ಮಳೆ ಆದರೆ ಆಸಿಡ್ ನೊಂದಿಗೆ ಕಲಿಷಿತಗೊಳ್ಳದೆ ಶುಭ್ರ ಹನಿಯಾಗಿ ನೆಲ ಸೇರಬಹುದು. ಆಮ್ಲಜನಕವಾದರೆ ಮಾಲಿನ್ಯಗೊಳ್ಳುವ ಅವಕಾಶವೇ ಇಲ್ಲವಾಗಬಹುದು. ಸಾಗರದಲ್ಲಿ ಕಲುಷಿತ ಎಣ್ಣೆ ಬೆರೆಯದೆ ಇರಬಹುದು.
 
ವ್ಹಾ ! ಮನುಷ್ಯನ ಗಜಿಬಿಜಿ ಇಲ್ಲ. ಕಿರುಚಾಟ , ಕೂಗಾಟ , ಭಾಷಣಗಳಿರುವುದಿಲ್ಲ . ಎಫ್. ಎಂ. ಟೀವಿಗಳ ಸದ್ದಿಲ್ಲ. ನೊ ಬ್ರೇಕಿಂಗ್ ನ್ಯೂಸ್.
 
ಕೇಳಿ ಬರುವುದು ಪಕ್ಷಿಯ ಚಿಲಿಪಿಲಿ, ಹರಿಯುವ ನೀರಿನ ಜುಳುಜುಳು ನಾದ, ಅಲೆಗಳ ಅಬ್ಬರ, ಮರಗಳ ಸುಂಯ್ ಸುಂಯ್ , ದುಂಬಿಯ ಝೇಂಕಾರ, ಅಪ್ಪಳಿಸುವ ಮಳೆಯ ಪಟ್ ಪಟ್ ನಿನಾದ...
 
ಮಾಲಿನ್ಯವಿಲ್ಲದ ಶುಭ್ರ ಆಕಾಶದಲ್ಲಿ ಹೊಳೆಯುವ ತಾರೆಗಳು ಎಲ್ಲೆಡೆ ನೋಡಲು ಲಭ್ಯ.
 
ಎಲೈ ಭೂಮಿಯೇ , ನೀನೀಗ ಸಲೀಸಾಗಿ ಉಸಿರಾಡಬಹುದು - ಮತ್ತೆ ಮಾನವ ಜನ್ಮ ಅವತರಿಸುವವರೆಗೂ !
 
(ಟೈಂಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ನಾರಾಯಣಿ ಗಣೇಶ್ ಅವರ ಲೇಖನವನ್ನು ಆಧರಿಸಿ)
 
(ಚಿತ್ರ ಕೃಪೆ : ಗೂಗಲ್)