ಪ್ರಳಯ ಹಾಗೂ ಭಾರತೀಯ ಕಾಲಮಾನ

ಪ್ರಳಯ ಹಾಗೂ ಭಾರತೀಯ ಕಾಲಮಾನ

ಬರಹ

2012 ರಲ್ಲಿ ಪ್ರಳಯವಂತೆ! ಕಾಲ ಚಕ್ರಗಳನ್ನು ಅಳವಡಿಸಿದ ಬದುಕಿನ ಜಟಕಾ ಬಂಡಿಯಲ್ಲಿ ಕುಳಿತು ಸಾಗುತ್ತಿರುವ ಮನುಷ್ಯನ ಮನಸ್ಸಿನಲ್ಲಿ ಬಹಳ ಹಿಂದಿನಿಂದಲೂ ಆಗಾಗ ಇಂತಹ ಏನಾದರೊಂದು `ಪ್ರಳಯ' ಆಗುತ್ತಲೇ ಇದೆ. ಇದಕ್ಕೆ ಪೂರ್ಣ ವಿರಾಮ ಬೀಳುವುದು ಬಹುಷಃ `ಅಂತ್ಯ ಕಾಲ'ದ ಪ್ರಳಯ ಸಂಭವಿಸಿದಾಗಲೇ!!


2012ರ `ಪ್ರಳಯ' ಕುರಿತು ಈಗಾಗಲೇ ಸಾಕಷ್ಟು ಮಂದಿ ಬರೆದಿದ್ದಾರೆ; ವೈಜ್ಞಾನಿಕ ಚಿಂತನೆಗಳನ್ನು ನಡೆಸಿ ವಾಸ್ತವಾಂಶಗಳನ್ನು ತೆರೆದಿಟ್ಟಿದ್ದಾರೆ; ಹೆದರಬೇಡಿ ಎಂದು ಅಭಯ ನೀಡಿದ್ದಾರೆ; `ಪ್ರಳಯ'ದ ಹೆಸರಿನಲ್ಲಿ ತಮ್ಮ `ಭವಿಷ್ಯ'ಕ್ಕಾಗಿ ಹಣ ಗುಡ್ಡೆ ಹಾಕುವವರ ಹಾಗೂ `ಅನಾಯಾಸ ಕೀರ್ತಿ' ಸಂಪಾದಿಸುವವರ ವಿರುದ್ಧ ಎಚ್ಚರಿಕೆಗಳನ್ನೂ ನೀಡಿದ್ದಾರೆ. ಮಾಯನ್ನರು ತಮ್ಮ ಕ್ಯಾಲೆಂಡರನ್ನು ಆಧಾರವಾಗಿಟ್ಟುಕೊಂಡು `ಪಿಸುಗುಟ್ಟಿರುವ' ಈ ವಾಣಿಯಲ್ಲಿ ಹುರುಳಿಲ್ಲ; 2012 ಕ್ಕೆ ಮುಗಿಯುವುದು ಮಾಯನ್ನರ ಕ್ಯಾಲೆಂಡರೇ ಹೊರತು- ಜಗತ್ತು ಅಲ್ಲ ಎಂದು ವಾದಿಸಿದ್ದಾರೆ! ಹೀಗಾಗಿ ಇಲ್ಲಿ ಅದೆಲ್ಲಾ ಹಿನ್ನೆಲೆಯ ವಿವರಣೆ ಅಗತ್ಯವಿಲ್ಲ.


ಈ ವಿಷಯ ನಂಬಲು ಹಾಗೂ ವರ್ಣ ರಂಜಿತವಾಗಿ ಬಿತ್ತರಿಸಲು ನಮ್ಮ ಭಾರತೀಯ ವೈದಿಕರು, ಪಂಡಿತರು, ಜ್ಯೋತಿಷಿಗಳು ಹಾಗೂ ಸಮೂಹ ಮಾಧ್ಯಮದವರಿಗೆ ತಲೆ ಕಟ್ಟಿದೆಯೇ ಎಂಬುದೇ ನನ್ನ ಶಂಕೆ! ಈ ವಿಷಯವೂ ಸಹ, ಭಾರತೀಯರಲ್ಲಿ ಒಂದಾಗಿ ಬೆರೆತುಹೋಗಿರುವ ಪಾಶ್ಚಾತ್ಯ ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ಗುಲಾಮಗಿರಿಯ ಒಂದು ಪ್ರತಿಬಿಂಬವೇ ಸರಿ. ಲಾಭಕೋರತನದ ಸಮೂಹ ಮಾಧ್ಯಮಗಳ ಮನೆ ಹಾಳಾಗಲಿ ಬಿಡಿ; ಆದರೆ ತಮ್ಮ ನಿತ್ಯ ಕರ್ಮಗಳಲ್ಲಿ ಒಂದಾದ ಸಂಧ್ಯಾ ವಂದನೆ ಮತ್ತಿತರೆ ಪೂಜಾ ವಿಧಿ ವಿಧಾನ ಮಾಡುವಾಗ ಭಾರತೀಯ ವೈದಿಕರು, ಜ್ಯೋತಿಷಿಗಳು ಹಾಗೂ ಪಂಡಿತರು ಹೇಳುವ `ಸಂಕಲ್ಪ'ದ ಮಂತ್ರಗಳನ್ನು- ಅವರು ಕೇವಲ `ಕುರುಡು ಪಾಠ'ದಂತೆ ಪಠಿಸುತ್ತಿದ್ದಾರೆಯೋ ಅಥವಾ ಬೇಕೆಂದೇ ನಮ್ಮ ಭಾರತೀಯ ಕಾಲ ಗಣನೆಯ ಮಹತ್ವದ ವಿಷಯವನ್ನು ಮುಚ್ಚಿಡುತ್ತಿದ್ದಾರೆಯೋ ಎಂಬ ಶಂಕೆಯೇ ನನ್ನ ವ್ಯಥೆ!


ಉದಾಹರಣೆಗೆ, `ಸಂಕಲ್ಪ'ದ ಮಂತ್ರ ಹೀಗಿದೆ ನೋಡಿ:


`ಶುಭೇ ಶೋಭನೇ ಮುಹೂರ್ತೇ;


ಆದ್ಯ ಬ್ರಹ್ಮಣ ದ್ವಿತೀಯ ಪರಾರ್ಧೆ,


ವೈವಸ್ವತ ಮನ್ವಂತರೇ; ಕಲಿಯುಗೇ ಪ್ರಥಮ ಪಾದೇ.....


ಹೀಗೆ ಮುಂದುವರೆಯುತ್ತದೆ ಸಂಕಲ್ಪ ಮಂತ್ರ. ಅಂದರೆ, `ಆದಿ ಬ್ರಹ್ಮನ ದ್ವಿತೀಯ ಪರಾರ್ಧದ ವೈವಸ್ವತ ಮನ್ವಂತರದಲ್ಲಿನ ಕಲಿಯುಗದ ಪ್ರಥಮ ಪಾದದಲ್ಲಿ ಈಗ ನಾವಿದ್ದೇವೆ! ವಾಸ್ತವವಾಗಿ ಸೂರ್ಯ, ಚಂದ್ರ ಹಾಗೂ ಭೂಮಿ ಸೇರಿದಂತೆ ಎಲ್ಲ ಗ್ರಹ- ನಕ್ಷತ್ರಗಳು ಮತ್ತಿತರೆ ವಿಶ್ವದಲ್ಲಿನ ಎಲ್ಲದಕ್ಕೂ ಒಂದು `ಅಂತ್ಯ' ಎಂಬುದು ಇದ್ದೇ ಇದೆ. ಇದು ಸಾಮಾನ್ಯ ಜ್ಞಾನ. ವಿಜ್ಞಾನವೂ ಇದನ್ನು ಒಪ್ಪಿದೆ. ಆದರೆ ಭಾರತೀಯ ಋಷಿ ಪ್ರಣೀತ ಕಾಲ ಮಾನವು ಈ `ಅಂತ್ಯ' ಹಾಗೂ `ಪುನರಾರಂಭ'ಗಳ ಲೆಕ್ಕವನ್ನೂ ಸಿದ್ಧ ಮಾಡಿಕೊಟ್ಟಿದೆ!! ಆ ಪ್ರಕಾರವೇ ಲೆಕ್ಕ ಹಾಕಿದರೂ ಸಹ ಈ ಕಲಿಯುಗದಲ್ಲಿ `ಪ್ರಳಯ' ಸಂಭವಿಸಲು ಇನ್ನೂ ಲಕ್ಷಾಂತರ ವರ್ಷಗಳು ಬಾಕಿ ಇದೆ. ಇದು ನಮ್ಮ ವೈದಿಕರು, ಜ್ಯೋತಿಷಿಗಳು ಹಾಗೂ ಪಂಡಿತರಿಗೆ ತಿಳಿಯದೆ? ಅಥವಾ ತಿಳಿದಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆಯೋ!?


ಯಾವುದು ಈ ಭಾರತೀಯ ಋಷಿ ಪ್ರಣೀತ ಕಾಲಮಾನ? ಈಗ ತಿಳಿಯೋಣ:


ನಿಮೇಷ: ಒಮ್ಮೆ ಕಣ್ಣು ರೆಪ್ಪೆ ಮಿಟುಕಿಸುವ ಕಾಲ- ಇಲ್ಲಿಂದ ಪ್ರಾರಂಭಿಸಿದಾಗ-


15 ನಿಮೇಷ= 1 ಕಾಷ್ಠಾ


30 ಕಾಷ್ಠಾ= 1 ಕಲಾ (8 ಸೆಕೆಂಡು)


30 ಕಲಾ= 1 ಕ್ಷಣ (4 ನಿಮಿಷಗಳು)


12 ಕ್ಷಣ= 1 ಮುಹೂರ್ತ (48 ನಿಮಿಷಗಳು)


30 ಮುಹೂರ್ತ= 1 ದಿನ (ಅಹೋರಾತ್ರಿ)= 1 ತಿಥಿ


15 ದಿನ= 1 ಪಕ್ಷ


2 ಪಕ್ಷ= 1 ಮಾಸ (ತಿಂಗಳು)


12 ಮಾಸ= 1 ವರ್ಷ (ಸಂವತ್ಸರ ಅಥವಾ ಮಾನುಷ ವರ್ಷ)


ಮಾನುಷ ವರ್ಷಗಳಿಂದ ದೇವ ಕಾಲಮಾನಗಳ ಲೆಕ್ಕ:


1 ಮಾನುಷ ವರ್ಷ= ದೈವ ಕಾಲದ 1 ದಿನ (ಉತ್ತರಾಯಣವೇ ಹಗಲು ಮತ್ತು ದಕ್ಷಿಣಾಯನವೇ ರಾತ್ರಿ). ದೇವ ಕಾಲಮಾನವೂ ಸಹ ವರ್ಷದ 12 ತಿಂಗಳುಗಳ ಪ್ರಕಾರವೇ ದ್ವಿಗುಣವಾಗುತ್ತಾ ಹೋಗುತ್ತದೆ. ಆ ಪ್ರಕಾರ:


360 ಮಾನುಷ ವರ್ಷ= ದೇವ ಕಾಲದ 360 ದಿನ- ದೈವ ಕಾಲದ 1 ವರ್ಷ


1200 ದೇವ ವರ್ಷ=  4,32,000 ಮಾನುಷ ವರ್ಷ= 1 ಕಲಿಯುಗದ ಅವಧಿ


2400 ದೇವ ವರ್ಷ=  8,64,000 ಮಾನುಷ ವರ್ಷ- 1 ದ್ವಾಪರ ಯುಗದ ಅವಧಿ


3600 ದೇವ ವರ್ಷ= 12,96,000 ಮಾನುಷ ವರ್ಷ-1 ತ್ರೇತಾ ಯುಗದ ಅವಧಿ


4800 ದೇವ ವರ್ಷ= 17,28,000 ಮಾನುಷ ವರ್ಷ-1 ಕೃತ ಯುಗದ ಅವಧಿ


------------------------------------------------------------------------


12,000 ದೇ.ವರ್ಷ= 43,20,000 ಮಾನುಷ ವರ್ಷ= 1 ಚತುರ್ಯುಗ (ಮಹಾ ಯುಗ) ಅವಧಿ


---------------------------------------------------------------------------


(ಪ್ರತಿ ಯುಗವನ್ನೂ ತಲಾ 4 ಪಾದಗಳಾಗಿ ವಿಂಗಡಿಸಲಾಗಿದೆ)


ಇಂತಹ 71 ಚತುರ್ಯುಗಗಳು ಕಳೆದರೆ= 1 `ಮನ್ವಂತರ'


ಇಂತಹ 14 ಮನ್ವಂತರಗಳು ಕಳೆದರೆ= ಬ್ರಹ್ಮನ ಒಂದು ಹಗಲು


ಪುನಃ ಇಂತಹ 14 ಮನ್ವಂತರ ಕಳೆದರೆ= ಬ್ರಹ್ಮನ ಒಂದು ರಾತ್ರಿ


ಹೀಗೆ ಒಟ್ಟು 28 ಮನ್ವಂತರಗಳಾದರೆ= ಬ್ರಹ್ಮನಿಗೆ 1 ದಿನ


ಬ್ರಹ್ಮನ ಇಂತಹ 1 ದಿನವೇ= ಒಂದು `ಕಲ್ಪ' (ಈಗ ನಡೆಯುತ್ತಿರುವುದು ಶ್ವೇತ ವರಾಹ ಕಲ್ಪ)


360 ಕಲ್ಪಗಳು (ಬ್ರಹ್ಮ ದಿನಗಳು)= 1 `ಬ್ರಹ್ಮ ವರ್ಷ'


ಇಂತಹ 100 ಬ್ರಹ್ಮ ವರ್ಷಗಳು= `ಬ್ರಹ್ಮ ಪಟ್ಟ' (ಅರ್ಥಾತ್ ಬ್ರಹ್ಮನ ಪೂರ್ಣ ಆಯಸ್ಸು)


ಈ ಲೆಕ್ಕದಲ್ಲಿ ಈಗಾಗಲೇ ಕಳೆದು ಹೋಗಿರುವ ಕಾಲವನ್ನು 2 ರೀತಿಯಲ್ಲಿ ಹೇಳಬಹುದು:


1) ಈಗ ಕಳೆದು ಹೋಗಿರುವ ಕಾಲ (ಪ್ರಥಮ ಪರಾರ್ಧ) 50 ಬ್ರಹ್ಮ ವರ್ಷ. ಈಗ ನಡೆಯುತ್ತಿರುವುದು (ದ್ವಿತೀಯ ಪರಾರ್ಧ) 51 ನೇ ಬ್ರಹ್ಮ ವರ್ಷ! ಇನ್ನೂ ಸೂಕ್ಷ್ಮವಾಗಿ ಹೇಳಬೇಕೆಂದರೆ 51 ನೇ ವರ್ಷದ, ಮೊದಲ ಮಾಸದ, ಮೊದಲ ಪಕ್ಷದ, ಮೊದಲ ದಿನದ (8 ಯಾಮಗಳಲ್ಲಿ) 2ನೇ ಯಾಮ ನಡೆಯುತ್ತಿದೆ. ಈ 2ನೇ ಯಾಮದಲ್ಲಿ ಮೂರನೇ ಮುಹೂರ್ತ ಹಾಗೂ ಈ ಮುಹೂರ್ತದಲ್ಲಿ ಇನ್ನೂ ಪ್ರಥಮ ಪ್ರಾಣಾಯಾಮ ನಡೆಯುತ್ತಿದೆ- ಅಂದರೆ, ಬ್ರಹ್ಮನ 51 ನೇ ವಯಸ್ಸಿನಲ್ಲಿ ಇನ್ನೂ ಆತನ ಮೊದಲ ಉಸಿರಾಟದ ಕಾಲದಲ್ಲಿ ಈಗ ನಾವಿದ್ದೇವೆ!!


2ನೇ ರೀತಿ: ಬ್ರಹ್ಮನ ಒಂದು ದಿನವೇ ಕಲ್ಪ ಎಂದು ಈಗಾಗಲೇ ಹೇಳಿದೆ. ಈಗ ಶ್ವೇತ ವರಾಹ ಕಲ್ಪ. ಈ ಕಲ್ಪದ ಹಗಲಿನ 14 ಮನ್ವಂತರಗಳಲ್ಲಿ 6 ಮನ್ವಂತರಗಳು ಕಳೆದಿವೆ. ಈಗ ಏಳನೆಯದಾದ ವೈವಸ್ವತ ಮನ್ವಂತರದ 71 ಚತುರ್ಯುಗಗಳಲ್ಲಿ 27 ಚತುರ್ಯುಗಗಳು ಕಳೆದಿವೆ. ಈಗ 28 ನೇ ಚತುರ್ಯುಗ (ಮಹಾಯುಗ) ದಲ್ಲಿನ ಕೃತ 17,28,000 ವರ್ಷ, ತ್ರೇತಾ 12,96,000 ಹಾಗೂ ದ್ವಾಪರ ಯುಗದ 8,64,000 ವರ್ಷಗಳು ಪೂರ್ತಿಯಾಗಿ ಕಳೆದಿವೆ. ಈಗ ನಡೆಯುತ್ತಿರುವ ಕಲಿಯುಗ ವ್ಯಾಪ್ತಿಯ 4,32,000 ವರ್ಷಗಳಲ್ಲಿ ಇನ್ನೂ ಪ್ರಥಮ ಪಾದದ 5110 ವರ್ಷಗಳು ಮಾತ್ರ ಕಳೆದಿವೆ! ಈಗಿನ್ನೂ 2009ನೇ ಇಸವಿಗೆ, 4,32,000 ವರ್ಷಗಳಲ್ಲಿ 5110 ಕಳೆದರೆ, ಹಾಲಿ ಕಲಿಯುಗ ಮುಗಿಯಲು ಇನ್ನೂ 4,26,890 ವರ್ಷಗಳು ಬಾಕಿ ಇವೆ!! ಈಗಲೇ ಎಲ್ಲಿ ಬಂತು ಪ್ರಳಯ- ಇವರ ಪಿಂಡ!!??


(ಭಾರತೀಯ ಕಾಲ ಗಣನೆಗೆ ಆಧಾರ ಹಾಗೂ ಕೃಪೆ: `ಮಹಾ ಸಂಕಲ್ಪ' ಕೃತಿ: ಸಂಪಾದಿತ ವಿಷಯ ವಿವರಣೆ: ಸಿ. ಸತ್ಯನಾರಾಯಣ ಹಾಗೂ ಪ್ರೊ. ಟಿ.ಎನ್. ಪ್ರಭಾಕರ. ಪ್ರಕಾಶಕರು: `ಸುರಭಿ ಸಂಗಮ', ತುರುವೇಕೆರೆ ಹಾಗೂ `ಜ್ಞಾನ ಭಾರತಿ', ಮಂಗಳೂರು)