ಪ್ರವಾಸ ಕಥನ ; ಅಮೇರಿಕಾ... ಅಮೇರಿಕಾ... (ಭಾಗ 3)

ಪ್ರವಾಸ ಕಥನ ; ಅಮೇರಿಕಾ... ಅಮೇರಿಕಾ... (ಭಾಗ 3)

ಪ್ರಕೃತಿಯ ಈ ಭವ್ಯ ಯೆಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್ 8,992 ಚದರ ಕಿ ಮೀ ಸುತ್ತಳತೆಯಲ್ಲಿ ಹರಡಿಕೊಂಡಿದೆ. ಇಲ್ಲಿ ಸುಮಾರು 10,000 ವಿವಿಧ ಬಗೆಯ ಬಿಸಿ ನೀರಿನ ತಾಣಗಳು ಕಂಡು ಬರುತ್ತವೆ. ಇಲ್ಲಿ 67 ಬಗೆಯ ಹಾಲುಣಿಸುವ ಸಸ್ತನಿಗಳು ಹಾಗೂ 285 ವಿಭಿನ್ನ ಪಕ್ಷಿ ಸಂಕುಲಗಳು ಕಂಡುಬರುತ್ತವೆ. ಇಲ್ಲಿ ಸುಮಾರು 290 ಕ್ಕೂ ಹೆಚ್ಚಿನ ಭೋರ್ಗುಡುವ ಫಾಲ್ಸ್ ಗಳು ಕಂಡುಬರುತ್ತವೆ. ಇಲ್ಲಿಯ ಕಡಿದಾದ ಮಹೋನ್ನತ ಬೆಟ್ಟಗಳು ಚಾರಣ ಮಾಡುವವರಿಗೆ ಸ್ವರ್ಗ ಎಂದೇ ಹೇಳಬಹುದು.

ಯೆಲ್ಲೋ ಸ್ಟೋನ್ ನ ಪ್ರಕೃತಿಯ ರಾಯಭಾರಿ ಬೈಸನ್: ನಾವು ಕಾರಿನಲ್ಲಿ ಯಲ್ಲೋಸ್ಟೋನ್ ನ್ಯಾಷನಲ್ ಪಾರ್ಕನ್ನು ಪ್ರವೇಶಿಸಿದ್ದೆವು. ಒಂದರ್ಧ ಗಂಟೆಯ ಕಾಡಿನ ಪಯಣ ನಿರಾತಂಕವಾಗಿ ಸಾಗಿತು. ಇದ್ದಕ್ಕಿದ್ದಂತೆ ನನ್ನ ಮೊಮ್ಮಗ ಸುಧನ್ವ ಕಿರುಚಿದ ' ತಾತಾ ಅಲ್ಲಿ ನೋಡು' ಎಂದ. ಅಲ್ಲಿ ನೋಡಿದರೆ ದೈತ್ಯಾಕಾರದ ಎರಡು ಕಾಡೆಮ್ಮೆಗಳು ತಮ್ಮ ಪಾಡಿಗೆ ತಾವು ಹುಲ್ಲನ್ನು ಮೇಯುತ್ತಿದ್ದವು. ವಿನಯ್ ಕಾರನ್ನು ನಿಲ್ಲಿಸಿದ. ಎಲ್ಲರೂ ಇಳಿದೆವು. ನಮ್ಮ ಹಾಗೆ ಬಹಳಷ್ಟು ಜನ ಪ್ರವಾಸಿಗರು ಕಾರಿನಿಂದ ಇಳಿದು ಈ ದೃಶ್ಯವನ್ನು ಕಣ್ತುಂಬಿಕೊಳ್ಳ ತೊಡಗಿದರು. (ಚಿತ್ರ 1)

ಇವು ಅಮೇರಿಕಾದ ಕಾಡೆಮ್ಮೆಗಳು. ನೋಡಲು ದಷ್ಟಪುಷ್ಟವಾಗಿದ್ದವು. ಇಡೀ ಅಮೇರಿಕಾದಲ್ಲಿ ಇಲ್ಲಿ ಮಾತ್ರ ನೀವು ಕಾಡೆಮ್ಮೆಗಳನ್ನು ನೋಡಬಹುದು.ಇತ್ತೀಚಿನ ಸರ್ವೇ ಪ್ರಕಾರ ಇಲ್ಲಿ ಸುಮಾರು 4,800 ಕಾಡೆಮ್ಮೆಗಳು ಇವೆಯಂತೆ. ಇವು ಕೂಡಾ ಗುಂಪಿನಲ್ಲಿ ವಾಸಿಸುವ ಸಸ್ತನಿಗಳು. ಅದರಲ್ಲಿ ಒಂದು ಕಾಡು ಕೋಣ ಬಂದು ನಮ್ಮ ಕಾರನ್ನು ಗುದ್ದಿದ್ದರೂ ನಮ್ಮ ಕಾರು ಅಪ್ಪಚ್ಚಿಯಾಗುವುದರಲ್ಲಿ ಯಾವುದೇ ಸಂದೇಹವಿರಲಿಲ್ಲ! ಇವು ಸುಮಾರು 6 ಅಡಿ ಎತ್ತರ ಹಾಗೂ 11 ಅಡಿಗೂ ಹೆಚ್ಚು ಉದ್ದವಾಗಿದ್ದಂತೆ ಕಂಡುಬಂದವು. ಈ ಬೈಸನ್ ಗಳು ಕುದುರೆಗಳಿಗಿಂತಲೂ ವೇಗವಾಗಿ ಓಡಬಲ್ಲವಂತೆ! ಇವುಗಳ ಆಯಸ್ಸು ಸರಾಸರಿ 25 ವರ್ಷಗಳು. ಗಂಡು ಹೆಣ್ಣುಗಳೆರಡಕ್ಕೂ ಕೊಂಬುಗಳು ಇರುತ್ತವೆ. ಸುಮಾರು 10 ನಿಮಿಷಗಳ ಕಾಲ ಈ ರಾಯಭಾರಿಯನ್ನು ಮನತಣಿಯೆ ನೋಡಿ ಆಲ್ಲಿಂದ ನಿರ್ಗಮಿಸಿದೆವು.

ಫಾಲ್ಸ್ ಗಳ ಸ್ವರ್ಗ ಯೆಲ್ಲೋಸ್ಟೋನ್: ನಿಮಗೆ ಫಾಲ್ಸ್ ಗಳನ್ನು ಬೇಟೆಯಾಡುವ ಹವ್ಯಾಸವಿದ್ದರೆ ಇಲ್ಲಿಯ ಸುಮಾರು 300 ಫಾಲ್ಸ್ ಗಳನ್ನು ನೋಡಿ ಹೃನ್ಮನಗಳನ್ನು ತುಂಬಿಕೊಳ್ಳಬಹುದು. ಇಲ್ಲಿ ಬಹು ಸುಂದರವಾದ 7 ಫಾಲ್ಸ್ ಗಳನ್ನು ಕಾಣಬಹುದು:

1) ಫೈರ್ ಹೋಲ್ ಫಾಲ್ಸ್ 2) ಟವರ್ ಫಾಲ್ಸ್ 3) ಗಿಬ್ಬನ್ ಫಾಲ್ಸ್ 4) ಕೆಪ್ಲರ್ ಕ್ಯಾಸ್ಕೆಡ್ಸ್ 5) ಅನ್ ಡೈನ್ ಫಾಲ್ಸ್ 6) ಆಪ್ಪರ್ ಫಾಲ್ಸ್ 7) ಲೋಯರ್ ಫಾಲ್ಸ್. ನಾವು ಇಲ್ಲಿ ನೋಡಿದ್ದು ಟವರ್ ಫಾಲ್ಸ್. (ಚಿತ್ರ 2) ಇದು ಯೆಲ್ಲೋಸ್ಟೋನ್ ನ ಬಹಳ ಪ್ರಸಿದ್ಧವಾದ ಫಾಲ್ಸ್ ಇದು ಕೇವಲ 132 ಅಡಿ ಎತ್ತರದಿಂದ ಬೀಳುತ್ತಿದ್ದರೂ ಇದರ ರಮಣೀಯತೆ ನಮ್ಮನ್ನು ಬಹುವಾಗಿ ಆಕರ್ಷಿಸಿತು. ಈ ಫಾಲ್ಸ್ ಅನ್ನು ವಿಲಿಯಂ ಹೆನ್ರಿ ಜಾಕ್ಸನ್ 1871ರಲ್ಲಿ ಗುರುತಿಸಿದ. ಇದರ ತಳಭಾಗಕ್ಕೆ ನೀವು ಇಳಿಯಲು ಸಾಧ್ಯವಿಲ್ಲ. ಏಕೆಂದರೆ ದಟ್ಟವಾದ ಕಾಡು ಜೊತೆಗೆ ಭಾರೀ ಭೂ ಸವಕಳಿ. ಇಲ್ಲಿ ನಾವು ಒಂದೆರೆಡು ಕೆಂಪು ಬಾಲದ ರಣಹದ್ದುಗಳನ್ನೂ ಕಂಡೆವು.

(ಇನ್ನೂ ಇದೆ)

ಚಿತ್ರ ಮತ್ತು ಬರಹ : ಕೆ. ನಟರಾಜ್, ಬೆಂಗಳೂರು