ಪ್ರವಾಸ ಕಥನ ; ಅಮೇರಿಕಾ... ಅಮೇರಿಕಾ... (ಭಾಗ 4)

ಪ್ರವಾಸ ಕಥನ ; ಅಮೇರಿಕಾ... ಅಮೇರಿಕಾ... (ಭಾಗ 4)

ಯೆಲ್ಲೋಸ್ಟೋನಿನ ಸುಂದರ ಎಲ್ಕ್ ಗಳು: ಎಲ್ಕ್ ಗಳು ಎಂದರೆ ಒಂದು ರೀತಿಯ ಜಿಂಕೆಗಳ ಜಾತಿಯ ಪ್ರಾಣಿ.  ಮುಂದೆ ಮುಂದೆ ಹೋಗುತ್ತಿದ್ದಂತೆ ನಾವು ಯೆಲ್ಲೋಸ್ಟೋನ್ ನದಿಯ ನೀರನ್ನು ಕುಡಿಯಲು ಬಂದ ಎರಡು ಎಲ್ಕ್ ಪ್ರಾಣಿಗಳನ್ನು ನೋಡಿದೆವು. ಜಿಂಕೆಗಳಿಗಿಂತಲೂ ಕೊಂಚ ದೃಢಕಾಯದ ಪ್ರಾಣಿ ಈ ಎಲ್ಕ್. ಯೆಲ್ಲೋ ಸ್ಟೋನಿನ ಎಲ್ಕ್ ಗಳು ಇಲ್ಲಿಯ ಪ್ರಕೃತಿಯ ಭಾಗವೇ ಆಗಿ ಹೋಗಿವೆ.  ಈ ವನ್ಯ ಪ್ರದೇಶದಲ್ಲಿ 10,000 ದಿಂದ 20,000 ಕ್ಕೂ ಹೆಚ್ಚಿನ ಎಲ್ಕ್ ಗಳು ಇವೆಯಂತೆ. ಗಂಡು ಎಲ್ಕ್ ಗಳು 700 ಪೌಂಡ್ ತೂಗಿದರೆ ಹೆಣ್ಣು ಎಲ್ಕ್ ಗಳು ಸುಮಾರು 500ಪೌಂಡ್ ತೂಗುತ್ತವೆಯಂತೆ. ಇವುಗಳ ಕೂಗುವಿಕೆ ಜಿಂಕೆಗಳ ಕೂಗಿಗಿಂತ ತುಂಬಾ ಜೋರು. ಗಂಡು ಎಲ್ಕ್ ಗಳಿಗೆ ಮಾತ್ರ ಕೊಂಬುಗಳಿರುತ್ತವೆ. ಇವು ಚಳಿಗಾಲದ ಪ್ರಾಣಿಗಳು; ಹೆಚ್ಚು ಶೀತವನ್ನು ತಡೆಯಬಲ್ಲ ಪ್ರಾಣಿ. ಇವು ಸಾಮಾನ್ಯವಾಗಿ ಗುಂಪಿನಲ್ಲೇ ವಾಸಿಸುತ್ತವೆ. ಇಲ್ಲಿಯ ವಿಶಾಲವಾದ ಕಾಡು ಹಾಗೂ ಹುಲ್ಲುಗಾವಲು ಎಲ್ಕ್ ಗಳಿಗೆ ಶ್ರೀರಕ್ಷೆಯಾಗಿದೆ.(ಚಿತ್ರ 1)

ರುದ್ರ ರಮಣೀಯ ಪ್ರಕೃತಿಯ ಸ್ವರ್ಗ: ಇಲ್ಲಿಯ ಪ್ರಕೃತಿಯ ಸೊಬಗನ್ನು ಏನೆಂದು ವರ್ಣಿಸುವುದು? ನೋಡಲು ಕಣ್ಣುಗಳೆರಡೂ ಸಾಲವು. ಸುಂದರವಾದ ಬೆಟ್ಟಗುಡ್ಡಗಳು, ಹರಿವ ನದಿ ತೊರೆಗಳು. ನೇರವಾಗಿ ಎತ್ತರಕ್ಕೆ ಮುಗಿಲು ಮುಟ್ಟುವಂತೆ ನಿಂತ ಮರಗಳು, ಭಯಾನಕ ಪ್ರಪಾತ... ಇಲ್ಲಿ ಸರ್ವಾಂಗ ಸುಂದರ ಪ್ರಕೃತಿಯ ವೈಭವವನ್ನು ಕಾಣಬಹುದು. ಸಂಜೆಯ ವೇಳೆಯ ಸೂರ್ಯಾಸ್ತದ ಸೂರ್ಯನ ಬೆಳಕು ಬೆಟ್ಟಗಳ ಮೇಲೆ ಬಿದ್ದರಂತೂ, ಆ ಹೊಂಬಣ್ಣದ ಪ್ರಕೃತಿಯ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲವು. ಆ ಬೆಟ್ಟಳಂತೂ ಹಳದೀ ಬಣ್ಣದಿಂದ ಹೊಳೆಯುವುದರಿಂದಲೇ ಈ ಪ್ರದೇಶಕ್ಕೆ ಯಲ್ಲೋ ಸ್ಟೋನ್ಎಂಬ ಹೆಸರು ಬಂದಿರಲಿಕ್ಕೂ ಸಾಕು. (ಚಿತ್ರ 2)

ನಾವು ಹೋಗಿದ್ದು ವಸಂತಕಾಲದ ಸಮಯ ಮರಗಿಡಗಳು ತಮ್ಮ ಎಲೆಗಳ ಬಣ್ಣವನ್ನು ಬದಲಿಸುವ ಕಾಲ. ಇಡಿ ಪ್ರಕೃತಿಯೇ ಹಳದಿ, ಕೆಂಪು ಬಣ್ಣಗಳ ಎಲೆಗಳಿಂದ ತುಂಬಿ ಹೋಗಿತ್ತು. ಈ ಕಾಲದಲ್ಲಿ ಈ ಸೊಬಗನ್ನು ನೋಡಲು ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಅಮೇರಿಕನ್ನರು ತುಂಬಾ ಬುದ್ಧಿವಂತರು. ಪ್ರತಿಯೊಂದು ಕಾಡನ್ನೂ ಅವರು ನ್ಯಾಷನಲ್ ಪಾರ್ಕ್ಎಂದು ಘೋಷಿಸಿ ಅವುಗಳನ್ನು ನಿರ್ವಹಣೆ ಮಾಡುವ ಕುಶಲತೆ ಅನುಕರಣೀಯ. ಪ್ರತಿಯೊಂದು ಪಾರ್ಕನ್ನೂ ಆವರು ಪ್ರವಾಸ ತಾಣಗಳನ್ನಾಗಿ ಮಾಡಿ ಆವುಗಳಿಗೆ ಪ್ರವೇಶ ಶುಲ್ಕವನ್ನು ನಿಗದಿ ಪಡಿಸಿ ರಾಷ್ಟ್ರೀಯ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ.

(ಮುಗಿಯಿತು)

ಚಿತ್ರ ಮತ್ತು ಬರಹ : ಕೆ. ನಟರಾಜ್, ಬೆಂಗಳೂರು