ಪ್ರವಾಸ ಕಥನ - ಜೋಗ, ಗೋಕರ್ಣದತ್ತ - ಭಾಗ - ೨

ಪ್ರವಾಸ ಕಥನ - ಜೋಗ, ಗೋಕರ್ಣದತ್ತ - ಭಾಗ - ೨

ಬರಹ

ಪ್ರವಾಸ ಕಥನ - ಜೋಗ, ಗೋಕರ್ಣದತ್ತ

ಭಾಗ - ೨

ಇಷ್ಟರಲ್ಲೇ ಇನ್ನೊಂದು ವಿಷಯ ನಡೆದಿತ್ತು. ನಾವು ಜೋಗವನ್ನು ಬಿಡುವ ಸಮಯಕ್ಕೆ ಸರಿಯಾಗಿ ಶ್ರೀನಿಯ ಇನ್ನೊಂದಿಷ್ಟು ಗೆಳೆಯರ ಗುಂಪು ಜೋಗಕ್ಕೆ ಬರತಲಿತ್ತು. ಆ ರಾತ್ರಿ ಅವರೆಲ್ಲಾ ಅಲ್ಲಿಯೇ ಉಳಿದು ಗಳಸ್ಯ-ಕಂಟಸ್ಯರಾಗಿ ಚಿಂದಿ ಉಡಾಯಿಸುವ ಯೋಜನೆಗಳನ್ನು ಹಾಕಿಯೇ ಬಂದಿದ್ದರು. ಅವರಿಗೆಲ್ಲಾ ರಾತ್ರಿ ಉಳಿದುಕೊಳ್ಳುವ ವ್ಯವಸ್ತೆ ಮಾಡದೆ ಶ್ರೀನಿ ಜೋಗ ಬಿಡುವಂತಿರಲಿಲ್ಲ. ಶ್ರೀನಿಯ ಖಾಸಾ ಗೆಳೆಯನೊಬ್ಬನಿಗೆ ಬ್ರಿಟೀಶ್ ಬಂಗಲೆಯಲ್ಲಿ ರೂಮ್ ಕೊಡಿಸುವಷ್ಟು ಸಂಪರ್ಕವಿತ್ತು, ಅದೂ ಅಲ್ಲದೆ ಅವನೂ ಸರಕಾರಿ ನೌಕರಿಯಲ್ಲಿ ಉತ್ತಮ ಹುದ್ದೆಯಲ್ಲಿದ್ದ. ಅವನ ಮೂಲಕವೆ ನಮಗೆಲ್ಲಾ ಇಲ್ಲಿ ರೂಮ್ ದೊರಕಿರುವುದು. ಬರಬೇಕಾಗಿದ್ದ ಶ್ರೀನಿಯ ಗೆಳಯರಿಗೆ ಉಳಿದುಕೊಳ್ಳುವ ವ್ಯವಸ್ತೆ ಮಾಡದೆ ಶ್ರೀನಿ ಜೋಗ ಬಿಡುವಂತಿರಲಿಲ್ಲ ಮತ್ತು ಶ್ರೀನಿಯನ್ನು ಬಿಟ್ಟು ಗೋಕರ್ಣಕ್ಕೆ ಹೋಗುವ ಮನಸ್ಸು ನಮ್ಮಲ್ಲಾರಿಗೂ ಇರಲಿಲ್ಲ. ನಮ್ಮ ಗೆಳೆತನದ ಹಿರಿತನವನ್ನು ತೋರಿಸಲು ಹೀಗೂ ಒಂದು ಸಂದರ್ಭ ಬರುವುದೆಂದು ಯಾರೂ ನಿರೀಕ್ಷಿಸದಿದ್ದರೂ, ಶೀನಿಯನ್ನು ಬಿಟ್ಟು ನಾವ್ಯಾರೂ ಹೊರಡೆವು ಎಂದು ಒಮ್ಮತವಾಗಿ ನಿರ್ಧರಿಸಿದೆವು. ಶ್ರೀನಿ ನಮ್ಮನ್ನು ಗೋಕರ್ಣಕ್ಕೆ ಕಳುಹಿಸಲು ಸಾಕಷ್ಟು ಪುಸಲಾಯಿಸಿದರೂ ಕಾರ್ಯರೂಪಕ್ಕೆ ಬರಲಿಲ್ಲ.

ಈ ಒಂದು ಘಟನೆಯಿಂದಾಗಿ ಸಂಜೆ ೫:೩೦ಕ್ಕೆ ನಮಗೆ ಗೋಕರ್ಣದತ್ತ ಹೋಗಲು ಸಿಗಬೇಕಾಗಿದ್ದ ಬಸ್ಸು ತಪ್ಪಿ ಹೋಯಿತು. ಯಾರೂ ಆ ಬಗ್ಗೆ ತಲೆ ಕೆಡಿಸಿಕೊಂಡಂತಿರಲಿಲ್ಲ. ಸ್ವಲ್ಪ ಸಮಯದ ನಂತರ ಶ್ರೀನಿ ಅಲ್ಲಿಯ ಎಲ್ಲಾ ವ್ಯವಸ್ತೆ ಮುಗಿಸಿ ನಮ್ಮೊಂದಿಗೆ ಜೊತೆಗೂಡಿದ. ಗುರುಗಳ ಮುಖದಲ್ಲಿ ನಮ್ಮೆಲ್ಲರಿಗಿಂತ ಜಾಸ್ತಿ ಖುಶಿ! ಸಾದಾರಣಕ್ಕಿಂತ ತುಸು ದಪ್ಪವಾಗೇ ಇರುವ ಶ್ರೀನಿ ಇದ್ದರೆ, ಅವರಿಗೆ ಆನೆ ಬಲ ಬಂದಂತೆ! ಸುಮಾರು ೬:೩೦ಕ್ಕೆ ಬಂದ ಶಿರಸಿಗೆ ಹೋಗುವ ಬಸ್ಸು ಹಿಡಿದು ಹೊರಟೆವು. ಮತ್ತೆ ಅಂಕು ಡೊಂಕಾದ ರಸ್ತೆ, ಪಯಣದುದ್ದಕ್ಕೂ ಜಿಟ-ಪಿಟ ಮಳೆ ಹನಿ. ಒಮ್ಮೆ ವಿಶ್ರಾಂತಿಗೆ ಮರಳಿದಂತೆ ನಿಂತು ಹೋದರೆ, ಮತ್ತೊಮ್ಮೆ ತನ್ನ ಇರುವಿಕೆಯನ್ನು ಸಾದರ ಪಡಿಸಲೆಂಬಂತೆ ಜೋರಾಗಿ ಬೀಸುತಿತ್ತು ಮಳೆ. ಸೆಪ್ಟೆಂಬರ್‍‍ನ ಜೋರು ಮಳೆಗೆ, ಹಾವಿನಂತೆ ನುಲಿಯುತ್ತಿದ್ದ ರಹದಾರಿಯಲ್ಲಿ, ಬಸ್ಸಿನ ಹೆಡ್‍ಲೈಟ್‍ನ ಮುಸುಕಾದ ಬೆಳಕಿನಲ್ಲಿಯೆ ಬಸ್ಸನ್ನು ಚಲಾಯಿಸುತ್ತಿದ್ದ ಚಾಲಕನ ಚಾಣಾಕ್ಷ್ಯತನಕ್ಕೆ ಮನಸ್ಸಲ್ಲಿ ಪ್ರಶಂಸಿಸಿ, ತುಂಬಿ ಬರುತ್ತಿದ್ದ ನಿದ್ದೆಗೆ ಶರಣಾದೆ ನಾನು. ಜೋರು ನಿದ್ದೆಯಲ್ಲೂ, ಶ್ರೀನಿ-ಭೀಮ್ ಮತ್ತು ದೀಪಕ್-ನಾರಾಯಣ್‍ರ ಮಾತುಕತೆಗಳು ದೂರದಿಂದಲೆಂಬಂತೆ ಕೇಳಿಸುತ್ತಿತ್ತು.

ಒಂದು ತಾಸಿನಷ್ಟು ನಿದ್ದೆ ಮಾಡಿರಬೇಕು ನಾನು. ಈ ಸಾರಿಯೂ ಕಿಟಕಿ ಪಕ್ಕದ ಸೀಟನ್ನೆ ಆರಿಸಿ ಕೂತಿದ್ದೆ ನಾನು, ಒಬ್ಬಂಟಿಗನಾಗಿ. ಸುತ್ತ-ಮುತ್ತಲೂ ಜನರಿದ್ದರೂ ಈ ಒಂಟಿತನದಲ್ಲಿ ಅದೇನೋ ಹಿತ ನನಗೆ. ನನ್ನ ಒಂಟಿತನದಲ್ಲಿ ನನ್ನೊಳಗಿನ "ನಾನು"ವಿನ ಜೊತೆ ನನ್ನ ಮಾತುಕತೆ ನಡೆಯುತ್ತಲೇ ಇರುತ್ತದೆ. ನನ್ನ ಉತ್ತರವಿಲ್ಲದ ಪ್ರಶ್ನೆಗಳು. ಯಾಕೆ, ಹೇಗೆ, ಎಲ್ಲಿ, ಏನು, ಎತ್ತ - ಎಂಬಿತ್ಯಾದಿ ಎಲ್ಲಾ ಸೇರಿಕೊಳ್ಳುತ್ತಿದ್ದವು. ನನ್ನರಿವಿನ ಪರದೆಯ ಮುಟ್ಟುವ ವಿಷಯಗಳು, ನಡೆದ, ನಡೆಯುವ, ನಡೆಯಬಹುದಾದ ಎಲ್ಲಾ ವಿಧ್ಯಾಮಾನಗಳ ಬಗ್ಗೆ ನನ್ನಲೇ ವಿಶ್ಲೇಷಣೆ, ವಿವರಣೆ, ಚರ್ಚೆ, ಮಂಥನಗಳು ನಡೆಯುತ್ತಲೇ ಇರುತ್ತವೆ. ಮಾತುಗಳು ಹೊರಬರಲು ಹೆದರುತ್ತವೆಯೋ, ಅಥವಾ ನನ್ನ ಅಭಿಪ್ರಾಯಗಳನ್ನು ಇತರರು ಸ್ವೀಕರಿಸಲಾರರೋ ಎಂಬ ಜಿಜ್ನಾಸೆಗೊ ಜೋತುಬಿದ್ದು ನನ್ನಲ್ಲೇ ಉಳಿಯುವ ಭಾವನೆ, ಆಲೋಚನೆಯ ಎಳೆಗಳವು!

ಈ ತನ್ಮದ್ಯೆ ಉಸಿರಾಡದ ನನ್ನ ಮೊಬೈಲನ್ನು ಒಂದೆರಡು ಬಾರಿ ದಿಟ್ಟಿಸಿ ನೋಡಿದೆ. ಮತ್ತೆ ಬ್ಯಾಟರಿಯನ್ನು ಅದಕ್ಕೆ ಸೇರಿಸಿ, ಅದಕ್ಕೆ ಜೀವ ಬರಿಸಿ ನೋಡಬೇಕೆಂದಿದ್ದ ನನ್ನ ಆಸೆಗೆ ನಾರಾಯಣ್‍ನ ಬೆಳಗ್ಗಿನ ಮಾತುಗಳು ತಣ್ಣೀರೆರಚಿದವು. "ಮೊಬೈಲಿನೊಳಗೆ ನೀರು ಇರುವ ತನಕ ಬ್ಯಾಟರಿಯನ್ನು ಹಾಕಬೇಡ. ನೀರು ಹೋದ ನಂತರ ಬ್ಯಾಟರಿ ಹಾಕಿದರೆ, ಮತ್ತೆ ಮೊಬೈಲ್ ವರ್ಕ್ ಆದರೂ ಆಗಬಹುದು" ಅಂದಿದ್ದನವ. ಸಿಮ್ ಮತ್ತು ಬ್ಯಾಟರಿಯೆರಡನ್ನು ತೆಗೆದು ಮೊಬೈಲ್‍ ಅನ್ನು ಸೇರಿಸಿ ಭದ್ರವಾಗಿ ನನ್ನ ಬ್ಯಾಗಿನೊಳಗೆ ತುರುಕ್ಕಿದ್ದೆ. "ಮೊಬೈಲ್‍ನ ಆಸೆ ಬಿಡಿ ಗಿರಿ" ಶ್ರೀನಿ ಕಡೆಮೆಯೆಂದರೂ ೪-೫ ಬಾರಿ ಹೇಳಿದ್ದ! ಮೊಬೈಲ್ ಇಲ್ಲದೆ ನನ್ನ ದಿನಚರಿ ಕೊಂಚ ಕಷ್ಟವೇ ಆಗುತ್ತಿತ್ತು. ಬಸ್ಸು ಹತ್ತುವ ಮೊದಲು ಎಸ್.ಟಿ.ಡಿ ಬೂತ್‍ನಿಂದ ಫೋನ್‍ಕಾಲ್ ಮಾಡಿ ಅಮ್ಮ ಮತ್ತು ತಂಗಿಯ ಜೊತೆ ಮಾತಾಡಿ ಮೊಬೈಲ್ ವಿಷಯ ತಿಳಿಸಿದ್ದೆ, ಅವರು ಗಾಬರಿಯಾಗುವುದು ಬೇಡವೆಂಬ ಕಾರಣದಿಂದ.

ಶಿರಸಿಯಿಂದ ಗೋಕರ್ಣದ ಬಸ್ಸು ಹಿಡಿದು ದೀಪಕ್ ಮನೆಯತ್ತ ಹೊರಟೆವು. ನೀರಿನಲ್ಲಿ ನೆನೆದುದಕ್ಕೆ, ಮತ್ತು ಮೇಲೆ ಕೆಳಗೆ ಓಡಾಡಿದಕ್ಕೆ ಇನ್ನೊಂದು ಸುತ್ತು ನಿದ್ದೆಯಾಗಿತ್ತು ನನಗೆ. ಎದ್ದಾಗ ದೀಪಕ್ ಮೊಬೈಲಿನಿಂದ "ನಿನ್ನಿಂದಲೆ ನಿನ್ನಿಂದಲೆ ಕನಸ್ಸೊಂದು ಶುರುವಾಗಿದೆ" ಹಾಡು ಕೇಳಿಸುತಿತ್ತು. ಹೊಸದಾಗಿ ಬರುವ ಎಲ್ಲಾ ಸಿನೇಮಾಗಳ ಹಾಡನ್ನು ಎಲ್ಲಿಂದಲೊ, ಹೇಗಾದರೂ ಮಾಡಿ ತಂದು ನಮಗೆಲ್ಲಾ ಕೊಡುವ ಕೆಲಸ ಅವನದ್ದೆ. ಅವನಿಂದ ಮೊಬೈಲ್ ತೆಗೆದುಕೊಂಡು, ಒಂದಿಷ್ಟು ಹಾದುಗಳನ್ನು ಕೇಳಿಸಿಕೊಳ್ಳಹತ್ತಿದೆ. ಮಳೆ ಇನ್ನೂ ತೊಟ್ಟು ತೊಟ್ಟಾಗಿ ಬೀಳುತಲಿತ್ತು. ಕೊನೆಗೂ ಹಿರೇಗುಪ್ಪಿ, ದೀಪಕ್‌ನ ಊರು ಬಂತು. ಬಸ್ಸಿಂದ ಇಳಿದವರೆ ಕತ್ತಲ ಮದ್ಯೆ ನುಸುಳಿಕೊಂಡು ಅವನ ಮನೆಯ ಹಾದಿ ಹಿಡಿದೆವು. ಕತ್ತಲಲ್ಲಿ ದಾರಿಗಾಗಿ ತಡವರಿಸುವ ಕಾರಣವಿರಬೇಕು, ಅರೆಗಳಿಗೆ ಯಾರದ್ದೂ ಮಾತಿಲ್ಲ! ನಮ್ಮ ಆಗಮನ ನಿರೀಕ್ಷಿಸಿತವೆಂಬಂತೆ, ಅರೆಗಳಿಗೆ ಮಳೆ ಕೂಡ ನಿಂತಂತೆ ತೋರುತಿತ್ತು.

"ಈಗ್ ಬಂದ್ರಿ ಅಷ್ಟೂ ಜನಾ?" ಯಾರದ್ದೋ ದ್ವನಿ ಬಂತು. ನನ್ನ ಮನಸ್ಸಿನಲ್ಲಿ ಈಗಷ್ಟೆ ಕೇಳಿದ ಹಾಡಿನ ನೆನಪು "ಮಳೆ ನಿಂತ ಮೇಲೆ, ಹನಿಯೊಂದು ಮೂಡಿದೆ. ಮಾತೆಲ್ಲಾ ಮುಗಿದ ಮೇಲೆ ದನಿಯೊಂದು ಕಾಡಿದೆ". ಅದನ್ನೊಮ್ಮೆ ಗುನುಗುನಿಸಿದೆ ನಾನು.
"ಯಾರು? ತಮ್ಮಾ ನೀನ್ ಬಂದಿ?" ದೀಪಕ್ ಕೇಳಿಸಿಕೊಂಡ ದನಿಗೆ ಪ್ರತಿಯುತ್ತರಿಸಿದ.
ಟಾರ್ಚ್ ಹಿಡಿದಿದ್ದ ಆ ವ್ಯಕ್ತಿ, "ಹೂ, ನಾನೆ ಅವ. ಎನು ಬಾಳ್ ಲೇಟಾತಿ ಬಸ್ಸು?" ಅಂತು.
ಅಷ್ಟರಲ್ಲಿ ಹಿಂದೊಮ್ಮೆ ಇಲ್ಲಿಗೆ ಬಂದಿದ್ದ ಶ್ರೀನಿ ಉಸುರಿದ, "ದಿಲೀಪ್ ಅದು, ದೀಪ್ಯ ತಮ್ಮ"
ಅಷ್ಟು ಸಮಯ ನನ್ನೊಳಗೆ ಕಳೆದು ಹೋಗಿದ್ದ ನಾನು ಹೊರಬಂದೆ, "ತಮ್ಮಾ, ಸ್ವಲ್ಪ ಈ ಕಡಿ ಬೆಳಕು ಬಿಡು ತಮ್ಮಾ" ಅಂದೆ ರಾಗವಾಗಿ.
"ಯಾರದು?" ಅಂದ ದಿಲೀಪ್, "ನಾನ್ ತಮ್ಮಾ, ಗಿರೀಶ್ ಮಾತಾಡುದು, ಪರಿಚಯ ಇಲ್ಲಾ ನಿಂಗು?" ನಾನಂದೆ.
ಮುಂದೆ ಮಾತನಾಡಲಿಲ್ಲ ಅವನು, ಮನೆಗೆ ಹೋಗಿ ವಿಚಾರಿಸಿದರಾಯ್ತು ಎಂದ ಎಣಿಕೆಯಿಂದ ಅಂದುಕೊಳ್ಳುತ್ತೇನೆ!
ಅಲ್ಲಿಗೆ ಮಳೆ ಮತ್ತೆ ಸುರಿಯಲು ಶುರು ಮಾಡಿತು. ಇರುವ ಒಂದು ಕೊಡೆಯ ಕೆಳಗೆ ಯಾರೂ ನುಸುಳದೆ, ಅರೆ-ಬರೆ ಒದ್ದೆಯಾಗಿಯೇ ನಡೆದೆವು.

ಕತ್ತಲು, ಜಡಿ ಮಳೆಗಳ ನಡುವೆ ೫ ನಿಮಿಷದ ದಾರಿಯನ್ನು ಬಿರುಸಾಗಿ ನಡೆದು ದೀಪಕ್ ಮನೆ ಮುಟ್ಟಿದೆವು. ಅವನ ಅಮ್ಮ ಮತ್ತು ತಂದೆಯಿಂದ ಆತ್ಮೀಯ ಸ್ವಾಗತ ನಮ್ಮೆಲ್ಲರಿಗೂ. ಒದ್ದೆಯಾಗಿದ್ದ ಬಟ್ಟೆಗಳನ್ನು ಒಣಹಾಕುವ ಕೆಲಸಕ್ಕೆ ನಾವೆಲ್ಲಾ ಮುಂದಾದೆವು. ಒಳಗೆ ಬಿಸಿ ನೀರಿಗೆ ಎಲ್ಲಾ ತಯಾರಿ ನಡೆದಿತ್ತು. ಒಂದಿಷ್ಟು ಜನ ಇನ್ನೊಮ್ಮೆ ಬಿಸಿನೀರಿನಲ್ಲಿ ಜಳಕ ಮಾಡಿ ಟಿವಿಯ ಮುಂದೆ ಕುಳಿತೆವು. ಆವಾಗಷ್ಟೆ ಝೀ ಟಿವಿಯಲ್ಲಿ ಸರೆಗಮ ಸಂಗೀತ ಕಾರ್ಯಕ್ರಮ ಶುರುವಾಗಿತ್ತು. ಮನೆಗೆ ಇನ್ನೊಮ್ಮೆ ಫೋನ್‍ಕಾಲ್ ಮಾಡಿ ಅಮ್ಮನೊಂದಿಗೆ ಇನ್ನೊಮ್ಮೆ ಮಾತನಾಡಿದ್ದಾಯ್ತು. ನಮ್ಮೆಲ್ಲರ ಪರಿಚಯ ಮಾಡಿಕೊಂಡು, ಮನೆ ಮಂದಿಯ ಜೊತೆಗಿಷ್ಟು ಕುಶಲೋಪಚಾರಿ ಮಾತುಕತೆಗಳು ನಡೆದವು. ಹೊಟ್ಟೆ ಚಿರುಗುಟ್ಟುವ ಅರಿವಾದ ಅಮ್ಮ, ಎಲ್ಲರಿಗೂ ಊಟದ ವ್ಯವಸ್ತೆ ಮಾಡಿದರು.

ಅಪರೂಪಕ್ಕೊಮ್ಮೆ ಶಾಖಾಹಾರ ತಿನ್ನುವ ನನಗೆ ಭರ್ಜರಿ ಊಟ, ಮೀನು ಸಾರಿನ ಜೊತೆಗೆ, ಹುರಿದ ಮೀನು ಸಹ ಇತ್ತು. ದೀಪಕ್ ತನ್ನ ಪೌರುಷವನ್ನು ಊಟದ ತಟ್ಟೆಯ ಮುಂದೆ ತೋರಿಸಿದ. ಈ ಶೌರ್ಯವನ್ನು ಕತ್ತಿ ಹಿಡಿದು ಯುದ್ದ ಭೂಮಿಯಲ್ಲಿ ತೋರಿಸಿದ್ದರೆ ಸಾರ್ವಭೌಮ ಎನಿಸಿಕೊಳ್ಳುತಿದ್ದನೇನೊ! ನಾರಾಯಣ್ ತನ್ನ ಜಂಟಲ್‍ಮ್ಯಾನ್ ಇಮೇಜಿನಂತೆ ನಡೆದರೆ, ಭೀಮ್ ತುಂಬಾ ಮೌನಿಯಾದರು ಮತ್ತು ಸಂಕೋಚದಿಂದ ಕುಳಿತರು. ಹೊಸ ಜಾಗ, ಹೊಸ ಪರಿಸರ, ಹೊಸ ಜನರೆಂಬ ಗೋಡವೆಗೆ ಹೋಗದೆ ನಾನು ಟಿವಿ, ಮಾತು ಎಲ್ಲವುದರಲ್ಲೂ ತುಂಬಿಕೊಂಡೆ. ಬೆಳಗ್ಗಿನ ಕಾರ್ಯಕ್ರಮದ ರೂಪುರೇಕೆಗಳ ಬಗ್ಗೆ ಒಂದಿಷ್ಟು ಮಾತನಾಡಿ ಎಲ್ಲರೂ ನಿದ್ದೆಗೆ ಶರಣಾದೆವು.

"ಕೊಕ್ಕಕ್ಕೋಕೊ ಕೊಕ್ಕಕ್ಕೋಕೊ" ಕೆಳಗಿಂದ ಕೋಳಿ ಕೂಗುತ್ತಿದ್ದರೆ ಹಾಗೆ ಕಣ್ಣುಬಿಟ್ಟಿ. ಬೆಳಗಿನ ಜಾವದ ನೇಸರನ ಕಿರಣ ಹಿತವಾಗಿ ಕಂಡಿಯಿಂದ ಒಳತೂರಿ ಮೈಯನ್ನು ಸೋಕುತಿತ್ತು. ಎದ್ದು ನೋಡಿದರೆ, ನಾರಾಯಣ್ ಆಗಲೆ ಎದ್ದು ಕಿಟಕಿಯ ಪಕ್ಕ ಕೂತು ಹೊರಗಿನ ದೃಶ್ಯವನ್ನು ವೀಕ್ಷಿಸುತ್ತಿದ್ದ. ಭೀಮ್ ಮತ್ತು ಶ್ರೀನಿಯನ್ನು ಎದ್ದೇಳಿಸಿ, ಟೂತ್‍ಪೇಷ್ಟ್ ಮತ್ತು ಬ್ರಶ್‍ನ ಜೊತೆ ಬಯಲತ್ತ ಹೊರಟೆವು. ಪ್ರಾರ್ತಕಾಲದ ವಿಧಿಗಳನ್ನೆಲ್ಲಾ ಮುಗಿಸಿ, ತಿಂಡಿ ತಿನ್ನಲು ರೆಡಿಯಾದೆವು. ಅಮ್ಮ ಇಡ್ಲಿ ಮಾಡಿದ್ದರು, ಜೊತೆಗೆ ಚಟ್ನಿ ಮತ್ತು ಸಾಗು. ಸ್ಪರ್ದೆಯೆಂಬಂತೆ ಎಲ್ಲರೂ ಸಾಕಷ್ಟು ಇಡ್ಲಿಯನ್ನು ಅಟಕಾಯಿಸಿದೆವು. ಗೊತ್ತಿತ್ತು ಎಲ್ಲರಿಗೂ, ಗೆಲ್ಲುವ ಕುದುರೆ ಯಾವುದೆಂದು!

ಕೈಯಲ್ಲೊಂದಿಷ್ಟು ಕಾಸು ಹಿಡಿದು ಗೋಕರ್ಣಕ್ಕೆ ಬಸ್ಸಲ್ಲಿ ಹೊರಟೆವು. ಮೊದಲು ಗೋಕರ್ಣದಲ್ಲಿನ ಪ್ರಮುಖ ದೇವಸ್ಥಾನವಾದ ಆತ್ಮಲಿಂಗದ ದರುಶನ ಪಡೆದುಕೊಂಡು ಹೊರಬಿದ್ದೆವು. ಮತ್ತೆ ತಿರುಗಿ ನೋಡುವ ಪ್ರಮೆಯವಿರಲಿಲ್ಲ. ಸೀದಾ ಅಲ್ಲಿಯೇ ಪಕ್ಕದಲ್ಲಿರುವ ಸಮುದ್ರ ಕಿನಾರೆಗೆ ಹೋಗಿ ನೋಡಿದರೆ ಬಿಡದೆ ೩ ದಿನಗಳ ಕಾಲ ಒಂದೇ ಸಮನೆ ಸುರಿದಿದ್ದ ಮಳೆಯಿಂದಾಗಿ ಕಡಲ ನೀರೆಲ್ಲ ಕದಡಿತ್ತು. ನೀರಿಗಿಳಿಯಬೇಕೆಂಬ ಆಸೆಯೇನು ಜೋರಿಲ್ಲವದರೂ ಮೊಣಕಾಲಿನ ತನಕ ಒದ್ದೆಯಾಗುವಷ್ಟು ನೀರಿಗಿಳಿದೆವು. ಮೊದಲನೇ ಪ್ರಯತ್ನದಲ್ಲೇ ನಾರಾಯಣ್ ಮತ್ತು ಭೀಮ್ ತಮ್ಮ ಪಾಂಟ್‍ಗಳನ್ನು ಒದ್ದೆ ಮಾಡಿಕೊಳ್ಳುವುದರಲ್ಲಿ ಸಫಲರಾದರೆ, ಗಂಟಿನಿಂದಲೂ ಕೆಳಗೆ ಬರುವಂತ ಶಾರ್ಟ್ಸ್‍ ಹಾಕಿದ್ದ ನಾನು ಅವರಿಬ್ಬರನ್ನು ನೋಡಿ ಕೂಗಿಕೊಂಡೆ, "ಸ್ವಲ್ಪ ತಲೆ ಉಪಯೋಗಿಸಿದ್ದರೆ, ಒದ್ದೆಯಾಗುತ್ತಿರಲಿಲ್ಲ ಹೀಗೆ".
"ಹೋಗ್ಲಿ ಬಿಡಿ ಸಾರ್" ಭೀಮ್ ಅಂದರು.

ಮತ್ತೆ ಮುಂದೆ ಕುಡ್ಲಿ ಬೀಚ್ ಮತ್ತು ಓಂ ಬೀಚ್ ಹೋಗಬೇಕಾಗಿದ್ದ ನಾವು, ಅಲ್ಲಿ ಒಂದಿಷ್ಟು ಹೊತ್ತು ಕಳೆದು ಕುಡ್ಲಿ ಬೀಚ್‍ಗೆ ಕಾಲ್ನಡಿಗೆಯಲ್ಲಿ ಕ್ರಯಿಸುವ ಮನಸ್ಸು ಮಾಡಿದೆವು. ಇನ್ನೇನು ಶುರು ಮಾಡಬೇಕೆನ್ನುವುದರಲ್ಲೆ ಶುರುವಾಯ್ತು ಮಳೆ. ಮಳೆಯಲ್ಲೆ ನೆನೆಯುತ್ತಾ ಕಂಡ ಕಂಡ ದಾರಿಯಲ್ಲಿ ನುಗ್ಗುತ್ತಾ ಹೊರಟೆವು. ಕೊಡಲಿಯಾಕಾರದ ಕುಡ್ಲಿ ಬೀಚ್‍ನಲ್ಲಿ ಮತ್ತೊಂದಿಷ್ಟು ಹೊತ್ತು ಕಳೆದೆವು. ನಾನೂ ಮತ್ತು ಶ್ರೀನಿ ಅಲ್ಲಿ ಸಿಕ್ಕ ಕಪ್ಪೆ ಚಿಪ್ಪು ಮತ್ತು ಪುಟ್ಟ ಶಂಖದ ಚಿಪ್ಪನ್ನು ಚಿಕ್ಕ ಮಕ್ಕಳಂತೆ ಎತ್ತಿಕೊಳ್ಳತೊಡಗಿದೆವು. ಉಳಿದವರು ನೀರ ಕಂಡ ಕಾಡಾನೆಗಳಂತೆ ಹಾರಿ, ಜಿಗಿದು ಕುಣಿಯುತ್ತಿದ್ದರು. ಮುಂದೆ ಓಂ ಬೀಚ್‍ನಲ್ಲು ಇದೇ ಮುಂದುವರಿಯಿತು. ಸಿಕ್ಕ ಯವುದೋ ಒಂದು ಕಾಯಿಯನ್ನೇ ಚಂಡಿನಂತೆ ಎಸೆದು ಕ್ಯಾಚ್ ಪ್ರಾಕ್ಟೀಸ್ ಮಾಡಿದ್ದೂ ಆಯ್ತು!

ಇಷ್ಟೆಲ್ಲಾ ನಡೆಯುತ್ತಿದ್ದರೂ ಒಂದಿನಿತೂ ಬೇಸರವೆನಿಸದೆ ಮಳೆರಾಯ ಸುರಿಯುತ್ತಲೇ ಇದ್ದ. ಒಮ್ಮೊಮ್ಮೆ ತುಂತುರು ಮಳೆ, ಇನ್ನೊಮ್ಮೆ ಧಾರಾಕಾರವಾಗಿ ಸುರಿಯತಲಿತ್ತು ಮಳೆ, ನಡುವೆ ಒಮ್ಮೆಯೂ ನಿಲ್ಲಿಸದೆ. ನೀರಿಗಿಳಿದವನಿಗೆ ಮಳೆಯೇನು, ಚಳಿಯೇನು ಎಂಬಂತೆ ಯಾವುದಕ್ಕೂ ಲೆಕ್ಕಿಸದೆ ನಾವು ನಮ್ಮ ಪಾಡಿಗೆ ನೀರಿಗಿಳಿಯುವುದು, ರಸ್ತೆ ಕ್ರಮಿಸುವುದನ್ನು ಮಾಡುತ್ತಲಿದ್ದೆವು. ಸೂರ್ಯ ನಡು ನೆತ್ತಿಯ ದಾಟಿ ಕೆಳಗಿಳಿಯುತ್ತಿರುವ ಅರಿವಾದಾಗ, ಹೊಟ್ಟೆ ಚುರುಕ್ ಎಂದು ಶಬ್ದ ಮಾಡುತ್ತಿರುವ ಅರಿವಾದಾಗ ಮತ್ತೆ ಗೋಕರ್ಣದತ್ತ ಕಾಲ್ನಡಿಗೆಯಲ್ಲಿ ಹೊರಡಲು ಅನುವಾದೆವು. ಸಮುದ್ರ ಕಿನಾರೆಯ ಬಿಟ್ಟು ಭೂಮಂಡಲದತ್ತ ದಾಪುಗಾಲುಡುತ್ತಿರಲು, ಕಥೆಯಲ್ಲೊಂದು ಚಿಕ್ಕ ತಿರುವು. ಎಲ್ಲಿಂದಲೋ ಬಂದು, ಸಿಕ್ಕ ಚಿಕ್ಕ ಸೂರಿನ ಕೆಳಗೆ ಹೊಟ್ಟೆ ಹಸಿವೆಯನ್ನು ತಣಿಸಿಕೊಳ್ಳುತ್ತಿರುವ ಒಂದು ಗುಂಪೊಂದು ಕಣ್ಣಿಗೆ ಬಿದ್ದಿದ್ದೇ ತಡ, ದೀಪಕ್‍ನ ಬುದ್ದಿ ಚುರುಕಾಯಿತು ಮತ್ತು ಹೊಟ್ಟೆ ಕೂಡ. ಸಿಕ್ಕ ಅಲ್ಪ ಅವಧಿಯಲ್ಲೇ ಅವರ ಗೆಳೆತನ ಮಾಡಿ, ಅವರಿಂದಿಷ್ಟು ತಿನ್ನಲು ಪಡೆದುಕೊಂಡು, ತಾನು ತಿಂದು, ನಮಗೂ ಹೊಟ್ಟೆಯನ್ನೊಂದಿಷ್ಟು ತಣ್ಣಗೆ ಮಾಡುವಲ್ಲಿ ನೆರವಾದ ದೀಪಕ್.

ಇಷ್ಟೆಲ್ಲವುದರ ನಡುವೆ, ಭೀಮ್ ಮತ್ತು ದೀಪಕ್ ಮಳೆಯಲ್ಲಿ ತೊಯ್ದು ತೊಯ್ದು ಕೊನೆಗೆ ಹಾಕಿದ್ದ ಪಾಂಟ್ ತೆಗೆದು, ಸೊಂಟಕ್ಕೊಂದು ರುಮಾಲನ್ನು ಸುತ್ತಿಕೊಂಡು ಇಡಿ ದಾರಿಯನ್ನು ಕ್ರಮಿಸಿದ್ದರು. ವಿಪರೀತವಾಗಿ ಮಳೆಯಲ್ಲಿ ನೆನೆದದ್ದು, ಕಾಲನ್ನು ಸವೆದದ್ದು ಸೇರಿ ಭೀಮ್ ಕೊಂಚ ಸುಸ್ತಾಗಿದ್ದರು. ಅವರನ್ನು ಹುರಿದುಂಬಿಸುವುದರಲ್ಲಿ ಶ್ರೀನಿ ನೆರವಾದ ಭೀಮ್‍ಗೆ. ಮಾರ್ಗ ಮದ್ಯೆ, "ದಾರಿ ತಪ್ಪಿದ ಮಕ್ಕಳು" ಎಂಬಂತೆ ದಾರಿ ತಪ್ಪಿದ ಅನುಭವವಾಗಿ, ಸಿಕ್ಕ ಸಿಕ್ಕ ದಾರಿಯಲ್ಲಿ ನಡೆದು ಕೊನೆಗೂ ಗೋಕರ್ಣ ಮುಟ್ಟಿದೆವು. ಅಲ್ಲಿಂದ ಬಸ್ಸು ಹಿಡಿದು ಮನೆ ಸೇರಿ, ಇನ್ನೊಮ್ಮೆ ಬಿಸಿ ನೀರಿನ ಜಳಕವಾಯ್ತು. ಊಟದ ನಂತರ ಒಂದಿಷ್ಟು ಕ್ರಿಕೆಟ್ ಮ್ಯಾಚ್ ನೋಡುವಷ್ಟರಲ್ಲಿ ಬೆಂಗಳೂರಿಗೆ ಹೋಗುವ ಬಸ್ಸು ಹಿಡಿಯುವ ಸಮಯವಾಗಿತ್ತು. ಮನೆಯವರಿಗೆಲ್ಲಾ ವಿದಾಯ ಹೇಳುತ್ತಾ, ಬೆಂಗಳೂರು ಬಸ್ಸು ಹಿಡಿದು ನಮ್ಮ ನಮ್ಮ ಸೀಟನ್ನು ಆಕ್ರಮಿಸಿಕೊಂಡು ಕುಳಿತೆವು. ನಿದ್ದೆಗೆ ಭಾರವಾಗಿದ್ದ ಕಣ್ಣುಗಳು ಜೋತುಬಿದ್ದು ನಿದ್ದೆಗಿಳಿದರೆ, ಮುಚ್ಚಿದ ಕಣ್ಣುಗಳು ತೆರೆದದ್ದು ಹತ್ತಿರ ಹತ್ತಿರ ಬೆಂಗಳೂರು ಹತ್ತಿರ ಬಂದಾಗಲೆ. ಮತ್ತೆ ಮುಂದಿನ ಯಾಂತ್ರಿಕ ಬದುಕಿನ ವಾಸ್ತವತೆಯ ಅರಿವಾದಾಗ, ಮನಸ್ಸು ಖೇದಗೊಂಡು, ಕಳೆದೆರಡು ದಿನಗಳ ರಸದೌತಣಯನ್ನು ಮೆಲುಕು ಹಾಕುವುದೇ ಲೇಸೆಂದು, ಕಣ್ಣು ಮುಚ್ಚಿ ಸೀಟಿಗೊರಗಿದೆ.