ಪ್ರವಾಸ ಕಥನ - ಜೋಗ, ಗೋಕರ್ಣದತ್ತ
ಪ್ರವಾಸ ಕಥನ - ಜೋಗ, ಗೋಕರ್ಣದತ್ತ
ಭಾಗ - ೧
ಚುಮು ಚುಮು ಚಳಿಯಿಲ್ಲದಿದ್ದರೂ, ಬೆಳಗಿನ ಜಾವ ೫ ಗಂಟೆಗೆ ಎದ್ದೇಳುವುದಂದರೆ ನಾಯಿಯನ್ನು ನೀರಿಗೆ ತಳ್ಳುವಷ್ಟೆ ತ್ರಾಸ. ಅಂತು ಎದ್ದು ಸ್ನಾನ ಮಾಡಿ, ವಿಜಯನಗರ ಬಸ್‍ಸ್ಟಾಪ್‍ಗೆ ಬಂದು ನೋಡಿದರೆ ಅಂದುಕೊಂಡಂತೆ ನಾರಾಯಣ್ ಹುಟ್ಟು ಬೆಂಗಳೂರಿನವರಂತೆ ದಪ್ಪನೆಯ ಸ್ವೆಟರ್ ಧರಿಸಿ ಕೂತಿದ್ದ. "ಅಂದ್ಕೊಂಡೆ ನಾವಿಬ್ರೇ ಆನ್ ಟೈಮ್ ಬರೋದು ಅಂತ" ಅವನ ಬಾಯಿಂದ ಬಂದ ಮೊದಲ ಮಾತು. ನಕ್ಕೆ ನಾನು, ನನ್ನ ಜೊತೆಗೆ ಅವನಿಂದಿಷ್ಟು ನಗು. ಉಳಿದ ೩ ಜನಕ್ಕೆ ಫೋನ್ ಮಾಡಿದ್ದಾಯ್ತು. ಗುರು ಶಿಷ್ಯರೆಂದು ಕರೆಸಿಕೊಳ್ಳುವ ಭೀಮ್ ಮತ್ತು ಶ್ರೀನಿವಾಸ್ ಮಾರುತಿ ಮಂದಿರ ಪಕ್ಕ ಇದ್ದೀವಿ ಅಂದಾಗ ಒಂದು ನಿಟ್ಟುಸಿರು. ಅವರಿನ್ನೂ ಭೀಮ್ ಮನೆ ಹತ್ತಿರವೇ ಇರುವುದು ನನಗೆ ಗೊತ್ತಿರದ ವಿಷಯವಲ್ಲ. ದೀಪಕ್‍ನದ್ದು ಎಡ್ರಾಸ್ ಇಲ್ಲ ಇನ್ನು! ಬೆಳಿಗ್ಗೆ ನಾನು ಎದ್ದು, ಸ್ನಾನ ಮಾಡಿ ಹೊರಬಂದಾಗಲೆ ಫೋನ್‍ಕಾಲ್ ಮಾಡಿ ಎದ್ದೇಳಿಸಿದ್ದೆ ಅವನನ್ನು. ನಾನು ಎಚ್ಚರಿಸದಿದ್ದರೆ, ಅವನು ನಮ್ಮ ಜೊತೆ ಬರುವ ಪ್ರಮೆಯ ಎಳಷ್ಟು ಇಲ್ಲ ಅನ್ನಬಹುದಿತ್ತೇನೊ! ತೇತ್ರಾಯುಗದ ಕುಂಬಕರ್ಣನು ಕಲಿಯುಗದಲ್ಲಿ ಅವತಾರವೆತ್ತಿದರೆ ಹೇಗಿರುತ್ತಿದ ಅಂತಾ ಯಾರಾದರು ನನ್ನ ಕೇಳಿದರೆ, ಮೊದಲಿಗೆ ನನ್ನ ಯೋಚನೆಗೆ ಸಿಗುವ ಮನುಷ್ಯ ಅಂದರೆ, ಈ ದೀಪಕ್! ಉಣ್ಣುವುದರಲ್ಲಿ, ನಿದ್ದೆ ಹೊಡೆಯುವುದರಲ್ಲಿ ಯಾರಿಗೂ ಬಿಟ್ಟುಕೊಡುವ ಅಸಾಮಿ ಅಲ್ಲ ಇವನು. ಅದೃಷ್ಟವಶಾತ್ ಕುಂಬಕರ್ಣನಂತೆ ದೇಹ ಬೆಳೆಸಿಕೊಂಡಿಲ್ಲ!
ದೀಪಕ್‍ಗೆ ಮತ್ತೆ ಫೋನ್‍ಕಾಲ್ ಮಾಡಿ ಮನಸಾರೆ ಎಲ್ಲರೂ ಒಂದಿಷ್ಟು ಉಗಿದು ನಾವು ಮೆಜಷ್ಟಿಕ್ ಕಡೆ ಬಸ್ ಹತ್ತಿ ಹೊರಟೆವು. ರೈಲ್ವೆ ನಿಲ್ದಾಣದಲ್ಲಿ ನಮ್ಮ ರೈಲು ನಮಗೆ ಕಾಯುತ್ತಿರುವಂತೆ ಉದ್ದಕ್ಕೆ ನಿಂತಿತ್ತು. ಹೋಗಿ ನಾವು ಕಾದಿರಿಸಿದ ಸೀಟಿನಲ್ಲಿ ವಕ್ಕರಿಸಿದೆವು. ದೀಪಕ್‍ನದು ಇನ್ನೂ ಸುದ್ದಿ ಇಲ್ಲ. ಆಗಲೆ ಶ್ರೀನಿ ಅವನಿಗೆರಡು ಬಾರಿ ಫೋನ್‍ಕಾಲ್ ಮಾಡಿದ್ದಾಯ್ತು. ಇನ್ನೇನು ರೈಲು ಹೊರಡಬೇಕೆನ್ನುವ ಸಮಯಕ್ಕೆ, "ದಿಲ್‍ವಾಲೆ ದುಲ್‍ಹನಿಯ ಲೇಜಾಯೆಂಗೆ" ಚಿತ್ರದಲ್ಲಿ ನನ್ನ ಮೆಚ್ಚಿನ ನಟಿ ಕಾಜೋಲ್ ರೈಲನ್ನು ಹಿಂಬಾಲಿಸಿ ಕೊನೆಯ ಕ್ಷಣಕ್ಕೆ ರೈಲು ಹತ್ತುವ ತರದಿ ಓಡೋಡಿ ಬಂದು ರೈಲು ಹತ್ತಿದ. ನಾವ್ಯಾರು ಮಾತಾಡಿಲ್ಲ ಅವನ ಜೊತೆ ಮುಂದಿನ ೨ ನಿಮಿಷ. ಕೋಪದಿಂದಲ್ಲ, ಏದುಸಿರು ಬಿಡುತ್ತಿದ್ದ ಅವನಿಗೆ ದೀರ್ಘವಾಗಿ ಉಸಿರಾಡಲು ಮತ್ತು ಮಾತನಾಡಲು ಕಾಲಾವಕಾಶ ಕೊಡಬೇಕೆಂದು.
"ಏನ್ ಗುರು, ಎನು ನಿನ್ನ ಪ್ಲಾನ್?, ಗೋಕರ್ಣಕ್ಕೆ ಹೋಗಾಣ ಅಂತ ಹೇಳಿ, ರಿಟರ್ನ್ ಟಿಕೇಟ್ ಕಾದಿರಿಸಿ ಕೈಕೊಡುವ ಪ್ಲಾನ್ ಹಾಕಿದ್ದಾಗಿತ್ತು!" ನಾನೆಂದೆ.
"ನಿಮಗೇನ್ರಿ ಗೊತ್ತು ನನ್ನ ಕಷ್ಟ?, ಬೆಳಿಗ್ಗೆ ಎದ್ದೇಳೊದು ಯಾವ ಪರಿ ಕಷ್ಟ ಅಂತ?"
"ಸದ್ಯ, ಬಂದ್ಯಲ್ಲ!" ನಾನಲ್ಲಿಗೆ ನಿಲ್ಲಿಸಿದೆ.
ನಾರಾಯಣ್ ಇನ್ನೊಂದು ಸುತ್ತು ಬೈಯುವ ಪ್ಲಾನ್ ಹಾಕಿದ್ದ, "ಯಾವಾಗ ನೋಡಿದರೂ ಹೀಗೆ ಮಾಡ್ತೀಯ ನೀನು. ಗೊತ್ತಿರೊ ವಿಷ್ಯನೆ ನಿಂದು. ಆದ್ರೂ ಈ ಸಾರಿ ನಿನ್ನ ಮನೆಗೆ ಹೋಗೊ ಪ್ಲಾನ್ ನೀನೆ ಹಾಕಿ, ಹೀಗೆ ಮಾಡೋದ? ಟೈಮಿಂಗ್ ಸೆನ್ಸ್ ಬೇಡ್ವಾ ಸ್ವಲ್ಪಾನು?".
"ಸಾಕು ನಿಲ್ಲಿಸ್ರಿ, ಬಂದ್ನಲ್ಲ ಈವಾಗ. ಟ್ರೈನ್ ತಪ್ಪಿ ಹೋಗಿದ್ರೆ ಬಸ್ಸಾದ್ರು ಹಿಡಿದು ಬರ್ತಿದ್ದೆ ನಾನು. ಅಷ್ಟೊಂದು ರೆಸ್ಪಾನ್ಸಿಬಿಲಿಟಿ ಇಲ್ವ ನಂಗೆ?"
ಅವನ ಪ್ರಶ್ನೆಗೆ, ಅವನೇ ಉತ್ತರ ಕೊಡಬೇಕು.
"ಚಾಯ, ಚಾಯ" ಟಿ, ಕಾಫಿ ಹಿಡಿದುಕೊಂಡು ಬರುತ್ತಿದ್ದಾತ ಕೂಗುತ್ತಿದ್ದ. "ಏನ್ರಿ ಸಾರ, ಚಾಯ ಕುಡಿಯೋನ್‍ನೇನ್ರಿ?" ಭೀಮ್ ಉಸುರಿದರು. ಇಲ್ಲ, ಬೇಡ ಅನ್ನುವ ಪ್ರಮೆಯವೇ ಇರಲಿಲ್ಲ ಅಲ್ಲಿ ಯಾರಿಗೂ, ನನ್ನನ್ನು ಹೊರತು ಪಡಿಸಿ. ಎಲ್ಲರದ್ದೂ ಒಂದು ರೌಂಡ್ ಟಿ ಮತ್ತು ತಿಂಡಿ ತಿನ್ನುವ ಕಾರ್ಯಕ್ರಮವಾಯ್ತು, ನನ್ನೊಬ್ಬನನ್ನು ಬಿಟ್ಟು. ಅದ್ಯಾಕೊ ಕಾಣೆ, ಇತ್ತೀಚೆಗೆ ದೇವರಿಗೆ ನನ್ನ ಮೇಲೆ ಕೋಪವಿರುವಂತೆ ಅನುಮಾನ. ತಿಂಗಳಿಗೊಮ್ಮೆ ವಿನಾಯಕನ ಹೆಸರಿನಲ್ಲಿ ಸಂಕಷ್ಟಿಗೆ ಉಪವಾಸ ಮಾಡುತ್ತಿದ್ದೇನೆ, ಕಳೆದ ೪ ವರ್ಷದಿಂದ. ಆದರೂ ನಾನು ಹೋಗಲೇ ಬೇಕಾಗಿರುವ ಮದುವೆ ಕಾರ್ಯಕ್ರಮಗಳು, ಟ್ರೆಕಿಂಗ್ ಎಲ್ಲಾ ಸಂಕಷ್ಟಿಯಂದೆ ಬರುತ್ತಿವೆ! ಎಲ್ಲರೂ ಎನೇನೊ ತಿನ್ನುತ್ತಿರ ಬೇಕಿದ್ದರೆ, ನಾನು ಅಲ್ಲೆ ಪಕ್ಕದಲ್ಲಿ ಯಾರೊ ಬಿಟ್ಟು ಹೋಗಿದ್ದ ದಿನಪತ್ರಿಕೆ ಹಿಡಿದು ಓದಹತ್ತಿದೆ. "ತಿನ್ನಲ್ವೇನ್ರಿ ಏನೂ?" ಶ್ರೀನಿಯ ಪ್ರಶ್ನೆ. "ಇಲ್ಲ ಕಣೊ, ಸಂಕಷ್ಟಿ ಅಲ್ವ ಇವತ್ತು, ರಾತ್ರಿನೇ ಊಟ" ನಾನೆಂದೆ. ಪಕ್ಕದ ೩ ಸೀಟಿನಲ್ಲಿ ಭೀಮ್, ನಾರಾಯಣ್ ಮತ್ತು ದೀಪಕ್ ಕೂತು ಹರಟೆ ಹೊಡೆಯುತ್ತಿದ್ದರು. "ಗುರುಗಳೆ, ಗುರುಗಳೆ" ಎನ್ನುತ್ತಾ ದೀಪಕ್ ಭೀಮ್ ಅವರನ್ನು ಗೋಳು ಹೊಯ್ದುಕೊಳ್ಳುವುದನ್ನು ಮಾಡುತ್ತಿದ್ದರೆ, ನಾರಾಯಣ್ ತನ್ನ ಗಾಂಭೀರ್ಯತೆಯನ್ನು ಮುಂದುವರಿಸಿ ಕೂತಿದ್ದ.
ನಮ್ಮ ಜೊತೆ ನೋಕಿಯದಲ್ಲಿ ಕೆಲಸ ಮಾಡುತಿದ್ದ ಗೆಳೆಯ ಕಿರಣನ ಮದುವೆಗೆಂದು ನಾವೆಲ್ಲಾ ಬೀರೂರಿನತ್ತ ಹೊರಟಿದ್ವಿ. "ಇರೊದ್ರಲ್ಲಿ ಒಮ್ಮೆ ನೋಡು ಜೋಗಾದ್ ಗುಂಡಿ" ಎಂದು ನಮ್ಮಣ್ಣ ರಾಜ್‍ಕುಮಾರ್ ಹೇಳಿ ಹೋಗಿದ್ದರೂ ಇನ್ನೂ ಜೋಗಕ್ಕೆ ಹೋಗುವ ಅವಕಾಶ ನನಗೆ ಸಿಕ್ಕಿರಲಿಲ್ಲ. ಇದೇ ಸುಸಂದರ್ಭವೆಂದು, ಜೋಗಕ್ಕೆ ಹೋಗುವ ಪ್ಲಾನ್ ಹಾಕ್ಕಿದ್ದೆವು. ಜೋಗದಿಂದ ತನ್ನೂರು ಗೋಕರ್ಣಕ್ಕೆ ಜಾಸ್ತಿಯೇನು ದೂರವಿಲ್ಲವೆಂದು, ಗೋಕರ್ಣಕ್ಕೂ ಹೋಗುವ ಪ್ಲಾನ್ ಮುಂದಿಟ್ಟಿದ್ದ ದೀಪಕ್. ಅಂದು ಕೊಂಡಂತೆ ನಾವೆಲ್ಲಾ ಟ್ರೈನ್‍ನಲ್ಲಿ ಪ್ರಯಾಣ ಹೊರತಿದ್ದೀವಿ ಬೀರೂರಿನತ್ತ.
"ಚಿಕು-ಬುಕು ಚಿಕು-ಬುಕು" ಎಂದು ನಿದಾನಗತಿಯಲ್ಲಿ ಓಡುತಿದ್ದ ರೈಲಿನ ಶಬ್ದದಿಂದ ನಿದ್ದೆಯಿಂದ ಎಚ್ಚೆತ್ತು ಅಕ್ಕ-ಪಕ್ಕವನ್ನೊಮ್ಮೆ ಪರೀಕ್ಷಿಸಿದರೆ ಯಾರೂ ಇಲ್ಲ, ನಮ್ಮ ಗ್ಯಾಂಗ್‍ನ ಹುಡುಗರು. ಎಲ್ಲೋದ್ರಪ್ಪಾ ನನ್ನ ಬಿಟ್ಟು? ಗಾಬರಿಯಾಯ್ತು ಒಮ್ಮೆ. ಎದ್ದು ನಿಂತು ಕಿವಿ ನಿಮಿರಿಸಿ ಕೇಳಿದರೆ, ದೂರದಲ್ಲಿ ಕೇಳಿಸುತಿತ್ತು ನಾರಾಯಣ್‍ನ ಗಡಸು ಸ್ವರ. ಸರಿ, ಅತ್ತ ಹೊರಟೆ ನಾನು.
೩ ಜನ ಭೋಗಿಯ ಬಾಗಿಲಿನ ಪಕ್ಕ ನಿಂತು ಹರಟೆ ಹೊಡೆಯುತಿದ್ದರು. ಮದುವೆ ಮುಗಿಸಿ ಎಲ್ಲಿಗೆ, ಹೇಗೆ ಹೋಗಬೇಕು ಎಂಬುವುದರ ಬಗ್ಗೆಯೂ ಮಾತು-ಕಥೆಯಾಯ್ತು.
"ಎಲ್ಲಿ ಭೀಮ್?" ನಾನಂದೆ.
"ಅವರದ್ದು ಬೆಳಿಗ್ಗೆಯಿಂದ ೨ ರೌಂಡ್ ಆಯ್ತಂತೆ, ಹೊಟ್ಟೆ ಕೆಟ್ಟಿದೆ ಅಂದ್ರು. ಅದೇನು ತಿಂದಿದಾರೋ ಏನೋ!" ದೀಪಕ್ ಅಂದ.
"ಹೊಟ್ಟಿ ಕೆಡಿಸ್ಕಂಡಿದಾರೆ ಗುರುಗಳು" ಸೇರಿಸಿದ ಶ್ರೀನಿ ಕೂಡ.
ಈ ಶ್ರೀನಿ ಮುಧೋಳ್ ಕಡೆಯವನು, ಭೀಮ್ ಗುಲ್ಬರ್ಗ ಮತ್ತು ನಾರಾಯಣ್‍ದು ಬೆಂಗಳೂರು. ನಾನು ಹುಟ್ಟಿ ಬೆಳೆದದ್ದು ಉಡುಪಿಯಲ್ಲಿ.
ದೀಪಕ್, ಶ್ರೀನಿ, ಭೀಮ್ ಮೂವರೂ ಉತ್ತರ ಕರ್ನಾಟಕದ ಭಾಷೆಯಲ್ಲೇ ಮಾತಾಡುವುದು. ಭೀಮ್ ಮತ್ತು ಶ್ರೀನಿಯಂತೂ ಬಿಟ್ಟು ಕೊಟ್ಟವರಲ್ಲ ತಮ್ಮ ಭಾಷೆಯನ್ನು.
ಅವರು ಮೂವರು ಸೇರಿ ಮಾಡುವ ಮಾತು-ಕಥೆ, ಜಗಳಗಳನ್ನೇಲ್ಲಾ ಹತ್ತಿರದಿಂದ ನೋಡುತಿದ್ದೇನೆ ಕಳೆದ ೨ ವರ್ಷದಿಂದ. ಒಮ್ಮೊಮ್ಮೆ ಮದ್ಯೆ ನಾನೂ ಸೇರಿ ಯಾರನ್ನಾದರು ಒಬ್ಬರನ್ನು ಉರಿಸುವುದೂ ಇದೆ.
ಬೆಳಿಗ್ಗೆ ೧೦ಕ್ಕೆ ತಲುಪಬೇಕಿದ್ದ ಟ್ರೈನು ಅರ್ದ ಗಂಟೆ ತಡವಾಗಿ ಬೀರೂರು ಸ್ಟೇಶನ್ ತಲುಪಿತು. ಕೆಳಗಿಳಿದವನೆ, ಒಂದು ಎಳನೀರು ಕುಡಿದು ಹೊಟ್ಟೆಯ ಸಂಕಟವನ್ನು ಕಡಿಮೆ ಮಾಡಿಕೊಂಡೆ. ಆದೃಷ್ಟವಶಾತ್ ಐದೂ ಜನರನ್ನು ತನ್ನ ಆಟೋದಲ್ಲಿ ಕರೆದೊಯ್ಯಲು ತಯಾರಾದ ಆಟೋಚಾಲಕನಿಗೆ ಮನಸಲ್ಲೇ ಧನ್ಯವಾದ ಹೇಳಿ, ಆಟೋದೊಳಗೆ ನುಸುಳಿದೆವು. ಫಾರ್ಮುಲಾ-೧ ರ ಚಾಲಕನಂತೆ ಬರ್ ಎಂದೇ ಒಡಿಸುತ್ತಿದ್ದ ಚಾಲಕನಿಗೆ, "ಮದ್ವೆ ನಂಗಲಪ್ಪಾ, ನಮ್ಮ ದೋಸ್ತಿನದ್ದು. ಅವನು ಆಗ್ಲೆ ಮದ್ವೆ ಛತ್ರದಲ್ಲಿದಾನೆ. ನೀನು ನಿಧಾನವಾಗೆ ಒಡ್ಸು, ನಮ್ಗೆಲ್ಲಾ ಅರ್ಜೆಂಟಿಲ್ಲ" ದೀಪಕ್ ಕೂಗಿಕೊಂಡ. ಮತ್ತೆ ಜೋರಾಗಿ ನಕ್ಕ, ತನ್ನ ಜೋಕಿಗೆ ನಾವೆಲ್ಲಾ ನಗಲಿ ಎಂಬ ನಿರೀಕ್ಷೆಯಿಂದ. ಯಾಕೆ ಅವನ ನಿರೀಕ್ಷೆಯನ್ನು ಹುಸಿ ಮಾಡಬೇಕೆಂಬ ಭಾವದಿಂದ ನಾವೆಲ್ಲಾ ನಕ್ಕೆವು. ಮುಂದಿನ ೨ ದಿನ ಅವನ ಮಾರ್ಗದರ್ಶನದಲ್ಲಿ ಹೋಗಬೇಕೆಂಬ ಭಯದಿಂದ ಕೂಡ.
ಐದೇ ನಿಮಿಷದಲ್ಲಿ ಮದುವೆ ಛತ್ರ ತಲುಪಿದೆವು. ನಾರಾಯಣ್ ಮತ್ತು ಶ್ರೀನಿ ಕಿರಣ್‍ಗೆ ಉಡುಗೊರೆ ತರಲು ಹೋದರೆ, ನಾವು ಮೂವರು ಛತ್ರದೊಳಗೆ ನುಗ್ಗಿ ಆಸೀನರಾದೆವು. ಮದುವೆ ಮುಗಿಸಿ, ಮದುವೆ ಊಟ ಮುಗಿಸಿ, ಕಿರಣ್ ಮತ್ತವನ ನವ ವಧುವಿಗೆ ಅಭಿನಂದನೆ ಸಲ್ಲಿಸಿ ಛತ್ರದಿಂದ ಹೊರಬಿದ್ದಾಗ ಸರಿ-ಸುಮಾರು ೨ ಗಂಟೆ ದಾಟಿತ್ತು. ದೀಪಕ್ ತನ್ನ ಕ್ಯಾಮೆರಾದಲ್ಲೊಂದಿಷ್ಟು ಫೊಟೊ ಕ್ಲಿಕ್ಕಿಸಿಕೊಂಡಿದ್ದ. ಭೀಮ್ ಕೂಡಾ ಆರ್ಕುಟ್ಗಾಗಿಯೆ ಒಂದಿಷ್ಟು ಫೊಟೊ ತೆಗೆಸಿಕೊಂಡಿದ್ದರು. ಅಲ್ಲಿ ಅಲ್ಲಿ ಮದ್ಯೆ ಒಂದಿಷ್ಟು ನಮ್ಮ ಫೊಟೊ ಕೂಡ. ಅಬ್ಬೆ ಜಲಪಾತಕ್ಕೆ ಹೋಗಬೇಕೆಂದಿದ್ದ ನಮ್ಮ ಯೋಜನೆಯನ್ನು ಕೊನೆಯ ಅವಧಿಯಲ್ಲಿ ಸಮಯದ ಅಭಾವದಿಂದ ಕೈಬಿಡಬೇಕಾಯ್ತು. ಸೀದಾ ಜೋಗಕ್ಕೆ ಹೋಗುವುದೆಂದು ನಿರ್ಧರಿಸಿ, ಜೋಗಕ್ಕೆ ಹೋಗುವ ಬಸ್ ಸಿಗದ ಕಾರಣ, ಬಸ್ ಹತ್ತಿ ಸಾಗರದತ್ತ ಹೊರಟೆವು.
ಸಾಗರ ತಲುಪುತಿದ್ದಂತೆ ನನ್ನ ಹೊಟ್ಟೆ ಚುರುಗುಟ್ಟಲು ಶುರು ಮಾಡಿತು. ಮದುವೆ ಮನೆಯಲ್ಲಿ ಎರ್ರಾಬಿರ್ರಿ ತಿಂದ ಮಿಕ್ಕವರು ನನ್ನೆದಿರು ಡರ್ ಡರ್ ಎಂದು ತೇಗುವಾಗ, ಅವರ ತುಂಬಿದ ಹೊಟ್ಟೆಗೊಂದು ಒದೆಯುವಷ್ಟು ಅಸೂಯೆ ಮತ್ತು ಕೋಪ. ಅದನ್ನು ಜಾಸ್ತಿ ಮಾಡಲೆಂದೇ ದೀಪಕ್ ಊಟಕ್ಕಿಟ್ಟಿರುವ ಖಾದ್ಯಗಳ ಪಟ್ಟಿಯನ್ನೇ ಹೇಳುತಿದ್ದ, ಉಡುಪಿ ಭಟ್ಟರ ಹೋಟೆಲ್‍ನಲ್ಲಿರುವ ಮಾಣಿ "ಇಡ್ಲಿ, ವಡೆ, ಸಾಂಬಾರ್, ಕಾಲಿ ದೊಸೆ, ಮಸಾಲ ದೋಸೆ, ಈರುಳ್ಳಿ ದೋಸೆ, ಸೆಟ್ ದೋಸೆ, ಅವಲಕ್ಕಿ, ಬನ್ಸ್, ಉಪ್ಪಿಟ್ಟು, ಈರುಳ್ಳಿ ಬಜೆ..." ಎಂದು ಉಸಿರುಗಟ್ಟಿ ಹೇಳುವೋಪಾದಿ! ನನ್ನ ದುರಾದೃಷ್ಟಕ್ಕೆ ಒಂದು ಎಳನೀರು ಸಹ ಸಿಗಲಿಲ್ಲ ಅಲ್ಲಿ. ಮತ್ತೆ ಇನ್ನೊಂದು ಬಸ್ ಹಿಡಿದು ಜೋಗದತ್ತ ಹೊರಟೆವು. ಮಾರ್ಗದ ಮದ್ಯೆ ಬಸ್ ನಿಲ್ಲಿಸಿದ್ದಾಗ ಮತ್ತೊಂದಿಷ್ಟು ತಿಂದಿದ್ದರು! ನನಗೆ ಒಳಗೊಳಗೆ ಉರಿ, "ಇವರೇನು ಬಕಾಸುರ ವಂಶಸ್ತರೆ!"
ಜೋಗ ತಲುಪುವಾಗ ೬ ಗಂಟೆ ದಾಟಿತ್ತು. ನೀರು ಆಳ ಪ್ರಪಾತಕ್ಕೆ ದುಮುಕುವ ಮೊದಲು ಸಿಗುವ ಸೇತುವೆಯಲ್ಲಿ ಒಂದಿಷ್ಟು ಹೊತ್ತು ನಿಂತು, ಮುಂಗಾರು ಮಳೆ ಚಿತ್ರದ ಗಣೇಶ್ ಮತ್ತು ಪೂಜಾ ಗಾಂದಿಯ ನೆನಪು ಮಾಡಿಕೊಂಡು, ಒಂದೆರಡು ಫೋಟೊ ಹೊಡೆಸಿಕೊಂದು, ಬ್ರಿಟೀಷ್ ಬಂಗಲೆಯತ್ತ ಕಾಲ್ನಡಿಗೆಯಲ್ಲಿ ಹೊರಟೆವು. ಬ್ರಿಟೀಷ್ ಬಂಗಲೆಯಿಂದ ಪಕ್ಕದಿಂದಲೆ ಪಾತಾಳಕ್ಕೆ ದುಮುಕ್ಕುತ್ತಿರುವ ಶರಾವತಿಯ ರೌದ್ರವತೆ ಎಂತವರಿಗೂ ಭಯ ಹುಟ್ಟಿಸುವಂತಹದು, ಹಾಗೆ ಅಷ್ಟೇ ರಮಣೀಯವಾಗಿತ್ತು. ರುದ್ರ-ರಮಣೀಯ ಜಲಧಾರೆ, ಈ ಜೋಗ ಜಲಪಾತ! ಒಂದು ಕಡೆ ತುಂಬಿ ಹರಿಯುತ್ತಿದ್ದ ರಾಜ, ರಾಕೆಟ್, ರೋರರ್, ರಾಣಿ. ಇನ್ನೊಂದೆಡೆ ಜಲಪಾತದ ತಳವನ್ನು ಮುಟ್ಟುವ ಮೊದಲೆ ಆವಿಯಾಗಿ, ಮೋಡದೋಪಾದಿಯಾಗಿ ಮೇಲೇರಿ, ಮತ್ತೆ ಹಿಂದೆ ನುಗ್ಗುತ್ತಿರುವ ಮಂಜಿನ ಸೇನೆಯಂತೆ ಕಾಣಿಸುತಿತ್ತು. ಮನಸ್ಸು-ಕಣ್ಣು ಎರಡಕ್ಕೂ ಸಮಾಧಾನವಾಗುವ ತನಕ ದುಮುಕ್ಕುತ್ತಿರುವ ಶರಾವತಿಯನ್ನು ನೋಡಬೇಕೆಂದಿದ್ದ ನನ್ನ ಆಸೆಗೆ ಸೂರ್ಯನ ದಿನಚರಿಯಿಂದ ತೆರೆ ಬಿತ್ತು. ಅದಾಗಲೆ ಸೂರ್ಯ ಮುಳುಗುವ ಸಮಯ, ದಟ್ಟ ಕಾಡು, ಸೂರ್ಯ ಇನ್ನೆಷ್ಟು ಹೊತ್ತು ಕಾಯಬಹುದು? ಕತ್ತಲು ತನ್ನ ಕರಿ ಮೈಯನ್ನು ಹರಡುತ್ತಿದ್ದರೆ, "ಭೋ" ಎಂದು ಕೂಗುತ್ತಿದ್ದ ಜಲಪಾತ, ತನಗೂ-ಕತ್ತಲಿಗೂ ಯಾವುದೇ ಸಂಭಂದವಿಲ್ಲವೆಂಬತೆ ತನ್ನ ಕಾಯಕ ಮುಂದುವರಿಸಿತ್ತು.
ಜೋಗದ ಸೊಬಗನ್ನು ಸವಿದು, ಒಂದಿಷ್ಟು ಫೊಟೊ ಕ್ಲಿಕ್ಕಿಸಿ, ಮತ್ತೆ ಬ್ರಿಟೀಷ್ ಬಂಗಲೆಯತ್ತ ಬಂದರೆ, ನಮ್ಮ ಶ್ರೀನಿ ಗಾಬರಿಯಾಗಿದ್ದ. "ಯಾಕೋ, ಏನಾಯ್ತು?" ನಾನಂದೆ. "ಇಲ್ಲಾ ಗಿರಿ, ನೀವು ಊಟಾನೆ ಮಾಡಿಲ್ಲ ಫುಲ್ ಡೆ, ನಮ್ದೆಲ್ಲಾ ಆಗಿದೆ, ನಿಮ್ಗೆ ಒಳ್ಳೆ ಊಟದ ವ್ಯವಸ್ತೆ ಮಾಡ್ಬೇಕು ಅಂತ ಓಡಾಡ್ತಿದ್ದಿನಿ, ಆದ್ರೆ ಅಡಿಗೆ ಮಾಡಕ್ಕೆ ಯಾರೂ ಇಲ್ಲ ಇಲ್ಲಿ".
"ಪರವಾಗಿಲ್ಲ ಕಣೊ, ಒಂದು ದಿನ ಊಟ ಇಲ್ಲದೆ ಏನೂ ಆಗಲ್ಲ, ನಾನು ಮ್ಯಾನೆಜ್ ಮಾಡ್ಕೊತಿನಿ, ಯು ಡೊಂಟ್ ವರಿ" ಅಂದೆ. ಆದರೂ ಕೇಳದೆ, ಎಲ್ಲೆಲ್ಲೋ ಓಡಾಡಿ, ಯಾರನ್ನೆಲ್ಲಾ ಹಿಡಿದು ಎನಾದರು ಮಾಡಲೇಬೇಕೆಂದ ಛಲ ಅವನದ್ದು. ಇಷ್ಟ ಆಯ್ತು ನಂಗೆ, ಅವನು ನನ್ನ ಬಗ್ಗೆ ತೋರಿಸುತ್ತಿರುವ ಕಾಳಜಿಯನ್ನು ನೋಡಿ. ಅಷ್ಟೇ ಅಲ್ಲ, ನಮಗೆ ಕಾದಿರಿಸಿದ ಕೊಠಡಿ ಸರಿ ಇಲ್ಲ ಎಂದು, ಬೇರೆ ಕೊಠಡಿ ಕೊಡಿಸಲು ಓಡಾಡುತಿದ್ದ. ಮಿಕ್ಕ ಮೂವರು ಮತ್ತೆ ಆಚೆ ಹೋಗಿ ಮತ್ತೊಂದಿಷ್ಟು ಹೊಟ್ಟೆಗೆ ಹಾಕಿಕೊಂಡು ಬಂದರು. ಆ ಬಕಾಸುರ ದೀಪಕ್ ಇರುವ ತನಕ ಇದೆಲ್ಲಾ ಮಾಮೂಲಿ!
ಬಾಯ್ಲರ್ ವ್ಯವಸ್ತೆ ಇರುವ ಕಾರಣ ಎಲ್ಲಾ ಸ್ನಾನ ಮುಗಿಸಿ ಮಾತಿಗೆ ಕೂತೆವು. ಶ್ರೀನಿ ಇನ್ನೂ ಒಡಾಡುತ್ತಲೇ ಇದ್ದ ಗಾಬರಿಯಿಂದ. ಆಗೊಮ್ಮೆ ಈಗೊಮ್ಮೆ ದೀಪಕ್ ಅವನ ಜೊತೆಗೂಡುತ್ತಿದ್ದ. ಭೀಮ್ ಇನ್ನೊಮ್ಮೆ ಹೊಟ್ಟೆ ಶುದ್ದಿ ಮಾಡಿಸಿಕೊಂಡರು. "ಮದ್ಯೆ ಹೋಟೆಲಿನಲ್ಲಿ ತಿಂದಿದ್ದು ಸರಿಯಾಗಿಲ್ಲ ಕಣ್ರಿ" ಕಾರಣವನ್ನೂ ಕೊಟ್ಟರು, ನಾವು ಕೇಳದೇನೆ. ದೀಪಕ್, ಶ್ರೀನಿ ಇಬ್ಬರು ಮತ್ತೆ ಬಂದಿದ್ದಾಯಿತು, ಅದೇ ರೂಂನಲ್ಲಿ ಇರುವುದು ಎಂದಾಯಿತು, ಪೇಟೆಯಿಂದ ಮಾಲಿಯ ಕೈಲಿ ಐವರಿಗೆ ಊಟ ಕಟ್ಟಿಸಿ ತಂದಿದ್ದಾಯ್ತು. ಬೆಳದಿಂಗಳ ಬೆಳಕಲ್ಲಿ ಊಟ ಮಾಡುವುದೆಂದು ನಿರ್ದರಿಸಿ, ಮೇಲೆ ಹೋಗಿ ಊಟದ ಕಾರ್ಯಕ್ರಮ ಮುಗಿಸಿದೆವು. ಮತ್ತೆ ಒಂದಿಷ್ಟು ಹರಟಿದ್ದೂ ಅಯಿತು. ಮತ್ತೆ ನಾರಾಯಣ್ ಸರದಿ, "ಅನಾವಶ್ಯಕವಾಗಿ ಹರಟುವ ಬದಲಿಗೆ, ಜೋಗದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟುವ ಬಗ್ಗೆ ಮಾತು ನಡೆಯಲಿ. ಎಲ್ಲರೂ ತಮ್ಮ ತಮ್ಮ ಅಂಬೋಣವನ್ನು ಹೇಳಲಿ. ನಾನು ಮದ್ಯಸ್ತಿಕೆ ವಹಿಸಿಕೊಳ್ಳುತ್ತೇನೆ." ಸರಿ, ಭೀಮ್ ಮೊದಮೊದಲು ತಮಾಷೆಯಾಗಿ ಮಾತಾಡಿದ್ದಾಯ್ತು, ಶ್ರೀನಿಯಿಂದ ಉಗಿಸಿಕೊಂಡಿದ್ದಾಯ್ತು. ಎಲ್ಲರೂ ಒಂದಿಷ್ಟು ಮಾತಾಡಿ, ಒಬ್ಬರಿಂದೊಬ್ಬರ ಕಾಲೆಳೆದದ್ದೂ ಅಯ್ತು.
ಓಡಾಡಿದ ಆಯಾಸಕ್ಕೆ ಎಲ್ಲಾ ನೆಲಕ್ಕೆ, ಹಾಸಿಗೆಗೆ ಒರಗಿದೆವು. ಹಾಸಲು ಹೊದೆಯಲು ಸಾಕಷ್ಟು ಬಟ್ಟೆ ಇರಲಿಲ್ಲ ನಮ್ಮಲ್ಲಿ, ವಿಪರೀತವಾದ ಚಳಿ ಬೇರೆ. ರೂಂ ತುಂಬಾ ಒದ್ದೆ ಬಟ್ಟೆಗಳಿವೆ ಎಂದು ಏಸಿ ಬೇರೆ ಆನ್ ಮಾಡಿದ್ದೆವು, ಭೀಮ್ ಅವರ ವಿರೋಧದ ನಡುವೆಯೂ. ಬಾಗಿಲು, ಕಿಟಕಿಗೆ ಕಟ್ಟಿದ ಪರದೆಯನ್ನೆಳೆದು ಹಾಸಿ, ಹೊದೆದು ಮಲಗಿದೆವು. ಬೆಳಿಗ್ಗೆ ಎದ್ದಿದ್ದು ೮ ಗಂಟೆಗೆ. ಮತ್ತೆ ಸ್ನಾನ ಮಾಡಿ, ಜೋಗದ ಕೆಳಭಾಗದತ್ತ ಹೊರಟೆವು ೧೦ ಗಂಟೆಯ ನಂತರ. ನಡುವೆ ಸಿಕ್ಕಿದ ಹೋಟೆಲ್‍ನಲ್ಲಿ ಒಂದಿಷ್ಟು ತಿಂದು, ಒಂದಿಷ್ಟು ಚಿತ್ರಾನ್ನ ಕಟ್ಟಿಸಿಕೊಂಡು ಕೆಳಗಿಳಿಯ ಹೊರಟೆವು.
ತುಂತುರು ಮಳೆ ಬರುತ್ತಿದ್ದರೂ ಮೆಟ್ಟಿಲಿಳಿದು ಜಲಧಾರೆಯನ್ನು ಕೆಳಗಿನಿಂದ ನೋಡಲು ಉತ್ಸಾಹದಿಂದ ಮುನ್ನುಗ್ಗುತ್ತಿರುವ ಜನರೊಂದಿಗೆ ನಾವೈವರು ಜೊತೆಗೂಡಿದೆವು. ಮುಂದೆ ನಾರಾಯಣ್, ಅವನನ್ನು ಹಿಂಬಾಲಿಸಿ ದೀಪಕ್ ನಡೆಯುತ್ತಿದ್ದ. ಒಮ್ಮೊಮ್ಮೆ ನಡೆಯುವಾಗ ಮತ್ತು ನಗುವಾಗ ಅಡ್ಡ-ದಿಡ್ಡವಾಗಿ ಹೊಂಗುವ ಹವ್ಯಾಸವಿದೆ ಅವನಿಗೆ. ಕೈಯಲ್ಲಿ ಹಿಡಿದಿರುವ ಚಿತ್ರಾನ್ನ ಚೀಲದಿಂದನೊ, ಅಥವಾ ಎದುರಿಗೆ ಕಾಣಿಸುತ್ತಿದ್ದ ದ್ರಶ್ಯಾವಳಿಯ ಸೊಬಗಿಗೋ, ನೇರವಾಗಿಯೆ ನಡೆಯುತ್ತಿದ್ದ. ಅವರನ್ನು ಹಿಂಬಾಲಿಸಿ ನಾನು ನಡೆಯುತ್ತಿದ್ದೆ. ಗುರು-ಶಿಷ್ಯರಿಬ್ಬರು ಹಿಂದುಳಿದಿದ್ದರು. ಅಲ್ಲಿರುವ ಒಂದಿಷ್ಟು ಕೋತಿಗಳ ಜೊತೆ ತಾವು ಕೋತಿಯಾಟವಾಡುತ್ತ, ಫೊಟೊ ಕ್ಲಿಕ್ಕಿಸಿಕೊಳ್ಳುವುದರಲ್ಲಿ ತೊಡಗಿದ್ದರು. "ಆರ್ಕುಟ್ ಫೊಟೊ ಸಾಕ್ರಪ್ಪಾ" ಕೂಗಿದ ದೀಪಕ್. ಕೇಳಿಸಿಕೊಳ್ಳುವಷ್ಟು ಹತ್ತಿರದಲ್ಲಿರಲಿಲ್ಲ ಅವರು. ಬರದ ಅವರ ನಿರೀಕ್ಷೆಯಲ್ಲಿ ಕಾದಿದ್ದಾಯ್ತು. ಅವರು ಬರುವ ಯಾವುದೇ ಲಕ್ಷಣ ಕಾಣಿಸದ ಕಾರಣ ನಾನು ಮತ್ತು ದೀಪಕ್ ನಮ್ಮ ರಹದಾರಿಯನ್ನು ಕ್ರಮಿಸಲು ಶುರು ಮಾಡಿದೆವು. ನಾರಾಯಣ್ ಕಣ್ಣಿಕೆಟುಕದಷ್ಟು ದೂರ ಹೋಗಾಗಿತ್ತು! ಇಳಿಜಾರಿನ ಜಾಗದಲ್ಲಿ ಮೆಟ್ಟಿಲುಗಳನ್ನು ಆದಷ್ಟು ವೇಗದಲ್ಲಿ ಕ್ರಮಿಸಿದೆವು. ಕೆಳಗಿಳಿದಂತೆ ಮಳೆಯ ರಭಸ ಇನ್ನಷ್ಟು ಜಾಸ್ತಿಯಾಯಿತು. ಮೈಯೆಲ್ಲಾ ತೊಯ್ದು ಹೊದುವಷ್ಟು ಮಳೆ. ಜಲಪಾತದ ತುದಿಯಿಂದ ದುಮುಕುತ್ತಿರುವ ನೀರು, ನೆಲವನ್ನು ಮುಟ್ಟುವ ಮೊದಲೇ ಮಳೆಯಾಗಿ ಬೀಳುತಿತ್ತು. ಓಡೋಡಿ ಕೆಳಗಿಳಿದು ನೋಡಿದರೆ ಅತ್ಯದ್ಭುತವಾದ ದೃಶ್ಯ ನಮಗಾಗಿ ಕಾಯುವಂತಿತ್ತು.
"ವಾವ್" ನನಗರಿವಿಲ್ಲದೆ ನಾನು ಕೂಗಿಕೊಂಡೆ. ನನಗಾಗುತ್ತಿರುವ ಸಂತೋಷವನ್ನು ವರ್ಣಿಸಲು ತಡವರಿಸುತ್ತಿದೆ. ಕೋಲ್ಮಿಂಚಿನಂತೆ ಉದ್ದಕ್ಕೆ ಜಿಗಿಯುತ್ತಿರುವ ನೀರನ್ನೇ ಕಣ್ಣರಳಿಸಿ ನೋಡುತ್ತಿದ್ದ ನಾಣು ತಿರುಗಿ ಒಮ್ಮೆ ದೀಪಕ್‍ನತ್ತ ನೋಡಿದೆ. ೩ ವಾರದ ಹಿಂದಷ್ಟೆ ಇಲ್ಲಿಗೆ ಬಂದಿದ್ದರೂ, ನನಗಾಗುತ್ತಿದ್ದ ಅನುಭವ ಅವನಿಗೂ ಅಗುತ್ತಿತ್ತೆಂದು ಅವನ ಮುಖ ಕೂಗಿ ಹೇಳುವಂತಿತ್ತು. ಇನ್ನೂ ಸ್ವಲ್ಪ ಮುಂದೆ ಹೋದರೆ ಸುರಿಯುತ್ತಿರುವ ನೀರಿನ ಆರ್ಭಟ ಇನ್ನೂ ಜೋರಾಯಿತು. ಮುಂದೆ ಅದಷ್ಟು ದೂರದಲ್ಲಿ, ನಾರಾಯಣ್ ಕಲ್ಲು ಬಂಡೆಯ ಮರೆಯಲ್ಲಿ ಕೂತಿದ್ದ, ಮೈಯೆಲ್ಲಾ ಮುದುಡಿಕೊಂಡು. ನಾವೂ ಅವನ ಜೊತೆಗೂಡಿದೆವು. ಆವಾಗಲೇ ಅರಿವಿಗೆ ಬಂದಿದ್ದು, ನನ್ನ ಮೊಬೈಲ್ ಮತ್ತು ಹಣದ ಪರ್ಸಿನ ಬಗ್ಗೆ. ತುಂಬಾ ತಡವಾಗಿತ್ತದು. ಮೊಬೈಲ್ ಮತ್ತು ಪರ್ಸನ್ನು ನನ್ನ ಜಾಕೇಟ್‍ನ ಒಳ ಜೋಬಿನೊಳಗೆ ತಿರುಕಿಸಿಕೊಂಡೆ. ಮೊಬೈಲ್ ಮೇಲೆ ನನಗೆ ಯಾವುದೇ ಭರವಸೆ ಇರಲಿಲ್ಲ, ಅದು ಕೆಲಸ ಮಾಡುವ ಸ್ಥಿತಿಗೆ ಮರಳುವ ಯಾವುದೇ ಲಕ್ಷಣಗಳು ಯೋಚನೆಗೆ ಸಿಗಲಿಲ್ಲ. ತಲೆ ಕೆಡಿಸಿಕೊಳ್ಳುವ ಸಮಯವಲ್ಲವಿದು ಅಂದೆನಿಸಿತು. ನನ್ನ ಆಲೋಚನೆಯ ಲಹರಿಯ ಜಾಡು ಹಿಡಿದ ದೀಪಕ್ ಮತ್ತು ನಾರಾಯಣ್ ಅದನ್ನೇ ಉದ್ಗರಿಸಿದರು.
ಕಣ್ಣೆತ್ತಿ ನೋಡಲು ಅಸಾದ್ಯವಾದಷ್ಟು ನೀರಿನ, ಮಳೆಯ ಹೊಡೆತ! ಆದರೂ ನಮ್ಮ ಛಲ ಬಿಡಲಿಲ್ಲ. ನಾನು ಮತ್ತು ನಾರಾಯಣ್ ಮುಂದಕ್ಕೆ ಹೊರಟೆವು. ಇನ್ನು ಮುಂದೆ ಹೋಗಲು ಸಾದ್ಯವೇ ಇಲ್ಲ ಎಂಬ ನಂಬಿಕೆ ಹುಟ್ಟಿದ ನಂತರ ಅಲ್ಲೇ ನಿಂತು ಮೈ-ಮನಸ್ಸನ್ನೆಲ್ಲಾ ತೋಯಿಸಿಕೊಂಡು ಪರಮಾನಂದ ಹೊಂದಿದೆವು. ನಮ್ಮಿಂದ ಮುಂದೆ ಯಾವ ನರಜಂತು ಹೋಗಿರಲಿಲ್ಲ! ಅದೇನೋ ಸಾಧಿಸಿದಷ್ಟು ಗರ್ವ ಮನದ ಮೂಲೆಯೊಳಗೆ! ಮತ್ತೆ ಹಿಂದಿರುಗಿ, ಈ ಸಾರಿ ದೀಪಕ್‍ನ ಜೊತೆಗೂಡಿ ಇನ್ನೊಮ್ಮೆ ಹೋದೆ. ಮಳೆಯ ಹೊಡೆತ ಜೋರಾಗಿದ್ದ ಕಾರಣ ದೀಪಕ್‍ಗೆ ಹೆಚ್ಚು ಮುಂದೆ ಹೋಗಲಾಗಲಿಲ್ಲ. ಜೋರಾಗಿ ಕಿರುಚಿ ಮನಸ್ಸಿಗಾಗುತ್ತಿದ್ದ ಸಂತೋಷವನ್ನು ಹೊರಹಾಕುವ ಪ್ರಯತ್ನ ಮಾಡುತ್ತಿದ್ದೆವು. ಮತ್ತೊಂದಿಷ್ಟು ಕೂತು, ಸಾಕು ಎಂತೆನಿಸಿದಾಗ ಮತ್ತೆ ಮೇಲೇರ ಹೊರಟೆವು. ಸ್ವಲ್ಪ ಮೇಲೆ ಹೋದ ನಂತರ ಭೀಮ್ ಮತ್ತು ಶ್ರೀನಿಯ ದರ್ಶನಭಾಗ್ಯ ದೊರೆಯಿತು. ಅವರಿಗೆ ಕೆಳಗಿಳಿಯಲು ಸಲಹೆ-ಸೂಚನೆಗಳನಿತ್ತು ಮುಂದುವರಿದೆವು. ಅವರನ್ನು ಬೀಳ್ಕೊಡುವ ಮುಂಚೆ ತನ್ನ ಕ್ಯಾಮೆರಾವನ್ನು ಅವರಿಂದ ಎತ್ತಿಕೊಳ್ಳಲು ಮರೆಯಲಿಲ್ಲ ದೀಪಕ್. "ಬನ್ರಪ್ಪಾ ಬೇಗ, ಹೊಟ್ಟೆ ಚುರುಗುಟ್‍ತಯ್ತೆ" ಅವನೆಂದ. "ಹು ಕಾಣಪ್ಪಾ, ನಂಗೂ ಹಸಿವಾಗ್ತಿದೆ" ನಾರಾಯಣ್ ಸೇರಿಸಿದ.
ಮೇಲೆ ಒಂದೆಡೆ ನಿಂತು, ಅಲ್ಲಿರುವ ತಾತನಿಂದ ೨ ಗ್ಲಾಸ್ ಲೈಮ್ ಸೋಡ ತಗೊಂಡು, ಚಿತ್ರಾನ್ನವನ್ನು ಹೊಟ್ಟೆಗಿಳಿಸಿದೆವು. ಮೇಲೆ-ಕೆಳಗೆ ಹೋಗುತ್ತಿದ್ದ ಹುಡುಗಿಯರತ್ತ ಒಂದಿಷ್ಟು ನೋಟ ಹರಿಸಿ, ಒಬ್ಬರಿಂದೊಬ್ಬರನ್ನು ಛೇಡಿಸಿ ಮತ್ತೆ ಮೇಲೇರಿದೆವು. ಮೇಲೆ ಒಂದೆಡೆ ನಿಂತು ಪರಂಗಿಹಣ್ಣು ತಿಂದು, ಭೀಮ್ ಮತ್ತು ಶ್ರೀನಿಗೆ ಕಾಯುತ್ತಾ ನಿಂತೆವು. ಅಲ್ಲೇ ಕಾಯಲು ಇನ್ನೊಂದು ಕಾರಣವಿತ್ತು, ಅಲ್ಲೇ ಪಕ್ಕದಲ್ಲಿ ನಿಂತಿದ್ದ ಟೋಪಿ ಧರಿಸಿದ್ದ ಹುಡುಗಿಯತ್ತಲೇ ದೀಪಕ್‍ನ ಕಣ್ಣು. ಆ ಹುಡುಗಿಯ ಫೊಟೊ ತೆಗೆಯಲು ಸಾಕಷ್ಟು ಪ್ರಯತ್ನಿಸಿದರೂ ಸಪಲನಾಗಲಿಲ್ಲ ಅವನು. ಅವನ ಸಾಪಲ್ಯತೆ ಏನಿದ್ದರೂ ತಿನ್ನೋದು, ನಿದ್ದೆ ಮಾಡೋದು ಮತ್ತು ಕಾಲೆಳೆಯುವುದರಲ್ಲಿ ಕೊನೆ. ಕೊನೆಗೂ ಕಳೆದು ಹೋಗಿದ್ದ ಮಿತ್ರರಿಬ್ಬರು ಸೇರಿಕೊಂಡರು. ಆಟೊ ಹಿಡಿದುಕೊಂಡು ಬ್ರಿಟೀಷ್ ಬಂಗಲೆಯತ್ತ ಹೊರಟೆವು. ಇನ್ನು ಗೋಕರ್ಣದತ್ತ ಪ್ರಯಾಣಿಸಬೇಕಿತ್ತು, ಸಂಜೆ ಸೂರ್ಯ ಮುಳುಗುವ ಮೊದಲೇ. ಆಗಲೆ ಸಮಯ ೨:೦೦ ದಾಟಿತ್ತು. ಇನ್ನೊಮ್ಮೆ ಬಿಸಿ-ಬಿಸಿ ನೀರಿನಲ್ಲಿ ಸ್ನಾನ ಮಾಡಿ, ಬಟ್ಟೆಗಳನ್ನೆಲ್ಲಾ ಬ್ಯಾಗ್‍ಗೆ ತುರುಕಿಸಿ, ಬಸ್ ನಿಲ್ದಾಣಕ್ಕೆ ಹೋಗಿ, ಇನ್ನೊಮ್ಮೆ ಮಿತವಾಗಿ ಪಲಹಾರ ಮಾಡಿಕೊಂಡು ಬರದ ಬಸ್ಸಿಗಾಗಿ ಕಾಯುತ್ತಾ ನಿಂತೆವು.