ಪ್ರವಾಸ ಪ್ರಯಾಸ ಆಗದಿರಲಿ
“ದೇಶ ಸುತ್ತಿದರೆ ಕೋಶ ಓದಿದಂತೆ” ಪ್ರವಾಸ ಯಾರಿಗೆ ಇಷ್ಟವಿಲ್ಲ ಹೇಳಿ? ಶಾಲಾ ದಿನಗಳಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ನಾವೆಲ್ಲ ಹೋದವರೇ, ಪ್ರವಾಸದ ಮುನ್ನಾ ದಿನ ಮಕ್ಕಳಿಗೆ ಅದೇ ಗುಂಗಿನಲ್ಲಿ ನಿದ್ದೆ ಸಹ ಬಾರದು. ಸಂತೋಷ, ಸಂಭ್ರಮ ಪ್ರಯಾಣ, ಹೊಸತನ್ನು ನೋಡುತ್ತೇವೆ ಎಂಬ ಕಲ್ಪನೆಯಲ್ಲಿ ಕನಸನ್ನು ಕಾಣುವರು. ಪ್ರವಾಸ ನವಚೈತನ್ಯ ನೀಡುವುದು. ಆರೋಗ್ಯ, ಸ್ವಚ್ಛಂದ ವಾತಾವರಣ, ಕಣ್ಣಿಗೆ ಕೆಲಸ, ಮನಸ್ಸಿಗೆ ಹಿತ. ಇತ್ತೀಚೆಗೆ ಪ್ರವಾಸವೆಂಬುದು ಒಂದು ಉದ್ಯೋಗವನ್ನು ನೀಡುವಂತಹ ಕ್ಷೇತ್ರವೂ ಆಗಿದೆ. ಪ್ರವಾಸೋದ್ಯಮ ಇಲಾಖೆ ಇದೆ. ಉದ್ಯೋಗ ಸೃಷ್ಟಿ ಮತ್ತು ಆದಾಯ ಎರಡೂ ಇದೆ. ಸಂಪನ್ಮೂಲ ಕ್ರೋಢಿಕರಣಕ್ಕೆ ದಾರಿಯಾಗಿದೆ.
ಹಾಗಾದರೆ ‘ಅಂತರಾಷ್ಟ್ರೀಯ ಮಾನ್ಯತೆ’ ಯಾಕಾಯ್ತು? ನೋಡೋಣ. ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿರುವ ಜನರು ಪರಸ್ಪರ ಭಾಷೆ, ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರ, ಪರಿಸರ, ತಮ್ಮತಮ್ಮ ದೇಶಗಳ ಬಗ್ಗೆ ಅರಿಯುವ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ೨೭ ನೇ ತಾರೀಕಿನಂದು ವಿಶ್ವ ಪ್ರವಾಸೋದ್ಯಮ ದಿವಸ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿ, ಮೊದಲ ಸಲ ೧೯೮೦ ರಲ್ಲಿ ಆಚರಿಸಲಾಯಿತು.
ಆರ್ಥಿಕವಾಗಿ ಸದೃಢರಾದವರು ವಿದೇಶ ಪ್ರವಾಸ ಮಾಡುವರು. ಹಾಗೆಯೇ ದೇಶದೊಳಗಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಕುಟುಂಬವರ್ಗದವರೊಂದಿಗೆ ಹೋಗುವರು. ಪ್ರತಿಯೊಂದು ಸ್ಥಳದ ಮಾಹಿತಿ, ಜನಜೀವನ, ಆಹಾರ, ಮಳೆ-ಬೆಳೆ ಅರಿಯುವರು. ಸಾಮಾಜಿಕ,ಸಾಂಸ್ಕೃತಿಕ, ಆರ್ಥಿಕ ಸ್ಥಿತಿಗತಿ, ವೇಷಭೂಷಣ ತಿಳಿಯುವರು. ಪ್ರವಾಸದ ಅನುಭವವೆಂದರೆ ಅದೊಂದು ಜ್ಞಾನ ಭಂಡಾರವೇ ಆಗಿದೆ. ಕೆಲವು ಜನ ಪ್ರವಾಸದ ಅನುಭವಗಳನ್ನು ಟಿಪ್ಪಣಿ ಮಾಡಿಟ್ಟುಕೊಂಡು, ಪ್ರವಾಸ ಕಥನ ಬರೆಯುವುದೂ ಇದೆ. ಹಳೆಯ ಕೋಟೆಗಳು, ವೈವಿಧ್ಯ ರೀತಿಯ ರಾಜಮನೆತನಗಳ ಅರಮನೆಗಳು, ಪುರಾತನ ಶೇಷಗಳು, ಐತಿಹಾಸಿಕ ಸ್ಥಳಗಳು, ಪ್ರಾಕೃತಿಕ ಸೌಂದರ್ಯ, ಜಲಪಾತಗಳ ರಮಣೀಯ ದೃಶ್ಯಗಳು, ನದಿ ಪರ್ವತಗಳು, ಕಡಲ ತೀರಗಳು, ಪುರಾತನ ದೇವಾಲಯಗಳು ನೋಡುಗರ ಕಣ್ಮನ ತಣಿಸುವುದಿದೆ. ಕೆಲವು ಕಡೆ ಆಸಕ್ತರಿಗೆ ಚಾರಣ ವ್ಯವಸ್ಥೆಯೂ ಇದೆ. ರಜಾಸಮಯದಲ್ಲಿ ಮಕ್ಕಳಿಗೆ ಪ್ರವಾಸದ ಅನುಭವಗಳ ಹೂರಣವನ್ನು ಉಣಬಡಿಸಿದರೆ ಓದು ಬರಹ ಎಂಬ ಒತ್ತಡದ ನಡುವೆ ಒಂದಷ್ಟು ಖುಷಿ ಅನುಭವಿಸಿಯಾರು. ಪ್ರವಾಸೋದ್ಯಮವೆಂಬುದು ಉದ್ಯೋಗಕ್ಕೆ ದಾರಿ ಹಾಗೂ ಆರ್ಥಿಕತೆಗೆ ಒತ್ತು . ಬಾವಿಯೊಳಗಿನ ಕೂಪ ಮಂಡೂಕದಂತಿರದೆ ಹೊರಗಿನ ಪರಿಸರವನ್ನು ನಮ್ಮ ಆರ್ಥಿಕ ಹಣಕಾಸಿಗೆ ಹೊಂದಿಸಿಕೊಂಡು ಪ್ರವಾಸ ಪ್ರಯಾಸವಾಗದಂತೆ ನೋಡಿಕೊಳ್ಳೋಣ.
(ವಿಶ್ವ ಪ್ರವಾಸ ದಿನ-೨೭-೦೯-೨೩)
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ